ಆಹಾರದ ಕುರಿತಾದ ಸತ್ಯಗಳು ಮತ್ತು ಮಿಥ್ಯಗಳು
Team Udayavani, Mar 27, 2022, 7:25 AM IST
1.ಬೆಳಗ್ಗಿನ ಉಪಾಹಾರವನ್ನುತ್ಯಜಿಸಿದರೆ ಸಣ್ಣಗಾಗುತ್ತೇವೆ
ಇದು ನಿಜವಾಗಿಯೂ ತಪ್ಪು, ಏಕೆಂದರೆ ನಮ್ಮ ಬೆಳಗಿನ ಉಪಹಾರವು ಇಡೀ ದಿನದ ಕೆಲಸ ಕಾರ್ಯಗಳಿಗೆ ನಮ್ಮನ್ನು ತಯಾರು ಮಾಡುತ್ತದೆ. ಬೆಳಗ್ಗಿನ ಉಪಾಹಾರವನ್ನು ಸೇವಿಸದಿದ್ದಲ್ಲಿ ಬೇಗ ಸುಸ್ತಾಗುತ್ತದೆ ಮತ್ತು ಮಧ್ಯಾಹ್ನದ ಊಟದ ಪ್ರಮಾಣವು ಹೆಚ್ಚಾಗಬಹುದು. ಅದಲ್ಲದೆ ಹೊಟ್ಟೆ ಖಾಲಿ ಇರುವ ಕಾರಣ ಕೆಲಸದ ಕ್ಷಮತೆಗೆ ಏಕಾಗ್ರತೆಯ ಕೊರತೆಯಾಗಬಹುದು.
ನಮ್ಮ ದೇಹದ ಚಯಾಪಚಯ ಕ್ರಿಯೆಯ ದರ (body metabolic rate) ಕಡಿಮೆಯಾಗಿ ತೂಕ ಕಡಿಮೆಯಾಗುವ ಬದಲು ಹೆಚ್ಚಾಗಬಹುದು. ಅದಲ್ಲದೆ ಹೊಟ್ಟೆ ಹಸಿವೆಯಾಗುತ್ತಿರುವುದರಿಂದ ಬೇರೆ ಬೇರೆ ಆಹಾರಗಳಿಗೆ ಮನಸ್ಸು ಹಂಬಲಿಸಬಹುದು. ಆದ್ದರಿಂದ ಬೆಳಗ್ಗಿನ ಸಮತೋಲಿತ ಉಪಾಹಾರ ನಮ್ಮ ಇಡೀ ದಿನದ ಚಟುವಟಿಕೆಗಳಿಗೆ ಅಗತ್ಯವಾಗಿರುತ್ತದೆ
2.ಕೊಲೆಸ್ಟ್ರಾಲ್ ಇರುವವರು
ಮೊಟ್ಟೆಯ ಹಳದಿ ಭಾಗವನ್ನು ತಿನ್ನಬಾರದು
ಮೊಟ್ಟೆಯು ಪ್ರೊಟೀನ್ ಭರಿತ ಆಹಾರ. ಮೊಟ್ಟೆಯ ಬಿಳಿಭಾಗ ಪ್ರೋಟೀನ್ ಆಗರವಾದರೆ, ಮೊಟ್ಟೆಯ ಹಳದಿ ಭಾಗ ಕಬ್ಬಿಣಾಂಶ, ವಿಟಮಿನ್ ಬಿ 2 ಮತ್ತು ವಿಟಮಿನ್ ಬಿ 12, ವಿಟಮಿನ್ ಡಿಗಳನ್ನು ಹೊಂದಿದೆ. ನೀವು ದೈಹಿಕವಾಗಿ ಸಕ್ರಿಯರಾಗಿದ್ದರೆ ದಿನಕ್ಕೆ ಒಂದು ಇಡೀ ಮೊಟ್ಟೆಯನ್ನು ತೆಗೆದುಕೊಳ್ಳುವುದರಿಂದ ಏನೂ ಸಮಸ್ಯೆ ಇಲ್ಲ.
