ಜೀರ್ಣಾಂಗ ವ್ಯೂಹ ಮತ್ತು ಕಶ್ಮಲ ನೀರಿನಲ್ಲಿ ಕೋವಿಡ್‌-19 ವೈರಸ್‌: ಹೊಸ ಮಾಹಿತಿಗಳು


Team Udayavani, Aug 2, 2020, 5:05 PM IST

EDITION–TDY-2

ಫಾರಿಂಜಿಯಲ್‌ ಸ್ವಾಬ್‌ ರಿಪೋರ್ಟ್‌ ನೆಗೆಟಿವ್‌ ಬಂದ ಬಳಿಕವೂ ಕೋವಿಡ್ ವೈರಸ್‌ ಗಂಟಲ ದ್ರವದಲ್ಲಿ 39 ದಿನಗಳ ಕಾಲ ಮತ್ತು ಮಲದಲ್ಲಿ ಕನಿಷ್ಠ 13 ದಿನಗಳ ಕಾಲ ಬದುಕುಳಿದಿರುತ್ತದೆ ಎಂಬುದಾಗಿ ಇತ್ತೀಚೆಗಿನ ವರದಿಯೊಂದು ಹೇಳಿದೆ. ಫಾರಿಂಜಿಯಲ್‌ ಸ್ವಾಬ್‌ ನೆಗೆಟಿವ್‌ ಬಂದ ವ್ಯಕ್ತಿಗಳು ನಿಜಕ್ಕೂ ವೈರಸ್‌ ಮುಕ್ತರಾಗಿರುತ್ತಾರೆಯೇ ಅಥವಾ ದೇಹದ ಹೆಚ್ಚುವರಿ ಭಾಗಗಳಿಂದ ಮಾದರಿ ಪಡೆದು ಪರೀಕ್ಷೆಗೊಳಪಡಿಸಬೇಕೇ ಎಂಬ ಪ್ರಶ್ನೆಗೆ ಈ ಶೋಧ ಕಾರಣವಾಗಿದೆ.

ಸ್ಟಾನ್‌ಫ‌ರ್ಡ್‌ ಯುನಿವರ್ಸಿಟಿ ವರದಿಗಳ ಪ್ರಕಾರ ಸುರಕ್ಷಾ ಕ್ರಮಗಳು ಸಡಿಲಗೊಂಡರೂ ಲಸಿಕೆ ತಯಾರಾಗದ ವಿನಾ ಮತ್ತು ವೈರಸ್‌ ಹರಡುವಿಕೆ ತಡೆಯಬಲ್ಲ ಸಮುದಾಯ ರೋಗ ನಿರೋಧಕ ಬೆಳೆಯದ ವಿನಾ ಜನಜೀವನ ಸಹಜತೆಗೆ ಮರಳದು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬಂದಿ ಸೋಂಕು ಹಾಟ್‌ ಸ್ಪಾಟ್‌ಗಳನ್ನು ನಿಯಂತ್ರಿಸಲು ದೀರ್ಘ‌ಕಾಲ ಹೋರಾಡಬೇಕಾಗಬಹುದು. ಇದರ ಭಾಗವಾಗಿ ಸೋಂಕುಪೀಡಿತರನ್ನು ಪತ್ತೆಹಚ್ಚಲು ರಕ್ತಪರೀಕ್ಷೆ, ಗಂಟಲದ್ರವ ಪರೀಕ್ಷೆಯಂತಹ ಪರೀಕ್ಷೆಗಳು ಇದರ ಭಾಗವಾಗಿರುತ್ತವೆ. ಅಲ್ಲದೆ, ಸೋಂಕುಪೀಡಿತರನ್ನು ಕ್ವಾರಂಟೈನ್‌ಗೊಳಪಡಿಸುವುದು ಮತ್ತು ಅವರ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಬೇಕಾಗುತ್ತದೆ. ಆದರೆ ನಮ್ಮ ಚರಂಡಿಗಳು ಮತ್ತು ಒಳಚರಂಡಿಗಳ ಮೇಲೆ ನಿಗಾ ಇರಿಸುವಂತಹ ಪರೋಕ್ಷ ಕಾಯಿಲೆ ನಿರೀಕ್ಷಣೆಯಿಂದ ಈ ಮಾಹಿತಿಗಳು ಬೇಗನೆ ದೊರೆಯಬಹುದಾಗಿದೆ.

