Guillain-Barre syndrome: ಗಿಲಿಯನ್ ಬಾರ್ ಸಿಂಡ್ರೋಮ್ (ಜಿಬಿಎಸ್)
ಒಂದು ಅಪರೂಪದ ನರಶಾಸ್ತ್ರೀಯ ಅನಾರೋಗ್ಯ
Team Udayavani, Sep 24, 2023, 8:26 AM IST
ಗಿಲಿಯನ್ ಬಾರ್ ಸಿಂಡ್ರೋಮ್ ಅಥವಾ ಸಣ್ಣದಾಗಿ ಜಿಬಿಎಸ್ ಎಂದು ಕರೆಯಲ್ಪಡುವ ನರಶಾಸ್ತ್ರೀಯ ಕಾಯಿಲೆಯು ರೋಗನಿರೋಧಕ ಶಕ್ತಿಯ ತಪ್ಪು ಪ್ರತಿಕ್ರಿಯೆಯಿಂದಾಗಿ ಉಂಟಾಗುವ ಅಪರೂಪದ ಅನಾರೋಗ್ಯವಾಗಿದ್ದು, ಕೆಲವೊಮ್ಮೆ ಮಾರಣಾಂತಿಕವಾಗಿರುತ್ತದೆ. ಅಟೊ ಇಮ್ಯೂನ್ ಕಾಯಿಲೆಗಳೆಂದರೆ ಒಂದು ರೀತಿಯಲ್ಲಿ ಫುಟ್‌ಬಾಲ್ ಪಂದ್ಯದಲ್ಲಿ ಸ್ವಯಂ ಗೋಲು ಬಾರಿಸಿಕೊಂಡ ಹಾಗೆ, ದೇಹವು ತನಗೆ ತಾನೇ ಹಾನಿ ಮಾಡಿಕೊಳ್ಳುವುದು. ರೋಗನಿರೋಧಕ ಜೀವಕೋಶಗಳು ಬ್ಯಾಕ್ಟೀರಿಯಾ, ವೈರಸ್‌ಗಳಂತಹ ಬಾಹ್ಯ ಆಕ್ರಮಣಗಳಿಂದ ದೇಹವನ್ನು ರಕ್ಷಿಸುತ್ತವೆ. ಆದರೆ ಜಿಬಿಎಸ್‌ನಂತಹ ಆಟೊಇಮ್ಯೂನ್ ಕಾಯಿಲೆಯ ಸಂದರ್ಭದಲ್ಲಿ ದೇಹದ ರೋಗ ನಿರೋಧಕ ವ್ಯವಸ್ಥೆಯು ಪ್ರಮಾದವಶಾತ್ ದೇಹದ ಮೇಲ್ಮೆ„ ನರವ್ಯೂಹದ ಮೇಲೆ ದಾಳಿ ನಡೆಸುತ್ತದೆ.
