Expiry Date; ಔಷಧಗಳ ಅವಧಿ ಮುಗಿಯುವ ದಿನಾಂಕ; ರಾಷ್ಟ್ರೀಯ ಫಾರ್ಮಕೋವಿಜಿಲೆನ್ಸ್ ಸಪ್ತಾಹ
Team Udayavani, Sep 22, 2024, 3:05 PM IST
ಸೆಪ್ಟಂಬರ್ 17ರಿಂದ 23- ಈ ಒಂದು ವಾರವನ್ನು ರಾಷ್ಟ್ರೀಯ ಫಾರ್ಮಕೋವಿಜಿಲೆನ್ಸ್ ವಾರವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಔಷಧಗಳ ಅವಧಿ ಮುಗಿಯುವ ದಿನಾಂಕ ಅಂದರೆ ಏನು, ಅದರ ಬಗ್ಗೆ ನಾವು ತಿಳಿದಿರಬೇಕಾದದ್ದು ಯಾಕೆ ಮುಖ್ಯ, ಅವಧಿ ಮೀರಿದ ಔಷಧಗಳನ್ನು ಏಕೆ ಉಪಯೋಗಿಸಬಾರದು ಇತ್ಯಾದಿ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
ನೀವು ತಿಳಿದಿರಬೇಕಾದ ಮಾಹಿತಿಗಳು
ಶಾಮರಾಯರಿಗೆ ಅದೇನೋ ಆ ದಿವಸ ತಲೆಶೂಲೆ ಕಾಡತೊಡಗಿತ್ತು. ಮನೆಯಲ್ಲಿ ಯಾರೂ ಇಲ್ಲದ ಕಾರಣ ತಾವೇ ಕಪಾಟಿನಲ್ಲಿದ್ದ ಮಾತ್ರೆಯನ್ನು ತೆಗೆದುಕೊಂಡಿದ್ದರು. ಆಫೀಸಿನಿಂದ ಬಂದ ಸೊಸೆ ಮಾತ್ರೆಯ ಖಾಲಿ ಪ್ಯಾಕೆಟ್ ನೋಡಿ ಹೌಹಾರಿದ್ದಳು. ಅದು ಅವಧಿ ಮುಗಿದ ಮಾತ್ರೆ ಆಗಿದ್ದು, ವಿಲೇವಾರಿ ಮಾಡಲು ಮರೆತು ಹೋಗಿದ್ದಳು. ಮಾವನವರನ್ನು ಕರೆದುಕೊಂಡು ವೈದ್ಯರ ಬಳಿ ದೌಡಾಯಿಸಬೇಕಾದ ಪರಿಸ್ಥಿತಿ ಒದಗಿ ಬಂದಿತ್ತು.
ಔಷಧಗಳ ಎಕ್ಸ್‌ಪೈರಿ ದಿನಾಂಕ, ಆ ಔಷಧವನ್ನು ಸುರಕ್ಷಿತವಾಗಿ ಬಳಸಬಹುದಾದ ಅವಧಿಯ ಅಂತ್ಯ ದಿನಾಂಕವನ್ನು ಸೂಚಿಸುತ್ತದೆ. ಈ ದಿನಾಂಕವು ಔಷಧದ ಗುಣಮಟ್ಟ, ದಕ್ಷತೆ ಮತ್ತು ಸುರಕ್ಷೆಯನ್ನು ಖಚಿತಪಡಿಸುವ ಮುಖ್ಯವಾದ ಸೂಚಕವಾಗಿದೆ. ಔಷಧಗಳನ್ನು ಅವಧಿ ಮುಗಿದ ಅನಂತರ ಬಳಸುವುದರಿಂದ ಅದು ಅನಿರೀಕ್ಷಿತ ಪರಿಣಾಮಗಳನ್ನು ಉಂಟುಮಾಡಬಹುದು ಮತ್ತು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಎಲ್ಲ ಔಷಧೀಯ ಉತ್ಪನ್ನಗಳ ಲೇಬಲ್ ಮೇಲೆ ತಯಾರಿಸಿದ ದಿನಾಂಕ ಮತ್ತು ಅವಧಿ ಮುಗಿಯುವ ದಿನಾಂಕವನ್ನು ನಮೂದಿಸುವುದು ಕಾನೂನು ಪ್ರಕಾರ ಕಡ್ಡಾಯವಾಗಿದೆ. ಈ ಎರಡು ದಿನಾಂಕಗಳ ನಡುವಿನ ಅವಧಿಯನ್ನು ‘ಬಾಳಿಕೆಯ ಅವಧಿ’ ಅಥವಾ ಔಷಧದ ‘ಶೇಖರಣೆ ಅವಧಿ’ ಎಂದು ಕರೆಯುತ್ತಾರೆ. ನಿಗದಿತ ಶೇಖರಣ ಪರಿಸ್ಥಿತಿಗಳ ಅಡಿಯಲ್ಲಿ ಈ ಅವಧಿಯಲ್ಲಿ ಉತ್ಪನ್ನವು ಸ್ಥಿರವಾಗಿರುತ್ತದೆ (ಶೇ. 95ಕ್ಕೂ ಹೆಚ್ಚು ಪರಿಣಾಮಕಾರಿತ್ವವನ್ನು ಕಾಪಾಡುತ್ತದೆ) ಎಂದು ನಿರೀಕ್ಷಿಸಲಾಗುತ್ತದೆ. ಭಾರತದಲ್ಲಿ ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ಆ್ಯಕ್ಟ್‌ನ (Drugs and Cosmetics Act 1940) ಶೆಡ್ನೂಲ್ ಪಿ (Schedule P)ಯ ಪ್ರಕಾರ ಔಷಧಗಳ ಶೇಖರಣ ಅವಧಿಯನ್ನು ನಮೂದಿಸುವುದು ಕಡ್ಡಾಯ (ಸಾಮಾನ್ಯವಾಗಿ ಒಂದರಿಂದ ಐದು ವರ್ಷ).
