Fatty Liver Disease: ಫ್ಯಾಟಿ ಲಿವರ್ ಡಿಸೀಸ್
Team Udayavani, Oct 24, 2023, 12:30 PM IST
ಯಕೃತ್ತಿನಲ್ಲಿ ಕೊಬ್ಬು ಹೆಚ್ಚುವರಿಯಾಗಿ ಶೇಖರಗೊಳ್ಳುವುದೇ ಫ್ಯಾಟಿ ಲಿವರ್ ಕಾಯಿಲೆ. ಇದಕ್ಕೆ ತುತ್ತಾಗಿರುವ ಬಹುತೇಕ ಮಂದಿಯಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ; ಸಾಮಾನ್ಯ ಆರೋಗ್ಯ ತಪಾಸಣೆಯ ಸಂದರ್ಭದಲ್ಲಿ ಇದು ಪತ್ತೆಯಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಇದರಿಂದ ಯಕೃತ್ತಿಗೆ ಗಂಭೀರ ಸ್ವರೂಪದ ಹಾನಿ ಉಂಟಾಗಿ ಪ್ರಾಣಾಪಾಯಕ್ಕೂ ಕಾರಣವಾಗಬಹುದು. ಒಂದು ಶುಭ ವಿಚಾರ ಎಂದರೆ, ಬೇಗನೆ ಪತ್ತೆಹಚ್ಚಿ ಚಿಕಿತ್ಸೆ ಒದಗಿಸಿದರೆ ಫ್ಯಾಟಿ ಲಿವರ್ ಕಾಯಿಲೆಯನ್ನು ತಡೆಯಬಹುದು ಅಥವಾ ತೊಂದರೆಗೆ ಒಳಗಾಗಿರುವ ಯಕೃತ್ತನ್ನು ಪೂರ್ವ ಸ್ಥಿತಿಗೆ ತರಲು ಸಾಧ್ಯವಾಗಲೂ ಬಹುದು.
ಫ್ಯಾಟಿ ಲಿವರ್ ಕಾಯಿಲೆ ಉಂಟಾಗಲು ಕಾರಣವಾಗಬಲ್ಲ ಅಂಶಗಳು
- ಮದ್ಯಪಾನ
- ಬೊಜ್ಜು, ಮಧುಮೇಹ, ಡಿಸ್‌ಲಿಪಿಡೇಮಿಯ
- ಸ್ಟಿರಾಯ್ಡಗಳಂತಹ ಔಷಧಗಳು
- ಹೈಪೊ ಥೈರಾಯ್ಡಿಸಂನಂತಹ ಚಯಾಪಚಯ ಸಂಬಂಧಿ ಕಾಯಿಲೆಗಳು
ಫ್ಯಾಟಿ ಲಿವರ್ ಎಂದರೇನು?
ಯಕೃತ್ತು ನಮ್ಮ ದೇಹದ ಅತೀ ದೊಡ್ಡ ಅಂಗ. ಆಹಾರ ಜೀರ್ಣಗೊಳ್ಳಲು, ಶಕ್ತಿಯನ್ನು ದಾಸ್ತಾನು ಮಾಡಲು, ದೇಹದಿಂದ ತ್ಯಾಜ್ಯವಸ್ತುಗಳನ್ನು ಶೋಧಿಸಿ ಹೊರಹಾಕುವುದಕ್ಕೆ ಇದು ಸಹಾಯ ಮಾಡುತ್ತದೆ. ಯಕೃತ್ತಿನಲ್ಲಿ ಕೊಬ್ಬು ಅತಿಯಾಗಿ ಶೇಖರಗೊಳ್ಳುವ ಸ್ಥಿತಿಯೇ ಫ್ಯಾಟಿ ಲಿವರ್ ಕಾಯಿಲೆ. ಕೆಲವು ಮಂದಿಯಲ್ಲಿ ಇದು ಯಕೃತ್ತಿನ ಉರಿಯೂತವನ್ನು ಉಂಟುಮಾಡಬಹುದು. ಆಗ ಯಕೃತ್ತಿಗೆ ಹಾನಿಯಾಗುತ್ತದೆ, ಯಕೃತ್ತಿಗೆ ಗಾಯಗಳುಂಟಾಗಿ ಶಾಶ್ವತ ಹಾನಿ ಸಂಭವಿಸುತ್ತದೆ. ಮದ್ಯಪಾನಿಗಳಲ್ಲಿ, ಮಧುಮೇಹಿಗಳಲ್ಲಿ, ಬೊಜ್ಜು ಹೊಂದಿರುವವರಲ್ಲಿ ಮತ್ತು ಕೆಲವು ನಿರ್ದಿಷ್ಟ ಔಷಧ ಸೇವಿಸುತ್ತಿರುವವರಲ್ಲಿ ಫ್ಯಾಟಿ ಲಿವರ್ ಕಾಯಿಲೆ ತಲೆದೋರಬಹುದಾಗಿದೆ.
