ತಡೆಗಟ್ಟಬಹುದಾದ ಗರ್ಭಗೊರಳ ಅರ್ಬುದ…
Team Udayavani, Feb 3, 2019, 12:30 AM IST
ಜಗತ್ತಿನಾದ್ಯಂತ, ಗರ್ಭಗೊರಳಿನ ಅರ್ಬುದ (Cancer Cervix) ಮಹಿಳೆಯರನ್ನು ಕಾಡುವ ಕ್ಯಾನ್ಸರ್ ರೋಗಗಳಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದೆ ಹಾಗೂ ಮಹಿಳೆಯರ ಮರಣಕ್ಕೆ ಕಾರಣವಾಗುವ ಕ್ಯಾನ್ಸರ್‌ನಲ್ಲೂ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದೆ. ಶೇ. 70 ಕ್ಯಾನ್ಸರ್ ರೋಗಿಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಂಡು ಬಂದರೆ, ಶೇ. 90 ಸಾವುಗಳು ಸಹ ಆ ದೇಶಗಳಲ್ಲಿಯೇ ಸಂಭವಿಸುವವು. ಜಾಗತಿಕ ಆರೋಗ್ಯ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಹೋದ ವರ್ಷ 528,000 ಗರ್ಭಗೊರಳಿನ ಅಬುìದ ಪ್ರಕರಣಗಳು ಕಂಡುಬಂದವು. ಅವುಗಳಲ್ಲಿ 266,000 ಸಾವುಗಳು ಸಂಭವಿಸಿದವು. ಕ್ಯಾನ್ಸರ್ ರೋಗದಿಂದ ಸತ್ತವರ ಪ್ರಮಾಣಕ್ಕೆ ಇದರ ಕೊಡುಗೆ ಶೇ. 8. ನಮ್ಮ ದೇಶದಲ್ಲಿ ಗರ್ಭಕೋಶಕ್ಕೆ ಸಂಬಂಧಿಸಿದಂತೆ ಕಂಡು ಬರುವ ಕ್ಯಾನ್ಸರ್ ಪೈಕಿ ಶೇ. 86ರಷ್ಟು ಕ್ಯಾನ್ಸರ್ ಗರ್ಭಗೊರಳಿನಿಂದ (Cervux) ಉಂಟಾಗುತ್ತದೆ. ಮುಂದುವರಿದ ದೇಶಗಳಲ್ಲಿ ಇದು ಕೇವಲ ಶೇ. 14 ಮಾತ್ರ.
ಗರ್ಭಗೊರಳ ಅರ್ಬುದವನ್ನು ಪ್ರಾರಂಭಿಕ ಹಂತದಲ್ಲಿ ಸ್ಕ್ರೀನಿಂಗ್ ಟೆಸ್ಟ್‌ಗಳ ಮೂಲಕ ಪತ್ತೆ ಹಚ್ಚಿ ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ ಅದಕ್ಕೆ ರೋಗಿಗಳ ಸಹಕಾರ ಬಹಳ ಮುಖ್ಯ. ಕ್ಯಾನ್ಸರ್ ಅಂದರೆ ನಾವು ಎಂದು ಭಯ ಪಡುವ, ನಿರಾಶೆಗೊಳ್ಳುವ ಅಗತ್ಯವಿಲ್ಲ. ಕ್ಯಾನ್ಸರ್ ಇಂದು ಗುಣಪಡಿಬಹುದಾದ ಕಾಯಿಲೆ.
ಕಾರಣಗಳು
ಮಹಿಳೆಯರಲ್ಲಿ ಸ್ತನ ಕ್ಯಾನ್ಸರಿಗೆ ಪ್ರಥಮ ಸ್ಥಾನವಾದರೆ, ಎರಡನೇ ಸ್ಥಾನ ಗರ್ಭಗೊರಳು ಕ್ಯಾನ್ಸರ್‌ಗೆ. ಗರ್ಭಕೋಶದ ಮೂರನೆಯ ಎರಡು ಭಾಗ ಗರ್ಭಾಶಯ ಅಥವಾ “ಒಡಲು’ ಎನಿಸಿದರೆ, ಉಳಿದ ಭಾಗ ಗರ್ಭಗೊರಳು ಎಂದೆನಿಸಿಕೊಳ್ಳುತ್ತದೆ. ಗರ್ಭಗೊರಳ ಕ್ಯಾನ್ಸರ್‌ಗೆ ಕಾರಣಗಳು ನಿರ್ದಿಷ್ಟವಾಗಿ ಗೊತ್ತಿಲ್ಲವಾದರೂ ಅತಿ ಚಿಕ್ಕ ವಯಸ್ಸಿನಲ್ಲಿಯೇ ವೈವಾಹಿಕ ಜೀವನ ಪ್ರಾರಂಭಿಸುವವರಲ್ಲಿ ಮತ್ತು ಹೆಚ್ಚು ಸಂತಾನ ಹೊಂದಿರುವವರಲ್ಲಿ ಇದರ ಹಾವಳಿ ಹೆಚ್ಚು. ಮಕ್ಕಳಾಗದಿದ್ದವರಲ್ಲಿ ಶೇ. 8ರಷ್ಟಿದ್ದರೆ, ಬಹುಮಕ್ಕಳನ್ನು ಹೆತ್ತ ಮಹಿಳೆಯರಲ್ಲಿ ನಾಲ್ಕು ಪಟ್ಟು ಹೆಚ್ಚುವುದು.
