ಏರುತ್ತಿರುವ ಚಿಕಿತ್ಸಾ ವೆಚ್ಚ ನಿರ್ವಹಣೆ ಹೇಗೆ
Team Udayavani, Dec 15, 2019, 4:59 AM IST
ವೈದ್ಯಕೀಯ ವೆಚ್ಚವೆಂಬುದು ಇಂದಿನ ದಿನಗಳಲ್ಲಿ ಮಧ್ಯಮ ವರ್ಗದ ಕುಟುಂಬಗಳಿಗೆ ಅನಿವಾರ್ಯ ತಲೆನೋವೆಂದೇ ಹೇಳಬಹುದು. ಹೆಚ್ಚಿನವರು ಅತ್ತ ಸರಕಾರಿ ಆಸ್ಪತ್ರೆಗೂ ಹೋಗಲಾರರು. ಇತ್ತ ಖಾಸಗಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನೂ ಭರಿಸಲಾರರು. ಅದರಲ್ಲೂ ಕೆಳ ಮಧ್ಯಮ ವರ್ಗದವರ ಪಾಡಂತೂ ಇನ್ನೂ ಅಸಹನೀಯ. ಈ ಸಮಸ್ಯೆಗೆ ಏನು ಕಾರಣ? ಎಲ್ಲಾ ಸಮಸ್ಯೆಗಳಿಗೆ ವೈದ್ಯ ರಂಗವೇ ಕಾರಣವೆಂಬ ಸರಳೀಕೃತ ವಾದ ಉಚಿತವೇ? ಹಾಗಿದ್ದಲ್ಲಿ, ಸಮಸ್ಯೆಯ ಮೂಲ ಎಲ್ಲಿದೆ? ವೈದ್ಯಕೀಯ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕೋಣ ಬನ್ನಿ.
ಸಾಮಾನ್ಯ ಕಾಯಿಲೆಗಳ ಚಿಕಿತ್ಸೆಯೂ ಇಂದು ವೈದ್ಯರು ಬರಿದೇ ಗುಳಿಗೆ ಕೊಟ್ಟು ಸಂತೈಸಿ ಕಳಿಸುವ ಮಟ್ಟಕ್ಕೆ ಉಳಿದಿಲ್ಲ. ಒಂದು ಕಾಲದಲ್ಲಿ, ಕುಟುಂಬ ವೈದ್ಯರು ತಮ್ಮ ಅನುಭವದ ಆಧಾರದ ಮೇಲೆಯೇ ರೋಗ ಮೂಲವನ್ನು ಊಹಿಸಿ ಸರಳ ಚಿಕಿತ್ಸೆ ನೀಡಿ ಕಳುಹಿಸುತ್ತಿದ್ದರು. ಬಹಳಷ್ಟು ಸಲ ಆ ಚಿಕಿತ್ಸೆ ಪರ್ಯಾಪ್ತವೂ ಆಗಿರುತ್ತಿತ್ತು. ಅಪರೂಪಕ್ಕೊಮ್ಮೆ ಚಿಕಿತ್ಸೆ ಫಲಕಾರಿ ಆಗದೇ ಇದ್ದ ಸಂದರ್ಭದಲ್ಲಿ ಯಾರೂ ಕುಟುಂಬ ವೈದ್ಯರನ್ನು ದೂಷಿಸುತ್ತಿರಲಿಲ್ಲ. ಅಲ್ಲದೇ ಆಗಿನ ಕಾಲದ ಸಮಾಜದ ವೈದ್ಯಕೀಯ ಜ್ಞಾನವೂ ಅಷ್ಟಕ್ಕಷ್ಟೇ ಎಂಬಂತಿದ್ದು ವೈದ್ಯರ ಮಾತೇ ವೇದವಾಕ್ಯವಾಗಿತ್ತು. ವೈದ್ಯರಿಗೂ ತಮ್ಮ ವೃತ್ತಿಯಿಂದ ಸಿಗುವ ಹಣಕ್ಕಿಂತ ಸಮಾಜದಲ್ಲಿನ ಗೌರವ, ಸ್ಥಾನ ಮಾನವೇ ಮುಖ್ಯವಾಗಿತ್ತು. ಎಲ್ಲರೂ ನೆಮ್ಮದಿಯಿಂದಿದ್ದರು. ಅಥವಾ ಹಾಗಂದುಕೊಂಡಿದ್ದರು!
