ಕೋವಿಡ್ ಮತ್ತು ಗರ್ಭಧಾರಣೆ : ಪ್ರಸವಪೂರ್ವ ಮತ್ತು ಪ್ರಸವೋತ್ತರ ಸವಾಲುಗಳ ನಿರ್ವಹಣೆ
Team Udayavani, Dec 27, 2020, 12:46 PM IST
ಗರ್ಭಧಾರಣೆಯು ಕೆಲವೊಮ್ಮೆ ಒತ್ತಡದಾಯಕ ಅನುಭವವಾಗಿರುತ್ತದೆ. ಅದರಲ್ಲೂ ಕೋವಿಡ್ -19 ಸಾಂಕ್ರಾಮಿಕ ಕಾಯಿಲೆಯು ಮಗುವನ್ನು ನಿರೀಕ್ಷಿಸುತ್ತಿರುವ ದಂಪತಿಯ ಮುಂದೆ ಹೊಸ ಬಗೆಯ ಸವಾಲುಗಳನ್ನು ಇರಿಸಿದೆ. ಟೆರಟೋಜೆನೆಸಿಟಿ (ಟೆರಟೋಜೆನಿಕ್ ಔಷಧಗಳ ಪರಿಣಾಮಗಳು) ಅಥವಾ ತಾಯಿಯಿಂದ ಮಗುವಿಗೆ ಕಾಯಿಲೆ ಹರಡುವ ಅಪಾಯ – ಹೀಗೆ ಎರಡು ರೀತಿಗಳಲ್ಲಿ ಅಪಾಯಕ್ಕೆ ಸಿಲುಕುವ ಸಾಧ್ಯತೆಯ ಮೂಲಕ ಹೆತ್ತವರಾಗಲಿರುವ ದಂಪತಿಯ ಮೇಲಿನ ಒತ್ತಡ ಹೆಚ್ಚಾಗಿರುತ್ತದೆ. ಇದುವರೆಗಿನ ಸಾಕ್ಷ್ಯಾಧಾರಗಳ ಪ್ರಕಾರ ಸೋಂಕು ಹರಡುವ ಸಾಧ್ಯತೆಯು ಅತ್ಯಂತ ಕಡಿಮೆ ಇದೆಯಾದರೂ ಕೋವಿಡ್-19ನ ಅನೇಕ ನಿಜಾಂಶಗಳ ಬಗ್ಗೆ ತಿಳಿದಿಲ್ಲದೇ ಇರುವುದ ರಿಂದ ದಂಪತಿ ಒತ್ತಡಕ್ಕೆ ಸಿಲುಕುತ್ತಿದ್ದಾರೆ.
ಮಗುವನ್ನು ಪಡೆಯುವ ನಿರೀಕ್ಷೆಯಲ್ಲಿರುವ ಅನೇಕ ತಾಯಂದಿರಿಗೆ ಸೋಂಕು ತಗಲುವ ಅಪಾಯ ಮತ್ತು ಅದು ತನ್ನಿಂದ ನವಜಾತ ಶಿಶುವಿಗೆ ಪ್ರಸಾರವಾಗುವ ಬಗ್ಗೆ ಆತಂಕ ಇರುತ್ತದೆ. ಸಾಂಕ್ರಾಮಿಕ ಕಾಲದಲ್ಲಿ ತಮ್ಮ ಶಿಶುವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ಬಗ್ಗೆ ಹೆತ್ತವರು ಅತೀವ ಕಾಳಜಿ ಹೊಂದಿರುತ್ತಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಮತ್ತು ಮನೆಯೊಳಗೆ ಇರಬೇಕಾದ ಅನಿವಾರ್ಯ ತಾಯಿಯಾಗಲಿರುವ ಮಹಿಳೆಯಲ್ಲಿ ಒತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ. ಒತ್ತಡದ ಮಟ್ಟ ಹೆಚ್ಚುವುದರಿಂದ ಗರ್ಭಿಣಿಯರು ಪ್ರಿ ಎಕ್ಲಾಂಪ್ಸಿಯಾ (ಗರ್ಭಧಾರಣೆಯ ಸಮಯದಲ್ಲಿ ಅಧಿಕ ರಕ್ತದೊತ್ತಡ ಸ್ಥಿತಿ) ಅಥವಾ ಅವಧಿಪೂರ್ವ ಪ್ರಸವ ಅಥವಾ ಕಡಿಮೆ ತೂಕದ ಶಿಶು ಜನನ ಮತ್ತು ರೋಗ ಪ್ರತಿರೋಧ ಶಕ್ತಿಗುಂದುವಿಕೆಯ ಅಪಾಯಕ್ಕೆ ಸಿಲುಕುತ್ತಾರೆ.
ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಗರ್ಭಿಣಿಯರ ನಿಯಮಿತ ಚೆಕ್ ಅಪ್‌ಗ್ಳು ಮತ್ತು ದಂಪತಿಯ ಆಸ್ಪತ್ರೆ ಭೇಟಿ ಪರಿಪಾಠಗಳು ಮಹತ್ತರ ಬದಲಾವಣೆ ಅನುಭವಿಸಿವೆ. ಪ್ರಸವಪೂರ್ವ ಆಸ್ಪತ್ರೆ ಭೇಟಿಯ ಸಂಖ್ಯೆಗಳು ಕಡಿಮೆಯಾಗಿವೆ, ಗರ್ಭಿಣಿಯರು ವೈದ್ಯರ ಜತೆಗೆ ವೀಡಿಯೋ ಮೂಲಕ ಸಮಾಲೋಚನೆ ನಡೆಸುವುದನ್ನು ಶಿಫಾರಸು ಮಾಡಲಾಗುತ್ತಿದೆ. ಪ್ರಸೂತಿಯಲ್ಲಿರುವ ಗರ್ಭಿಣಿಯರನ್ನು ಲೇಬರ್ ಡೆಲಿವರಿ ಮತ್ತು ರಿಕವರಿ ಕೊಠಡಿ (ಎಲ್‌ಡಿಆರ್)ಯಲ್ಲಿ ಮಾತ್ರ ನಡೆದಾಡುವಂತೆ ನಿರ್ಬಂಧಿಸಲಾಗುತ್ತಿದೆ. ಗರ್ಭಿಣಿಯ ಸಂಗಾತಿಯು ಅನ್ಯ ರಾಜ್ಯ ಅಥವಾ ಬೇರೆ ನಗರದಿಂದ ಬರುವುದಾಗಿದ್ದರೆ ಸಮಸ್ಯೆ ಇನ್ನೂ ಹೆಚ್ಚು. ಏಕೆಂದರೆ, ಕ್ವಾರಂಟೈನ್ ಅವಧಿಯಲ್ಲಿ ಗರ್ಭಿಣಿಗೆ ಮತ್ತು ಶಿಶುವಿಗೆ ಅವರು ಸೋಂಕು ಹರಡಲು ಕಾರಣವಾಗುವ ಅಪಾಯ ಇರುವುದರಿಂದ ಜನನ ಕಾಲದಲ್ಲಿ ಅವರು ಸಂಗಾತಿಯ ಬಳಿ ಇರುವುದಕ್ಕೆ ಸಾಧ್ಯವಾಗುವುದಿಲ್ಲ. ಇಷ್ಟಲ್ಲದೆ, ಗರ್ಭಿಣಿಯು ಸೋಂಕು ಪೀಡಿತಳಾದರೆ ಆಕೆಯನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ ಮತ್ತು ಆಗ ಕುಟುಂಬದಿಂದ ದೂರ ಇರಬೇಕಾಗುತ್ತದೆ. ಇಂತಹ ಸನ್ನಿವೇಶಗಳು ಬಹಳ ಒತ್ತಡ ದಾಯಕವಾಗಿರುತ್ತವೆ.
ಪ್ರಸ್ತುತ ಸನ್ನಿವೇಶದಲ್ಲಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಗರ್ಭಿಣಿ ಮಹಿಳೆಯರು ಅನುಸರಿಸಬೇಕಾದ ಕೆಲವು ಮಾರ್ಗೋಪಾಯಗಳು ಇಲ್ಲಿವೆ:
- ಮುಕ್ತ ಮತ್ತು ಆಗಾಗ ವೈದ್ಯರ ಜತೆಗೆ ಸಮಾಲೋಚನೆ ನಡೆಸಿ ಮತ್ತು ನಿಮಗಿರುವ ಎಲ್ಲ ಆತಂಕ ಮತ್ತು ಭಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿ. ವೈದ್ಯರು ಅವುಗಳಿಗೆ ಪರಿಹಾರ ನೀಡಬಲ್ಲರು.
