ಐಬಿಡಿ ಇನ್‌ಫ್ಲಮೇಟರಿ ಬವೆಲ್ ಸಿಂಡ್ರೋಮ್
Team Udayavani, Dec 20, 2020, 2:01 PM IST
ಪಚನಾಂಗ ವ್ಯೂಹ ಎಂದರೇನು ಮತ್ತು ಅದರ ಕಾರ್ಯಗಳೇನು? :
- ಆಹಾರವನ್ನು ಸಂಸ್ಕರಿಸುವ ವಿವಿಧ ಅಂಗಗಳು ಮತ್ತು ಗ್ರಂಥಿಗಳ ಸಂಕೀರ್ಣ ವ್ಯೂಹವೇ ಪಚನಾಂಗ ವ್ಯೂಹ. ಬಾಯಿಯಿಂದ ಗುದನಾಳದ ತನಕ ಇರುವ ಉದ್ದನೆಯ, ತಿರುವಿ – ತಿರುಚಿಕೊಂಡಿರುವ ಕೊಳವೆಯಂತಹ ರಚನೆ ಮತ್ತು ಪಚನಕಾರಿ ರಾಸಾಯನಿಕಗಳನ್ನು ಸ್ರವಿಸುವ ಅಥವಾ ಶೇಖರಿಸುವ ಪಿತ್ತಕೋಶ, ಮೇದೋಜೀರಕ ಗ್ರಂಥಿಯಂತಹ ಇನ್ನಿತರ ಅಂಗಗಳೂ ಇದರ ಭಾಗಗಳಾಗಿವೆ. ನುಂಗಿದ ಆಹಾರವು ಅನ್ನನಾಳ ಮೂಲಕ ಒಳಹೋಗುತ್ತದೆ. ಅದು ಆ ಬಳಿಕ ಹೊಟ್ಟೆಯನ್ನು ಪ್ರವೇಶಿಸಿ ಅಲ್ಲಿ ಜೀರ್ಣಗೊಳ್ಳುತ್ತದೆ.
- ಜೀರ್ಣಗೊಂಡ ಆಹಾರವು ಹೊಟ್ಟೆಯ ಮೂಲಕ ಮುಂದಕ್ಕೆ ಸಣ್ಣ ಕರುಳಿನಲ್ಲಿ ಮುಂದುವರಿಯುತ್ತದೆ. ಇಲ್ಲಿ ಪೋಷಕಾಂಶಗಳು ಇನ್ನಷ್ಟು ಜೀರ್ಣಗೊಂಡು ದೇಹಕ್ಕೆ ಹೀರಿಕೆಯಾಗುತ್ತವೆ.
- ನಾರಿನಂಶಗಳು ಮತ್ತು ಜೀರ್ಣಗೊಂಡ ಆಹಾರವು ಅಂತಿಮವಾಗಿ ದೊಡ್ಡ ಕರುಳನ್ನು ಪ್ರವೇಶಿಸುತ್ತದೆ. ದೊಡ್ಡ ಕರುಳಿನಲ್ಲಿ ಇನ್ನುಳಿದ ಪೋಷಕಾಂಶಗಳು ಹೀರಿಕೆಯಾಗುತ್ತವೆ ಮತ್ತು ಮಲ ರೂಪುಗೊಳ್ಳುತ್ತದೆ. ದೊಡ್ಡ ಕರುಳಿನ ಕೊನೆಯ ಭಾಗದಲ್ಲಿ ಮಲವು ವಿಸರ್ಜನೆಗೆ ಮುನ್ನ ಶೇಖರಗೊಳ್ಳುತ್ತದೆ.