ಫ್ಯಾಟಿ ಲಿವರ್ ಕಾಯಿಲೆ ಯಾಕೆ ಕೆಟ್ಟದು?
ಬಹುತೇಕ ಫ್ಯಾಟಿ ಲಿವರ್‌ಗಳು ಯಾವುದೇ ಗಂಭೀರ ತೊಂದರೆಯನ್ನು ಉಂಟುಮಾಡುವುದಿಲ್ಲ. ಕೆಲವು ಮಂದಿಯಲ್ಲಿ (ಶೇ. 10-20) ಕಾಲಕ್ರಮೇಣ ತೊಂದರೆಯು ಉಲ್ಬಣಿಸಬಹುದು ಮತ್ತು ಸಿರೋಸಿಸ್‌ನಂತಹ ಗಂಭೀರ ಯಕೃತ್ ಕಾಯಿಲೆಗೆ ಎಡೆಮಾಡಿಕೊಡಬಹುದು. ಸಿರೋಸಿಸ್ ಉಲ್ಬಣಗೊಂಡು ಯಕೃತ್ ವೈಫಲ್ಯ ಉಂಟಾಗುವ ಸಾಧ್ಯತೆಗಳಿದ್ದು, ಇದಕ್ಕೆ ಯಕೃತ್ ಕಸಿಯಂತಹ ಅತೀವ ವೆಚ್ಚದಾಯಕ ಚಿಕಿತ್ಸೆ ಅಗತ್ಯವಾಗಬಹುದು.
ಫ್ಯಾಟಿ ಲಿವರ್ ಪತ್ತೆ ಹಚ್ಚುವುದು ಹೇಗೆ?
ಬಹುತೇಕ ಫ್ಯಾಟಿ ಲಿವರ್ ಪ್ರಕರಣಗಳು ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ. ರೂಢಿಗತ ಆರೋಗ್ಯ ತಪಾಸಣೆಯ ಸಂದರ್ಭದಲ್ಲಿ ರಕ್ತ ಪರೀಕ್ಷೆ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನ್ ಮೂಲಕ ಇದು ಪತ್ತೆಯಾಗುತ್ತದೆ. ಈ ಪರೀಕ್ಷೆಗಳ ವರದಿಯ ಆಧಾರದಲ್ಲಿ ಇತರ ರಕ್ತ ಪರೀಕ್ಷೆಗಳು, ಫೈಬ್ರೊಸ್ಕ್ಯಾನ್ (ಯಕೃತ್ತಿನಲ್ಲಿ ಕೊಬ್ಬು ಸಂಗ್ರಹ ಮತ್ತು ಯಕೃತ್ತಿಗೆ ಆಗಿರುವ ಗಾಯ ಪತ್ತೆಹಚ್ಚಲು ನಡೆಸಲಾಗುವ ವಿಶೇಷ ಅಲ್ಟ್ರಾಸೌಂಡ್ ಸ್ಕ್ಯಾನ್) ಮತ್ತು ಅಪರೂಪಕ್ಕೆ ಯಕೃತ್ತಿನ ಬಯಾಪ್ಸಿ ನಡೆಸಬೇಕಾಗಬಹುದು.
ಫ್ಯಾಟಿ ಲಿವರ್ ಕಾಯಿಲೆಯ ಲಕ್ಷಣಗಳು
ಫ್ಯಾಟಿ ಲಿವರ್ ಕಾಯಿಲೆಯು ಸಾಮಾನ್ಯವಾಗಿ ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ; ವ್ಯಕ್ತಿಯು ರೂಢಿಗತ ಆರೋಗ್ಯ ತಪಾಸಣೆಗೆ ಒಳಗಾಗುವ ಸಂದರ್ಭದಲ್ಲಿ ಇದು ಪತ್ತೆಯಾಗುತ್ತದೆ. ಕೆಲವರಲ್ಲಿ ಮಾತ್ರ ಹೊಟ್ಟೆಯ ಮೇಲ್ಭಾಗದಲ್ಲಿ ಸ್ವಲ್ಪ ನೋವು, ತೊಂದರೆ ಅನುಭವಕ್ಕೆ ಬರಬಹುದು. ಜಾಂಡಿಸ್ ಉಂಟಾಗುವ ಸಾಧ್ಯತೆಗಳಿದ್ದು, ಇದು ಉಲ್ಬಣಗೊಂಡಾಗ ಕಾಲುಗಳಲ್ಲಿ ಬಾವು, ದಣಿವಿನಂತಹ ಲಕ್ಷಣಗಳು ಕಂಡುಬರಬಹುದು.
