ಪ್ರಶಾಮಕ ಆರೈಕೆಯೊಂದಿಗೆ ಆರಾಮ ಜೀವನ
Team Udayavani, Oct 6, 2019, 5:14 AM IST
ಅನೇಕ ರೋಗಿಗಳು ಮತ್ತು ಕುಟುಂಬಗಳು ದೀರ್ಘಕಾಲೀನ, “ಸಹಜ ಬದುಕಿಗೆ ಅಡ್ಡಿಯಾಗುವ’ ಕಾಯಿಲೆಗಳೊಂದಿಗೆ ಜೀವಿಸುತ್ತಿರುತ್ತಾರೆ. ಸಹಜ ಬದುಕಿಗೆ ಅಡ್ಡಿಯಾಗುವ ಕಾಯಿಲೆಗಳಿಗೆ ದೀರ್ಘಕಾಲದ ವರೆಗೆ ಚಿಕಿತ್ಸೆ ಬೇಕಾಗುತ್ತದೆ, ಇದರಿಂದ ಜೀವನ ಗುಣಮಟ್ಟದ ಮೇಲೆ ಪ್ರಭಾವ ಉಂಟಾಗುತ್ತದೆ. “ಸಹಜ ಬದುಕಿಗೆ ಅಡ್ಡಿಯಾಗುವ ಕಾಯಿಲೆಗಳನ್ನು ಜನರು’, “ಮುಂದುವರಿದ ಹಂತದ’, “ಹದಗೆಟ್ಟ’, ಅಥವಾ “ಮಾರಣಾಂತಿಕ’ ಎಂಬೆಲ್ಲ ಹೆಸರುಗಳಿಂದ ಕರೆಯುತ್ತಾರೆ. ಸಹಜ ಬದುಕಿಗೆ ಅಡ್ಡಿಯಾಗುವ ಕಾಯಿಲೆಗಳ ಕೆಲವು ಉದಾಹರಣೆಗಳೆಂದರೆ ಕ್ಯಾನ್ಸರ್, ಮೂತ್ರಪಿಂಡ ಕಾಯಿಲೆ, ಪಿತ್ತಜನಕಾಂಗ ಕಾಯಿಲೆ, ಹೃದಯ ವೈಫಲ್ಯ, ಶ್ವಾಸಕೋಶ ಕಾಯಿಲೆ; ಮೋಟಾರ್ ನ್ಯೂರಾನ್ ಕಾಯಿಲೆ, ಬುದ್ಧಿಮಾಂದ್ಯತೆಯಂಥ ನರ ಸಂಬಂಧಿತ ಸ್ಥಿತಿಗಳು; ಎಚ್‌ಐವಿ ಮತ್ತು ಏಡ್ಸ್. ದೀರ್ಘಕಾಲೀನ ಕಾಯಿಲೆಗಳಿಂದಾಗಿ ರೋಗಿ ಮತ್ತು ಕುಟುಂಬದವರು ನರಳಬೇಕಾಗುತ್ತದೆ.
