ವೃದ್ಧಾಪ್ಯದಲ್ಲಿ ಮೂಳೆ ಮುರಿತ ; ಮುಂದೇನು ಮಾಡಬೇಕು?
Team Udayavani, Jan 9, 2022, 7:55 AM IST
ನಮ್ಮ ಜೀವಿತ ಕಾಲದಲ್ಲಿ ಬಾಲ್ಯಾವಸ್ಥೆಯಿಂದ ವೃದ್ಧಾಪ್ಯದವರೆಗೆ ಯಾವುದೇ ಸಂದರ್ಭದಲ್ಲಿ ಮೂಳೆ ಮುರಿತ ಉಂಟಾಗುವ ಸಾಧ್ಯತೆ ಇದೆ. ಯೌವ್ವನಾವಸ್ಥೆಯಲ್ಲಿ ಅಪಘಾತದಿಂದಾಗಿ ಮೂಳೆ ಮುರಿತ ಸಂಭವಿಸುತ್ತದೆ. ಈ ವಯಸ್ಸಿನಲ್ಲಿ ಮೂಳೆ ಸಾಂದ್ರತೆ ದೃಢವಾಗಿದ್ದು, ಮುರಿದ ಮೂಳೆ ಸೂಕ್ತ ಚಿಕಿತ್ಸೆಯ ಮೂಲಕ ಜೋಡಣೆಗೊಂಡು ಮೊದಲಿನ ಸಹಜ ಸ್ಥಿತಿಗೆ ಮರಳುತ್ತದೆ. ಆದರೆ ಇಳಿವಯಸ್ಸಿನಲ್ಲಿ ಹಲವು ತೊಡಕು ಕೆಡುಕುಗಳು ಇವೆ. ಹಿರಿಯ ನಾಗರಿಕರಲ್ಲಿ ಮೂಳೆ ಮುರಿತ ಹೇಗೆ ಹಾಗೂ ಯಾಕೆ ಇದಕ್ಕೆ ಪರಿಹಾರ ಏನು, ಭವಿಷ್ಯದ ಸ್ಥಿತಿ ಹೇಗೆ ಇತ್ಯಾದಿ ಸಂಶಯಗಳನ್ನು ಹೋಗಲಾಡಿಸುವ ಉದ್ದೇಶದಿಂದ ಈ ಲೇಖನ ಪ್ರಸ್ತುತಪಡಿಸಲಾಗಿದೆ.
ಮೂಳೆ ಮುರಿತ ಎಷ್ಟು ಸಾಮಾನ್ಯ?
ಬಲಾಡ್ಯ ರಾಷ್ಟ್ರವೆನಿಸಿದ ಅಮೆರಿಕದಲ್ಲಿ 65 ವರ್ಷಕ್ಕೆ ಮೇಲ್ಪಟ್ಟ ನಾಗರಿಕರಲ್ಲಿ ಪ್ರತೀ ಮೂರರಲ್ಲಿ ಒಬ್ಬ ವ್ಯಕ್ತಿಗೆ ಮುರಿತವಾಗುತ್ತದೆ. ಹಲವರಿಗೆ ಇದು ಅಂತಿಮ ಮೂಳೆಮುರಿತವಾಗಿದ್ದು, ಪ್ರಾಣಕ್ಕೆ ಸಂಚಕಾರ ಬರಬಹುದು. ತುರ್ತು ಚಿಕಿತ್ಸಾ ವಿಭಾಗಕ್ಕೆ ಬರುವ ರೋಗಿಗಳಲ್ಲಿ ಶೇ. 14-15ರಷ್ಟು ರೋಗಿಗಳು ಮೂಳೆ ಮುರಿತಕ್ಕೆ ಒಳಗಾದ ಮುದುಕ-ಮುದುಕಿಯರು. ಈ ಇಳಿವಯಸ್ಸಿನ ವ್ಯಕ್ತಿಗಳಲ್ಲಿ ಸುಮಾರು ಶೇ. 7-8ರಷ್ಟು ಮಂದಿ ದುರದೃಷ್ಟವಶಾತ್ ಮೂರು ತಿಂಗಳ ಅವಧಿಯಲ್ಲಿ ಅಸುನೀಗುತ್ತಾರೆ. ನಮ್ಮ ದೇಶದ ಅಂಕಿಅಂಶಗಳನ್ನು ಗಮನಿಸಿದಲ್ಲಿ, ಜನಗಣತಿ ಯಲ್ಲಿ ಶೇ. 20ರಷ್ಟು ವ್ಯಕ್ತಿಗಳು ಅರುವತ್ತು ವಯಸ್ಸಿಗೆ ಮೇಲ್ಪಟ್ಟವರು. ಈ ವಯಸ್ಸಿನಲ್ಲಿ ಮೂಳೆ ಮುರಿತದ ಸಂಭವ ಸುಮಾರು 6,00,000 (ವಾರ್ಷಿಕ). ಸೊಂಟದ ಮೂಳೆ ಮುರಿತ ಸರ್ವೇಸಾಮಾನ್ಯ ವಾಗಿದ್ದು, ಶೇ.40 ವೃದ್ಧರು ಮುಂದಿನ ಒಂದು ವರ್ಷದ ಅವಧಿಯಲ್ಲಿ ಮರಣವನ್ನಪ್ಪುತ್ತಾರೆ.