ಆದರೆ ಕಾಲ ಬದಲಾಗದಿರುತ್ತದೆಯೇ? ಇಂದು ವ್ಯಕ್ತಿಯೋರ್ವನಿಗೆ ಜ್ವರ ಕಾಣಿಸಿಕೊಂಡಾಗ, ಅದಕ್ಕೆ ಹತ್ತು ಹಲವು ಕಾರಣಗಳಿರಬಹುದು ಎಂಬುದು ಎಲ್ಲರಿಗೂ ತಿಳಿದಿದೆ. ಆಧುನಿಕ ವೈದ್ಯ ವಿಜ್ಞಾನವಿಂದು ನಿರ್ದಿಷ್ಟ ರಕ್ತ ತಪಾಸಣೆ ಯಾ ಸ್ಕ್ಯಾನ್‌ಗಳ ಮೂಲಕ ರೋಗಕ್ಕೆ ಕಾರಣವೇನೆಂಬುದನ್ನು ನಿಖರವಾಗಿ ಪತ್ತೆ ಹಚ್ಚಬಲ್ಲುದು. ಹೀಗೆ ಕಾಯಿಲೆಯ ನಿಖರ ಕಾರಣ ತಿಳಿದಾಗ ಸೂಕ್ತ ಚಿಕಿತ್ಸೆ ನೀಡಿ ಕಾಯಿಲೆಯನ್ನು ಗುಣಪಡಿಸುವುದು ಸಾಧ್ಯವಾಗುತ್ತದೆ. ಉದಾಹರಣೆಗೆ ಟೈಫಾಯ್ಡ, ಡೆಂಗ್ಯೂ, ಮಲೇರಿಯಾ, ನ್ಯೂಮೋನಿಯಾ, ಇಲಿ ಜ್ವರ ಇತ್ಯಾದಿ ಕಾಯಿಲೆಗಳಲ್ಲಿ ಜ್ವರವೇ ಪ್ರಮುಖ ರೋಗ ಲಕ್ಷಣವಾಗಿದ್ದರೂ ಇವುಗಳ ಚಿಕಿತ್ಸೆ ಬೇರೆ ಬೇರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹಾಗಿರುವಾಗ, 2-3 ದಿನಗಳಿಂದ ಜ್ವರದಿಂದ ಬಳಲುತ್ತಿರುವ ರೋಗಿಯನ್ನು ಬರಿದೇ ಪರೀಕ್ಷಿಸಿ, ತಪಾಸಣೆ ಯಾ ಸ್ಕ್ಯಾನ್‌ಗಳ ಸಹಾಯವಿಲ್ಲದೇ ಡಯಾಗ್ನೊàಸ್ ಮಾಡುವುದು ಸರಳವಲ್ಲ. ಕೆಲವು ಸಂದರ್ಭಗಳಲ್ಲಿ ಅಸಾಧ್ಯವೂ ಕೂಡ. ಆದುದರಿಂದ, ಇಂದಿನ ವೈದ್ಯ ಹಳೆಯ ತಲೆಮಾರಿನ ಕುಟುಂಬ ವೈದ್ಯರಂತೆ ಊಹೆಯ ಮೇರೆಗೆ ಚಿಕಿತ್ಸೆ ಕೊಡಲು ಹಿಂಜರಿಯುತ್ತಾನೆ. ತನ್ನ ಊಹೆ ತಪ್ಪಾಗಿ ರೋಗಿಯ ಕಾಯಿಲೆ ವಾಸಿಯಾಗುವ ಬದಲಾಗಿ ಉಲ್ಬಣಿಸಿದಲ್ಲಿ ರೋಗಿಯ ಕಡೆಯವರು ತನ್ನನ್ನು ಕ್ಷಮಿಸಲಾರರು ಎಂಬ ಆತನ ಎಣಿಕೆ ಸತ್ಯಕ್ಕೆ ಹತ್ತಿರವಾಗಿದೆ. ಪರಿಸ್ಥಿತಿ ಇಂತಿರುವಾಗ ಇಂದಿನ ವೈದ್ಯರು ರಕ್ತ ತಪಾಸಣೆ, ಸ್ಕ್ಯಾನ್ ಇತ್ಯಾದಿಗಳನ್ನು ಮಾಡಿಸಿಯೇ ಚಿಕಿತ್ಸೆ ನೀಡುವ ಧೈರ್ಯ ಮಾಡುತ್ತಾರೆ. ಕೆಲವೊಮ್ಮೆ ಅಂತಹಾ ತಪಾಸಣೆಗಳ ಆವಶ್ಯಕತೆ ಎಷ್ಟಿದೆ ಎಂಬ ವಿಮರ್ಶೆಯ ಗೋಜೂ ಇಲ್ಲದೆ ತಪಾಸಣೆಗಳು ನಡೆಯುತ್ತವೆ. ಇಲ್ಲಿ ತಪ್ಪು ಯಾರದ್ದು ಎಂಬುದು ಅಪ್ರಸ್ತುತ. ಆದರೆ ಸಾಮಾನ್ಯ ಕಾಯಿಲೆಗಳ ಚಿಕಿತ್ಸೆಗೂ ರೋಗಿ ಹೆಚ್ಚು ವೆಚ್ಚ ಮಾಡಬೇಕಾಗಿ ಬಂದಿರುವುದಂತೂ ನಿಸ್ಸಂಶಯ. ಕೆಲವೊಮ್ಮೆ ಸಾಮಾನ್ಯ ಶೀತ – ನೆಗಡಿಯ ಚಿಕಿತ್ಸೆಗೂ ಸಾವಿರಾರು ರೂಪಾಯಿ ಖರ್ಚು ಮಾಡಿದ ಅನುಭವ ಹಲವರಿಗಿರಬಹುದು! ತಿಂಗಳಿಗೆ 8-10 ಸಾವಿರದಷ್ಟೇ ವರಮಾನವಿರುವ ಕುಟುಂಬವೊಂದಕ್ಕೆ ಇದು ದೊಡ್ಡ ಹೊಡೆತವೇ ಸರಿ. ಸಾಲದ್ದಕ್ಕೆ, ಇಂತಹಾ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಆಗಾಗ್ಗೆ ಬಂದು ಹೋಗುತ್ತಿರುವುದರಿಂದ ಈ ರೀತಿಯ ಅನಪೇಕ್ಷಿತ ವೆಚ್ಚಕ್ಕೆ ಸದಾ ಸಿದ್ಧವಾಗಿರಬೇಕಾದ ಆತಂಕವೂ ಆ ಕುಟುಂಬಕ್ಕಿರುತ್ತದೆ.
