ನವಜಾತ ಶಿಶುವಿನ ಆರೈಕೆ
Team Udayavani, Nov 15, 2020, 8:39 PM IST
ಸಾಂದರ್ಭಿಕ ಚಿತ್ರ
ನವೆಂಬರ್15ರಿಂದ 21ರ ವರೆಗೆ ವಿಶ್ವದಾದ್ಯಂತ “ನವಜಾತ ಶಿಶುಗಳ ಸಪ್ತಾಹ’ವೆಂದು ಆಚರಿಸಲಾಗುತ್ತದೆ. ಮಕ್ಕಳ ಉಳಿವು ಮತ್ತು ಅಭಿವೃದ್ಧಿಗೆ ನವಜಾತ ಶಿಶುವಿನ ಆರೈಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ವಾರವನ್ನು ಆಚರಿಸುವ ಉದ್ದೇಶವಾಗಿದೆ. ಇದರ ಪ್ರಯುಕ್ತ, “ಪ್ರತೀ ನವಜಾತ ಶಿಶುವಿನಲ್ಲಿ ಹೊಸತನವನ್ನು ಬೆಳಗಿಸಿ ಮತ್ತು ಬೆಳೆಸಿ, ಗುಣಮಟ್ಟದ ಆರೈಕೆ ನೀಡುವುದು’ ಈ ವರ್ಷ ನಮ್ಮ ನಿಮ್ಮೆಲ್ಲರಿಗೂ ಅವಲೋಕಿಸಲು ನೀಡಿರುವಂತಹ ಶೀರ್ಷಿಕೆಯಾಗಿದೆ.
ನವಜಾತ ಅವಧಿ (ಮಗು ಹುಟ್ಟಿದ ಮೊದಲ 28 ದಿನಗಳು)ಮಕ್ಕಳ ಉಳಿವಿಗಾಗಿ ನಿರ್ಣಾಯಕ ಅವಧಿ; ಈ ಅವಧಿಯು ಬಾಲ್ಯದಲ್ಲಿ ಇತರ ಯಾವುದೇ ಅವಧಿಗಿಂತ ಹೆಚ್ಚಿನ ಸಾವಿನ ಅಪಾಯವನ್ನು ಹೊಂದಿರುತ್ತದೆ. ಜೀವನದ ಮೊದಲ ತಿಂಗಳು ಜೀವಮಾನದ ಆರೋಗ್ಯ ಮತ್ತು ಅಭಿವೃದ್ಧಿಗೆ ಒಂದು ಅಡಿಪಾಯದ ಅವಧಿಯಾಗಿದೆ. ಆರೋಗ್ಯವಂತ ಶಿಶುಗಳು ಆರೋಗ್ಯವಂತ ವಯಸ್ಕರಾಗಿ ಬೆಳೆದು, ತಮ್ಮ ಸಮುದಾಯ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬಹುದು.
ವಿಶ್ವ ಆರೋಗ್ಯ ಸಂಸ್ಥೆ 2019ರಲ್ಲಿ ನೀಡಿರುವ ಅಂಕಿ ಅಂಶಗಳ ಪ್ರಕಾರ ಜಾಗತಿಕವಾಗಿ 2.4 ಮಿಲಿಯನ್ ಅಂದರೆ ಪ್ರತೀ ದಿನ ಸರಿಸುಮಾರು 6,700 ನವಜಾತ ಶಿಶುಗಳು ಸಾವನ್ನಪ್ಪಿವೆ. ಇವುಗಳಲ್ಲಿ ಶೇ.75 ನವಜಾತ ಸಾವುಗಳನ್ನು ಜನನದ ಸಮಯದಲ್ಲಿ ಮತ್ತು ಜೀವನದ ಮೊದಲ ವಾರದಲ್ಲಿ ತಿಳಿದಿರುವ, ಪರಿಣಾಮಕಾರಿಯಾದ ಆರೋಗ್ಯ ಕ್ರಮಗಳಿಂದ ತಡೆಯಬಹುದು.