ಜಿಬಿಎಸ್ ಜಾಗತಿಕವಾಗಿ ಪ್ರತೀವರ್ಷ ಸರಿಸುಮಾರು 1 ಲಕ್ಷ ಮಂದಿಯನ್ನು ಬಾಧಿಸುತ್ತದೆ; ಈ ಪೈಕಿ ಶೇ. 20ರಿಂದ 30 ರಷ್ಟು ಮಂದಿ ಶ್ವಾಸಾಂಗ ವೈಫಲ್ಯದಿಂದಾಗಿ ಗಂಭೀರ ಸ್ಥಿತಿ ತಲುಪುತ್ತಾರೆ. ಸಾಮಾನ್ಯವಾಗಿ ಜಿಬಿಎಸ್ ತಲೆದೋರುವುದಕ್ಕೆ ಮುಂಚಿತವಾಗಿ ಯಾವುದಾದರೂ ಸೋಂಕು ಅಥವಾ ಲಸಿಕೆ ಹಾಕಿಸಿಕೊಂಡಿರುವುದು ಅಥವಾ ಶಸ್ತ್ರಚಿಕಿತ್ಸೆ (ಮ್ಯಾಂಡಿಬಲ್ ಸರ್ಜರಿ, ಬೆನ್ನುಹುರಿಯ ಶಸ್ತ್ರಚಿಕಿತ್ಸೆ ಇತ್ಯಾದಿ)ಯಂತಹ ರೋಗ ನಿರೋಧಕ ಪ್ರತಿಕ್ರಿಯೆಯನ್ನು ಪ್ರಚೋದಿಸುವಂತಹ ಸ್ಥಿತಿಗೆ ರೋಗಿ ಒಳಗಾಗಿರುತ್ತಾರೆ. ಸಾಮಾನ್ಯವಾಗಿ ಜಿಬಿಎಸ್ ಗೆ ಮುಂಚಿತವಾಗಿ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕುಗಳು ಉಂಟಾಗಿರುತ್ತವೆ. ಸೈಟೊಮೆಗಾಲೊವೈರಸ್, ಎಬ್‌ಸ್ಟೀನ್-ಬಾರ್ ವೈರಸ್, ವೆರಿಸೆಲ್ಲಾ ಜೋಸ್ಟರ್, ಜೀಕಾ ವೈರಸ್ ಮತ್ತು ಕೋವಿಡ್-19 ವೈರಸ್‌ಗಳಂತಹ ವೈರಸ್ ಸೋಂಕುಗಳು ಜಿಬಿಎಸ್‌ನ್ನು ಪ್ರಚೋದಿಸಬಲ್ಲವು. ರಕ್ತಸಹಿತ ಅತಿಸಾರಕ್ಕೆ ಕಾರಣವಾಗುವ ಕ್ಯಾಂಪಿಲೊಬ್ಯಾಕ್ಟರ್ ಜೆಜುನಿ ಎಂಬ ಬ್ಯಾಕ್ಟೀರಿಯಾ ಸೋಂಕು ಜೆಬಿಎಸ್‌ಗೆ ಕಾರಣವಾಗುವುದು ತಿಳಿದುಬಂದಿದೆ. ಕ್ಯಾಂಪಿಲೊಬ್ಯಾಕ್ಟರ್ ಸೋಂಕಿಗೆ ತುತ್ತಾಗುವ ಪ್ರತೀ 1 ಸಾವಿರ ಮಂದಿಯಲ್ಲಿ ಒಬ್ಬರಿಗೆ ಜಿಬಿಎಸ್ ಉಂಟಾಗುತ್ತದೆ.
ಜಿಬಿಎಸ್ ಎಷ್ಟು ಸಾಮಾನ್ಯ?
ವಾರ್ಷಿಕವಾಗಿ ಪ್ರತೀ 1 ಲಕ್ಷ ಮಂದಿಯಲ್ಲಿ 1.55 ಮಂದಿಗೆ ಜಿಬಿಎಸ್ ಬಾಧಿಸುತ್ತದೆ. ಪುರುಷರು ಮಹಿಳೆಯರಿಗಿಂತ ಸುಮಾರು 1.5 ಪಟ್ಟು ಹೆಚ್ಚು ಜಿಬಿಎಸ್‌ಗೆ ಒಳಗಾಗುತ್ತಾರೆ.
ಇದು ಅಂಟುರೋಗವೇ?
