ಎಂಡೊಮೆಟ್ರಿಯೋಸಿಸ್
Team Udayavani, Feb 28, 2021, 5:16 PM IST
ಗರ್ಭಕೋಶದ ಹೊರಗೆ ಎಂಡೊಮೆಟ್ರಿಯಲ್‌ನಂತಹ ಅಂಗಾಂಶ (ಗ್ರಂಥಿಗಳು ಮತ್ತು ಸ್ಟ್ರೋಮಾ) ಉಂಟಾಗುವುದನ್ನು ಎಂಡೊಮೆಟ್ರಿಯೋಸಿಸ್ ಎಂದು ಕರೆಯಲಾಗುತ್ತದೆ. ಇದರಿಂದ ದೀರ್ಘಕಾಲಿಕ ಉರಿಯೂತ, ಅಂಗಾಂಶಗಳಿಗೆ ಗಾಯ, ಮತ್ತು ಅಂಟುವಿಕೆ ತಲೆದೋರುತ್ತದೆ. ಇದು ಮಹಿಳೆಯ ಕಿಬ್ಬೊಟ್ಟೆ ಪ್ರದೇಶದಲ್ಲಿ ವಿಕಾರಕ್ಕೆ ಕಾರಣವಾಗುತ್ತದೆ.
ಎಂಡೊಮೆಟ್ರಿಯೋಸಿಸ್ ಪ್ರಜನನಾಂಗ ವ್ಯವಸ್ಥೆಗೆ ಸಂಬಂಧಿಸಿದ ಒಂದು ಅನಾರೋಗ್ಯವಾಗಿದೆ, ಇದು ಅಂಡಗಳು, ಗರ್ಭಕೋಶ, ಫಾಲೊಪಿಯನ್ ಕೊಳವೆಗಳು ಮತ್ತು ಪೆಲ್ವಿಸ್‌ನ ಭಿತ್ತಿಯ ಅಂಗಾಂಶಗಳ ಮೇಲೆ ಪರಿಣಾಮ ಬೀರುತ್ತದೆ. ಕರುಳುಗಳು, ಮೂತ್ರಕೋಶ, ಅಪೆಂಡಿಕ್ಸ್ ಮತ್ತು ಶ್ವಾಸಕೋಶದಂತಹ ಸೋಸುವ ಅಂಗಗಳಲ್ಲಿಯೂ ಇದು ತಲೆದೋರಬಹುದು.
ಋತುಚಕ್ರದಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಗಳು ಎಂಡೊಮೆಟ್ರಿಯಲ್ ಅಂಗಾಂಶಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಅಂಗಾಂಶಗಳು ಬೆಳವಣಿಗೆ ಹೊಂದುತ್ತವೆ, ದಪ್ಪಗಾಗುತ್ತವೆ ಮತ್ತು ಕಳಚಿಕೊಳ್ಳುತ್ತವೆ. ಕಾಲಾಂತರದಲ್ಲಿ ಕಳಚಿಕೊಂಡ ಅಂಗಾಂಶಗಳು ಎಲ್ಲೂ ಹೋಗಲಾಗದೆ ಪೆಲ್ವಿಸ್ ಭಾಗದಲ್ಲಿ ಸಂಗ್ರಹಗೊಳ್ಳುತ್ತವೆ.
ಪೆಲ್ವಿಸ್ ಭಾಗದಲ್ಲಿ ಹೀಗೆ ಸಂಗ್ರಹಗೊಂಡ ಅಂಗಾಂಶಗಳು ಕಿರಿಕಿರಿ, ಗಾಯ, ಪೆಲ್ವಿಸ್ ಭಾಗದ ಅಂಗಗಳ ಅಂಗಾಂಶಗಳಿಗೆ ಅಂಟಿಕೊಳ್ಳುವಿಕೆಯನ್ನು ಉಂಟು ಮಾಡುತ್ತವೆ.