ಕೋವಿಡ್‌ – 19 ಮತ್ತು ಕೊಳಚೆ ನೀರು :  ಸಾರ್ಸ್‌ ಕೋವ್‌2 ಕವಚವುಳ್ಳ ಒಂದು ವೈರಸ್‌ ಆಗಿದೆ. ಇದರ ಪ್ರೊಟೀನ್‌ ಮತ್ತು ವಂಶ ವಾಹಿ ವಸ್ತುಗಳ ಸುತ್ತ ಲಿಪಿಡ್‌ ಕವಚವಿದ್ದು, ಈ ದುರ್ಬಲ ಕವಚವನ್ನು ಸಾಬೂನಿನಂತಹ ಸೋಂಕು ನಿವಾರಕಗಳು ನಾಶ ಮಾಡಬಲ್ಲವು. ಕೊಳಚೆ ನೀರಿನ ತಪಾಸಣೆ ಮತ್ತು ನಿಗಾ ಜನಸಮುದಾಯ ವೊಂದರಲ್ಲಿ ಎಷ್ಟು ಸೋಂಕು ಹರಡಿದೆ ಎಂಬ ಬಗ್ಗೆ ಮಾಹಿತಿ ನೀಡುವ ಮೂಲಕ ಲಾಕ್‌ಡೌನ್‌ ಅಂತ್ಯಗೊಂಡ ಬಳಿಕ ಹೊಸ ಸಾಂಕ್ರಾಮಿಕ ಹಾವಳಿ ಉಂಟಾಗಿದೆಯೇ ಎಂಬುದರ ಬಗ್ಗೆ ರಾಷ್ಟ್ರೀಯ ನಕಾಶೆಯೊಂದನ್ನು ರೂಪಿಸಲು ನೆರವಾಗಬಲ್ಲುದು. ಕೊಳಚೆ ನೀರಿನಲ್ಲಿ ಕೋವಿಡ್ ವೈರಸ್‌ ಸುಮಾರು 14 ದಿನಗಳ ಕಾಲ ಬದುಕುಳಿಯಬಲ್ಲುದು ಎಂಬುದು ಕುತೂಹಲಕಾರಿ. ನೆದರ್‌ಲ್ಯಾಂಡ್ಸ್‌ನ ವಿಜ್ಞಾನಿಯೊಬ್ಬರು 2020ರ ಮಾರ್ಚ್‌ ತಿಂಗಳಿನಲ್ಲಿಯೇ ಕೊಳಚೆ ನೀರು ಶುದ್ಧೀಕರಣ ಘಟಕವೊಂದರಲ್ಲಿ ಕೋವಿಡ್ ವೈರಸ್‌ನ ಅಂಶವನ್ನು ಪತ್ತೆ ಮಾಡಿದ್ದರು.

ಆಗಿನ್ನೂ ಅಲ್ಲಿ ಕೋವಿಡ್ ಸೋಂಕಿನ ಪ್ರಕರಣ ವರದಿಯಾಗಿರಲಿಲ್ಲ. ಸ್ಥಳೀಯವಾಗಿ ಕೋವಿಡ್ ಸೋಂಕು ಹರಡುವಿಕೆಯ ಆರಂಭದಲ್ಲಿ ತ್ಯಾಜ್ಯ ನೀರಿನಲ್ಲಿ ಕೋವಿಡ್ ವೈರಸ್‌ ಪತ್ತೆ ಹಚ್ಚಲು ಸಾಧ್ಯವಾಗುವುದರಿಂದ ಅದು ಸೋಂಕುಪೀಡಿತರಿಂದ ಕೊಳಚೆ ನೀರಿಗೆ ಮತ್ತು ಅಲ್ಲಿಂದ ಆರೋಗ್ಯವಂತರಿಗೆ ಹರಡುವ ಪ್ರಸರಣ ವ್ಯವಸ್ಥೆಯ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಕೋವಿಡ್ ವೈರಸ್‌ 14 ದಿನಗಳ ಕಾಲ ಕೊಳಚೆ ನೀರಿನಲ್ಲಿ ಬದುಕುಳಿಯಬಲ್ಲುದು ಎಂಬುದು ಈಗಾಗಲೇ ನಮಗೆ ತಿಳಿದಿರುವುದರಿಂದ ಆಸ್ಪತ್ರೆಗಳು ಹೆಚ್ಚು ಎಚ್ಚರ ವಹಿಸಬೇಕು. ಕೊಳಚೆ ನೀರಿನ ಸರ್ವೇಕ್ಷಣೆ, ತಪಾಸಣೆಯನ್ನು ನಿಯಮಿತ ವಾಗಿ ನಡೆಸುವುದು ಹೊಸ ಕೋವಿಡ್‌ ಹಾವಳಿಯ ಅಪಾಯದ ಬಗ್ಗೆ ಮುಂಚಿತವಾಗಿ ಎಚ್ಚರಗೊಳ್ಳುವುದು ಸಾಧ್ಯ. ಮಲ ಅಥವಾ ಮೂತ್ರಗಳಿಂದ ಹರಡಬಲ್ಲ ಸೋಂಕುರೋಗಗಳನ್ನು ಪತ್ತೆ ಹಚ್ಚುವುದಕ್ಕೆ ಚರಂಡಿ, ಒಳಚರಂಡಿಗಳ ಮೂಲಕ ಹರಿದು ಶುದ್ಧೀಕರಣ ಘಟಕ ಸೇರುವ ತಾಜ್ಯ ನೀರನ್ನು ಸಂಶೋಧಕರು ಬಳಸಿಕೊಳ್ಳ ಬಹುದು. ಒಂದು ಶುದ್ಧೀಕರಣ ಘಟಕವು ಹತ್ತು ಲಕ್ಷಕ್ಕಿಂತಲೂ ಹೆಚ್ಚು ಮಂದಿಯ ತ್ಯಾಜ್ಯ ನೀರನ್ನು ಸ್ವೀಕರಿಸುತ್ತದೆ ಎಂಬುದನ್ನು ತಿಳಿದಿರುವುದು ಬಹಳ ಮುಖ್ಯ.