ಅಲ್ಲ, ಜಿಬಿಎಸ್ ಅಂಟುರೋಗವಲ್ಲ. ಆದರೆ ಸಾಮಾನ್ಯವಾಗಿ ಜಿಬಿಎಸ್ ಉಂಟಾಗುವುದಕ್ಕೆ ಮುನ್ನ ರೋಗಿ ಸೋಂಕುರೋಗಗಳಿಗೆ ತುತ್ತಾಗಿರುತ್ತಾನೆ. ಕಡಿಮೆ ತಲಾದಾಯ ಮತ್ತು ಮಧ್ಯಮ ತಲಾದಾಯದ ದೇಶಗಳಲ್ಲಿ ಇರುವ ಕಳಪೆ ನೈರ್ಮಲ್ಯ ಮತ್ತು ಕಳಪೆ ಶೌಚ ಸ್ಥಿತಿಗಳಿಂದಾಗಿ ಜನರು ಆಗಾಗ ಸೋಂಕುಗಳಿಗೆ ತುತ್ತಾಗುವ ಮೂಲಕ ಜಿಬಿಎಸ್‌ಗೆ ಒಳಗಾಗುವ ಅಪಾಯವನ್ನು ಹೆಚ್ಚು ಹೊಂದಿರುತ್ತಾರೆ. ಜಿಬಿಎಸ್‌ಗೆ ಕಾರಣವಾಗಬಲ್ಲ ಸೋಂಕು ರೋಗಗಳ ಹಾವಳಿಯಿಂದಾಗಿ ಜಿಬಿಎಸ್ ಹಾವಳಿಯೂ ಉಂಟಾದ ಪರಿಸ್ಥಿತಿ ಈ ಹಿಂದೆ ಕಂಡುಬಂದಿತ್ತು. ಕ್ಯಾಂಪಿಲೊಬ್ಯಾಕ್ಟರ್ ಜೆಜುನಿ ಹಾವಳಿಯಿಂದಾಗಿ ಚೀನ (2007) ಮತ್ತು ಮೆಕ್ಸಿಕೊ (2011)ರಲ್ಲಿ ಜಿಬಿಎಸ್ ಹಾವಳಿಯೂ ತಲೆದೋರಿತ್ತು. ಈ ವರ್ಷ ಪೆರು ದೇಶದಲ್ಲಿ ಜಿಬಿಎಸ್ ಹೆಚ್ಚಳ ಕಂಡುಬಂದಿದೆ. ರೋಗಿಗಳು ಜಿಬಿಎಸ್ ಉಂಟಾಗುವುದಕ್ಕೆ ಆರು ವಾರಗಳ ಹಿಂದಿನ ಅವಧಿಯಲ್ಲಿ ಕೋವಿಡ್-19, ಗ್ಯಾಸ್ಟ್ರೊಇಂಟಸ್ಟೈನಲ್ ಸೋಂಕುಗಳು ಅಥವಾ ಜಿಕಾ ವೈರಾಣು ಸೋಂಕಿಗೆ ತುತ್ತಾಗಿದ್ದರು.
ಜಿಬಿಎಸ್‌ನ ಲಕ್ಷಣಗಳೇನು?
ಕಾಲುಗಳಲ್ಲಿ ಚುಚ್ಚಿದಂತಹ ಅಥವಾ ಜೋಮು ಹಿಡಿದಂತಹ ಅಸಹಜ ಅನುಭವ ಮತ್ತು ನಿಶ್ಶಕ್ತಿಯೊಂದಿಗೆ ಜಿಬಿಎಸ್ ಆರಂಭವಾಗುತ್ತದೆ. ನಿಶ್ಶಕ್ತಿ ಸಾಮಾನ್ಯವಾಗಿ ಪೃಷ್ಠ-ಸೊಂಟ ಭಾಗ ಮತ್ತು ತೊಡೆಗಳಲ್ಲಿ ಅನುಭವಕ್ಕೆ ಬರುವುದಾಗಿದ್ದು, ಇದರಿಂದ ಕುಳಿತಲ್ಲಿಂದ ಏಳುವುದಕ್ಕೆ ಕಷ್ಟವಾಗುತ್ತದೆ. ಬಳಿಕ ಇದು “ಆರೋಹಣ’ ಕ್ರಮದಲ್ಲಿ ಪ್ರಗತಿ ಹೊಂದುತ್ತ ಕೈಗಳು ಮತ್ತು ಕ್ರಮೇಣ ತಲೆ ಮತ್ತು ಕುತ್ತಿಗೆಗಳನ್ನು ಆವರಿಸುತ್ತದೆ. ಗಂಭೀರ ಪ್ರಕರಣಗಳಲ್ಲಿ ಶ್ವಾಸಾಂಗದ ಸ್ನಾಯುಗಳಿಗೂ ಇದು ವ್ಯಾಪಿಸಿ ಶ್ವಾಸಾಂಗ ಲಕ್ವಾ ಉಂಟಾಗುತ್ತದೆ.