ನವಜಾತ ಶಿಶುಗಳ ಸಾವಿಗೆ ಮುಖ್ಯ ಕಾರಣಗಳು :
- ಅವಧಿ ಪೂರ್ವ ಜನಿಸಿದ ಮಗು
- ಜನನದ ಸಮಯದಲ್ಲಿ ತೊಡಕುಗಳು
- ತೀವ್ರ ಸೋಂಕು
- ಜನ್ಮಜಾತ ಕಾಯಿಲೆಗಳು
ಇವುಗಳು ಗರಿಷ್ಠ ಸಂಖ್ಯೆಯ ನವಜಾತ ಶಿಶುಗಳ ಸಾವಿಗೆ ಕಾರಣವಾಗಿವೆ. ಆದರೂ ಸಾಮಾನ್ಯ ಮಗುವಿನ ಮೇಲೆ ಹೆಚ್ಚು ಗಮನಹರಿಸುವುದು ಮತ್ತು ಯಾವುದೇ ತೊಡಕುಗಳಿಲ್ಲದೆ ಬದುಕಲು ಸಹಾಯ ಮಾಡುವುದು ನಮ್ಮ ಮುಖ್ಯ ಗುರಿಯಾಗಿದೆ.
ಸಾಮಾನ್ಯ ನವಜಾತ ಶಿಶುವಿನ ಉಳಿವಿಗಾಗಿ ಈ ಕೆಳಗಿನ ವಿಷಯಗಳನ್ನು ತಿಳಿಯಬೇಕಾಗುತ್ತದೆ. :
ಮಗುವಿನಲ್ಲಿ ಹಸಿವಿನ ಚಿಹ್ನೆಗಳು: ನವಜಾತ ಶಿಶುವು ಹಸಿವೆಯಾದಾಗ ಅಳುವುದು ಸಾಮಾನ್ಯ. ಹಸಿವಾದರೆ, ಮೊದಲು ಅದು ಮುಖವನ್ನು ಆಚೆ ಈಚೆ ತಿರುಗಿಸಿ ತಾಯಿಯ ಮೊಲೆಯನ್ನು ಹುಡುಕುತ್ತದೆ. ಅನಂತರ ಚೀಪುವ ಶಬ್ದ ಮಾಡುತ್ತದೆ. ಆಮೇಲೆ ತನ್ನ ಕೈಮುಷ್ಠಿಯನ್ನು ಬಾಯಿಗೆ ಕೊಂಡುಹೋಗಿ ಚೀಪಲು ಆರಂಭಿಸುತ್ತದೆ. ಮತ್ತೆಯೂ ಅಮ್ಮನಿಗೆ ಎದೆಹಾಲು ಕೊಡಬೇಕು ಎಂದು ತಿಳಿಯಲಿಲ್ಲವಾದರೆ, ಕ್ರಮೇಣ ಮಗು ಅಳಲು ಆರಂಭಿಸುತ್ತದೆ. ಮೂತ್ರ ಅಥವಾ ಮಲವಿಸರ್ಜನೆ ಮಾಡಿ ಬಟ್ಟೆ ಒದ್ದೆ ಆದರೂ ಕೂಡ ಮಗು ಅಳುತ್ತದೆ. ಕೆಲವೊಮ್ಮೆ ಬೇರೆ ತೊಂದರೆಗಳಿಂದ ಅಳಬಹುದು. ಆದ್ದರಿಂದ ಯಾವ ಕಾರಣದಿಂದ ಮಗು ಅಳುತ್ತಾ ಇದೆಯೆಂದು ಮೊದಲಿಗೆ ಕಂಡುಹಿಡಿಯಬೇಕು ಮತ್ತು ಎದೆಹಾಲುಣಿಸಬೇಕು.