3. ಮಧುಮೇಹಿಗಳು ಸಕ್ಕರೆ
ತಿನ್ನಬಾರದು, ಬೆಲ್ಲ ತಿನ್ನಬಹುದು
ಸಕ್ಕರೆ ಮತ್ತು ಬೆಲ್ಲ ಕಬ್ಬಿನಿಂದಲೇ ತಯಾರಿಸಲ್ಪಡುತ್ತದೆ. ಅವೆರಡರಲ್ಲೂ ಇರುವುದು ಸರಳ ಸಕ್ಕರೆ. ಸಕ್ಕರೆ ಮತ್ತು ಬೆಲ್ಲ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಕೂಡಲೇ ಹೆಚ್ಚಾಗುತ್ತದೆ. ಆದ ಕಾರಣ ಸಕ್ಕರೆ, ಬೆಲ್ಲ, ಜೇನುತುಪ್ಪ ಮತ್ತು ಇತರ ಎಲ್ಲ ರೀತಿಯ ಸಿಹಿಯ ಮೂಲಗಳನ್ನು ಮಧುಮೇಹಿಗಳು ವರ್ಜಿಸಬೇಕು. ಆದರೆ ಆರೋಗ್ಯವಂತರು ಸಕ್ಕರೆಯ ಬದಲಾಗಿ ಬೆಲ್ಲ ಬಳಸಬಹುದು. ಬೆಲ್ಲವು ಮೆಗ್ನೀಷಿಯಂ, ಪೊಟ್ಯಾಶಿಯಂ, ಕ್ಯಾಲ್ಸಿಯಂಗಳನ್ನು ಹೊಂದಿದೆ.
4.ಆರೋಗ್ಯವಂತರಾಗಲು ಪೋಷಕಾಂಶ
ಪೂರಕಗಳನ್ನು ತೆಗೆದುಕೊಳ್ಳಬೇಕು
ಆರೋಗ್ಯವಂತರಾಗಲು ಪೋಷಕಾಂಶ ಪೂರಕಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಆರೋಗ್ಯಕರ ಜೀವನಶೈಲಿ ಮತ್ತು ಆರೋಗ್ಯಕರ ಆಹಾರಗಳ ಆಯ್ಕೆಗಳನ್ನು ಮಾಡಿಕೊಂಡು ಸಮತೋಲಿತ ಆಹಾರ ಸೇವಿಸುವ ಮೂಲಕ ಅಗತ್ಯವಿರುವ ಜೀವಸತ್ವಗಳು, ಖನಿಜಗಳು ಮತ್ತು ಪೋಷಕಾಂಶಗಳನ್ನು ಪಡೆಯಬಹುದು. ಜಾಹೀರಾತುಗಳಿಗೆ ಮಾರುಹೋಗಿ, ಯಾರೋ ಹೇಳಿದ್ದನ್ನು ಅಥವಾ ಎಲ್ಲೋ ಕೇಳಿದ್ದನ್ನು ಕುರುಡಾಗಿ ಅನುಸರಿಸುವ ಮುನ್ನ ಮುಂಜಾಗ್ರತೆ ವಹಿಸಬೇಕು.
5. ಸಸ್ಯಜನ್ಯ ಉತ್ಪನ್ನ ಮತ್ತು ಮಾತ್ರೆಗಳಿಂದ
ತೂಕ ಕಳೆದುಕೊಳ್ಳಲು ಸಾಧ್ಯ
ಮಾತ್ರೆಗಳು, ಪೂರಕ ಆಹಾರಗಳು ಮೊದಲಿಗೆ ಕೆಲಸ ಮಾಡುವಂತೆ ಕಂಡರೂ ಅದು ಶಾಶ್ವತವಲ್ಲ. ಇವುಗಳ ದೀರ್ಘಾವಧಿಯ ಸೇವನೆಯು ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ತೂಕ ಕಳೆದುಕೊಳ್ಳಲು ಸಮತೋಲಿತ ಆಹಾರಕ್ಕೆ ಪ್ರಾಮುಖ್ಯ ನೀಡಬೇಕು. ಫಾಸ್ಟ್‌ಫುಡ್, ಜಂಕ್‌ಫುಡ್‌ಗಳನ್ನು ವರ್ಜಿಸಬೇಕು. ಅತಿಯಾದ ಸಿಹಿ ಮತ್ತು ಕರಿದ ಪದಾರ್ಥಗಳನ್ನು ತಿನ್ನಬಾರದು. ಸಮತೋಲಿತ ಆಹಾರದ ಜತೆಗೆ ಸಮಯಕ್ಕೆ ಸರಿಯಾಗಿ ನಿದ್ದೆ, ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರದ ಆಯ್ಕೆಯಿಂದ ನಮ್ಮ ದೇಹದ ಒಟ್ಟು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಸಂತೃಪ್ತಿಯ ಜೀವನವನ್ನು ನಮ್ಮದಾಗಿಸಿಕೊಳ್ಳಬಹುದು. ಮಾರುಕಟ್ಟೆಯು ಪೂರಕಗಳು ಮತ್ತು ಊಟದ ಬದಲಿ ಯೋಜನೆಗಳೊಂದಿಗೆ ತುಂಬಿರುವಾಗ ಯಾವುದೇ ಉತ್ಪನ್ನಗಳಿಗೆ ಆಕರ್ಷಿತರಾಗಿ, ಪರಿಶೀಲಿಸದೆ ಬಳಸಬೇಡಿ.