ನುಂಗಲು ಕಷ್ಟವಾಗಬಹುದು, ಮುಖಚಲನೆಗಳು ಕಷ್ಟವಾಗಿ ಕಣ್ರೆಪ್ಪೆಗಳನ್ನು ಮುಚ್ಚಲು, ಜಗಿಯಲು ಕಷ್ಟವಾಗಬಹುದು. ಕಣ್ಣುಗುಡ್ಡೆಯ ಚಲನೆಗೆ ಕಾರಣವಾಗುವ ಸ್ನಾಯುಗಳಿಗೂ ಇದು ವ್ಯಾಪಿಸಿದ್ದರೆ ಎರಡು ದೃಷ್ಟಿ ಅಥವಾ ಡಿಪ್ಲೊಪಿಯಾ ಉಂಟಾಗುತ್ತದೆ. ಸ್ನಾಯುಸೆಳೆತಗಳ ಜತೆಗೆ ತೀವ್ರ ತರಹದ ನೋವು ಕೂಡ ಕಾಣಿಸಿಕೊಳ್ಳಬಹುದು. ಹೃದಯ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ನರವ್ಯವಸ್ಥೆ (ಆಟೊನೊಮಿಕ್ ನರ್ವಸ್ ಸಿಸ್ಟಮ್) ಕೂಡ ಇದರಲ್ಲಿ ಒಳಗೊಂಡಿರಬಹುದು. ಇದರಿಂದಾಗಿ ಹೃದಯ ಬಡಿತ ಗತಿ ಹೆಚ್ಚಳ ಅಥವಾ ಕುಸಿತ, ರಕ್ತದೊತ್ತಡ ಹೆಚ್ಚಳ ಅಥವಾ ಕುಸಿತ ತಲೆದೋರಬಹುದು. ಜಿಬಿಎಸ್‌ನ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾದ 2 ವಾರಗಳ ಬಳಿಕ ದೌರ್ಬಲ್ಯ ಉತ್ತುಂಗ ಸ್ಥಿತಿಯನ್ನು ತಲುಪುತ್ತದೆ.
ಜಿಬಿಎಸ್ ವಿಧಗಳು ಯಾವುವು?
ಜಿಬಿಎಸ್ ಹಲವು ವಿಧಗಳಲ್ಲಿ ಕಾಣಿಸಿಕೊಳ್ಳಬಹುದು.
ಅಕ್ಯೂಟ್ ಇನ್‌ಫ್ಲಮೇಟರಿ ಡಿಮೈಲಿನೇಟಿಂಗ್ ಪಾಲಿನ್ಯುರೋಪತಿ (ಎಐಡಿಪಿ). ಇದು ಜಿಬಿಎಸ್‌ನ ಸಾಂಪ್ರದಾಯಿಕ ವಿಧವಾಗಿದ್ದು, ಕಾಲುಗಳಲ್ಲಿ ಉಂಟಾಗಿ ಬಳಿಕ ಕ್ರಮೇಣ ಮೇಲಾºಗಕ್ಕೆ ವ್ಯಾಪಿಸುತ್ತದೆ.
