ಭ್ರೂಣದ ಪ್ರಗತಿ ಮತ್ತು ಬೆಳವಣಿಗೆ


Team Udayavani, Jan 3, 2021, 12:33 PM IST

ಭ್ರೂಣದ ಪ್ರಗತಿ ಮತ್ತು ಬೆಳವಣಿಗೆ

ಮೊದಲ ಮಗುವನ್ನು ಎದುರು ನೋಡುತ್ತಿರುವ ಪ್ರತೀ ದಂಪತಿಯೂ ಅವಧಿಯಲ್ಲಿ ಅನೇಕ ವಿಧದ ಭಾವನಾತ್ಮಕ ಏರಿಳಿತಗಳಿಗೆ ಒಳಗಾಗುತ್ತಾರೆ. ಗರ್ಭಧಾರಣೆಗೆ ಮುನ್ನಾದಿನಗಳ ಆತಂಕ/ ಒತ್ತಡ ಒಂದೆಡೆಯಾದರೆ, ಬಳಿಕ ಗರ್ಭಧಾರಣೆ ಖಚಿತವಾದ ಬಳಿಕದ ಖುಷಿ ಇನ್ನೊಂದೆಡೆ. ಆಮೇಲೆ ಸರಣಿ ಸ್ಕ್ಯಾನ್‌ಗಳ ಬಳಿಕ ಗರ್ಭಿಣಿಯ ಉದರದಲ್ಲಿ ಆರೋಗ್ಯಯುತ ಶಿಶುವಿನ ಇರುವಿಕೆ ತಿಳಿದುಬಂದ ಬಳಿಕ ಸಂತಸ ಇಮ್ಮಡಿಸುತ್ತದೆ. ಆರೋಗ್ಯವಂತ ಶಿಶು ಜನನವಾಗಿ ಅದರ ಮೊದಲ ನೋಟ ಮತ್ತು ಮೊದಲ ಅಳು ಖುಷಿಯ ಉತ್ತುಂಗಕ್ಕೆ ಒಯ್ಯುತ್ತದೆ. ಗರ್ಭಧಾರಣೆಯ ಅವಧಿಯುದ್ದಕ್ಕೂ ದಂಪತಿಗೆ ಭ್ರೂಣದ ಪ್ರಗತಿ ಮತ್ತು ಬೆಳವಣಿಗೆ – ಗರ್ಭದಲ್ಲಿ ಅದರ ಬೆಳವಣಿಗೆ ಮತ್ತು ಸಹಜತೆಗಳ ಬಗ್ಗೆ ಅನೇಕ ಸಂಶಯಗಳು ಮತ್ತು ಶಂಕೆಗಳು ಕಾಡುತ್ತಿರುತ್ತವೆ. ಮುಂದೆ ಜಗತ್ತಿಗೆ ಕಾಲಿಡಲಿರುವ ಕರುಳ ಕುಡಿಯ ಗರ್ಭದೊಳಗಿನ ಬೆಳವಣಿಗೆಯನ್ನು ವಿವರಿಸುತ್ತ ಸಾಮಾನ್ಯವಾದ ಇಂತಹ ಎಲ್ಲ ಸಂಶಯಗಳು ಮತ್ತು ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನವನ್ನು ಲೇಖನದಲ್ಲಿ ಮಾಡಲಾಗಿದೆ.

ಮಹಿಳೆಯ ದೇಹವು ಪ್ರತೀ ತಿಂಗಳು ಕೂಡ ಒಂದು ಪ್ರಜನನಾತ್ಮಕ ಚಕ್ರವನ್ನು ಅನುಭವಿಸುತ್ತದೆ. ಅದು ಎರಡು ವಿಧಗಳಲ್ಲಿ ಕೊನೆಯಾಗಬಹುದಾಗಿದೆ: ಒಂದನೆಯದು, ಋತುಚಕ್ರ; ಇನ್ನೊಂದು ಗರ್ಭಧಾರಣೆ. ಮಹಿಳೆಯ ಪ್ರಜನನಾತ್ಮಕ ವರ್ಷಗಳಲ್ಲಿ ಈ ಚಕ್ರ ಸತತವಾಗಿ ನಡೆಯುತ್ತದೆ – ಆಕೆಯ ಹದಿಹರಯದಿಂದ ತೊಡಗಿ ಸರಿಸುಮಾರು 50 ವರ್ಷ ವಯಸ್ಸಿನ ಹೊತ್ತಿನಲ್ಲಿ ಋತುಚಕ್ರ ಬಂಧ ಅನುಭವಿಸುವಲ್ಲಿಯ ವರೆಗೆ.

