ಮನೆಯ ಮಟ್ಟದಲ್ಲಿ ಬೂದು ನೀರಿನ (ಗ್ರೇ ವಾಟರ್)
Team Udayavani, Aug 8, 2021, 7:15 AM IST
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಸ್ವತ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯಡಿ ತ್ಯಾಜ್ಯ ನಿರ್ವಹಣೆ ಚಟುವಟಿಕೆಗಳನ್ನು ಕೈಗೆತ್ತಿಕೊಂಡಿದೆ. ನಾಡಿನಾದ್ಯಂತ ಘನ ತ್ಯಾಜ್ಯ ನಿರ್ವಹಣೆ ಚಟುವಟಿಕೆಗಳು ಹಂತಹಂತವಾಗಿ ನಡೆಯುತ್ತಿವೆ. ಇದರ ಜತೆ ಜತೆಗೆ ಕೈಗೊಳ್ಳಲಾದ ಕಾರ್ಯಕ್ರಮವೆಂದರೆ ದ್ರವ ತ್ಯಾಜ್ಯ ನಿರ್ವಹಣೆ.
ಮಾನವನ ಬಳಕೆಯಿಂದ ಕಲುಷಿತವಾದ ಮತ್ತು ಕುಡಿಯಲು, ಬಳಕೆಗೆ ಯೋಗ್ಯವಲ್ಲದ ಯಾವುದೇ ನೀರನ್ನು ದ್ರವ ತ್ಯಾಜ್ಯವೆಂದು ಕರೆಯುತ್ತೇವೆ. ಜಿಡ್ಡು, ತೈಲಗಳು, ಸೂಕ್ಷ್ಮಾಣು ಜೀವಿಗಳು, ಲೋಹಗಳು, ಜೈವಿಕ ವಸ್ತುಗಳು, ರಾಸಾಯನಿಕಗಳಾದ ರಂಜಕ, ಸಾರಜನಕ, ಹೈಡ್ರೋಕಾರ್ಬನ್ ಮುಂತಾದ ಹತ್ತು ಹಲವಾರು ವಸ್ತುಗಳು ದ್ರವತ್ಯಾಜ್ಯದಲ್ಲಿರುವ ಮಾಲಿನ್ಯಕಾರಕಗಳಾಗಿದ್ದು, ಇವುಗಳು ನೀರನ್ನು ಕಲುಷಿತಗೊಳಿಸುತ್ತದೆ.
ಇದರಲ್ಲಿ ಮನೆ ಹಂತದಲ್ಲಿ ದ್ರವ ತ್ಯಾಜ್ಯವನ್ನು ಎರಡು ವಿಧಗಳಾಗಿ ವಿಂಗಡಿಸಬಹುದಾಗಿದೆ. :
- ಕಪ್ಪು ನೀರು 2. ಬೂದು ನೀರು
ಕಪ್ಪು ನೀರು:
ಶೌಚಾಲಯದ ಮೂಲಕ ಹೊರಬರುವ ನೀರನ್ನು ಕಪ್ಪು ನೀರು ಎಂದು ಕರೆಯುತ್ತಾರೆ. ಮನೆಯಲ್ಲಿ ಉತ್ಪಾದನೆಯಾಗುವ ದ್ರವ ತ್ಯಾಜ್ಯವು ಸುಮಾರು ಶೇ. 15 ಕಪ್ಪು ನೀರನ್ನು ಹೊಂದಿರುತ್ತದೆ.
ಬೂದು ನೀರು:
ಮನೆಯ ದಿನ ನಿತ್ಯದ ಕೆಲಸಗಳಿಗೆ ಬಳಕೆಯಾದ, ಕುಡಿಯಲು ಬಳಕೆಯಾಗದ, ಶೌಚಾಲಯದ ಸಂಪರ್ಕಕ್ಕೆ ಬಾರದ ನೀರು ಬೂದು ನೀರು ಅಥವಾ ಗ್ರೇ ವಾಟರ್ ಎಂದು ಕರೆಯಲಾಗುತ್ತದೆ. ನಾವು ಮನೆಯಲ್ಲಿ ಕೈತೊಳೆಯಲು, ಸ್ನಾನಕ್ಕೆ, ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ಅಡುಗೆಗೆ, ತರಕಾರಿಗಳ ಸ್ವತ್ಛತೆಗೆ ಬಳಸಿದ ನೀರನ್ನು ಬೂದು ನೀರು ಎಂದು ಕರೆಯಲಾಗುತ್ತದೆ.