– ವಿವಾಹಿತರಲ್ಲಿ ಜಾಸ್ತಿ. ಅವಿವಾಹಿತರಲ್ಲಿ ಕಮ್ಮಿ
– 20 ವರ್ಷಕ್ಕಿಂತ ಮೊದಲು ಮದುವೆಯಾದವರಲ್ಲಿ ಹೆಚ್ಚು. ತಡವಾಗಿ ಮದುವೆಯಾದವರಲ್ಲಿ ಕಮ್ಮಿ.
– ಅನೇಕ ಲೈಂಗಿಕ ಸಂಗಾತಿಗಳನ್ನು ಹೊಂದಿದವರಲ್ಲಿ ಹೆಚ್ಚು.
– 20 ವರ್ಷಕ್ಕಿಂತ ಮೊದಲು ಗರ್ಭಧಾರಣೆಯಾದವರಲ್ಲಿ ಹೆಚ್ಚು.
– ಗುಹ್ಯರೋಗ ಹೊಂದಿರುವವರಲ್ಲಿ ಹೆಚ್ಚು .
– ಕೊಳಚೆ ಪರಿಸರ, ವೈಯಕ್ತಿಕ ನೈರ್ಮಲ್ಯದ ಅಭಾವ, ಬಡತನ, ಅಜ್ಞಾನ ಅಪೌಷ್ಟಿಕತೆಯೂ ಪೂರಕವಾಗಿರುತ್ತದೆ.
– ಇತ್ತೀಚಿನ ವರ್ಷಗಳಲ್ಲಿ ಇದಕ್ಕೆ ಮೂಲಕಾರಣ ಎಚ್.ಪಿ.ವಿ. ಎಂಬ ವೈರಾಣು ಎಂಬುದು ಖಚಿತಗೊಂಡಿದೆ ಹಾಗೂ ಈ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳು ನಡೆಯುತ್ತಿವೆೆ.
ರೋಗದ ಲಕ್ಷಣಗಳು:
– ಋತುಚಕ್ರದ ಸಮಯ ಮಾತ್ರವಲ್ಲದೆ, ಮಧ್ಯೆ ಮಧ್ಯೆಯೂ ರಕ್ತಸ್ರಾವವಾಗುವುದು.
– ಸಂಭೋಗದ ಅನಂತರ ರಕ್ತಸ್ರಾವವಾಗುವುದು.
– ಮಲ ವಿಸರ್ಜನೆ, ಮೂತ್ರ ವಿಸರ್ಜನೆ ಮಾಡುವಾಗ ಯೋನಿಯಿಂದ ರಕ್ತವಾಗುವುದು.
– ಋತುಸ್ರಾವ ನಿಂತವರಲ್ಲಿ ರಕ್ತಸ್ರಾವ ಕಾಣಿಸುವುದು.
– ಸ್ವಲ್ಪ ನೀರಿನ ತರಹ ಕೆಂಪು ಮಿಶ್ರಿತ ಮುಟ್ಟು ಹೋಗುವುದು.
– ಸ್ವಲ್ಪ ಸಮಯದ ಅನಂತರ ಯೋನಿಸ್ರಾವ ದುರ್ವಾಸನೆಯಿಂದ ಕೂಡಿರುವುದು.