ಎಂಡೊಮೆಟ್ರಿಯೋಸಿಸ್ ವೈಕಲ್ಯಕ್ಕೆ ಕಾರಣವಾಗುವ ಒಂದು ಸಾಮಾನ್ಯ ಅನಾರೋಗ್ಯವಾಗಿದೆ. ಇದರ ಉಂಟಾಗುವಿಕೆಯ ಪ್ರಮಾಣ ಎಷ್ಟರ ಮಟ್ಟಿಗಿದೆ ಎಂಬುದು ನಿಖರವಾಗಿ ತಿಳಿದುಬರುತ್ತಿಲ್ಲ. ಅನೇಕ ಪ್ರಕರಣಗಳು ವರದಿಯಾಗದೆ ಹೋಗುವುದು ಇದಕ್ಕೆ ಕಾರಣ. ಇದರ ಪತ್ತೆಗೆ ದೇಹ ಪ್ರವೇಶಕ ಪರೀಕ್ಷೆಗಳು ಅಗತ್ಯವಾಗಿರುತ್ತವೆ. ನೋವು ಮತ್ತು ಬಂಜೆತನ ಎರಡನ್ನೂ ಹೊಂದಿರುವ ಮಹಿಳೆಯರಲ್ಲಿ ಇದರ ಸಾಧ್ಯತೆಯು ಶೇ. 35ರಿಂದ ಶೇ. 50ರ ವರೆಗಿರುತ್ತದೆ. ಬಂಜೆಯರಲ್ಲಿ ಶೇ. 25 ಮಂದಿ ಮಹಿಳೆಯರು ಎಂಡೊಮೆಟ್ರಿಯೋಸಿಸ್ ಹೊಂದಿರುತ್ತಾರೆ. ಎಂಡೊಮೆಟ್ರಿಯೋಸಿಸ್‌ಗೆ ತುತ್ತಾಗಿರುವ ಮಹಿಳೆಯರಲ್ಲಿ ಶೇ. 30ರಿಂದ ಶೇ. 50 ಮಂದಿ ಬಂಜೆಯರಾಗಿರುತ್ತಾರೆ.
ಸಾರ್ವಜನಿಕರಲ್ಲಿ ಎಂಡೊಮೆಟ್ರಿಯೋಸಿಸ್‌ನ ಲಕ್ಷಣಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವುದು, ಕಾಯಿಲೆ ಇರುವ ಶಂಕೆ ಬೇಗನೆ ಉಂಟಾಗುವುದು ಮತ್ತು ಉತ್ತಮ ಇಮೇಜಿಂಗ್ ಪರೀಕ್ಷೆಗಳಿಂದಾಗಿ ಕರಾವಳಿ ಕರ್ನಾಟಕ ಮತ್ತು ಕೇರಳಗಳಲ್ಲಿ ಎಂಡೊಮೆಟ್ರಿಯೋಸಿಸ್ ಪ್ರಕರಣಗಳು ಹೆಚ್ಚು ಪ್ರಮಾಣದಲ್ಲಿ ವರದಿಯಾಗುತ್ತಿವೆ.
ಎಂಡೊಮೆಟ್ರಿಯೋಸಿಸ್ ಋತುಚಕ್ರ ಆರಂಭವಾಗುವ ವಯಸ್ಸಿನವರಿಂದ ತೊಡಗಿ ಋತುಚಕ್ರ ನಿಲ್ಲುವ ವಯಸ್ಸಿನ ವರೆಗಿನ ಎಲ್ಲ ವಯೋಮಾನದ ಮಹಿಳೆಯರನ್ನೂ ಬಾಧಿಸಬಹುದಾಗಿದೆ. ಆದರೆ ಪ್ರಜನನ ಸಾಮರ್ಥ್ಯ ಹೊಂದಿರುವ ವಯೋಮಾನದವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.
