ಯುವ ಜನಾಂಗದಲ್ಲಿ ಕೊರೊನರಿ ಆರ್ಟರಿ ಕಾಯಿಲೆಗಳು (ಸಿಎಡಿ)
ಒಂದು ಜನಸಂಖ್ಯಾತ್ಮಕ ವಿಶ್ಲೇಷಣೆ
Team Udayavani, Oct 11, 2020, 12:42 PM IST
ಸಾಂದರ್ಭಿಕ ಚಿತ್ರ
ಕೊರೊನರಿ ಆರ್ಟರಿ ಕಾಯಿಲೆ (ಸಿಎಡಿ- ಕ್ಯಾಡ್) ಅಥವಾ ಸಾಮಾನ್ಯ ಭಾಷೆಯಲ್ಲಿ ಹೇಳುವ ಹೃದಯಾಘಾತವು ಜಾಗತಿಕವಾಗಿ ಮೃತ್ಯು ಮತ್ತು ನರಳುವಿಕೆಯ ಪ್ರಧಾನ ಕಾರಣವಾಗಿದೆ. ವಿಶ್ವಾದ್ಯಂತ ಕಳೆದ 25 ವರ್ಷಗಳಲ್ಲಿ ಈ ಕಾಯಿಲೆಯ ಹೊರೆಯು ದುಪ್ಪಟ್ಟಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ಜಾಗತಿಕವಾಗಿ ಕ್ಯಾಡ್ ಆರಂಭವಾಗುವ ಕನಿಷ್ಠ ವಯಸ್ಸು 63 ವರ್ಷಗಳಾಗಿವೆ. ಆದರೆ ಒಂದು ದಶಕದಿಂದ ಈಚೆಗೆ ಭಾರತೀಯರು 53ನೆಯ ವಯಸ್ಸಿಗೇ ಕ್ಯಾಡ್‌ಗೆ ತುತ್ತಾಗುತ್ತಿದ್ದಾರೆ. 45 ವರ್ಷಕ್ಕಿಂತ ಕೆಳಗಿನವರಲ್ಲಿ ಕ್ಯಾಡ್ ಉಂಟಾದರೆ ಅಂತಹ ಪ್ರಕರಣವನ್ನು “ಯುವ ಕ್ಯಾಡ್’ ಎಂದು ಹೆಸರಿಸಲಾಗುತ್ತದೆ. ಈ ವಯೋಗುಂಪಿನಲ್ಲಿ ಕ್ಯಾಡ್ ಶೇ.1.2ರಷ್ಟು ಕಂಡುಬರುತ್ತದೆ ಎಂಬುದಾಗಿ ಅನೇಕ ಅಧ್ಯಯನಗಳು ಹೇಳಿವೆ. ದಕ್ಷಿಣ ಏಶ್ಯನ್ನರು, ಅದರಲ್ಲೂ ಭಾರತೀಯರು ಈ ವಯಸ್ಸಿನಲ್ಲಿ ಕ್ಯಾಡ್‌ಗೆ ತುತ್ತಾಗುವ ಹೆಚ್ಚು ಅಪಾಯವನ್ನು ಹೊಂದಿದ್ದು, ಅವರಲ್ಲಿ ಕ್ಯಾಡ್ ಕಂಡುಬರುವ ಪ್ರಮಾಣವು ಶೇ.5ರಿಂದ ಶೇ.10ರಷ್ಟು ಇದೆ. ಇದರರ್ಥವೆಂದರೆ, ಭಾರತೀಯರು ಸಣ್ಣ ವಯಸ್ಸಿನಲ್ಲಿಯೇ ಕ್ಯಾಡ್‌ಗೆ ಈಡಾಗುವ ಅಪಾಯ ಹೆಚ್ಚಿದೆ. ಮಹಿಳೆಯರಲ್ಲಿ ಕ್ಯಾಡ್ ಕಂಡುಬರುವ ಕನಿಷ್ಠ ವಯಸ್ಸು ಪುರುಷರಿಗಿಂತ ಹೆಚ್ಚಿದೆ. 40 ವರ್ಷದೊಳಗಿನ ಏಶ್ಯನ್ನರಲ್ಲಿ ಸರಿಸುಮಾರು ಶೇ.10ರಷ್ಟು ಪುರುಷರು, ಶೇ.4.5ರಷ್ಟು ಮಹಿಳೆಯರು ಕ್ಯಾಡ್‌ಗೆ ಈಡಾಗುತ್ತಿದ್ದಾರೆ.
