ಪಿತ್ತಜನಕಾಂಗದ ಸಿರೋಸಿಸ್ ಕಾರಣಗಳು ಮತ್ತು ಪರಿಹಾರಗಳು
Team Udayavani, Jan 19, 2020, 5:00 AM IST
ಪಿತ್ತಜನಕಾಂಗವು ಗಾಯಗೊಳ್ಳುವುದರಿಂದ ತಲೆದೋರುವ ಅನಾರೋಗ್ಯ ಸ್ಥಿತಿಯೇ ಸಿರೋಸಿಸ್. ಹೆಪಟೈಟಿಸ್‌ನಂತಹ ಹಲವು ವಿಧದ ಪಿತ್ತಜನಕಾಂಗ ಕಾಯಿಲೆಗಳು, ದೀರ್ಘಕಾಲಿಕ ಮದ್ಯಪಾನವೇ ಮೊದಲಾದ ಕಾರಣಗಳಿಂದ ಇದು ಉಂಟಾಗುತ್ತದೆ. ಪ್ರತೀ ಬಾರಿಯೂ ಪಿತ್ತಜನಕಾಂಗವು ತನಗೆ ಗಾಯ ಮತ್ತು ಹಾನಿಯಾದಾಗ ಸ್ವಯಂ ದುರಸ್ತಿಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ ಮತ್ತು ಇದರಿಂದ ಗಾಯಗೊಂಡ ಅಂಗಾಂಶಗಳು ರೂಪುಗೊಳ್ಳುತ್ತವೆ. ಗಾಯಾಳು ಅಂಗಾಂಶಗಳು ಹೆಚ್ಚುತ್ತ ಹೋದಂತೆ ಸಿರೋಸಿಸ್ ದುರಸ್ತಿಯಾಗಲು ಸಾಧ್ಯವಿಲ್ಲದ ಮುಂದುವರಿದ ಸ್ಥಿತಿಯನ್ನು ತಲುಪುತ್ತದೆ. ಮುಂದುವರಿದ ಸಿರೋಸಿಸ್ ಪ್ರಾಣಾಪಾಯಕಾರಿಯಾದ ಸ್ಥಿತಿಯಾಗಿದೆ.ಸಿರೋಸಿಸ್‌ನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ, ಅದಕ್ಕೆ ಕಾರಣವಾದ ಅಂಶಗಳನ್ನು ಪರಿಹರಿಸಿದಲ್ಲಿ ಪಿತ್ತಜನಕಾಂಗದ ಹಾನಿಯನ್ನು ತಡೆಯಬಹುದು ಮಾತ್ರವಲ್ಲದೆ ಸ್ವಲ್ಪಾಂಶ ಹಿಂದಿನ ಸ್ಥಿತಿಗೆ ತರಬಹುದು. ತಡವಾಗಿ, ಅಂದರೆ ಅಂಗಾಂಶಗಳಿಗೆ ಉಂಟಾದ ಹಾನಿಯನ್ನು ಪರಿಹರಿಸಲು ಸಾಧ್ಯವಿಲ್ಲದ ಸ್ಥಿತಿ ತಲುಪಿದರೆ ಸಂಕೀರ್ಣ ಆರೋಗ್ಯ ಸಮಸ್ಯೆಗಳ ಉಪಶಮನವಷ್ಟೇ ಚಿಕಿತ್ಸೆಯ ಗುರಿಯಾಗಿರುತ್ತದೆ, ಕೆಲವು ಆಯ್ದ ಪ್ರಕರಣಗಳಲ್ಲಿ ಪಿತ್ತಜನಕಾಂಗದ ಕಸಿ ಅಗತ್ಯವಾಗುತ್ತದೆ.