ಔಷಧದ ಅವಧಿ ಮುಗಿಯಿತು: ಮುಂದೇನು?
ಎಕ್ಸ್‌ಪೈರಿ ದಿನಾಂಕ ಸಮೀಪಿಸುತ್ತಿದ್ದಂತೆ ಅಥವಾ ಅವಧಿಯ ಮುಕ್ತಾಯದ ಅನಂತರ ಔಷಧವು ಪೂರ್ಣವಾಗಿ ಪರಿಣಾಮತ್ವವನ್ನು ಕಳೆದುಕೊಳ್ಳುತ್ತದೆ ಅಥವಾ ವಿಷಕಾರಿಯಾಗಿ ಪರಿವರ್ತಿತವಾಗುತ್ತದೆ ಎಂದು ಅರ್ಥವಲ್ಲ. ಆದರೆ ಔಷಧಗಳ ಗುಣಮಟ್ಟದ ಖಚಿತತೆಯನ್ನು ಔಷಧ ತಯಾರಕರು ನೀಡಲಾರರು.
ಅವಧಿ ಮುಕ್ತಾಯದ ಅನಂತರ ಔಷಧಗಳು ವರ್ಷಾನುಗಟ್ಟಲೆ ತಮ್ಮ ಗುಣಮಟ್ಟವನ್ನು ಕಾಯ್ದುಕೊಂಡಿ ರುವ ಉದಾಹರಣೆಗಳು ವೈದ್ಯಲೋಕದ ಎದುರಿಗೆ ಇವೆ.
ಅಡ್ರಿನಲಿನ್‌ನಂತಹ ಜೀವರಕ್ಷಕ ಔಷಧಗಳು ಒಂದು ವರ್ಷದೊಳಗೆ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.
ಕೆಲವು ದ್ರವರೂಪದ ಔಷಧಗಳು, ಸಸ್ಪೆನ್ಶನ್‌ಗಳು ಅಥವಾ ಇಂಜೆಕ್ಷನ್‌ಗಳು ದೀರ್ಘಕಾಲ ಶೇಖರಣೆ ಮಾಡಿದಾಗ ಬಣ್ಣ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಬಳಕೆಗೆ ಅನರ್ಹವಾಗುತ್ತವೆ.
ಔಷಧದ ಜೀವಿತಾವಧಿಯ ಅನಂತರ, ಅದರ ರಾಸಾಯನಿಕ ಸಂಯೋಜನೆ ಬದಲಾಗಬಹುದು, ಇದು ಔಷಧವನ್ನು ಅಸಮರ್ಥ ಅಥವಾ ಅಪಾಯಕಾರಿಯನ್ನಾಗಿ ಮಾಡಬಹುದು.
ಔಷಧವು ಅದರ ಪರಿಣಾಮಕಾರಿತ್ವವನ್ನು ಕಳೆದುಕೊಳ್ಳಬಹುದು. ಅವಧಿ ಮುಗಿದ ಔಷಧಗಳು ರೋಗಕ್ಕೆ ನಿರೀಕ್ಷಿತ ಪರಿಣಾಮವನ್ನು ನೀಡದೆ ಇರುವ ಸಾಧ್ಯತೆ ಇದೆ.
ಯಾವುದೇ ಔಷಧವು ಎಕ್ಸ್‌ಪೈರಿ ಅವಧಿಯ ಅನಂತರ ಜೀವಹಾನಿ ಉಂಟುಮಾಡಿದ ಉದಾಹರಣೆಗಳು ಲಭ್ಯವಿಲ್ಲ.
