Team Udayavani, Oct 4, 2020, 7:03 PM IST
ತಲೆ ಮತ್ತು ಕುತ್ತಿಗೆಯ ರೇಡಿಯೇಶನ್ ಥೆರಪಿ ಮತ್ತು ಕಿಮೋಥೆರಪಿಗಳು ಬಾಯಿಯ ವಿವಿಧ ಸಮಸ್ಯೆಗಳು ಉಂಟಾಗುವುದರ ಜತೆಗೆ ಸಂಬಂಧ ಹೊಂದಿವೆ. ಈ ಚಿಕಿತ್ಸೆಗಳಿಂದ ಬಾಯಿಯ ಕುಹರ ಮತ್ತು ಸಂಬಂಧಿತ ಸಂರಚನೆಗಳಲ್ಲಿರುವ ದೃಢ ಮತ್ತು ಮೃದು ಅಂಗಾಂಶಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಚಿಕಿತ್ಸೆಗೆ ಸಂಬಂಧಿಸಿ ಬಾಯಿಯಲ್ಲಿ ಉಂಟಾಗುವ ಮ್ಯುಕೋಸೈಟಿಸ್, ವಸಡುಗಳಲ್ಲಿ ರಕ್ತಸ್ರಾವ, ಬಾಯಿ ಒಣಗುವಿಕೆ, ಸೋಂಕು, ಜಗಿಯಲು, ನುಂಗಲು ಮತ್ತು ಮಾತನಾಡಲು ಕಷ್ಟವಾಗುವಂತಹ ಸಮಸ್ಯೆಗಳ ಜತೆಗೆ ಕ್ಯಾನ್ಸರ್ ಚಿಕಿತ್ಸೆಯು ಸ್ವತಃ ಬಾಯಿಯ ಆರೋಗ್ಯದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಲ್ಲದೆ ರೋಗಿಯ ಜೀವನ ಗುಣಮಟ್ಟ ಮತ್ತು ಸೌಖ್ಯವನ್ನು ಬಾಧಿಸುತ್ತದೆ. ಕ್ಯಾನ್ಸರ್ ಚಿಕಿತ್ಸೆಯ ಸಂದರ್ಭದಲ್ಲಿ ಬಾಯಿಯ ಆರೈಕೆಯನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಈ ಲೇಖನದಲ್ಲಿ ಮಾಹಿತಿಗಳಿವೆ. ಈ ಮಾಹಿತಿಗಳನ್ನು ಸಕ್ರಿಯ ಕಿಮೋಥೆರಪಿಯ ಸಂದರ್ಭದಲ್ಲಿ ಮತ್ತು ಅದಕ್ಕೆ ಮುನ್ನ, ಕುತ್ತಿಗೆ ಮತ್ತು ತಲೆಯ ರೇಡಿಯೇಶನ್ ಥೆರಪಿಯ ಸಂದರ್ಭದಲ್ಲಿ ಮತ್ತು ಅದಕ್ಕೆ ಮುಂಚಿತವಾಗಿ ಎಂದು ವರ್ಗೀಕರಿಸಲಾಗಿದೆ.
ನಿಮ್ಮ ಊಟ ಉಪಾಹಾರ ಮತ್ತು ದ್ರವಾಹಾರ ಸೇವನೆಯ ವಿಚಾರವಾಗಿ ನಿಮ್ಮ ವೈದ್ಯರು/ ನರ್ಸ್/ ಪಥ್ಯಾಹಾರ ತಜ್ಞರು ಸಹಾಯ ಮಾಡುತ್ತಾರೆ :
- ಹೆಚ್ಚು ಪ್ರೊಟೀನ್, ಹೆಚ್ಚು ಕ್ಯಾಲೊರಿ ಹೊಂದಿರುವ ಆಹಾರ ಮತ್ತು ದ್ರವಾಹಾರಗಳನ್ನು ಆರಿಸಿಕೊಳ್ಳಿ.