ಮಗುವಿಗೆ ಸಾಕಷ್ಟು ಹಾಲು ಸಿಗುತ್ತದೆಯಾ ಎಂದು ಹೇಗೆ ತಿಳಿಯುತ್ತದೆ? :
ಸಾಕಷ್ಟು ಹಾಲು ಸಿಕ್ಕಿದಾಗ 15-20 ಗ್ರಾಂ. ನಷ್ಟು ಮಗು ತೂಕ ಪಡೆಯುತ್ತದೆ. ದಿನಕ್ಕೆ 6-8 ಸಲ ಮೂತ್ರ, 3-4 ಬಾರಿ ಮಲ ವಿಸರ್ಜನೆ ಮಾಡುತ್ತದೆ. ಹುಟ್ಟಿದ 7 ದಿನಗಳ ಒಳಗೆ ದೇಹದಲ್ಲಿನ ನೀರಿನಾಂಶ ಕಡಿಮೆಯಾಗಿ ಮಗು ತೂಕ ಕಳೆದುಕೊಳ್ಳುತ್ತದೆ. ಕ್ರಮೇಣ ಒಂದು ವಾರದ ಬಳಿಕ ಮಗುವಿನಲ್ಲಿ ತೂಕ ಜಾಸ್ತಿಯಾಗುತ್ತದೆ. ಆದ್ದರಿಂದ ತೂಕದ ಮೇಲೆ ನಿಗಾ ಇಡುವುದು ಬಹಳ ಮುಖ್ಯ. ಸಾಮಾನ್ಯವಾಗಿ ನವಜಾತ ಶಿಶುವು ದಿನಕ್ಕೆ 15-18 ಗಂಟೆ ಮಲಗಬೇಕು. ಪ್ರತೀ ಎರಡು ಗಂಟೆಗೊಮ್ಮೆ ಮಗುವಿಗೆ ತಾಯಿಯ ಎದೆ ಹಾಲುಣಿಸಬೇಕು. ರಾತ್ರಿ ಹೊತ್ತಲ್ಲಿ ಮಗು ಒಮ್ಮೆಗೆ ಸಾಕಷ್ಟು ಹಾಲು ಚೀಪಿದರೆ 4 ಗಂಟೆಗಳ ಕಾಲ ಹಾಲು ಬಯಸುವುದಿಲ್ಲ. ಆದರೆ ಸಾಕಷ್ಟು ಹಾಲು ಕುಡಿದಿದೆಯೋ ಎಂದು ನೀವು ಖಚಿತ ಮಾಡಿಕೊಳ್ಳಬೇಕು. ಕನಿಷ್ಠ 8-12 ಬಾರಿ ಎದೆ ಹಾಲುಣಿಸಬೇಕು.
ಸ್ತನ್ಯಪಾನದ ಸಮರ್ಪಕತೆ :
ಎದೆಹಾಲು ಕುಡಿಯುವಾಗ ಮಗುವಿನ ಬಾಯಿ ಅಗಲವಾಗಿ ತೆರೆದಿದ್ದು, ಮೊಲೆತೊಟ್ಟಿನ ಸುತ್ತಲಿನ 3/4 ಕಪ್ಪು ಭಾಗ ಅದರ ಬಾಯಿಯಲ್ಲಿದ್ದರೆ, ಒಳ್ಳೆಯ ರೀತಿಯಲ್ಲಿ ಎದೆಹಾಲು ಚೀಪಲು ಅನುಕೂಲ ಆಗುತ್ತದೆ. ಬರೀ ಮೊಲೆತೊಟ್ಟನ್ನು ಮಗುವಿಗೆ ಚೀಪಲು ಬಿಡಬಾರದು. “ಸ್ತನ್ಯಪಾನ ಅಮೃತಪಾನ’ ಎಂಬ ಮಾತಿದೆ. ಆದ್ದರಿಂದ ಸಾಮಾನ್ಯ ಹೆರಿಗೆಯಾದ 30 ನಿಮಿಷಗಳ ಒಳಗೆ ಅಥವಾ ಸಿಸೇರಿಯನ್ ಆದ 2-4 ತಾಸುಗಳ ಒಳಗೆ, ಪ್ರತಿಯೊಬ್ಬ ತಾಯಿಯು ತನ್ನ ಮಗುವಿಗೆ ಎದೆಹಾಲನ್ನು ನೀಡುವುದು ಅತೀ ಅಗತ್ಯ. 6 ತಿಂಗಳುಗಳ ಕಾಲ ಮಗುವಿಗೆ ಕಡ್ಡಾಯವಾಗಿ ಕೇವಲ ಎದೆಹಾಲನ್ನು ಮಾತ್ರ ನೀಡಬೇಕು. ಇದು ಬಿಟ್ಟು ಬೇರೆ ಏನನ್ನೂ ಕೊಡಬಾರದು. ಒಂದು ವೇಳೆ ವೈದ್ಯರು ಏನಾದರೂ ಸಿರಪ್ ಅಥವಾ ಔಷಧಗಳನ್ನು ನೀಡಲು ಹೇಳಿದರೆ ಮಾತ್ರ ಅದನ್ನು ಕೊಡಬಹುದು.