ನೋವು, ಉಸಿರುಗಟ್ಟುವಿಕೆ ಅಥವಾ ದುರ್ವಾಸನೆ ಬೀರುವ ಗಾಯದ ಕಾರಣದಿಂದ ನರಳುವಿಕೆ ದೈಹಿಕವಾಗಿರಬಹುದು. ರೋಗಿಗಳು ಮತ್ತು ಕುಟುಂಬದವರು ಅನುಭವಿಸುವ ಆತಂಕ ಮತ್ತು ಖನ್ನತೆಯಿಂದಾಗಿ ನರಳುವಿಕೆಯು ಮಾನಸಿಕವಾಗಿರಬಹುದು; ರೋಗಿ, ಕುಟುಂಬದವರು ಭರವಸೆಯನ್ನು ಕಳೆದುಕೊಳ್ಳುವುದರಿಂದ ಮತ್ತು ದೇವರಲ್ಲಿ ತಾವಿಟ್ಟ ನಂಬಿಕೆಯನ್ನು ಪ್ರಶ್ನಿಸುವ ಹಂತಕ್ಕೆ ಬಂದಿರುವುದರಿಂದ ನರಳಿಕೆಯು ಆಧ್ಯಾತ್ಮಿಕವಾಗಿರಬಹುದು, ಸಮಾಜದಿಂದ ಪ್ರತ್ಯೇಕವಾಗಿರುವುದು, ಆರ್ಥಿಕ ಒತ್ತಡ, ಉದ್ಯೋಗ ನಷ್ಟ ಅಥವಾ ಆರೋಗ್ಯ ಕೇಂದ್ರಕ್ಕೆ ತಲುಪಲು ಮತ್ತು ಹುಡುಕಲು ಆಗುವ ತೊಂದರೆಯಿಂದಾಗಿ ಉಂಟಾಗುವ ನರಳಿಕೆಯು ಸಾಮಾಜಿಕವಾಗಿರಬಹುದು. ತಮ್ಮ ವೈದ್ಯಕೀಯ ಸ್ಥಿತಿಯ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಲು ರೋಗಿಗಳು ಮತ್ತು ಅವರ ಕುಟುಂಬದವರು ಹೆಣಗಾಡುತ್ತಾರೆ ಮತ್ತು ಇದರಿಂದಾಗಿ ಹಲವಾರು ಬಾರಿ ಆಸ್ಪತ್ರೆಗೆ ಬರಬೇಕಾಗುತ್ತದೆ, ಆರ್ಥಿಕ, ಕಾರ್ಯರೂಪಕ್ಕೆ ಸಂಬಂಧಿಸಿದ ಮತ್ತು ನೈತಿಕ ಸಮಸ್ಯೆಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ.
ಪ್ರತಿ ವರ್ಷ 2.5 ಮಿಲಿಯ ಮಕ್ಕಳನ್ನು ಒಳಗೊಂಡಂತೆ 25.5 ಮಿಲಿಯಕ್ಕಿಂತಲೂ ಹೆಚ್ಚು ಮಂದಿ ಈ ತರಹದ ಕಾಯಿಲೆಗಳಿಂದ ಉಂಟಾಗುವ ಗಂಭೀರ ದೈಹಿಕ ಮತ್ತು ಮಾನಸಿಕ ನರಳಿಕೆಗಳಿಂದ ಸಾಯುತ್ತಾರೆ. ಭಾರತದಲ್ಲಿ ಪ್ರತಿವರ್ಷ 5.4 ಮಿಲಿಯ ಮಂದಿಗೆ ಪ್ರಶಾಮಕ ಆರೈಕೆಯ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಪ್ರಪಂಚಾದ್ಯಂತ ಪ್ರಶಾಮಕ ಆರೈಕೆಯ ಅಗತ್ಯವಿರುವವರಲ್ಲಿ ಕೇವಲ ಶೇ.14ಕ್ಕಿಂತ ಕಡಿಮೆ ಮಂದಿ ಮಾತ್ರ ಅದನ್ನು ನಿಜವಾಗಿಯೂ ಪಡೆಯುತ್ತಾರೆ. ಭಾರತದಲ್ಲಿ ಶೇ.4ಕ್ಕಿಂತ ಕಡಿಮೆ ಮಂದಿಗೆ ಪ್ರಶಾಮಕ ಆರೈಕೆ ಮತ್ತು ನೋವು ನಿರ್ವಹಣಾ ಚಿಕಿತ್ಸೆ ಲಭ್ಯವಿದೆ.
ಪ್ರಶಾಮಕ ಆರೈಕೆ ಎಂಬುದರ ಅರ್ಥ ವ್ಯಕ್ತಿ ಸಾಯಲಿದ್ದಾನೆ ಎಂಬುದೇ?
