ತುರ್ತು ವೈದ್ಯಕೀಯ ಸಂದರ್ಭ ಎದುರಿಸುವುದು ಹೇಗೆ
Team Udayavani, Aug 30, 2020, 6:25 PM IST
ಸಾಂದರ್ಭಿಕ ಚಿತ್ರ
ಕಾಯಿಲೆಗಳು ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತವೆಯೇ? ಎಂಬ ಮಾತಿದೆ. ಮರಗಿಡಗಳಿಗೂ ಕಾಯಿಲೆಗಳು ಬರುತ್ತವೆಂಬುದು ನಿಜವಾದರೂ ಕಾಯಿಲೆ ಎಂಬುದು ಮಾನವ ಜೀವನದಲ್ಲಿ ಸಹಜ. ಅಷ್ಟಕ್ಕೆಲ್ಲಾ ನಾವು ಎದೆಗುಂದಬಾರದು ಎಂಬುದಷ್ಟೆ ಇದರ ತಾತ್ಪರ್ಯ. ಗಾದೆ ಮಾತು ಏನಿದ್ದರೂ , ತೀವ್ರ ಕಾಯಿಲೆ ಎಂಬುದು ಎಂತಹಾ ಧೈರ್ಯಶಾಲಿಯನ್ನೂ ಒಮ್ಮೆಗೆ ಎದೆಗುಂದುವಂತೆ ಮಾಡಬಲ್ಲುದು ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಧುತ್ತೆಂದು ದಾಳಿಯಿಡುವ ತುರ್ತು ಕಾಯಿಲೆಗಳನ್ನು ಎದುರಿಸಲು ಮಾನಸಿಕ ಪೂರ್ವ ತಯಾರಿಯೂ ಅತ್ಯಗತ್ಯ. ತುರ್ತು ಕಾಯಿಲೆಗಳನ್ನು ಎದುರಿಸುವುದು ಹೇಗೆ? ಹಂತ ಹಂತವಾಗಿ ತಿಳಿಯೋಣ ಬನ್ನಿ..
ಮೊದಲ ಹಂತವೆಂದರೆ ಸಾಮಾನ್ಯ ತುರ್ತು ಕಾಯಿಲೆಗಳ ಬಗ್ಗೆ ಪ್ರಾಥಮಿಕ ಮಾಹಿತಿ ಪಡೆದುಕೊಳ್ಳುವುದು. ನಮ್ಮ ಆಸುಪಾಸಿನಲ್ಲಿ ಅಥವಾ ಸ್ಥಳೀಯ ಮಾಧ್ಯಮಗಳಲ್ಲಿ ಕಂಡು ಕೇಳಿ ಬರುವ ಸಾಮಾನ್ಯ ತುರ್ತು ಕಾಯಿಲೆಗಳ ಬಗ್ಗೆ ಪ್ರಜ್ಞಾವಂತರು ತುಸು ತಿಳಿದಿರುವುದು ಲೇಸು. ಇವು ಶೀತ, ನೆಗಡಿ, ಫ್ಲ್ಯೊ ಚಿಕನ್ ಪಾಕ್ಸ್ (ಕೋಟಲೆ) ಇತ್ಯಾದಿ ಪ್ರಾಣಾಂತಿಕವಲ್ಲದ ಸೋಂಕುಗಳಿರಬಹುದು ಅಥವಾ ದಡಾರ, ಡೆಂಗಿ, ಮಲೇರಿಯಾ, ಚಿಕುನ್‌ಗುನ್ಯಾ ಇತ್ಯಾದಿ ತುಸು ಮಟ್ಟಿಗೆ ಅಪಾಯಕಾರಿ ರೋಗಗಳೂ ಆಗಿರಬಹುದು. ಅಥವಾ ಪ್ರಾಚೀನ ಕಾಲದಿಂದಲೂ ಮನುಕುಲವನ್ನು ಬಾಧಿಸುತ್ತಿರುವ ಕ್ಷಯ ರೋಗವೇ ಆಗಿರಬಹುದು. ಇವೆಲ್ಲದರಲ್ಲಿಯೂ ಮುಖ್ಯ ರೋಗಲಕ್ಷಣಗಳ ಬಗ್ಗೆ ಮಾಹಿತಿ ಇದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯಲು ಸಹಾಯವಾಗುತ್ತದೆ. “”ಜ್ವರ ಕಾಣಿಸಿಕೊಂಡ ಕೂಡಲೇ ವೈದ್ಯರ ಬಳಿ ಹೋದರಾಯಿತಲ್ಲವೇ? ಮತ್ತೇಕೆ ಚಿಂತೆ? ಎಂಬ ಸುಲಭ ಉಪಾಯ ಹಲವರಿಗೆ ಹೊಳೆಯಬಹುದು. ನಾವು ಕೂಡಲೇ ವೈದ್ಯರ ಬಳಿ ಹೋಗಿ ಸಲಹೆ ಪಡೆಯುವುದು ತಪ್ಪಲ್ಲ.
