ಐಬಿಡಿ: ಆಹಾರ ಕ್ರಮ, ಪೌಷ್ಟಿಕಾಂಶಗಳು
Team Udayavani, Jul 2, 2017, 3:45 AM IST
ಇನ್‌ಫ್ಲಮೇಟರಿ ಬವೆಲ್ ಸಿಂಡ್ರೋಮ್ ಅಥವಾ ಚುಟುಕಾಗಿ ಐಬಿಡಿ ಎಂದು ಕರೆಯಲ್ಪಡುವ ಆರೋಗ್ಯ ಸಮಸ್ಯೆಯು ಒಂದು ದೀರ್ಘಕಾಲಿಕ ಉರಿಯೂತ ಸಮಸ್ಯೆ. ಅಲ್ಸರೇಟಿವ್ ಕೊಲೈಟಿಸ್ (ಯುಸಿ) ಮತ್ತು ಕ್ರಾನ್ಸ್ ಡಿಸೀಸ್ (ಸಿಡಿ) ಇದರಲ್ಲಿ ಒಳಗೊಂಡಿವೆ. ಕ್ರಾನ್ಸ್ ಡಿಸೀಸ್ ಎಂಬುದು ಗ್ಯಾಸ್ಟ್ರೊ ಇಂಟಸ್ಟೈನಲ್ ಮ್ಯುಕೋಸಾವನ್ನು ಬಾಧಿಸುವ, ಒಂದು ಟ್ರಾನ್ಸ್ ಮ್ಯೂರಲ್ ಉರಿಯೂತ ಸ್ಥಿತಿ. ಅಂದರೆ, ಕರುಳಿನ ಭಿತ್ತಿಯನ್ನು ಸಂಪೂರ್ಣವಾಗಿ ತೊಂದರೆಗೀಡು ಮಾಡುತ್ತದೆ. ಇದು ಸಣ್ಣ ಕರುಳು /ಅಥವಾ ದೊಡ್ಡ ಕರುಳು, ಬಾಯಿ, ಅನ್ನನಾಳ, ಜಠರ ಮತ್ತು ಗುದದ್ವಾರ ಸಹಿತ ಜೀರ್ಣಾಂಗವ್ಯೂಹದ ಯಾವುದೇ ಭಾಗವನ್ನು ಬಾಧಿಸಬಹುದು. ಅಲ್ಸರೇಟಿವ್ ಕೊಲೈಟಿಸ್ ಒಂದು ನಾನ್ ಟ್ರಾನ್ಸ್‌ಮ್ಯೂರಲ್ ಕಾಯಿಲೆ; ಪ್ರಧಾನವಾಗಿ ದೊಡ್ಡ ಕರುಳಿನ ಮ್ಯುಕೋಸಾವನ್ನು ಮಾತ್ರ ಭಾದಿಸುತ್ತದೆ.
ಭಾರತದಲ್ಲಿ ಯುಸಿ ಮತ್ತು
ಸಿಡಿ ಕಾಯಿಲೆಯ ಹೊರೆ
ಭಾರತದಲ್ಲಿ ಐಬಿಡಿಯು ತೀರಾ ಪ್ರಾಥಮಿಕ ಹಂತದಲ್ಲಿದೆ ಎಂದು ತಿಳಿಯಬೇಕಾಗಿಲ್ಲ. ಕಾಯಿಲೆಯ ಪ್ರಮಾಣ ಮತ್ತು ಅದು ಬಾಧಿಸುವ ಜನಸಂಖ್ಯೆಯ ದೃಷ್ಟಿಯಿಂದ ನೋಡಿದರೆ, ಜಗತ್ತಿನಲ್ಲೇ ಅತಿ ಹೆಚ್ಚು ಸಂಖ್ಯೆಯ ಐಬಿಡಿ ರೋಗಿಗಳನ್ನು ಹೊಂದಿರುವ ದೇಶ ಭಾರತ ಎನ್ನಬಹುದಾಗಿದೆ (ಎಪಿಡೆಮಿಯೋಲಜಿ ಆಫ್ ಇನ್‌ಫ್ಲಮೇಟರಿ ಬವೆಲ್ ಡಿಸೀಸ್ ಇನ್ ಇಂಡಿಯಾ: ದಿ ಗ್ರೇಟ್ ಶಿಫ್ಟ್ ಈಸ್ಟ್ – ರಚನೆ: ಕೇಡಿಯಾ ಎಸ್., ಅಹುಜಾ ವಿ., ಎಪ್ರಿಲ್ 8, 2017).