ಯುವ ಕ್ಯಾಡ್ ಪೀಡಿತರ ಪೈಕಿ ಶೇ.85ರಿಂದ ಶೇ.90ರಷ್ಟು ಮಂದಿಯಲ್ಲಿ ಕ್ಯಾಡ್‌ಗೆ ಮಧುಮೇಹ, ಅಧಿಕ ರಕ್ತದೊತ್ತಡ, ಧೂಮಪಾನ, ಡಿಸ್‌ಲಿಪಿಡೇಮಿಯಾ ಮತ್ತು ಬೊಜ್ಜು ಮುಂತಾದ ಸಾಂಪ್ರದಾಯಿಕ ಅಪಾಯಾಂಶಗಳು ಕಾರಣವಾಗಿರುತ್ತವೆ. ಯುವ ಕ್ಯಾಡ್ ರೋಗಿಯಲ್ಲಿ ಬಹು ಅಪಾಯಾಂಶಗಳು ಕ್ಯಾಡ್‌ಗೆ ಕಾರಣವಾಗಿರುವುದು ಹೆಚ್ಚು ಕಂಡುಬರುತ್ತಿದೆ. ಯುವ ಕ್ಯಾಡ್‌ಪೀಡಿತರಲ್ಲಿ ಅತೀ ಸಾಮಾನ್ಯವಾದ ಅಪಾಯಾಂಶವು ಧೂಮಪಾನವಾಗಿರುತ್ತದೆ. ಕ್ಯಾಡ್ ಹೊಂದಿರುವ ಯುವ ವಯಸ್ಸಿನವರಲ್ಲಿ ಧೂಮಪಾನಿಗಳು ಶೇ.60ರಿಂದ ಶೇ.90ರಷ್ಟಿರುವುದು ವರದಿಯಾಗಿದೆ.
ಕ್ಯಾಡ್ ಹೊಂದಿಲ್ಲದ ಯುವಜನರಿಗಿಂತ ಕ್ಯಾಡ್ ಹೊಂದಿರುವ ಯುವಜನರು ಮಧುಮೇಹಿಗಳಾಗಿರುವುದು ಮತ್ತು ಅಧಿಕ ರಕ್ತದೊತ್ತಡ ಹೊಂದಿರುವುದು ಹೆಚ್ಚು ಎಂಬುದು ಕಂಡುಬಂದಿದೆ. ಕ್ಯಾಡ್ ಹೊಂದಿರುವ ಯುವಜನರಲ್ಲಿ ಶೇ.25 ಮಂದಿ ಅಧಿಕ ರಕ್ತದೊತ್ತಡ ಹೊಂದಿದ್ದರೆ ಕ್ಯಾಡ್ ಇಲ್ಲದವರಲ್ಲಿ ಇದು ಶೇ.13ರಷ್ಟಿದೆ. ಹಾಗೆಯೇ ಯುವಜನರಲ್ಲಿ ಮಧುಮೇಹಿಗಳಾದವರು ಶೇ.20 ಮಂದಿಯಾದರೆ, ಕ್ಯಾಡ್ ಹೊಂದಿಲ್ಲದೆ ಮಧುಮೇಹಿಗಳಾಗಿರುವವರ ಸಂಖ್ಯೆ ಶೇ.5ರಷ್ಟಿದೆ. ಆದರೆ ಈ ಅಪಾಯಾಂಶಗಳು ವಯಸ್ಕರಲ್ಲಿ ಇನ್ನೂ ಹೆಚ್ಚು ಪ್ರಮಾಣದಲ್ಲಿ ಇರುತ್ತವೆ. ಅಲ್ಲದೆ ಇತ್ತೀಚೆಗೆ 45ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಹೆಚ್ಚುತ್ತಿರುವುದು ಈಚೆಗೆ ಕಂಡುಬಂದಿದೆ.