ಆದರೆ ಹಲವಾರು ಬಾರಿ ಅದು ಅನಾವಶ್ಯಕವಾಗಿರುತ್ತದೆ. ಅಲ್ಲದೆ, ಕಾಯಿಲೆ ಯಾ ಜ್ವರ ಕಾಣಿಸಿದ ಮೊದಲ ಒಂದೆರಡು ದಿನಗಳಲ್ಲಿ ತಜ್ಞ ವೈದ್ಯರೂ ಕೂಡ ಜ್ವರದ ಮೂಲ ಕಾರಣವನ್ನು ಕಂಡುಹಿಡಿಯುವುದು ಕಷ್ಟ ಸಾಧ್ಯ. ಕಾಯಿಲೆಯಿಂದ ಉಂಟಾಗುವ ದೇಹದಲ್ಲಿನ ಜೈವಿಕ ಬದಲಾವಣೆಗಳನ್ನು ರಕ್ತ ತಪಾಸಣೆಯ ಮೂಲಕ ಗುರುತಿಸಿ ರೋಗ ನಿಧಾನ (ಡಯಾಗ್ನೊಸಿಸ್) ಮಾಡಬೇಕಾದರೆ ಕನಿಷ್ಠ 24-48 ಗಂಟೆಗಳು ಬೇಕಾಗುತ್ತವೆ. ಹೀಗಿರುವಾಗ ಸಾಮಾನ್ಯ ರೋಗಗಳ ಬಗ್ಗೆ ಪ್ರಾಥಮಿಕ ಮಾಹಿತಿ ಇದ್ದಲ್ಲಿ ಅನಾವಶ್ಯಕವಾಗಿ ಆತಂಕ ಪಡುವುದು ತಪ್ಪುತ್ತದೆ. ಮಕ್ಕಳ ವಿಚಾರದಲ್ಲಂತೂ ಇದು ಇನ್ನೂ ಹೆಚ್ಚು ಅನ್ವಯಿಸುತ್ತದೆ. ಸಾಮಾನ್ಯ ಕಾಯಿಲೆಗಳ ಬಗೆಗಿನ ಪ್ರಾಥಮಿಕ ಮಾಹಿತಿ ದಿನಪತ್ರಿಕೆ, ಇಲೆಕ್ಟ್ರಾನಿಕ್ ಮಾಧ್ಯಮ, ಅಂತರ್ಜಾಲ ಇತ್ಯಾದಿಯಾಗಿ ಇಂದು ಸುಲಭವಾಗಿ ಲಭ್ಯವಿದೆ. ಆದರೆ ಮಾಹಿತಿಯನ್ನು ಅಧಿಕೃತ ಮೂಲಗಳಿಂದಲೇ ಪಡೆಯಬೇಕು.