ಎಂಡೊಮೆಟ್ರಿಯೋಸಿಸ್‌ನ ಲಕ್ಷಣಗಳು :
ಋತುಚಕ್ರದ ಅವಧಿಯಲ್ಲಿ ನೋವುಸಹಿತ ಸೆಳವುಗಳು
ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ನೋವು (ಡೀಪ್ ಡಿಸ್ಪರೂನಿಯಾ)
ಬಂಜೆತನ
ಪೆಲ್ವಿಸ್ ಭಾಗದಲ್ಲಿ ದೀರ್ಘಕಾಲಿಕ ನೋವು
ಆಗಾಗ ಮೂತ್ರಶಂಕೆ, ವಿಶೇಷವಾಗಿ ಋತುಚಕ್ರದ ಆಸುಪಾಸಿನಲ್ಲಿ ರಕ್ತಾಂಶವುಳ್ಳ ಮೂತ್ರ ವಿಸರ್ಜನೆಯಂತಹ ಮೂತ್ರ ಜನಕಾಂಗ ವ್ಯವಸ್ಥೆಗೆ ಸಂಬಂಧಿಸಿದ ಲಕ್ಷಣಗಳು
ವಿಶೇಷವಾಗಿ ಋತುಚಕ್ರದ ಸಮಯದಲ್ಲಿ ಮಲವಿಸರ್ಜನೆಯ ಸಂದರ್ಭದಲ್ಲಿ ನೋವು ಮತ್ತು ರಕ್ತಸ್ರಾವ, ಮಲಬದ್ಧತೆ ಅಥವಾ ಬೇಧಿಯಂತಹ ಪಚನಾಂಗ ವ್ಯವಸ್ಥೆಗೆ ಸಂಬಂಧಿಸಿದ ಲಕ್ಷಣಗಳು
ಕೆಳ ಬೆನ್ನು ಅಥವಾ ಕಾಲುಗಳಲ್ಲಿ ನೋವು, ವಿಶೇಷವಾಗಿ ಋತುಚಕ್ರದ ಅವಧಿಯಲ್ಲಿ
ಎಂಡೊಮೆಟ್ರಿಯೋಸಿಸ್‌ಗೆ ಸಂಬಂಧಿಸಿದ ಈ ಲಕ್ಷಣಗಳು ರೋಗಿಯ ಸಾಮಾನ್ಯ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಕ್ಷೇಮದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾಗಿದೆ.
ಎಂಡೊಮೆಟ್ರಿಯೋಸಿಸ್‌ಗೆ ಕಾರಣಗಳು :
ಈ ಅನಾರೋಗ್ಯಕ್ಕೆ ನಿರ್ದಿಷ್ಟ ಕಾರಣಗಳೇನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಸಂಭಾವ್ಯ ಕಾರಣಗಳೆಂದರೆ:
- ದಾರಿತಪ್ಪಿದ (ರೆಟ್ರೊಗ್ರೇಡ್) ಋತುಸ್ರಾವ: ಋತುಸ್ರಾವದ ಸಂದರ್ಭದಲ್ಲಿ ಕೆಲವು ಅಂಗಾಂಶಗಳು ಫಾಲೊಪಿಯನ್ ಕೊಳವೆಯೊಳಗೆ ಪ್ರವೇಶಿಸಿ ಪೆಲ್ವಿಸ್ ಪ್ರದೇಶದ ಇತರ ಭಾಗಗಳಿಗೆ ಹೋಗುವುದು.
- ವಂಶವಾಹಿ ಅಂಶಗಳು: ಕುಟುಂಬಗಳಲ್ಲಿ ಎಂಡೊಮೆಟ್ರಿಯೋಸಿಸ್‌ಗೆ ತುತ್ತಾದವರು ಇರುವುದು. ಹಲವು ವಂಶವಾಹಿಗಳು ಮತ್ತು ಪಾರಿಸರಿಕ ಕಾರಣಗಳು ಇಲ್ಲಿ ಪಾತ್ರ ವಹಿಸುತ್ತವೆ. ಸಹೋದರಿಯರು ಈ ಅನಾರೋಗ್ಯಕ್ಕೆ ತುತ್ತಾಗುವ ಅಪಾಯ ಶೇ. 5ರಷ್ಟು ಹೆಚ್ಚಿರುತ್ತದೆ.
- ಹೊರಗೆ ಬೆಳೆಯುತ್ತಿರುವ ಎಂಡೊಮೆಟ್ರಿಯಲ್ ಅಂಗಾಂಶವನ್ನು ನಾಶ ಮಾಡುವಲ್ಲಿ ವಿಫಲವಾಗುವ ದೋಷಪೂರಿತ ರೋಗ ನಿರೋಧಕ ವ್ಯವಸ್ಥೆ.
- ಎಂಡೊಮೆಟ್ರಿಯೋಸಿಸ್‌ನ್ನು ಈಸ್ಟ್ರೋಜೆನ್ ಹಾರ್ಮೋನ್ ಪ್ರವರ್ಧಿಸುವುದೂ ಕಂಡುಬಂದಿದೆ.