- ಚೀಸ್, ಹಾಲು, ಮಾಂಸ, ಮೊಟ್ಟೆಗಳು, ಬೀನ್ಸ್, ಯೋಗರ್ಟ್, ಸೀಕರಣೆಗಳು ಮತ್ತು ಐಸ್‌ಕ್ರೀಮ್.
- ಸಾಮಾನ್ಯ ಆಹಾರಗಳನ್ನು ಜಗಿಯಲು ಮತ್ತು ನುಂಗಲು ಸಮಸ್ಯೆ ಇದ್ದರೆ ಮೃದುವಾದ ಮತ್ತು ಮಿಶ್ರ ಮಾಡಿದ ಆಹಾರಗಳನ್ನು ಆರಿಸಿಕೊಳ್ಳಬಹುದು.
- ಕ್ರೀಮ್ ಸೂಪ್‌ಗ್ಳು, ಸ್ಟೂéಗಳು, ಕ್ಯಾಸರೋಲ್‌ಗಳು, ಸ್ಟ್ರಾಂಬಲ್ಡ್ ಮೊಟ್ಟೆ ಮತ್ತು ಬೇಯಿಸಿ ನುರಿಸಿದ ಬಟಾಟೆ. ಆಹಾರಗಳನ್ನು ಮೃದುವಾಗಿಸಲು ಸಾಸ್, ಗ್ರೇವಿ, ಎಣ್ಣೆಗಳು ಅಥವಾ ಬೆಣ್ಣೆ ಸೇರಿಸಿ.
- ಆಮ್ಲಿಯ ಆಹಾರಗಳು ಮತ್ತು ಟೊಮ್ಯಾಟೊ, ಕಿತ್ತಳೆ, ಮೂಸಂಬಿಯಂತಹ ಹಣ್ಣುಗಳ ರಸಗಳನ್ನು ಕಡಿಮೆ ಮಾಡಿ.
- ಶುಷ್ಕ, ಗಟ್ಟಿಯಾದ, ಗರಿಮುರಿಯಾದ ಟೋಸ್ಟ್, ಬೀಜಗಳು, ಚಿಪ್‌ನಂತಹ ಆಹಾರಗಳು, ಹಸಿ ಹಣ್ಣು ಮತ್ತು ತರಕಾರಿಗಳನ್ನು ವರ್ಜಿಸಿ.
- ಆಹಾರ ಸೇವಿಸುವುದು ಕಷ್ಟಕರವಾದಾಗ ಹಗಲು ಹೊತ್ತಿನಲ್ಲಿ ಸಣ್ಣ ಸಣ್ಣ ಪ್ರಮಾಣದ ಊಟೋಪಾಹಾರಗಳನ್ನು ಆಗಾಗ ಸೇವಿಸಿ. ಪೌಷ್ಟಿಕಾಂಶ ಪೂರಕ ಆಹಾರಗಳನ್ನು ಮತ್ತು /ಅಥವಾ ಸೂಕ್ಷ್ಮತೀಗಳು ಅಥವಾ ಮಿಲ್ಕ್ಶೇಕ್‌ಗಳನ್ನು ಸೇವಿಸಿ.
- ಪ್ರತಿದಿನವೂ 8 ಲೋಟಗಳಷ್ಟು ಕಾರ್ಬೋನೇಟೆಡ್ ಅಲ್ಲದ ದ್ರವಾಹಾರ ಸೇವಿಸುವ ಗುರಿ ಹಾಕಿಕೊಳ್ಳಿ (ಆಲ್ಕೊಹಾಲ್ ಮತ್ತು ಕೇನ್ ಮುಕ್ತ).