ಲಕ್ಷಣಗಳು
ಆರಂಭಿಕ ಹಂತದಲ್ಲಿ ಸಿರೋಸಿಸ್ ಯಾವುದೇ ಲಕ್ಷಣ ಅಥವಾ ಚಿಹ್ನೆಗಳನ್ನು ತೋರ್ಪಡಿಸುವುದಿಲ್ಲ. ಪಿತ್ತಜನಕಾಂಗಕ್ಕಾಗಿರುವ ಹಾನಿ ತೀವ್ರವಾದ ಬಳಿಕವಷ್ಟೇ ಸಾಮಾನ್ಯವಾಗಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಲಕ್ಷಣಗಳು ಹೀಗಿವೆ:
– ದಣಿವು, ಸದಾ ಕಂಗಾಲಾಗಿರುವುದು
– ಪಾದ, ಕಾಲುಗಳು ಮತ್ತು ಹೊಟ್ಟೆ ಊದಿಕೊಳ್ಳುವುದು
– ಜೀರ್ಣಾಂಗವ್ಯೂಹದಲ್ಲಿ ರಕ್ತಸ್ರಾವ, ಸುಲಭವಾಗಿ – ಆಗಾಗ ರಕ್ತಸ್ರಾವ ಉಂಟಾಗುವುದು ಅಥವಾ ಗಾಯವುಂಟಾಗುವುದು
– ಕಣ್ಣುಗಳು ಮತ್ತು ಚರ್ಮ ಹಳದಿಗಟ್ಟುವುದು
– ಗೊಂದಲ, ಮಬ್ಬು ಮತ್ತು ತೊದಲು ಮಾತು (ಹೆಪಾಟಿಕ್ ಎನ್‌ಸೆಫಲೊಪತಿ)
ಕಾರಣಗಳು
ಪಿತ್ತಜನಕಾಂಗದ ಸಿರೋಸಿಸ್ ಅನೇಕ ಕಾರಣಗಳಿಂದ ಉಂಟಾಗಬಹುದು:
– ದೀರ್ಘಕಾಲಿಕ ಮದ್ಯಪಾನ
– ದೀರ್ಘಕಾಲಿಕ ಹೆಪಟೈಟಿಸ್ (ಹೆಪಟೈಟಿಸ್ ಬಿ, ಸಿ)
– ಪಿತ್ತಜನಕಾಂಗದಲ್ಲಿ ಕೊಬ್ಬು ಶೇಖರವಾಗುವುದು (ಮದ್ಯಪಾನೇತರ ಫ್ಯಾಟಿ ಲಿವರ್ ಡಿಸೀಸ್)
– ಚಯಾಪಚಯ ಕಾಯಿಲೆಗಳು – ಕಬ್ಬಿಣಾಂಶ ಶೇಖರವಾಗುವುದು/ ತಾಮ್ರದಂಶ ಶೇಖರವಾಗುವುದು
– ದೇಹದ ರೋಗ ನಿರೋಧಕ ಶಕ್ತಿಯಿಂದ ಉಂಟಾಗುವುದು (ಆಟೊಇಮ್ಯೂನ್ ಹೆಪಟೈಟಿಸ್)
– ಪಿತ್ತಜನಕಾಂಗದ ರಕ್ತನಾಳಗಳಲ್ಲಿ ತಡೆ (ಹೆಪಾಟಿಕ್ ರಕ್ತನಾಳ- ಬಡ್ ಶಿಯಾರಿ ಸಿಂಡ್ರೋಮ್)
– ಬೈಲ್ ಡಕ್ಟ್ ಹಾನಿಗೊಳ್ಳುವುದು (ಪ್ರೈಮರಿ ಬಿಲಿಯರಿ ಸಿರೋಸಿಸ್, ಪ್ರೈಮರಿ ಸ್ಲೆರೋಸಿಂಗ್ ಕೊಲಂಗೈಟಿಸ್)
ಸಂಕೀರ್ಣ ಸ್ಥಿತಿ – ಸಮಸ್ಯೆಗಳು
ಸಿರೋಸಿಸ್‌ನ ಸಂಕೀರ್ಣ ಸ್ಥಿತಿ – ಸಮಸ್ಯೆಗಳು ಈ ಕೆಳಕಂಡಂತಿವೆ:
– ಪಿತ್ತಜನಕಾಂಗಕ್ಕೆ ರಕ್ತವನ್ನು ಸರಬರಾಜು ಮಾಡುವ ರಕ್ತನಾಳಗಳಲ್ಲಿ ಅಧಿಕ ಒತ್ತಡ (ಪೋರ್ಟಲ್ ಹೈಪರ್‌ಟೆನ್ಶನ್) – ಪಿತ್ತಜನಕಾಂಗಕ್ಕೆ ಹಾನಿಯಾಗುವುದರಿಂದ ಪಿತ್ತಜನಕಾಂಗದ ಮೂಲಕ ರಕ್ತದ ಪ್ರವಾಹ ನಿಧಾನವಾಗುತ್ತದೆ ಮತ್ತು ಪಿತ್ತಜನಕಾಂಗಕ್ಕೆ ರಕ್ತವನ್ನು ತರುವ ರಕ್ತನಾಳಗಳಲ್ಲಿ ಒತ್ತಡ ಹೆಚ್ಚುತ್ತದೆ. ಈ ಸ್ಥಿತಿಯನ್ನು ಪೋರ್ಟಲ್ ಹೈಪರ್‌ಟೆನ್ಶನ್ ಎಂದು ಕರೆಯಲಾಗುತ್ತಿದ್ದು, ಇದು ಕಾಲುಗಳು ಮತ್ತು ಹೊಟ್ಟೆಯಲ್ಲಿ ನೀರು ಸಂಗ್ರಹಗೊಳ್ಳಲು ಕಾರಣವಾಗುತ್ತದೆ. ದ್ರವಾಂಶ ಶೇಖರಣೆಯು ಪಿತ್ತಜನಕಾಂಗದಿಂದ ಅಲುºಮಿನ್ ಕಡಿಮೆ ಉತ್ಪಾದನೆಯಾಗುವುದರಿಂದಲೂ ಉಂಟಾಗಬಹುದು.
– ರಕ್ತಸ್ರಾವ – ಪೋರ್ಟಲ್ ಹೈಪರ್‌ಟೆನ್ಶನ್ ಸ್ಥಿತಿಯು ರಕ್ತಪ್ರವಾಹವು ಅನ್ನನಾಳ ಮತ್ತು ಹೊಟ್ಟೆಯಲ್ಲಿ ಸಣ್ಣ ಮತ್ತು ಸೂಕ್ಷ್ಮ ರಕ್ತನಾಳಗಳತ್ತ ನುಗ್ಗಲು ಕಾರಣವಾಗಬಹುದು. ಇದರಿಂದ ಸಣ್ಣ ಮತ್ತು ಸೂಕ್ಷ್ಮ ರಕ್ತನಾಳಗಳಲ್ಲಿ ಒತ್ತಡ ಹೆಚ್ಚಿ ಅವು ಒಡೆಯಬಹುದು, ಇದು ಪ್ರಾಣಾಂತಿಕವಾದ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.
– ಸೋಂಕುಗಳು – ಸಿರೋಸಿಸ್‌ನಿಂದಾಗಿ ದೇಹಕ್ಕೆ ಸೋಂಕುಗಳ ವಿರುದ್ಧ ಹೋರಾಡಲು ಕಷ್ಟವಾಗುತ್ತದೆ.
– ಹೆಪಾಟಿಕ್ ಎನ್‌ಸೆಫಲೋಪತಿ – ಸಿರೋಸಿಸ್ ಸ್ಥಿತಿ ಉಂಟಾದಾಗ ಪಿತ್ತಜನಕಾಂಗಕ್ಕೆ ರಕ್ತದಲ್ಲಿರುವ ಕಶ್ಮಲ ಮತ್ತು ವಿಷಾಂಶಗಳನ್ನು ಶುದ್ಧೀಕರಿಸಲು ಸಾಧ್ಯವಾಗುವುದಿಲ್ಲ. ಈ ಕಶ್ಮಲಗಳು ಮತ್ತು ವಿಷಾಂಶಗಳು ಮಿದುಳಿನಲ್ಲಿ ಸಂಗ್ರಹವಾಗಿ ಗೊಂದಲು, ಅಮಲಿನಂತಹ ಸ್ಥಿತಿ ಉಂಟಾಗಬಹುದಾಗಿದ್ದು, ಮುಂದುವರಿದ ಹಂತಗಳಲ್ಲಿ ರೋಗಿ ಕೋಮಾಕ್ಕೆ ಜಾರಬಹುದು.
