ಎದೆಹಾಲೂಡುವ ತಾಯಂದಿರಿಗೆ ಪಥ್ಯಾಹಾರ
Team Udayavani, Mar 4, 2018, 6:00 AM IST
ಹಿಂದಿನ ವಾರದಿಂದ- ಎದೆ ಹಾಲೂಡುವ ತಾಯಿಯ ಆಹಾರದಲ್ಲಿ
ಕಬ್ಬಿಣಾಂಶ ಸಹಿತ ಆಹಾರಮೂಲಗಳು
ಮಾಂಸಾಹಾರಿ ತಾಯಂದಿರು ಕೋಳಿಯ ಲಿವರ್ ಮತ್ತು ಅಂಗಾಂಗ ಮಾಂಸ ಮತ್ತು ಬಾತುಕೋಳಿ ಮಾಂಸವನ್ನು ಸೇರಿಸಿಕೊಳ್ಳಬಹುದು. ಚಿಪ್ಪು ಮೀನುಗಳು, ಸಾಡೈನ್ ಮೀನು, ಮಳಿ (ಆಯಿಸ್ಟರ್)ಯಂತಹ ಸಮುದ್ರ ಆಹಾರಗಳು ಕಬ್ಬಿಣಾಂಶ ಹೊಂದಿರುತ್ತವೆ. ಸಸ್ಯಾಹಾರಿಗಳು ಒಣ ಬೀನ್ಸ್, ಕಪ್ಪು ಕಡಲೆ, ಹಸಿ ಬಟಾಣಿಗಳನ್ನು ಸೇರಿಸಿಕೊಳ್ಳಬಹುದು. ಕಬ್ಬಿಣದ ಪಾತ್ರೆಗಳಲ್ಲಿ ಬೇಯಿಸಿದ ಆಹಾರವಸ್ತುಗಳೂ ಸ್ವಲ್ಪಾಂಶ ಕಬ್ಬಿಣವನ್ನು ಒದಗಿಸುತ್ತವೆ. ಅವಲಕ್ಕಿ ಮತ್ತು ಹುರಿಯಕ್ಕಿ ಕೂಡ ಕಬ್ಬಿಣಾಂಶದ ಉತ್ತಮ ಮೂಲಗಳು. ಬೆಲ್ಲವೂ ಉತ್ತಮ ಮೂಲಗಳಲ್ಲಿ ಒಂದು.
ಎದೆಹಾಲೂಡುವ ತಾಯಂದಿರ
ಆಹಾರದಲ್ಲಿ ಸೇರಿಸಬಹುದಾದ
ಸ್ತನ್ಯವರ್ಧಕ ಆಹಾರಗಳು
ಮೆಂತೆ ಮತ್ತು ಸೋಂಪು ಬೀಜಗಳು. ಹಾಲು ಬಾದಾಮಿ, ಪಾಲಾಕ್, ಬೆಳ್ಳುಳ್ಳಿ, ಸಾಸಿವೆ ಮತ್ತು ಗಸಗಸೆ ಬೀಜಗಳು, ಇಡೀ ಬೇಳೆಕಾಳುಗಳು, ಸೋರೆಕಾಯಿ, ದೇಸಿ ತುಪ್ಪ ಮತ್ತು ರಾಗಿ ಕೂಡ ಎದೆಹಾಲು ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಕ್ಯಾಲ್ಸಿಯಂ ಮೂಲಗಳು
ಹಾಲು ಹಾಗೂ ಮೊಸರು, ಚೀಸ್ ಮತ್ತು ಪನೀರ್‌ನಂತಹ ಹಾಲಿನ ಉತ್ಪನ್ನಗಳು ಉತ್ತಮ ಕ್ಯಾಲ್ಸಿಯಂ ಮೂಲಗಳು. ಮೃದು ಮೂಳೆಗಳುಳ್ಳ ಸಾಲ್ಮನ್, ಆ್ಯಂಕೊವಿ ಮತ್ತು ಸಾಡೈìನ್ ಮೀನುಗಳು, ಸೊಪ್ಪು ತರಕಾರಿಗಳು ಉತ್ತಮ ಕ್ಯಾಲ್ಸಿಯಂ ಮೂಲಗಳಾಗಿವೆ.
ಸ್ತನ್ಯವರ್ಧಕ ಆಹಾರಗಳು
ಎದೆಹಾಲೂಡುತ್ತಿರುವ ತಾಯಿಯ ಆಹಾರದಲ್ಲಿ ಸ್ತನ್ಯವರ್ಧಕ ಅರ್ಥಾತ್ ಎದೆಹಾಲನ್ನು ವೃದ್ಧಿಸುವ ಆಹಾರ ವಸ್ತುಗಳು ಇರುವುದು ಅತ್ಯಗತ್ಯ. ಅವು ಎದೆಹಾಲು ಉತ್ಪಾದನೆಯನ್ನು ಹೆಚ್ಚಿಸಿ ಬೆಳೆಯುತ್ತಿರುವ ಶಿಶುವಿನ ಅಗತ್ಯಗಳನ್ನು ಪೂರೈಸಲು ನೆರವಾಗುತ್ತವೆ. ಇವುಗಳನ್ನು ನಮ್ಮ ದೈನಿಕ ಆಹಾರದಲ್ಲಿ ಸುಲಭವಾಗಿ ಸೇರಿಸಿಕೊಂಡು ತಾಯಿಗೆ ಒದಗಿಸಬಹುದಾಗಿದೆ.