- ಆಹಾರವನ್ನು ನುಂಗುವುದು ಸುಲಭವಾಗುವುದಕ್ಕಾಗಿ ಸಣ್ಣ ಸಣ್ಣ ತುತ್ತುಗಳನ್ನು ಮತ್ತು ಸಣ್ಣ ಗುಟುಕುಗಳನ್ನು ತೆಗೆದುಕೊಳ್ಳಿರಿ.
- ರುಚಿ ಬದಲಾವಣೆಯಾಗುವುದು, ಆಹಾರ ರುಚಿಸದಿರುವುದು ಸಹಜ. ಆಹಾರ ಹೆಚ್ಚು ರುಚಿಸುವಂತೆ ಮಾಡುವುದಕ್ಕಾಗಿ ಸಲಹೆಗಳನ್ನು ಕೇಳಿರಿ.
- ಆಹಾರ ಸೇವಿಸುವುದಕ್ಕೆ ತೊಂದರೆ ಇದ್ದರೆ ಅಥವಾ ನಿಮ್ಮ ದೇಹತೂಕವನ್ನು ಕಾಪಾಡಿಕೊಳ್ಳುವುದು ಸಮಸ್ಯೆಯಾದರೆ ತತ್‌ಕ್ಷಣನಿಮ್ಮ ಆರೈಕೆದಾರರ ಗಮನಕ್ಕೆ ತನ್ನಿ.
ನುಂಗುವುದು : ನಿಮ್ಮ ಚಿಕಿತ್ಸೆಯ ವೇಳೆ ನುಂಗುವಿಕೆಯಲ್ಲಿ ಆಗುವ ಬದಲಾವಣೆ ಚಿಕಿತ್ಸೆಯ ಸಂದರ್ಭದಲ್ಲಿ ಕೆಲವೊಮ್ಮೆ ಚಿಕಿತ್ಸೆಯ ಅಡ್ಡ ಪರಿಣಾಮಗಳಿಂದಾಗಿ ಆಹಾರವನ್ನು ನುಂಗುವುದು ಹೆಚ್ಚು ಕಷ್ಟಕರವಾಗು ವುದು ನಿಮ್ಮ ಅನುಭವಕ್ಕೆ ಬರಬಹುದು.
- ಬಾಯಿ ಒಣಗಿದಂತಾಗಬಹುದು. ಒಂದು ಬಾಟಲಿ ನೀರನ್ನು ನಿಮ್ಮ ಜತೆಯಲ್ಲಿಯೇ ಇರಿಸಿಕೊಳ್ಳಿ ಮತ್ತು ನೀರು ಗುಟುಕರಿಸುತ್ತಿರಿ.
- ರುಚಿ ಮತ್ತು ವಾಸನೆ ಗ್ರಹಿಸುವ ಶಕ್ತಿ ಬದಲಾಗುವುದು ನಿಮ್ಮ ಗಮನಕ್ಕೆ ಬರಬಹುದು.
- ನುಂಗುವಾಗ ಬಾಯಿ ಮತ್ತು ಗಂಟಲಿನಲ್ಲಿ ಉರಿ ಅನುಭವಕ್ಕೆ ಬಂದರೆ ಆರೋಗ್ಯ ಸೇವಾ ಪೂರೈಕೆದಾರರ ಗಮನಕ್ಕೆ ತನ್ನಿ.
ಬಾಯಿಯ ಆರೈಕೆ : ಚಿಕಿತ್ಸೆಯ ಸಂದರ್ಭದಲ್ಲಿ ನಿಮ್ಮ ಬಾಯಿಯ ಆರೈಕೆ ಮಾಡುವ ವಿಚಾರವಾಗಿ ನಿಮ್ಮ ಆರೋಗ್ಯ ಸೇವಾ ವೃತ್ತಿಪರಿಣಿತರು ನಿಮಗೆ ಸಹಾಯ ಮಾಡುತ್ತಾರೆ.