ಆದರೆ ಅವಧಿ ಮುಗಿದ ಔಷಧದ ಬಳಕೆಯಿಂದ ಯಾವುದೇ ಹಾನಿ ಉಂಟಾದರೆ ತಯಾರಕರು ಜವಾಬ್ದಾರರಾಗಿರುವುದಿಲ್ಲ.
ಔಷಧಗಳನ್ನು ಹೇಗೆ ಶೇಖರಿಸಿ ಇಡಬೇಕು?
ಔಷಧಗಳನ್ನು ಸರಿಯಾದ ರೀತಿಯಲ್ಲಿ ಶೇಖರಿಸುವುದು ಅವುಗಳ ಗುಣಮಟ್ಟ, ಪರಿಣಾಮಕಾರಿತ್ವ, ಮತ್ತು ಬಾಳಿಕೆಯ ಅವಧಿಯನ್ನು ಉಳಿಸಲು ಅತ್ಯಂತ ಮುಖ್ಯ ಅಂಶವಾಗಿದೆ. ತಪ್ಪಾದ ಶೇಖರಣೆಯಿಂದ ಔಷಧಗಳು ಕ್ಷೀಣಿಸಬಹುದು, ಪರಿಣಾಮಕಾರಿತ್ವ ಕಳೆದುಕೊಳ್ಳಬಹುದು ಅಥವಾ ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡಬಹುದು. ಈ ನಿಟ್ಟಿನಲ್ಲಿ ಔಷಧಗಳ ಮೇಲೆ ನಮೂದಿಸಲ್ಪಟ್ಟಿರುವ ಸೂಚನೆಗಳನ್ನು ಪಾಲಿಸುವುದು ಬಹುಮುಖ್ಯ.
1. ತಾಪಮಾನ ನಿಯಂತ್ರಣ
- ಬಹುತೇಕ ಔಷಧಗಳನ್ನು ಸಾಮಾನ್ಯ ಕೋಣೆ ತಾಪಮಾನದಲ್ಲಿ (25°C&30°C)ಶೇಖರಿಸಬಹುದು.
- ಕೆಲವು ಔಷಧಗಳನ್ನು ಶೀತಲಸ್ಥಿತಿಯಲ್ಲಿ (ಫ್ರಿಜ್‌ನಲ್ಲಿ 2°C&8°C) ಇರಿಸಬೇಕು. ಉದಾಹರಣೆ: ಇಂಜೆಕ್ಷನ್‌ಗಳು.
- ವಿಪರೀತ ತಾಪಮಾನ ಅಥವಾ ತೀವ್ರ ತಂಪು ಔಷಧವನ್ನು ಘಾಸಿಗೊಳಿಸಬಹುದು.
2. ಚೆನ್ನಾಗಿ ಮುಚ್ಚಿದ ಪ್ಯಾಕೇಜು
- ಔಷಧಗಳನ್ನು ಅವುಗಳ ಮೂಲ ಪ್ಯಾಕೇಜಿಂಗ್‌ನಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ. ಇದು ಔಷಧವನ್ನು ತೇವಾಂಶ, ಬೆಳಕು, ಮತ್ತು ಗಾಳಿ ಸ್ಪರ್ಶದಿಂದ ರಕ್ಷಿಸುತ್ತದೆ.
3. ಬೆಳಕಿನಿಂದ ರಕ್ಷಣೆ
- ಸೂರ್ಯ ರಶ್ಮಿ ನೇರವಾಗಿ ಬೀಳುವುದರಿಂದ ಕೆಲವು ಔಷಧಗಳು ನಿರುಪಯುಕ್ತವಾಗಬಹುದು. ಅಂತಹ ಔಷಧಗಳನ್ನು ಕತ್ತಲಲ್ಲಿಯೂ ಶೀತಲ ಸ್ಥಳದಲ್ಲಿಯೂ ಇಡಬೇಕು.
4. ತೇವಾಂಶದ ನಿಯಂತ್ರಣ
- ಹೆಚ್ಚು ಆದ್ರತೆಯಿಂದ ಔಷಧಗಳು ತ್ವರಿತವಾಗಿ ಕ್ಷೀಣಿಸುತ್ತವೆ. ಔಷಧಗಳನ್ನು ಒಣ, ತೇವ ರಹಿತ ಸ್ಥಳದಲ್ಲಿ ಇಡಲು ಹೆಚ್ಚು ಒತ್ತು ಕೊಡಿ.
- ಸ್ನಾನದ ಮನೆ ಅಥವಾ ಅಡುಗೆಮನೆಯಲ್ಲಿ ಔಷಧಗಳನ್ನು ಇಡಬೇಡಿ, ಏಕೆಂದರೆ ಅಲ್ಲಿ ತೇವಾಂಶ ಹಾಗೂ ಉಷ್ಣಾಂಶದ ಪ್ರಮಾಣ ಹೆಚ್ಚು ಇರುತ್ತದೆ.