ಪ್ರಜನನಾತ್ಮಕ ಚಕ್ರವು ಗರ್ಭಧಾರಣೆಯಾಗಿ ಫ‌ಲಿಸಬೇಕಾದರೆ ಹಲವು ಪ್ರಕ್ರಿಯೆ/ ಹೆಜ್ಜೆಗಳು ಘಟಿಸಬೇಕಾಗಿರುತ್ತವೆ. ಮೊದಲನೆಯದಾಗಿ ತತ್ತಿಗಳ ಗುಂಪು (ಊಸೈಟ್ಸ್‌ ಎನ್ನುತ್ತಾರೆ) ಅಂಡಾಶಯದಿಂದ ಹೊರಬೀಳುವುದಕ್ಕಾಗಿ (ಓವುಲೇಶನ್‌) ಸಿದ್ಧವಾಗಬೇಕು. ಈ ತತ್ತಿಗಳು ಅಥವಾ ಅಂಡಗಳು ಫಾಲಿಕಲ್ಸ್‌ ಎಂಬುದಾಗಿ ಕರೆಯಲ್ಪಡುವ ಸಣ್ಣ, ದ್ರವ ತುಂಬಿದ ಗಡ್ಡೆಗಳಲ್ಲಿ ಅಭಿವೃದ್ಧಿಯಾಗುತ್ತವೆ. ಪ್ರತೀ ಅಪ್ರಾಪ್ತ ಅಂಡಕ್ಕೆ ಈ ಫಾಲಿಕಲ್‌ಗ‌ಳು ಸಣ್ಣ ಪಾತ್ರೆಗಳಂತೆ ಕೆಲಸ ಮಾಡುವುದನ್ನು ಕಲ್ಪಿಸಿಕೊಳ್ಳಿ. ಅಂಡಗಳ ಈ ಸಮೂಹದಿಂದ ಒಂದು ಮಾತ್ರ ಪ್ರೌಢವಾಗಿ ಪ್ರಜನನ ಚಕ್ರದಲ್ಲಿ ಮುಂದುವರಿಯುತ್ತದೆ. ಪ್ರೌಢ ಅಂಡವಿರುವ ಫಾಲಿಕಲ್‌ ಆ ಬಳಿಕ ಇತರ ಫಾಲಿಕಲ್‌ಗ‌ಳ ಬೆಳವಣಿಗೆಗೆ ಕಡಿವಾಣ ಹಾಕುತ್ತದೆ, ಇತರ ಫಾಲಿಕಲ್‌ಗ‌ಳು ಅಲ್ಲಿಂದ ಮುಂದಕ್ಕೆ ಬೆಳವಣಿಗೆ ಹೊಂದುವುದಿಲ್ಲ.

ಫ‌ಲೀಕರಣ ಸಂದರ್ಭದಲ್ಲೇ ವಂಶವಾಹಿ ಗುಣಲಕ್ಷಣ ನಿರ್ಧಾರ :