ಜೀರ್ಣಕ್ರಿಯೆಯ ಮೇಲೆ ಐಬಿಡಿಯ ಪರಿಣಾಮ
ಐಬಿಡಿ ಹೊಂದಿರುವ ವ್ಯಕ್ತಿಗಳಲ್ಲಿ, ಜೀರ್ಣಾಂಗ ವ್ಯೂಹದ ಅಂಗಾಂಗಗಳ ಉರಿಯೂತವು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಕ್ರಾನ್ಸ್ ಕಾಯಿಲೆ ಹೊಂದಿರುವ ವ್ಯಕ್ತಿಯೊಬ್ಬನ ಸಣ್ಣ ಕರುಳಿನಲ್ಲಿ ಉಂಟಾಗುವ ಉರಿಯೂತವು ಜೀರ್ಣಕ್ರಿಯೆ ಮತ್ತು ಪೌಷ್ಟಿಕಾಂಶಗಳ ಹೀರಿಕೆಗೆ ಅಡ್ಡಿ ಉಂಟು ಮಾಡಬಹುದು. ದೊಡ್ಡ ಕರುಳಿನ ಮೂಲಕ ರವಾನೆಯಾಗುವ ಸರಿಯಾಗಿ ಜೀರ್ಣವಾಗದ ಆಹಾರವು ಭೇದಿ ಮತ್ತು ಹೊಟ್ಟೆನೋವುಗಳನ್ನು ಉಂಟು ಮಾಡಬಲ್ಲುದು. ಅಲ್ಸರೇಟಿವ್ ಕೊಲೈಟಿಸ್ ಹೊಂದಿರುವ ವ್ಯಕ್ತಿಯಲ್ಲಿ, ಸಣ್ಣ ಕರುಳು ಸಹಜವಾಗಿ ಕೆಲಸ ಮಾಡುತ್ತದೆ, ಆದರೆ ಉರಿಯೂತ ಅನುಭವಿಸುತ್ತಿರುವ ದೊಡ್ಡ ಕರುಳು ನೀರಿನಂಶವನ್ನು ಸರಿಯಾಗಿ ಹೀರಿಕೊಳ್ಳಲು ಶಕ್ತವಾಗುವುದಿಲ್ಲ; ಪರಿಣಾಮವಾಗಿ ಭೇದಿ, ಮಲವಿಸರ್ಜನೆಯ ತುರ್ತು ಹೆಚ್ಚುವುದು ಪದೇಪದೇ ಮಲವಿಸರ್ಜನೆಯಾಗುವುದು. ಹೀಗಾಗಿ ಆಹಾರ ಸೇವನೆಯಂತಹ ಸರಳ ಕಾರ್ಯವನ್ನೂ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಐಬಿಡಿಯು ಜೀರ್ಣಾಂಗ ವ್ಯವಸ್ಥೆಯನ್ನು ಬಾಧಿಸುವುದರಿಂದ, ಅದು ಆಹಾರಾಭ್ಯಾಸ ಮತ್ತು ಪೌಷ್ಟಿಕಾಂಶಗಳು ಹತ್ತು ಹಲವು ವಿಧಗಳಿಂದ ಪರಿಣಾಮ ಬೀರುತ್ತದೆ. ಕೆಲವು ಆಹಾರಗಳು ಐಬಿಡಿ ಲಕ್ಷಣಗಳು ಉಲ್ಬಣಗೊಳ್ಳಲು ಕಾರಣವಾಗಬಹುದಾದ್ದರಿಂದ ಆಹಾರದ ಆಯ್ಕೆಗಳು ಹೆಚ್ಚು ಜಟಿಲವಾಗುತ್ತವೆ. ಇದರ ಜತೆಗೆ, ಆರೋಗ್ಯಕರ ಆಹಾರದ ಆಯ್ಕೆಗಳನ್ನು ಹೇಗೆ ಮಾಡಿಕೊಳ್ಳಬೇಕು ಮತ್ತು ಆ ಮೂಲಕ ಸಮತೋಲಿತವಾದ ಪೌಷ್ಟಿಕಾಂಶ ಸಮೃದ್ಧ ಆಹಾರಾಭ್ಯಾಸವನ್ನು ರೂಢಿಸಿಕೊಳ್ಳಬೇಕು ಎನ್ನುವುದು ಬಹಳ ಮುಖ್ಯವಾಗುತ್ತದೆ.
ಐಬಿಡಿ ಹೊಂದಿರುವ ಎಲ್ಲರಿಗೂ ಅನ್ವಯಿಸುವ ಏಕಮಾತ್ರ ಆಹಾರಾಭ್ಯಾಸ ಅಥವಾ ಆಹಾರ ಯೋಜನೆ ಎಂಬುದಿಲ್ಲ ಹಾಗೂ ಆಹಾರಾಭ್ಯಾಸಕ್ಕೆ ಸಂಬಂಧಿಸಿದ ಶಿಫಾರಸುಗಳು ಸಂಪೂರ್ಣ ವ್ಯಕ್ತಿನಿಷ್ಠವಾಗಿರಬೇಕಾಗಿದೆ.
ಲಘು, ದೇಹ ಸಹಿಷ್ಣು ಆಹಾರಾಭ್ಯಾಸ ತಯಾರಿಯ ತಣ್ತೀಗಳು
– ಪ್ರತೀ 3-4 ತಾಸುಗಳಿಗೆ ಒಮ್ಮೆ ಸಣ್ಣ ಪ್ರಮಾಣದ ಉಪಾಹಾರ ಸೇವಿಸಬೇಕು.
– ಕಡಿಮೆ ಕೊಬ್ಬಿನಲ್ಲಿ ಆಹಾರ ತಯಾರಿಗೆ ಆದ್ಯತೆ ನೀಡಿ.
– ಕಡಿಮೆ ನಾರಿನಂಶ ಇರುವ ಆಹಾರಗಳಿಂದ ಆರಂಭಿಸಿ, ಆದರೆ ಅದು ಸ್ವೀಕೃತವಾಗುತ್ತಿದ್ದಂತೆಯೇ ನಿಧಾನವಾಗಿ ನಾರಿನಂಶದ ಪ್ರಮಾಣವನ್ನು ತರಕಾರಿಗಳು, ಹಣ್ಣುಗಳು ಮತ್ತು ಚೆನ್ನಾಗಿ ಪುಡಿ ಮಾಡಿದ ಇಡೀ ಧಾನ್ಯದ ಉತ್ಪನ್ನಗಳ ಮೂಲಕ ಹೆಚ್ಚಿಸಿ.