ಡಿಸ್‌ಲಿಪಿಡೇಮಿಯಾ ಮತ್ತು ಬೊಜ್ಜು ಯುವ ಕ್ಯಾಡ್‌ಗೆ ಬಹಳ ಮುಖ್ಯವಾದ ಮತ್ತು ಸ್ಥಾಪಿತವಾಗಿರುವ ಅಪಾಯಾಂಶಗಳಾಗಿವೆ. ಆದರೆ ಯುವ ಕ್ಯಾಡ್ ಮತ್ತು ವಯಸ್ಕ ರೋಗಿಗಳಲ್ಲಿ ಇವರೆಡರ ಉಪಸ್ಥಿತಿಯ ಪ್ರಮಾಣದಲ್ಲಿ ಹೆಚ್ಚು ವ್ಯತ್ಯಾಸವೇನೂ ಇಲ್ಲ. ಅವಧಿಪೂರ್ವವೇ ಕ್ಯಾಡ್‌ಗೆ ತುತ್ತಾಗುವ ಕೌಟುಂಬಿಕ ಚರಿತ್ರೆಯು ಯುವ ಕ್ಯಾಡ್‌ಗೆ ಇನ್ನೊಂದು ಪ್ರಮುಖ ಅಪಾಯಾಂಶವಾಗಿದೆ. ಯುವ ಕ್ಯಾಡ್ ಉಂಟಾಗುವಲ್ಲಿ ವಂಶವಾಹಿಗಳ ಪಾತ್ರದ ಬಗ್ಗೆ ಇದು ಬೆಳಕು ಚೆಲ್ಲುತ್ತದೆ. ಯುವ ಕ್ಯಾಡ್ ರೋಗಿಗಳಲ್ಲಿ ಶೇ.64 ಮಂದಿ ಇಂತಹ ಕೌಟುಂಬಿಕ ಚರಿತ್ರೆ ಹೊಂದಿರುತ್ತಾರೆ.
ಯುವ ಜನರಲ್ಲಿ ಕ್ಯಾಡ್‌ನ ಇತರ ಅಪಾಯಾಂಶಗಳನ್ನು ಕೂಡ ಪತ್ತೆ ಹಚ್ಚಲಾಗಿದೆ ಮತ್ತು ಅಧ್ಯಯನ ಹೆಚ್ಚುತ್ತಿರುವಂತೆ ಇವುಗಳ ಸಂಖ್ಯೆಯೂ ಹೆಚ್ಚುತ್ತಿದೆ. ನಿರ್ದಿಷ್ಟ ವಂಶವಾಹಿಗಳಲ್ಲಿ ಉಂಟಾಗುವ ಪರಿವರ್ತನೆಗಳು (ವೈಜ್ಞಾನಿಕವಾಗಿ ಮ್ಯುಟೇಶನ್ ಎಂದು ಕರೆಯಲಾಗುತ್ತದೆ) ಜನರನ್ನು ಕ್ಯಾಡ್ ಉಂಟಾಗುವ ಅಪಾಯದತ್ತ ಒಯ್ಯುತ್ತವೆ. ಈ ವಂಶವಾಹಿ ಪರಿವರ್ತನೆಗಳಲ್ಲಿ ಹೆಚ್ಚಿನವು ಕೊಲೆಸ್ಟರಾಲ್ ಚಯಾಪಚಯ ಕ್ರಿಯೆಗೆ ಸಂಬಂಧಪಟ್ಟವುಗಳಾಗಿವೆ. ಯುವಜನರಲ್ಲಿ ಮಾದಕದ್ರವ್ಯ ವ್ಯಸನ ಹೆಚ್ಚುತ್ತಿದೆ. ಕೊಕೇನ್ ಬಳಕೆ ಕ್ಯಾಡ್‌ಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆಯಲ್ಲದೆ ಇತರ ಹೃದ್ರೋಗಗಳಿಗೂ ಕಾರಣವಾಗುತ್ತದೆ. ಯುವ ಕ್ಯಾಡ್ ಇತರ ಕಾಯಿಲೆಗಳಾದ ಹೈಪೊಥೈರಾಯಿxಸಂ, ಸಿಸ್ಟೆಮಿಕ್ ಲ್ಯೂಪಸ್ ಎರಿಥೆಮಾಟೋಸಿಸ್, ರುಮಟಾಯ್ಡ ಆರ್ಥೆಟಿಸ್, ಬಾಲ್ಯದಲ್ಲಿ ಕಾವಾಸಾಕಿ ಕಾಯಿಲೆ, ಹೊಮೊಸಿಸ್ಟೆನೇಮಿಯಾ ಮತ್ತು ಆ್ಯಂಟಿ ರಿಟ್ರೊವೈರಲ್ ಚಿಕಿತ್ಸೆ ಪಡೆಯುತ್ತಿರುವ ಎಚ್‌ಐವಿ ರೋಗಿಗಳೊಂದಿಗೂ ಸಂಬಂಧ ಹೊಂದಿದೆ. ಕೊರೊನರಿ ರಕ್ತನಾಳಗಳಲ್ಲಿ ಕಂಡುಬರುವ ಕೆಲವು ಸಂರಚನಾತ್ಮಕ ಅಸಹಜತೆಗಳೂ ಬೇಗನೆ ಕ್ಯಾಡ್ ಉಂಟಾಗುವುದಕ್ಕೆ ಕಾರಣವಾಗಬಹುದು.
ಮಧುಮೇಹ, ಅಧಿಕ ರಕ್ತದೊತ್ತಡ, ಡಿಸ್‌ಲಿಪಿಡೇಮಿಯಾ, ಬೊಜ್ಜು ಮತ್ತು ಧೂಮಪಾನದಂತಹ ಸಾಂಪ್ರದಾಯಿಕ ಅಪಾಯಾಂಶಗಳು ಯುವ ಕ್ಯಾಡ್ ಪೀಡಿತರಲ್ಲಿ ಶೇ.80ರಷ್ಟು ಕಾರಣವಾಗಿವೆ. ಶೇ.4ರಷ್ಟು ಮಂದಿ ಯುವ ಜನರಲ್ಲಿ ಹೃದಯಾಘಾತಕ್ಕೆ ಕಾರಣ ಹೃದಯ ರಕ್ತನಾಳದಲ್ಲಿ ಅಸಹಜತೆಗಳಾಗಿದ್ದು, ಇವು ಜನ್ಮಜಾತವಾಗಿರುತ್ತವೆ. ಶೇ.5ರಷ್ಟು ಮಂದಿಯಲ್ಲಿ ದೇಹದ ಬೇರೆಡೆ ಉಂಟಾಗಿ ಹೃದಯದ ರಕ್ತನಾಳಗಳತ್ತ ಸಾಗುವ ಹೆಪ್ಪುಗಟ್ಟಿದ ರಕ್ತ ಕಾರಣವಾಗಿರುತ್ತದೆ. ಇನ್ನು ಶೇ.5ರಷ್ಟು ಮಂದಿಯಲ್ಲಿ ರಕ್ತ ಹೆಪ್ಪುಗಟ್ಟುವ ತೊಂದರೆಯಿಂದ ಹೃದಯದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ ಇದು ಉಂಟಾಗುತ್ತದೆ. ಉತ್ತಮ ಚಿಕಿತ್ಸಾ ಸೌಕರ್ಯಗಳು ಮತ್ತು ಅವುಗಳ ಉತ್ತಮ ಲಭ್ಯತೆಯಿಂದಾಗಿ ಜಗತ್ತಿನಾದ್ಯಂತ ಕ್ಯಾಡ್‌ನಿಂದಾಗಿ ಮರಣ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಯುವ ಕ್ಯಾಡ್‌ಗಳಲ್ಲಿ ಇದು ಕಂಡುಬಂದಿಲ್ಲ.