ಸಾಮಾನ್ಯವಾಗಿ ಕಂಡುಬರುವ
ಮೂಳೆ ಮುರಿತ ಯಾವುವು?
ಹೆಚ್ಚಿನ ವೃದ್ಧರು ಮನೆಯ ಸುತ್ತಮುತ್ತ ಜಾರು ಪ್ರದೇಶದಲ್ಲಿ ಅಥವಾ ಶೌಚಾಲಯದ ಬಳಿ ಕಾಲು ಜಾರಿ ಬೀಳುವ ಸಂಭವ ಇದೆ. ಹಲವೊಮ್ಮೆ ಏಣಿ ಅಥವಾ ಮರ ಹತ್ತಲು ಹೋಗಿ ಆಯತಪ್ಪಿ ಬೀಳುತ್ತಾರೆ. ಅಥವಾ ರಸ್ತೆ ಅಪಘಾತಕ್ಕೊಳಗಾಗುತ್ತಾರೆ.
ಸೊಂಟದ ಮೂಳೆ ಮುರಿತ, ತೊಡೆಯ ಮೂಳೆ, ಬೆನ್ನುಮೂಳೆ, ಕೈಮಣಿಗಂಟಿನ ಬಳಿ ಮೂಳೆ ಮುರಿತ, ಭುಜದ ಬಳಿಯ ಮೂಳೆ ಅಥವಾ ಮೊಣಕೈ/ಮೊಣಕಾಲು ಗಂಟಿನ ಬಳಿಯ ಮೂಳೆಗಳು ಸಾಮಾನ್ಯವಾಗಿ ಈ ವಯಸ್ಸಿನಲ್ಲಿ ಮುರಿಯುತ್ತವೆ. ಶೇ. 25 ವ್ಯಕ್ತಿಗಳು ಮುಂದಿನ 4-5 ವರ್ಷಗಳಲ್ಲಿ ಇನ್ನೊಂದು ಮೂಳೆ ಮುರಿಸಿಕೊಳ್ಳಬಹುದಾದ ಸಾಧ್ಯತೆ ಇದೆ.
ಮೂಳೆ ಮುರಿತದ
ಪರಿಣಾಮ ಏನು?
2012-2014ನೇ ವರ್ಷದಲ್ಲಿ ಭುವನೇಶ್ವರದಲ್ಲಿ ನಡೆದ ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ 6.26 ದಶಲಕ್ಷ ಜನರು ಸೊಂಟದ ಮೂಳೆ ಮುರಿತಕ್ಕೆ ಒಳಗಾಗುತ್ತಾರೆ. ಇದರಲ್ಲಿ ಶೇ. 50 ಜನರು ಏಷ್ಯಾ ಜನಾಂಗಕ್ಕೆ ಸೇರಿದವರಾಗಿದ್ದಾರೆ. 2050ನೇ ಇಸವಿಯ ಹೊತ್ತಿಗೆ ಭಾರತದಲ್ಲಿ ಸುಮಾರು 323 ದಶಲಕ್ಷ ಜನರು ಅರುವತ್ತು ಅಥವಾ ಅದಕ್ಕಿಂತಲೂ ಮಿಗಿಲಾದ ವಯಸ್ಸಿನವರಾಗಿರುತ್ತಾರೆ. ಹೀಗಾಗಿ ದೀರ್ಘ ವಯಸ್ಸಿನ ಜತೆಗೆ ಮೂಳೆ ಮುರಿತದ ಸನ್ನಿವೇಶ ಕೂಡ ಸಾಮಾನ್ಯವಾಗುತ್ತದೆ.