- ಗರ್ಭಧಾರಣೆಯ ಅವಧಿಯಲ್ಲಿ ಗೆಳೆಯ ಗೆಳತಿಯರು ಮತ್ತು ಕುಟುಂಬ ಸದಸ್ಯರ ಜತೆಗೆ ಮುಕ್ತ ಸಂಬಂಧ- ಸಂವಹನ ಇರಿಸಿಕೊಳ್ಳಿ ಮತ್ತು ಬೆಂಬಲವನ್ನು ಕೇಳಿ. ಇದಕ್ಕಾಗಿ ನೀವು ಸಾಮಾಜಿಕ ಮಾಧ್ಯಮಗಳನ್ನು ಮತ್ತು ವರ್ಚುವಲ್ ವೇದಿಕೆಗಳನ್ನು ಉಪಯೋಗಿಸಿಕೊಳ್ಳಬಹುದು.
- ಉತ್ತಮ ಆಹಾರ ಯೋಜನೆಯ ಜತೆಗೆ ಆರೋಗ್ಯಪೂರ್ಣ ಜೀವನ ಶೈಲಿಯನ್ನು ರೂಢಿಸಿಕೊಳ್ಳಿ. ಹೂದೋಟದ ಕೆಲಸ, ಮನೆಗೆಲಸಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವುದು, ಪ್ರಸೂತಿಪೂರ್ವ ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುವಂತಹ ಚಟುವಟಿಕೆಗಳ ಮೂಲಕ ಸಕ್ರಿಯರಾಗಿರಿ. ನಿಯಮಿತವಾಗಿ ಧ್ಯಾನ ಮಾಡುವುದು ಒತ್ತಡ ಕಡಿಮೆ ಮಾಡಿಕೊಳ್ಳಲು ಪೂರಕ.
- ಪುಸ್ತಕ ಓದುವುದು, ಸಂಗೀತ ಕೇಳುವುದು, ಯಾವುದಾದರೂ ಹವ್ಯಾಸದಂತಹ ವಿಶ್ರಾಮದಾಯಕ ಚಟುವಟಿಕೆಗಳಲ್ಲಿ ವ್ಯಸ್ತರಾಗಿ. ಮನಸ್ಸು ತೊಡಗಿಸಿಕೊಳ್ಳುವ ಚಟುವಟಿಕೆಗಳು ಶಾಂತ ಮತ್ತು ಲವಲವಿಕೆಯಿಂದ ಇರಲು ಸಹಾಯ ಮಾಡುತ್ತವೆ.
ಕೋವಿಡ್ ಪಾಸಿಟಿವ್ ಆಗಿರುವ ಗರ್ಭಿಣಿಯರು ಮತ್ತು ಹೊಸ ತಾಯಂದಿರು ತಿಳಿದಿರಬೇಕಾದ ಕೆಲವು ಸಲಹೆಗಳು ಮತ್ತು ನಿಜಾಂಶಗಳು ಇಲ್ಲಿವೆ:
- ಕೋವಿಡ್ ಪಾಸಿಟಿವ್ ಆಗಿದ್ದರೆ, ಚಿಕಿತ್ಸೆ ನೀಡುವ ವೈದ್ಯರಿಂದ ಸತ್ಯಾಂಶಗಳನ್ನು ಸಮರ್ಪಕವಾಗಿ ತಿಳಿದುಕೊಳ್ಳಿ. ಬಹುತೇಕ ರೋಗಿಗಳು ಲಕ್ಷಣರಹಿತರಾಗಿರುತ್ತಾರೆ ಅಥವಾ ಲಘು ಲಕ್ಷಣಗಳನ್ನು ಹೊಂದಿರುತ್ತಾರೆ, ಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ.
- ಸ್ವಯಂ ಪ್ರತ್ಯೇಕತೆ (ಸೆಲ್ಫ್ ಐಸೊಲೇಶನ್) ಕನಿಷ್ಠ 10 ದಿನಗಳದಾಗಿರುತ್ತದೆ. ಈ ಅವಧಿಯಲ್ಲಿ ವಿಟಮಿನ್ ಪೂರಕ ಆಹಾರ (ವಿಟಮಿನ್ ಡಿ, ವಿಟಮಿನ್ ಸಿ ಮತ್ತು ಝಿಂಕ್)ಗಳನ್ನು ಚಿಕತ್ಸೆ ನೀಡುತ್ತಿರುವ ವೈದ್ಯರ ಸಲಹೆಯ ಪ್ರಕಾರ ತೆಗೆದುಕೊಳ್ಳಬೇಕಾಗುತ್ತದೆ.