ಫ‌ಲೀಕರಣ ಸಂದರ್ಭದಲ್ಲಿಯೇ ಲಿಂಗ ಯಾವುದು ಎಂಬುದರ ಸಹಿತ ಭ್ರೂಣದ ವಂಶವಾಹಿ ಗುಣಲಕ್ಷಣಗಳು ಅಂತಿಮಗೊಳ್ಳುತ್ತವೆ. ಫ‌ಲೀಕರಣದ ಕ್ಷಣದಲ್ಲಿ ಯಾವ ವೀರ್ಯಾಣುವು ಅಂಡವನ್ನು ಫ‌ಲೀಕರಿಸುತ್ತದೆ ಎನ್ನುವುದರ ಮೇಲೆ ಭ್ರೂಣದ ಲಿಂಗವು ನಿರ್ಧಾರವಾಗುತ್ತದೆ. ಸ್ತ್ರೀಯರ ವಂಶವಾಹಿ ಸಂಯೋಜನೆಯು “XX’ ಆಗಿದ್ದರೆ, ಪುರುಷರದು “XY’ ಆಗಿರುತ್ತದೆ. ಆದ್ದರಿಂದ ತಾಯಿಯು ಯಾವತ್ತಿಗೂ “X’ ವಂಶವಾಹಿಯುಳ್ಳ ಅಂಡವನ್ನು ಉತ್ಪಾದಿಸುತ್ತಾಳೆ. ವೀರ್ಯಾಣುವು “X’ ಆಗಿರಬಹುದು ಅಥವಾ “Y’ ಆಗಿರಬಹುದು. “X’ ವಂಶವಾಹಿಯುಳ್ಳ ವೀರ್ಯಾಣುವು ಅಂಡವನ್ನು ಫ‌ಲೀಕರಣಗೊಳಿಸಿದರೆ ಅದು “XX’ ಆಗುತ್ತದೆ  ಮತ್ತು ಹುಡುಗಿಯಾಗಿ ಬೆಳೆಯುತ್ತದೆ. “Y’ ವಂಶವಾಹಿಯನ್ನು ಹೊಂದಿರುವ ವೀರ್ಯಾಣುವು ಅಂಡವನ್ನು ಫ‌ಲೀಕರಗೊಳಿಸಿದರೆ ಅದು “XY’ ಆಗುತ್ತದೆ ಹಾಗೂ ಹುಡುಗನಾಗಿ ಬೆಳೆಯುತ್ತದೆ.

ಫ‌ಲೀಕರಣಗೊಂಡ 24 ತಾಸುಗಳ ಒಳಗಾಗಿ ಫ‌ಲೀಕರಣಗೊಂಡು ಶಿಶುವಾಗಿ ಬೆಳೆಯುವ ಅಂಡವು ಅತ್ಯಂತ ಕ್ಷಿಪ್ರಗತಿಯಲ್ಲಿ ಅನೇಕ ಜೀವಕೋಶಗಳಾಗಿ ವಿಘಟನೆಗೊಳ್ಳುತ್ತದೆ. ಇದುವೇ ಭ್ರೂಣಾಂಕುರ (ಎಂಬ್ರಿಯೊ). ಗರ್ಭಧಾರಣೆಯ 8ನೇ ವಾರಗಳ ಹೊತ್ತಿಗೆ ಭ್ರೂಣಾಂಕುರವು ಬೆಳೆದು ಶಿಶುವನ್ನು ಹೋಲಲಾರಂಭಿಸುತ್ತದೆ ಮತ್ತು ಇದನ್ನು ಭ್ರೂಣ (ಫೀಟಸ್‌) ಎಂದು ಕರೆಯುತ್ತಾರೆ. ಸಾಮಾನ್ಯ ಗರ್ಭಧಾರಣೆಗಳಲ್ಲಿ 40 ವಾರಗಳಿದ್ದು, ಇವುಗಳನ್ನು ಕೆಳಗೆ ವಿವರಿಸಿದಂತೆ ಮೂರು ತ್ತೈಮಾಸಿಕಗಳಾಗಿ ವಿಭಜಿಸಲಾಗುತ್ತದೆ.

ಪ್ರೌಢ ಫಾಲಿಕಲ್‌ ಮುಂದೇನಾಗುತ್ತದೆ? :