ರೋಗ ಪ್ರತಿರೋಧ ವ್ಯವಸ್ಥೆ ಮತ್ತು ಉರಿಯೂತ ಅಂದರೇನು? :
ರೋಗಕಾರಕ ಸೂಕ್ಷ್ಮಜೀವಿಗಳು ಮತ್ತು ಇತರ ಆಕ್ರಮಣಕಾರಿ ಸೂಕ್ಷ್ಮಜೀವಿಗಳ ವಿರುದ್ಧ ದೇಹವು ಹೊಂದಿರುವ ರಕ್ಷಣಾ ವ್ಯವಸ್ಥೆಯೇ ರೋಗ ಪ್ರತಿರೋಧ ವ್ಯವಸ್ಥೆ. ರೋಗ ಪ್ರತಿರೋಧ ವ್ಯವಸ್ಥೆಯು ರಕ್ತಕಣಗಳು ಮತ್ತು ಪ್ರೊಟೀನ್‌ಗಳಿಂದ ಕೂಡಿದ್ದು, ಪ್ರತೀ ದಿನವೂ ರೋಗಕಾರಕಗಳು ಮತ್ತು ಸೂಕ್ಷ್ಮಜೀವಿಗಳ ವಿರುದ್ಧ ದೇಹಕ್ಕೆ ರಕ್ಷಣೆಯನ್ನು ಒದಗಿಸುತ್ತದೆ. ಹಾನಿಗೀಡಾದ ಅಂಗಾಂಶಗಳನ್ನು ನಿರ್ಮೂಲನೆಗೊಳಿಸುವ ದೇಹದ ನೈಸರ್ಗಿಕ ಮಾರ್ಗವೇ ಉರಿಯೂತ. ದೇಹದ ರೋಗ ಪ್ರತಿರೋಧ ವ್ಯವಸ್ಥೆಯು ಪ್ರಮಾದವಶಾತ್ ಕರುಳಿನ ವಿರುದ್ಧ ಹೋರಾಟ ನಡೆಸಿದಾಗ ಅದರ ಪರಿಣಾಮವಾಗಿ ಉರಿಯೂತ, ಬಾತುಕೊಳ್ಳುವಿಕೆ, ಹಾನಿ ಮತ್ತು ಗಾಯಗಳು ಉಂಟಾಗುತ್ತವೆ.
ಐಬಿಡಿಗೆ ಕಾರಣಗಳೇನು? :
ಐಬಿಡಿಗೆ ನಿರ್ದಿಷ್ಟವಾದ ಕಾರಣಗಳು ತಿಳಿದುಬಂದಿಲ್ಲ. ಆದರೆ ಕರುಳಿನಲ್ಲಿರುವ ರೋಗ ಪ್ರತಿರೋಧ ವ್ಯವಸ್ಥೆಯು ಅತಿಯಾಗಿ ಪ್ರತಿಕ್ರಿಯಿಸುವುದರ ಮೂಲಕ ಕರುಳಿನ ಭಿತ್ತಿಯ ಮೇಲೆ ಉರಿಯೂತ ಮತ್ತು ಹುಣ್ಣುಗಳು ಕಾಣಿಸಿಕೊಳ್ಳುವಂತಹ ದೀರ್ಘಕಾಲಿಕ ಮತ್ತು ತೀವ್ರ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದಾಗಿ ಸಂಶೋಧನೆಗಳು ಹೇಳುತ್ತವೆ. ಸಾಮಾನ್ಯವಾಗಿರುವ ನಂಬಿಕೆಯೇನೆಂದರೆ, ಒತ್ತಡ ಮತ್ತು ನಿರ್ದಿಷ್ಟ ಆಹಾರಗಳು ಐಬಿಡಿಗೆ ಕಾರಣ. ಇದು ನಿಜವಲ್ಲ. ಆದರೆ ಒತ್ತಡ ಮತ್ತು ಕೆಲವು ಆಹಾರಗಳು ಪಚನಾಂಗ ವ್ಯೂಹದ ರೋಗ ಲಕ್ಷಣಗಳನ್ನು ತೀವ್ರಗೊಳಿಸಬಹುದಾಗಿದೆ.
ಐಬಿಡಿ ಗುಣವಾಗುತ್ತದೆಯೇ? :
ಐಬಿಡಿಗೆ ಶಾಶ್ವತವಾದ ಗುಣ ಎಂಬುದಿಲ್ಲ. ಮೊದಲ ಬಾರಿ ಅದು ಉಂಟಾದ ಬಳಿಕ ಕೆಲವರು ಸಂಪೂರ್ಣ ಗುಣ ಹೊಂದಿದಂತೆ ಕಂಡುಬರುತ್ತಾರೆ. ಇತರರು ಐಬಿಡಿಯ ಜತೆಗೇ ಹೊಂದಿಕೊಂಡು ಬದುಕುವುದನ್ನು ಕಲಿಯಬೇಕಾಗುತ್ತದೆ. ಬಹುತೇಕ ಮಂದಿ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಾರೆ ಮತ್ತು ದೀರ್ಘಕಾಲ ಲಕ್ಷಣಗಳಿಲ್ಲದ, ಸಹಜ ಸ್ಥಿತಿಯನ್ನು ಹೊಂದಿರುತ್ತಾರೆ.