ತ್ಯಾಜ್ಯ ನೀರು ಸರ್ವೇಕ್ಷಣೆ ಮತ್ತು ತಪಾಸಣೆಯು ಸೋಂಕು ಪರೀಕ್ಷೆಗೆ ಒಳಗಾಗ ದವರು ಮತ್ತು ಲಘು ರೋಗ ಲಕ್ಷಣ ಹೊಂದಿರುವವರನ್ನೂ ಒಳಗೊಳ್ಳುವುದು ಸಾಧ್ಯ. ಸ್ವೀಡನ್‌ನ ವಿಜ್ಞಾನಿಗಳ ಗುಂಪೊಂದು ಈಗ ಕೋವಿಡ್ ವೈರಸ್‌ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಸಮುದಾಯದಲ್ಲಿ ಅದರ ಹರಡುವಿಕೆಯ ಬಗ್ಗೆ ಅಧ್ಯಯನ ಕೈಗೊಂಡಿದೆ. ಅವರು ಸ್ಪೈನ್‌, ಇಟೆಲಿ, ಭಾರತ, ನೆದರ್‌ಲ್ಯಾಂಡ್ಸ್‌, ಟರ್ಕಿಗಳಿಂದ ಕೊಳಚೆ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ವೈರಸ್‌ ಹಾವಳಿ ಮರಳಿ ಆರಂಭವಾದರೆ ಕೊಳಚೆ ನೀರಿನ ತಪಾಸಣೆಯು ಪೂರ್ವ ಮುನ್ನೆಚ್ಚರಿಕೆ ನೀಡಲು ಬಳಕೆಯಾಗಬಹುದು ಎಂದವರು ಹೇಳಿದ್ದಾರೆ. ಪ್ರಸ್ತುತ ಆರೋಗ್ಯ ಅಧಿಕಾರಿಗಳು ಕಾಣುತ್ತಿರುವುದು ಇದರ ಒಂದಂಶ ಮಾತ್ರ.