ಜ್ವರ ಅಥವಾ ಸುಸ್ತು ಕಾಣಿಸಿಕೊಂಡ ಮೊದಲ 24ರಿಂದ 48 ಗಂಟೆಗಳವರೆಗೆ ರೋಗಿಯ ಒಟ್ಟಾರೆ ಆರೋಗ್ಯ ಸ್ಥಿರವಾಗಿದ್ದಲ್ಲಿ ಮನೆಯಲ್ಲಿಯೇ ಆರೈಕೆ ಮಾಡುವುದು ತಪ್ಪಲ್ಲ. ಸಮತೋಲಿತ ಮೃದು ಆಹಾರ; ಜ್ವರ, ಮೈ ಕೈ ನೋವು, ವಾಕರಿಕೆ ಇತ್ಯಾದಿ ರೋಗಲಕ್ಷಣಗಳಿಗೆ ಉಪಶಮನಕ್ಕಾಗಿ ಮದ್ದು – ಇಷ್ಟರಲ್ಲಿಯೇ ಹೆಚ್ಚಿನ ಬಾರಿ ಪರಿಸ್ಥಿತಿ ಹತೋಟಿಗೆ ಬರುತ್ತದೆ. ಇಲ್ಲಿ ರೋಗಿಯ ಸ್ಥಿತಿ ಮೇಲ್ನೋಟಕ್ಕೆ ಸ್ಥಿರವಾಗಿರುವುದು ಅತಿ ಮುಖ್ಯ. ತೀರಾ ಹೆಚ್ಚಿನ ಜ್ವರ, ಉಸಿರಾಡುವಿಕೆಯಲ್ಲಿ ತೊಂದರೆ, ಎದೆನೋವು, ಮಲ ಅಥವಾ ಮೂತ್ರದಲ್ಲಿ ರಕ್ತ ಸ್ರಾವ, ಕನವರಿಸುವಿಕೆ ಇತ್ಯಾದಿಗಳು ರೋಗಿಯ ದೇಹಸ್ಥಿತಿ ಅಸ್ಥಿರವಾಗುತ್ತಿರುವ ಸೂಚನೆಗಳಾಗಿದ್ದು ರೋಗಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ತಜ್ಞ ವೈದ್ಯರಿಂದ ತಪಾಸಣೆಗೊಳಪಡಿಸುವುದೂ ಅಷ್ಟೇ ಮುಖ್ಯ. ದೈಹಿಕ ಅಸ್ಥಿರತೆಯ ಲಕ್ಷಣಗಳಿದ್ದಾಗ ಹಗಲು-ರಾತ್ರಿ ಎಂಬುದನ್ನು ಲೆಕ್ಕಿಸದೆ ತುರ್ತುಚಿಕಿತ್ಸಾ ವಿಭಾಗಕ್ಕೆ ಕೊಂಡೊಯ್ಯಬೇಕು. ಹಾಗೆ ಕೊಂಡೊಯ್ಯುವಾಗ ರೋಗಿಯ ಕಾಯಿಲೆ ವಿವರಗಳನ್ನು ತಿಳಿದಿರುವವರೊಬ್ಬರು ರೋಗಿಯ ಜೊತೆಗಿರುವುದು ಒಳ್ಳೆಯದು. ಏಕೆಂದರೆ ರೋಗಿಯ ಸ್ಥಿತಿ ಬಿಗಡಾಯಿಸಿ ಆತ ವೈದ್ಯರಿಗೆ ವಿವರಗಳನ್ನು ಸ್ವತಃ ನೀಡುವ ಸ್ಥಿತಿಯಲ್ಲಿಲ್ಲದಿದ್ದಲ್ಲಿ ಮನೆಯವರು ನೀಡುವ ವಿವರಗಳೇ ಪ್ರಾಥಮಿಕ ಚಿಕಿತ್ಸೆಗೆ ಆಧಾರವಾಗುತ್ತವೆ.
ಒಂದು ಬಾರಿ, ತಜ್ಞ ವೈದ್ಯರಡಿ ಆಸ್ಪತ್ರೆಯಲ್ಲಿ ರೋಗಿಯ ದಾಖಲಾತಿ ಆಯಿತೆಂದರೆ ಚಿಕಿತ್ಸೆಯ ಹೊಣೆ ವೈದ್ಯರದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಕಾಲ ಕಾಲಕ್ಕೆ ವೈದ್ಯರು ಕೊಡುವ ಸಲಹೆ, ಸೂಚನೆಗಳನ್ನು ತಪ್ಪದೇ ಪಾಲಿಸುವ ಹೊಣೆ ರೋಗಿಯ ಕಡೆಯವರಿಗಿರುತ್ತದೆ. ಕೆಲವೊಮ್ಮೆ ಇಲ್ಲಿ ರೋಗಿಯ ಆರ್ಥಿಕ ಇತಿ-ಮಿತಿಗಳು ಸವಾಲಾಗುವುದುಂಟು. ಇದರ ಬಗ್ಗೆಯೂ ವೈದ್ಯರಲ್ಲಿ ಚರ್ಚಿಸಿದಲ್ಲಿ, ಅವರೂ ಕೂಡ ಚಿಕಿತ್ಸೆಯಲ್ಲಿ ಸಾಧ್ಯವಾದಷ್ಟುಮಾರ್ಪಾಡು ಮಾಡಲು ಸಹಕಾರಿಯಾಗುತ್ತದೆ. ಆದರೆ ಚಿಕಿತ್ಸಾ ವೆಚ್ಚವನ್ನು ಇಳಿಸುವ ಸಾಧ್ಯತೆ ಅಥವಾ ಅಧಿಕಾರ, ಚಿಕಿತ್ಸೆ ನೀಡುವ ವೈದ್ಯನ ಕೈಯಲ್ಲಿ ಎಲ್ಲಾ ಸಂದರ್ಭ ಗಳಲ್ಲಿಯೂ ಇರುವುದಿಲ್ಲ ಎಂಬುದು ಗಮನಾರ್ಹ.
