ಕೋವಿಡ್ ಅನುಭವದ ಮಾತು : ಕೋವಿಡ್ ನಿಂದ ಗುಣಮುಖರಾದ ವೈದ್ಯರೊಬ್ಬರ ಹಿತನುಡಿ


Team Udayavani, Sep 13, 2020, 7:23 PM IST

EDITION-TDY-1

ಸಾಂದರ್ಭಿಕ ಚಿತ್ರ

ಕೋವಿಡ್ ಮಹಾಮಾರಿ ಬಂದೆರಗಿದ ದಿನದಿಂದ ಇಂದಿನ ವರೆಗೂ ಅದರ ತಾಂಡವ ಹೆಚ್ಚುತ್ತಲೇ ಇರುವುದು ಸರ್ವವಿದಿತ. ಬರಿಯ ಪುಸ್ತಕದ ಜ್ಞಾನವನ್ನು ಇಂದು ಜನರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಹೆಚ್ಚಿನವರಿಗೆ ಸರಕಾರಿ ಯಾ ಇತರ ಮೂಲಗಳಿಂದ ಕೋವಿಡ್ ಕಾಯಿಲೆಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಈಗಾಗಲೇ ನೀಡಲಾಗಿದೆ. ಆದಾಗ್ಯೂ ಈ ಕಾಯಿಲೆಯನ್ನು ಸ್ವತಃ ಎದುರಿಸಿ ಚೇತರಿಸಿರುವ ಈ ಲೇಖಕ ಹೇಳಬಯಸುವ ಮಾಹಿತಿಯನ್ನು ಪ್ರಮಾಣೀಕರಿಸುವ ಅಗತ್ಯವಿಲ್ಲವಾದುದರಿಂದ ಜನರು ಸ್ವೀಕರಿಸುವವರೆಂಬ ಭರವಸೆ ಈ ಲೇಖಕನಿಗಿದೆ.

ಕೋವಿಡ್ ಎಂಬುದು ಕಪೋಲಕಲ್ಪಿತ ಕಾಯಿಲೆ; ಹಳೆಯ ಫ್ಲ್ಯೂ ಜ್ವರಕ್ಕೆ ಹೊಸ ಹೆಸರನ್ನು ಕೊಟ್ಟು ಜನರನ್ನು ಹೆದರಿಸಲಾಗುತ್ತಿದೆ’ ಎಂಬ ವಾದವೊಂದಿದೆ. ಅದು ಸಂಪೂರ್ಣವಾಗಿ ತಪ್ಪು. ಕೋವಿಡ್ ಎಂಬುದೊಂದು ವಿಶಿಷ್ಟ ಕಾಯಿಲೆ. ಅದು ಹರಡುವ ರೀತಿ, ಅದರ ರೋಗಲಕ್ಷಣಗಳು, ಕಾಯಿಲೆಯ ಅವಧಿ ಇತ್ಯಾದಿ ಎಲ್ಲವೂ ಇತರ ಜ್ವರಗಳಿಗಿಂತ ಭಿನ್ನವಾದುವು. ಆದ್ದರಿಂದಲೇ ಬಹುಶಃ ಮೊದಲಿಗೆ ಈ ರೋಗದ ವೈರಾಣುವನ್ನು “ನೋವೆಲ್‌’ (ನವೀನ) ಕೋವಿಡ್ ವೈರಸ್‌ ಎಂದು ಕರೆಯಲಾಗಿತ್ತು. ಸತ್ಯ ಹೀಗಿರುವಾಗ