ಜನರು ಪ್ರಶಾಮಕ ಆರೈಕೆಯೆಂದರೆ ಮರಣಕ್ಕೆ ಸನ್ನಿಹಿತ ಎಂಬುದಾಗಿ ತಪ್ಪು ತಿಳಿಯುತ್ತಾರೆ. ಪ್ರಶಾಮಕ ಆರೈಕೆಯನ್ನು ಕಾಯಿಲೆಯ ಯಾವುದೇ ಹಂತದಲ್ಲಿ, ಉಪಶಮನ ಹೊಂದುವ ಅಥವಾ ಉಪಶಮನ ಹೊಂದದ ಹಂತದಲ್ಲೂ ನೀಡಬಹುದು. ದೀರ್ಘಾವಧಿ ಕಾಯಿಲೆಯಿಂದ ನರಳುತ್ತಿರುವ ಮತ್ತು ಜೀವನ ಗುಣಮಟ್ಟ ಉತ್ತಮವಾಗಿಲ್ಲದ ಯಾವುದೇ ರೋಗಿಗೂ ಇದು ಅನ್ವಯಿಸುತ್ತದೆ. ಯಾವುದೇ ಗಂಭೀರ, ದೀರ್ಘಾವಧಿ ಕಾಯಿಲೆಯಿಂದ ರೋಗಿಯು ಬಳಲುತ್ತಿರುವಾಗ ಅವರಿಗೆ ಪ್ರಶಾಮಕ ಆರೈಕೆಯನ್ನು ಒದಗಿಸಬಹುದು.
ಅನಂತರದ ಹಂತದಲ್ಲಿ, ಕಾಯಿಲೆ ಉಲ್ಬಣಗೊಂಡಾಗ ಮತ್ತು ರೋಗಿಯ ಪರಿಸ್ಥಿತಿ ಹದಗೆಟ್ಟಾಗ, ದೈಹಿಕ ರೋಗಲಕ್ಷಣಗಳನ್ನು ನಿಭಾಯಿಸುವ ಮೂಲಕ ಮತ್ತು ರೋಗಿ, ಕುಟುಂಬಕ್ಕೆ ಭಾವನಾತ್ಮಕ ಬೆಂಬಲ ಒದಗಿಸುವ ಮೂಲಕ ಪ್ರಶಾಮಕ ಆರೈಕೆಯು, ಉತ್ತಮ ಅಂತಿಮ ಆರೈಕೆಯನ್ನು ಒದಗಿಸುತ್ತದೆ.
ಪ್ರಶಾಮಕ ಆರೈಕೆಯನ್ನು ಯಾವಾಗ ಒದಗಿಸಬೇಕು?
ಕಾಯಿಲೆಯ ಯಾವುದೇ ಹಂತದಲ್ಲೂ ಇದನ್ನು ನೀಡಬಹುದು. ರೋಗಪತ್ತೆಯ ಹಂತದಿಂದ ಆರಂಭಿಸಿ, ವಾಸಿಯಾಗುವ ರೋಗವನ್ನು ಹೊಂದಿದ್ದರೂ ಕೂಡ ರೋಗಿಗಳು ಪ್ರಶಾಮಕ ಆರೈಕೆ ಪಡೆಯಬಹುದು. ಅವರು ತಮ್ಮ ಚಿಕಿತ್ಸೆಯ ಸಂದರ್ಭದಲ್ಲಿ, ಅನುಸರಣೆಯ ಸಂದರ್ಭದಲ್ಲಿ ಮತ್ತು ಅಂತಿಮವಾಗಿ ತಮ್ಮ ಬದುಕಿನ ಕೊನೆಯ ಹಂತದಲ್ಲಿ ಹೀಗೆ ಎಲ್ಲ ಸಮಯದಲ್ಲೂ ಪ್ರಶಾಮಕ ಚಿಕಿತ್ಸೆ ಪಡೆಯುವುದನ್ನು ಮುಂದುವರಿಸುತ್ತಾರೆ. ವಾಸಿಯಾಗದ ರೋಗ ಹೊಂದಿದ್ದರೂ ರೋಗವು ಉಂಟುಮಾಡುವ ನರಳಿಕೆಯನ್ನು ಕಡಿಮೆ ಮಾಡಲು ಪ್ರಶಾಮಕ ಆರೈಕೆಯನ್ನು ಯಾವಾಗಲೂ ಒದಗಿಸಬಹುದು.
ಪ್ರಶಾಮಕ ಆರೈಕೆ ಎಂದರೇನು?