ಆರೋಗ್ಯ ಕಾರ್ಯಕರ್ತರು ಮತ್ತು ಸಮುದಾಯಕ್ಕೆ ಅಪಾಯದ ಪೂರ್ವ ಮುನ್ನೆಚ್ಚರಿಕೆಗಳು :  ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧಾರಣೆಯಂತಹ ಮುನ್ನೆಚ್ಚರಿಕೆ ಕ್ರಮಗಳು ಸದ್ಯದ ಕೋವಿಡ್‌ ಹಾವಳಿಯನ್ನು ತಡೆಗಟ್ಟಬಹುದು. ಆದರೆ ಈ ಸುರಕ್ಷಾ ಕ್ರಮಗಳನ್ನು ಕೈಬಿಟ್ಟರೆ ಸೋಂಕು ಮತ್ತೆ ಆರಂಭವಾಗಬಹುದು. ಕೋವಿಡ್ ವೈರಸ್‌ ಮೂರು ದಿನಗಳಲ್ಲಿ ಮಲದಲ್ಲಿ ಪತ್ತೆಯಾಗಬಲ್ಲವು ಎಂಬುದಾಗಿ ಅಧ್ಯಯನಗಳು ಹೇಳಿವೆ. ಸೋಂಕು ಲಕ್ಷಣಗಳು ಆಸ್ಪತ್ರೆಗೆ ದಾಖಲಾಗುವಷ್ಟು ಗಂಭೀರವಾಗಿ, ಆಸ್ಪತ್ರೆಗೆ ದಾಖಲಾಗಿ, ಅಲ್ಲಿ ರೋಗಪತ್ತೆಯಾಗಲು ಸುಮಾರು 2 ವಾರಗಳು ಬೇಕಾಗಿದ್ದು, ಇದಕ್ಕಿಂತ ಮಲದಲ್ಲಿ ವೈರಸ್‌ ಪತ್ತೆಯಾಗುವ 3 ದಿನಗಳ ಅವಧಿ ಬಹಳ ಕಡಿಮೆಯದ್ದಾಗಿದೆ. ತ್ಯಾಜ್ಯ ನೀರಿನಲ್ಲಿ ಕೋವಿಡ್ ವೈರಸ್‌ ಅಂಶವನ್ನು ಪತ್ತೆ ಮಾಡುವುದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಲಾಕ್‌ಡೌನ್‌ ನಂತಹ ಸುರಕ್ಷಾ ಕ್ರಮಗಳನ್ನು ಸಾಕಷ್ಟು ಮುಂಚಿತವಾಗಿ ಕೈಗೊಳ್ಳಲು ಅವಕಾಶ ಒದಗಿಸಬಲ್ಲುದಾಗಿದೆ.

ಏಕೆಂದರೆ, ಈ ಏಳೆಂಟು ದಿನಗಳ ಅವಧಿ ವೈರಸ್‌ ಸೋಂಕಿನ ಹಾವಳಿಯ ಗಂಭೀರತೆಯನ್ನು ತಗ್ಗಿಸುವಲ್ಲಿ ಬಹಳ ಪರಿಣಾಮವನ್ನು ಉಂಟುಮಾಡಬಲ್ಲುದು. ಸಮುದಾಯದಲ್ಲಿ ಕೋವಿಡ್ ವೈರಸ್‌ ಸೋಂಕು ಕಾಣಿಸಿಕೊಳ್ಳುವ ಬಗೆಗಿನ ಮಾಹಿತಿ ಬೇಗನೆ ಲಭಿಸಿದಷ್ಟು ಅದು ಉಂಟುಮಾಡಬಲ್ಲ ಆರೋಗ್ಯ ಮತ್ತು ಆರ್ಥಿಕ ಹಾನಿಯನ್ನು ತಡೆಗಟ್ಟಲು ಸಾಧ್ಯ. ಭಾರತದಲ್ಲಿ ಪೋಲಿಯೋ ವೈರಸ್‌ ವಿರುದ್ಧ ಲಸಿಕೆ ಅಭಿಯಾನದ ಯಶಸ್ಸನ್ನು ವಿಶ್ಲೇಷಿಸಲು ತ್ಯಾಜ್ಯ ನೀರಿನ ನಿಗಾವಣೆಯನ್ನು ದಶಕಗಳಿಂದ ಯಶಸ್ವಿಯಾಗಿ ಉಪಯೋಗಿಸಲಾಗಿದ್ದು, ಕೋವಿಡ್ ವೈರಸ್‌ ಹಾವಳಿಯನ್ನು ಮುಂಚಿತವಾಗಿ ಗುರುತಿಸುವುದಕ್ಕೂ ಇದನ್ನೇ ಅನುಸರಿಸಬಹುದಾಗಿದೆ. ಕೋವಿಡ್ ವೈರಸ್‌ ಪೀಡಿತರ ಮಲದಲ್ಲಿ ವೈರಸ್‌ ಉಪಸ್ಥಿತಿ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ ಎಂಬುದಾಗಿ ಅನೇಕ ಅಧ್ಯಯನಗಳು ಹೇಳಿರುವುದು ಈ ವಿಧಾನದ ಮೇಲೆ ಭರವಸೆ ಹೆಚ್ಚಲು ಕಾರಣವಾಗಿದೆ. ಮಲದ ಮೂಲಕ ವೈರಸ್‌ ವಿಸರ್ಜನೆಯು ರೋಗದ ಬಹಳ ಆರಂಭಿಕ ಹಂತದಲ್ಲಿ, ರೋಗಿಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕಿಂತಲೂ ಬಹಳ ಮುಂಚಿತವಾಗಿಯೇ ನಡೆಯುತ್ತದೆ. ಯಾವುದೇ ಪಟ್ಟಣ ಅಥವಾ ನಗರದಲ್ಲಿ ಯಾವನೇ ನಾಗರಿಕನಲ್ಲಿ ಸಾಂಪ್ರದಾಯಿಕ ಪರೀಕ್ಷೆಯ ಮೂಲಕ ಸೋಂಕು ಪಾಸಿಟಿವ್‌ ಪತ್ತೆಯಾಗುವುದಕ್ಕೆ ಸಾಕಷ್ಟು ಮುನ್ನವೇ ತ್ಯಾಜ್ಯ ನೀರಿನಲ್ಲಿ ವೈರಸ್‌ ಉಪಸ್ಥಿತಿ ಪತ್ತೆಯಾಗಬಹುದು ಎಂದು ಹೇಳುವುದಕ್ಕೆ ಇದು ಬಲವಾದ ಆಧಾರವಾಗಿದೆ.