” ಕೋವಿಡ್ ಎಂಬ ಕಾಯಿಲೆಯೇ ಇಲ್ಲ’ ಎಂಬ ವಾದ ಅಪಾಯಕಾರಿ. ಅದೃಷ್ಟವಶಾತ್‌ ಈ ರೀತಿಯ ಹುಂಬತನ ಅಮೆರಿಕದಲ್ಲಿದ್ದಷ್ಟು ನಮ್ಮ ದೇಶದಲ್ಲಿಲ್ಲ. ಈ ಕಾಯಿಲೆಯ ನಾವೀನ್ಯತೆಯ ಬಗ್ಗೆ ಒಂದೆರಡು ಮಾತು. ಇದರ ಶೀಘ್ರ ಹರಡುವಿಕೆಯ ಬಗ್ಗೆ ಮಾಹಿತಿ ಎಲ್ಲರಿಗೂ ತಿಳಿದಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು; ಆಗಾಗ ಕೈತೊಳೆದುಕೊಳ್ಳುವುದು ಇತ್ಯಾದಿಗಳಿಂದ ಸೋಂಕು ತಗಲುವ ಅಪಾಯವನ್ನು ತಗ್ಗಿಸಿಕೊಳ್ಳಬಹುದೇ ವಿನಾ ಇಲ್ಲವಾಗಿಸಲು ಆಗದು. ಆದ್ದರಿಂದ ಅನಗತ್ಯ ಜನಸಂಪರ್ಕ ಕಡಿತಗೊಳಿಸುವುದು ಮುಖ್ಯ. ತಮ್ಮ ದೈನಂದಿನ ಕಚೇರಿ ಕೆಲಸಗಳಿಗೆ ಹಾಜರಾಗುವವರು ಅನಿವಾರ್ಯತೆಯಿಂದ ಹಾಗೆಮಾಡಬೇಕಾಗಿದೆಯೇ ವಿನಾ ಆಯ್ಕೆಯಿಂದಲ್ಲ  ಎಂಬುದನ್ನು ಮರೆಯಲಾಗದು. ಯಾರನ್ನೂ ಓಡಾಡಲು ಬಿಡದೆ ಸಂಪೂರ್ಣ ಲಾಕ್‌ಡೌನ್‌ಮಾಡಿ ಕಾಯಿಲೆಯನ್ನು ಹತೋಟಿಯಲ್ಲಿಡುವಪ್ರಯತ್ನವನ್ನೂ ಸರಕಾರ ಮೊದಲಿಗೆ ಮಾಡಿದ್ದಾಯಿತು. ಅದರಿಂದ ಆರಂಭಿಕ ಯಶಸ್ಸು ತುಸುಮಟ್ಟಿಗೆ ಸಿಕ್ಕಿದ್ದು ಸತ್ಯ. ಆದರೆ ಇಂದು ನಾವು ಕೋವಿಡ್ ವೈರಾಣುವಿನ ಜತೆಗೇ ಜೀವನ ಸಾಗಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಇದ್ದೇವೆ. ಜನರ ಜೀವನಶೈಲಿಯನ್ನೇ ಇಷ್ಟು ಬೇಗ ಇಷ್ಟರ ಮಟ್ಟಿಗೆ ಬದಲಾಯಿಸಿಬಿಟ್ಟ ಬೇರೊಂದು ಕಾಯಿಲೆಯ ನೆನಪು ನಮ್ಮಲ್ಲಿನ ಹಿರಿಯರಿಗೂ ಇರಲಾರದು.