6. ಹಾಲಿನ ಉತ್ಪನ್ನಗಳಿಂದ ತೂಕ ಹೆಚ್ಚುತ್ತದೆ
ಹಾಲು ಮತ್ತು ಹಾಲಿನ ಉತ್ಪನ್ನಗಳು ಪ್ರೊಟೀನ್ ಭರಿತ ಆಹಾರ. ಮೂಳೆಗಳ ಆರೋಗ್ಯಕರ ಬೆಳವಣಿಗೆಗೆ ಇದು ಸಹಕಾರಿ. ಕ್ಯಾಲ್ಸಿಯಂ, ವಿಟಮಿನ್ ಡಿ, ವಿಟಮಿನ್ ಎ ಮತ್ತು ಮೆಗ್ನಿàಷಿಯಂಗಳನ್ನು ಹೊಂದಿದೆ. ಹಾಲಿನ ಉತ್ಪನ್ನಗಳನ್ನು ಮಿತವಾಗಿ ಬಳಸಬಹುದು.
ಶಾರೀರಿಕ ವ್ಯಾಯಾಮವಿಲ್ಲದೆ, ಸಮಯಕ್ಕೆ ಸರಿಯಾಗಿ ತಿಂಡಿ, ಊಟಗಳನ್ನು ತೆಗೆದುಕೊಳ್ಳದೆ, ಸಿದ್ಧ ಆಹಾರದ ಪೊಟ್ಟಣಗಳ ಮೇಲೆ ಸಂಪೂರ್ಣ ಅವಲಂಬನೆ, ಹಾರ್ಮೋನುಗಳಲ್ಲಿನ ವೈಪರೀತ್ಯ, ಥೈರಾಯಿಡ್ ಸಮಸ್ಯೆಗಳು- ಹೀಗೆ ಅನೇಕ ಕಾರಣಗಳಿಂದ ತೂಕ ಹೆಚ್ಚಾಗುತ್ತದೆ. ಕೇವಲ ಹಾಲಿನ ಉತ್ಪನ್ನಗಳಿಂದ ತೂಕ ಹೆಚ್ಚಾಗುವುದಿಲ್ಲ.
7. ನಿಂಬೆಹಣ್ಣಿನ ರಸ ಮತ್ತು ಜೇನು ಸೇವಿಸಿದರೆ ತೆಳ್ಳಗಾಗುತ್ತಾರೆ
ನಿಂಬೆ ಹಣ್ಣಿನ ರಸ ಮತ್ತು ಜೇನುತುಪ್ಪವನ್ನು ತೂಕ ನಿರ್ವಹಣೆಗೆ ಅಮೃತವೆಂಬಂತೆ ಬಿಂಬಿಸಲಾಗಿದೆ. ನಿಂಬೆ ಮತ್ತು ಜೇನುತುಪ್ಪ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಆದರೆ ನಿಂಬೆ ರಸ ಮತ್ತು ಜೇನು ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ ಎಂಬ ನಂಬಿಕೆಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ತೂಕ ಕಳೆದುಕೊಳ್ಳಲು ಯಾವುದೇ ಒಂದು ಆಹಾರ ಅಥವಾ ಪಾನೀಯ ಮಾಂತ್ರಿಕವಾಗಿ ಕೆಲಸ ಮಾಡುವುದಿಲ್ಲ, ಬದಲಾಗಿ ಸಮಯಕ್ಕೆ ಸರಿಯಾಗಿ ಆರೋಗ್ಯಕರವಾಗಿ ತಯಾರಿಸಲ್ಪಡುವ ಶುಚಿಯಾದ ಆಹಾರವನ್ನು ಸೇವಿಸಿ, ನಿಯಮಿತ ವ್ಯಾಯಾಮವನ್ನು ಅಳವಡಿಸಿಕೊಂಡರೆ ಆರೋಗ್ಯಕರವಾಗಿ ತೂಕ ಕಳೆದುಕೊಳ್ಳಲು ಸಾಧ್ಯ.