ಕೋವಿಡ್‌-19ಗೆ ಸಂಬಂಧಿಸಿದ ಕೆಲವು ಪಚನಾಂಗ ವ್ಯೂಹ ಲಕ್ಷಣಗಳಾವುವು? :  ಕೋವಿಡ್‌ -19 ಹೊಂದಿರುವ ರೋಗಿಗಳು ಪಚನಾಂಗ ವ್ಯೂಹಕ್ಕೆ ಸಂಬಂಧಿಸಿದ ರೋಗ ಲಕ್ಷಣಗಳು ಮತ್ತು ಶ್ವಾಸಾಂಗಕ್ಕೆ ಸಂಬಂಧಿಸಿದ ರೋಗ ಲಕ್ಷಣಗಳನ್ನು ಜತೆ‌ಯಾಗಿ ಹೊಂದಿರಬಹುದು ಅಥವಾ ಸಣ್ಣ ಪ್ರಮಾಣದ ರೋಗಿಗಳು ಪಚನಾಂಗ ವ್ಯೂಹಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ಮಾತ್ರ ಹೊಂದಿರಬಹುದು ಎಂಬುದಾಗಿ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ನಡೆದಿರುವ ಅಧ್ಯಯನಗಳು ಹೇಳುತ್ತವೆ. ಭೇದಿ, ಹೊಟ್ಟೆತೊಳೆಸುವಿಕೆ ಮತ್ತು ವಾಂತಿ ಕೋವಿಡ್‌-19 ಸೋಂಕಿನ ಪಚನಾಂಗ ವ್ಯೂಹ ಸಂಬಂಧಿ ಲಕ್ಷಣಗಳು.

ಕೋವಿಡ್‌ 19 ಉಂಟು ಮಾಡುವ ವೈರಸ್‌ ಮಲದ ಮೂಲಕ ಹರಡಬಲ್ಲುದೇ? :  ಮಲ- ಬಾಯಿಯ ಮೂಲಕ ಕೋವಿಡ್ ವೈರಸ್‌ ಹರಡುವ ಬಗ್ಗೆ ಇದುವರೆಗೆ ಹೆಚ್ಚಿನ ಸಾಕ್ಷ್ಯಾಧಾರ ಲಭಿಸಿಲ್ಲ. ಆದರೆ ಸುರಕ್ಷಾ ಕ್ರಮವಾಗಿ ನಾವು ಕೋವಿಡ್ ಸೋಂಕು ಹೊಂದಿರುವ ವ್ಯಕ್ತಿಯು ಶ್ವಾಸಾಂಗ ಸ್ರಾವಗಳ ಜತೆಗೆ ಮಲದ ಮೂಲಕವೂ ಸೋಂಕು ಪ್ರಸಾರ ಮಾಡಬಲ್ಲ ಎಂದೇ ಭಾವಿಸಬೇಕು. ಆದ್ದರಿಂದ ಕೋವಿಡ್ ಪೀಡಿತ ವ್ಯಕ್ತಿಯ ಮಲ ಮಾದರಿಯೂ ಸೋಂಕುಕಾರಿಯಾಗಿರುವುದು ಸಂಭಾವ್ಯ. ಆದ್ದರಿಂದ ಶೌಚಾಲಯ ಉಪಯೋಗಿಸಿದ ಬಳಿಕ ಮತ್ತು ಆಹಾರ ಸೇವಿಸುವುದಕ್ಕೆ ಮುನ್ನ ಕೈಗಳನ್ನು ಸ್ವತ್ಛವಾಗಿ ತೊಳೆದುಕೊಳ್ಳುವುದು ಸುರಕ್ಷಿತ.