ಸೊಂಟದ ಮೂಳೆ ಮುರಿತ ಬಹಳ ಸಾಮಾನ್ಯ ಹಾಗೂ ಅದು ಭವಿಷ್ಯ ಜೀವನಕ್ಕೆ ಮುಳ್ಳಾಗಬಹುದು. ಶೇ. 10 ರೋಗಿಗಳು ಮೊದಲಿನ ಹಾಗೆ ನಿರಾಯಾಸವಾಗಿ ನಡೆದಾಡಲು ಅಸಾಧ್ಯ. ಸೂಕ್ತ ಚಿಕಿತ್ಸೆ ದೊರಕದೇ ಇದ್ದರೆ ಶೇ. 5-10 ರೋಗಿಗಳು ಒಂದು ತಿಂಗಳಿನಲ್ಲಿ ಸಾವನ್ನಪ್ಪುತ್ತಾರೆ. ಕ್ಲಪ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಈ ಅಂಕಿ ಅಂಶವನ್ನು ಶೇ. 3ಕ್ಕೆ ಇಳಿಸಬಹುದು.
ಸೂಕ್ತ ಚಿಕಿತ್ಸೆ ಏನು?
ಮೂಳೆ ಮುರಿತದ ತೀವ್ರತೆ, ರೋಗಿಗೆ ಇರುವ ಇತರ ರೋಗಗಳು… ಇವುಗಳನ್ನು ಅವಲಂಬಿಸಿ ತಜ್ಞ ವೈದ್ಯರು ಚಿಕಿತ್ಸಾ ವಿಧಾನವನ್ನು ಸೂಚಿಸುತ್ತಾರೆ.
ಸಾಮಾನ್ಯವಾಗಿ ಕೈ ಮಣಿಗಂಟಿನ ಅಥವಾ ಭುಜದ ಬಳಿಯ ಮೂಳೆ ಮುರಿತವನ್ನು ಶಸ್ತ್ರಚಿಕಿತ್ಸೆಯ ಬದಲು ಪ್ಲಾಸ್ಟರ್ ಅಳವಡಿಸಿ ಚಿಕಿತ್ಸೆ ಕೊಡಲಾಗುತ್ತದೆ. ಬೆನ್ನುಮೂಳೆಯ ಮುರಿತವನ್ನು ಸರಿಪಡಿಸಲು ಬೆನ್ನು ಪಟ್ಟಿಯನ್ನು ಉಪಯೋಗಿಸಲಾಗುವುದು.
ಸೊಂಟದ ಅಥವಾ ತೊಡೆಯ ಮೇಲ್ಭಾಗದ ಮೂಳೆ ಮುರಿತಕ್ಕೆ ಶಸ್ತ್ರಚಿಕಿತ್ಸೆಯೇ ಪರಿಹಾರ. ಶಸ್ತ್ರಚಿಕಿತ್ಸೆ ನಡೆಸದಿದ್ದಲ್ಲಿ ಮೂಳೆ ಜೋಡಣೆ ಕುಂಠಿತಗೊಳ್ಳುತ್ತದೆ. ರೋಗಿ ದೀರ್ಘ ಕಾಲ ಹಾಸಿಗೆಯಲ್ಲಿಯೇ ಮಲಗಿರಬೇಕಾಗುತ್ತದೆ. ಇದರಿಂದ ಹಲವಾರು ದುಷ್ಪರಿಣಾಮಗಳು ಉಂಟಾಗುತ್ತವೆ.. ಕಾಲಿನ ನರಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಬೆನ್ನಿನ ಚರ್ಮ ಕಿತ್ತು ಹೋಗುವುದು, ಮೂತ್ರಕೋಶ ಅಥವಾ ಶ್ವಾಸಕೋಶಕ್ಕೆ ಸೋಂಕು ತಗಲುವುದು, ಮೈಯ ಮೂಳೆಮಾಂಸ ಇನ್ನಷ್ಟು ದುರ್ಬಲಗೊಳ್ಳುವುದು.. ಇತ್ಯಾದಿ. ಈ ಕಾರಣಕ್ಕಾಗಿ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಉತ್ತಮ ಹಾಗೂ ಶೀರ್ಘ ಸಮಯದಲ್ಲಿ ರೋಗಿಯನ್ನು ನಡೆದಾಡುವಂತೆ ಮಾಡಲು ಸಾಧ್ಯ.
ಮೂಳೆ ಮುರಿತ ಯಾಕೆ ಉಂಟಾಗುತ್ತದೆ?