ಗಂಭೀರ ಕಾಯಿಲೆಗಳಿಂದ ಉಂಟಾಗುವ ನರಳಿಕೆಯನ್ನು ತಡೆಗಟ್ಟಿ ಅದಕ್ಕೆ ಚಿಕಿತ್ಸೆ ಒದಗಿಸುವ ಮೂಲಕ ರೋಗಿಗಳು ಮತ್ತು ಅವರ ಕುಟುಂಬದ ಜೀವನ ಗುಣಮಟ್ಟವನ್ನು ಸುಧಾರಿಸಲು ನೆರವಾಗುವ ವೈದ್ಯಕೀಯ ಆರೈಕೆಯನ್ನು ಪ್ರಶಾಮಕ ಆರೈಕೆ ಎಂದು ಕರೆಯುತ್ತಾರೆ. ಪ್ರಶಾಮಕ ಆರೈಕೆಯು ರೋಗಲಕ್ಷಣಗಳು (ನೋವು, ಉಸಿರುಗಟ್ಟುವಿಕೆ, ವಾಕರಿಕೆ), ಕಾಯಿಲೆಯ ಅಡ್ಡಪರಿಣಾಮಗಳನ್ನು ತಡೆಗಟ್ಟಿ ಚಿಕಿತ್ಸೆ ಒದಗಿಸಲು ನೆರವಾಗುತ್ತದೆ. ದೈಹಿಕ ನರಳಿಕೆಯ ಉಪಶಮನದ ಜತೆಗೆ ಕಾಯಿಲೆಯ ಅಂಗವಾಗಿ ಉದ್ಭವಿಸುವ ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಮಸ್ಯೆಗಳನ್ನು ಪರಿಹರಿಸಲು ಸಹ ಪ್ರಶಾಮಕ ಆರೈಕೆ ಸಹಕಾರಿಯಾಗಿದೆ. ಕಾಯಿಲೆ ಯಾವ ರೀತಿಯಲ್ಲಿ ಇಡೀ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಇದು ಗ್ರಹಿಸುತ್ತದೆ ಮತ್ತು ಸಹಜ ಬದುಕಿಗೆ ಅಡ್ಡಿಯಾಗುವ ಕಾಯಿಲೆಯಿರುವ ರೋಗಿಗೆ ಉತ್ತಮವಾಗಿ ಬದುಕಲು ಮತ್ತು ಅವರಿಗೆ ಸಾಧ್ಯವಿರುವಷ್ಟು ಸಮಯ ಬದುಕಲು ನೆರವಾಗುತ್ತದೆ.
ಪ್ರಶಾಮಕ ಆರೈಕೆಯನ್ನು ಯಾರು ಪಡೆಯಬೇಕು?
ಈ ಕೆಳಗಿನ ಸ್ಥಿತಿಗಳನ್ನು ಹೊಂದಿರುವ ಬದುಕು- ಸೀಮಿತಗೊಳಿಸುವ ಕಾಯಿಲೆ ಇರುವ ಯಾವುದೇ ರೋಗಿಯು ಪ್ರಶಾಮಕ ಆರೈಕೆ ಸೇವೆಗಳಿಂದ ಪ್ರಯೋಜನ ಪಡೆದುಕೊಳ್ಳಬಹುದು:
1) ನಿಯಂತ್ರಣ ಮೀರಿದ ಅಥವಾ ಉಪಶಮನ ಹೊಂದದ ನೋವು, ವಾಂತಿ ಅಥವಾ ಇತರ ರೋಗಲಕ್ಷಣಗಳು.
2) ಆಧ್ಯಾತ್ಮಿಕ, ಮಾನಸಿಕ ಮತ್ತು ಸಾಮಾಜಿಕ ನರಳಿಕೆಯಿಂದುಂಟಾಗುವ ದುಃಖ.
3) ಆಗಾಗ ಆಸ್ಪತ್ರೆಗೆ ಅಥವಾ ತುರ್ತು ಚಿಕಿತ್ಸಾ ಕೊಠಡಿಗೆ ದಾಖಲಾಗುವುದು.
4) ತುಂಬಾ ಸಮಯದವರೆಗೆ ಐಸಿಯುನಲ್ಲಿದ್ದರೂ ಸುಧಾರಣೆ ಕಂಡುಬರದಿರುವುದು.
5) ರೋಗಿಗಳು ಮತ್ತು ಕುಟುಂಬಿಕರು ಕಠಿನ ಚಿಕಿತ್ಸಾ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಆವಶ್ಯಕತೆ ಕಂಡುಬರುವುದು.