– ಜಾಂಡಿಸ್- ಹಾನಿಗೊಂಡ ಪಿತ್ತಜನಕಾಂಗವು ರಕ್ತದಲ್ಲಿರುವ ತ್ಯಾಜ್ಯ ಅಂಶವಾದ ಬಿಲಿರುಬಿನ್‌ನ್ನು ತೆಗೆದುಹಾಕಲು ಅಶಕ್ತವಾದಾಗ ಜಾಂಡಿಸ್ ಅಥವಾ ಅರಶಿನ ಕಾಮಾಲೆ ಕಾಣಿಸಿಕೊಳ್ಳುತ್ತದೆ. ಜಾಂಡಿಸ್‌ನಿಂದಾಗಿ ಕಣ್ಣುಗಳು, ಚರ್ಮ ಹಳದಿಯಾಗುತ್ತದೆ.
– ಪಿತ್ತಜನಕಾಂಗದ ಕ್ಯಾನ್ಸರ್ ಉಂಟಾಗಬಹುದಾದ ಅಪಾಯವೃದ್ಧಿ – ಪಿತ್ತಜನಕಾಂಗಕ್ಕೆ ಗಾಯವುಂಟಾಗುವುದರಿಂದ ಸಿರೋಸಿಸ್‌ನಿಂದ ಕಾಣಿಸಿಕೊಳ್ಳುತ್ತದೆ, ಇದರಿಂದ ಪಿತ್ತಜನಕಾಂಗದ ಕ್ಯಾನ್ಸರ್ ಉಂಟಾಗುವ ಅಪಾಯವೂ ಹೆಚ್ಚುತ್ತದೆ.
ಅಪಾಯಾಂಶಗಳು
-ಅತಿಯಾಗಿ ಮದ್ಯಪಾನ ಮಾಡುವುದು – ಮಿತಿ ಯಿಲ್ಲದ, ಅತಿಯಾದ ಮದ್ಯಪಾನವು ಸಿರೋಸಿಸ್‌ನ ಪ್ರಮುಖ ಅಪಾಯಾಂಶಗಳಲ್ಲಿ ಒಂದಾಗಿದೆ.
– ಅತಿಯಾದ ದೇಹತೂಕ – ಬೊಜ್ಜು ಫ್ಯಾಟಿ ಲಿವರ್‌ಗೆ ದಾರಿ ಮಾಡಿಕೊಡುತ್ತದೆ, ಇದು ಸಿರೋಸಿಸ್ ಆಗಿ ಬದಲಾಗಬಹುದು.
– ವೈರಲ್ ಹೆಪಟೈಟಿಸ್ – ದೀರ್ಘಕಾಲಿಕ ವೈರಲ್ ಸೋಂಕು (ಹೆಪಟೈಟಿಸ್ ಬಿ ಮತ್ತು ಸಿ)ಗಳು ಸಿರೋಸಿಸ್ ಆಗಿ ಬದಲಾಗಬಹುದು.
ರೋಗಪತ್ತೆ
ಆರಂಭಿಕ ಹಂತಗಳಲ್ಲಿ ಪಿತ್ತಜನಕಾಂಗದ ಸಿರೋಸಿಸ್‌ನ ಯಾವುದೇ ಲಕ್ಷಣ ಅಥವಾ ಚಿಹ್ನೆಗಳು ತೋರಿಬರುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ರೂಢಿಗತ ರಕ್ತಪರೀಕ್ಷೆ ಅಥವಾ ಚೆಕ್‌ಅಪ್ ಸಂದರ್ಭದಲ್ಲಿ ಅದು ಪತ್ತೆಯಾಗುತ್ತದೆ. ಸಿರೋಸಿಸ್ ತಲೆದೋರಿರುವುದನ್ನು ದೃಢಪಡಿಸಿಕೊಳ್ಳಲು ಸಾಮಾನ್ಯವಾಗಿ ಪ್ರಯೋಗಾಲಯ ಪರೀಕ್ಷೆಗಳು ಮತ್ತು ಇಮೇಜಿಂಗ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ರಕ್ತ ಪರೀಕ್ಷೆಗಳು – ಪಿತ್ತಜನಕಾಂಗಕ್ಕಾಗಿರುವ ಹಾನಿಯನ್ನು ದೃಢೀಕರಿಸಿಕೊಳ್ಳಲು ಮತ್ತು ಅದರ ಪ್ರಮಾಣವನ್ನು ತಿಳಿಯಲು ಲಿವರ್ ಫಂಕ್ಷನ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕಾರಣಗಳನ್ನು ತಿಳಿಯಲು ವೈದ್ಯರು ಹೆಪಟೈಟಿಸ್ ವೈರಸ್ ಮತ್ತು ಇತರ ರಕ್ತಪರೀಕ್ಷೆಗಳನ್ನು ಶಿಫಾರಸು ಮಾಡಬಹುದು.