ಒಬ್ಬ ವ್ಯಕ್ತಿಗೆ ಪ್ರತೀ ದಿನ ಬಳಕೆಗಾಗಿ ಸುಮಾರು 60 ಲೀಟರ್ ನೀರು ಆವಶ್ಯಕ. 4 ಜನ ಸದಸ್ಯರಿರುವ ಕುಟುಂಬಕ್ಕೆ ದಿನ ನಿತ್ಯದ ಬಳಕೆಗಾಗಿ ಸರಿ ಸುಮಾರು 250-300 ಲೀಟರ್ ನೀರು ಆವಶ್ಯಕತೆ ಇದೆ. ಮನೆಯಲ್ಲಿ ಪ್ರತೀ ನಿತ್ಯ ಗೃಹಬಳಕೆಯ ನೀರಿನಲ್ಲಿ ಅಂದಾಜು ಶೇ. 65-70 ಬೂದು ನೀರು ಉತ್ಪಾದನೆಯಾಗುತ್ತದೆ.
ಮನೆ ಹಾಗೂ ಸಮುದಾಯ ಮಟ್ಟದಲ್ಲಿ ದ್ರವ ತ್ಯಾಜ್ಯದ ಸಮರ್ಪಕ ವಿಲೇವಾರಿ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಮನೆಯ ಪರಿಸರ ಕಲುಷಿತವಾಗಿದ್ದಲ್ಲಿ ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಅಪಾಯ ಹೆಚ್ಚು. ದ್ರವ ತ್ಯಾಜ್ಯದ ಅಸಮರ್ಪಕ ವಿಲೇವಾರಿ ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗಬಲ್ಲದು. ಅದರಲ್ಲೂ ಬೂದು ನೀರಿನ ಸಮರ್ಪಕ ನಿರ್ವಹಣೆ ಬಹು ದೊಡ್ಡ ಸಮಸ್ಯೆಯಾಗಿದೆ. ಬೂದು ನೀರು ಚರಂಡಿಗಳಲ್ಲಿ ಸಮರ್ಪಕವಾಗಿ ಹರಿಯದೇ ಒಂದೇ ಕಡೆ ಸಂಗ್ರಹವಾಗಿ ಹಲವಾರು ರೀತಿಯ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತದೆ.
ಬೂದು ನೀರಿನ ಸಮರ್ಪಕ ನಿರ್ವಹಣೆಯ ವಿಧಾನಗಳು :
- ಮನೆಯಲ್ಲಿ ಪ್ರತೀ ದಿನ ಗೃಹ ಬಳಕೆಯಿಂದ ಸಂಗ್ರಹವಾದ ಬೂದು ನೀರನ್ನು ನಮ್ಮ ನಮ್ಮ ಮನೆಯ ಮಟ್ಟದಲ್ಲಿ ನಿರ್ವಹಣೆ ಮಾಡುವತ್ತ ಗಮನ ಹರಿಸಬೇಕು. 3-4 ಅಡಿ ಆಳದ ಗುಂಡಿಗೆ ವಿವಿಧ ಬಗೆಯ ಜಲ್ಲಿ ಕಲ್ಲುಗಳನ್ನು ಹಾಕಿ ಸಣ್ಣದಾಗಿ ಇಂಗು ಗುಂಡಿ ನಿರ್ಮಾಣ ಮಾಡಿಕೊಳ್ಳಬೇಕು. ಮನೆಯಲ್ಲಿ ಸಂಗ್ರಹವಾಗುವ ಬೂದು ನೀರನ್ನು ಈ ರೀತಿಯ ಇಂಗು ಗುಂಡಿ ಒಳಗೆ ಸಂಗ್ರಹವಾಗುವಂತೆ ಮಾಡಬೇಕು. ಇದರಿಂದ ಹಲವು