ಹೆಚ್ಚಿನವರಿಗೆ ಪ್ರಾಣಾಂತಿಕವಲ್ಲ  :  ಈ ಕಾಯಿಲೆ ಅತೀ ಶೀಘ್ರದಲ್ಲಿ ಹರಡಿ ಬಹಳ ಸಂಖ್ಯೆಯ ಜನರನ್ನು ಒಟ್ಟಿಗೇ ಕಾಡುವುದು ನಿಜವಾದರೂ ಹೆಚ್ಚಿನವರಲ್ಲಿ ಅಂತಹ ಪ್ರಾಣಾಂತಿಕ ಕಾಯಿಲೆಯಲ್ಲ ಎಂಬುದು ಇಂದು ಸಾಬೀತಾಗಿದೆ. ಸೋಂಕು ತಗಲಿದ ಸುಮಾರು ಶೇ.80 ಜನರಲ್ಲಿ ಕಾಯಿಲೆಯ ಯಾವುದೇ ಲಕ್ಷಣವೇ ಇರದಿರಬಹುದು ಅಥವಾ ತೀರಾ ಸೌಮ್ಯ ಸ್ವರೂಪದ ಲಕ್ಷಣಗಳಿದ್ದು, ಅವರದ್ದನ್ನು ಗಣನೆಗೆ ತಾರದೇ ಇರಬಹುದು. ಸುಮಾರು ಶೇ.10ರಿಂದ ಶೇ.15 ಜನರಿಗೆ ಸಾಮಾನ್ಯ ಸ್ತರದ ಜ್ವರ, ಒಣಕೆಮ್ಮು , ಮೈಕೈ ನೋವು, ದೇಹಾಲಸ್ಯ ಇತ್ಯಾದಿ ಸೌಮ್ಯ ಎನ್ನಬಹುದಾದ ರೋಗ ಲಕ್ಷಣಗಳು ಕಾಣಿಸಬಹುದು. ಬರೀ ಶೇ.5 ಜನರಲ್ಲಿ ಮಾತ್ರ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಅಂಥವರಿಗೆ ಆಸ್ಪತ್ರೆಗಳಲ್ಲಿ ನಿಗಾ ವಹಿಸಿಕೊಳ್ಳಬೇಕಾಗುತ್ತದೆ. ಅವರಲ್ಲಿಯೂ ಆಮ್ಲಜನಕ, ಕೃತಕ ಉಸಿರಾಟದ ಅಳವಡಿಕೆಯ ಇತ್ಯಾದಿಗಳ ಮೂಲಕ ಹಲವರು ಚೇತರಿಸಿಕೊಳ್ಳುತ್ತಾರೆ. ಒಟ್ಟಾರೆ ಕೋವಿಡ್ ಕಾಯಿಲೆಯಿಂದ ಸಾವನ್ನಪ್ಪುವವರ ಸಂಖ್ಯೆ ಶೇ.2ಕ್ಕಿಂತಲೂ ಕಡಿಮೆ ಎಂಬುದು ಅಂಕಿಅಂಶಗಳಿಂದ ಸಾಬೀತಾಗಿದೆ. ವಯಸ್ಸಾಗಿರುವವರು, ಮಧುಮೇಹ, ಅಧಿಕ ರಕ್ತದೊತ್ತಡ ಯಾ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಪ್ರಾಣಾಪಾಯದ ಭೀತಿ ತುಸು ಹೆಚ್ಚು. ಆದ್ದರಿಂದ ಇದರ ಬಗ್ಗೆ ಅನಗತ್ಯ ಭೀತಿ ಬೇಡ. ಎಚ್ಚರ ಅಗತ್ಯ. ಇನ್ನು ಸ್ವಂತ ಅನುಭವದ ಮೇರೆಗೆ ಹೇಳುವುದಾದರೆ, ಈ ಕಾಯಿಲೆಯಲ್ಲಿ ಮೈಕೈ ನೋವು ಮತ್ತು ಸುಸ್ತು ಜಾಸ್ತಿ, ಜ್ವರ, ಸೌಮ್ಯ ಎನ್ನಬಹುದಾದ ಮಟ್ಟದಲ್ಲಿದ್ದು (99-100 ಡಿಗ್ರಿ ಫ್ಯಾರನ್‌ಹೀಟ್‌), ಕಂಡೂ ಕಾಣದಂತಿರುತ್ತದೆ. ಒಣ ಕೆಮ್ಮು ಸಾಮಾನ್ಯ. ಉಳಿದಂತೆ ನೆಗಡಿಯಾದಾಗ ಕಾಡುವ ಗಂಟಲು ನೋವು, ಮೂಗು ಕಟ್ಟುವಿಕೆ, ಮೂಗು ಸೋರುವುದು ಇತ್ಯಾದಿ ವಿರಳ. ಕೆಲವೊಮ್ಮೆ ಹೊಟ್ಟೆ ಉಬ್ಬರಿಸಿದಂತೆ ಅನುಭವವಾಗಬಹುದು. ಗಮನಾರ್ಹ ವಿಷಯವೆಂದರೆ, ಈ ರೀತಿಯ ರೋಗ ಲಕ್ಷಣಗಳು ಸುದೀರ್ಘ‌ ಕಾಲ ಅಂದರೆ 8ರಿಂದ 12 ದಿವಸಗಳ ವರೆಗೆ ಇರುವುದು. ನಾಲ್ಕಾರು ದಿನಗಳಅನಾರೋಗ್ಯದ ಬಳಿಕ ಬಳಲಿದ ರೋಗಿಯ ಮನಸ್ಸು ಆತಂಕಕ್ಕೀಡಾಗುವುದು ಸಹಜ.

ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ದೊರೆತರೆ ಭೀತಿ ಕಡಿಮೆ ಆಗುತ್ತದೆ. ಆರೋಗ್ಯದ ಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸದಿದ್ದಲ್ಲಿ ನಾವು ಸಾಮಾನ್ಯ ಆರೈಕೆಗಿಂತ ಹೆಚ್ಚಿನದೇನನ್ನೂ ಮಾಡಬೇಕಾಗಿಲ್ಲ. ಆರೋಗ್ಯ ಸಿಬಂದಿಯ ಸಲಹೆಯಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ ಇತ್ಯಾದಿ ಸೇವಿಸಿದರೆ ಸಾಕು. ಜತೆಗೆ ಜ್ವರದ ಪ್ರಮಾಣವನ್ನು ಅಳೆಯಲು ಥರ್ಮಾಮೀಟರ್‌ ಮತ್ತು ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಅಳೆಯಲು ಪಲ್ಸ್‌ ಆಕ್ಸಿಮೀಟರ್‌ ಇವೆರಡು ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಜ್ವರದ ಪ್ರಮಾಣ 100 ಡಿಗ್ರಿ ಫ್ಯಾರನ್‌ಹೀಟ್‌ ಗಿಂತ ಜಾಸ್ತಿಯಾದಲ್ಲಿ ಅಥವಾ ಆಮ್ಲಜನಕದ ಪ್ರಮಾಣ ಶೇ.94ಕ್ಕಿಂತ ಕಡಿಮೆಯಾದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಲೇಸು. ಪಲ್ಸ್‌ ಆಕ್ಸಿಮೀಟರ್‌ ಒಂದೆರಡು ಸಾವಿರ ಬೆಲೆಯೊಳಗೇ ಇಂದು ಲಭ್ಯ ಮತ್ತು ಬಳಕೆಯೂ ಸರಳ.

ನಿರ್ಲಕ್ಷಿಸದಿರಿ; ತಡೆಯಲು ಸಹಕರಿಸಿ :  ಸೌಮ್ಯ ಕಾಯಿಲೆ ಇರುವವರು ಆಸ್ಪತ್ರೆಗೆ ದಾಖಲಾಗುವ ಆವಶ್ಯಕತೆ ಇಲ್ಲವೆಂದೆವಷ್ಟೆ. ದುರದೃಷ್ಟವಶಾತ್‌, “ಸೌಮ್ಯ ರೂಪದ ಜ್ವರ, ಮೈಕೈ ನೋವು ಕೆಮ್ಮು ಮಾತ್ರ ಇದ್ದಾಗ ಆಸ್ಪತ್ರೆಗೆ ಹೋಗದಿರುವುದೇ ಒಳ್ಳೆಯದಲ್ಲವೇ? ಸುಮ್ಮನೆ ಕೋವಿಡ್ ಎಂಬ ಹಣೆಪಟ್ಟಿ ಹಚ್ಚಿಸಿಕೊಳ್ಳುವುದು ಏಕೆ? ಇಲ್ಲೇ ಇದ್ದು ನಾವೇ ಆರೈಕೆ ಮಾಡಿಕೊಂಡರಾಯಿತು’ ಎಂಬ ವಿಶಿಷ್ಟ