ಪ್ರಶಾಮಕ ಆರೈಕೆ ವೈದ್ಯರು ಇತರ ಸಾಮಾನ್ಯ ವೈದ್ಯರಿಂದ ಹೇಗೆ ಭಿನ್ನವಾಗಿರುತ್ತಾರೆ?
ಸಾಮಾನ್ಯ ವೈದ್ಯರು ಮಧುಮೇಹ, ರಕ್ತದೊತ್ತಡ ಇಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತಾರೆ. ಪ್ರಶಾಮಕ ಆರೈಕೆ ವೈದ್ಯರು ಕಾಯಿಲೆಯಿಂದ ಉಂಟಾಗುವ ರೋಗಲಕ್ಷಣಗಳನ್ನು (ಉದಾ: ನೋವು) ತಡೆಗಟ್ಟಲು ಮತ್ತು ಕಡಿಮೆ ಮಾಡಲು ನೆರವಾಗುತ್ತಾರೆ. ಕಾಯಿಲೆಯಿಂದುಂಟಾಗುವ ಒತ್ತಡ ಮತ್ತು ಹೊರೆಯನ್ನು ನಿಭಾಯಿಸಲು ಅವರು ರೋಗಿ ಮತ್ತು ಕುಟುಂಬಿಕರಿಗೆ ಸಹಾಯ ಮಾಡುತ್ತಾರೆ. ಗಂಭೀರ ಕಾಯಿಲೆಯಿರುವ ರೋಗಿಗಳು ಭಯಭೀತರಾಗುತ್ತಾರೆ ಮತ್ತು ಕಷ್ಟಕರ ವೈದ್ಯಕೀಯ ನಿರ್ಧಾರಗಳನ್ನು ಕೈಗೊಳ್ಳಲು ಅಸಮರ್ಥರಾಗುತ್ತಾರೆ ಎಂಬುದನ್ನು ಪ್ರಶಾಮಕ ವೈದ್ಯರು ಅರ್ಥಮಾಡಿಕೊಳ್ಳುತ್ತಾರೆ. ರೋಗಿ/ಕುಟುಂಬಿಕರ ಅಗತ್ಯಗಳು ಮತ್ತು ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಈಗ ಮತ್ತು ಭವಿಷ್ಯದಲ್ಲಿ ಅಗತ್ಯವಿರುವ ವಿವಿಧ ಚಿಕಿತ್ಸಾ ಆಯ್ಕೆಗಳ ಅನುಕೂಲಗಳು ಹಾಗೂ ಅನನುಕೂಲಗಳನ್ನು ಅಭ್ಯಸಿಸಲು ವೈದ್ಯರು ಅವರಿಗೆ ನೆರವಾಗುತ್ತಾರೆ. ಪ್ರಶಾಮಕ ಆರೈಕೆ ವೈದ್ಯರು ವ್ಯಕ್ತಿಯ ಸಂಪೂರ್ಣ ಆರೈಕೆ ಮಾಡುತ್ತಾರೆ.
ಪ್ರಶಾಮಕ ಆರೈಕೆಯನ್ನು ಯಾರು ಒದಗಿಸುತ್ತಾರೆ?
ಪ್ರಶಾಮಕ ಆರೈಕೆ ತಜ್ಞರು ಪ್ರಶಾಮಕ ಆರೈಕೆಯನ್ನು ಒದಗಿಸುತ್ತಾರೆ. ಪ್ರಶಾಮಕ ಆರೈಕೆ ತಂಡದಲ್ಲಿ ವೈದ್ಯರು, ನರ್ಸ್, ಸಾಮಾಜಿಕ ಕಾರ್ಯಕರ್ತರು, ಮಾನಸಿಕ ಬೆಂಬಲ ನೀಡುವ ಸಿಬಂದಿ ಮತ್ತು ಡಯಟೀಶಿಯನ್, ಆಕ್ಯುಪೇಶನಲ್ ಥೆರಪಿಸ್ಟ್ ಮುಂತಾದ ಇತರ ಪೂರಕ ಆರೋಗ್ಯ ವೃತ್ತಿಪರರು ಶಾಮೀಲಾಗಿರುತ್ತಾರೆ ಮತ್ತು ಇವರು ರೋಗಿಗೆ ಸಂಬಂಧಪಟ್ಟ ಎಲ್ಲ ಬಗೆಯ ಸಮಸ್ಯೆಗಳ ಕಾಳಜಿ ವಹಿಸುತ್ತಾರೆ. ಅವರು ರೋಗಿ ಮತ್ತು ಅವರ ಕುಟುಂಬಿಕರೊಂದಿಗೆ ಕೆಲಸ ಮಾಡುತ್ತಾರೆ ಮತ್ತು ಅವರ ಅಗತ್ಯಗಳನ್ನು ಮನಗಂಡು ಅವರ ನರಳಿಕೆಯನ್ನು ಕಡಿಮೆ ಮಾಡುವಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ.