ಎಂಡೊಮೆಟ್ರಿಯೋಸಿಸ್ ಪ್ರಜನನ ಸಾಮರ್ಥ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? :
ಪ್ರಜನನ ಸಾಮರ್ಥ್ಯದ ಮೇಲೆ ಎಂಡೊಮೆಟ್ರಿಯೋಸಿಸ್ ಅನೇಕ ರೀತಿಗಳಿಂದ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಎಂಡೊಮೆಟ್ರಿಯೋಸಿಸ್ ಬೆಳವಣಿಗೆ ಹೊಂದುತ್ತ ಹೋದಂತೆ, ಫಾಲೊಪಿಯನ್ ಕೊಳವೆಗಳು ವಕ್ರವಾಗುತ್ತವೆ ಹಾಗೂ ಅಂಡಾಶಯ ಮತ್ತು ಗರ್ಭಕೋಶಕ್ಕೆ ಅಂಟಿಕೊಂಡಂತಾಗಿ ವೀರ್ಯಾಣುಗಳು ಮತ್ತು ಅಂಡಗಳು ಪೆಲ್ವಿಸ್ ಭಾಗದಲ್ಲಿ ಚಲಿಸುವುದಕ್ಕೆ ಇರುವ ಅವಕಾಶ ಕಡಿಮೆಯಾಗುತ್ತದೆ. ಹಾಗೆಯೇ ಎಂಡೊಮೆಟ್ರಿಯೋಸಿಸ್ ಸಂಬಂಧಿತ ಉರಿಯೂತದಿಂದಾಗಿ ಪೆಲ್ವಿಸ್ ಭಾಗದ ವಾತಾವರಣದಲ್ಲಿ ಬದಲಾವಣೆ ಉಂಟಾಗುತ್ತದೆ. ಈ ಉರಿಯೂತಕಾರಕಗಳು ಮತ್ತು ಅಂಗಾಂಶಗಳು ಅಂಡ ಮತ್ತು ವೀರ್ಯಾಣುಗಳ ಕಾರ್ಯಚಟುವಟಿಕೆಗಳು, ಫಲದೀಕರಣ, ಭ್ರೂಣದ ಬೆಳವಣಿಗೆ ಮತ್ತು ಗರ್ಭಾಶಯದಲ್ಲಿ ಸ್ಥಾಪನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಎಂಡೊಮೆಟ್ರಿಯೋಸಿಸ್ ಹೊಂದಿರುವ ಮಹಿಳೆಯರಲ್ಲಿ ಉತ್ಪಾದನೆಯಾಗುವ ಅಂಡಗಳ ಗುಣಮಟ್ಟದ ಮೇಲೆಯೂ ಪ್ರತಿಕೂಲ ಪರಿಣಾಮ ಉಂಟಾಗುವುದು ಅಧ್ಯಯನಗಳಿಂದ ತಿಳಿದುಬಂದಿದೆ.
ಎಂಡೊಮೆಟ್ರಿಯೋಸಿಸ್ ಉಂಟಾಗುವುದಕ್ಕೆ ಅಪಾಯಾಂಶಗಳು :
- ಶಿಶುವಿಗೆ ಜನ್ಮ ನೀಡದೆ ಇರುವುದು.
- ಬೇಗನೆ ಋತುಮತಿಯಾಗುವುದು ಮತ್ತು ವಿಳಂಬವಾಗಿ ಋತುಸ್ರಾವ ನಿಲ್ಲುವುದು.
- ಕಡಿಮೆ ಅವಧಿಯ ಋತುಚಕ್ರ (27 ದಿನಗಳಿಗಿಂತಲೂ ಕಡಿಮೆ).
- 7 ದಿನಗಳಿಗಿಂತಲೂ ಹೆಚ್ಚು ಕಾಲ ಇರುವಂತಹ ಅಧಿಕ ಸ್ರಾವದ ಋತುಚಕ್ರ.