ಮನಸ್ತತ್ವವೊಂದು ಇತ್ತೀಚೆಗೆ ಸಮಾಜದಲ್ಲಿ ಬೇರೂರುತ್ತಿರುವುದು ಖೇದಕರ ವಿಷಯ. ಕೋವಿಡ್ ಎಂದು ದೃಢಪಟ್ಟ ಕೂಡಲೇ ಆರೋಗ್ಯ ಕಾರ್ಯಕರ್ತರು ಬಂದು ಮನೆಯನ್ನು ಸೀಲ್‌ ಡೌನ್‌ ಮಾಡುತ್ತಾರೆ, ಓಡಾಡಲು ನಿರ್ಬಂಧ ಹಾಕುತ್ತಾರೆ ಮಾತ್ರವಲ್ಲ ಇತರರು ನಮ್ಮನ್ನು ಕಂಡರೆ ಹೆದರಿ ದೂರ ಹೋಗುತ್ತಾರೆ ಎಂಬ ರೀತಿಯ ಭಾವನೆಗಳು ಜನರು ಈ ರೀತಿ ನಡೆದುಕೊಳ್ಳಲು ಪ್ರೇರೇಪಿಸುತ್ತವೆ.

ಹೀಗಾಗಲು ಏನು ಕಾರಣ? ಕೋವಿಡ್ ಸೋಂಕುಪೀಡಿತರನ್ನು ತಪ್ಪಿತಸ್ಥರಂತೆ ನೋಡುವುದು ತರವೇ? ಹೆಚ್ಚಿನ ಸಲ ಸರಕಾರವನ್ನು ಅದಕ್ಷತೆಗಾಗಿ ದೂರುವ ಜನರೇ ತಿಳಿದೋ ತಿಳಿಯದೆಯೋ ಆರೋಗ್ಯ ಕಾರ್ಯಕರ್ತರು ತಮ್ಮ ಕೆಲಸ ಸಮರ್ಪಕವಾಗಿ ಮಾಡುವಲ್ಲಿ ಸಹಕರಿಸುವುದಿಲ್ಲ. ತಮಗೆ ಕೋವಿಡ್ ಇರಬಹುದಾದ ವಿಷಯವನ್ನು ತಾವು ಮುಚ್ಚಿಟ್ಟರೆ ಸರಕಾರ ಸಮಾಜವನ್ನು ಸಂರಕ್ಷಿಸುವುದು ಹೇಗೆ ಎಂಬ ಸರಳ ಸತ್ಯವೂ ಅವರಿಗೆ ತೋಚದು. ಜನರು ಸಹಕರಿಸದಿದ್ದರೂ ಸರಕಾರ ಬಲವಂತದಿಂದ ಸಮಾಜವನ್ನು ರಕ್ಷಿಸಬೇಕೆಂದು ಅಪೇಕ್ಷಿಸುವುದು ಸಾಧುವೇ?

ಆರೋಗ್ಯ ಕೆಟ್ಟಿದೆ ಎಂದು ಅನ್ನಿಸಿದ ಕೂಡಲೇ ಆಸ್ಪತ್ರೆಗೆ ಹೋಗಿ ಅಲ್ಲಿನ ಆರೋಗ್ಯ ಸಿಬಂದಿ ಹೇಳಿದಂತೆ ನಡೆದುಕೊಳ್ಳುವುದು ಕೋವಿಡ್ ನಿಯಂತ್ರಣಕ್ಕಿರುವ ಸುಲಭ ಮತ್ತು ಸರಳ ಉಪಾಯ. ಆಪ್ತಮಿತ್ರದಂತಹ ದೂರವಾಣಿಯ ಮುಖಾಂತರಸಂಪರ್ಕಿಸಿದರೂ ಆರೋಗ್ಯ ಕಾರ್ಯಕರ್ತರು ಮನೆಯ ಬಾಗಿಲಿಗೇ ಬಂದು ಅಗತ್ಯಮಾರ್ಗದರ್ಶನ ನೀಡುವಷ್ಟು ಸೌಲಭ್ಯವನ್ನು ಸರಕಾರವಿಂದು ಒದಗಿಸಿದೆ. ಆದರೆ ಅದರ ಸದುಪಯೋಗ ಪಡೆಯದೆ ಕೋವಿಡ್ ಕಾಯಿಲೆ ಬರುವುದು ಪೂರ್ವಜನ್ಮದ ಪಾಪವೇನೋ ಎಂದು ಅಂದುಕೊಳ್ಳುವಂತಹ ಸಾಮಾಜಿಕ ವಾತಾವರಣ ನಿರ್ಮಾಣ ಆಗಿರುವುದು ದುಃಖದ ವಿಷಯ. ಅದರಲ್ಲೂ ಸುಶಿಕ್ಷಿತರೆನ್ನಿಸಿಕೊಂಡವರೂ ಇಂತಹ ಮನೋಸ್ಥಿತಿ ಹೊಂದಿರುವುದನ್ನು ನಾನೇ ಕಂಡಿದ್ದೇನೆ.