– ವಾಯು ಉತ್ಪಾದಕ ಆಹಾರವಸ್ತುಗಳನ್ನು ವರ್ಜಿಸಿ (ಉದಾ: ಕ್ಯಾಬೇಜ್).
– ಸಾಕಷ್ಟು ನೀರಿನಂಶ ದೇಹದಲ್ಲಿರುವಂತೆ ನೋಡಿಕೊಳ್ಳಿ: ದಿನಕ್ಕೆ 2-3 ಲೀಟರ್ ನೀರು ಕುಡಿಯಿರಿ.
– ಸೋಡಾ ಪಾನೀಯಗಳನ್ನು ಮತ್ತು ಕೆಫೀನ್‌ಯುಕ್ತ ಪೇಯಗಳನ್ನು ವರ್ಜಿಸಿ.
– ಮದ್ಯಪಾನ ಮತ್ತು ಧೂಮಪಾನ ಎರಡೂ ಬೇಡ.
-ತುಂಬಾ ಶೀತಲ, ತೀರಾ ಬಿಸಿಯಾದ ಮತ್ತು ಮಸಾಲೆಯುಕ್ತ ಆಹಾರಗಳನ್ನು ತ್ಯಜಿಸಿ.
– ಆಹಾರ ಸೇವಿಸುವಾಗ ಆರಾಮವಾಗಿರಿ, ಚೆನ್ನಾಗಿ ಜಗಿದು ತಿನ್ನಿ.
– ಸೇವಿಸಿದ ಆಹಾರ ವಸ್ತುಗಳನ್ನು ಕ್ರಮಬದ್ಧವಾಗಿ ದಾಖಲಿಸುವುದು ಮತ್ತು ಐಬಿಡಿ ಲಕ್ಷಣಗಳು ಯಾವಾಗ ಉಲ್ಬಣಿಸುತ್ತಿವೆ ಎಂಬುದನ್ನು ಟಿಪ್ಪಣಿ ಮಾಡಿಕೊಳ್ಳುವುದರಿಂದ ನಿಮಗೆ ಸಮಸ್ಯೆ ಉಂಟು ಮಾಡುವ ಆಹಾರಗಳನ್ನು ಗುರುತಿಸಿ ವರ್ಜಿಸಲು ಸಹಾಯವಾಗುತ್ತದೆ.
– ನೀವು ತಿನ್ನುವ ಅಥವಾ ಕುಡಿಯುವ ಎಲ್ಲವನ್ನೂ ದಾಖಲಿಸಿಕೊಳ್ಳಿ. ತಿಂದ ಅಥವಾ ಕುಡಿದ ಬಳಿಕ ಉಂಟಾದ ಯಾವುದೇ ಲಕ್ಷಣಗಳನ್ನು ಟಿಪ್ಪಣಿ ಮಾಡಿಕೊಳ್ಳಿ (ಸೇವಿಸಿದ ಬಳಿಕ ತೊಂದರೆ ಏನೂ ಉಂಟಾಗಿಲ್ಲವಾದರೆ ಅದನ್ನೂ ದಾಖಲಿಸಿ).
– ಲಕ್ಷಣಗಳು ಹೊಟ್ಟೆ ತೊಳೆಸುವಿಕೆ, ಹೊಟ್ಟೆಯುಬ್ಬರ ಮತ್ತು ವಾಂತಿಯನ್ನು ಒಳಗೊಂಡಿರಬಹುದು. ಯಾವುದೇ ಆಹಾರ ಸಮಸ್ಯೆ ಉಂಟು ಮಾಡುತ್ತದೆ ಎಂಬುದು ಗೊತ್ತಾದರೆ ಒಂದೆರಡು ವಾರಗಳ ವರೆಗೆ ಅದರ ಸೇವನೆಯನ್ನು ನಿಲ್ಲಿಸಿ.
– ಒಂದಕ್ಕಿಂತ ಹೆಚ್ಚು ಆಹಾರಗಳು ಸಮಸ್ಯೆ ಉಂಟು ಮಾಡುವುದು ನಿಮ್ಮ ಅರಿವಿಗೆ ಬರಬಹುದು. (ಎಲ್ಲ ಆಹಾರಗಳೂ ಸಮಸ್ಯೆ ಉಂಟು ಮಾಡುತ್ತವೆ ಎಂದು ಗೊತ್ತಾದರೆ, ನಿಮ್ಮ ಹೊಟ್ಟೆ ಕೆರಳಬಹುದು. ಆಗ ಕನಿಷ್ಠ ನಾರಿನಂಶ, ಕನಿಷ್ಠ ಉಳಿಕೆ ಅಂಶ ಇರುವ ಆಹಾರಾಭ್ಯಾಸ ಅನುಸರಿಸಿ.)
– ಲಕ್ಷಣಗಳು ಮಾಯವಾದ ಬಳಿಕ ಒಮ್ಮೆಗೆ ಒಂದು ಆಹಾರವಸ್ತುವಿನಂತೆ, ವರ್ಜಿಸಿದ ಆಹಾರಗಳನ್ನು ಮತ್ತೆ ಸೇರಿಸಿಕೊಳ್ಳಿ. ಲಕ್ಷಣಗಳು ಮರುಕಳಿಸುತ್ತವೆಯೇ ಎಂದು ಪರೀಕ್ಷಿಸಿ.