ಭಾರತೀಯ ಆಹಾರ ಶೈಲಿ: ಎದೆಹಾಲೂಡುವ ತಾಯಂದಿರು ವರ್ಜಿಸಬೇಕಾದ ಆಹಾರಗಳು
ಎದೆಹಾಲೂಡುವ ತಾಯಿ ಎಚ್ಚರಿಕೆಯಿಂದ ಆಹಾರ ಸೇವಿಸಬೇಕಾಗುತ್ತದೆ. ಕೆಲವು ಆಹಾರಗಳು ಜೀರ್ಣಿಸಲು ಕಷ್ಟವಾದ್ದರಿಂದ ಮತ್ತು ಕೆಲವು ಆಹಾರಗಳು ಶಿಶುವಿಗೆ ಉತ್ತಮವಲ್ಲವಾದ್ದರಿಂದ ಎದೆಹಾಲೂಡುತ್ತಿರುವ ತಾಯಿ ಎಲ್ಲವನ್ನೂ ಸೇವಿಸುವಂತಿಲ್ಲ. ಭಾರತೀಯ ಆಹಾರ ಶೈಲಿಯಲ್ಲಿ ಎದೆಹಾಲೂಡುತ್ತಿರುವ ತಾಯಿ ವರ್ಜಿಸಬೇಕಾದ ಕೆಲವು ಆಹಾರ ವಸ್ತುಗಳು:
ಮಸಾಲೆಯುಕ್ತ ಆಹಾರಗಳು
ನೀವು ಸೇವಿಸುವ ಎಲ್ಲ ಆಹಾರ ವಸ್ತುಗಳ ರುಚಿಯನ್ನು ಶಿಶು ಕೂಡ ಅನುಭವಿಸುತ್ತದೆ. ಹೀಗಾಗಿ ಮಸಾಲೆಯುಕ್ತವಾದ ಮತ್ತು ತೀಕ್ಷ್ಣ ಘಾಟು, ಪರಿಮಳವುಳ್ಳ ಸಂಬಾರವಸ್ತುಗಳನ್ನು ಸೇವಿಸದೆ ಇರುವುದು ಒಳ್ಳೆಯದು; ಇಂತಹ ಆಹಾರಗಳಿಂದ ನಿಮ್ಮ ಶಿಶು ಅಸ್ವಸ್ಥಗೊಳ್ಳಬಹುದು ಮತ್ತು ತಾಸುಗಟ್ಟಲೆ ರಚ್ಚೆ ಹಿಡಿಯಬಹುದು.
ಎಣ್ಣೆ ಆಹಾರಗಳು
ಕರಿದ ಮತ್ತು ಎಣ್ಣೆತಿಂಡಿಗಳನ್ನು ತುಂಬಾ ಪ್ರಮಾಣದಲ್ಲಿ ಸೇವಿಸುವುದು ಬೇಡ. ಎಣ್ಣೆತಿಂಡಿಗಳು ಜೀರ್ಣವಾಗುವುದಕ್ಕೆ ಕಠಿನ. ಎದೆ ಹಾಲೂಡುತ್ತಿರುವ ತಾಯಿಗೆ ಆಹಾರ ತಯಾರಿಸುವಾಗ ತುಪ್ಪ ಮತ್ತು ಎಣ್ಣೆಗಳನ್ನು ಸೀಮಿತ ಪ್ರಮಾಣದಲ್ಲಿ ಉಪಯೋಗಿಸಬೇಕು. ಏಕೆಂದರೆ ಆಕೆ ಹೆಚ್ಚು ಚಟುವಟಿಕೆಯಿಂದಿರುವುದಿಲ್ಲ ಮತ್ತು ಇದರಿಂದಾಗಿ ತೂಕ ಹೆಚ್ಚಬಹುದು.
ಕ್ರೂಸಿಫೆರಸ್ (ಚತುರ್ದಲ ಸಸ್ಯವರ್ಗ) ಜಾತಿಯ ತರಕಾರಿಗಳು
ಕಾಲಿಫ್ಲವರ್, ಬ್ರಾಕೊಲಿ ಮತ್ತು ಕ್ಯಾಬೇಜ್ ಈ ವರ್ಗಕ್ಕೆ ಸೇರಿದ ತರಕಾರಿಗಳು. ಇವುಗಳನ್ನು ವರ್ಜಿಸಿ. ಈ ತರಕಾರಿಗಳು ಜೀರ್ಣವಾಗುವುದು ಕಠಿನ ಮತ್ತು ಶಿಶುವಿಗೆ ಹೊಟ್ಟೆನೋವು, ವಾಯುಪ್ರಕೋಪಕ್ಕೆ ಕಾರಣವಾಗಬಹುದು. ರಾಜ್ಮಾ, ಕಡಲೆ, ಸೋಯಾ ಬೀನ್ಸ್‌ನಂತಹ ಬೇಳೆಕಾಳುಗಳನ್ನು ಕೂಡ ಮೊದಲ ಎರಡು -ಮೂರು ತಿಂಗಳು ವರ್ಜಿಸಬೇಕು.
– ಮುಂದಿನ ವಾರಕ್ಕೆ