- ಕಡಿಮೆ ಬಿಎಂಐ
ಎಂಡೊಮೆಟ್ರಿಯೋಸಿಸ್ ಸಂಬಂಧಿ ಗರ್ಭಧಾರಣೆಯ ಸಮಸ್ಯೆಗಳು :
ಎಂಡೊಮೆಟ್ರಿಯೋಸಿಸ್ ಗರ್ಭಧಾರಣೆಯ ಸಂದರ್ಭದಲ್ಲಿ ಯಾವಾಗಲೂ ಹಿನ್ನಡೆಗೆ ಕಾರಣವಾಗುವುದಿಲ್ಲ. ಎಕ್ಟೋಪಿಕ್ ಅಥವಾ ಟ್ಯೂಬಲ್ ಗರ್ಭಧಾರಣೆ ಉಂಟಾಗುವುದು ಮೂರು ಪಟ್ಟು ಹೆಚ್ಚಳ, ಗರ್ಭಪಾತಗಳ ಸಾಧ್ಯತೆ ಎರಡು ಪಟ್ಟು ಹೆಚ್ಚಳವನ್ನು ಅಂಕಿ ಅಂಶಗಳು ತೋರಿಸಿಕೊಟ್ಟಿವೆ. ಎಂಡೊಮೆಟ್ರಿಯೋಸಿಸ್ ಅವಧಿಪೂರ್ವ ಹೆರಿಗೆ, ಪ್ಲಸೆಂಟಾ ಪ್ರಿವಿಯಾ, ಅವಧಿಗಿಂತ ಸಣ್ಣದಾದ ಶಿಶು, ಪ್ರಸೂತಿಯ ಬಳಿಕ ರಕ್ತಸ್ರಾವ ಮತ್ತು ಒವೇರಿಯನ್ ಸಿಸ್ಟ್ ಟೋರ್ಶನ್‌ನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಎಂಡೊಮೆಟ್ರಿಯೋಸಿಸ್ ರೋಗ ಪತ್ತೆ :
ಎಂಡೊಮೆಟ್ರಿಯೋಸಿಸನ್ನು ಯಾವುದೇ ಒಂದು ಸರಳ, ಸಾಮಾನ್ಯ ಪರೀಕ್ಷೆಯ ಮೂಲಕ ಪತ್ತೆ ಹಚ್ಚುವುದು ಸಾಧ್ಯವಾಗುವುದಿಲ್ಲ. ಎಂಡೊಮೆಟ್ರಿಯೋಸಿಸನ್ನು ಖಚಿತವಾಗಿ ಪತ್ತೆ ಹಚ್ಚುವುದಕ್ಕೆ ಇರುವ ವಿಶ್ವಾಸಾರ್ಹ ದಾರಿಗಳೆಂದರೆ, ಲ್ಯಾಪರೊಸ್ಕೊಪಿ ನಡೆಸಿ ಅಂಗಾಂಶವನ್ನು ಪಡೆಯುವುದು ಹಾಗೂ ಅದರ ಬಯಾಪ್ಸಿ ನಡೆಸುವುದು.
ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಜ್ಞರು ನಡೆಸಬಹುದಾದ ಇನ್ನೂ ಕೆಲವು ಪರೀಕ್ಷೆಗಳಿವೆ. ಅಲ್ಟ್ರಾಸೌಂಡ್, ಎಂಆರ್‌ಐ ಸ್ಕ್ಯಾನ್ ಮತ್ತು ಸ್ತ್ರೀರೋಗ ಶಾಸ್ತ್ರೀಯ ಪರೀಕ್ಷೆಗಳು ಇವುಗಳಲ್ಲಿ ಸೇರಿವೆ. ಇವುಗಳಲ್ಲಿ ಯಾವುದೂ ಎಂಡೊಮೆಟ್ರಿಯೋಸಿಸನ್ನು ಖಚಿತವಾಗಿ ಪತ್ತೆ ಹಚ್ಚಲಾರವು (ಆದರೆ ಅವು ಎಂಡೊಮೆಟ್ರಿಯೋಸಿಸ್ ಇರುವ ಸಾಧ್ಯತೆಯನ್ನು ಹೇಳಬಲ್ಲವು).
ಡಾ| ವಿದ್ಯಾಶ್ರೀ ಕಾಮತ್
ಕನ್ಸಲ್ಟಂಟ್ ಒಬ್‌ಸ್ಟೆಟ್ರೀಶಿಯನ್,
ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.