ಕೆಲವು ಕೋವಿಡ್ ರೋಗಿಗಳು  ಆಘ್ರಾಣ ಶಕ್ತಿ ನಷ್ಟ ಮತ್ತು ರುಚಿ ಗ್ರಹಿಸುವ ಶಕ್ತಿ ನಷ್ಟವನ್ನು ಅನುಭವಿಸುತ್ತಾರೆ, ಏಕೆ? :  ಕೋವಿಡ್ ವೈರಸ್‌ ಮನುಷ್ಯ ದೇಹದ ಮೇಲೆ ಎಸಿಇ2 ರಿಸೆಪ್ಟರ್‌ಗಳನ್ನು ಒಳಗೊಳ್ಳುವ ಪ್ರಕ್ರಿಯೆಯ ಮೂಲಕ ಆಕ್ರಮಣ ನಡೆಸುತ್ತವೆ. ಈ ರಿಸೆಪ್ಟರ್‌ಗಳು ಶ್ವಾಸಕೋಶ, ಮೂಗು, ಬಾಯಿ, ಕರುಳು,  ಪಿತ್ತಕೋಶದಂತಹ ವಿವಿಧ ಅಂಗಾಂಗಗಳಲ್ಲಿ ಇರುತ್ತವೆ. ಕೋವಿಡ್ ವೈರಸ್‌ಗಳು ತಾನು ಆಕ್ರಮಿಸುವ ಅಂಗಾಂಶಗಳ ಸಹಿತ ಈ ರಿಸೆಪ್ಟರ್‌ಗಳಿಗೆ ಅಂಟಿಕೊಳ್ಳುತ್ತವೆ. ವೈರಸ್‌ ಮೂಗಿನ ಭಿತ್ತಿಗಳ ಮೇಲೆ ಆಕ್ರಮಣ ನಡೆಸಿ ವಾಸನೆ ಮತ್ತು ರುಚಿ ಗ್ರಹಿಸುವ ಸೂಕ್ಷ್ಮಾಂಗಗಳನ್ನು ನಾಶ ಮಾಡುತ್ತವೆ.

ಕೋವಿಡ್ ವೈರಸ್‌ ಕುಡಿಯುವ ನೀರಿನ ಮೂಲಕ ಹರಡಬಲ್ಲುದೇ? :  ಕೋವಿಡ್ ವೈರಸ್‌ ಕುಡಿಯುವ ನೀರಿನಲ್ಲಿ ಪತ್ತೆಯಾಗಿಲ್ಲ. ಕುಡಿಯುವ ನೀರನ್ನು ರಾಸಾಯನಿಕಗಳ ಮೂಲಕ ಮತ್ತು ಸೋಸಿ ಶುದ್ಧೀಕರಿಸುವ ಸಾಂಪ್ರದಾಯಿಕ ವಿಧಾನಗಳು ವೈರಸ್‌ ಗಳನ್ನು ನಿರ್ಮೂಲಗೊಳಿಸುತ್ತವೆ ಅಥವಾ ನಿಷ್ಕ್ರಿಯಗೊಳಿಸುತ್ತವೆ.

ಕೋವಿಡ್‌ 19 ಸಂದರ್ಭದಲ್ಲಿ ಒಳಚರಂಡಿ ನಿರ್ವಹಣೆ ವ್ಯವಸ್ಥೆಯ ಪಾತ್ರವೇನು? :  ತ್ಯಾಜ್ಯ ನೀರಿನಲ್ಲಿ ಪರೀಕ್ಷೆಯು ವೈರಸನ್ನೇ ಪತ್ತೆ ಹಚ್ಚುವುದಿಲ್ಲ, ಬದಲಾಗಿ ಸಣ್ಣ ಪ್ರಮಾಣದಲ್ಲಿ (0.1%) ಅದರ ವಂಶವಾಹಿ ಸಾಮಗ್ರಿಯನ್ನು ಪತ್ತೆ ಮಾಡುತ್ತದೆ. ಆದ್ದರಿಂದ ಭವಿಷ್ಯದಲ್ಲಿ ವೈರಸ್‌ನ ಪ್ರಸರಣದ ಅಪಾಯವನ್ನು ಪತ್ತೆ ಮಾಡಲು ಮತ್ತು ಸಮುದಾಯದಲ್ಲಿ ಅದರ ಪ್ರಸಾರವನ್ನು ಗುರುತಿಸಲು ತ್ಯಾಜ್ಯ ನೀರಿನ ಪರೀಕ್ಷೆಯನ್ನು ಉಪಯೋಗಿಸಬಹುದು.