ಆಕ್ಯೂಟ್ ಮೋಟರ್ ಆಕ್ಸೋನಲ್ ನ್ಯೂರೋಪತಿ (ಎಎಂಎಎನ್) ಮತ್ತು ಅಕ್ಯೂಟ್ ಮೋಟರ್ ಸೆನ್ಸರಿ ಆಕ್ಸೋನಲ್ ನ್ಯೂರೋಪತಿ (ಎಎಂಎಸ್‌ಎಎನ್). ಇವು ಎಐಡಿಪಿಯಿಂದ ಹೆಚ್ಚು ತೀವ್ರ ಸ್ವರೂಪದವುಗಳಾಗಿದ್ದು, ಬಾಧಿತ ಸ್ನಾಯುಗಳಲ್ಲಿ ದೌರ್ಬಲ್ಯ ಮತ್ತು ಸ್ನಾಯುನಷ್ಟಕ್ಕೆ ಕಾರಣವಾಗುತ್ತವೆ.
ಮಿಲ್ಲರ್ ಫಿಶರ್ ಸಿಂಡ್ರೋಮ್ ಎಂಬ ವಿಧದಲ್ಲಿ ಕಣ್ಣುಗಳ ಸ್ನಾಯುಗಳು ಕೂಡ ಬಾಧಿತವಾಗುವುದರಿಂದ ಎರಡು ದೃಷ್ಟಿಯ ಜತೆಗೆ ನಡೆಯುವಾಗ ಅಸಮತೋಲನ ಕೂಡ ಉಂಟಾಗುತ್ತದೆ.
ಜಿಬಿಎಸ್ ಪತ್ತೆ ಹಚ್ಚುವುದು ಹೇಗೆ?
ವೈದ್ಯಶಾಸ್ತ್ರೀಯ ರೋಗಪತ್ತೆಯ ವಿಧಾನಗಳ ಜತೆಗೆ ಇತರ ಕೆಲವು ಪರೀಕ್ಷೆಗಳು ಕೂಡ ಜಿಬಿಎಸ್ ಪತ್ತೆಹಚ್ಚಲು ನೆರವಾಗುತ್ತವೆ. ಇವುಗಳಲ್ಲಿ ನರ್ವ್ ಕಂಡಕ್ಷನ್ ಸ್ಟಡಿ ಒಂದಾಗಿದ್ದು, ಇದರಲ್ಲಿ ನರಗಳ ತಪಾಸಣೆ ನಡೆಸಲು ಎಲೆಕ್ಟ್ರೊಫಿಸಿಯಾಲಾಜಿಕಲ್ ಪರೀಕ್ಷೆಯನ್ನು ಉಪಯೋಗಿಸಲಾಗುತ್ತದೆ. ರೋಗ ಕಾಣಿಸಿಕೊಂಡ ಆರಂಭದ ಒಂದು ವಾರದಲ್ಲಿ ಈ ಪರೀಕ್ಷೆಯ ಫಲಿತಾಂಶ ಸಹಜವಾಗಿ ಕಂಡುಬರಬಹುದು. ಬೆನ್ನುಹುರಿ ದ್ರವದ ಪರೀಕ್ಷೆಯನ್ನೂ ನಡೆಸಬಹುದಾಗಿದೆ.