ನಾವು ಕೋವಿಡ್ ತಪಾಸಣೆಗೆ ಏಕೆ ಒಳಗಾಗಬೇಕು ಎಂಬುದಕ್ಕೆ ಹಲವಾರು ಕಾರಣಗಳಿವೆ. ಮೊದಲಾಗಿ ನಮಗೆ ಅಗತ್ಯವಾಗಿರುವ ಆರೋಗ್ಯ ಮಾಹಿತಿ, ಮಾರ್ಗದರ್ಶನ ಮತ್ತು ಕಾಯಿಲೆ ಇರುವುದು ದೃಢಪಟ್ಟಲ್ಲಿ ನಮ್ಮಿಂದ ಕುಟುಂಬದ ಇತರ ಸದಸ್ಯರಿಗೆ ಮತ್ತು ಸಮಾಜಕ್ಕೆ ಹರಡುವುದನ್ನು ತಪ್ಪಿಸಿದ ಸಮಾಧಾನ ಸಿಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ದುರದೃಷ್ಟವಶಾತ್‌ ಎಲ್ಲಿಯಾದರೂ ಉಸಿರಾಟದ ತೊಂದರೆ ಕಂಡುಬಂದಲ್ಲಿ ತುರ್ತು ಚಿಕಿತ್ಸೆಗೆ ಹೋಗಲು ಅನುಕೂಲವಾಗುತ್ತದೆ.

ಯಾರು ಮನೆಯಲ್ಲಿದ್ದುಕೊಂಡೇ ಆರೈಕೆ ಮಾಡಿಕೊಳ್ಳಬಹುದು, ಯಾರು ಆಸ್ಪತ್ರೆಗೆ ದಾಖಲಾಗಬೇಕು ಎಂಬ ನಿರ್ಧಾರವನ್ನು ಆರೋಗ್ಯ ಸಿಬಂದಿಗೆ ಬಿಡುವುದು ಲೇಸು. ಮನೆಯಲ್ಲಿಯೇ ಉಳಿದು ಆರೈಕೆ ಮಾಡಿಕೊಳ್ಳಬೇಕಾದರೆ ಬೇಕಾಗುವಂತಹ ಸವಲತ್ತುಗಳು ಎಲ್ಲರ ಮನೆಯಲ್ಲಿಯೂ ಲಭ್ಯವಿರುವುದು ಅಸಾಧ್ಯ. ಹಾಗಿದ್ದಲ್ಲಿ ಆಸ್ಪತ್ರೆಗೆ ದಾಖಲಾಗುವುದೇ ಒಳಿತು. ಆಸ್ಪತ್ರೆಗೆ ಸೇರಿದ ಅನಂತರ ಯಾರಿಗೆ ಯಾವಾಗ ಯಾವ ರೀತಿಯ ಚಿಕಿತ್ಸೆ ನೀಡಬೇಕೆಂಬುದು ರೋಗಿಯ ಸ್ಥಿತಿಯನ್ನು ಗಮನಿಸಿ ವೈದ್ಯರು ನಿರ್ಧರಿಸುತ್ತಾರೆ. ಅಪರೂಪಕ್ಕೆ ಆಮ್ಲಜನಕ, ಕೃತಕ ಉಸಿರಾಟ ಇತ್ಯಾದಿಗಳ ಆವಶ್ಯಕತೆ ಉಂಟಾಗುವ ಸಾಧ್ಯತೆ ಇರುತ್ತದೆ. ಉಳಿದ ಚಿಕಿತ್ಸಾತ್ಮಕ ವಿವರಗಳು ಇಲ್ಲಿ ಅಪ್ರಸ್ತುತ. ಒಟ್ಟಿನಲ್ಲಿ ತಾಳ್ಮೆ ಮುಖ್ಯ