ಪ್ರೌಢ ಫಾಲಿಕಲ್‌ ತೆರೆದುಕೊಂಡು ಅಂಡಾಶಯದಿಂದ ಅಂಡವನ್ನು ಬಿಡುಗಡೆ ಮಾಡುತ್ತದೆ. ಇದನ್ನು ಓವುಲೇಶನ್‌ ಎನ್ನುತ್ತಾರೆ. ಮಹಿಳೆಯ ಮುಂದಿನ ಋತುಚಕ್ರ ಆರಂಭವಾಗುವುದಕ್ಕೆ ಎರಡು ವಾರಗಳ ಹಿಂದೆಯೇ ಈ ಓವುಲೇಶನ್‌ ಸಂಭವಿಸುತ್ತದೆ. ಅಂದರೆ ಸುಮಾರಾಗಿ ಋತುಚಕ್ರದ ಮಧ್ಯಭಾಗ. ಈ ಅಂಡವು ಮುಂದೆ ವೀರ್ಯಾಣುವಿನ ಜತೆಗೆ ಸಂಯೋಗ ಹೊಂದುತ್ತದೆ, ಇದನ್ನು ಫ‌ರ್ಟಿಲೈಸೇಶನ್‌ ಅಥವಾ ಫ‌ಲೀಕರಣ ಎನ್ನುತ್ತಾರೆ. ಈ ಅಂಡವು ಭ್ರೂಣವಾಗಿ ಪ್ರಗತಿ ಹೊಂದುತ್ತದೆ, ಮುಂದೆ ಒಂಬತ್ತು ತಿಂಗಳುಗಳ ಅವಧಿಯಲ್ಲಿ ಶಿಶುವಾಗಿ ಬೆಳೆಯುತ್ತದೆ. ಅಂಡವು ಫ‌ಲಿಸುವುದಕ್ಕೆ ಕಾರಣವಾಗುವ ವೀರ್ಯಾಣು ದೊರೆಯದೆ ಇದ್ದಲ್ಲಿ ಅಂಡವು ನಾಶವಾಗುತ್ತದೆ ಮತ್ತು ಮಹಿಳೆಯು ಋತುಸ್ರಾವವನ್ನು ಅನುಭವಿಸುತ್ತಾಳೆ.

ಓವುಲೇಶನ್‌ ಅಂದರೆ ಅಂಡಾಶಯದಿಂದ ಅಂಡವು ಬಿಡುಗಡೆಗೊಂಡ ಬಳಿಕ ತೆರೆದುಕೊಂಡ ಪಾಲಿಕಲ್‌ ಕಾರ್ಪಸ್‌ ಲ್ಯೂಟಿಯಂ ಎಂಬ ಸಂರಚನೆಯಾಗಿ ಪ್ರಗತಿ ಹೊಂದುತ್ತದೆ. ಇದು ಪ್ರೊಜೆಸ್ಟಿರೋನ್‌ ಮತ್ತು ಈಸ್ಟ್ರೋಜನ್‌ ಹಾರ್ಮೋನ್‌ಗಳನ್ನು ಸ್ರವಿಸುತ್ತದೆ. ಪ್ರೊಜೆಸ್ಟಿರೋನ್‌ ಹಾರ್ಮೋನ್‌ ಸಂಭಾವ್ಯ ಗರ್ಭಧಾರಣೆಗಾಗಿ ಗರ್ಭಾಶಯದ ಒಳಭಿತ್ತಿ (ಎಂಡೊಮೆಟ್ರಿಯಂ) ಯನ್ನು ಸಿದ್ಧಗೊಳಿಸುತ್ತದೆ. ಫ‌ಲಿಸಿದ ಅಂಡವು ಮುಂದಿನ ಬೆಳವಣಿಗೆಗಾಗಿ ಸ್ಥಾಪನೆಗೊಳ್ಳುವುದು ಈ ಭಿತ್ತಿಯ ಮೇಲೆ. ಪ್ರಜನನ ಚಕ್ರದಲ್ಲಿ ಮಹಿಳೆಯು ಗರ್ಭವತಿಯಾಗದೆ ಇದ್ದಲ್ಲಿ, ಆಕೆ ಋತುಸ್ರಾವ ಅನುಭವಿಸಿದಾಗ ವಿಸರ್ಜನೆಯಾಗುವುದು ಇದೇ ಭಿತ್ತಿ.