- ಫ್ಲಾಸಿಂಗ್ (ಹಲ್ಲು ಸಂಧಿಗಳನ್ನು ಶುಚಿಗೊಳಿಸುವುದು): ನೀವು ಸಮರ್ಥರಿದ್ದರೆ ದಿನಕ್ಕೆ ಒಂದು ಬಾರಿ ಹಲ್ಲು ಸಂಧಿಗಳನ್ನು ಶುಚಿಗೊಳಿಸಿಕೊಳ್ಳಿರಿ.
- ಹಲ್ಲುಜ್ಜುವುದು :
- ಹಲ್ಲು ಹುಳುಕಾಗುವುದನ್ನು ತಡೆಯಲು ದಿನಕ್ಕೆ ಎರಡು ಬಾರಿ ಮೃದುವಾದ ಬ್ರಶ್‌ನಿಂದ ಫ್ಲೋರೈಡ್‌ಯುಕ್ತ ಪೇಸ್ಟ್ ಉಪಯೋಗಿಸಿ ಹಲ್ಲುಜ್ಜಿ.
- ಊಟವಾದ ಬಳಿಕ ಮತ್ತು ಮಲಗುವುದಕ್ಕೆ ಮುನ್ನ ಮೃದುವಾಗಿ ಹಲ್ಲುಜ್ಜಿ. ಬಾಯಿಯನ್ನು ಶುಚಿಗೊಳಿಸುವುದಕ್ಕಾಗಿ ಶುದ್ಧವಾದ ಗಾಸ್ ಬಟ್ಟೆ ಅಥವಾ ಫೋಮ್ ಸ್ವಾಬನ್ನು ಮೌತ್ ರಿನ್ಸ್‌ನಲ್ಲಿ ತೋಯಿಸಿ ಉಪಯೋಗಿಸಿ.
- ಬಾಯಿ ಹುಣ್ಣಾಗಿದ್ದರೂ ನಿಮ್ಮ ಬಾಯಿಯ ಆರೈಕೆಯನ್ನು ಮುಂದುವರಿಸಬೇಕು. ನಿಮ್ಮ ದಂತವೈದ್ಯರು ಅಥವಾ ಓಂಕಾಲಜಿಸ್ಟ್ ಶಿಫಾರಸು ಮಾಡಿರುವ ಸ್ಥಳೀಯ ಅರಿವಳಿಕೆ ಮಿಶ್ರಿತ ಬಾಯಿ ಮುಕ್ಕಳಿಸುವ ದ್ರಾವಣ ಉಪಯೋಗಿಸಬೇಕು.
ಬಾಯಿ ಮುಕ್ಕಳಿಸುವುದು (ಬಾಯಿ ಮುಕ್ಕಳಿಸುವ ದ್ರಾವಣ ರೆಸಿಪಿ ನೋಡಿ) :
- ಹಲ್ಲುಜ್ಜಿದ ಬಳಿಕ, ಫ್ಲಾಸಿಂಗ್ ಮಾಡಿದ ಮೇಲೆ ಮತ್ತು ಆಹಾರ ಸೇವಿಸಿದ ಬಳಿಕ ಹಲವಾರು ಬಾರಿ ಬಾಯಿ ಮುಕ್ಕಳಿಸಿ. ಎಚ್ಚರವಿರುವಾಗ ಪ್ರತೀ 1-2 ತಾಸಿಗೊಮ್ಮೆ ಬಾಯಿ ಮುಕ್ಕಳಿಸಿ.
- ದಪ್ಪ ಎಂಜಲಿದ್ದರೆ ಆಗಾಗ ಬಾಯಿ ಮುಕ್ಕಳಿಸಿ ಮತ್ತು ಆಗಾಗ ನೀರು ಗುಟುಕರಿಸುತ್ತಿರಿ.