ಇನ್ನು ಮನೆಯಲ್ಲಿ ರಕ್ತದೊತ್ತಡ ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆ ಇತ್ಯಾದಿಗಳಿಂದ ಬಳಲುತ್ತಿರುವ ವಯಸ್ಕರಿರುವ ಕುಟುಂಬದ ವರಮಾನದ ದೊಡ್ಡದೊಂದು ಪಾಲನ್ನು ಪ್ರತಿ ತಿಂಗಳೂ ಚಿಕಿತ್ಸೆಗೆಂದೇ ಮೀಸಲಿಡಬೇಕಾಗುತ್ತದೆ. ವಯಸ್ಕರಲ್ಲಿ ಕಾಣಬರುವ ಆರೋಗ್ಯ ಸಮಸ್ಯೆಗಳಲ್ಲಿ ಹೆಚ್ಚಿನವನ್ನು ಆಧುನಿಕ ಚಿಕಿತ್ಸೆಯಿಲ್ಲದೆ ಹತೋಟಿಯಲ್ಲಿಡುವುದು ಕಷ್ಟ. ಈ ನಿಟ್ಟಿನಲ್ಲಿ ದಿನಕ್ಕೆ 8-10 ಗುಳಿಕೆಗಳನ್ನು ನುಂಗಬೇಕಾದ ಪಾಡು ಇಂದು ಸಾಮಾನ್ಯ. ಆಸ್ಪತ್ರೆಗೆ ತೆರಬೇಕಾದ ಹಣವನ್ನು ಬದಿಗಿಟ್ಟರೂ ದೈನಂದಿನ ಔಷಧಿಗಳ ವೆಚ್ಚವೇ ತಿಂಗಳಿಗೆ ಸಾವಿರಾರು ರೂಪಾಯಿ ಆಗುವುದುಂಟು. ಈ ವೆಚ್ಚ ನಿರಂತರವಾದುದು ಎಂಬುದು ಗಮನಾರ್ಹ.
ಸಮಸ್ಯೆಯ ಆಳವನ್ನು ತಿಳಿದಾಯಿತು. ಇನ್ನು ಇದಕ್ಕೆ ಮೂಲ ಕಾರಣಗಳೇನೆಂಬುದನ್ನು ತಿಳಿಯಲು ಪ್ರಯತ್ನಿಸೋಣ. ಆಧುನಿಕ ವೈದ್ಯಕೀಯ ಚಿಕಿತ್ಸೆಯ ಆವಶ್ಯಕತೆಗಳು, ವೈದ್ಯರ ಮೇಲಿನ ಸಮಾಜದ ಅತಿಯಾದ ನಿರೀಕ್ಷೆ, ವೈದ್ಯರುಗಳ ರಕ್ಷಣಾತ್ಮಕ ಮನೋಭಾವ. ಕಾಯಿಲೆಗಳ ಚಿಕಿತ್ಸೆಗಳ ಬಗ್ಗೆ ಅಂತರ್ಜಾಲದಲ್ಲಿ ದೊರೆಯುವ ಅರೆಬೆಂದ ಮಾಹಿತಿ ಇತ್ಯಾದಿಗಳೆಲ್ಲವೂ ಇಂದು ಚಿಕಿತ್ಸಾ ವೆಚ್ಚ ಹೆಚ್ಚುವಲ್ಲಿ ತಮ್ಮ ತಮ್ಮ ಕೊಡುಗೆ ನೀಡಿವೆ! ವ್ಯಕ್ತಿಯೋರ್ವ ಇವೆಲ್ಲವನ್ನೂ ತಾನೊಬ್ಬನೇ ಪರಿಹರಿಸಲಾರ. ಹಾಗಿದ್ದಾಗ ಹೆಚ್ಚಿರುವ ಹಾಗೂ ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚವನ್ನು ವ್ಯಕ್ತಿ ಯಾ ಕುಟುಂಬದ ಮಟ್ಟದಲ್ಲಿ ನಿಭಾಯಿಸುವುದು ಹೇಗೆ?
