ನೇತ್ರದಾನದ ಅರಿವು
Team Udayavani, Aug 18, 2019, 6:00 AM IST
ಮನುಷ್ಯನ ದೇಹದಲ್ಲಿರುವ ಒಂದು ಅವಿಭಾಜ್ಯ ಅಂಗವೆಂದರೆ ಅದು ಕಣ್ಣು. ಪ್ರಪಂಚವನ್ನು ಇಷ್ಟು ಸುಂದರವಾಗಿ ಕಾಣಲು ಕಾರಣವೇ ಕಣ್ಣು.ನಮ್ಮ ದೇಶದಲ್ಲಿ ಇಂದಿಗೂ ಒಂದು ಅಂದಾಜಿನ ಪ್ರಕಾರ 50 ಲಕ್ಷಕ್ಕೂ ಅಧಿಕ ಪುರುಷರೂ, ಮಹಿಳೆಯರೂ ಹಾಗೂ ಮಕ್ಕಳು ಅಂಧರಾಗಿ ಜೀವನ ನಡೆಸುತ್ತಿದ್ದಾರೆ. ಇವರೆಲ್ಲರೂ ಯಾವತ್ತೂ ಸೂರ್ಯನ ಕಿರಣಗಳನ್ನು ಕಂಡಿಲ್ಲ. ಪೂರ್ಣ ಹುಣ್ಣಿಮೆ ಚಂದ್ರನ ಸವಿ ಸವಿದಿಲ್ಲ. ಇಂಥವರಿಗೆ ಸಹಾಯ ಮಾಡುವ ಮನಸ್ಸು ನಾವೆಲ್ಲಾ ಮಾಡಬೇಕು. ನೇತ್ರದಾನ ಮಾಡುವವರ ಸಂಖ್ಯೆ ಇನ್ನೂ ಹೆಚ್ಚಬೇಕು. ಈ ನಿಟ್ಟಿನಲ್ಲಿ ಸಮಾಜದ ಸಂಘ ಸಂಸ್ಥೆಗಳು ಪ್ರಜ್ಞಾವಂತರು ಜಾಗೃತಿ ಮೂಡಿಸಬೇಕು.
ನಮ್ಮ ದೇಶದಲ್ಲಿ ಸಾಧಾರಣ ಒಂದು ವರ್ಷದಲ್ಲಿ 40 ಸಾವಿರ ಕಣ್ಣಿನ ದಾನ ನಡೆಯುತ್ತದೆ. ಆದರೆ ಅದರಲ್ಲಿ ಸುಮಾರು 30ರಿಂದ 35 ಸಾವಿರ ಕಣ್ಣು ಮಾತ್ರ ಉಪಯೋಗಿಸಲು ಸಿಗುತ್ತದೆ. ಸಾಧಾರಣ 5 ಸಾವಿರದಷ್ಟು ಕಣ್ಣು ಕಸಿ ಮಾಡಲು ಸಿಗುವುದಿಲ್ಲ. ಕೆಲವರು ತಡವಾಗಿ ದಾನ ಮಾಡಿದರೆ ಅದು ಉಪಯೋಗಕ್ಕೆ ಬರುವುದಿಲ್ಲ.
ಒಬ್ಬ ವ್ಯಕ್ತಿ ಸತ್ತ 6 ಗಂಟೆಯ ಒಳಗಡೆ ನೇತ್ರದಾನದ ಕಾರ್ಯ ನಡೆಯಬೇಕು. ಅಥವಾ ಸತ್ತ ಮೇಲೆ ಐಸ್‌ನಲ್ಲಿ ಶೀತಲೀಕರಣ ಮಾಡಿದ್ದರೆ 11 ಗಂಟೆಯ ಒಳಗಡೆ ನೇತ್ರದಾನದ ಕಾರ್ಯ ಮಾಡಬಹುದಾಗಿದೆ. ಹಾಗಾಗಿ ವ್ಯಕ್ತಿಯ ಮರಣಾನಂತರ ಮೃತರ ಸಂಬಂಧಿಕರು ಕೂಡಲೇ ನೇತ್ರಭಂಡಾರಕ್ಕೆ ಮಾಹಿತಿ ನೀಡಬೇಕು. ಜತೆಗೆ ವ್ಯಕ್ತಿ ಬದುಕಿರುವಾಗಲೇ ಹೆಸರನ್ನು ನೇತ್ರ ಭಂಡಾರದಲ್ಲಿ ನೊಂದಾಯಿಸುವುದರಿಂದ ನೇತ್ರ ಭಂಡಾರದ ಸಿಬ್ಬಂದಿ ಕಾರ್ಯ ಪ್ರವೃತ್ತರಾಗಲು ಸಹಕಾರಿಯಾಗುತ್ತದೆ. ಒಬ್ಬ ವ್ಯಕ್ತಿಯ ಎರಡು ಕಣ್ಣುಗಳು ಇಬ್ಬರು ಅಂಧರಿಗೆ ದಾನ ಮಾಡಬಹುದು.