– ಆಹಾರವನ್ನು ಮರಳಿ ಸೇರ್ಪಡೆಗೊಳಿಸಿದ ಬಳಿಕವೂ ತೊಂದರೆ ಮುಂದುವರಿದರೆ, ಅದೇ ಆಹಾರ ಕಾರಣ ಎಂಬುದನ್ನು ಊಹಿಸಲು ಸಾಧ್ಯವಾಗುತ್ತದೆ. ನಿಮ್ಮ ಆಹಾರಾಭ್ಯಾಸದಿಂದ ಕೈಬಿಟ್ಟ ಪ್ರತೀ ಆಹಾರವಸ್ತುವಿಗೂ ಇದನ್ನು ಅನುಸರಿಸಿ.
ಸಂತುಲಿತ ಊಟದ ಬಟ್ಟಲು
– ಪೌಷ್ಟಿಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಹೊಂದಿರುವ ಆರೋಗ್ಯಯುತ ಆಹಾರಾಭ್ಯಾಸವನ್ನು ನಿರ್ವಹಿಸುವುದು ಹೇಗೆ ಎಂಬುದನ್ನು “ಸಂತುಲಿತ ಊಟದ ಬಟ್ಟಲು’ ತೋರಿಸುತ್ತದೆ. ತರಕಾರಿ ಮತ್ತು ಹಣ್ಣುಹಂಪಲುಗಳು, ಪಿಷ್ಟಸಹಿತ ಆಹಾರಗಳು (ಧಾನ್ಯಗಳಂಥವು), ಸ್ವಲ್ಪ ಹಾಲು ಮತ್ತು ಹೈನು ಉತ್ಪನ್ನಗಳು (ಅಥವಾ ಕ್ಯಾಲ್ಸಿಯಂಪೂರಿತ ಸೋಯಾ ಹಾಲಿನಂತಹ ಪರ್ಯಾಯಗಳು), ಕೆಲವು ಪ್ರೊಟೀನ್‌ಯುಕ್ತ ಆಹಾರಗಳು (ಮಾಂಸ, ಮೀನು, ಮೊಟ್ಟೆ ಮತ್ತು ಬೇಳೆಕಾಳಿನಂಥವು) ಇದರಲ್ಲಿ ಸೇರಿರುತ್ತವೆ.
– ನಿಮ್ಮ ಆಹಾರದಲ್ಲಿ ಹೆಚ್ಚು ಒಮೆಗಾ – 3 ಫ್ಯಾಟಿ ಆ್ಯಸಿಡ್‌ಗಳನ್ನು ಸೇರ್ಪಡೆಗೊಳಿಸಿಕೊಳ್ಳಲು ಪ್ರಯತ್ನಿಸಿ; ಇವು ಕೊಬ್ಬುಳ್ಳ ಮೀನು, ಫ್ಲಾಕ್ಸ್‌ಸೀಡ್, ವಾಲ್‌ನಟ್ ಮತ್ತು ಸಾರವರ್ಧಿತ ಆಹಾರ ಉತ್ಪನ್ನಗಳಲ್ಲಿ ಇರುವ ಆವಶ್ಯಕ ಕೊಬ್ಬುಗಳು. ಈ ಕೊಬ್ಬಿನಂಶಗಳು ಉರಿಯೂತ ನಿರೋಧಕ ಗುಣ ಹೊಂದಿವೆ.
– ದೊಡ್ಡ ಕರುಳಿನಲ್ಲಿ ಉಪಕಾರಿ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ವೃದ್ಧಿಸಲು ಹೆಚ್ಚು ಪ್ರೊಬಯಾಟಿಕ್‌ಗಳನ್ನು ಸೇರ್ಪಡೆಗೊಳಿಸಿ. ವಿಶೇಷವಾಗಿ ಹುದುಗು ಬರಿಸಿದ ಹಾಲಿನ ಪಾನೀಯಗಳು ಮತ್ತು ಮೊಸರುಗಳಲ್ಲಿ ಪ್ರೊಬಯಾಟಿಕ್‌ಗಳು ಇರುತ್ತವೆ.
ಆಹಾರಾಭ್ಯಾಸ ಪರಿವರ್ತನೆಗಳು ಮತ್ತು ಸಾಮಾನ್ಯ ಲಕ್ಷಣಗಳು
– ನಾರಿನಂಶಗಳ ಮೂಲವಾದ ಆಹಾರಗಳನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳಿ ಮತ್ತು ತಯಾರಿಸಿ: ಐಬಿಡಿ ಸಮಸ್ಯೆ ಕೆರಳುವಿಕೆಯ ಸ್ಥಿತಿಯಲ್ಲಿ ಇರುವಾಗ ಕರಗುವಂತಹ ನಾರಿನಂಶಗಳನ್ನು ಹೆಚ್ಚು ಸೇವಿಸುವುದು ಮತ್ತು ಕರಗದ ನಾರಿನಂಶಗಳನ್ನು ಕಡಿಮೆಗೊಳಿಸುವುದು ಪ್ರಯೋಜನಕಾರಿ.
ಕರಗುವ ನಾರಿನಂಶಗಳು ಓಟ್ಸ್‌ಬ್ರಾನ್, ಬಾರ್ಲಿ, ಬೀಜಗಳು, ಬೀನ್ಸ್, ಬೇಳೆಕಾಳು, ಹಣ್ಣುಹಂಪಲುಗಳು (ಸಿಟ್ರಸ್ ಹಣ್ಣುಗಳು, ಸೇಬು), ಸ್ಟ್ರಾಬೆರಿ ಮತ್ತು ಹಲವಾರು ತರಕಾರಿಗಳಲ್ಲಿ ಇರುತ್ತದೆ.
ಕರಗುವ ನಾರಿನಂಶ ಮೂಲಗಳು
ಕರಗದ ನಾರಿನಂಶವು ಇಡೀ ಗೋಧಿ, ಇಡೀ ಧಾನ್ಯದ ಉತ್ಪನ್ನಗಳು, ತರಕಾರಿಗಳು ಮತ್ತು ಗೋಧಿ ತೌಡಿನಲ್ಲಿ ಇರುತ್ತದೆ.