ಮೊತ್ತ ಮೊದಲಾಗಿ, ಚಿಕಿತ್ಸಾ ವೆಚ್ಚವನ್ನು ತಗ್ಗಿಸಿಕೊಳ್ಳುವುದು ಮತ್ತು ನಿಭಾಯಿಸುವುದರ ನಡುವಣ ವ್ಯತ್ಯಾಸ ತಿಳಿಯುವುದು ಲೇಸು. ಚಿಕಿತ್ಸೆಯ ವೆಚ್ಚವನ್ನು ತಗ್ಗಿಸಿಕೊಳ್ಳುವುದು ಎಲ್ಲಾ ಸಂದರ್ಭಗಳಲ್ಲಿಯೂ ಸಾಧ್ಯವಿಲ್ಲ. ಆದರೆ ಸಮರ್ಪಕ ಆರ್ಥಿಕ ಯೋಜನೆಗಳಿಂದ ಈ ವೆಚ್ಚವನ್ನು ನಿಭಾಯಿಸಬಹುದು. ಅಂತಹ ಕೆಲವು ಉಪಾಯಗಳನ್ನು ಈ ಕೆಳಗೆ ವಿವರಿಸಲಾಗಿದೆ.
1) ವೈದ್ಯಕೀಯ ವೆಚ್ಚವನ್ನು ಕಡಿಮೆ ಮಾಡುವಲ್ಲಿ ಅತಿ ಮುಖ್ಯವಾದುದು ಎಂದರೆ ಆರೋಗ್ಯದ ಬಗೆಗಿನ ಕಾಳಜಿ ‘Prevention is better than cure’ ಎಂಬ ಇಂಗ್ಲಿಷ್ ಗಾದೆಯಂತೆ ಸರಿಯಾದ ಜೀವನಕ್ರಮ, ನಿಯಮಿತ ವ್ಯಾಯಾಮ ಹಾಗೂ ಸರಿಯಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಎಷ್ಟೋ ಆರೋಗ್ಯ ಸಮಸ್ಯೆಗಳನ್ನು ಬರದಂತೆ ತಡೆಗಟ್ಟಬಹುದು. ಇವುಗಳಲ್ಲಿ ರಕ್ತದೊತ್ತಡ, ಮಧುಮೇಹ ಗ್ಯಾಸ್ಟ್ರಿಕ್ ಸಮಸ್ಯೆಗಳು ಆಲಸ್ಯ, ನಿಶ್ಶಕ್ತಿ ಇತ್ಯಾದಿಗಳು ಪ್ರಮುಖವಾದುವು. ಇವುಗಳು ವ್ಯಕ್ತಿಗೆ ಒಮ್ಮೆಗೇ ಪ್ರಾಣಾಪಾಯ ತಂದೊಡ್ಡಲಾರವಾದರೂ ಇವುಗಳ ಹತೋಟಿ ಸುಲಭವಲ್ಲ. ಸಮರ್ಪಕ ನಿರ್ವಹಣೆ ಇಲ್ಲದಿದ್ದಲ್ಲಿ ಕೊನೆಗೆ ಪ್ರಾಣಾಂತಿಕ ಕಾಯಿಲೆಗಳಾದ ಹೃದಯದ ಕಾಯಿಲೆ, ಮೂತ್ರ ಪಿಂಡದ ಕಾಯಿಲೆ, ಪಾರ್ಶ್ವವಾಯು ಇತ್ಯಾದಿಗಳಲ್ಲಿ ಪರ್ಯಾವಸಾನವಾಗುವುದಿದೆ. ಈ ರೀತಿಯ, ಜೀವನ ಶೈಲಿಯ ಅಸಮರ್ಪಕತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ತಡೆಗಟ್ಟುವಿಕೆ ಮತ್ತು ಹತೋಟಿಯ ಬಗ್ಗೆ ತಜ್ಞರಿಂದ ಸಲಹೆ ಪಡೆದು ಅದರಂತೆ ನಡೆದುಕೊಂಡರೆ ಜೀವನದಲ್ಲಿ ದೊಡ್ಡ ದೊಡ್ಡ ವೈದ್ಯಕೀಯ ವೆಚ್ಚಗಳಿಂದ ಪಾರಾಗುವುದು ಸಾಧ್ಯ.