ಎಷ್ಟು ನಿಮಿಷ ಕೊಡಬೇಕು? :
ಒಂದು ಮೊಲೆಯ ಹಾಲನ್ನು ಕನಿಷ್ಠ 15-20 ನಿಮಿಷ ಆದರೂ ಕೊಟ್ಟು ಆದ ಬಳಿಕ ಇನ್ನೊಂದು ಮೊಲೆಯ ಹಾಲನ್ನು ಕೊಡಲು ಆರಂಭಿಸಬೇಕು. ಒಂದೇ ಸಲ ಎರಡೂ ಮೊಲೆಗಳನ್ನು ಚೀಪಿಸಬೇಕು ಎಂದೇನಿಲ್ಲ. ಒಂದು ಸಲಕ್ಕೆ ಒಂದು ಮೊಲೆಯ ಹಾಲಿನಿಂದ ಮಗು ತೃಪ್ತಿಗೊಂಡರೆ, ಇನ್ನೊಂದು ಮೊಲೆಯ ಹಾಲನ್ನು ಮತ್ತೂಮ್ಮೆ ಹಾಲುಣಿಸುವಾಗ ಕೊಟ್ಟರಾಯಿತು. ಒಂದು ಮೊಲೆಯಿಂದ ಸಂಪೂರ್ಣವಾಗಿ ಹಾಲು ಕೊಟ್ಟ ಅನಂತರವೇ ಇನ್ನೊಂದು ಮೊಲೆಯನ್ನು ಚೀಪಿಸಬೇಕು. ಯಾಕೆಂದರೆ, ಎದೆಹಾಲಿನಲ್ಲಿ 2 ವಿಧಗಳಿವೆ. ಮಗು ಎದೆಹಾಲನ್ನು ಚೀಪಲು ಪ್ರಾರಂಭಿಸುವಾಗ ಆರಂಭದಲ್ಲಿ ಬರುವ 3-4 ಚಮಚ ಹಾಲನ್ನು ನೀರು ಹಾಲು ಎಂದು ಕರೆಯುತ್ತೇವೆ. ಈ ಹಾಲಿನಲ್ಲಿ ಶೇ.80 ನೀರಿನ ಅಂಶ ಇರುವುದರಿಂದ ಮಗುವಿನ ಬಾಯಾರಿಕೆಯನ್ನು ತಣಿಸುವಲ್ಲಿ ಇದು ಸಹಾಯ ಮಾಡುತ್ತದೆ. ಕೊನೆಗೆ ಬರುವ ಹಾಲನ್ನು ದಪ್ಪ ಹಾಲು ಎಂದು ಹೇಳುತ್ತಾರೆ. ಈ ಹಾಲಿನಲ್ಲಿ ತುಂಬಾ ಪೌಷ್ಟಿಕಾಂಶಗಳು ಇರುವುದರಿಂದ ಮಗುವಿನ ಬೆಳವಣಿಗೆಗೆ ಇದು ಸಹಾಯ ಮಾಡುವುದು ಮಾತ್ರವಲ್ಲದೆ ಹಸಿವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಎದೆ ಹಾಲು ಕೊಡುವುದರಿಂದ ತಾಯಿ-ಮಗುವಿಗೆ ಆಗುವ ಲಾಭಗಳು :
ಎದೆಹಾಲು ಶುದ್ಧ ಸುರಕ್ಷಿತ ಹಾಗೂ ಸರಿಯಾದ ಉಷ್ಣತೆ ಹೊಂದಿರುವ ಹಾಲು. ಇದರಲ್ಲಿ ಸರಿಯಾದ ಪ್ರಮಾಣದ ಪೌಷ್ಟಿಕಾಂಶಗಳು ಇರುವುದರಿಂದ ಮಗುವಿನ ದೈಹಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ. ಎದೆಹಾಲು ಇತರ ಹಾಲಿಗಿಂತ ಸುಲಭವಾಗಿ ಜೀರ್ಣವಾಗುತ್ತದೆ ಹಾಗೂ ರೋಗ ನಿರೋಧಕ ಅಂಶಗಳನ್ನು ಒಳಗೊಂಡಿರುವುದರಿಂದ, ಮಗುವಿಗೆ ಅತಿಸಾರ ಕೆಮ್ಮು