ತಮ್ಮ ಕಣ್ಣುಗಳನ್ನು ಸಾವಿನ ನಂತರ ಯಾರು ದಾನ ಮಾಡಬಹುದು ಜಾತಿ, ಮತ, ವಯಸ್ಸು , ಲಿಂಗ ಅಥವಾ ಸಾಮಾಜಿಕ ಸ್ಥಿತಿ ಪರಿಗಣಿಸದೆ ಯಾವುದೇ ವ್ಯಕ್ತಿ ಕಣ್ಣುಗಳನ್ನು ದನ ಮಾಡಬಹುದು. ಕನ್ನಡಕ ಧರಿಸುವವರು, ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು, ಯಶಸ್ವಿಯಾಗಿ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರು , ಸಕ್ಕರೆ ಕಾಯಿಲೆ, ಬ್ಲಿಡ್ ಪ್ರಶರ್ ಇರುವವರು, ಅಸ್ತಮಾದವರು ಯಾರು ಕೂಡಾ ಅವರ ಕಣ್ಣುಗಳನ್ನು ದಾನ ಮಾಡಬಹುದು.
ನೇತ್ರದಾನಕ್ಕೆ ಯಾವುದಾದರೂ
ವೆಚ್ಚ ತಗಲುತ್ತದೆಯೇ?
ಕುಟುಂಬದವರಿಂದ ಯಾವುದೇ ಶುಲ್ಕ ಪಡೆಯುವು ದಿಲ್ಲ. ನೇತ್ರ ಸಂಗ್ರಹಣಾ ಕೇಂದ್ರದವರು ದಾನಿಗಳ ಮನೆಗೆ ಅಥವಾ ಮೃತಪಟ್ಟ ಸ್ಥಳಕ್ಕೆ ಬರುತ್ತಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇದು ಉಚಿತ ಸೇವೆಯಾಗಿದೆ.
ನೇತ್ರದಾನದ ಬಗ್ಗೆ
ಧಾರ್ಮಿಕ ನೀತಿಗಳೇನು?
ವಿಶ್ವದಾದ್ಯಂತ ಧಾರ್ಮಿಕ ನಾಯಕರು ನೇತ್ರದಾನಕ್ಕೆ ಬೆಂಬಲ ಸೂಚಿಸಿದ್ದು ಅತ್ಯುತ್ತಮ ಮಾನವೀಯ ಸೇವೆ ಎಂದಿದ್ದಾರೆ. ಸಾವಿನ ನಂತರ ಕಣ್ಣುಗಳು ಹಾಳಾಗುವುದು ಬೇಡ. ಕಣ್ಣು ಮಣ್ಣಾಗದಿರಲಿ ಎನ್ನುವುದು ನಮ್ಮ ಧ್ಯೇಯ. ಸಾವಿನ ನಂತರ ಕಣ್ಣುಗಳನ್ನು ದಾನ ಮಾಡಿ ಮತ್ತೂಬ್ಬ ಅಂಧರಿಗೆ ದೃಷ್ಟಿ ನೀಡಿ.
ಕಾರ್ನಿಯಾ ಎಂದರೇನು?
ಕಣ್ಣಿನ ಪಾಪೆಯ ಗಾಜಿನಂತಿರುವ ರಕ್ಷಾಭಾಗವೇ ಕಾರ್ನಿಯಾ. ಕಣ್ಣಿನ ಕಾರ್ನಿಯಾ ಒಂದು ಕ್ಯಾಮರಾ ತರಹ ಇರುತ್ತದೆ. ಕ್ಯಾಮರಾದಲ್ಲಿ ಮುಂದೆ ಒಂದು ಲೆನ್ಸ್ ಇರುತ್ತದೆ. ಹಾಗೂ ಹಿಂದೆ ಒಂದು ಸ್ಕ್ರೀನ್ ಇರುತ್ತದೆ. ಫೋಟೋ ತೆಗೆದ ಮೇಲೆ ಹೇಗೆ ಇಮೇಜ್ ಸ್ಕ್ರೀನಿನ ಮೇಲೆ ಬರುತ್ತದೆಯೋ ಅದೇ ತರಹ ನಮ್ಮ ಕಣ್ಣಿನ ಲೆನ್ಸ್‌ನ ಮುಂದೆ ಕಾರ್ನಿಯಾ ಹಾಗೂ ಲೆನ್ಸ್‌ನ ಹಿಂದೆ ರೆಟಿನಾ ಇರುತ್ತದೆ. ಎದುರಿನ ಕಾರ್ನಿಯಾಕ್ಕೆ ಹಾನಿಯಾಗಿದ್ದರೆ ಹಿಂದೆ ಬೆಳಕು ಹೋಗುವುದಿಲ್ಲ. ಆಗ ಆ ವ್ಯಕ್ತಿಗೆ ಕಾಣಿಸುವುದಿಲ್ಲ. ಈ ಕಾರ್ನಿಯಾಕ್ಕೆ ಹೇಗೆ ಹಾನಿಯಾಗುತ್ತದೆ ಎಂದರೆ ಮಕ್ಕಳ ಅಪೌಷ್ಟಿಕತೆಯಿಂದ, ಕಣ್ಣಿನ ಸೋಂಕಿನಿಂದ ಅಥವಾ ಕಣ್ಣಿನ ಕಪ್ಪು ಗುಡ್ಡೆಗೆ ಗಾಯವಾದಾಗ. ಈ ಕಾರ್ನಿಯಾಕ್ಕೆ ಹಾನಿಯಾಗಿ ದೃಷ್ಟಿ ಕಳೆದುಕೊಂಡಿದ್ದರೆ ಕಾರ್ನಿಯಾ ಮತ್ತೆ ಜೋಡಣೆ ಮಾಡುವುದರಿಂದ ಪುನಃ ದೃಷ್ಟಿಯನ್ನು ಮರಳಿ ಪಡೆಯಬಹುದು. ಕಾರ್ನಿಯಾಕ್ಕೆ ಇದುವರೆಗೂ ಯಾವುದೇ ಪರ್ಯಾಯವನ್ನು ಅಭಿವೃದ್ಧಿ ಪಡಿಸಿಲ್ಲ.
