ಹದಿಹರೆಯದವರಿಗೆ ಆಹಾರ ಮತ್ತು ಪೌಷ್ಟಿಕಾಂಶಗಳು
Team Udayavani, Mar 31, 2019, 6:00 AM IST
ಆರೋಗ್ಯಯುತ ಜೀವನ ಸಾಗಿಸುವುದಕ್ಕೆ ಆರೋಗ್ಯಪೂರ್ಣ ಆಹಾರ ಸೇವನೆಯು ಬಹಳ ಮುಖ್ಯವಾದದ್ದು ಮತ್ತು ಈ ಅಭ್ಯಾಸವನ್ನು ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ನಾವು ಕಲಿಸಿಕೊಡಬೇಕು. ದೇಹದ ಬೆಳವಣಿಗೆಗೆ ನೆರವಾಗಲು ಹಾಗೂ ಭವಿಷ್ಯದಲ್ಲಿ ಅನಾರೋಗ್ಯಗಳಿಗೆ ತುತ್ತಾಗದಂತಿರಲು ಹದಿಹರೆಯದಲ್ಲಿ ಮಕ್ಕಳಿಗೆ ಪೌಷ್ಟಿಕಾಂಶವು ಬಹಳ ಅಗತ್ಯವಾಗಿದೆ.
10ರಿಂದ 19 ವರ್ಷ ವಯೋಮಾನದ ನಡುವಿನ ಮಕ್ಕಳನ್ನು ನಾವು ಹದಿಹರೆಯದವರು ಎಂದು ಗುರುತಿಸುತ್ತೇವೆ. ಬಾಲ್ಯದಿಂದ ಪ್ರೌಢ ವಯಸ್ಸಿನೆಡೆಗೆ ಪರಿವರ್ತನೆ ಹೊಂದುವ ಹಂತವನ್ನು ಹದಿಹರೆಯ ಎಂದು ಕರೆಯಲಾಗುತ್ತಿದ್ದು, ಈ ಹಂತದಲ್ಲಿ ದೈಹಿಕ, ಜೀವ ರಾಸಾಯನಿಕ ಮತ್ತು ಭಾವನಾತ್ಮಕ ಬೆಳವಣಿಗೆಗಳು ವೇಗೋತ್ಕರ್ಷ ಸ್ಥಿತಿಯಲ್ಲಿರುತ್ತವೆ. ಈ ಸಂದರ್ಭದಲ್ಲಿ ಹಾರ್ಮೋನುಗಳ ಪ್ರಭಾವದಿಂದ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಘಟಿಸುತ್ತವೆ.
ದೈಹಿಕ ತೂಕ ಮತ್ತು ಎತ್ತರಗಳನ್ನು ಗಳಿಸುವಲ್ಲಿ ಹದಿಹರೆಯ ಒಂದು ಪ್ರಾಮುಖ್ಯ ಘಟ್ಟವಾಗಿದೆ. ಸ್ನಾಯುಗಳು ಮತ್ತು ಕೊಬ್ಬು ಹೆಚ್ಚುವ ಈ ಸಂದರ್ಭದಲ್ಲಿ ಹುಡುಗಿಯರು ಹುಡುಗರಿಗಿಂತ ಹೆಚ್ಚು ಕೊಬ್ಬು ಹೊಂದುತ್ತಾರೆ; ಹುಡುಗರಲ್ಲಿ ಸ್ನಾಯು ಹೆಚ್ಚಳವಾಗುತ್ತದೆ. ಹೀಗಾಗಿ ಈ ವಯೋಹಂತದಲ್ಲಿ ಶಕ್ತಿ ಮತ್ತು ಪ್ರೊಟೀನ್ ಎರಡರ ಅಗತ್ಯಗಳೂ ದೇಹಕ್ಕೆ ಗಮನಾರ್ಹವಾಗಿ ಹೆಚ್ಚು ಇರುತ್ತವೆ. ಶಕ್ತಿ ಮತ್ತು ಪ್ರೊಟೀನ್ ಪೂರೈಕೆಯು ವಯೋ ಅನುಕ್ರಮಣಿಕೆಗಿಂತ ಮಿಗಿಲಾಗಿ ಬೆಳವಣಿಗೆಯ ಶೈಲಿಯನ್ನು ಆಧರಿಸಿರಬೇಕಾಗುತ್ತದೆ. ಹದಿಹರೆಯದಲ್ಲಿ ಸಂಭವಿಸುವ ಭಾರೀ ಪ್ರಮಾಣದ ಬೆಳವಣಿಗೆಯಿಂದಾಗಿ ದೇಹಕ್ಕೆ ಶಕ್ತಿ, ಪ್ರೊಟೀನ್, ಖನಿಜಾಂಶಗಳು ಮತ್ತು ವಿಟಮಿನ್‌ಗಳ ಅಗತ್ಯವೂ ಅತ್ಯಂತ ಹೆಚ್ಚು ಇರುತ್ತದೆ.