ಒಳಚರಂಡಿ ವ್ಯವಸ್ಥೆಯ ಮೂಲಕ ಕೋವಿಡ್‌-19 ಹರಡಬಲ್ಲುದೇ? :  ಶುದ್ಧೀಕರಿಸದ ತಾಜ್ಯ ನೀರಿನಲ್ಲಿ ಕೋವಿಡ್‌-19 ವೈರಸ್‌ ಪತ್ತೆಯಾಗಿದೆ. ಶುದ್ಧೀಕರಿಸದ ಕೊಳಚೆ ನೀರಿನ ಅಥವಾ ಒಳಚರಂಡಿಯ ಸಂಪರ್ಕಕ್ಕೆ ಬಂದ ಮನುಷ್ಯರಿಗೆ ಇದು ಕಾಯಿಲೆಯನ್ನು ಉಂಟು ಮಾಡುವುದೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಕೋವಿಡ್ ಸೋಂಕು ಹೀಗೆ ಪ್ರಸಾರವಾಗಿರುವ ಬಗ್ಗೆ ಇದುವರೆಗೆ ಯಾವುದೇ ಸಾಕ್ಷ್ಯ ಲಭಿಸಿಲ್ಲ. ಸರಿಯಾಗಿ ವಿನ್ಯಾಸ ಮಾಡಿರುವ ಮತ್ತು ನಿರ್ವಹಣೆ ಹೊಂದಿರುವ ಒಳಚರಂಡಿ ವ್ಯವಸ್ಥೆಯ ಮೂಲಕ ಕೊರೊನಾ ರೋಗವನ್ನು ಉಂಟು ಮಾಡುವ ವೈರಸ್‌ ಪ್ರಸಾರವಾಗುವ ಅಪಾಯ ಸದ್ಯದ ಮಟ್ಟಿಗೆ ಕಡಿಮೆ ಎಂದೇ ಹೇಳಬಹುದು.

ಕೋವಿಡ್‌ 19 ವೈರಸ್‌ನಿಂದ ರಕ್ಷಿಸಿಕೊಳ್ಳಲು : ಒಳಚರಂಡಿ/ ನೈರ್ಮಲ್ಯ ಕೆಲಸಗಾರರು ಹೆಚ್ಚುವರಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೇ? :  ಕೋವಿಡ್‌ 19 ಉಂಟು ಮಾಡುವ ವೈರಸ್‌ ತ್ಯಾಜ್ಯ ನೀರಿನಲ್ಲಿಯೂ ಇರುವುದು ಕಂಡುಬಂದಿದೆ. ತ್ಯಾಜ್ಯ ನೀರಿನ ಸಂಪರ್ಕಕ್ಕೆ ಬಂದವರಿಗೆ ರೋಗ ತಗುಲಿರುವ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭಿಸಿಲ್ಲ, ಈ ಬಗ್ಗೆ ದತ್ತಾಂಶಗಳ ಕೊರತೆಯೂ ಇದೆ.

 ತ್ಯಾಜ್ಯ ನೀರಿನಲ್ಲಿ ಸಾರ್ಸ್‌-ಕೊವ್‌2 ಇದೆಯೇ ಎಂಬುದಾಗಿ ಸಂಶೋಧಿಸುತ್ತಿರುವ ದೇಶಗಳಾವುವು? :  ನೆದರ್‌ಲ್ಯಾಂಡ್ಸ್‌, ಅಮೆರಿಕ, ಫ್ರಾನ್ಸ್‌, ಆಸ್ಟ್ರೇಲಿಯ. ಗುಜರಾತ್‌ನ ಗಾಂಧಿನಗರ ಐಐಟಿಯ ಸಂಶೋಧಕರು ಈಚೆಗೆ ಕೊಳಚೆ ನೀರಿನಲ್ಲಿ ಕೊರೊನಾ ವೈರಾಣು ವಂಶವಾಹಿಯ ಅಂಶ ಪತ್ತೆ ಮಾಡಿದ್ದಾರೆ.