ಮದ್ಯಪಾನ ಮತ್ತು ಫ್ಯಾಟಿ ಲಿವರ್ ಕಾಯಿಲೆ
ಭಾರೀ ಪ್ರಮಾಣದಲ್ಲಿ ತಿಂಗಳುಗಟ್ಟಲೆ ಅಥವಾ ವರ್ಷಗಟ್ಟಲೆ ಮದ್ಯಪಾನ ಮಾಡುವುದರಿಂದ ಫ್ಯಾಟಿ ಲಿವರ್ ಕಾಯಿಲೆ ಉಂಟಾಗಬಹುದು. ಮದ್ಯಪಾನ ಸಂಬಂಧಿ ಯಕೃತ್ ಕಾಯಿಲೆಗಳಲ್ಲಿ ಫ್ಯಾಟಿ ಲಿವರ್ ಕಾಯಿಲೆಯು ಅತ್ಯಂತ ಪ್ರಾಥಮಿಕ ಹಂತವಾಗಿದ್ದು, ನಿರ್ಲಕ್ಷಿಸಿದರೆ ಮದ್ಯಪಾನ ಸಂಬಂಧಿ ಹೆಪಟೈಟಿಸ್ ಮತ್ತು ಸಿರೋಸಿಸ್ ಆಗಿ ಉಲ್ಬಣಿಸಬಹುದು.
ಮಧುಮೇಹ ಮತ್ತು ಫ್ಯಾಟಿ ಲಿವರ್ – ಅಪಾಯಕಾರಿ ಅವಳಿಗಳು
ಮಧುಮೇಹಿಗಳಲ್ಲಿ ಯಕೃತ್ ಕಾಯಿಲೆಯಿಂದಾಗಿ ಮರಣ ಪ್ರಮಾಣವು ಶೇ. 4ರಷ್ಟು ಹೆಚ್ಚುತ್ತದೆ ಮತ್ತು ಇದರಿಂದ ಸಹ ಅನಾರೋಗ್ಯಗಳೂ ಅಧಿಕವಾಗುತ್ತವೆ. ಭಾರತದಲ್ಲಿ ಮಧುಮೇಹಿಗಳು ಸಂಖ್ಯೆ ಹೆಚ್ಚಿದ್ದು, ಫ್ಯಾಟಿ ಲಿವರ್ ಕಾಯಿಲೆಯು ದೀರ್ಘಕಾಲೀನ ಯಕೃತ್ ಕಾಯಿಲೆಯ ಪ್ರಧಾನ ಕಾರಣವಾಗಿರುವುದು ಕಂಡುಬಂದಿದೆ. ಶೇ. 50ರಿಂದ 80ರಷ್ಟು ಮಂದಿಯಲ್ಲಿ ಯಾವುದೇ ವಯಸ್ಸಿನಲ್ಲಿ ಫ್ಯಾಟಿ ಲಿವರ್ ಕಾಯಿಲೆಯು ಕಂಡುಬರಬಹುದು; ಬೊಜ್ಜು ಹೊಂದಿರುವ ಮಧುಮೇಹಿಗಳಲ್ಲಿ ಶತ ಪ್ರತಿಶತ ಕಂಡುಬರುತ್ತದೆ.