ಕಫ ಇತ್ಯಾದಿ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆ. ತಾಯಿ-ಮಗುವಿನ ಮಾನಸಿಕ ಬಾಂಧವ್ಯ ಹೆಚ್ಚಾಗುವುದು ಮಾತ್ರವಲ್ಲದೆ ಮಕ್ಕಳ ಬೆಳವಣಿಗೆಗೆ ತುಂಬಾ ಸಹಕಾರಿಯಾಗಿದೆ. ಎದೆಹಾಲುಣಿಸುವುದರಿಂದ ಹೆರಿಗೆಯ ನಂತರದ ರಕ್ತಸ್ರಾವ ಕಮ್ಮಿಯಾಗುತ್ತದೆ ಮತ್ತು ಮುಂದಿನ ಗರ್ಭಧಾರಣೆಯನ್ನು ಮುಂದೂಡಲು ಸಹಾಯಕವಾಗುತ್ತದೆ. ಮಕ್ಕಳಲ್ಲಿ ಪ್ರತ್ಯೇಕವಾಗಿ ಅನೇಕ ಸೋಂಕು, ಮಲಬದ್ಧತೆ, ಅಲರ್ಜಿ, ಇಂತಹ ಅನೇಕ ರೋಗರುಜಿನಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಮಗುವಿಗೆ ಚುಚ್ಚುಮದ್ದುಗಳನ್ನು ಹೇಗೆ ನೀಡಬೇಕು? :
ಹುಟ್ಟಿದ ತಕ್ಷಣ ಮಗುವಿಗೆ ಪೋಲಿಯೋ, ಬಿಸಿಜಿ ಇಂತಹ ಚುಚ್ಚುಮದ್ದನ್ನು ಕೊಡಬೇಕು. ಹಾಗೆಯೇ 6, 10, 14 ವಾರಗಳಲ್ಲಿ ಪೋಲಿಯೋ, ದಡಾರ ಮತ್ತು ಕಾಮಾಲೆಯ ಚುಚ್ಚುಮದ್ದುಗಳನ್ನು ಕೊಡಬೇಕು. 9 ತಿಂಗಳಲ್ಲಿ ಕೋರದ ಚುಚ್ಚುಮದ್ದು, 15 ತಿಂಗಳಲ್ಲಿ MMR, ಹೀಗೆ ಚುಚ್ಚುಮದ್ದುಗಳನ್ನು ಕೊಡಬೇಕು. ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಒಂದು ಕಾರ್ಡು ಕೊಡ್ತಾರೆ, ಅದರಲ್ಲಿ ಎಲ್ಲಾ ಚುಚ್ಚುಮದ್ದುಗಳನ್ನು ಹೇಗೆ ಕ್ರಮವಾಗಿ ನೀಡಬೇಕೆಂದು ಬರೆದಿರುತ್ತದೆ.
ಕೋವಿಡ್ ಮತ್ತು ಎದೆಹಾಲುಣಿಸುವಿಕೆ:
ಕೋವಿಡ್ ಬಂದರೆ ಎದೆಹಾಲು ಕೊಡಬಾರದು ಅಂತ ಇಷ್ಟರವರೆಗೆ ಯಾರು ಕೂಡ ಹೇಳಿಲ್ಲ. ಆದರೆ ಒಂದು ನಾವು ನೆನಪಿಡಬೇಕು ಏನೆಂದರೆ, ತಾಯಿಯು ಚೆನ್ನಾಗಿ ಸೋಪ್ ಬಳಸಿ ಕೈ ತೊಳೆಯಬೇಕು ಮತ್ತು ಎದೆಹಾಲುಣಿಸುವಾಗ ಮಾಸ್ಕ್ ಹಾಕಬೇಕು. ಆದಷ್ಟು ಮಗುವನ್ನು ತಾಯಿಯಿಂದ ದೂರದಲ್ಲಿ ಇರಿಸಿ, ಹಾಲುಣಿಸುವಾಗ ಮಾತ್ರ ಮಗುವಿಗೆ ತಾಯಿಯ ಹತ್ತಿರ ತರಬೇಕು.