ಆರ್ಥಿಕ ವಿಚಾರಕ್ಕೆ ಬಂದಾಗ ಇನ್ನೊಂದು ಮುಖ್ಯ ಮಾಹಿತಿ ಗಮನದಲ್ಲಿಟ್ಟು ಕೊಳ್ಳಬೇಕು. ಮೇಲ್ಕಾಣಿಸಿದ ಹೆಚ್ಚಿನ ಸೋಂಕು ರೋಗಗಳು ಆಕಸ್ಮಿಕವಾಗಿ ಬರುವಂತಹವು ಮತ್ತು ಇವುಗಳನ್ನು ಬರದಂತೆ ನಿರೋಧಿಸುವುದು ಕಷ್ಟ ಸಾಧ್ಯ. ಎಷ್ಟೇ ಜಾಗರೂಕರಾಗಿದ್ದರೂ ಕಾಯಿಲೆ ಬರಬಹುದು. ರೋಗದ ಬಗೆಗಿನ ಮಾಹಿತಿ ನಮ್ಮನ್ನು ಮಾನಸಿಕವಾಗಿ ಸಿದ್ಧಗೊಳಿಸಬಹುದೇ ಹೊರತು ಆರ್ಥಿಕವಾಗಿ ಅಲ್ಲ. ಆದ್ದರಿಂದ ಪ್ರಾಜ್ಞನಾದ ವ್ಯಕ್ತಿ ತನಗೆ ಲಭ್ಯವಿರುವ ವೈದ್ಯಕೀಯ ವಿಮಾ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಇಟ್ಟುಕೊಂಡಿದ್ದು, ಸೂಕ್ತ ದಾಖಲೆಪತ್ರಗಳನ್ನು ಸಿದ್ಧಪಡಿಸಿಕೊಳ್ಳುವುದು ಮುಖ್ಯ. ವಿಮೆಯನ್ನು ನವೀಕರಿಸಲಾಗಿದೆಯೇ ಎಂಬುದನ್ನೂ ಖಾತರಿ ಪಡಿಸಿಕೊಳ್ಳಬೇಕು. ವೈದ್ಯಕೀಯ ವಿಮೆಯ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿ ಅಪ್ರಸ್ತುತವಾದ್ದರಿಂದ ಕೊಟ್ಟಿಲ್ಲ. ವ್ಯಕ್ತಿಯ ಅಥವಾ ಕುಟುಂಬದ ಮೇಲೆ ಧುತ್ತೆಂದು ಎರಗುವ ಇನ್ನೊಂದು ವೈದ್ಯಕೀಯ ವೆಚ್ಚವೆಂದರೆ ಶಸ್ತ್ರಚಿಕಿತ್ಸೆಯದ್ದು.
ಇಲ್ಲಿಯೂ ಆಯಾ ರೋಗಗಳ ಬಗ್ಗೆ ಪ್ರಾಥಮಿಕ ಮಾಹಿತಿ, ಚಿಕಿತ್ಸೆಯ ಬಗ್ಗೆ ಪ್ರಾಥಮಿಕ ಮಾಹಿತಿಯು ಚಿಕಿತ್ಸೆಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ಸಹಕಾರಿಯಾಗಬಲ್ಲುದಾದರೂ ಶಸ್ತ್ರಚಿಕಿತ್ಸೆ ಬೇಕಾಗಬಹುದಾದಂತಹಾ ಕಾಯಿಲೆಗಳಿರಬಹುದಾದ ಸಂದರ್ಭಗಳಲ್ಲಿ ಚಿಕಿತ್ಸೆಯಲ್ಲಿ ವಿಳಂಬ ಸಲ್ಲದು, ಮಾತ್ರವಲ್ಲ ಪ್ರಾಣಾಪಾಯವನ್ನು ತಂದೊಡ್ಡಬಲ್ಲುದು. ಉದಾಹರಣೆಗೆ, ಅಪೆಂಡಿಸೈಟಿಸ್, ಪಿತ್ತಕೋಶದಲ್ಲಿನ ಸೋಂಕು, ಕರುಳಿನ ರಕ್ತಸ್ರಾವ, ಜಠರ ಅಥವಾ ಸಣ್ಣ ಕರುಳಿನ ತೂತಿನಿಂದುಂಟಾಗುವ ಉದರದ ಸೋಂಕು (ಪೆರಿಟೋನೈಟಿಸ್), ಮೂತ್ರನಾಳಗಳಲ್ಲಿನ ಕಲ್ಲು, ಅಂಡಾಶಯದ ತಿರುಚುವಿಕೆ ಇತ್ಯಾದಿ. ಇವೆಲ್ಲದರಲ್ಲಿಯೂ ಹೊಟ್ಟೆನೋವು (ಉದರಶೂಲೆ) ಅತಿಮುಖ್ಯ ರೋಗಲಕ್ಷಣವಾಗಿರುತ್ತದೆ.