– ನೋವು: ರೋಗ ಮುಂದುವರಿದಂತೆ ಸೊಂಟದ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡು ತೊಡೆಗೆ ವಿಸ್ತರಿಸುತ್ತದೆ. ಈ ನೋವು ರಾತ್ರಿ ಹೊತ್ತು ಹೆಚ್ಚಾಗುವುದು. ಚಿಕಿತ್ಸೆಯಿಂದ ವಂಚಿತರಾದಲ್ಲಿ ದಿನ ಕಳೆದಂತೆ ರೋಗ ಉಲ್ಬಣಗೊಳ್ಳುತ್ತದೆ. ರಕ್ತಹೀನತೆ ತೀವ್ರವಾಗುತ್ತದೆ. ಕಾಲಕಳೆದಂತೆ ಕ್ಯಾನ್ಸರ್ ಅಕ್ಕಪಕ್ಕದ ಅಂಗಾಂಗಗಳಿಗೆ ಹಬ್ಬುತ್ತದೆ. ಮೂತ್ರಕೋಶ, ಮೂತ್ರನಾಳಗಳಿಗೆ ಹಬ್ಬಿದಾಗ ಮೂತ್ರದ ತೊಂದರೆಗಳು ಉಂಟಾಗುತ್ತವೆ. ಮಲಾಶಯಕ್ಕೆ ಹಬ್ಬಿದಾಗ ಮಲವಿಸರ್ಜನೆಯಲ್ಲೂ ತೊಂದರೆ ಕಾಣಿಸಬಹುದು.
ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದಲ್ಲಿ –
– ಅತೀವ ರಕ್ತಸ್ರಾವ, ತೀವ್ರತರದ ರಕ್ತಹೀನತೆ, ಹಸಿವಿಲ್ಲದಿರುವುದು, ನಿತ್ರಾಣ
– ನೋವು, ಅತೀವ ಬಳಲಿಕೆ ಮತ್ತು ಅಪೌಷ್ಟಿಕತೆ.
– ಗಡ್ಡೆ ಹಬ್ಬಿ ಹೊಟ್ಟೆಯಲ್ಲೆಲ್ಲ ಆವರಿಸುವುದು.
– ಗಡ್ಡೆಯು ದೂರದ ಅಂಗಾಂಗಗಳಿಗೆ ಹರಡುವುದು.
– ಗಡ್ಡೆಯು ಹರಡುವಿಕೆಯಿಂದ ಮೂತ್ರಕೋಶ, ಮಲಾಶಯ, ಯೋನಿ ಇವುಗಳಿಗೆ ಸಂಪರ್ಕ ಉಂಟಾಗಿ ಭಗಂದರ ಉಂಟಾಗಬಹುದು.
– ಗರ್ಭಕೋಶ ಕೀವಿನಿಂದ ತುಂಬಿ, ಸೋಂಕು ನಂಜು ಉಂಟಾಗಿ ಸಾವನ್ನಪ್ಪಬಹುದು.
– ಕಿಡ್ನಿಯ ಕಾರ್ಯನಿರ್ವಹಣೆ ತೊಡಕಾಗಿ ಸಾವು ಸಂಭವಿಸಬಹುದು.
ರೋಗ ವಿಧಾನ
1. ಪಾಪ್ ಸ್ಮಿಯರ್: ಇದು ಸರಳ ವಿಧಾನ. ಗರ್ಭಕೋಶದ ದ್ವಾರದಿಂದ ಲೇಪನಗಳನ್ನು ತೆಗೆದು ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ರೋಗದ ಪ್ರಾರಂಭದ ಹಂತವನ್ನು ಪತ್ತೆಹಚ್ಚಬಹುದು. ಈ ಪರೀಕ್ಷೆ ಬಹಳ ಸರಳವಾದದ್ದು ಮತ್ತು ಕಡಿಮೆ ಖರ್ಚಿನದು. ಈ ಲೇಪನ ಪರೀಕ್ಷೆಗೆ ಒಳಗಾದಲ್ಲಿ ರೋಗವನ್ನು ಪ್ರಾರಂಭದಲ್ಲಿಯೇ ಪತ್ತೆಹಚ್ಚಬಹುದು ಮತ್ತು ಚಿಕಿತ್ಸೆಗೆ ತತ್‌ಕ್ಷಣ ಒಳಪಡಿಸಿದಲ್ಲಿ ನೂರಕ್ಕೆ ನೂರು ಭಾಗ ಗುಣಪಡಿಸಬಹುದು. ಗರ್ಭಗೊರಳಿನ ಕ್ಯಾನ್ಸರ್‌ನಿಂದ ಸಾಯುವ ಶೇ. 90 ರೋಗಿಗಳಲ್ಲಿ ಯಾರೂ ಕೂಡ ಒಂದು ಬಾರಿಯೂ ಈ ಪರೀಕ್ಷೆ ಮಾಡಿಸಿರುವುದಿಲ್ಲ.