ಹದಿಹರೆಯದಲ್ಲಿ ದೇಹವು ಅಧಿಕ ಪ್ರಮಾಣದಲ್ಲಿ ಬಯಸುವ ಪೌಷ್ಟಿಕಾಂಶಗಳಲ್ಲಿ ಶಕ್ತಿ, ಪ್ರೊಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣ ಸೇರಿವೆ. ಈ ಕ್ಯಾಲೊರಿ ಅಗತ್ಯಗಳನ್ನು ದೇಹಕ್ಕೆ ಒದಗಿಸುವುದಕ್ಕಾಗಿ ಹದಿಹರೆಯದವರು ಆರೋಗ್ಯಯುತವಾದ ವೈವಿಧ್ಯಮಯ ಆಹಾರವಸ್ತುಗಳನ್ನು ಸೇವಿಸಬೇಕಾಗುತ್ತದೆ. ತೆಳು ಪ್ರೊಟೀನ್ ಮೂಲಗಳು, ಕಡಿಮೆ ಕೊಬ್ಬಿನ ಹೈನು ಉತ್ಪನ್ನಗಳು, ಇಡೀ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ದೇಹ ಬೆಳೆಯುತ್ತಿರುವುದರಿಂದ ಶಕ್ತಿ ಮತ್ತು ಪೌಷ್ಟಿಕಾಂಶ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಉತ್ತಮ ಗುಣಮಟ್ಟದ ಆಹಾರವಸ್ತುಗಳನ್ನು ಸಮರ್ಪಕ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು.
ಹದಿಹರೆಯ ಬಹಳ ಮೋಜಿನ ವಯೋಮಾನ ಆದರೆ, ದೇಹವು ಸತತವಾಗಿ ಬದಲಾವಣೆಗಳಿಗೆ ಒಳಪಡುವುದರಿಂದ ಅದೊಂದು ಸವಾಲಿನ ಸಮಯವೂ ಹೌದು. ಈ ಪರಿವರ್ತನೆಗಳನ್ನು ನೀವು ನಿರೀಕ್ಷಿಸದೆ ಅಥವಾ ಇಷ್ಟಪಡದೆ ಇದ್ದಲ್ಲಿ ಅವುಗಳನ್ನು ನಿಭಾಯಿಸುವುದು ಕಠಿನವಾಗುತ್ತದೆ. ಈ ಸಮಯವು ಕಠಿನ ಆಹಾರ ನಿಯಮ, ಪಥ್ಯಾಹಾರವನ್ನು ಅನುಸರಿಸುವ ಹೊತ್ತಲ್ಲ; ಯಾಕೆಂದರೆ ಹಾಗೆ ಮಾಡಿದಾಗ ಬೆಳೆಯುತ್ತಿರುವ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ವಂಚಿಸಿದಂತಾಗುತ್ತದೆಯಲ್ಲದೆ ನಿಮ್ಮ ಪೂರ್ಣ ಸಾಧ್ಯತೆಯ ಬೆಳವಣಿಗೆಯನ್ನು ಹೊಂದುವುದಕ್ಕಾಗುವುದಿಲ್ಲ. ವಿವೇಚನೆಯುಳ್ಳ ಮತ್ತು ಸಮತೋಲಿತ ಆಹಾರ ಕ್ರಮವನ್ನು ಅನುಸರಿಸುವುದು ಅತ್ಯಂತ ಉತ್ತಮ ಆಯ್ಕೆಯಾಗಿದೆ.