ಬೆನ್ನುಹುರಿಯಲ್ಲಿ ಕಶೇರುಕ ಮಣಿಗಳ ಸಂಧಿಯ ಮೂಲಕ ಸೂಜಿಯನ್ನು ಕಳುಹಿಸಿ ದ್ರವದ ಮಾದರಿಯನ್ನು ಹೊರತೆಗೆದು ಪರೀಕ್ಷಿಸಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ, ಅದರಲ್ಲೂ ವಿಶೇಷವಾಗಿ ಆರಂಭಿಕ ಹಂತದಲ್ಲಿರುವ ಪ್ರಕರಣಗಳಲ್ಲಿ ಟ್ರಾನ್ಸ್‌ವರ್ಸ್ ಮೈಲೈಟಿಸ್‌ನಂತಹ ಬೆನ್ನುಹುರಿಯ ಕಾಯಿಲೆಗಳು ಜಿಬಿಎಸ್‌ನಂತಹುದೇ ಲಕ್ಷಣಗಳನ್ನು ಹೊಂದಿದ್ದು, ಮೂತ್ರಕೋಶ ಅಥವಾ ಮಲವಿಸರ್ಜನೆಯಂತಹ ಲಕ್ಷಣಗಳು ಮಾತ್ರ ಭಿನ್ನವಾಗಿರುವಂತಹ ಸಂದರ್ಭಗಳಲ್ಲಿ ಎಂಆರ್‌ಐಯಂತಹ ಪರೀಕ್ಷೆಗಳನ್ನು ಉಪಯೋಗಿಸಬಹುದಾಗಿದೆ. ಪೊಟ್ಯಾಸಿಯಂನಂತಹ ಇಲೆಕ್ಟ್ರೊಲೈಟ್ ಗಳಲ್ಲಿ ಅಸಹಜತೆಗಳು ಇವೆಯೇ ಎಂದು ಕಂಡುಕೊಳ್ಳಲು ರಕ್ತಪರೀಕ್ಷೆಗಳನ್ನು ನಡೆಸಬಹುದಾಗಿದೆ. ಈ ಸ್ಥಿತಿಯೂ ಜಿಬಿಎಸ್‌ನಂತಹುದೇ ಲಕ್ಷಣಗಳನ್ನು ಪ್ರದರ್ಶಿಸಬಹುದಾಗಿದೆ.
ಜಿಬಿಎಸ್‌ಗೆ ಚಿಕಿತ್ಸೆಯೇನು?
ಶ್ವಾಸಾಂಗ ಲಕ್ವಾದಂತಹ ಪ್ರಕರಣಗಳಲ್ಲಿ ಜಿಬಿಎಸ್‌ಗೆ ಚಿಕಿತ್ಸೆಯಲ್ಲಿ ಮೆಕ್ಯಾನಿಕಲ್ ವೆಂಟಿಲೇಶನ್‌ನಂತಹ ಪೂರಕ ಆರೈಕೆ ಸೇರಿರುತ್ತದೆ. ರಕ್ತದೊತ್ತಡ ಮತ್ತು ಹೃದಯ ಬಡಿತದ ಗತಿಯಲ್ಲಿ ಏರಿಳಿತಗಳನ್ನು ನಿಭಾಯಿಸಲು ಔಷಧ ಚಿಕಿತ್ಸೆ ಅಗತ್ಯವಾಗುತ್ತದೆ. ಜಿಬಿಎಸ್‌ಗೆ ನಿರ್ದಿಷ್ಟ ಚಿಕಿತ್ಸೆಗಳೆಂದರೆ ಇಂಟ್ರಾವೇನಸ್ ಇಮ್ಯುನೊಗ್ಲಾಬ್ಯುಲಿನ್ (ಐವಿಐಜಿ) ಅಥವಾ ಪ್ಲಾಸ್ಮಾಫೆರೆಸಿಸ್. ಐವಿಐಜಿಯಲ್ಲಿ ರೋಗನಿರೋಧಕ ಶಕ್ತಿಯ ಅಸಹಜ ಪ್ರತಿಕ್ರಿಯೆಯನ್ನು ಶಮನಗೊಳಿಸಲು ಆ್ಯಂಟಿಬಾಡಿಗಳನ್ನು ನೀಡಲಾಗುತ್ತದೆ. ಪ್ಲಾಸ್ಮಾಫೆರೆಸಿಸ್ ಎಂಬುದು ಡಯಾಲಿಸಿಸ್‌ನಂತಹ ಒಂದು ಪ್ರಕ್ರಿಯೆಯಾಗಿದ್ದು, ರಕ್ತವನ್ನು ಶೋಧಿಸಿ ಅಪಾಯಕಾರಿ ಆ್ಯಂಟಿಬಾಡಿಗಳನ್ನು ತೆಗೆದುಹಾಕುತ್ತದೆ. ಜಿಬಿಎಸ್‌ಗೆ ಇವೆರಡೂ ಸಮಾನ ಪರಿಣಾಮಕಾರಿ ಚಿಕಿತ್ಸೆಗಳಾಗಿವೆ.