ಬೊಜ್ಜು ಮತ್ತು ಫ್ಯಾಟಿ ಲಿವರ್: ಇನ್ನೊಂದು ಅಪಾಯಕಾರಿ ಅವಳಿಗಳು
ಬೊಜ್ಜು ಹೆಚ್ಚಾದಂತೆ ಫ್ಯಾಟಿ ಲಿವರ್ ಕಾಯಿಲೆ ಉಂಟಾಗುವ ಸಾಧ್ಯತೆಗಳು ಹೆಚ್ಚುತ್ತ ಹೋಗುತ್ತವೆ. ಬಿಎಂಐ ಹೆಚ್ಚಿದಂತೆ ಫ್ಯಾಟಿ ಲಿವರ್ ಕಾಯಿಲೆಗೆ ತುತ್ತಾಗುವ ಅಪಾಯ 4.1ರಿಂದ 14 ಪಟ್ಟು ಅಧಿಕವಾಗುತ್ತದೆ. ದೀರ್ಘಕಾಲೀನ ಬೊಜ್ಜು ಇದ್ದು, ಮಧುಮೇಹ ಇದ್ದರೂ ಇಲ್ಲದಿದ್ದರೂ ಯಕೃತ್ ಹಾನಿ, ಫೈಬ್ರೋಸಿಸ್, ಸಿರೋಸಿಸ್ ಮತ್ತು ಯಕೃತ್ ಕ್ಯಾನ್ಸರ್ ಉಂಟಾಗುವ ಅಪಾಯ ಕಾಲಕ್ರಮೇಣ ಹೆಚ್ಚುತ್ತದೆ. ನಿಮ್ಮ ಮಾದರಿ ದೇಹತೂಕವನ್ನು ತಿಳಿದುಕೊಳ್ಳುವುದಕ್ಕೆ ವಿವಿಧ ಆನ್‌ಲೈನ್ ಕ್ಯಾಲ್ಕುಲೇಟರ್‌ಗಳು, ಮೊಬೈಲ್ ಆ್ಯಪ್‌ಗಳು ಲಭ್ಯವಿವೆ.
ಫ್ಯಾಟಿ ಲಿವರ್ ಕಾಯಿಲೆಯಿಂದ ಮಧುಮೇಹ, ಹೃದ್ರೋಗ ಅಥವಾ ಕ್ಯಾನ್ಸರ್‌ನಂತಹ ಭವಿಷ್ಯದ ಕಾಯಿಲೆಗಳ ಬಗ್ಗೆ ತಿಳಿಯಬಹುದೇ?
ಹೌದು. ಫ್ಯಾಟಿ ಲಿವರ್ ಹೊಂದಿರುವವರು ಕಾಲಕ್ರಮೇಣ ಮಧುಮೇಹ, ಕೊಲೆಸ್ಟರಾಲ್, ಹೃದಯ ಸಮಸ್ಯೆಗಳು ಮತ್ತು ಕೆಲವು ವಿಧದ ಕ್ಯಾನ್ಸರ್‌ಗಳಿಗೆ ತುತ್ತಾಗುತ್ತಾರೆ ಎಂದು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ. ಫ್ಯಾಟಿ ಲಿವರ್ ಕಾಯಿಲೆಯು ಮೆಟಬಾಲಿಕ್ ಸಿಂಡ್ರೋಮ್ ಎಂದು ಕರೆಯಲಾಗುವ ಕಾಯಿಲೆಗಳ ಸಮೂಹದ ಭಾಗವಾಗಿದ್ದು, ಇದಕ್ಕೆ ತುತ್ತಾಗಿರುವ ರೋಗಿಗಳು ಭವಿಷ್ಯದಲ್ಲಿ ಮೆಟಬಾಲಿಕ್ ಸಿಂಡ್ರೋಮ್ ಅನಾರೋಗ್ಯ ಗುತ್ಛದ ಭಾಗವಾಗಿರುವ ಮಧುಮೇಹ, ಕೊಲೆಸ್ಟರಾಲ್ ಮತ್ತು ಅಧಿಕ ರಕ್ತದೊತ್ತಡಗಳಿಂದ ಬಾಧಿತರಾಗುವ ಸಾಧ್ಯತೆಗಳು ಅಧಿಕವಾಗಿರುತ್ತವೆ.
ಫ್ಯಾಟಿ ಲಿವರ್ ಕಾಯಿಲೆಯನ್ನು ತಡೆಯಬಹುದೇ?
ಹೌದು. ಆರೋಗ್ಯಪೂರ್ಣ ದೇಹತೂಕ ಕಾಪಾಡಿಕೊಳ್ಳುವುದು (ಸಮತೋಲಿತ ಆಹಾರಾಭ್ಯಾಸ ಮತ್ತು ವ್ಯಾಯಾಮಗಳ ಸಹಾಯದಿಂದ) ಮತ್ತು ಮದ್ಯಪಾನ ವರ್ಜಿಸುವ ಮೂಲಕ ಫ್ಯಾಟಿ ಲಿವರ್ ಕಾಯಿಲೆ ಉಂಟಾಗದಂತೆ ತಡೆಯಬಹುದಾಗಿದೆ.