ವಯಸ್ಸಾದಂತೆ ಮೂಳೆ ಸಾಂದ್ರತೆ ಕಡಿಮೆಯಾಗುತ್ತ ಹೋಗುತ್ತದೆ. ಇದರ ಪರಿಣಾಮವಾಗಿ ದೇಹದ ಮೂಳೆಗಳು ಮೃದುಗೊಂಡು ಸ್ವಲ್ಪ ಜಾರಿ ಬಿದ್ದರೂ ಕೂಡ ಇಳಿವಯಸ್ಸಿನಲ್ಲಿ ಮೂಳೆ ಮುರಿಯುತ್ತದೆ. ಇತರ ವಯೋಸಹಜ ಕಾಯಿಲೆ ಹಾಗೂ ತೊಂದರೆಗಳೂ ಕೂಡ ಕಾರಣ. ಕಣ್ಣಿನ ದೃಷ್ಟಿ ಮಂಜಾಗುವುದು, ಕಿವಿ ಕೇಳಿಸುವುದರಲ್ಲಿನ ತೊಂದರೆ, ಮಾಂಸಖಂಡಗಳ ಬಲಹೀನತೆ, ಕಾಲುಗಂಟುಗಳ ಸವೆತ, ಇತರ ದೈಹಿಕ ಹಾಗೂ ಮಾನಸಿಕ ತೊಂದರೆಗಳು.. ಇವೆಲ್ಲ ಉದಾಹರಣೆಗಳು. ರೋಗಿ ಸೇವಿಸುವ ಹಲವು ಔಷಧಗಳು ಕೂಡ ಮೂಳೆಗಳನ್ನು ಮೃದುಗೊಳಿಸಬಹುದು. ಅವುಗಳ ಪೈಕಿ ಸ್ಟಿರಾಯ್ಡ ಔಷಧ ಬಹಳ ದುಷ್ಪರಿಣಾಮ ಬೀರುತ್ತದೆ. ನಿರಂತರ ಧೂಮಪಾನ ಹಾಗೂ ಮದ್ಯಸೇವನೆಯ ಚಟದಿಂದಲೂ ಮೂಳೆಗಳಲ್ಲಿ ಬಲಹೀನತೆ ಉಂಟಾಗುತ್ತದೆ. ರೋಗಿಗೆ ಚಿಕಿತ್ಸೆ ಕೊಡಿಸುವಾಗ ವೈದ್ಯರು ಈ ಎಲ್ಲ ಅಂಶಗಳನ್ನು ಗಮನಿಸಿ ಅದಕ್ಕೂ ಸೂಕ್ತ ಪರಿಹಾರ ನೀಡಬೇಕಾಗುತ್ತದೆ. ಕ್ಯಾಲ್ಸಿಯಂ ಜತೆಗೆ ವಿಟಮಿನ್ ಡಿ ಔಷಧ ಮೂಳೆಯ ಬಲವರ್ಧನೆಗೆ ಸಹಕಾರಿ.
ಮೂಳೆ ಮುರಿತ ಸರಿ ಜೋಡಿಸುವ ಜತೆಗೆ ರೋಗಿಯೇ ಇತರ ಚಟಗಳನ್ನು, ರೋಗಗಳನ್ನು ಕೂಡ ಹತೋಟಿಗೆ ತರಬೇಕಾಗುತ್ತದೆ. ಇವುಗಳ ಪೈಕಿ ಮಧುಮೇಹ ಪ್ರಮುಖ ರೋಗ. ಮೂಳೆಯ ಬಲವನ್ನು ವೃದ್ಧಿಸಲು ನಾನಾ ಬಗ್ಗೆ ಪೌಷ್ಠಿಕ ಆಹಾರ, ಕ್ಯಾಲ್ಸಿಯಂ, ವಿಟಮಿನ್ ಡಿ ಔಷಧ ನೀಡುವುದೂ ಅತೀ ಅಗತ್ಯ.
ರೋಗಿಯನ್ನು ಮೊದಲಿನ ಸ್ಥಿತಿಗೆ ತರುವಲ್ಲಿ, ನಡೆದಾಡಲು ಆಗುವಂತೆ ಮಾಡುವ ನಿಟ್ಟಿನಲ್ಲಿ ಫಿಸಿಯೋಥೆರಪಿಸ್ಟ್ ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಹಲವು ಬಗೆಯ ಊರುಗೋಲುಗಳು, ವ್ಯಾಯಾಮದ ಮೂಲಕ ಇದನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ರೋಗಿಯ ಸಹಕಾರ ಅತ್ಯಗತ್ಯ.
ಮೂಳೆಮುರಿತವನ್ನು ತಡೆಗಟ್ಟುವುದು ಹೇಗೆ ?