ಅಂಡವು ಫ‌ಲಿಸುವುದು : ಅಂಡಾಶಯದಿಂದ ಅಂಡವು ಬಿಡುಗಡೆಗೊಂಡ ಸಮಯದ ಸುತ್ತಮುತ್ತ, ಅಂದರೆ ಕೊನೆಯ ಋತುಚಕ್ರದ ಎರಡು ವಾರಗಳ ಅನಂತರ ಸಾಮಾನ್ಯವಾಗಿ ಫ‌ಲೀಕರಣವು ಘಟಿಸುತ್ತದೆ. ಒಂದು ವೀರ್ಯಾಣುವು ಅಂಡದೊಳಕ್ಕೆ ಪ್ರವೇಶಿಸಿದ ಬಳಿಕ ಇತರ ವೀರ್ಯಾಣುಗಳು ಅಂಡವನ್ನು ಪ್ರವೇಶಿಸದಂತೆ ಅದರ ಪ್ರೊಟೀನ್‌ ಕವಚದಲ್ಲಿ ಬದಲಾವಣೆ ನಡೆಯುತ್ತದೆ. ಹೀಗಾಗಿ ಒಂದು ಭ್ರೂಣವು ರೂಪುಗೊಳ್ಳಲು ಒಂದು ಅಂಡ ಮತ್ತು ಒಂದು ವೀರ್ಯಾಣು ಮಾತ್ರ ಸಂಯೋಗಗೊಳ್ಳುತ್ತವೆ.

ಭ್ರೂಣದ ನೈಜ ವಯಸ್ಸು (ಗರ್ಭಧಾರಣೆಯ ಅವಧಿ ಎಂದೂ ಹೇಳುತ್ತಾರೆ) ಅಂಡಾಶಯದಿಂದ ಅಂಡವು ಬಿಡುಗಡೆಗೊಂಡ ಸಮಯದ ಆಸುಪಾಸಿನಲ್ಲಿ ಅಂಡವು ಫ‌ಲಿತಗೊಂಡಲ್ಲಿಂದ ಆರಂಭವಾಗುತ್ತದೆ.

ಆದರೆ ಬಹುತೇಕ ಮಹಿಳೆಯರಿಗೆ ಓವುಲೇಶನ್‌ ಯಾವಾಗ ನಡೆದಿದೆ ಎಂಬುದು ತಿಳಿದಿರುವುದಿಲ್ಲ, ಆದರೆ ಕೊನೆಯ ಋತುಸ್ರಾವ ಯಾವಾಗ ಆರಂಭವಾಗಿತ್ತು ಎಂಬುದು ತಿಳಿದಿರುತ್ತದೆ. ಹೀಗಾಗಿ ತಮ್ಮ ಕೊನೆಯ ಸಹಜ ಋತುಸ್ರಾವದ ಮೊದಲ ದಿನದಿಂದ ಆರಂಭಗೊಂಡಂತೆ  ಗರ್ಭದ ವಯಸ್ಸನ್ನು ನಿರ್ಧರಿಸುತ್ತಾರೆ. ಋತುಚಕ್ರದ ಅವಧಿಯನ್ನು ಗರ್ಭಾವಧಿ (ಜೆಸ್ಟೇಶನಲ್‌ ಏಜ್‌) ಎಂಬುದಾಗಿಯೂ ಕರೆಯುತ್ತಾರೆ. ಅದು ಗರ್ಭವು ನಿಜವಾಗಿ ಫ‌ಲಿಸಿದ ಸಮಯದಿಂದ ಸುಮಾರು ಎರಡು ವಾರಗಳಷ್ಟು ಮುಂದಿರುತ್ತದೆ. ವೈದ್ಯರು/ ಪ್ರಸೂತಿಶಾಸ್ತ್ರಜ್ಞರು ಗರ್ಭಧಾರಣೆಯು ಎಷ್ಟು ಪ್ರಗತಿ ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಈ ದಿನಾಂಕವನ್ನು ಕೇಳಿ ತಿಳಿದುಕೊಳ್ಳುತ್ತಾರೆ. ಗರ್ಭಾವಧಿಯನ್ನು ಸಾಂಪ್ರದಾಯಿಕವಾಗಿ ಪೂರ್ಣಗೊಂಡ ವಾರಗಳ ಲೆಕ್ಕಾಚಾರದಲ್ಲಿ ಹೇಳಲಾಗುತ್ತದೆ. ಆದ್ದರಿಂದ 36 ವಾರಗಳ+2 ದಿನಗಳ ಭ್ರೂಣವನ್ನು 36 ವಾರಗಳ ಭ್ರೂಣ ಎಂದು ಪರಿಗಣಿಸಲಾಗುತ್ತದೆ.