2) ಮೇಲೆ ಹೆಸರಿಸಿದ ಜೀವನ ಶೈಲಿಯ ಕಾಯಿಲೆಗಳಲ್ಲದೆ ಇತರ ಪ್ರಮುಖ ಕಾಯಿಲೆಗಳಾದ ಕ್ಷಯ, ಡೆಂಗ್ಯೂ ಮತ್ತಿತರ ಸೋಂಕು ರೋಗಗಳು ಹಾಗೂ ಕ್ಯಾನ್ಸರ್ ಮಹಾಮಾರಿಯ ಬಗ್ಗೆ ಇಂದು ವಿವಿಧ ಮಾಧ್ಯಮಗಳಲ್ಲಿ ಹಾಗೂ ಅಂತಾರ್ಜಾಲದಲ್ಲಿ ಸಾಕಷ್ಟು ಮಾಹಿತಿ ಲಭ್ಯವಿದೆ. ಅಧಿಕೃತ ಜಾಲತಾಣಗಳಿಂದ ಅಥವಾ ದಿನಪತ್ರಿಕೆಗಳಿಂದ ಸೂಕ್ತ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಂಡು ಸಂದಭೋìಚಿತವಾಗಿ ಅದರಂತೆ ನಡೆದುಕೊಳ್ಳುವುದರಿಂದ ಎಷ್ಟೋ ಬಾರಿ ರೋಗ ಉಲ್ಬಣಗೊಳ್ಳುವ ಮೊದಲೇ ಚಿಕಿತ್ಸೆ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಒಂದು ಸಲ ಡೆಂಗಿಯಂತಹಾ ಸೋಂಕು ಕಾಯಿಲೆ ಉಲ್ಬಣವಾದರೆ ವೈದ್ಯಕೀಯ ವೆಚ್ಚ ಎಲ್ಲಿಯವರೆಗೆ ಏರಬಹುದು ಎಂಬುದನ್ನು ಊಹಿಸಲೂ ಅಸಾಧ್ಯ. ಇದೇ ನಿಯಮ ಕ್ಯಾನ್ಸರ್ ಕಾಯಿಲೆಗೂ ಅನ್ವಯವಾಗುತ್ತದೆ. ವೆಚ್ಚದ ಏರಿಕೆಯ ಜೊತೆಗೆ ಪ್ರಾಣಾಪಾಯದ ಭೀತಿ, ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವಲ್ಲಿ ಸ್ಫೂರ್ತಿಯಾಗಬಲ್ಲುದು.
3) ಇನ್ನು ರೋಗ ತಡೆಗಟ್ಟುವಿಕೆಯಿಂದ ಚಿಕಿತ್ಸೆಯ ಕಡೆಗೆ ಬರೋಣ. ವೆಚ್ಚ ಏರುತ್ತಿರುವುದಕ್ಕೆ ಪ್ರಮುಖ ಕಾರಣ ಲೇಖನದ ಆರಂಭದಲ್ಲಿಯೇ ಸೂಚಿಸಿದಂತೆ “”ಕುಟುಂಬ ವೈದ್ಯ”ರೆಂಬ ಸಂತತಿಯ ಅಳಿವು. ಹಿಂದಿನ ಸಮಾಜದಲ್ಲಿ ವ್ಯಕ್ತಿಯೋರ್ವ ಕಾಯಿಲೆ ಬಿದ್ದಾಗ ತನ್ನ ಪರಿಚಯದ “”ಕುಟುಂಬ” ವೈದ್ಯರಲ್ಲಿಗೇ ಹೋಗುವುದು ವಾಡಿಕೆಯಾಗಿತ್ತು. ಅವರಿಗೂ ವ್ಯಕ್ತಿಯ ಕುಟುಂಬದ ಪರಿಚಯವಿದ್ದು ಅವರ ಆರೋಗ್ಯ ಸಮಸ್ಯೆಗಳ ಪ್ರಾಥಮಿಕ ಮಾಹಿತಿಯೂ ಇರುತ್ತಿತ್ತು. ಆದ್ದರಿಂದಲೇ ಅವರು ತಮ್ಮ ಅನುಭವದ ಆಧಾರದ ಮೇಲೆ ಚಿಕಿತ್ಸೆ ಕೊಟ್ಟು ಕಳುಹಿಸುತ್ತಿದ್ದರು. ಹೆಚ್ಚಿನ ಸಲ ಜನರು ಅಷ್ಟರಿಂದಲೇ ಗುಣಮುಖರಾಗುತ್ತಿದ್ದರು. ಅಪರೂಪಕ್ಕೊಮ್ಮೆ ಮಾತ್ರ ನಗರದ ತಜ್ಞರಲ್ಲಿಗೆ ಚೀಟಿ ಬರೆದು ಕಳುಹಿಸಲಾಗುತ್ತಿತ್ತು. ಇಂದು ಅಂತಹಾ ಆಪ್ತ ವೈದ್ಯರು ವಿರಳವಾಗಿದ್ದಾರೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೂ “”ತಜ್ಞರ” ಬಳಿ ಓಡಿಹೋಗುವ ಇಂದಿನ ಪರಿಪಾಠವೂ ಇದಕ್ಕೆ ಇಂಬುಕೊಟ್ಟಿದೆ. ತಜ್ಞ ವೈದ್ಯರಿಗೆ ಹೆಚ್ಚಿನ ಸಲ ರೋಗಿಯ ಯಾವುದೇ ಪೂರ್ವ ಪರಿಚಯ ಇರುವುದಿಲ್ಲ. ಆದ್ದರಿಂದ ಅವರು ಎಲ್ಲರಿಗೂ ಸಲ್ಲುವಂತೆ ಒಂದಷ್ಟು ನಿರ್ದಿಷ್ಟ ತಪಾಸಣೆಗಳನ್ನು ಮಾಡಿಸಿಯೇ ಮಾಡಿಸುತ್ತಾರೆ. ಅದಲ್ಲದೆ ಅದು ಅವರ ಘನತೆಯ ಪ್ರಶ್ನೆಯೂ ಕೂಡಾ! ಒಟ್ಟಾರೆ ಮೇಲೆ 50-100 ರೂಪಾಯಿ ವೆಚ್ಚದಲ್ಲಿ ವಾಸಿಯಾಗಬಹುದಾಗಿದ್ದ ನೆಗಡಿಗೆ 500-600 ರೂಪಾಯಿ ಖರ್ಚು ಮಾಡಿ ರೋಗಿ ಧನ್ಯನಾಗುತ್ತಾನೆ. ಇಲ್ಲಿ ತಪ್ಪು ಯಾರದ್ದೂ ಅಲ್ಲ. ಆದರೆ ಚಿಕಿತ್ಸೆ ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿನ ಏರುಪೇರು ವೆಚ್ಚವನ್ನು ಏರುವಂತೆ ಮಾಡಿದೆ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ.
4) ಪ್ರತಿಯೊಂದಕ್ಕೂ ತಜ್ಞರ ಬಳಿ ಓಡಿ ಹೋಗುವುದು ಹೇಗೆ ಸಮಂಜಸವಲ್ಲವೋ ಅದೇ ರೀತಿ ನಮಗೆ ತಿಳಿಯದೇ ಇರುವ ವಿಷಯದ ಬಗ್ಗೆ ನಾವೇ ತಜ್ಞತೆಯ ಸೋಗು ಹಾಕಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದೋ ಮುಂದಕ್ಕೆ ದೊಡ್ಡ ಆರ್ಥಿಕ ಹೊಡೆತಕ್ಕೆ ನಾಂದಿಯಾಗಬಹುದು. ಸ್ವಯಂ ಚಿಕಿತ್ಸೆ ಅಫಾಯಕಾರಿ ಎಂಬುದು ಬೇರೆ ವಿಷಯ. ಡೆಂಗ್ಯೂ ಕಾಯಿಲೆಯ “”ಸ್ವಯಂ ಚಿಕಿತ್ಸೆ” ಮಾಡಲು ಹೋಗಿ ಪ್ರಾಣಕ್ಕೇ ಕುತ್ತು ತಂದು ಕೊಂಡ ಹಲವು ಪ್ರಕರಣಗಳು ನಡೆದಿವೆ. ವೈದ್ಯಕೀಯವೆಂಬ ಕಬ್ಬಿಣದ ಕಡಲೆ ನುರಿತ ವೈದ್ಯರಿಗೇ ಸವಾಲಾಗಿರುವಾಗ ಜನಸಾಮಾನ್ಯರು ತಜ್ಞರಂತೆ ಸೋಗು ಹಾಕದಿರುವುದೇ ವಾಸಿ.
5) ಇನ್ನು ಚಿಕಿತ್ಸೆ ಪಡೆದುಕೊಳ್ಳುವ ಸಂದರ್ಭದಲ್ಲಿ ರೋಗಿ ಮತ್ತವನ ಕಡೆಯವರು ವೈದ್ಯರ ಬಳಿ ತಮ್ಮ ಆರ್ಥಿಕ ಇತಿ-ಮಿತಿಗಳನ್ನು ಕೇಳಿಕೊಳ್ಳುವುದರಲ್ಲಿ ತಪ್ಪಿಲ್ಲ. ವೈದ್ಯರೂ ಮಾನವರೇ. ರೋಗಿಯ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಚಿಕಿತ್ಸೆಯನ್ನು ಮಾರ್ಪಾಟು ಮಾಡುವುದು ಎಲ್ಲಾ ಸಂದರ್ಭಗಳಲ್ಲಿ ಸಾಧ್ಯವಿಲ್ಲವಾದರೂ ಹಲವು ಸಂದರ್ಭಗಳಲ್ಲಿ ವೈದ್ಯರು ಚಿಕಿತ್ಸೆಯ ಮೂಲ ಉದ್ದೇಶಕ್ಕೆ ಧಕ್ಕೆ ಬರದಂತೆ ಈ ನಿಟ್ಟಿನಲ್ಲಿ ಸಹಾಯ ಮಾಡಬಲ್ಲರು. ದುಬಾರಿ ಬೆಲೆಯ ಔಷಧಿಗಳಷ್ಟೇ ಪರಿಣಾಮಕಾರಿಯಾಗಬಲ್ಲ ಜೆನರಿಕ್ ಔಷಧಿಗಳ ಬಳಕೆ ಇಲ್ಲಿ ಪ್ರಸ್ತುತವಾಗುತ್ತದೆ.