ವೈಜ್ಞಾನಿಕ ಪ್ರಯೋಜನಗಳಿವೆ. ಇಂಗು ಗುಂಡಿಯ ಒಳಗೆ ಸಂಗ್ರಹವಾದ ನೀರಿನಲ್ಲಿರುವ ಕಲ್ಮಶಗಳು ಬೇರ್ಪಟ್ಟು ಸಹಜ ಸ್ಥಿತಿಯಲ್ಲಿ ಶುದ್ಧೀಕರಣಗೊಂಡ ನೀರು ಭೂಮಿಯನ್ನು ಸೇರುತ್ತದೆ. ಮಳೆಗಾಲದಲ್ಲಿ ಮನೆಯ ಛಾವಣಿಯಿಂದ ಬೀಳುವ ನೀರನ್ನು ಕೂಡ ಈ ಇಂಗು ಗುಂಡಿಗೆ ಹರಿದುಹೋಗುವಂತೆ ಮಾಡಲು ಸಾಧ್ಯ. ಈ ರೀತಿಯ ವಿಧಾನವನ್ನು ಅನುಸರಿಸುವುದರಿಂದ ಭೂಮಿಯ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಮನೆಯ ಸುತ್ತ-ಮುತ್ತ ಖಾಲಿ ಜಾಗ ಹೊಂದಿರುವವರು ಈ ರೀತಿಯ ವಿಧಾನವನ್ನು ಅನುಸರಿಸಬಹುದಾಗಿದೆ.
- ಬೂದು ನೀರನ್ನು ಮನೆಯ ಹಿತ್ತಲಿನಲ್ಲಿ ಹರಿದು ಹೋಗುವಂತೆ ಮಾಡಿ ಆ ಸ್ಥಳದಲ್ಲಿ ವಿವಿಧ ಬಗೆಯ ಪೌಷ್ಟಿಕಾಂಶಭರಿತ ತರಕಾರಿ, ಹಣ್ಣು, ಹೂವಿನ ಗಿಡಗಳನ್ನು ನೆಟ್ಟು ಅವುಗಳ ಬೆಳವಣಿಗೆಗೆ ಈ ನೀರನ್ನು ಬಳಸಬಹುದಾಗಿದೆ. ಸಾಧ್ಯವಾದಲ್ಲಿ ಕಡಿಮೆ ಖರ್ಚಿನಲ್ಲಿ ಪೈಪ್‌ಗ್ಳನ್ನು ಬಳಸಿಕೊಂಡು ಮನೆಯ ಪರಿಸರದಲ್ಲಿರುವ ತೆಂಗಿನ ಮರ, ಅಡಿಕೆ ಮರ, ಸೇರಿದಂತೆ ವಿವಿಧ ಬಗೆಯ ಮರ-ಗಿಡಗಳಿಗೆ ಈ ಬೂದು ನೀರನ್ನು ಉಪಯೋಗಿಸಿ ಮರಗಳ ಬೆಳವಣಿಗೆಗೆ ಆವಶ್ಯಕತೆಯಾಗಿರುವ ನೀರನ್ನು ಬೂದು ನೀರಿನ ಮೂಲಕ ಈ ರೀತಿ ಮರು ಬಳಕೆ ಮಾಡಬಹುದಾಗಿದೆ. ತರಕಾರಿ ತೊಳೆದ ನೀರು, ಬಟ್ಟೆ ಒಗೆದ ನೀರನ್ನು ಶೌಚಾಲಯದ ಸ್ವತ್ಛತೆಗಾಗಿ, ವಾಹನಗಳನ್ನು ಸ್ವತ್ಛಗೊಳಿಸಲು ಬಳಸಬಹುದು.
- ಬೂದು ನೀರಿನ ಸಮರ್ಪಕವಾದ ನಿರ್ವಹಣೆ ಕೇವಲ ಸರ್ಕಾರ, ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳ ಜವಾಬ್ದಾರಿ ಮಾತ್ರವಲ್ಲದೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ.