ಪ್ರಸ್ತುತ ಕೋವಿಡ್‌ ಸ್ಥಿತಿಯಲ್ಲಿ ತ್ಯಾಜ್ಯ ನೀರನ್ನು ತಪಾಸಣೆಗೊಳಪಡಿಸುವುದು ಏಕೆ ಮುಖ್ಯ? :  ಮಸಾಚ್ಯುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಲ್ಯಾಬ್‌ ಪರೀಕ್ಷೆಗಳು ಸೀಮಿತವಾಗಿವೆ (ಎಪ್ರಿಲ್‌ 2020). ಆದ್ದರಿಂದ ಸೋಂಕಿ ಗೊಳಗಾಗಿ, ಲಘು ಲಕ್ಷಣ ಹೊಂದಿದ್ದು, ಪರೀಕ್ಷೆಗೆ ಒಳಗಾಗದೆ ರೋಗ ಪ್ರಸಾರಕರಾಗಿರುವವರ ಸಂಖ್ಯೆ ಎಷ್ಟು ಎಂಬುದು ನಮಗೆ ತಿಳಿದಿಲ್ಲ. ಸ್ಥಳೀಯವಾಗಿ ತ್ಯಾಜ್ಯ ನೀರಿನಲ್ಲಿ ಈ ವೈರಸ್‌ ಉಪಸ್ಥಿತಿಯು ಹಾಟ್‌ಸ್ಪಾಟ್‌ಗಳನ್ನು ಪತ್ತೆ ಹಚ್ಚಿ ಲಕ್ಷಣರಹಿತರಾದ ಜನರನ್ನೂ ಪರೀಕ್ಷೆಗೊಳ ಪಡಿಸುವಲ್ಲಿ ಸಹಕಾರಿಯಾಗಬಹುದು.

ಶಂಕಿತ ಕೋವಿಡ್‌ ರೋಗಿಯಲ್ಲಿ ಶ್ವಾಸಾಂಗ ಲಕ್ಷಣಗಳಿಗಿಂತಲೂ ಮುನ್ನವೇ ಪಚನಾಂಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆಯೇ? :  ಚೀನದ ಹುಬೇ ಪ್ರಾಂತ್ಯದಲ್ಲಿ ಇತ್ತೀಚೆಗೆ ನಡೆದ ಸಂಶೋಧನೆಯೊಂದು ಶ್ವಾಸಾಂಗ ಸಂಬಂಧಿಯಾದ ಯಾವುದೇ ಲಕ್ಷಣಗಳು ಇಲ್ಲದೆ ಪಚನಾಂಗ ವ್ಯೂಹ ಸಂಬಂಧಿ ಲಕ್ಷಣಗಳೇ ಪ್ರಧಾನವಾಗಿರುವ ಪ್ರಕರಣಗಳನ್ನು ವರದಿ ಮಾಡಿದೆ.

ಶೌಚಾಲಯಗಳಲ್ಲಿ ಹನಿಬಿಂದುಗಳ ಮೂಲಕ ಸೋಂಕು ಪ್ರಸರಣವನ್ನು ಹೇಗೆ ತಡೆಯಬಹುದು? :  ವೈರಾಣು ಸಾಂದ್ರತೆಯನ್ನು ಕಡಿಮೆ ಮಾಡುವ ಗುಣಮಟ್ಟದ ವೆಂಟಿಲೇಶನ್‌ ವ್ಯವಸ್ಥೆ ಮತ್ತು ಪ್ಲಂಬಿಂಗ್‌ ವ್ಯವಸ್ಥೆಯನ್ನು ರೂಪಿಸಿ ನಿರ್ವಹಿಸಬಹುದು. ಶೌಚಾಲಯದ ನೆಲ, ಕಮೋಡ್‌ಗಳನ್ನು ಕ್ರಿಮಿನಾಶಕ ದ್ರಾವಣ ಉಪಯೋಗಿಸಿ ಚೆನ್ನಾಗಿ ತೊಳೆಯಬೇಕು. ಫ್ಲಶ್‌ ಮಾಡುವ ಸಂದರ್ಭದಲ್ಲಿ ಮುಚ್ಚಳ ಮುಚ್ಚಿರಬೇಕು.

 

ಡಾ| ಮಮತಾ ಬಲ್ಲಾಳ್‌

ಮೈಕ್ರೊಬಯಾಲಜಿ ಪ್ರೊಫೆಸರ್‌,

ಎಂಟರಿಕ್‌ ಡಿಸೀಸಸ್‌ ವಿಭಾಗ ಮುಖ್ಯಸ್ಥರು,

ಮಾಹೆ, ಮಣಿಪಾಲ

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.