ಕಾಯಿಲೆಯು ಕೆರಳಿರುವ ಸಮಯದಲ್ಲಿ, ಪೌಷ್ಟಿಕಾಂಶ ಸಂಸ್ಕರಿತ ಕಾಳುಕಡ್ಡಿಗಳಿಂದ ತಯಾರಾದ ಆಹಾರಗಳು ಜೀರ್ಣಿಸಿಕೊಳ್ಳುವುದಕ್ಕೆ ಸುಲಭ. ಇಂತಹ ಬಹುತೇಕ ಸಂಸ್ಕರಿತ ಆಹಾರ ಉತ್ಪನ್ನಗಳು ವಿಟಮಿನ್ ಬಿ ಮತ್ತು ಕಬ್ಬಿಣಾಂಶಗಳಿಂದ ಪುಷ್ಟಿಗೊಳಿಸಲ್ಪಟ್ಟಿರುತ್ತವೆ. ಹೀಗಾಗಿ ಈ ಪೌಷ್ಟಿಕಾಂಶಗಳಿಂದ ನೀವು ವಂಚಿತರಾಗುವುದಿಲ್ಲ.
– ತರಕಾರಿ ಮತ್ತು ಹಣ್ಣುಗಳ ತೊಗಟೆ, ಕವಚ, ಬೀಜ ಮತ್ತು ಸಿಪ್ಪೆಯನ್ನು ತೆಗೆದು ಸೇವಿಸಿ.
– ತರಕಾರಿಗಳನ್ನು ಅವು ಮೃದುವಾಗುವವರೆಗೆ ಹಬೆಯಲ್ಲಿ ಬೇಯಿಸುವುದರಿಂದ ಪೌಷ್ಟಿಕಾಂಶಗಳನ್ನು ಉಳಿಸಿಕೊಳ್ಳಬಹುದು. ಕುದಿಸಿ ಬೇಯಿಸುವುದರಿಂದ ಪೌಷ್ಟಿಕಾಂಶಗಳು ನಷ್ಟವಾಗುತ್ತವೆ. ತರಕಾರಿಗಳನ್ನು ಬೇಯಿಸಿದ ಬಳಿಕ ಉಳಿಯುವ ಸಾರಯುಕ್ತ ರಸವು ಒಂದು ಉತ್ತಮ ಪೌಷ್ಟಿಕಾಂಶಗಳ ಮೂಲವಾಗಿದ್ದು, ಇದನ್ನು ಸೂಪ್ ತಯಾರಿಸಲು ಅಥವಾ ಅನ್ನ ಯಾ ದೋಸೆಗೆ ಸೇರ್ಪಡೆಯಾಗಿ ಉಪಯೋಗಿಸಬಹುದು.
– ಹಣ್ಣು ಮತ್ತು ತರಕಾರಿಗಳ ರಸವನ್ನು ಶೋಧಿಸಿ ಕುಡಿಯಿರಿ.
– ಮೊಳಕೆ ಬರಿಸಿದ ಬೇಳೆಕಾಳುಗಳನ್ನು ಬೇಯಿಸಿ ನುಣ್ಣಗೆ ಪುಡಿ ಮಾಡಿ ಉಪಯೋಗಿಸಬಹುದು.
– ಒಣ ಹಣ್ಣುಗಳು, ಬೀಜಗಳು ಮತ್ತು ಕಾಳುಗಳನ್ನು ವರ್ಜಿಸಿ.
– ಹೆಚ್ಚು ಉಪ್ಪಿನಂಶ, ಹೆಚ್ಚು ನಾರಿನಂಶ, ಹೆಚ್ಚು ಸಕ್ಕರೆಯಂಶ, ಟ್ರಾನ್ಸ್ ಫ್ಯಾಟ್ ಹೊಂದಿರುವ ವಾಣಿಜ್ಯೋದ್ದೇಶಿತ ಆಹಾರ ವಸ್ತುಗಳ ಬಗ್ಗೆ ಎಚ್ಚರಿಕೆ ಇರಲಿ.
ಅಪೌಷ್ಟಿಕತೆ ಮತ್ತು ತೂಕ ನಷ್ಟ
– ದಿನವಿಡೀ ಆಗಾಗ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಆಹಾರ ಸೇವಿಸುತ್ತಿರಬೇಕು.
– ಪ್ರೊಟೀನ್ ಮತ್ತು ಶಕ್ತಿ ಸಮೃದ್ಧ ಆಹಾರಗಳನ್ನು ಸಾಕಷ್ಟು ಸೇವಿಸಬೇಕು.
– ಕೇವಲ ಕಾಫಿ ಅಥವಾ ಚಹಾದ ಬದಲಾಗಿ ಸೂಪ್‌ಗ್ಳು, ಹಣ್ಣಿನ ರಸಗಳು ಮತ್ತು ಸೂ¾ತೀಗಳನ್ನು ಕುಡಿಯಬೇಕು.
ಭೇದಿ
– ಸುಪೌಷ್ಟಿಕರಾಗಿ ಇರಲು ಮತ್ತು ದೇಹದಲ್ಲಿ ಸಾಕಷ್ಟು ದ್ರವಾಂಶ ಕಾಪಾಡಿಕೊಳ್ಳಲು ಸಾಕಷ್ಟು ಆಹಾರ ಸೇವಿಸಿ ಮತ್ತು ನೀರು ಕುಡಿಯಿರಿ.