ಫ್ಯಾಟಿ ಲಿವರ್ ಕಾಯಿಲೆಯಿಂದ ರಕ್ಷಿಸಿಕೊಳ್ಳಲು ಸಲಹೆಗಳೇನು?
ಈ ಕೆಳಗಿನ ಪ್ರಾಥಮಿಕ ನಿಯಮಗಳನ್ನು ಪಾಲಿಸಿ: ¬ ಮದ್ಯಪಾನ ಮಾಡದಿರಿ ¬ ಮಾದರಿ ದೇಹತೂಕವನ್ನು ಕಾಪಾಡಿಕೊಳ್ಳಿ ¬ ಆರೋಗ್ಯಪೂರ್ಣ ಆಹಾರಾಭ್ಯಾಸ ಪಾಲಿಸಿ ಮತ್ತು ವ್ಯಾಯಾಮ ಮಾಡಿ ¬ ಅನಗತ್ಯ ಔಷಧ ಮತ್ತು ಆರೋಗ್ಯಪೂರಕ ಆಹಾರ ಸೇವನೆ ತಪ್ಪಿಸಿ
ದೇಹತೂಕ ಇಳಿಸಿಕೊಳ್ಳುವುದ ರಿಂದ ಫ್ಯಾಟಿ ಲಿವರ್ ಕಡಿಮೆಯಾಗುತ್ತದೆಯೇ?
ಹೌದು. ದೇಹತೂಕವನ್ನು ಶೇ. 5ರಷ್ಟು ಕಡಿಮೆ ಮಾಡಿಕೊಂಡರೆ ಯಕೃತ್ತಿನಲ್ಲಿ ಸಂಗ್ರಹವಾಗಿರುವ ಕೊಬ್ಬು ಶೇ. 7-10ರಷ್ಟು ಕಡಿಮೆಯಾಗುತ್ತದೆ ಮತ್ತು ನಿಧಾನವಾಗಿ ತೂಕ ಇಳಿಸಿಕೊಳ್ಳುವುದರಿಂದ ಫ್ಯಾಟಿ ಲಿವರ್ ಕ್ರಮೇಣ ಪೂರ್ವಸ್ಥಿತಿಗೆ ಮರಳುತ್ತದೆ. ಕಡಿಮೆ ಕಾಬೊìಹೈಡ್ರೇಟ್, ಕಡಿಮೆ ಕೊಬ್ಬಿರುವ ಆಹಾರ ಸೇವನೆ, ಜಂಕ್ ಆಹಾರಗಳನ್ನು ಸೇವಿಸದಿರುವುದು ಮತ್ತು ನಿಯಮಿತವಾಗಿ ಏರೋಬಿಕ್ ವ್ಯಾಯಾಮಗಳನ್ನು ಮಾಡುವುದರ ಮೂಲಕ ದೇಹದಿಂದ ಹೆಚ್ಚುವರಿ ಕ್ಯಾಲೊರಿಗಳನ್ನು ತೆಗೆದುಹಾಕಬಹುದು.
ಫ್ಯಾಟಿ ಲಿವರ್ ಕಾಯಿಲೆಯಿದ್ದರೆ ಮದ್ಯಪಾನ ಮಾಡಬಹುದೇ?
ಇಲ್ಲ, ಮಾಡಲೇಬಾರದು. ಮದ್ಯಪಾನವು ಫ್ಯಾಟಿ ಲಿವರ್ ಕಾಯಿಲೆ ಉಂಟಾಗಲು ಪ್ರಮುಖ ಕಾರಣಗಳಲ್ಲಿ ಒಂದು. ಮಧುಮೇಹ, ಬೊಜ್ಜು ಮತ್ತು ಮದ್ಯಪಾನಗಳು ಜತೆಗೂಡಿದರೆ ಅಪಾಯ ಖಚಿತ. ಆದ್ದರಿಂದ ಫ್ಯಾಟಿ ಲಿವರ್ ಹೊಂದಿರುವವರು ಕಡ್ಡಾಯವಾಗಿ ಮದ್ಯಪಾನವನ್ನು ತ್ಯಜಿಸಬೇಕು.