ಪ್ರಶಾಮಕ ಆರೈಕೆ ಮಕ್ಕಳಿಗೆ ಲಭ್ಯವಿದೆಯೇ?
ಹೌದು. ಲಭ್ಯವಿದೆ. ಗಂಭೀರ ಕಾಯಿಲೆ ಮಕ್ಕಳಲ್ಲಿ ಸಾಮಾನ್ಯವಲ್ಲದಿದ್ದರೂ ಕೆಲವು ಮಕ್ಕಳು ಮಾರಣಾಂತಿಕ ರೋಗಗಳಿಗೆ ಗುರಿಯಾಗುತ್ತಾರೆ. ಅವರ ರೋಗ ವಾಸಿಯಾಗುವ ಬಗ್ಗೆ ಖಚಿತತೆ ಇಲ್ಲದಿದ್ದರೂ ಇಂತಹ ಮಕ್ಕಳು ಪ್ರಶಾಮಕ ಆರೈಕೆಯಿಂದ ಪ್ರಯೋಜನ ಪಡೆಯುತ್ತಾರೆ. ಮಕ್ಕಳಲ್ಲಿ ಪ್ರಶಾಮಕ ಆರೈಕೆಯ ವಿಧಾನ ವಯಸ್ಕರಿಗಿಂತ ಸ್ವಲ್ಪ ಭಿನ್ನವಾಗಿದ್ದರೂ ಆರೈಕೆಯ ಲಕ್ಷ್ಯ ಒಂದೇ ಆಗಿರುತ್ತದೆ, ಅದೇನೆಂದರೆ ಕಾಯಿಲೆಯುದ್ದಕ್ಕೂ ರೋಗಿ ಮತ್ತು ಅವರ ಕುಟುಂಬಿಕರ ನರಳಿಕೆಯನ್ನು ಉಪಶಮನಗೊಳಿಸುವುದು.
ಪ್ರಶಾಮಕ ಆರೈಕೆ ಯಾವ ಬಗೆಯಲ್ಲಿ ರೋಗಿಗಳಿಗೆ ಪ್ರಯೋಜನಕಾರಿ?