‘Prevention is better than cure’’ ಎಂಬ ವೇದವಾಕ್ಯವನ್ನು ನಾವು ಯಾವತ್ತೂ ಗಮನದಲ್ಲಿಡಬೇಕು. ವೃದ್ಧ ವ್ಯಕ್ತಿ – ಒಂಟಿ ಜೀವನ.. ಇದು ಈ ಯುಗದಲ್ಲಿ ಕಾಣ ಬರುವ ನಿಜ ಸನ್ನಿವೇಶ. ತುಂಬು ಸಂಸಾರ, ಗಾಳಿಬೆಳಕಿನ ವಾತಾವರಣ, ಪೌಷ್ಟಿಕ ಆಹಾರ, ರೋಗಗಳನ್ನು ಹತೋಟಿಯಲ್ಲಿಡುವುದು, ದುಷcಟಗಳಿಂದ ದೂರ ಇರುವುದು, ಕ್ಲಪ್ತ ಸಮಯದಲ್ಲಿ ತಜ್ಞ ವೈದ್ಯರನ್ನು ಭೇಟಿಯಾಗುವುದು.. ಪ್ರಮುಖ ಅಂಶಗಳು.
ಶೌಚಾಲಯದಲ್ಲಿ ಎದ್ದು ಕುಳಿತುಕೊಳ್ಳಲು ಗೋಡೆಗೆ ಅಳವಡಿಸಿದ ಕೈ ಪಟ್ಟಿ, ದಟ್ಟ ಬೆಳಕಿನ ಕೊಠಡಿಗಳು, ಜಾರದೇ ಇರುವ ಕೊಠಡಿಗಳ ಹಾಗೂ ಶೌಚಾಲಯದ ನೆಲ ನಿರ್ಮಾಣ.. ಇವುಗಳು ಕೆಲವು ಸಣ್ಣ ಉದಾಹರಣೆಗಳು.
ಕಾಲ ಬದಲಾಗುತ್ತಿದೆ.. ಇದನ್ನು ಅರಿತಿರಿ
“ಮಾನವ ಶಿಶುವಾಗಿ ಈ ಜಗತ್ತಿಗೆ ಸೊಂಟದ ಒಳ ರಂಧ್ರದಿಂದ ಪ್ರವೇಶಿಸುತ್ತಾನೆ..ಕೊನೆಗೆ ವೃದ್ಧಾಪ್ಯದಲ್ಲಿ ಸೊಂಟದ ಮೂಳೆಮುರಿತಕ್ಕೆ ಬಲಿಪಶುವಾಗಿ ಸೊಂಟದ ಹೊರರಂಧ್ರದಿಂದ ಈ ಪ್ರಪಂಚದಿಂದ ನಿರ್ಗಮಿಸುತ್ತಾನೆ’ ಹೀಗೆಂದು ಪುರಾತನ ವೈದ್ಯಕೀಯ ಪುಸ್ತಕಗಳಲ್ಲಿ ಉಲ್ಲೇಖೀಸಲಾಗಿದ್ದು, ಇದು ಅತಿಶಯೋಕ್ತಿಯಲ್ಲ. ವೈದ್ಯಕೀಯ ಆವಿಷ್ಕಾರಗಳ ಮುಖಾಂತರ ಈ ದುಃಖಾಂತ್ಯವನ್ನು ಹತೋಟಿಗೆ ತರಲು ಸಾಧ್ಯವಾಗಿದೆ.
ವೃದ್ಧರ ಬಗ್ಗೆ ಗೌರವ, ಕಾಳಜಿ ಇರಲಿ. ಅವರು ಮೂಳೆಮುರಿತಕ್ಕೆ ಒಳಗಾದಾಗ ದೈಹಿಕ, ಮಾನಸಿಕ, ಆರ್ಥಿಕ ಸಹಾಯದತ್ತ ಕೈಜೋಡಿಸಿ. ಯುವ ಪೀಳಿಗೆ ತನ್ನನ್ನೂ ಭವಿಷ್ಯದಲ್ಲಿ ಈ ವೃದ್ಧಾಪ್ಯ ಪ್ರವೇಶಿಸುವ ಗಳಿಗೆಯನ್ನು ಊಹಿಸಿ ನಿರಾತಂಕ ಜೀವನ ನಡೆಸುವ ನಿಟ್ಟಿನಲ್ಲಿ ಯೋಚಿಸಬೇಕು.
ವೃದ್ಧರು-ವೈದ್ಯರು..ಈ ಸಂಬಂಧ ವರ್ಣಿಸಲಾಸಾಧ್ಯ!
-ಡಾ| ಬಿ. ಸೀತಾರಾಮ ರಾವ್
ಹಿರಿಯ ಮೂಳೆ ತಜ್ಞ ವೈದ್ಯರು,
ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Puttur: ಅತ್ಯಾ*ಚಾರ ಪ್ರಕರಣ: ಆರೋಪಿಗೆ ಜಾಮೀನು
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.