2. ಷಲ್ಲರ್ ಅಯೋಡಿನ್ ಪರೀಕ್ಷೆ: ಅಯೋಡಿನ್ ದ್ರಾವಣವನ್ನು ಗರ್ಭಕೋಶದ ದ್ವಾರಕ್ಕೆ ಸವರಿದಾಗ ಸಾಮಾನ್ಯ ಜೀವಕೋಶಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ಏಕೆಂದರೆ ಇದರಲ್ಲಿ ಸಕ್ಕರೆ ಅಂಶವಿರುತ್ತದೆೆ. ಆದರೆ ಕ್ಯಾನ್ಸರ್ ಜೀವಕೋಶಗಳಲ್ಲಿ ಸಕ್ಕರೆ ಅಂಶವಿರುವುದಿಲ್ಲ. ಈ ಬಣ್ಣ ಬದಲಾವಣೆ ಆಗದೆ ಇರುವ ಜಾಗದಿಂದ ತೆಗೆದು ಪರೀಕ್ಷಿಸಿದರೆ, ಕ್ಯಾನ್ಸರ್ ಜೀವಕೋಶಗಳನ್ನು ಪತ್ತೆಹಚ್ಚಬಹುದು.
3. ಕಾಲೊಸ್ಕೋಪಿ ಮತ್ತು ಸರ್ವಕೋಗ್ರಾಪಿ: ಈ ದರ್ಶಕ ಯಂತ್ರದಲ್ಲಿ ಗರ್ಭಕೋಶದ ದ್ವಾರವನ್ನು ದೊಡ್ಡದು ಮಾಡಿದ ನೋಟವನ್ನು ನೋಡಬಹುದು. ಬದಲಾವಣೆಗಳನ್ನು ಕಣ್ಣಾರೆ ಕಾಣಬಹುದು. ಇದರಿಂದಾಗಿ ಪ್ರಾರಂಭದ ಹಂತದಲ್ಲೇ ರೋಗವನ್ನು ಪತ್ತೆಹಚ್ಚಬಹುದು. ಸಂಶಯವಿರುವ ಭಾಗದಿಂದ ಒಂದು ಸಣ್ಣ ತುಂಡನ್ನು ತೆಗೆದು ಪರೀಕ್ಷಿಸಿ, ರೋಗವನ್ನು ಖಚಿತಪಡಿಸಿಕೊಂಡು, ರೋಗ ಯಾವ ಹಂತದಲ್ಲಿದೆ ಎಂಬುದನ್ನು ನಿರ್ಧರಿಸಿ, ಚಿಕಿತ್ಸೆ ಪ್ರಾರಂಭಿಸಲು ಸಹಾಯಕವಾಗಬಹುದು.
4. ಕೋನ್ ಬಯಾಪ್ಸಿ ಇದು ರೋಗ ನಿದಾನಕ್ಕೂ ಚಿಕಿತ್ಸೆಗೂ ಉಪಯುಕ್ತ. ಅಸಹಜ ಬೆಳವಣಿಗೆ ದೊಡ್ಡದಿದ್ದಾಗ, ಅದು ಗರ್ಭಕೊರಳಿನ ನಾಳವನ್ನು ಆಕ್ರಮಿಸುವುದು. ಆಗ ಕಾಲೊಸ್ಕೋಪಿಯಿಂದ ನೋಡುವ ನೋಟಕ್ಕೆ ಅಡ್ಡಿಯಾಗಬಹುದು. ಇಂಥ ಸಂದರ್ಭದಲ್ಲಿ ಆ ಭಾಗದಿಂದ ಕೋನ್ ಬಯಾಪ್ಸಿ ಮಾಡಿ ರೋಗ ನಿದಾನ ಮಾಡಬಹುದು.
5. ಯೋನಿ ಪರೀಕ್ಷೆ:ಗರ್ಭಗೊರಳಿನ ಕ್ಯಾನ್ಸರನ್ನು ಯೋನಿ ಪರೀಕ್ಷೆ ಮಾಡುವುದರಿಂದ ಶಂಕಿಸಬಹುದು. ಇದು ಮುಂದುವರಿದ ರೋಗದಲ್ಲಿ ಸಾಧ್ಯ. ಪರೀಕ್ಷಿಸಲು ಮುಟ್ಟಿದರೆ ರಕ್ತಸ್ರಾವವಾಗುತ್ತದೆ. ಬೆಂದಿರುವ ಹೂಕೋಸಿನ ಭಾಗಗಳಂತೆ ತಟ್ಟನೆ ಕಿತ್ತು ಕೈಗೆ ಬರುತ್ತದೆ. ಆದ್ದರಿಂದ ವೈದ್ಯರು ಬಹಳ ಸೂಕ್ಷ್ಮತೆಯಿಂದ ಪರೀಕ್ಷಿಸುತ್ತಾರೆ.