ನಾನು ಗರ್ಭಿಣಿ ಎಂದು ಎಷ್ಟು ಬೇಗನೆ  ತಿಳಿದುಕೊಳ್ಳಲು ಸಾಧ್ಯ? :

ಗರ್ಭವು ಫ‌ಲಿತಗೊಂಡ ಕ್ಷಣದಿಂದ ಹ್ಯೂಮನ್‌ ಕೊರಿಯೋನಿಕ್‌ ಗೊನಡೊಟ್ರೊಫಿನ್‌ (ಎಚ್‌ಸಿಜಿ) ಹಾರ್ಮೋನ್‌ ತಾಯಿಯ ರಕ್ತದಲ್ಲಿ ಇರುತ್ತದೆ. ಪ್ಲಾಸೆಂಟಾ (ಗರ್ಭದಲ್ಲಿರುವ ಶಿಶುವಿನ ಆಹಾರದ ಮೂಲ)ವನ್ನು ರೂಪಿಸುವ ಅಂಗಾಂಶಗಳಿಂದ ಈ ಹಾರ್ಮೋನ್‌ ಸ್ರಾವಗೊಳ್ಳುತ್ತದೆ. ಗರ್ಭಧಾರಣೆಯ ಪರೀಕ್ಷೆಯಲ್ಲಿ ಪತ್ತೆಯಾಗುವುದು ಇದೇ ಹಾರ್ಮೋನ್‌. ಈ ಹಾರ್ಮೋನ್‌ ಆರಂಭದಿಂದಲೇ ಇದ್ದರೂ ಪರೀಕ್ಷೆಯಲ್ಲಿ ಪತ್ತೆಯಾಗುವಷ್ಟು ಪ್ರಮಾಣಕ್ಕೆ ಹೆಚ್ಚಳವಾಗಲು ಸ್ವಲ್ಪ ಕಾಲ ತೆಗೆದುಕೊಳ್ಳುತ್ತದೆ. ಎಚ್‌ಸಿಜಿ ನಿಮ್ಮ ರಕ್ತದಲ್ಲಿ ಪತ್ತೆಯಾಗುವಷ್ಟು ಪ್ರಮಾಣಕ್ಕೆ ಹೆಚ್ಚಲು ನಿಮ್ಮ ಕೊನೆಯ ಋತುಚಕ್ರದ ಕೊನೆಯ ದಿನದಿಂದ ಮೂರರಿಂದ ನಾಲ್ಕು ವಾರಗಳನ್ನು ತೆಗೆದುಕೊಳ್ಳುತ್ತದೆ. ಫ‌ಲಿತಗೊಂಡ ಬಳಿಕ (ಗರ್ಭಾಂಕುರಗೊಂಡ 3ರಿಂದ 4 ವಾರಗಳ ಅವಧಿ)ಆರರಿಂದ 14 ದಿನಗಳ ಅವಧಿಯಲ್ಲಿ ತಾಯಿಯ ಮೂತ್ರದಲ್ಲಿ ಎಚ್‌ಸಿಜಿ ಪತ್ತೆಯಾಗುತ್ತದೆ. ದಣಿವು ಮತ್ತು ಸ್ತನಗಳು ದೊಡ್ಡದಾಗುವುದು/ ಉಬ್ಬುವುದು ಅಥವಾ ಮೃದುವಾಗುವುದು ಕೆಲವೊಮ್ಮೆ ಗರ್ಭಧಾರಣೆಯ ಮೊದಲ ಲಕ್ಷಣಗಳಾಗಿರುತ್ತವೆ.