ಈ ಪರೀಕ್ಷೆಗಳ ವರದಿಗಳನ್ನು ಆಧರಿಸಿ, ಉಂಟಾಗಿರುವ ಸಿರೋಸಿಸ್ ಎಷ್ಟು ತೀವ್ರತರವಾದುದು ಮತ್ತು ಅದಕ್ಕೆ ಕಾರಣಗಳನ್ನು ಹೇಳಬಹುದಾಗಿದೆ.
ಇಮೇಜಿಂಗ್ ಪರೀಕ್ಷೆಗಳು – ಸಿರೋಸಿಸ್ (ಪಿತ್ತಜನಕಾಂಗದ ಪೆಡಸುತನ)ಅನ್ನು ದೃಢೀಕರಿಸಿಕೊಳ್ಳಲು, ಹೊಟ್ಟೆಯಲ್ಲಿ ದ್ರವಾಂಶ ಶೇಖರಣೆ, ಪಿತ್ತಜನಕಾಂಗದಲ್ಲಿ ಗಡ್ಡೆ ಉಂಟಾಗಿದೆಯೇ ಎಂಬುದನ್ನು ತಿಳಿಯಲು ಹೊಟ್ಟೆಯ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಸಂಕೀರ್ಣ ಸ್ಥಿತಿಗಳನ್ನು ತಿಳಿದುಕೊಳ್ಳಲು ವೈದ್ಯರು ಹೊಟ್ಟೆಯ ಎಂಆರ್‌ಐ ಅಥವಾ ಸಿಟಿ ಸ್ಕ್ಯಾನಿಂಗ್ ನಡೆಸಬಹುದು.
ಬಯಾಪ್ಸಿ – ಸಾಮಾನ್ಯವಾಗಿ ಸಿರೋಸಿಸ್ ಪತ್ತೆ ಮಾಡುವುದಕ್ಕೆ ಪಿತ್ತಜನಕಾಂಗದ ಬಯಾಪ್ಸಿ (ಪಿತ್ತಜನಕಾಂಗದ ಅಂಗಾಂಶ ಮಾದರಿ) ಅಗತ್ಯವಾಗುವುದಿಲ್ಲ. ಆದರೆ ಕೆಲವು ಆಯ್ದ ರೋಗ ಪ್ರಕರಣಗಳಲ್ಲಿ ಕಾರಣಗಳು ಮತ್ತು ಹಾನಿಯ ತೀವ್ರತೆಯನ್ನು ತಿಳಿಯುವುದಕ್ಕಾಗಿ ಈ ಪರೀಕ್ಷೆಯೂ ಅಗತ್ಯವಾಗಬಹುದು. ಸಿರೋಸಿಸ್ ಪತ್ತೆಯಾದ ಬಳಿಕ ಕಾಯಿಲೆಯ ಪ್ರಗತಿ, ವಿಶೇಷವಾಗಿ ಈಸೋಫೇಜಿಯಲ್ ವೇರಿಸೆಸ್ ಮತ್ತು ಪಿತ್ತಜನಕಾಂಗದ ಕ್ಯಾನ್ಸರ್‌ನಂತಹ ಸ್ಥಿತಿಗಳು ಉಂಟಾಗಿವೆಯೇ ಎಂಬುದನ್ನು ತಿಳಿಯುವುದಕ್ಕಾಗಿ ನಿಯಮಿತವಾಗಿ ಪರೀಕ್ಷೆಗಳಿಗೆ ಒಳಗಾಗುತ್ತಿರಬೇಕಾಗುತ್ತದೆ.