– ಮಸಾಲೆಯುಕ್ತ ಮತ್ತು ಕೊಬ್ಬುಪೂರಿತ ಆಹಾರ ವರ್ಜಿಸಿ.
– ಮದ್ಯಪಾನ ಮತ್ತು ಕೆಫೀನ್ (ಕಾಫಿ, ಚಹಾ ಮತ್ತು ಕೋಲಾಗಳಲ್ಲಿ ಇರುವಂಥದ್ದು) ಭೇದಿಯನ್ನು ಉಲ್ಬಣಗೊಳಿಸಬಲ್ಲವು.
– ಕೆಫೀನ್ ವಿರಹಿತಗೊಳಿಸಲ್ಪಟ್ಟ ಚಹಾ ಅಥವಾ ಕಾಫಿ ಕುಡಿಯಿರಿ ಅಥವಾ ಮೂಲಿಕೆ ಚಹಾದಂತಹ ಪರ್ಯಾಯ ಪಾನೀಯಗಳನ್ನು ಪ್ರಯತ್ನಿಸಿರಿ.
– ನಿರ್ಜಲೀಕರಣದ ಉಪಶಮನಕ್ಕಾಗಿ ಹೆಚ್ಚುವರಿ ದ್ರವಾಹಾರಗಳನ್ನು ತೆಗೆದುಕೊಳ್ಳುವ ಮೂಲಕ ದೇಹದಲ್ಲಿ ದ್ರವಾಂಶವನ್ನು ವೃದ್ಧಿಸಿಕೊಳ್ಳಬೇಕು. ಮಜ್ಜಿಗೆ, ಹಣ್ಣಿನರಸ ಮುಂತಾದವು ಕೇವಲ ಚಹಾ ಅಥವಾ ನೀರನ್ನು ಕುಡಿಯುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶಗಳನ್ನು ಒದಗಿಸಬಲ್ಲವು. ಇಲೆಕ್ಟ್ರೊಲೇಡ್‌ನಂತಹ ಮಾರುಕಟ್ಟೆಯಲ್ಲಿ ಲಭ್ಯವಿರುವ ರೀಹೈಡ್ರೇಶನ್ ದ್ರಾವಣಗಳನ್ನು ಕುಡಿಯುವ ಮೂಲಕವೂ ಇದನ್ನು ಸಾಧಿಸಬಹುದು.
ಮಲಬದ್ಧತೆ
– ಸಾಕಷ್ಟು ಪ್ರಮಾಣದಲ್ಲಿ ದ್ರವಾಹಾರಗಳನ್ನು ಸೇವಿಸುವುದರಿಂದ ಸುಲಭವಾಗಿ ವಿಸರ್ಜಿಸಲು ಸಾಧ್ಯವಾಗುವಂತಹ ಮಲ ರೂಪುಗೊಳ್ಳಲು ಸಹಾಯವಾಗುತ್ತದೆ.
– ನಿಮ್ಮ ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸಿ, ಆದರೆ ಇದು ಎಲ್ಲರಿಗೂ ಸೂಕ್ತವಾದ ಪರಿಹಾರ ಅಲ್ಲ.
ಹೊಟ್ಟೆಯುಬ್ಬರ ಮತ್ತು ವಾಯು
– ಹೊಟ್ಟೆಯಲ್ಲಿ ವಾಯು ಉತ್ಪಾದನೆಗೆ ಕಾರಣವಾಗುವಂತಹ ನಿಶ್ಚಿತ ಆಹಾರಗಳಾದ ಸೋಡಾಯುಕ್ತ ಪಾನೀಯಗಳು, ಮಸಾಲೆಯುಕ್ತ ಆಹಾರಗಳು, ಬೇಳೆಕಾಳುಗಳು, ಕ್ಯಾಬೇಜ್ ಇತ್ಯಾದಿಗಳನ್ನು ವರ್ಜಿಸಿ.
ಲ್ಯಾಕ್ಟೋಸ್ ಒಗ್ಗಿಕೊಳ್ಳದಿರುವಿಕೆ
ಲ್ಯಾಕ್ಟೋಸ್ ಒಗ್ಗಿಕೊಳ್ಳದಿರುವಿಕೆಯನ್ನು ಈ ಕೆಳಗಿನ ಕೆಲವು ವಿಧಾನಗಳ ಮೂಲಕ ನಿಭಾಯಿಸಬಹುದು:
– ಕಡಿಮೆ ಲ್ಯಾಕ್ಟೋಸ್ ಅಥವಾ ಲ್ಯಾಕ್ಟೋಸ್ ಮುಕ್ತ ಆಹಾರಾಭ್ಯಾಸದ ಅನುಸರಣೆ (ಹಾಲಿನ ಬದಲು ಸೋಯಾಬೀನ್, ತೆಂಗಿನಕಾಯಿ, ಅಕ್ಕಿಯ ಉತ್ಪನ್ನಗಳು).
– ಊಟ ಅಥವಾ ಘನವಾದ ಆಹಾರದ ಜತೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುವುದು.
– ಹಾಲನ್ನು ನೀರು ಸೇರಿಸಿ ತೆಳುಗೊಳಿಸಿ ಕುಡಿಯುವುದು.
– ಕೆಲವು ಹೈನು ಉತ್ಪನ್ನಗಳು ಇತರವುಗಳಿಗಿಂತ ಹೆಚ್ಚು ಚೆನ್ನಾಗಿ ದೇಹಕ್ಕೆ ಒಗ್ಗಿಕೊಳ್ಳುತ್ತವೆ. ಅವು ಯಾವುವು ಎಂದು ಗುರುತಿಸಿ ಉಪಯೋಗಿಸುವುದು.