ಹದಿಹರೆಯದವರು ಹೆಚ್ಚು ಸ್ವತಂತ್ರರಾಗಿರಲು ಆರಂಭಿಸುತ್ತಾರೆ ಮತ್ತು ತಮ್ಮದೇ ಆಹಾರ ಆಯ್ಕೆಗಳನ್ನು ಮಾಡಿಕೊಳ್ಳಲು ಆರಂಭಿಸುತ್ತಾರೆ. ಗೆಳೆಯ -ಗೆಳತಿಯರೊಂದಿಗೆ ಹೆಚ್ಚು ಗುರುತಿಸಿಕೊಳ್ಳಲು ಬಯಸುತ್ತಾರೆ ಮತ್ತು ತಾವು ಬಯಸಿದ್ದನ್ನು ಖರೀದಿಸಲು ಅರೆಕಾಲಿಕ ಉದ್ಯೋಗ ಹುಡುಕಿಕೊಳ್ಳುವುದು ಕೂಡ ಹೊಸದಲ್ಲ.ನೀವು ಇನ್ನೂ ಕೂಡ ಬೆಳೆಯುತ್ತಿರುವುದರಿಂದ ಆರೋಗ್ಯವಂತರಾಗಿರಲು ಮತ್ತು ಚೆನ್ನಾಗಿರಲು ಪ್ರಾಮುಖ್ಯವಾಗಿರುವ ಕೆಲವು ವಿಟಮಿನ್‌ಗಳು ಮತ್ತು ಖನಿಜಾಂಶಗಳು ಈ ಸಮಯದಲ್ಲಿ ದೇಹಕ್ಕೆ ಒದಗುವಂತೆ ನೀವು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ದೈಹಿಕ ಮತ್ತು ಮಾನಸಿಕ ಒತ್ತಡಗಳು ಹದಿಹರೆಯ ದವರ ಊಟೋಪಹಾರ ಪ್ರವೃತ್ತಿಗಳ ಮೇಲೆ ಪ್ರಭಾವ ಬೀರುತ್ತವೆ. ಹುಡುಗರು ಹುಡುಗಿಯರಿಗಿಂತ ಹೆಚ್ಚು ಪ್ರಮಾಣದಲ್ಲಿ ಆಹಾರ ಸೇವಿಸುತ್ತಾರೆ. ಈ ಹೆಚ್ಚು ಪ್ರಮಾಣದಿಂದಲೇ ಅವರಿಗೆ ಅಗತ್ಯವಾದ ಪೌಷ್ಟಿಕಾಂಶಗಳು ಪೂರೈಕೆಯಾಗುತ್ತವೆ. ದೈಹಿಕವಾದ ಲಿಂಗ ಭೇದ ಮತ್ತು ಈ ಸಮಯದಲ್ಲಿ ಅದಕ್ಕೆ ಸಂಬಂಧಿಸಿ ಕೊಬ್ಬು ಶೇಖರವಾಗುವುದರಿಂದಾಗಿ ಹಾಗೂ ಹುಡುಗರಿಗೆ ಹೋಲಿಸಿದರೆ ಕಡಿಮೆ ದೈಹಿಕ ಚಟುವಟಿಕೆಯಿಂದಾಗಿ ಹುಡುಗಿಯರು ದೈಹಿಕ ತೂಕ ಬೆಳೆಯಿಸಿಕೊಳ್ಳುವುದು ಹೆಚ್ಚು. ಸೂಕ್ತ ಪ್ರಮಾಣದ, ಸಮರ್ಪಕ ಆಹಾರ ಸೇವನೆಯತ್ತ ನಿರ್ಲಕ್ಷ್ಯ ವಹಿಸಿದರೆ ದೂರಗಾಮಿ ದುಷ್ಪರಿಣಾಮಗಳುಳ್ಳ ಆಹಾರ ಸೇವನೆಯ ಅಸಹಜತೆಗಳಾದ ಅನೊರೆಕ್ಸಿಯಾ ಮತ್ತು ಬುಲಿಮಿಯಾಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.