ಯುವ ಕ್ಯಾಡ್ ರೋಗಿಗಳಲ್ಲಿ ಅಪಾಯಾಂಶಗಳು ಹೆಚ್ಚುತ್ತಿರುವುದೇ ಇದಕ್ಕೆ ಕಾರಣ ಎಂದು ವ್ಯಾಖ್ಯಾನಿಸಬಹುದು. ಯುವ ಕ್ಯಾಡ್ ರೋಗಿಗಳ ಪೈಕಿ ಸಿಎಬಿಜಿ (ಬೈಪಾಸ್ ಶಸ್ತ್ರಚಿಕಿತ್ಸೆ) ಅಥವಾ ಪಿಸಿಐ (ಆ್ಯಂಜಿಯೊಪ್ಲಾಸ್ಟಿ) ಮಾಡಿಸಿಕೊಳ್ಳುವವರಲ್ಲಿ ತತ್‌ಕ್ಷಣದ ಪರಿಣಾಮಗಳು ಇತರ ಕ್ಯಾಡ್ ರೋಗಿಗಳಿಗಿಂತ ಉತ್ತಮವಾಗಿರುತ್ತವೆ. ಆದರೆ ದೀರ್ಘಕಾಲಿಕವಾಗಿ, ಇಂಥವರು ಹೆಚ್ಚು ಬಾರಿ ಆಸ್ಪತ್ರೆಗೆ ತೆರಳಬೇಕಾಗುತ್ತದೆ ಮತ್ತು ಅವರಲ್ಲಿ ಔಷಧಗಳ ಅಡ್ಡಪರಿಣಾಮಗಳು ಉಂಟಾಗುವುದು ಕೂಡ ಹೆಚ್ಚು.
ಒಟ್ಟಾರೆಯಾಗಿ ಹೇಳುವುದಾದರೆ, ಇತ್ತೀಚೆಗಿನ ವರ್ಷಗಳಲ್ಲಿ ಯುವ ಜನರಲ್ಲಿ ಕ್ಯಾಡ್ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತಿರುವುದನ್ನು ಗುರುತಿಸಲಾಗಿದೆ. ವಯಸ್ಕ ಕ್ಯಾಡ್ ರೋಗಿಗಳಿಗೆ ಹೋಲಿಸಿದರೆ ಯುವ ಕ್ಯಾಡ್ ರೋಗಿಗಳಲ್ಲಿ ಮೃತ್ಯು ಪ್ರಮಾಣ ಇಳಿಕೆಯಾಗಿಲ್ಲ. ಸಾಂಪ್ರದಾಯಿಕ ಅಪಾಯಾಂಶಗಳ ಜತೆಗೆ ಇನ್ನಿತರ ಅಸಂಖ್ಯ ಅಪಾಯಾಂಶಗಳು ಕ್ಯಾಡ್ ರೋಗ ಉಂಟಾಗುವುದಕ್ಕೆ ಕಾರಣವಾಗುತ್ತಿವೆ. ವಯಸ್ಕ ರೋಗಿಗಳಿಗಿಂತ ಯುವ ಕ್ಯಾಡ್ ರೋಗಿಗಳಲ್ಲಿ ಚಿಕಿತ್ಸೆಯ ಬಳಿಕ ಚೇತರಿಕೆ ಉತ್ತಮವಾಗಿದೆ. ಯುವ ಕ್ಯಾಡ್ ರೋಗಿಗಳಲ್ಲಿ ಧೂಮಪಾನವು ಅತ್ಯಂತ ಸಾಮಾನ್ಯವಾದ ರೋಗ ಕಾರಣವಾಗಿದೆ. ರಕ್ತನಾಳಗಳ ಸರಿಪಡಿಸುವಿಕೆಯೊಂದಿಗೆ ಯುವ ಕ್ಯಾಡ್ ರೋಗಿಗಳಲ್ಲಿ ತತ್‌ಕ್ಷಣದ ಮತ್ತು ದೀರ್ಘಕಾಲಿಕವಾದ ಬದುಕುಳಿಯುವ ಪ್ರಮಾಣವು ಉತ್ತಮವಾಗಿದೆ.
ಡಾ| ನರಸಿಂಹ ಪೈ
ಇಂಟರ್‌ವೆನ್ಶನಲ್ ಕಾರ್ಡಿಯಾಲಜಿಸ್ಟ್
ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.