ನಾವು ಕಲಿಯಬೇಕಾದ ಪಾಠ :  ಈ ಮಹಾಮಾರಿ ನಮಗೆ ಕಲಿಸಿರುವ, ಕಲಿಸುತ್ತಿರುವ ಪಾಠ ಏನೆಂದರೆ, ಇಂದಿನ ಆಧುನಿಕ ಯುಗದಲ್ಲಿ ಹೊಸ ಕಾಯಿಲೆಯೊಂದು ಹುಟ್ಟಿಕೊಂಡು ಕೆಲವೇ ವಾರಗಳಲ್ಲಿ ವಿಶ್ವದಾದ್ಯಂತ ಹರಡಬಲ್ಲುದು ಎಂಬುದು. ಎರಡನೆಯದಾಗಿ, ಎಷ್ಟೇ ದಿಟ್ಟ ಸರಕಾರದಿಂದಲೂ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ಜನರ ಸಹಕಾರ ಮುಖ್ಯ ಎಂಬ ಪಾಠ ನಾವಿಂದು ಕಲಿಯಬೇಕಾಗಿದೆ.

ಈ ಲೇಖನದ ಉದ್ದೇಶ ಇಷ್ಟೇ. ಕೋವಿಡ್ ಎಂಬುದು ಒಂದು ವಿಶಿಷ್ಟ ಕಾಯಿಲೆ ಹೌದಾದರೂ ಹೆಚ್ಚಿನವರಲ್ಲಿ ಪ್ರಾಣಾಂತಿಕ ಕಾಯಿಲೆ ಅಲ್ಲ ಎಂಬುದನ್ನು ಸ್ವತಃ ಅನುಭವಿಸಿ ಜನರಿಗೆ ತಿಳಿ ಹೇಳುವುದು. ಅನಾರೋಗ್ಯ ಕಂಡ ಕೂಡಲೇ ಸೂಕ್ತ ಆರೋಗ್ಯ ತಪಾಸಣೆ ಮಾಡಿಕೊಂಡರೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು ಮತ್ತು ಸಮಾಜದ ಆರೋಗ್ಯಸಂರಕ್ಷಣೆಯನ್ನೂ ಸಾಧಿಸಿದಂತಾಗುತ್ತದೆ. ಕೊನೆಯಾದಾಗಿ “ನಾವು ರೋಗದ ವಿರುದ್ಧ ಹೋರಾಡಬೇಕೇ ವಿನಾ ರೋಗಿಯ ವಿರುದ್ಧ ಅಲ್ಲ’ ಎಂಬ ಧ್ಯೇಯವಾಕ್ಯವನ್ನು ನಾವೆಲ್ಲರೂ ಇಂದು ಅರಿತು ಅಳವಡಿಸಿಕೊಳ್ಳಬೇಕಾಗಿದೆ.

 

ಡಾ| ಶಿವಾನಂದ ಪ್ರಭು

ಸರ್ಜರಿ ವಿಭಾಗ, ಕೆಎಂಸಿ,

ಮಂಗಳೂರು

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

fasting- ಆತ್ಮದ ಶಕ್ತಿ; ಆಧುನಿಕ ಪ್ರಾಚೀನ ಹಾಗೂ ಪರಿಕಲ್ಪನೆಯ ಸಂಯೋಗ

4

Health: ಮೊಣಕಾಲಿನ ಅಸ್ಥಿಸಂಧಿವಾತ; ಸಾಮಾನ್ಯ ಸಮಸ್ಯೆಯನ್ನು ಮಾಡಿಕೊಳ್ಳುವುದು

1

Tobacco Cessation Centre: ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತಂಬಾಕು ವರ್ಜನ ಕೇಂದ್ರ

11

Health: ರೋಗಿ ಸುರಕ್ಷೆಗೆ ಒಂದು ನಮನ

10

Health: ಚಟುವಟಿಕೆಗಳ ಮೂಲಕ ಮಾನಸಿಕ ಆರೋಗ್ಯಕ್ಕೆ ಉತ್ತೇಜನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.