ಕೆಟ್ಟ ಆಹಾರ ಶೈಲಿಗಳನ್ನು ಬೆಳೆಸಿಕೊಳ್ಳುವ “ಖ್ಯಾತಿ’ ಹದಿಹರೆಯದವರಿಗೆ ಇದ್ದೇ ಇದೆ. ಅವರು ಆಗಾಗ ಊಟೋಪಹಾರಗಳನ್ನು ಅದರಲ್ಲೂ ವಿಶೇಷವಾಗಿ ಬೆಳಗಿನ ಉಪಾಹಾರವನ್ನು ತಪ್ಪಿಸಿಕೊಳ್ಳುತ್ತಾರೆ. ಬೆಳಗಿನ ಉಪಾಹಾರ ಸೇವಿಸುವವರು ಕೂಡ ಪೌಷ್ಟಿಕಾಂಶಯುಕ್ತವಲ್ಲದ್ದನ್ನು ಸೇವಿಸುವ ಸಾಧ್ಯತೆ ಹೆಚ್ಚು. ಆಹಾರ ಸೇವನೆಗೆ ಸಂಬಂಧಿಸಿದ ತೊಂದರೆಗಳು, ಗೆಳೆಯ – ಗೆಳತಿಯರ ಒತ್ತಡ, ಸಮಯದ ಕೊರತೆ ಮತ್ತು ಪೌಷ್ಟಿಕಾಂಶಗಳ ಪ್ರಾಮುಖ್ಯದ ಕುರಿತು ಅರಿವಿನ ಕೊರತೆ- ಹೀಗೆ ಬೆಳಗಿನ ಉಪಾಹಾರವನ್ನು ತಪ್ಪಿಸಿಕೊಳ್ಳುವುದಕ್ಕೆ ಅನೇಕ ಕಾರಣಗಳಿರುತ್ತವೆ. ಹದಿಹರೆಯದವರು ಕ್ಯಾಲ್ಸಿಯಂ, ವಿಟಮಿನ್‌ಗಳು ಕನಿಷ್ಠ ಪ್ರಮಾಣದಲ್ಲಿರುವ, ಆದರೆ ಸ್ಯಾಚುರೇಟೆಡ್ ಕೊಬ್ಬು, ಕ್ಯಾಲೊರಿಗಳು ಮತ್ತು ಸೋಡಿಯಂ ಯಥೇತ್ಛ ಪ್ರಮಾಣದಲ್ಲಿರುವ ಜಂಕ್ ಫುಡ್‌ಗಳನ್ನು ಸೇವಿಸುವ ಅಭ್ಯಾಸ ಹೊಂದಿರುತ್ತಾರೆ. ಉದಾಹರಣೆಗೆ ಚಿಪ್ಸ್, ಸಮೋಸಾ, ಬೇಕರಿ ಉತ್ಪನ್ನಗಳು ಇತ್ಯಾದಿ.