ತುಟಿಗಳ ಆರೈಕೆ :
- ನೀರಿನಲ್ಲಿ ಕರಗಬಲ್ಲ, ವ್ಯಾಕ್ಸ್ ಆಧಾರಿತ ಅಥವಾ ತೈಲ ಆಧಾರಿತ ಲ್ಯೂಬ್ರಿಕೆಂಟ್‌ಗಳನ್ನು ಉಪಯೋಗಿಸಿ. ಪೆಟ್ರೋಲಿಯಂ ಜೆಲ್ಲಿ ಹಚ್ಚದಿರಿ.
ಗಮನಿಸಿ: ಹಲ್ಲುಗಳ ಚಿಕಿತ್ಸೆ ನಿಗದಿಯಾಗಿದ್ದರೆ ನಿಮ್ಮ ದಂತವೈದ್ಯರಿಗೆ ನೀವು ಸಕ್ರಿಯ ಕ್ಯಾನ್ಸರ್ ಚಿಕಿತ್ಸೆಗೆ ಒಳಪಡುತ್ತಿರುವುದರ ಮಾಹಿತಿ ನೀಡಿ. ಇದರಿಂದ ನಿಮ್ಮ ದಂತವೈದ್ಯರು ಚಿಕಿತ್ಸೆ ಮುಂದುವರಿಸುವುದಕ್ಕೆ ಮುನ್ನ ಓಂಕಾಲಜಿ ವಿಭಾಗವನ್ನು ಸಂಪರ್ಕಿಸುವುದು ಸಾಧ್ಯವಾಗುತ್ತದೆ.
ಬಾಯಿಯನ್ನು ಆರ್ದ್ರವಾಗಿರಿಸುವುದು ;
- ನಿಮ್ಮ ಕೊಠಡಿಯಲ್ಲಿ ಸ್ಟೀಮ್ ವ್ಯಾಪರೈಸರ್ ಇರಿಸುವ ಮೂಲಕ ಮೂಗಿನ ಹೊಳ್ಳೆಗಳನ್ನು ರಾತ್ರಿ ಕಾಲದಲ್ಲಿ ಆರ್ದ್ರವಾಗಿರಿಸಿ.
- ಆಗಾಗ ಬಾಯಿಯನ್ನು ಮೌತ್ ರಿನ್ಸ್ ಮತ್ತು ದ್ರವ ಆಧಾರಿತ ದ್ರಾವಣಗಳಿಂದ ಆರ್ದ್ರವಾಗಿರಿಸಿ.
- ಪೆಟ್ರೋಲಿಯಂ ಜೆಲ್ಲಿ ಮತ್ತು ಗ್ಲಿಸರಿನ್ ಉತ್ಪನ್ನಗಳನ್ನು ವರ್ಜಿಸಿ.
ಬಾಯಿ ಮುಕ್ಕಳಿಸುವ ದ್ರಾವಣದ ರೆಸಿಪಿ :
ಸಾಮಗ್ರಿಗಳು: 1 ಚ. ಚ. (5 ಮಿ.ಲೀ.) ಉಪ್ಪು 1 ಚ. ಚ. (5 ಎಂಎಲ್) ಬೇಕಿಂಗ್ ಸೋಡಾ 4 ಕಪ್ ನೀರು (1 ಲೀ.)
ಬಳಕೆ ಹೇಗೆ?:
- ಬಳಸುವ ಮುನ್ನ ಚೆನ್ನಾಗಿ ಕುಲುಕಾಡಿ.
- ಒಂದು ಚ.ಚ.ದಷ್ಟು ದ್ರಾವಣದಲ್ಲಿ ಬಾಯಿ ಮುಕ್ಕಳಿಸಿ ಉಗಿಯಬೇಕು. • ಪ್ರತೀ ಬಾರಿ ಇದನ್ನು 2-3 ಬಾರಿ ಪುನರಾವರ್ತಿಸಬೇಕು. • ಹಗಲು ಪ್ರತೀ 2 ತಾಸಿಗೊಮ್ಮೆ ಬಾಯಿ ಮಕ್ಕಳಿಸಬೇಕು.