ಹೊಸ ಗರ್ಭಧಾರಣೆಯ ಬಗ್ಗೆ ನಾನು ಯಾವಾಗ ವೈದ್ಯರಲ್ಲಿಗೆ ಹೋಗಬೇಕು? :

ಮನೆಯಲ್ಲಿಯೇ ಮಾಡುವ ಗರ್ಭಧಾರಣೆಯ ಪರೀಕ್ಷೆ ಪಾಸಿಟಿವ್‌ ಬಂದ ಬಳಿಕ ಮೊದಲ ಬಾರಿಗೆ ಸಮಾಲೋಚನೆಗಾಗಿ ಬರುವಂತೆ ಬಹುತೇಕ ವೈದ್ಯರು ಸೂಚಿಸುತ್ತಾರೆ. ಮಹಿಳೆಯ ದೇಹದಲ್ಲಿ ಎಚ್‌ಸಿಜಿ ಸಾಕಷ್ಟು ಪ್ರಮಾಣದಲ್ಲಿದ್ದಾಗ ಸಾಮಾನ್ಯವಾಗಿ ಈ ಪರೀಕ್ಷೆಗಳು ನೂರಕ್ಕೆ ನೂರು ನಿಖರ ಫ‌ಲಿತಾಂಶ ನೀಡುತ್ತವೆ. ಈ ಹಂತದಲ್ಲಿ ಸಾಮಾನ್ಯವಾಗಿ ವೈದ್ಯರು ಫೋಲಿಕ್‌ ಆ್ಯಸಿಡ್‌ ಎಂಬ ವಿಟಮಿನ್‌ ಸಪ್ಲಿಮೆಂಟನ್ನು ತೆಗೆದುಕೊಳ್ಳಲು ಶಿಫಾರಸು ಮಾಡುತ್ತಾರೆ. ಇದನ್ನು ಗರ್ಭಧಾರಣೆಯ ಯೋಜನೆ ಹಾಕಿಕೊಳ್ಳುತ್ತಿರುವಾಗಲೇ (ಗರ್ಭಧಾರಣೆಗಿಂತ ಮುನ್ನ) ತೆಗೆದುಕೊಳ್ಳಬಹುದಾಗಿದೆ. ಶಿಶುವಿನ ನ್ಯೂರಲ್‌ ಟ್ಯೂಬ್‌ (ಶಿಶುವಿನ ಮೆದುಳು ಮತ್ತು ಬೆನ್ನುಹುರಿಯ ಮೂಲ) ಸರಿಯಾಗಿ ಬೆಳವಣಿಗೆ ಹೊಂದುವುದಕ್ಕಾಗಿ ಮಹಿಳೆಯು ಪ್ರತೀ ದಿನ ಕನಿಷ್ಠ 400 ಮೈಕ್ರೊಗ್ರಾಂಗಳಷ್ಟು ಫೋಲಿಕ್‌ ಆ್ಯಸಿಡ್‌ ಪಡೆಯುವುದು ಅಗತ್ಯವಾಗಿದೆ. ಗರ್ಭಧಾರಣೆಗೆ 2-3 ತಿಂಗಳುಗಳಷ್ಟು ಹಿಂದಿನಿಂದಲೇ ಫೋಲಿಕ್‌ ಆ್ಯಸಿಡ್‌ ಸೇವಿಸುವಂತೆ ಅನೇಕ ವೈದ್ಯರು ಶಿಫಾರಸು ಮಾಡುತ್ತಾರೆ.

ಶಿಶುವಿನ ಬೆಳವಣಿಗೆಯ  ವೇಳಾಪಟ್ಟಿಯೇನು? :