ಹದಿಹರೆಯದಲ್ಲಿ ಡಯಟಿಂಗ್ ಆರಂಭಿಸುವುದರಿಂದ ಹದಿಹರೆಯದವರು ಅನಾರೋಗ್ಯಯುತ ಆಹಾರಾಭ್ಯಾಸಗಳು, ದೈಹಿಕವಾಗಿ ಸೋಗು ಹಾಕುವ ಪ್ರವೃತ್ತಿಗಳಂತಹ ತೊಂದರೆಗೆ ಸಿಲುಕುವ ಅಪಾಯ ಹೊಂದುತ್ತಾರೆ. ಡಯಟಿಂಗ್ ನಡೆಸುವವರು ಸೀಮಿತ ಸಮಯದಲ್ಲಿ ಪಥ್ಯಾಹಾರ ಸೇವನೆಯ ಅಭ್ಯಾಸ ಹೊಂದಿರುತ್ತಾರೆ. ಇದರ ಬದಲು ಅವರು ಫಾಸ್ಟ್ ಫುಡ್‌ಗಳನ್ನು ತ್ಯಜಿಸುವುದರಂತಹ ದೀರ್ಘಕಾಲಿಕ ವರ್ತನಾತ್ಮಕ ಬದಲಾವಣೆಗಳನ್ನು ತಂದುಕೊಳ್ಳಬೇಕು; ಬೆಳಗಿನ ಉಪಾಹಾರದಿಂದ ಆರಂಭಿಸಿ ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು ಹಾಗೂ ಸಾಕಷ್ಟು ದೈಹಿಕ ಚಟುವಟಿಕೆಗಳಲ್ಲಿ ತೊಡಗಬೇಕು.
ಹದಿಹರೆಯದವರಿಗೆ ಪೌಷ್ಟಿಕಾಂಶಗಳು ಏಕೆ ಪ್ರಾಮುಖ್ಯ?
ಬದುಕಿನ ಈ ನಿರ್ಣಾಯಕ ವಯೋಮಾನದಲ್ಲಿ ಪೌಷ್ಟಿಕಾಂಶ ಕೊರತೆಗೆ ಒಳಗಾದರೆ ಅದು ಭವಿಷ್ಯದಲ್ಲಿ ಸ್ವಯಂ ಮತ್ತು ಸಂತಾನದ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುವುದು ನಿಶ್ಚಿತ. ಪೌಷ್ಟಿಕಾಂಶ ಸ್ಥಿತಿ ಮತ್ತು ದೈಹಿಕ ಬೆಳವಣಿಗೆಗಳು ಒಂದಕ್ಕೊಂದು ತಳುಕು ಹಾಕಿಕೊಂಡಿದ್ದು, ಪೂರ್ಣ ಪ್ರಮಾಣದ ಬೆಳವಣಿಗೆಯ ಸಾಧ್ಯತೆ ಕೈಗೂಡುವುದಕ್ಕೆ ಸಂಪೂರ್ಣ ಪೌಷ್ಟಿಕಾಂಶ ಪೂರೈಕೆಯು ಅತ್ಯಂತ ಅಗತ್ಯವಾಗಿದೆ.
ಹದಿಹರೆಯದವರಿಗೆ ದಿನಕ್ಕೆ ಸರಿಸುಮಾರು 2,200 ಕ್ಯಾಲೊರಿಗಳು ಬೇಕು. ಇದು ಬಾಲ್ಯಕಾಲದ ಆವಶ್ಯಕತೆಗಿಂತ ಗಮನಾರ್ಹ ಹೆಚ್ಚಳವಾಗಿರುತ್ತದೆ. ಈ ಕ್ಯಾಲೊರಿ ಅಗತ್ಯವನ್ನು ಪೂರೈಸುವುದಕ್ಕಾಗಿ ಹದಿಹರೆಯದವರು ತೆಳು ಪ್ರೊಟೀನ್ ಮೂಲಗಳು, ಕಡಿಮೆ ಕೊಬ್ಬಿನ ಹೈನು ಉತ್ಪನ್ನಗಳು, ಇಡೀ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳಂತಹ ವೈವಿಧ್ಯಮಯ ಆರೋಗ್ಯಯುತ ಆಹಾರವಸ್ತುಗಳನ್ನು ಸೇವಿಸಬೇಕಾಗುತ್ತದೆ.
-ಮುಂದುವರಿಯುವುದು
-ರಮ್ಯಾ ಭಾಗವತ್,
ಪಥ್ಯಾಹಾರ ತಜ್ಞೆ
ಕೆ.ಎಂ.ಸಿ., ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.