ತಲೆ ಮತ್ತು ಕುತ್ತಿಗೆಯ ರೇಡಿಯೇಶನ್ ಆರಂಭವಾಗುವುದಕ್ಕೆ ಮುನ್ನ ನಿಮ್ಮ ಬಗ್ಗೆ ಕಾಳಜಿ ವಹಿಸುವುದು :
ಆಹಾರ ಮತ್ತು ದ್ರವಾಹಾರ ಸೇವನೆ : ಚಿಕಿತ್ಸೆ ಆರಂಭಕ್ಕೆ ಮುನ್ನ ಆಹಾರ ಮತ್ತು ದ್ರವಾಹಾರ ಸೇವನೆಯ ವಿಚಾರದಲ್ಲಿ ನಿಮ್ಮ ವೈದ್ಯರು/ ದಾದಿ/ ಪಥ್ಯಾಹಾರ ತಜ್ಞರು ನಿಮಗೆ ಸಹಾಯ ಮಾಡುತ್ತಾರೆ.
- ಎಲ್ಲ ಆಹಾರ ವರ್ಗಗಳ ಆಹಾರವಸ್ತುಗಳಿರುವ ಸಮತೋಲಿತ ಆಹಾರ ಪದ್ಧತಿಯನ್ನು ಅನುಸರಿಸಿ (ಆಹಾರ ಮಾರ್ಗದರ್ಶಿ ನೋಡಿ).
- ಸಾದಾ ಆಹಾರವನ್ನು ಜಗಿಯಲು/ ನುಂಗಲು ನೋವು ಉಂಟಾಗುತ್ತಿದ್ದರೆ ಮೃದುಗೊಳಿಸಿದ ಅಥವಾ ನಯಗೊಳಿಸಿದ ಆಹಾರವನ್ನು ಆಯ್ದುಕೊಳ್ಳಿರಿ.
- ಪ್ರತೀ ದಿನ ಕಾಬೊìನೇಟೆಡ್ ಅಲ್ಲದ 8 ಲೋಟ ನೀರನ್ನು ಕುಡಿಯುವ ಗುರಿ ಇರಿಸಿಕೊಳ್ಳಿ (ಅಲ್ಕೊಹಾಲ್ ಮುಕ್ತ).
- ನಿಮ್ಮ ದೇಹತೂಕವನ್ನು ಕಾಯ್ದುಕೊಳ್ಳಿರಿ. ನಿಮ್ಮ ದೇಹತೂಕ ಕಡಿಮೆ ಇದ್ದರೆ ಸ್ವಲ್ಪ ತೂಕ ಗಳಿಸಿಕೊಳ್ಳಲು ಪ್ರಯತ್ನಿಸಿ.
ಅಸಿಸ್ಟೆಂಟ್ ಪ್ರೊಫೆಸರ್, ಹಿರಿಯ ಶ್ರೇಣಿ
ಫಂಡಮೆಂಟಲ್ಸ್ ಆಫ್ ನರ್ಸಿಂಗ್, ಮಣಿಪಾಲ
ನರ್ಸಿಂಗ್ ಕಾಲೇಜು, ಮಾಹೆ, ಮಣಿಪಾಲ
ಡಾ| ರವಿಕಿರಣ್ ಓಂಗೋಲೆ
ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರು, ಓರಲ್
ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗ
ಮಣಿಪಾಲ ದಂತವೈದ್ಯಕೀಯ ಕಾಲೇಜು,
ಮಂಗಳೂರು
ಡಾ| ಸೌರ್ಜ್ಯಾಬ್ಯಾನರ್ಜಿ
ಅಸೋಸಿಯೇಟ್ ಪ್ರೊಫೆಸರ್, ರೇಡಿಯೇಶನ್
ಓಂಕಾಲಜಿ ವಿಭಾಗ, ಕೆಎಂಸಿ ಮಂಗಳೂರು