ಪ್ಲಾಸ್ಮಾಫೆರೆಸಿಸ್ ಮಿತವ್ಯಯಿ ಚಿಕಿತ್ಸೆಯಾಗಿದ್ದರೂ ರಕ್ತದೊತ್ತಡವನ್ನು ಕಡಿಮೆ ಮಾಡಬಹುದಾದ್ದರಿಂದ ಹೃದಯದ ಆರೋಗ್ಯ ಚೆನ್ನಾಗಿಲ್ಲದ ರೋಗಿಗಳಿಗೆ ಎಚ್ಚರಿಕೆಯಿಂದ ಉಪಯೋಗಿಸಬೇಕಾಗಿರುತ್ತದೆ. ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ರಕ್ತ ತೆಳುಗೊಳಿಸುವ ಔಷಧಗಳನ್ನು ಬಳಸಬೇಕಾಗುತ್ತದೆ. ಹಾಸಿಗೆ ಹುಣ್ಣುಗಳಾಗುವುದನ್ನು ತಡೆಯಲು ರೋಗಿಯ ಭಂಗಿಯನ್ನು ಆಗಾಗ ಬದಲಾಯಿಸಬೇಕಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಜಿಬಿಎಸ್ ಪುನರಾವರ್ತನೆಯಾಗಿ ಕ್ರಾನಿಕ್ ಇನ್‌ಫ್ಲಮೇಟರಿ ಡಿಮೈಲಿನೇಟಿಂಗ್ ಪಾಲಿನ್ಯುರೋಪತಿ (ಸಿಐಡಿಪಿ) ತಲೆದೋರಬಹುದು.
ಇಂತಹ ಪ್ರಕರಣಗಳಲ್ಲಿ ಹೆಚ್ಚುವರಿಯಾಗಿ ಇಮ್ಯುನೊಮಾಡ್ಯುಲೇಟರಿ ಏಜೆಂಟ್ ಔಷಧಗಳನ್ನು ಉಪಯೋಗಿಸಬೇಕಾಗುತ್ತದೆ. ಜಿಬಿಎಸ್‌ಗೆ ತುತ್ತಾದ ರೋಗಿಗಳಲ್ಲಿ ನ್ಯುಮೋನಿಯಾ, ಸೆಪ್ಸಿಸ್‌ನಿಂದ ಸಾವು ಉಂಟಾಗಬಹುದು. ಕೆಲವು ಅಪರೂಪದ ಪ್ರಕರಣಗಳಲ್ಲಿ ಆಟೊನೊಮಿಕ್ ಡಿಸ್‌ಫಂಕ್ಷನ್‌ನಿಂದಾಗಿಯೂ ರೋಗಿ ಮರಣ ಹೊಂದಬಹುದು. ಸಾಮಾನ್ಯವಾಗಿ ಇದು ವಯೋವೃದ್ಧ ರೋಗಿಗಳಲ್ಲಿ ಮತ್ತು ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಸಂಭವಿಸುತ್ತದೆ. ಜಿಬಿಎಸ್‌ಗೆ ಯಾವುದೆ ಲಸಿಕೆ ಸದ್ಯಕ್ಕೆ ಲಭ್ಯವಿಲ್ಲ. ಶೀಘ್ರವಾಗಿ ಪತ್ತೆಹಚ್ಚುವುದು ಮತ್ತು ತತ್‌ಕ್ಷಣ ಚಿಕಿತ್ಸೆ ಒದಗಿಸುವುದರಿಂದ ಉತ್ತಮ ಚೇತರಿಕೆ ಕಾಣಬಹುದಾಗಿದೆ.
-ಡಾ| ರೋಹಿತ್ ಪೈ,
ಕನ್ಸಲ್ಟಂಟ್ ನ್ಯುರಾಲಜಿ,
ಕೆಎಂಸಿ ಆಸ್ಪತ್ರೆ,
ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ನ್ಯುರಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.