ಫ್ಯಾಟಿ ಲಿವರ್‌ಗೆ ಯಶಸ್ವಿಯಾಗಿ ಚಿಕಿತ್ಸೆ ಒದಗಿಸುವುದು ಸಾಧ್ಯವೇ?
ಹೌದು. ಮದ್ಯಪಾನವನ್ನು ತ್ಯಜಿಸುವುದು ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಫ್ಯಾಟಿ ಲಿವರ್ ಕಾಯಿಲೆಗೆ ಮೊತ್ತಮೊದಲ ಚಿಕಿತ್ಸಾ ಕ್ರಮಗಳು. ನಿಮ್ಮ ಹಾಲಿ ದೈಹಿಕ ಸ್ಥಿತಿಗತಿಗಳು ಮತ್ತು ಜೀವನಶೈಲಿ ಅಭ್ಯಾಸಗಳನ್ನು ಆಧರಿಸಿ ವೈದ್ಯರು ಈ ಕೆಳಗಿನ ಸಲಹೆಗಳನ್ನು ನೀಡಬಹುದಾಗಿದೆ:
ತೂಕ ಕಳೆದುಕೊಳ್ಳುವುದು – ಪಥ್ಯಾಹಾರ ಮತ್ತು ವ್ಯಾಯಾಮ
– ದಿನಕ್ಕೆ 30-45 ನಿಮಿಷಗಳ ವ್ಯಾಯಾಮ
– ಕ್ಯಾಲೊರಿಗಳು, ಸ್ಯಾಚುರೇಟೆಡ್ ಫ್ಯಾಟ್ ಕಡಿಮೆ ಇರುವ; ಪ್ರೊಟೀನ್ ಮತ್ತು ನಾರಿನಂಶ ಸಮೃದ್ಧವಾಗಿರುವ ಆಹಾರ ಸೇವಿಸಿ
ಮದ್ಯಪಾನವನ್ನು ತ್ಯಜಿಸಿ
ಮಧುಮೇಹ, ಕೊಲೆಸ್ಟರಾಲ್‌ನಂತಹ ಸಹ ಅನಾರೋಗ್ಯಗಳನ್ನು ನಿಯಂತ್ರಣದಲ್ಲಿಡಿ
ಕೊನೆಯದಾಗಿ
ಬೊಜ್ಜು, ಮಧುಮೇಹ ಮತ್ತು ಮದ್ಯಪಾನ ಚಟಗಳ ಹೆಚ್ಚಳದಿಂದಾಗಿ ಫ್ಯಾಟಿ ಲಿವರ್ ಕಾಯಿಲೆಯು ದೇಶದಲ್ಲಿ ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಮದ್ಯಪಾನ ಮಾಡದೆ ಇರುವವರಲ್ಲಿ ಫ್ಯಾಟಿ ಲಿವರ್ ಕಾಯಿಲೆ ಉಂಟಾಗುವುದಕ್ಕೆ ಅನಾರೋಗ್ಯಕರ ಜೀವನ ಶೈಲಿ ಪ್ರಧಾನ ಕಾರಣವಾಗಿದ್ದರೆ ಈ ಕುರಿತಾದ ತಿಳಿವಳಿಕೆಯು ಈ ಅನಾರೋಗ್ಯ ಉಂಟಾಗದಂತೆ ತಡೆಯಲು ಪ್ರಾಮುಖ್ಯವಾಗಿದೆ. ದೇಹತೂಕ (ಎಷ್ಟು ದೇಹ ತೂಕ ಹೊಂದಿದ್ದೀರಿ), ಆಹಾರ ಸೇವನೆ (ಏನನ್ನು ತಿನ್ನುತ್ತೀರಿ) ಗಳ ಮೇಲೆ ನಿಗಾ ಇರಿಸಿಕೊಳ್ಳುವುದು ಮತ್ತು ವ್ಯಾಯಾಮ (ಏನು ಮಾಡುತ್ತೀರಿ) ಮಾಡುವುದು ಆರೋಗ್ಯಪೂರ್ಣ ದೀರ್ಘ ಜೀವನ ನಡೆಸಲು ಮೂರು ಮುಖ್ಯ ಅಂಶಗಳಾಗಿವೆ.
-ಡಾ| ಗಣೇಶ್ ಭಟ್
ಪ್ರೊಫೆಸರ್ ಮತ್ತು ಯೂನಿಟ್ ಹೆಡ್,
ಗ್ಯಾಸ್ಟ್ರೊಎಂಟರಾಲಜಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.