ಹಾಲು ಕೊಟ್ಟ ಬಳಿಕ ತೇಗು ಬರಿಸಬೇಕು ಏಕೆ? :
ಎದೆ ಹಾಲುಣಿಸಿ ಆದ ಬಳಿಕ ತೇಗು ಬರಿಸುವುದು ಅತಿ ಆವಶ್ಯಕ. ಯಾಕೆಂದರೆ ಮಕ್ಕಳು ಹಾಲು ಚೀಪುವಾಗ ಸ್ವಲ್ಪ ಪ್ರಮಾಣದಲ್ಲಿ ಗಾಳಿ ಸೇವಿಸುತ್ತಾರೆ; ಅದನ್ನು ಹೊರ ಬರಿಸಲು ತೇಗು ಬರುವಂಥದ್ದು. ಹೀಗೆ ಮಾಡಿದಲ್ಲಿ ಮಗುವಿಗೆ ಹೊಟ್ಟೆ ನೋವು ಮತ್ತು ವಾಂತಿ ಬರುವುದನ್ನು ತಡೆಗಟ್ಟಬಹುದು. ಆದ್ದರಿಂದ ಮಗು ಗಾಳಿ ಸೇವಿಸದ ಹಾಗೆ, ಮೊಲೆ ಸರಿಯಾಗಿ ಅದರ ಬಾಯಿಯೊಳಗೆ ಇದೆಯಾ ಎಂದು ಹಾಲುಣಿಸುವಾಗ ನೋಡಬೇಕು. ತೇಗು ತೆಗೆಯುವುದಕ್ಕಾಗಿ, ಮಗುವನ್ನು ಭುಜದ ಮೇಲೆ ಮಲಗಿಸಿ ಹಗುರವಾಗಿ ಅದರ ಬೆನ್ನನ್ನು ಕೆಳಗಿನಿಂದ ಮೇಲೆ ತಟ್ಟಬೇಕು. ಆಗ ನಾವು ತೇಗು ತೆಗೆಯುವ ಹಾಗೆ ಒಂದು ಶಬ್ದ ಬರುತ್ತದೆ. ಒಂದು ವೇಳೆ ತುಂಬಾ ಹೊತ್ತು ಬೆನ್ನು ತಟ್ಟಿಯೂ ತೇಗು ಬರಲಿಲ್ಲವಾದರೆ, ಮಗುವನ್ನು ಅಂಗಾತ ಮಲಗಿಸದೆ ಬದಿಗೆ ತಿರುಗಿಸಿ ಮಲಗಿಸಬೇಕು.
ದನದ ಹಾಲನ್ನು ನೀಡಬಹುದೇ? :
ಮಗುವಿಗೆ ಆರಂಭದ 6 ತಿಂಗಳು ದನದ ಹಾಲು ಕೊಡಲೇಬಾರದು. “ದನದ ಹಾಲು ಕರುವಿಗೆ, ತಾಯಿಯ ಹಾಲು ಮಗುವಿಗೆ’ ಎಂಬ ಮಾತಿದೆ. ದನದ ಹಾಲಿನಲ್ಲಿ ಅಧಿಕ ಪ್ರಮಾಣದ ಪೋಷಕಾಂಶಗಳಿರುತ್ತವೆ. ಪ್ರತ್ಯೇಕವಾಗಿ, ದನದ ಹಾಲು ಅಧಿಕ ಪ್ರಮಾಣದಲ್ಲಿ ಪ್ರೋಟೀನ್‌ಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ ದನದ ಕರು ಹುಟ್ಟಿದ ಮರು ದಿನವೇ ಎದ್ದು ಓಡಾಡುವುದನ್ನು ನಾವು ನೋಡಿದ್ದೇವೆ. ನವಜಾತ ಶಿಶುಗಳಲ್ಲಿ ದನದ ಹಾಲು ಅವುಗಳ ಜೀರ್ಣ ವ್ಯವಸ್ಥೆಗೆ ಸರಿಹೋಗುವುದಿಲ್ಲ. ಆದ್ದರಿಂದ ದನದ ಹಾಲು ಮಗುವಿಗೆ ಪ್ರಾರಂಭದ 6 ತಿಂಗಳಲ್ಲಿ ಕೊಡಲೇಬಾರದು.
HIV ಮತ್ತು ದೆಹಾಲುಣಿಸುವಿಕೆ:
HIV ಇರುವಾಗ ಎದೆಹಾಲು ಕೊಡುವ ಲಾಭ ಮತ್ತು ಅಪಾಯಗಳ ಬಗ್ಗೆ ನಿಮ್ಮ ವೈದ್ಯರು ಹೇಳಿರುತ್ತಾರೆ ಅಥವಾ ಆಪ್ತ ಸಮಾಲೋಚರ ಬಳಿ ಅಧಿಕ ಮಾಹಿತಿಗಾಗಿ ಭೇಟಿ ಮಾಡಿಸಿರುತ್ತಾರೆ. ಅವರು ನಿಮಗೆ ಸವಿಸ್ತಾರವಾಗಿ ವಿವರಿಸುತ್ತಾರೆ. ಅದರ ನಂತರ ಮಗುವಿಗೆ ಹಾಲು ಕೊಡ ಬೇಕೇ ಅಥವಾ ಬೇಡವೇ ಎಂದು ತಾಯಿ ತೀರ್ಮಾನಿಸಬೇಕು. ಅದಲ್ಲದೆ, ಕಾಮಾಲೆ ರೋಗ, ಕ್ಷಯರೋಗ, ಮಲೇರಿಯಾ, ಸರ್ಪಸುತ್ತು, ಇಂತಹ ತೊಂದರೆಗಳು ಇದ್ದಾಗ ಎದೆಹಾಲು ಕೊಡುವುದು ಒಳ್ಳೆಯದಲ್ಲ. ಒಂದು ವೇಳೆ ನೀವು ಮಾತ್ರೆ ಗಳನ್ನು ತಿನ್ನುತ್ತಿದ್ದರೆ, ಅವುಗಳು ಮುಗಿದ ನಂತರ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಎದೆಹಾಲನ್ನು ಮುಂದು ವರಿಸುವ ಬಗ್ಗೆ ಸಮಾಲೋಚಿಸಿದರೆ ಉತ್ತಮ.