- ನೂತನವಾಗಿ ನಿರ್ಮಾಣವಾಗುವ ಕಟ್ಟಡ, ಮನೆ, ವಸತಿ ಸಮುಚ್ಚಯಗಳಿಗೆ ಮಳೆ ನೀರು ಕೊಯ್ಲು ಜತೆಗೆ ಬೂದು ನೀರಿನ ಸಮರ್ಪಕವಾದ ನಿರ್ವಹಣೆಯನ್ನು ಕಡ್ಡಾಯಗೊಳಿಸಬೇಕು.
- ಪ್ರತಿಯೊಂದು ಶಾಲೆಗಳಲ್ಲಿ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಶಾಲಾ ಪರಿಸರದಲ್ಲಿ ಕೈ ತೋಟ ನಿರ್ಮಾಣ, ಇಂಗು ಗುಂಡಿಗಳನ್ನು ನಿರ್ಮಾಣ ಮಾಡಿ ಶಾಲೆಗಳಲ್ಲಿ ಸಂಗ್ರಹವಾಗುವ ಬೂದು ನೀರಿನ ಸಮರ್ಪಕವಾದ ಬಳಕೆಯನ್ನು ಸ್ವತಃ ವಿದ್ಯಾರ್ಥಿಗಳು ನಿರ್ವಹಿಸಬೇಕು. ಈ ರೀತಿಯ ವಿಧಾನವನ್ನು ತಮ್ಮ ಮನೆಗಳಲ್ಲಿ ನಿರ್ವಹಿಸುವಂತೆ ಪ್ರೇರೇಪಿಸಬೇಕು. ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದಲ್ಲಿ ನೀರಿನ ಮಿತ ಬಳಕೆ, ಬೂದು ನೀರಿನ ಅಸಮರ್ಪಕವಾದ ನಿರ್ವಹಣೆಯಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಬೇಕು.
- ಸಂಘ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ತಮ್ಮ ಪರಿಸರದ ಸ್ಥಳೀಯ ಆಡಳಿತದ ಜತೆಗೆ ಕೈ ಜೋಡಿಸಿ ಬೂದು ನೀರಿನ ಸಮರ್ಪಕವಾದ ನಿರ್ವಹಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅವರು ಕೂಡ ಈ ರೀತಿಯ ವಿಧಾನಗಳನ್ನು ಅನುಸರಿಸಲು ಪ್ರೇರೇಪಿಸಬೇಕು.
- ಪರಿಸರಕ್ಕಾಗಲೀ, ಆರೋಗ್ಯಕ್ಕಾಗಲೀ ತೊಂದರೆಯಾಗದಿರಲು ದ್ರವತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಅಗತ್ಯ. ಮನೆಹಂತದಲ್ಲಿ ಮತ್ತು ಸಮುದಾಯ ಹಂತದಲ್ಲಿ ಬೂದು ನೀರನ್ನು ಸಮರ್ಪಕವಾಗಿ ನಿರ್ವಹಿಸಿ ಅಂತರ್ಜಲ ಮಟ್ಟ ಹೆಚ್ಚಿಸುವುದು ಹಾಗೂ ಬಳಕೆಯಾದ ನೀರಿನ ಅಸಮರ್ಪಕ ನಿರ್ವಹಣೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಯುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ.
ಬೂದು ನೀರಿನ ಅಸಮರ್ಪಕ ನಿರ್ವಹಣೆಯಿಂದ ಉಂಟಾಗುವ ದುಷ್ಪರಿಣಾಮಗಳು:
ಬೂದು ನೀರು ಮನೆಯ ಸುತ್ತಮುತ್ತ ಸಂಗ್ರಹವಾಗಿ ವಾಸನೆಯೊಂದಿಗೆ ಕೊಳಚೆ ಪ್ರದೇಶವಾಗಿ ಮಾರ್ಪಾಡುಗೊಂಡು ಮನೆಯ, ಗ್ರಾಮದ ನೈರ್ಮಲ್ಯ ಕಡಿಮೆಯಾಗಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ.
ಹೀಗೆ ಎಲ್ಲೆಂದರಲ್ಲಿ ಸಂಗ್ರಹವಾದ ಬೂದು ನೀರಿನಲ್ಲಿ ಸೊಳ್ಳೆ, ನೊಣ ಮುಂತಾದ ಕ್ರಿಮಿಗಳು ಉತ್ಪತ್ತಿಯಾಗಿ ರೋಗಗಳಿಗೆ ತುತ್ತಾಗುವ ಸಂಭವ ಹೆಚ್ಚು.