ಪ್ರಶಾಮಕ ಆರೈಕೆಯಲ್ಲಿ ರೋಗಿ ಮತ್ತು ಅವರ ಕುಟುಂಬವು ಆರೈಕೆಯ ಕೇಂದ್ರಬಿಂದುವಾಗಿರುತ್ತದೆ. ಪ್ರಶಾಮಕ ಆರೈಕೆ ಪಡೆಯುತ್ತಿರುವ ರೋಗಿಗಳ ರೋಗಲಕ್ಷಣಗಳು ನಿಯಂತ್ರಣದಲ್ಲಿರುತ್ತವೆ ಮತ್ತು ಜೀವನ ಗುಣಮಟ್ಟ ಸುಧಾರಿಸುತ್ತದೆ. ಪ್ರಶಾಮಕ ಆರೈಕೆಗೆ ದಾಖಲಾಗಿರುವ ರೋಗಿಗಳು ಆರೋಗ್ಯ ಆರೈಕೆ ನಿಭಾವಣೆಗೆ ಮಾರ್ಗದರ್ಶನ ಮತ್ತು ಬೆಂಬಲ ಪಡೆಯುತ್ತಾರೆ ಮತ್ತು ತಮ್ಮ ಗುರಿಗಳು ಹಾಗೂ ಆದ್ಯತೆಯ ಆಧಾರದ ಮೇಲೆ ಆರೈಕೆ ಪಡೆಯುವ ಆಯ್ಕೆ ಹೊಂದುತ್ತಾರೆ. ಪ್ರಶಾಮಕ ಆರೈಕೆಯಿಂದಾಗಿ ಅನವಶ್ಯಕವಾಗಿ ಆಸ್ಪತ್ರೆಗೆ ದಾಖಲಾಗುವುದು, ಆಸ್ಪತ್ರೆಗೆ ಭೇಟಿ ಕೊಡುವುದು ತಪ್ಪುತ್ತದೆ ಮತ್ತು ಕೆಲವೇ ದಿನಗಳ ಮಟ್ಟಿಗೆ ಆಸ್ಪತ್ರೆಗೆ ದಾಖಲಾಗಬಹುದು ಮತ್ತು ವೆಚ್ಚ ಕಡಿಮೆಯಾಗುತ್ತದೆ. ಪ್ರಶಾಮಕ ಆರೈಕೆಯ ಕೇಂದ್ರಬಿಂದುವೆಂದರೆ ಮನಸ್ಸು, ದೇಹ ಮತ್ತು ಆತ್ಮ. ಸಂಕೀರ್ಣ ಆರೋಗ್ಯ ಆರೈಕೆಯ ಅಗತ್ಯಗಳಿರುವ ರೋಗಿಗಳಿಗೆ ಮತ್ತು ಕುಟುಂಬಿಕರಿಗೆ ಇದು ಹೆಚ್ಚುವರಿ ಬೆಂಬಲ ಒದಗಿಸುತ್ತದೆ ಮತ್ತು ಈ ಮೂಲಕ ರೋಗಿ/ಕುಟುಂಬಿಕರ ತೃಪ್ತಿ ಹೆಚ್ಚಿಸಲು ನೆರವಾಗುತ್ತದೆ.
ಪ್ರಶಾಮಕ ಆರೈಕೆ ನಿಮಗೆ ಎಲ್ಲಿ ಲಭ್ಯ?
ಪ್ರಶಾಮಕ ಆರೈಕೆಯನ್ನು ಆಸ್ಪತ್ರೆಗಳು, ಕ್ಲಿನಿಕ್, ನರ್ಸಿಂಗ್ ಹೋಂ, ಆರೈಕೆ ಕೇಂದ್ರ ಮತ್ತು ರೋಗಿಯ ಮನೆಯಲ್ಲೂ ಪಡೆಯಬಹುದು. ರೋಗಿ ಮನೆಗೆ ತೆರಳಿದ ಬಳಿಕವೂ ಸ್ಥಳೀಯ ವೈದ್ಯರೊಂದಿಗೆ ಪ್ರಶಾಮಕ ಆರೈಕೆ ವೈದ್ಯರು ಸಂಪರ್ಕದಲ್ಲಿದ್ದು ಆರೈಕೆಯನ್ನು ಮುಂದುವರಿಸುತ್ತಾರೆ.
ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಶಾಮಕ ಆರೈಕೆ ವಿಭಾಗವು ಶಿರ್ಡಿ ಸಾಯಿಬಾಬಾ ಕ್ಯಾನ್ಸರ್ ಬ್ಲಾಕ್ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಕಾರ್ಯಾಚರಿಸುತ್ತಿದೆ. ಕಳೆದ ಒಂದು ವರ್ಷದಿಂದ ಆಸ್ಪತ್ರೆಗೆ ದಾಖಲಾದವರಿಗೆ ಈ ವಿಭಾಗವು ಪ್ರಶಾಮಕ ಆರೈಕೆ ಸೇವೆಯನ್ನು ಒದಗಿಸುತ್ತಿದೆ.
– ಡಾ| ಸೀಮಾ ರಾವ್,
ಕನ್ಸಲ್ಟೆಂಟ್, ಪಾಲಿಯೇಟಿವ್ ಮೆಡಿಸಿನ್ ಮತ್ತು ಸಪೋರ್ಟಿವ್ ಕೇರ್ ವಿಭಾಗ
ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.