ವ್ಯಕ್ತಿಯು ಸತ್ತ ಕೂಡಲೇ ಏನು ಮಾಡಬೇಕು?
– ವ್ಯಕ್ತಿಯು ಸತ್ತ ಕೂಡಲೇ ಕಣ್ಣನ್ನು ಮುಚ್ಚಬೇಕು.
– ಫ್ಯಾನನ್ನು ಆರಿಸಬೇಕು. ಯಾವುದೇ ಕಾರಣಕ್ಕೂ ಫ್ಯಾನಿನ ಗಾಳಿ ನೇರವಾಗಿ ಕಣ್ಣಿಗೆ ಬೀಳಬಾರದು.
-ತಲೆಯನ್ನು 6 ಇಂಚಿನಷ್ಟು ಎತ್ತರಕ್ಕೆ ತಲೆದಿಂಬಿನಿಂದ ಎತ್ತರಿಸಬೇಕು. ಇದರಿಂದ ಕಣ್ಣು ತೆಗೆಯುವಾಗ ಕಡಿಮೆ ರಕ್ತಸ್ರಾವ ಆಗುತ್ತದೆ.
-ತಣ್ಣಗಿನ ಬಟ್ಟೆ ಅಥವಾ ಐಸ್‌ಕ್ಯೂಬನ್ನು ಹಣೆಯ ಮೇಲೆ ಇಡಬೇಕು.
-ಸಾಧ್ಯವಾದರೆ ಆ್ಯಂಟಿಬಯೋಟಿಕ್ ಕಣ್ಣಿನ ಡ್ರಾಪ್ಸ್ ಹಾಕುವುದರಿಂದ ಸೋಂಕನ್ನು ತಡೆಗಟ್ಟಬಹುದು.
-ಆದಷ್ಟು ಬೇಗನೆ ಹತ್ತಿರದ ನೇತ್ರ ಭಂಡಾರಕ್ಕೆ ತಿಳಿಸಬೇಕು.
-ಸರಿಯಾದ ವಿಳಾಸವನ್ನು ಫೋನ್ ನಂಬರನ್ನೂ ತಿಳಿಸಿದರೆ ನೇತ್ರ ಭಂಡಾರದ ಕಾರ್ಯಕರ್ತರು ಸರಿಯಾದ ಸಮಯಕ್ಕೆ ತಲುಪಬಹುದು.
-ಮರಣ ಪತ್ರ ಇದ್ದರೆ ಅದನ್ನು ರೆಡಿ ಇಡಬೇಕು.
-ನೇತ್ರದಾನದ ಕಾರ್ಯ ಶುರು ಮಾಡಲು ಇಬ್ಬರು ವ್ಯಕ್ತಿಗಳ ಒಪ್ಪಿಗೆ ಸಹಿ ಇರಬೇಕು.
-ಡಾ| ಸುಲತಾ ವಿ. ಭಂಡಾರಿ
ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರು
ಆಪ್ತಮಾಲಜಿ ವಿಭಾಗ
-ಡಾ| ಮನಾಲಿ ಹಜಾರಿಕಾ
ಕಾರ್ನಿಯಾ ಕನ್ಸಲ್ಟಂಟ್, ಆಪ್ತಮಾಲಜಿ ವಿಭಾಗ
ವಿನೀತ್ ನಾಯಕ್
ಐ ಬ್ಯಾಂಕ್ ಟೆಕ್ನೀಶಿಯನ್, ಕೆಎಂಸಿ, ಮಣಿಪಾಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.