8. ಆರೋಗ್ಯಕರ ಆಹಾರಕ್ಕೆ
ತುಂಬಾ ವ್ಯಯವಾಗುತ್ತದೆ
ಇದು ಕೇವಲ ಕಾಲ್ಪನಿಕ. ವಾಸ್ತವವಾಗಿ ಕಡಿಮೆ ಖರ್ಚಿನಲ್ಲೇ ನಾವು ಸಮತೋಲಿತ ಆಹಾರವನ್ನು ದಿನನಿತ್ಯ ತೆಗೆದುಕೊಳ್ಳಬಹುದು. ಹೆಚ್ಚು ಬೆಲೆಯ “ಸೂಪರ್‌ಫುಡ್’ಗಳಿಗೆ ಮಾರುಹೋಗದೆ ನಮ್ಮ ದಿನನಿತ್ಯ ಬಳಸುವ ಆಹಾರದಲ್ಲೇ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಮನೆಯಲ್ಲೇ ಬೆಳೆಯಬಹುದಾದ ತರಕಾರಿ ಹಣ್ಣುಗಳನ್ನು ಬೆಳೆಸಿ, ಬಳಸಬಹುದು. ಸ್ಥಳೀಯವಾಗಿ ಬೆಳೆಯುವ ಬೇಳೆಕಾಳು, ತರಕಾರಿಗಳಿಗೆ ಹೆಚ್ಚು ಪ್ರಾಮುಖ್ಯ ನೀಡಬೇಕು. ಆಹಾರ ಪದಾರ್ಥಗಳ ಬೆಲೆಗಳನ್ನು ನೋಡುವಾಗ ಆರೋಗ್ಯಕರ ಆಹಾರವು ದುಬಾರಿ ಅನ್ನಿಸಬಹುದು. ಆದರೆ ಅನಾರೋಗ್ಯಕರ ಆಹಾರ ಸೇವನೆಯಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ಪರಿಗಣಿಸಿದರೆ, ಆರೋಗ್ಯಕರ ಆಹಾರದ ಆಯ್ಕೆಗಳು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಿ ನೆಮ್ಮದಿಯ ಜೀವನ ನೀಡುತ್ತವೆ.
9. ಜಾಹೀರಾತುಗಳಲ್ಲಿ ಕೊಲೆಸ್ಟ್ರಾಲ್ ಫ್ರೀ ಎಂದು ತೋರಿಸುವ ಉತ್ಪನ್ನಗಳು ಆರೋಗ್ಯಕರ ಆಯ್ಕೆ
ಪ್ರತಿಯೊಂದು ಪ್ಯಾಕೇಜ್ ಮಾಡಿದ ಮತ್ತು ಸಂಸ್ಕರಿಸಿದ ಉತ್ಪನ್ನವು ಅದರಲ್ಲಿರುವ ಪೌಷ್ಟಿಕಾಂಶದ ಅಂಶವನ್ನು ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡಲು ಆಹಾರ ಲೇಬಲ್ ಹೊಂದಿರುತ್ತದೆ. “ನೂರಕ್ಕೆ ನೂರು ನೈಸರ್ಗಿಕ’ ಪದಾರ್ಥಗಳು ಸಾಕಷ್ಟು ಸಕ್ಕರೆ, ಉಪ್ಪು ಮತ್ತು ಕೊಬ್ಬನ್ನು ಕೂಡ ಹೊಂದಿರಬಹುದು – ಇವೆಲ್ಲವೂ ನೈಸರ್ಗಿಕ ಪದಾರ್ಥಗಳಾಗಿವೆ.
ಕೊಲೆಸ್ಟ್ರಾಲ್ ಕೇವಲ ಪ್ರಾಣಿ ಉತ್ಪನ್ನಗಳಲ್ಲಿ ಮಾತ್ರ ಕಂಡುಬರುತ್ತದೆ; ಆಲೂಗಡ್ಡೆ ಚಿಪ್ಸ್ ಮತ್ತು ತರಕಾರಿ ಆಧಾರಿತ ಕೆಲವು ತಿಂಡಿಗಳ ಪ್ಯಾಕೇಜಿಂಗ್ ಮೇಲೆ “ಕೊಲೆಸ್ಟ್ರಾಲ್-ಮುಕ್ತ’ ಎಂದು ಬರೆದಿರುತ್ತಾರೆ. ಆದ್ದರಿಂದ ಅದರ ಪ್ಯಾಕೇಜಿಂಗ್ ಮೇಲಿನ ಕ್ಲೇಮ್ ಆಧಾರದ ಮೇಲೆ ಉತ್ಪನ್ನವನ್ನು ಮೌಲ್ಯಮಾಪನ ಮಾಡಬೇಡಿ ಮತ್ತು ಒಂದೇ ಒಂದು ಪೋಷಕಾಂಶ ಅಥವಾ ಕ್ಯಾಲೊರಿಗಳ ಮೇಲೆ ಎಂದಿಗೂ ಮೌಲ್ಯಮಾಪನ ಮಾಡಬೇಡಿ.