ಎಲ್ಲೆಂದರಲ್ಲಿ ಸಂಗ್ರಹವಾದ ಬೂದು ನೀರು ನಮ್ಮ ಕುಡಿಯುವ ನೀರಿನ ಮೂಲದೊಂದಿಗೆ ಸೇರಿ ಶುದ್ಧವಾಗಿರುವ ನೀರು ಕೂಡ ಕಲುಷಿತವಾಗುತ್ತದೆ. ಆ ನೀರನ್ನು ನಾವು ಕುಡಿಯಲು, ಆಹಾರ ತಯಾರಿಸಲು ಬಳಕೆ ಮಾಡುವುದರಿಂದ ಹಾಗೂ ದ್ರವ ತ್ಯಾಜ್ಯಗಳಲ್ಲಿರುವ ಮಾಲಿನ್ಯಕಾರಕಗಳು ನಮ್ಮ ಆಹಾರ ಸರಪಳಿಯೊಳಗೆ ಸೇರಿ ವಾಂತಿ, ಭೇದಿ, ಟೈಫಾಯಿಡ್ ನಂತಹ ಕಾಯಿಲೆಗಳಿಗೆ ತುತ್ತಾಗಲು ಕಾರಣವಾಗುತ್ತದೆ.
ಜಲಮೂಲಗಳಾದ ನದಿ, ಹಳ್ಳ ಕೆರೆ, ಬಾವಿ, ಕೊಳವೆ ಬಾವಿಗಳ ನೀರಿನ ಜೊತೆಗೆ ದ್ರವ ತ್ಯಾಜ್ಯ ಮಿಶ್ರಿತವಾದಾಗ ಜಲಮೂಲಗಳು ಕಲುಷಿತವಾಗುತ್ತವೆ ಮತ್ತು ಅದರಲ್ಲಿ ವಾಸಿಸುತ್ತಿರುವ ಜಲಚರಗಳ ಮೇಲೆ ದುಷ್ಪರಿಣಾಮ ಬೀರುತ್ತದೆ.
ಬೂದು ನೀರು ಸೇರಿದಂತೆ ದ್ರವ ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಆ ನೀರಿನಲ್ಲಿರುವ ಮಾಲಿನ್ಯಕಾರಕಗಳು ಮಣ್ಣಿನೊಂದಿಗೆ ಬೆರೆತು ಮಣ್ಣಿನ ಮಾಲಿನ್ಯ ಉಂಟಾಗುತ್ತದೆ.
ಮನೆ ಅಥವಾ ಸಮುದಾಯ ಹಂತದಲ್ಲಿ ಅಸಮರ್ಪಕವಾದ ಬೂದು ನೀರಿನ ನಿರ್ವಹಣೆಯಿಂದ ಆ ನೀರನ್ನು ಸೇವಿಸುವ ಸಾಕುಪ್ರಾಣಿಗಳ ಆರೋಗ್ಯದ ಮೇಲೆ ಅಪಾಯ ಬೀರುತ್ತದೆ.
ರಾಘವೇಂದ್ರ ಭಟ್ ಎಂ.
ಆರೋಗ್ಯ ಸಹಾಯಕರು
ಡಾ| ಚೈತ್ರಾ ಆರ್. ರಾವ್
ಸಹ ಪ್ರಾಧ್ಯಾಪಕರು
ಸಮುದಾಯ ವೈದ್ಯಕೀಯ ವಿಭಾಗ ಮತ್ತು ಕೋ-ಆರ್ಡಿನೇಟರ್,
ಸೆಂಟರ್ ಫಾರ್ ಟ್ರಾವೆಲ್ ಮೆಡಿಸಿನ್, ಕೆ
.ಎಂ.ಸಿ. ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Squash event: ಭಾರತದ ಅನಾಹತ್,ಮಲೇಷ್ಯಾದ ಚಂದರನ್ ಚಾಂಪಿಯನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.