ಚಿಕಿತ್ಸೆ
ಸಿರೋಸಿಸ್‌ಗೆ ಚಿಕಿತ್ಸೆಯು ಪಿತ್ತಜನಕಾಂಗಕ್ಕಾಗಿರುವ ಹಾನಿ ಮತ್ತು ಕಾರಣಗಳನ್ನು ಆಧರಿಸಿರುತ್ತದೆ. ಪಿತ್ತಜನಕಾಂಗದಲ್ಲಿ ಅಂಗಾಂಶ ಹಾನಿ ಹೆಚ್ಚುವುದನ್ನು ತಡೆಯುವುದು ಅಥವಾ ಸಿರೋಸಿಸ್‌ನ ಲಕ್ಷಣಗಳು ಮತ್ತು ಸಂಕೀರ್ಣ ಸ್ಥಿತಿಗಳ ಉಪಶಮನ ಚಿಕಿತ್ಸೆಯ ಗುರಿಯಾಗಿರುತ್ತದೆ.
ಸಿರೋಸಿಸ್‌ನ ಕಾರಣಗಳಿಗೆ ಚಿಕಿತ್ಸೆ
ಸಿರೋಸಿಸ್‌ನ ಪ್ರಾಥಮಿಕ ಹಂತಗಳಲ್ಲಿ ಅದರ ಕಾರಣಗಳಿಗೆ ಚಿಕಿತ್ಸೆ ಒದಗಿಸಿದರೆ ಹಾನಿಯನ್ನು ಸೀಮಿತಗೊಳಿಸುವುದು ಸಾಧ್ಯವಾಗುತ್ತದೆ. ಚಿಕಿತ್ಸೆಯ ಆಯ್ಕೆಗಳು ಹೀಗಿವೆ:
– ಮದ್ಯಪಾನದ ಅವಲಂಬನೆಗೆ ಚಿಕಿತ್ಸೆ – ಸಿರೋಸಿಸ್‌ಗೆ ತುತ್ತಾಗಿರುವ ರೋಗಿಗಳು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಸ್ವತಃ ಮದ್ಯವರ್ಜನೆ ಅಸಾಧ್ಯವಾದರೆ ವೈದ್ಯರು ರೋಗಿಯನ್ನು ಮದ್ಯವರ್ಜನ ಕೇಂದ್ರಕ್ಕೆ ಶಿಫಾರಸು ಮಾಡುತ್ತಾರೆ.
– ತೂಕ ಇಳಿಸಿಕೊಳ್ಳುವುದು – ನಾನ್ ಅಲ್ಕೊಹಾಲಿಕ್ ಫ್ಯಾಟಿ ಲಿವರ್‌ನಿಂದ ಪಿತ್ತಜನಕಾಂಗ ಹಾನಿಗೊಂಡಿರುವವರು ತೂಕ ಇಳಿಸಿಕೊಂಡರೆ ಮತ್ತು ರಕ್ತದ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿ ಇರಿಸಿಕೊಂಡರೆ ಆರೋಗ್ಯವಂತರಾಗುವುದು ಸಾಧ್ಯವಿದೆ.
– ಹೈಪಟೈಟಿಸ್ ನಿಯಂತ್ರಣಕ್ಕೆ ಔಷಧ – ಹೆಪಟೈಟಿಸ್ ಸಿ ಮತ್ತು ಬಿಯಿಂದ ಸಿರೋಸಿಸ್‌ಗೆ ತುತ್ತಾಗಿರುವವರು ಆ್ಯಂಟಿವೈರಲ್ ಔಷಧಗಳ ಮೂಲಕ ಇನ್ನಷ್ಟು ಹಾನಿಗೊಳ್ಳುವುದನ್ನು ತಡೆಯಬಹುದು.
– ಸಿರೋಸಿಸ್‌ನ ಇತರ ಕಾರಣಗಳನ್ನು ನಿಯಂತ್ರಿಸಲು ಔಷಧೋಪಚಾರ – ಔಷಧದಿಂದ ಕೆಲವು ವಿಧವಾದ ಸಿರೋಸಿಸ್ ಪ್ರಗತಿ ಹೊಂದುವುದನ್ನು ನಿಧಾನಗೊಳಿಸಲು ಸಾಧ್ಯವಿದೆ. ಉದಾಹರಣೆಗೆ, ಆಟೊಇಮ್ಯೂನ್ ಹೆಪಟೈಟಿಸ್ ಹೊಂದಿರುವ ರೋಗಿಗಳಿಗೆ ಇಮ್ಯುನೊಸಪ್ರಶನ್ (ಸ್ಟಿರಾಯ್ಡ), ವಿಲ್ಸನ್ ಡಿಸೀಸ್‌ಗೆ ತಾಮ್ರದಂಶ ಕಡಿಮೆಗೊಳಿಸುವ ಔಷಧಗಳು, ಬಡ್ ಚಿಯಾರಿ ಸಿಂಡ್ರೋಮ್ (ಹೆಪಾಟಿಕ್ ರಕ್ತನಾಳಗಳಲ್ಲಿ ತಡೆ)ಗೆ ಆ್ಯಂಜಿಯೊಪ್ಲಾಸ್ಟಿ.