– ಫ್ಲೇವರ್ ರಹಿತ ಹಾಲಿಗಿಂತ ಚಾಕೊಲೇಟ್ ಹಾಲು ಹೆಚ್ಚು ಚೆನ್ನಾಗಿ ಒಗ್ಗಿಕೊಳ್ಳುತ್ತದೆ.
– ಹಾಲಿಗಿಂತ ಕಡಿಮೆ ಪ್ರಮಾಣದಲ್ಲಿ ಲ್ಯಾಕ್ಟೋಸ್ ಹೊಂದಿರುವ ಹೈನು ಉತ್ಪನ್ನಗಳು ಒಗ್ಗಿಕೊಳ್ಳುತ್ತವೆ. ಉದಾಹರಣೆಗೆ, ಮಜ್ಜಿಗೆ.
ಆಹಾರ ಅಲರ್ಜಿಗಳು
– ಆಹಾರ ಅಲರ್ಜಿಗಳಲ್ಲಿ ದದ್ದುಗಳು, ದಮ್ಮು ಕಟ್ಟುವುದು, ಕರುಳಿನ ತೀವ್ರ ಲಕ್ಷಣಗಳು ಮತ್ತು ಕೆಲವೊಮ್ಮೆ ಹಠಾತ್ ಕುಸಿತ ಸೇರಿವೆ. ಸಣ್ಣ ಪ್ರಮಾಣದ ಆಹಾರವೂ ಅಲರ್ಜಿ ಉಂಟು ಮಾಡಬಹುದಾಗಿದೆ.
– ಯಾವ ಆಹಾರ ನಿಮಗೆ ಅಲರ್ಜಿಕಾರಕ ಎಂಬುದನ್ನು ಕ್ರಮವಾಗಿ ಪಟ್ಟಿ ಮಾಡಿಕೊಂಡಿರಿ ಮತ್ತು ಭವಿಷ್ಯದಲ್ಲಿ ಅವುಗಳ ಸೇವನೆಯನ್ನು ವರ್ಜಿಸಿ.
ಜಿಡ್ಡಾದ ಮತ್ತು ದುರ್ವಾಸನೆ ಬೀರುವ ಆಹಾರಗಳು
-ನಿಮಗೆ ಕೊಬ್ಬಿನ ಅಸಮರ್ಪಕ ಹೀರಿಕೆಯ ಸಮಸ್ಯೆ ಇರಬಹುದು. ಕಡಿಮೆ ಕೊಬ್ಬು ಇರುವ ಆಹಾರಾಭ್ಯಾಸ ಪಾಲನೆಯಿಂದ (ಪೇಸ್ಟ್ರಿಗಳು, ಚಿಪ್ಸ್, ಬಿಸ್ಕಿಟ್‌ಗಳು, ಚಾಕೊಲೇಟ್, ಹುರಿದ ಮತ್ತು ಸಿದ್ಧ ತಿಂಡಿತಿನಿಸು, ಜಂಕ್ ಆಹಾರ ವರ್ಜಿಸುವುದು)ಕೊಬ್ಬಿನ ಅಸಮರ್ಪಕ ಹೀರಿಕೆಯ ಸಮಸ್ಯೆಯನ್ನು ಶಮನಗೊಳಿಸಬಹುದು.
ಗುÉಟೆನ್ ಒಗ್ಗದಿರುವಿಕೆ
ಗೋಧಿ, ಕಾಡು ಗೋಧಿ ಮತ್ತು ಬಾರ್ಲಿ ಉತ್ಪನ್ನಗಳಲ್ಲಿ ಕಂಡು ಬರುವ ಒಂದು ಬಗೆಯ ಪ್ರೊಟೀನ್ ಈ ಗುÉಟೆನ್. ಐಬಿಡಿ ಸಮಸ್ಯೆ ಹೊಂದಿರುವ ಕೆಲವರಿಗೆ ಗುÉಟೆನ್ ಆಗಿಬರುವುದಿಲ್ಲ.
ಧಾನ್ಯಗಳು
ಗೋಧಿ, ಬಾರ್ಲಿ ಮತ್ತು ರಾç ಗೋಧಿಯನ್ನು ವರ್ಜಿಸಿ. ಕ್ವಿನೋವಾ, ಜೋಳ ಅಥವಾ ಬಟಾಟೆ ಉಪಯೋಗಿಸಿ ತಯಾರಿಸಿದ ಬ್ರೆಡ್, ಗುÉಟೆನ್ ಮುಕ್ತ ಓಟ್ಸ್, ರಾಗಿ, ಅಕ್ಕಿ ಮತ್ತು ಕಾಡುಗೋಧಿ ಉಪಯೋಗಿಸಿ.
ತರಕಾರಿಗಳು
ಎಲ್ಲ ತರಕಾರಿಗಳು ಸಾಮಾನ್ಯವಾಗಿ ಗುÉಟೆನ್ ಮುಕ್ತವಾಗಿರುತ್ತವೆ. ಖನಿಜಾಂಶ ಸಮೃದ್ಧ ತರಕಾರಿ ಗಳೆಂದರೆ ಝುಚಿನಿ, ಹಸಿರು ಬೀನ್ಸ್, ಬ್ರಾಕೊಲಿ, ಕಾಲಿಫ್ಲವರ್, ಬಟಾಣಿ, ಲೆಟ್ಯೂಸ್, ಕ್ಯಾರೆಟ್, ಬದನೆ, ದೊಣ್ಣೆಮೆಣಸು, ನೀರುಳ್ಳಿ ಮತ್ತು ಬಟಾಟೆ.