6) ಚಿಕಿತ್ಸೆ ನೀಡುವ ವೈದ್ಯರ ಮೇಲೆ ಅತಿಯಾದ ಒತ್ತಡವನ್ನು ಹಾಕದೆ ಅವರ ಸಲಹೆಯಂತೆ ನಡೆದು ತಾಳ್ಮೆಯಿಂದಿರುವುದೂ ಒಮ್ಮೊಮ್ಮೆ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಬಲ್ಲುದು ಎಂದರೆ ಆಶ್ಚರ್ಯ ಪಡಬೇಕಿಲ್ಲ. ರೋಗಿಯ ಕಡೆಯವರಿಂದ ಒತ್ತಡ ಹೆಚ್ಚಿದಂತೆಲ್ಲಾ ಚಿಕಿತ್ಸೆ ನೀಡುವ ವೈದ್ಯರು ದುಬಾರಿ ಔಷಧಿ ಹಾಗೂ ತಪಾಸಣೆಗಳ ಮೊರೆಹೋಗುವುದು ಸಾಮಾನ್ಯ. “”ಎಂ.ಆರ್. ಐ. ಮಾಡಿಸಬಹುದಲ್ಲ” ಎಂಬಿತ್ಯಾದಿ ಪುಕ್ಕಟೆ ಸಲಹೆ ಕೊಟ್ಟ ಸಂಬಂಧಿಕರೇ ಕೊನೆಯಲ್ಲಿ ಚಿಕಿತ್ಸಾ ವೆಚ್ಚ ದುಬಾರಿ ಎನ್ನುವುದು ಇಂದಿನ ವಿಪರ್ಯಾಸ!
7) ಚಿಕಿತ್ಸಾ ವೆಚ್ಚವನ್ನು ಇಳಿಸುವಲ್ಲಿ ಅಲ್ಲವಾದರೂ ಅದನ್ನು ನಿರ್ವಹಿಸುವಲ್ಲಿ, ಇಂದಿನ ದಿನಗಳಲ್ಲಿ ಆರೋಗ್ಯ ವಿಮೆ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಹೆಚ್ಚಿನ ಆಸ್ಪತ್ರೆಗಳು ತಮ್ಮದೇ ಆದ ವಿಮಾ ಯೋಜನೆಗಳನ್ನು (ಸುರಕ್ಷಾ ಇತ್ಯಾದಿ) ಜಾರಿಗೊಳಿಸಿವೆ. ಅತಿ ಕಡಿಮೆ ವೆಚ್ಚದಲ್ಲಿ ಪಡೆಯಬಹುದಾದ ಈ ಯೋಜನೆಗಳ ಸದಸ್ಯತ್ವವನ್ನು ಹೆಚ್ಚು ಹೆಚ್ಚು ಜನರು ಪಡೆದುಕೊಳ್ಳುವಂತಾಗಬೇಕು. ಇವಲ್ಲದೆ ಹಲವು ಆಸ್ಪತ್ರೆಗಳು ಕೊಡುವ ರಿಯಾಯತಿ ಕಾರ್ಡ್‌ಗಳೂ ಕೂಡ ದೈನಂದಿನ, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳ ನಿಭಾವಣೆಯಲ್ಲಿ ಸಹಕಾರಿ. ಇನ್ನು ವಿಮಾ ಕಂಪೆನಿಗಳು ಕೊಡಮಾಡುವ ಆರೋಗ್ಯ ವಿಮಾ ಪಾಲಿಸಿಗಳ ಪ್ರೀಮಿಯಂ ತುಸು ದುಬಾರಿ ಎನಿಸಿದರೂ ಲಕ್ಷಾಂತರ ರೂಪಾಯಿ ವೆಚ್ಚವಿರುವ ಶಸ್ತ್ರ ಚಿಕಿತ್ಸೆ ಐ.ಸಿ.ಯು. ಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ ಇತ್ಯಾದಿಗಳ ನಿರ್ವಹಣೆಯಲ್ಲಿ ವರದಾನವಾಗಿ ಪರಿಣಮಿಸುತ್ತವೆ. ಇಂತಹಾ ವೆಚ್ಚಗಳು ಧುತ್ತೆಂದು ಪೂರ್ವ ಸೂಚನೆ ಇಲ್ಲದೆ ಬರುವುದರಿಂದ ವಿಮಾ ಪಾಲಿಸಿಯ ರಕ್ಷಣೆ ಇಲ್ಲದ ಬಡ ಯಾ ಮಧ್ಯಮ ವರ್ಗದ ಕುಟುಂಬ ತತ್ತರಿಸಿ ಹೋಗುವುದು ನಿಶ್ಚಿತ. ಇವುಗಳ ಪ್ರೀಮಿಯಂ ಅನ್ನು ಆದಾಯ ತೆರಿಗೆಯಿಂದ ಮುಕ್ತಗೊಳಿಸಿದ್ದರಿಂದ ಮಧ್ಯಮ ವರ್ಗಕ್ಕೆ ತುಸು ಸಹಾಯವಾಗಿದೆ. ಈ ನಿಟ್ಟಿನಲ್ಲಿ “ಆಯುಷ್ಮಾನ್ ಭಾರತ’ ಯೋಜನೆಯ ಮೂಲಕ ಕೇಂದ್ರ ಸರಕಾರ ಇಟ್ಟಿರುವ ಹೆಜ್ಜೆ ಶ್ಲಾಘನೀಯ.