ಮೊಲೆ ಗಟ್ಟಿಯಾಗುವಿಕೆ:
ಸರಿಯಾಗಿ ಮಗುವಿಗೆ ಹಾಲುಣಿಸದಿದ್ದರೆ, ಹಾಲು ಮೊಲೆಗಳಲ್ಲಿ ಶೇಖರಿಸಿ ಗಟ್ಟಿಯಾಗಿ, ನೋವು ಬರುತ್ತದೆ ಮತ್ತು ನೋವಿನಿಂದ ಕೆಲವೊಮ್ಮೆ ಜ್ವರ ಸಹ ಬರಬಹುದು. ಮಗು ಸರಿಯಾಗಿ ಹಾಲನ್ನು ಚೀಪಿದರೆ ಇಂತಹ ತೊಂದರೆ ಇರುವುದಿಲ್ಲ. ಒಂದು ವೇಳೆ ಮೊಲೆಗಳಲ್ಲಿ ತುಂಬಾ ಹಾಲು ಇದ್ದರೆ ಅದನ್ನು ತಾಯಿ ಹಿಂಡಿ ತೆಗೆಯಬೇಕು. ಮಗುವಿಗೆ ಹಾಲು ಕೊಡುವ ಮುಂಚೆ ಹಾಗೂ ಹಾಲು ಕೊಟ್ಟು ಆದ ನಂತರ ಬಿಸಿನೀರಿನ ಶಾಖ ಕೊಟ್ಟರೆ ಒಳ್ಳೆಯದು. ಹಾಲು ಹಿಂಡಲು ಕಷ್ಟ ಆದರೆ ಬ್ರೆಸ್ಟ್ ಪಂಪ್ ಕೂಡ ಬಳಸಬಹುದು.
ಸೀಳಿದ ಅಥವಾ ಒಡೆದ ಮೊಲೆತೊಟ್ಟು :
ಕೇವಲ ಮೊಲೆ ತೊಟ್ಟಿನಿಂದ ಮಾತ್ರ ಮಗು ಹಾಲು ಚೀಪಿದರೆ, ಮೊಲೆತೊಟ್ಟು ಒಡೆದು ಗಾಯ ಆಗುವ ಸಾಧ್ಯತೆ ಹೆಚ್ಚು. ಕೆಲವರಲ್ಲಿ ಇದು ಜಾಸ್ತಿಯಾಗಿ ರಕ್ತ ಕೂಡ ಬರಬಹುದು. ಹೀಗೆ ಏನಾದರೂ ಆದರೆ, ಆ ಮೊಲೆಯ ಬದಲು ಇನ್ನೊಂದು ಮೊಲೆಯ ಹಾಲನ್ನು ಕೊಡಬಹುದು ಮತ್ತು ಸೀಳಾದ ಮೊಲೆ ತೊಟ್ಟಿರುವ ಹಾಲನ್ನು ಅದು ಗುಣವಾಗುವ ತನಕ ಹಿಂಡಿ ತೆಗೆಯಬಹುದು. ವೈದ್ಯರು ಸೂಚಿಸಿದ ಕ್ರೀಮ್ ಅಥವಾ ಕೊಬ್ಬರಿ ಎಣ್ಣೆಯನ್ನು ಬಳಸಿದರೆ ಅದು ಬೇಗ ಗುಣವಾಗುತ್ತದೆ.
ಇತರ ಆರೈಕೆ:
- ಹೊಕ್ಕುಳ ಬಳ್ಳಿಯನ್ನು ಸ್ವತ್ಛ ಇಡಬೇಕು. ತನ್ನಷ್ಟಕ್ಕೆ ಅದು ಉದುರಿಹೋಗುತ್ತದೆ. ಆದ್ದರಿಂದ ಏನು ಗಾಬರಿಯಾಗುವ ಆವಶ್ಯಕತೆ ಇಲ್ಲ.