- ಗರ್ಭಪಾತವಾಗುವ ಸಾಧ್ಯತೆಯಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ; ತಾಯಿಯಿಂದ ಮಗುವಿಗೆ ಸೋಂಕು ಪ್ರಸಾರವಾಗುವ ಸಾಧ್ಯತೆಯೂ ಅತ್ಯಲ್ಪವಾಗಿದೆ.
- ಪ್ರಸವ ವಿಧಾನ (ಕೆಲವು ಪ್ರಕರಣಗಳನ್ನು ಹೊರತುಪಡಿಸಿ), ಎದೆಹಾಲು ಉಣಿಸುವುದರಲ್ಲಿ ಯಾವುದೇ ಮಹತ್ತರ ಬದಲಾವಣೆಗಳಿಲ್ಲ ಹಾಗೂ ತಾಯಿ ಮತ್ತು ನವಜಾತ ಶಿಶು ಜತೆಯಾಗಿರಬಹುದು. ಆದರೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆತಂಕ, ಭಯಗಳನ್ನು ದೂರ ಮಾಡುವುದಕ್ಕಾಗಿ ಇವುಗಳ ಬಗ್ಗೆ ಚಿಕಿತ್ಸೆ ನೀಡುತ್ತಿರುವ ಪ್ರಸೂತಿ ಶಾಸ್ತ್ರಜ್ಞರ ಜತೆಗೆ ಮುಕ್ತ ಮಾತುಕತೆ ನಡೆಸಿ.
- ಒತ್ತಡವನ್ನು ನಿವಾರಿಸಿ ಕೋವಿಡ್‌ನಿಂದ ಚೇತರಿಸಿಕೊಳ್ಳುವುದಕ್ಕಾಗಿ ದೈಹಿಕವಾಗಿ ಚಟುವಟಿಕೆಯಿಂದ ಇರಿ, ಸಾಕಷ್ಟು ನೀರು, ದ್ರವಾಹಾರ ಸೇವಿಸಿ; ಪೌಷ್ಟಿಕವಾದ ಉತ್ತಮ ಆಹಾರ ಸೇವಿಸಿ. ಜತೆಗೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿರಿ.
- ಪ್ರತ್ಯೇಕ (ಐಸೊಲೇಶನ್) ವಾಗಿರುವ ಸಂದರ್ಭದಲ್ಲಿ ಸದಾ ಧನಾತ್ಮಕ ಚಿಂತನೆ, ಚಟುವಟಿಕೆಗಳನ್ನು ನಡೆಸಿ.
ರೋಗಿಗಳ ಸುರಕ್ಷೆಗಾಗಿ ಬಹುತೇಕ ಎಲ್ಲ ಆಸ್ಪತ್ರೆಗಳು ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತವೆ. ಕೆಎಂಸಿ ಆಸ್ಪತ್ರೆಯಲ್ಲಿ ರೋಗಿಗಳ ಪಾಲಿಗೆ ಅತ್ಯುತ್ತಮ ಆರೈಕೆ ಮತ್ತು ಸುರಕ್ಷೆಯನ್ನು ಖಾತರಿಪಡಿಸಲಾಗಿದೆ. ಕೋವಿಡ್ ಬಗ್ಗೆ ಪ್ರತೀ ರೋಗಿಯು ಹೊಂದಿರಬಹುದಾದ ಎಲ್ಲ ಶಂಕೆ ಮತ್ತು ಆತಂಕಗಳನ್ನು ದೂರ ಮಾಡಿ ಅತ್ಯುತ್ತಮ ಆರೈಕೆಯನ್ನು ಒದಗಿಸಲು ಹಾಗೂ ಪ್ರಸೂತಿ ಸಂದರ್ಭದಲ್ಲಿ ಮತ್ತು ಪ್ರಸವೋತ್ತರ ದಿನಗಳಲ್ಲಿ ಸಂಪೂರ್ಣ ಚಿಕಿತ್ಸೆ ಮತ್ತು ಬೆಂಬಲವನ್ನು ಒದಗಿಸಲು ಆಸ್ಪತ್ರೆಯು ಬದ್ಧವಾಗಿದೆ.
ಡಾ| ವಿದ್ಯಾಶ್ರೀ ಕಾಮತ್ ಸಿ.
ಕನ್ಸಲ್ಟಂಟ್ ಒಬ್‌ಸ್ಟೆಟ್ರೀಶಿಯನ್, ಗೈನಕಾಲಜಿಸ್ಟ್
ಮತ್ತು ಲ್ಯಾಪರೊಸ್ಕೊಪಿಕ್ ಸರ್ಜನ್,
ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.