8) ಆಸ್ಪತ್ರೆಗೆ ಹೋಗಿ ಬಂದ ನಂತರ ವೈದರ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸುವುದೂ ಒಂದು ಮುಖ್ಯ ಭಾಗ. ಇದರಿಂದ ಸಮಸ್ಯೆ ಮರುಕಳಿಸುವುದು ತಪ್ಪುತ್ತದೆ. ವೈದ್ಯರು ಒಪ್ಪಿಕೊಂಡಲ್ಲಿ ಅವರನ್ನು ದೂರವಾಣಿ ಯಾ ಈ ಮೇಲ್ ಮೂಲಕ ಸಂಪರ್ಕಿಸಿ ಸಂಶಯಗಳನ್ನು ಪರಿಹರಿಸಿಕೊಳ್ಳಬಹುದು ಇದರಿಂದ ರೋಗಿಯ ಸಮಯದ ಉಳಿತಾಯವಾಗುತ್ತದೆ. ಆದರೆ ದೂರವಾಣಿ ಮೂಲಕವೇ ಚಿಕಿತ್ಸೆಯನ್ನು ಸೂಚಿಸಬೇಕು ಎಂದು ಕೇಳಿಕೊಳ್ಳುವುದು, ಕೊಡುವುದೂ ಎರಡೂ ತಪ್ಪು.
ಹೀಗೆ ಸಾಮಾನ್ಯ ಜ್ಞಾನದ ಬಲದಿಂದ ವೈದ್ಯಕೀಯ ವೆಚ್ಚದ ನಿರ್ವಹಣೆಯನ್ನು ಸಹನೀಯವಾಗಿಸಬಹುದು. ಪ್ರತಿ ತಿಂಗಳೂ ಕೂಡ ಈ ಬಾಬತ್ತಿಗೆಂದು ಒಂದಷ್ಟು ಹಣವನ್ನು ಪ್ರತ್ಯೇಕ ಅಕೌಂಟಿನಲ್ಲಿ ಇಡುವುದೂ ಒಂದು ಒಳ್ಳೆಯ ಉಪಾಯ ಅಕಸ್ಮತ್ತಾಗಿ ಬರುವ ಆರೋಗ್ಯ ಸಮಸ್ಯೆ ಆಗ ಆರ್ಥಿಕ ಸಮಸ್ಯೆಯ ರೂಪ ತಾಳುವುದಿಲ್ಲ.
ಮೇಲೆ ಕಾಣಿಸಿರುವ ಉಪಾಯಗಳಲ್ಲದೆ ಇತರ ರೀತಿಗಳಿಂದಲೂ ವೈದ್ಯಕೀಯ ವೆಚ್ಚದ ನಿರ್ವಹಣೆ ಸಾಧ್ಯ ಆಮೂಲಾಗ್ರ ವಿಶ್ಲೇಷಣೆ ಈ ಲೇಖನದ ಉದ್ದೇಶವಲ್ಲ. ಬದಲಾಗುತ್ತಿರುವ ಸಾಮಾಜಿಕ ಪರಿಸರದಲ್ಲಿ ಅನಿವಾರ್ಯ ಸಮಸ್ಯೆಯೊಂದರ ನಿರ್ವಹಣೆಯ ಬಗೆಗಿನ ಪ್ರಾಥಮಿಕ ಮಾಹಿತಿಯನ್ನಷ್ಟೇ ಕೊಡಲಾಗಿದೆ.
ಡಾ| ಶಿವಾನಂದ ಪ್ರಭು
ಪ್ರಾಧ್ಯಾಪಕರು, ಸರ್ಜರಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.