ಎಲ್ಲಾ ಕಾಯಿಲೆಗಳ ತೀವ್ರತೆಯೂ ಒಂದೇ ಸಮಾನವಾಗಿರುವುದಿಲ್ಲವಾದರೂ, ಕಾಯಿಲೆ ಏನಿರಬಹುದು ಎಂಬುದನ್ನು ನಿರ್ಧರಿಸುವಲ್ಲಿ ತಪಾಸಣೆಗಳ (ಉದಾ: ರಕ್ತಪರೀಕ್ಷೆ ಅಲ್ಟ್ರಾಸೌಂಡ್ ಇತ್ಯಾದಿ) ಆವಶ್ಯಕತೆ ಇಲ್ಲಿ ಹೆಚ್ಚಿರುವುದರಿಂದ ಹೆಚ್ಚಿನ ವಿಳಂಬ ತರುವಲ್ಲಿ, ಚಿಕಿತ್ಸೆಯ ಹೊಣೆಯನ್ನು ತಜ್ಞರಿಗೆ ಬಿಡುವುದು ಶ್ರೇಯಸ್ಕರ. ಶಸ್ತ್ರ ಚಿಕಿತ್ಸೆ ಬೇಕಾಗುವ ಕಾಯಿಲೆಗಳಿದ್ದಾಗಲೂ ವೈದ್ಯರ ಬಳಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಷ್ಟು ವ್ಯವಧಾನ ಇದ್ದೇ ಇರುತ್ತದೆ. ಆದರೆ ಶಸ್ತ್ರಚಿಕಿತ್ಸೆಯ ವೆಚ್ಚ ಸಾಮಾನ್ಯವಾಗಿ ಹೆಚ್ಚಿರುವುದರಿಂದ ರೋಗಿಯ ಆರ್ಥಿಕ ಸ್ಥಿತಿ ಇಲ್ಲಿ ಪೆಡಂಭೂತದಂತೆ ಎದ್ದು ನಿಲ್ಲುತ್ತದೆ. ಇಲ್ಲಿ ವೈದ್ಯರು ಅಸಹಾಯಕರಾಗಿರುವುದುಂಟು. ಆದ್ದರಿಂದ ಇಂದು ವೈದ್ಯಕೀಯ ವಿಮೆ ಎಂಬುದು ಅನಿವಾರ್ಯ ಎಂದೇ ಹೇಳಬೇಕಾಗುತ್ತದೆ. ವ್ಯವಸ್ಥೆಯನ್ನು ತೆಗಳಿ ಪ್ರಯೋಜನವಾಗಲಾರದು.
ತುರ್ತು ಚಿಕಿತ್ಸೆ ಬೇಕಾಗುವ ಇನ್ನೊಂದು ಸಂದರ್ಭವೆಂದರೆ ಅಪಘಾತ. ಆದರೆ ಇಲ್ಲಿ ಸಂದರ್ಭದ “”ತುರ್ತು” ಸ್ವಯಂ ವೇದ್ಯವಾಗಿರುವುದರಿಂದ ಚರ್ಚಿಸುವ ಪ್ರಮೇಯವಿಲ್ಲ. ಅಪಘಾತ ಯಾವುದೇ ಇರಲಿ ಕೂಡಲೇ ಆಸ್ಪತ್ರೆಗೆ ರೋಗಿಯನ್ನು ಸಾಗಿಸುವುದೊಂದೇ ದಾರಿ. ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆ ಮತ್ತು ಆರ್ಥಿಕ ಕೋನವು ಅಷ್ಟೇ ಮುಖ್ಯ ಎಂದು ಸಮಾಜದ ಗಮನಕ್ಕೆ ತರುವುದೇ ಈ ಲೇಖನದ ಉದ್ದೇಶ.
ಡಾ| ಶಿವಾನಂದ ಪ್ರಭು
ಪ್ರೊಫೆಸರ್, ಸರ್ಜರಿ ವಿಭಾಗ,
ಕೆ.ಎಂ.ಸಿ. ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.