ಪದಾರ್ಥಗಳ ಪಟ್ಟಿಯು ಆಹಾರ ಅಥವಾ ಪಾನೀಯ ಉತ್ಪನ್ನದಲ್ಲಿ ವಾಸ್ತವವಾಗಿ ಏನಿದೆ ಎಂಬುದರ ನಿಜವಾದ ವಿಷಯಗಳನ್ನು ಪಟ್ಟಿ ಮಾಡುತ್ತದೆ. ಉತ್ಪನ್ನವು ಟ್ರಾನ್ಸ್ ಕೊಬ್ಬನ್ನು ಹೊಂದಿದೆಯೇ ಎಂದು ಪರಿಶೀಲಿಸಲು ಪದಾರ್ಥಗಳ ಪಟ್ಟಿ ವಿಶೇಷವಾಗಿ ಉಪಯುಕ್ತವಾಗಿದೆ. ಸರಿಯಾಗಿ ಗಮನಿಸಿ ಅನಂತರ ಖರೀದಿಸಿ.
10. ಶಕ್ತಿವರ್ಧಕ ಪಾನೀಯ ನಮ್ಮ ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ
ಶಕ್ತಿವರ್ಧಕ ಪಾನೀಯವು ಅತಿಯಾದ ಸಕ್ಕರೆಯನ್ನು ಹೊಂದಿರುತ್ತದೆ. ಇದರಿಂದ ನಮ್ಮ ದೇಹದ ಬಲವರ್ಧನೆ ಸಾಧ್ಯವಿಲ್ಲ. ಇಂತಹ ಪಾನೀಯಗಳನ್ನು ಪ್ರತಿನಿತ್ಯ ಸೇವಿಸಿದರೆ ಅದು ಅನೇಕ ರೋಗಗಳಿಗೆ ಕಾರಣವಾಗಬಲ್ಲುದು. ಅದರ ಬದಲಾಗಿ ಎಳನೀರು, ತರಕಾರಿ ಸೂಪ್‌ಗ್ಳನ್ನು ತೆಗೆದುಕೊಳ್ಳಬಹದು.
ಆಧುನಿಕ ಡಿಜಿಟಲ್ ಯುಗದಲ್ಲಿ ಪರವಾನಗಿ ಪಡೆಯದ ಯಾವುದೋ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಕಾಯಿಲೆಗೆ ಪರಿಹಾರವಾಗಿ ಆಹಾರವನ್ನು ಬಳಸಲು ಅವೈಜ್ಞಾನಿಕ ಸಲಹೆ ಮತ್ತು ತ್ವರಿತ ತಂತ್ರಗಳನ್ನು ಕೊಡುತ್ತಾರೆ. ಸತ್ಯಾಂಶಗಳನ್ನು ಪರಿಶೀಲಿಸದೆಯೇ ಅವು ಇತರರಿಗೆ ರವಾನೆ ಆಗುತ್ತವೆ. ಯಾವುದೇ ಪ್ರಯೋಗಕ್ಕೆ ನಮ್ಮ ದೇಹವನ್ನು ಒಡ್ಡಿಕೊಳ್ಳುವ ಮುನ್ನ ವಿವೇಚನೆಯಿಂದ ಯೋಚಿಸಿ ನಿರ್ಧರಿಸುವ ಅಗತ್ಯವಿದೆ. ಇರುವುದೊಂದೇ ದೇಹ, ಅದನ್ನು ಸೂಕ್ಷ್ಮವಾಗಿ ಯೋಚಿಸಿ ಪೋಷಿಸುವುದನ್ನು ಕಲಿಯೋಣ.
-ಕವಿತಾ ಎಸ್.
ಪಥ್ಯಾಹಾರ ತಜ್ಞರು, ಕೆಎಂಸಿ ಆಸ್ಪತ್ರೆ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.