ಹಣ್ಣುಗಳು
ಹೊಸ ಹೊಸ ಹಣ್ಣುಗಳನ್ನು ಆಹಾರಾಭ್ಯಾಸದಲ್ಲಿ ಸೇರಿಸಿಕೊಳ್ಳಿ. ಕಲ್ಲಂಗಡಿ, ಕಿವಿ, ಕ್ಲಮೆಂಟರಿಗಳು, ನಕ್ಷತ್ರ ನೇರಳೆ, ಮಾವಿನಹಣ್ಣು, ದಾಳಿಂಬೆ ಮತ್ತು ಪಪ್ಪಾಯಿ ಇತ್ಯಾದಿ.
ಮಾಂಸ
ಬೀಫ್, ಕೋಳಿಮಾಂಸ, ಹಂದಿಮಾಂಸ ಮತ್ತು ಟರ್ಕಿ ಮಾಂಸ ಸಹಿತ ಬಹುತೇಕ ಎಲ್ಲ ಮಾಂಸಗಳು ಗುÉಟೆನ್ ಮುಕ್ತವಾಗಿರುತ್ತವೆ. ಸಂಸ್ಕರಿತ ಮಾಂಸಗಳಲ್ಲಿ ಗುÉಟೆನ್ ಇದೆಯೇ ಎಂದು ಪರೀಕ್ಷಿಸಿ ಬಳಸಿ. ಸಾಸೇಜ್, ಹಾಟ್‌ಡಾಗ್, ಲಂಚ್‌ಮೀಟ್ ಅಥವಾ ಇತರ ಯಾವುದೇ ಪ್ಯಾಕೇಜ್‌ಡ್ ಮಾಂಸಗಳನ್ನು ಉಪಯೋಗಿಸುವಾಗ ಗೋಧಿ ಮೂಲದ ಸಾಮಗ್ರಿಗಳನ್ನು ಬಳಸಲಾಗಿದೆಯೇ ಎಂಬುದನ್ನು ಲೇಬಲ್ ಪರೀಕ್ಷಿಸಿ ಖಚಿತಪಡಿಸಿಕೊಳ್ಳಿ.
ಮೀನು
ಸಂಸ್ಕರಿತ ಮೀನನ್ನು ಉಪಯೋಗಿಸುವ ಸಂದರ್ಭದಲ್ಲಿ ಮಾತ್ರ ಲೇಬಲ್ ಪರಾಮರ್ಶಿಸಿ ಗುÉಟೆನ್ ಮುಕ್ತ ಎಂಬುದನ್ನು ಖಚಿತಪಡಿಸಿಕೊಳ್ಳಿ. ಗೋಧಿಯಿಂದ ತಯಾರಾದ ಬ್ರೆಡ್ ತುಣುಕುಗಳಿಂದ ಕೂಡಿದ ಬ್ರೆಡೆಡ್ ಫಿಶ್ ಫಿಲೆಟ್ ವರ್ಜಿಸಿ.
ಬೀನ್ಸ್
ಬೀನ್ಸ್ ನಿರಾತಂಕವಾಗಿ ಸೇವಿಸಿ ಖುಷಿಪಡಿ! ನೇವಿ ಬೀನ್ಸ್, ಅಲಸಂಡೆ, ಪಿಂಟೊ ಬೀನ್ಸ್ ಮತ್ತು ವೈಟ್ ಬೀನ್ಸ್ ಇವ್ಯಾವುವುಗಳಲ್ಲೂ ಗುÉಟೆನ್ ಇಲ್ಲ. ಸೂಪ್ ಮತ್ತು ಕ್ಯಾನ್‌ಡ್ ಬೀನ್ಸ್ ಉಪಯೋಗಿಸುವಾಗ ಮಾತ್ರ ಗೋಧಿಯನ್ನು ಬಳಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಲೇಬಲ್ ಪರೀಕ್ಷಿಸಿ.
ಹೈನು ಉತ್ಪನ್ನಗಳು
ಉತ್ತಮ ಹೈನು ಉತ್ಪನ್ನಗಳೆಂದರೆ, ಹಾಲು, ಚೀಸ್, ಮೊಸರು, ಸೋರ್ ಕ್ರೀಮ್ ಮತ್ತು ಕಾಟೇಜ್ ಚೀಸ್. ಕೆಲವು ಬಗೆಯ ಯೋಗರ್ಟ್‌ಗಳಲ್ಲಿ ಗುÉಟೆನ್‌ಯುಕ್ತ ಪೂರಕ ಸಾಮಗ್ರಿಗಳು ಇರಬಹುದು. ಖಚಿತಪಡಿಸಿಕೊಳ್ಳಲು ಲೇಬಲ್ ಪರೀಕ್ಷಿಸಿ. ನಿಮಗೆ ಲ್ಯಾಕ್ಟೋಸ್ ಒಗ್ಗದಿಕೆ ಇದ್ದರೆ ಲ್ಯಾಕ್ಟೋಸ್ ಒಗ್ಗದಿಕೆಯುಳ್ಳವರಿಗಾಗಿಯೇ ತಯಾರಾದ ಹೈನು ಉತ್ಪನ್ನಗಳನ್ನು ಸೇವಿಸಬೇಕು.
– ಅಮೃತಾ ,
ನ್ಯೂಟ್ರಿಶನಿಸ್ಟ್ ಮತ್ತು ಡಯಟಿಶಿಯನ್ ಪಥ್ಯಾಹಾರ ವಿಭಾಗ, ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.