5. ಔಷಧಗಳನ್ನು ಮಕ್ಕಳ ವ್ಯಾಪ್ತಿಯಿಂದ ದೂರವಿಡಿ
- ಔಷಧಗಳನ್ನು ಮಕ್ಕಳ ಕೈಗೆ ಸಿಲುಕದ ರೀತಿಯಲ್ಲಿ ಶೇಖರಿಸಬೇಕು. ಆಕರ್ಷಕ ಪ್ಯಾಕೇಜಿಂಗ್ ಹೊಂದಿರುವ ಔಷಧಗಳು ಮಕ್ಕಳಿಗೆ ಅನಾಹುತಕಾರಿಯಾಗಿ ಪರಿಣಮಿಸಬಹುದು.
ಅವಧಿ ಮುಗಿದ ಅನಂತರ ಔಷಧಗಳನ್ನು ಏನು ಮಾಡಬೇಕು?
- ಅವಧಿ ಮೀರಿದ ಔಷಧಗಳನ್ನು ಬಳಸಬೇಡಿ.
- ನಿಮ್ಮ ಸ್ಥಳೀಯ ಫಾರ್ಮಸಿ ಅಥವಾ ಆರೋಗ್ಯ ಸಂಸ್ಥೆಗಳಲ್ಲಿ ಔಷಧ ತ್ಯಾಜ್ಯ ವಾಪಸು ನೀಡುವ ಕಾರ್ಯಕ್ರಮಗಳ ಬಗ್ಗೆ ಪರಿಶೀಲಿಸಿ – ಇಲ್ಲಿ ಬಳಸಿ ಮುಗಿದ ಅಥವಾ ಅವಧಿ ಮೀರಿದ ಔಷಧಗಳನ್ನು ಸುರಕ್ಷಿತವಾಗಿ ವಾಪಸು ನೀಡಬಹುದು.
- ಔಷಧವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ನಿಮ್ಮ ಸಾಮಾನ್ಯ ಗೃಹ ಕಸದೊಂದಿಗೆ ತ್ಯಜಿಸಬಹುದು.
- ಔಷಧಗಳನ್ನು ಶೌಚಾಲಯದಲ್ಲಿ ಅಥವಾ ಕಾಲುವೆಯಲ್ಲಿ ತ್ಯಜಿಸಬೇಡಿ, ಏಕೆಂದರೆ ಇದು ನೀರು ಸರಬರಾಜು ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ.
- ನಿಮ್ಮ ಖಾಸಗಿ ಮಾಹಿತಿಯನ್ನು ಕಾಪಾಡಲು ಔಷಧದ ಲೇಬಲ್ ಅನ್ನು ಕತ್ತರಿಸಿ ಅಥವಾ ಮುಚ್ಚಿ.
- ನಿಮ್ಮ ಸ್ಥಳೀಯ ಔಷಧಾಲಯ, ವೈದ್ಯರು ಅಥವಾ ತ್ಯಾಜ್ಯ ನಿರ್ವಹಣ ಅಧಿಕಾರಿಗಳನ್ನು ಸಂಪರ್ಕಿಸಿ, ಸುರಕ್ಷಿತ ತ್ಯಾಜ್ಯ ಮಾರ್ಗಗಳ ಬಗ್ಗೆ ಮಾಹಿತಿ ಪಡೆಯಿರಿ.
- ಆಸ್ಪತ್ರೆಗಳಲ್ಲಿ ದಹನ ಕ್ರಿಯೆಗಳಿಂದ ಇವುಗಳನ್ನು ನಾಶಪಡಿಸಲಾಗುತ್ತದೆ.
- ಅವಧಿ ಮೀರಿದ ಮತ್ತು ಅನಗತ್ಯ ಔಷಧಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಅಪಾಯಕಾರಿ. ಇದು ವೃದ್ಧರಲ್ಲಿ ಹಾಗೂ ಮಕ್ಕಳಲ್ಲಿ ಆಕಸ್ಮಿಕ ಸೇವನೆಗೆ ಕಾರಣವಾಗಬಹುದು. ಮಾತ್ರವಲ್ಲ ಮಾನವನ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯಕಾರಿಯಾಗಿಯೂ ಪರಿಣಮಿಸಬಹುದು. ವೈದ್ಯರ ಸಲಹೆಯನ್ನು ಯಾವುದೇ ಲೋಪವಿಲ್ಲದೆ ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ.
-ಡಾ| ಅಶೋಕ್ ಶೆಣೈ ಕೆ. ಫಾರ್ಮಕಾಲಜಿ ವಿಭಾಗ, ಕೆಎಂಸಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಪಾಟ್ನಾ-ಗುಜರಾತ್ ಟೈ
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.