ಒಂದು ಸಹಜ ಗರ್ಭಧಾರಣೆಯ ಅವಧಿಯುದ್ದಕ್ಕೂ ಶಿಶು ಅಗಾಧವಾದ ಬದಲಾವಣೆಗಳನ್ನು ಕಾಣುತ್ತದೆ. ಸಾಮಾನ್ಯವಾಗಿ ವೈದ್ಯರು ಶಿಶುವಿನ ಬೆಳವಣಿಗೆಯನ್ನು ವಾರಗಳ ಮುಖಾಂತರ ವ್ಯಕ್ತಪಡಿಸುತ್ತಾರೆ. ಆದ್ದರಿಂದ ಗರ್ಭಿಣಿಗೆ ಮೂರು ತಿಂಗಳುಗಳಾಗಿದ್ದರೆ “12 ವಾರಗಳ ಗರ್ಭಿಣಿ’ ಎನ್ನುತ್ತಾರೆ. ಸಾಂಪ್ರದಾಯಿಕವಾಗಿ ನಾವು ಗರ್ಭಧಾರಣೆಯು ಒಂಬತ್ತು ತಿಂಗಳುಗಳ ಪ್ರಕ್ರಿಯೆ ಎನ್ನುತ್ತೇವೆ. ಆದರೆ ಎಲ್ಲ ಪ್ರಕರಣಗಳಲ್ಲಿಯೂ ಹೀಗಾಗುವುದಿಲ್ಲ. ಪೂರ್ಣ ಅವಧಿಯ ಗರ್ಭಧಾರಣೆಯು 40 ವಾರ ಅಥವಾ 280 ದಿನಗಳದಾಗಿರುತ್ತದೆ. ಪ್ರತೀ ತ್ತೈಮಾಸಿಕದಲ್ಲಿ ಭ್ರೂಣ ಮತ್ತು ತಾಯಿಯಲ್ಲಿ ವಿಭಿನ್ನವಾದ ಬದಲಾವಣೆಗಳು ಸಂಭವಿಸುತ್ತವೆ.

ಬೆಳವಣಿಗೆಯ ಹಂತಗಳು:  ಗರ್ಭಧಾರಣೆಯಲ್ಲಿ ಪ್ರತೀ ತಿಂಗಳು :

ಮೊದಲ ತ್ತೈಮಾಸಿಕ :

* ಮೊದಲ ತ್ತೈಮಾಸಿಕವು ಗರ್ಭಾಂಕುರಗೊಂಡಲ್ಲಿಂದ 12 ವಾರಗಳ ತನಕದ್ದಾಗಿರುತ್ತದೆ. ಇದು ಸಾಮಾನ್ಯವಾಗಿ ಗರ್ಭಧಾರಣೆಯ ಮೊದಲ ಮೂರು ತಿಂಗಳುಗಳು. ಈ ತ್ತೈಮಾಸಿಕದ ಅವಧಿಯಲ್ಲಿ ಶಿಶುವು ಜೀವಕೋಶಗಳ ಸಮೂಹವಾಗಿದ್ದಲ್ಲಿಂದ ಮನುಷ್ಯನ ಸ್ಥೂಲ ಚಹರೆಗಳನ್ನು ಹೊಂದಲಿರುವ ಭ್ರೂಣವಾಗುವ ವರೆಗೆ ಬೆಳೆಯುತ್ತದೆ. ಬೆಳವಣಿಗೆ ಹೊಂದುತ್ತಿರುವ ಗರ್ಭಾಂಕುರದಲ್ಲಿ ಜನ್ಮಜಾತ ವೈಕಲ್ಯಗಳು ಉಂಟಾಗುವುದು ಇದೇ ಹಂತದಲ್ಲಿ. ಇವುಗಳಲ್ಲಿ ಬಹುತೇಕ ವೈಕಲ್ಯಗಳಿಗೆ ನಿಖರ ಕಾರಣ ಗೊತ್ತಿರುವುದಿಲ್ಲ ಅಥವಾ ಹಲವು ಕಾರಣಗಳು ಒಂದುಗೂಡಿದ್ದರಿಂದ ಉಂಟಾಗುತ್ತವೆ.

 

ಡಾ| ಪುಂಡಲೀಕ ಬಾಳಿಗಾ

ಕನ್ಸಲ್ಟಂಟ್‌ ಫೀಟಲ್‌ ಮೆಡಿಸಿನ್‌,

ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-health

Mother: ತಾಯಂದಿರ ಮಾನಸಿಕ ಆರೋಗ್ಯ

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

4–Lupus-Nephritis

Lupus Nephritis: ಲೂಪಸ್‌ ನೆಫ್ರೈಟಿಸ್‌: ರೋಗಿಗಳಿಗೆ ಒಂದು ಮಾರ್ಗದರ್ಶಿ

3

Mental health: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.