6. ಡಿ.ಎನ್.ಎ. ಅಧ್ಯಯನದಿಂದಲೂ ರೋಗ ನಿಧಾನ ಸಾಧ್ಯ. ಜೀವಕೋಶಗಳಲ್ಲಿಯ ಅನ್ಯುಪ್ಲಾಯಿx ಕ್ಯಾನ್ಸರ್ ರೋಗದ ಮುದ್ರೆ ಇದ್ದಂತೆ
7. ಎಚ್.ಪಿ.ವಿ. ವೈರಾಣು ಪತ್ತೆ: ಇದು ಇತ್ತೀಚಿನ ದಿನಗಳಲ್ಲಿ ಪ್ರಾಮುಖ್ಯ ಪಡೆದ ಅತಿ ಉಪಯುಕ್ತ ಪರೀಕ್ಷೆ. ಇದರ ಇರುವಿಕೆಯನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಕ್ಯಾನ್ಸರ್ ಬರುವುದನ್ನೇ ತಡೆಯಬಹುದು.
ರೋಗದ ಹಂತಗಳು
ಹಂತ 0 – ರೋಗ ಮೇಲ್ಪದರಕ್ಕೆ ಮಾತ್ರ ಸೀಮಿತಗೊಂಡು ರೋಗದ ಯಾವ ಲಕ್ಷಣಗಳೂ ಗೋಚರಿಸುವುದಿಲ್ಲ. ಪಾಪ್ ಸ್ಮಿಯರ್ ಮಾಡಿದಾಗ ಮಾತ್ರ ಮಾರ್ಪಾಡಾದ ಜೀವಕೋಶಗಳನ್ನು ಪತ್ತೆಹಚ್ಚಬಹುದು.
ಹಂತ 1: ಇಲ್ಲಿ ಗಡ್ಡೆ ಸ್ವಲ್ಪ ಭಾಗಕ್ಕೆ ಮಾತ್ರ ಸೀಮಿತವಾಗಿದ್ದು 5 ಮಿ.ಮೀ.ಗೆ ಮೀರದಂತೆ ಅಗಲವಾಗಿರುತ್ತದೆ.
ಹಂತ 2: ಗಡ್ಡೆ ಗರ್ಭಕೋಶದ ದ್ವಾರಕ್ಕೆ ಸೀಮಿತವಾಗಿರದೇ ಪಕ್ಕದ ಅಂಗಾಂಶಗಳಿಗೆ ಹರಡಿರುತ್ತದೆ.
ಹಂತ 3: ಗಡ್ಡೆ ಬೆಳವಣಿಗೆ ಮುಂದುವರಿದು ಕಟಿರದ ಗೋಡೆಯವರೆಗೂ ಹರಡಿರುತ್ತದೆ. ಗಡ್ಡೆ ಯೋನಿ, ಅಸ್ಥಿರಜ್ಜು ಮತ್ತು ಮೂತ್ರಪಿಂಡಗಳಿಗೂ ಮುತ್ತಿಗೆ ಹಾಕುವುದು. ಮೂತ್ರ ಪಿಂಡ ನೀರಿನಿಂದ ತುಂಬಿಕೊಳ್ಳಬಹುದು. ಮೂತ್ರಪಿಂಡದ ಕಾರ್ಯಕ್ಷಮತೆಗೆ ಧಕ್ಕೆ ಉಂಟಾಗಬಹುದು.
ಹಂತ 4: ಸುತ್ತಲಿರುವ ಅಂಗಾಂಗಗಳಿಗೆ – ಮೂತ್ರಕೋಶ ಮತ್ತು ಮಲಾಶಯಗಳಿಗೂ ಹರಡಿರುವುದು ಮಾತ್ರವಲ್ಲದೆ ದೂರದ ಅಂಗಾಂಗಗಳಿಗೂ ಹರಡಿರುತ್ತದೆ. ಗುದ ಪರೀಕ್ಷೆ ಮಾಡುವುದರಿಂದ ಗಡ್ಡೆ ಹರಡುವಿಕೆಯನ್ನು ಪತ್ತೆ ಹಚ್ಚಬಹುದು.
– ಮುಂದುವರಿಯುವುದು
– ಡಾ| ಕೀರ್ತಿ ಕ್ಯಾಲಕೊಂಡ
ಸಹಾಯಕ ಪ್ರಾಧ್ಯಾಪಕರು
ಡಾ| ಶ್ಯಾಮಲಾ ಜಿ.
ಪ್ರಾಧ್ಯಾಪಕರು
ಸ್ತ್ರೀರೋಗ ವಿಭಾಗ, ಕೆ.ಎಂ.ಸಿ. ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.