ಸಿರೋಸಿಸ್‌ನ ಸಂಕೀರ್ಣ ಸಮಸ್ಯೆಗಳಿಗೆ ಚಿಕಿತ್ಸೆ
ದೇಹದಲ್ಲಿ ಹೆಚ್ಚುವರಿ ನೀರಿನಂಶ ಉಳಿದುಕೊಳ್ಳುವುದು: ದೇಹದಲ್ಲಿ ನೀರಿನಂಶ ಸಂಗ್ರಹವಾಗದಂತೆ ತಡೆಯಲು (ಅಸಿಟಿಸ್, ಕಾಲು-ಪಾದಗಳು ಬಾತುಕೊಳ್ಳುವುದು) ಸೋಡಿಯಂ ಅಂಶ ಕಡಿಮೆಯಿರುವ ಆಹಾರ ಮತ್ತು ಔಷಧ. ಹೆಚ್ಚು ತೀವ್ರವಾಗಿ ನೀರಿನಂಶ ಉಳಿದುಕೊಳ್ಳುವ ಸಮಸ್ಯೆ ಇದ್ದರೆ ನೀರಿನಂಶವನ್ನು ಹೊರತೆಗೆಯುವ ವಿಧಾನ ನಡೆಸಬೇಕಾಗುತ್ತದೆ.
ಪೋರ್ಟಲ್ ಹೈಪರ್‌ಟೆನ್ಶನ್: ಪಿತ್ತಜನಕಾಂಗಕ್ಕೆ ರಕ್ತವನ್ನು ಒಯ್ಯುವ ರಕ್ತನಾಳಗಳಲ್ಲಿ ಒತ್ತಡವನ್ನು ನಿಯಂತ್ರಿಸಿ ತೀವ್ರ ರಕ್ತಸ್ರಾವವನ್ನು ತಡೆಯಲು ರಕ್ತದೊತ್ತಡ ಕಡಿಮೆ ಮಾಡುವ ಔಷಧಗಳನ್ನು ಉಪಯೋಗಿಸ ಬೇಕಾಗುತ್ತದೆ. ಅನ್ನನಾಳದಲ್ಲಿ ರಕ್ತನಾಳಗಳು ಊದಿಕೊಂಡಿವೆಯೇ ಎಂಬುದನ್ನು ಪರಿಶೀಲಿಸಲು ವೈದ್ಯರು ನಿಯಮಿತವಾಗಿ ಅಪ್ಪರ್ ಎಂಡೊಸ್ಕೊಪಿ ನಡೆಸಬಹುದು. ರಕ್ತಸ್ರಾವ ಉಂಟಾಗಿದ್ದರೆ ಚಿಕಿತ್ಸೆ (ರಬ್ಬರ್ ಬ್ಯಾಂಡ್ ಲಿಗೇಶನ್) ನಡೆಸಬಹುದು.
ಸೋಂಕುಗಳು: ಸಿರೋಟಿಕ್ ರೋಗಿಗಳು ಸೋಂಕುಗಳಿಗೆ ತುತ್ತಾಗುವ ಅಪಾಯವನ್ನು ಹೊಂದಿರುತ್ತಾರೆ. ಈ ಸೋಂಕುಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಆ್ಯಂಟಿ ಬಯಾಟಿಕ್‌ಗಳನ್ನು ಶಿಫಾರಸು ಮಾಡಬಹುದು.
ಪಿತ್ತಜನಕಾಂಗದ ಕ್ಯಾನ್ಸರ್ ಸಾಧ್ಯತೆ ಹೆಚ್ಚಳ: ಪಿತ್ತಜನಕಾಂಗದ ಕ್ಯಾನ್ಸರ್ ಕಾಣಿಸಿಕೊಂಡಿದೆಯೇ ಎಂಬುದನ್ನು ತಿಳಿಯಲು ವೈದ್ಯರು ನಿಯಮಿತವಾಗಿ ರಕ್ತ ಪರೀಕ್ಷೆ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನಡೆಸಬಹುದು.
ಹೆಪಾಟಿಕ್ ಎನ್‌ಸೆಫಾಲೊಪತಿ: ರಕ್ತದಲ್ಲಿ ವಿಷಾಂಶಗಳು ಮತ್ತು ಕಶ್ಮಲ ಶೇಖರವಾಗುವುದನ್ನು ತಡೆಯಲು ವೈದ್ಯರು ಔಷಧಗಳನ್ನು ಶಿಫಾರಸು ಮಾಡಬಹುದು.
ಸಿರೋಸಿಸ್‌ಗೆ ತಡೆ
ನಿಮ್ಮ ಪಿತ್ತಜನಕಾಂಗದ ಬಗ್ಗೆ ಕಾಳಜಿ ಇರಿಸಿಕೊಂಡು ಸಿರೋಸಿಸ್ ಉಂಟಾಗದಂತೆ ತಡೆಯಲು ನೀವು ಈ ಕೆಳಗಿನ ಸಲಹೆಗಳನ್ನು ಅನುಸರಿಸಬಹುದು:
ಮದ್ಯಪಾನ ಮಾಡಬೇಡಿ, ನಿಮಗೆ ಪಿತ್ತಜನಕಾಂಗದ ಸಮಸ್ಯೆ ಇದ್ದರಂತೂ ಮದ್ಯಪಾನ ಬೇಡವೇ ಬೇಡ.
ಆರೋಗ್ಯಪೂರ್ಣ ಆಹಾರ ಕ್ರಮವನ್ನು ಅನುಸರಿಸಿ: ಇಡೀ ಧಾನ್ಯಗಳು, ಹಣ್ಣುಹಂಪಲು, ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಿ. ಸಕ್ಕರೆ ಭರಿತ ಮತ್ತು ಕರಿದ ಕೊಬ್ಬುಯುಕ್ತ ಆಹಾರಗಳು ಕಡಿಮೆ ಇರಲಿ.
ಆರೋಗ್ಯಪೂರ್ಣ ದೇಹತೂಕವನ್ನು ಕಾಯ್ದುಕೊಳ್ಳಿ: ಹೆಚ್ಚು ಕೊಬ್ಬು ಪಿತ್ತಜನಕಾಂಗಕ್ಕೆ ಹಾನಿಯನ್ನು ಉಂಟು ಮಾಡಬಲ್ಲುದು. ನೀವು ಬೊಜ್ಜು ಮತ್ತು ಅಧಿಕ ದೇಹತೂಕ ಹೊಂದಿದ್ದರೆ ತೂಕ ಇಳಿಸಿಕೊಳ್ಳುವ ಕಾರ್ಯಯೋಜನೆಯ ಬಗ್ಗೆ ನಿಮ್ಮ ವೈದ್ಯರ ಜತೆಗೆ ಸಮಾಲೋಚಿಸಿ.
ಹೆಪಟೈಟಿಸ್‌ಗೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡಿ: ಚುಚ್ಚುಮದ್ದಿನ ಸೂಜಿಗಳನ್ನು ಹಂಚಿಕೊಳ್ಳುವುದು, ಅಸುರಕ್ಷಿತ ಲೈಂಗಿಕ ಸಂಪರ್ಕ ಇತ್ಯಾದಿ ಹೆಪಟೈಟಿಸ್ ಬಿ ಮತ್ತು ಸಿಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಹೆಪಟೈಟಿಸ್ ಲಸಿಕೆಯ ಬಗ್ಗೆ ನಿಮ್ಮ ವೈದ್ಯರ ಬಳಿ ಮಾತನಾಡಿ.
ಡಾ| ಗಣೇಶ್ ಭಟ್
ಪ್ರೊಫೆಸರ್ ಮತ್ತು ಯೂನಿಟ್ ಹೆಡ್,
ಗ್ಯಾಸ್ಟ್ರೊ ಎಂಟರಾಲಜಿ ವಿಭಾಗ,
ಕೆಎಂಸಿ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.