- ಪೌಡರ್ ಹಾಕಿದರೆ ಸೋಂಕು ಆಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಹೊಕ್ಕುಳ ಬಳ್ಳಿಯಲ್ಲಿ ಏನಾದರೂ ಕೀವು, ಕೆಂಪಾದ ಹಾಗೆ ಆದರೆ ಅಥವಾ ದುರ್ವಾಸನೆ ಇದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
- ಆದಷ್ಟು ಮಗುವನ್ನು ಮುಟ್ಟುವಾಗ ಕೈಗಳನ್ನು ಚೆನ್ನಾಗಿ ತೊಳೆಯಬೇಕು ಮತ್ತು ಶುಚಿಯಾದ ಬಟ್ಟೆಯಿಂದ ಒರೆಸಬೇಕು. ಕೈ ಒದ್ದೆ ಇದ್ದರೆ ಮಗುವಿಗೆ ಚಳಿಯಾಗುತ್ತದೆ.
- ಮಗುವಿಗೆ ಹಾಗೂ ತಾಯಿಗೆ ಬಳಸುವ ಬಟ್ಟೆ ಗಳನ್ನು ಚೆನ್ನಾಗಿ ಒಗೆದು ಬಿಸಿಲಿನಲ್ಲಿ ಒಣಗಿಸಬೇಕು.
- ಮಗುವಿಗೆ ದಿನಾಲು ಎಣ್ಣೆ ಹಚ್ಚಿ, ಮಸಾಜ್ ಮಾಡಿ ಸ್ನಾನ ಮಾಡಿಸಬೇಕು. ಮಗುವಿನ ತೂಕ 5kg ಗಿಂತ ಕಮ್ಮಿ ಇದ್ದರೆ ಅಥವಾ ಅವಧಿಗೆ ಮುನ್ನ ಅಂದರೆ 7 ತಿಂಗಳ ಮುಂಚೆ ಮಗು ಹುಟ್ಟಿದರೆ, ನೀರಿನಲ್ಲಿ ಸ್ನಾನ ಮಾಡಿಸಬಾರದು. ಬದಲಿಗೆ ಕೇವಲ ಬಿಸಿ ನೀರಿನಲ್ಲಿ ಒದ್ದೆ ಮಾಡಿದ ಬಟ್ಟೆಯಿಂದ ಒರೆಸಬೇಕು.
- ಆದಷ್ಟು ಡಯಾಪರ್‌ಹಾಕುವುದು ಕಮ್ಮಿ ಮಾಡಬೇಕು. ಪ್ರಯಾಣ ಮಾಡುವಾಗ ಮಾತ್ರ ಕೆಲವು ಸಮಯ ಹಾಕಬೇಕು. ಮಲ-ಮೂತ್ರ ಮಾಡಿದಾಗ ತಕ್ಷಣ ಅದನ್ನು ಬದಲಾಯಿಸಬೇಕು. ವಿಶೇಷವಾಗಿ ಆ ಜಾಗವನ್ನು ಉಗುರು ಬಿಸಿ ನೀರಿನಲ್ಲಿ ಶುಚಿ ಮಾಡಿ, ಸ್ವಲ್ಪ ಎಣ್ಣೆ ಹಚ್ಚಿ ಮತ್ತೆ ಹೊಸ ಡಯಾಪರ್‌ಹಾಕುವುದು ಉತ್ತಮ.(ಮುಂದಿನ ವಾರಕ್ಕೆ)
ಹೆನಿಟಾ ಜೋಸ್ನಾ ಮಿನೇಜಸ್,
ಪಿಎಚ್.ಡಿ ಸಂಶೋಧನ ವಿದ್ಯಾರ್ಥಿನಿ
ಡಾ| ಸೋನಿಯಾ ಆರ್. ಬಿ. ಡಿ’ಸೋಜಾ
ಪ್ರೊಫೆಸರ್ ಮತ್ತು ಮುಖ್ಯಸ್ಥೆ
ಒಬಿಜಿ ನರ್ಸಿಂಗ್ ವಿಭಾಗ
ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್, ಮಾಹೆ,
ಮಣಿಪಾಲ.
ಡಾ| ಲೆಸ್ಲಿ ಎಡ್ವರ್ಡ್ ಎಸ್. ಲೂಯಿಸ್
ಪ್ರೊಫೆಸರ್ ಮತ್ತು ಮುಖ್ಯಸ್ಥರು
ಮಕ್ಕಳ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.