ಇನ್‌ಫ್ಲಮೇಟರಿ ಬವೆಲ್ ಸಿಂಡ್ರೋಮ್ (ಐಬಿಡಿ) ಎಂದರೇನು? :
ನಮ್ಮ ಕರುಳು ಎರಡು ಭಾಗಗಳನ್ನು ಹೊಂದಿದೆ: ಸಣ್ಣ ಕರುಳು (ಇದರ ವ್ಯಾಸ ಕಿರಿದು) ಮತ್ತು ದೊಡ್ಡ ಕರುಳು (ಇದರ ವ್ಯಾಸ ದೊಡ್ಡದು). ಐಬಿಡಿಯು ಎರಡೂ ಕರುಳುಗಳನ್ನು ಒಳಗೊಂಡಿರಬಹುದು ಅಥವಾ ಒಂದರಲ್ಲಿಯೂ ಇರಬಹುದು. ಕರುಳುಗಳು ಉರಿಯೂತ (ಕೆಂಪಾಗಿ ಊದಿಕೊಳ್ಳುವುದು) ಅನುಭವಿಸುವ ಕೆಲವು ಅನಾರೋಗ್ಯಗಳ ಸಮುಚ್ಚಯವನ್ನು
ಐಬಿಡಿ ಎನ್ನುತ್ತಾರೆ. ದೇಹವು ತನ್ನದೇ ಕರುಳಿನ ಅಂಗಾಂಶಗಳ ವಿರುದ್ಧ ರೋಗಪ್ರತಿರೋಧಕ ಪ್ರತಿಕ್ರಿಯೆಯನ್ನು ನಡೆಸುವುದರಿಂದ ಇದು ಉಂಟಾಗಬಹುದು. ಅಲ್ಸರೇಟಿವ್ ಕೊಲೈಟಿಸ್‌ನಲ್ಲಿ ದೊಡ್ಡ ಕರುಳು ಮಾತ್ರ ತೊಂದರೆಗೀಡಾಗುತ್ತದೆ.
ಕ್ರಾನ್ಸ್ ಡಿಸೀಸ್ :
- ಬಾಯಿಯಿಂದ ಆರಂಭಿಸಿ ಗುದ ಪ್ರದೇಶದ ತನಕ ಪಚನಾಂಗ ವ್ಯೂಹದ ಯಾವುದೇ ಭಾಗದಲ್ಲಿ ಉರಿಯೂತ ಕಾಣಿಸಿಕೊಳ್ಳಬಹುದು.
- ಕರುಳಿನ ಭಿತ್ತಿಯ ಎಲ್ಲ ಪದರಗಳೂ ರೋಗಬಾಧಿತವಾಗುವ ಮೂಲಕ ನಿರ್ದಿಷ್ಟ ಸಂಕೀರ್ಣ ಸ್ಥಿತಿಗೆ ತುತ್ತಾಗಬಹುದು.
- ಸಣ್ಣ ಕರುಳು ಮತ್ತು/ ಅಥವಾ ದೊಡ್ಡ ಕರುಳಿನಲ್ಲಿ ಪ್ರದೇಶ ಪ್ರದೇಶವಾಗಿ ಉರಿಯೂತ ಉಂಟಾಗಬಹುದು.ಕ್ರಾನ್ಸ್ ಡಿಸೀಸ್ ಲಕ್ಷಣಗಳು ಇದು ರೋಗವು ಪಚನಾಂಗ ವ್ಯೂಹದ ಯಾವ ಭಾಗವನ್ನು ಬಾಧಿಸಿದೆ ಎಂಬುದನ್ನು ಆಧರಿಸಿರುತ್ತದೆ. ಸಿಡಿಯು ಸಾಮಾನ್ಯವಾಗಿ ಸಣ್ಣ ಕರುಳಿನ ಕೊನೆಯ ಭಾಗ (ಈಲಿಯಂ) ಮತ್ತು ಅದರ ಆಸುಪಾಸಿನ ದೊಡ್ಡ ಕರುಳಿನ ಭಾಗಗಳಲ್ಲಿ ಉಂಟಾಗುತ್ತದೆ. ಸಾಮಾನ್ಯ ಲಕ್ಷಣಗಳೆಂದರೆ, ವಿಶೇಷವಾಗಿ ಹೊಟ್ಟೆಯ ಕೆಳ ಬಲಭಾಗದಲ್ಲಿ ಹೊಟ್ಟೆನೋವು ಮತ್ತು ಮೃದುವಾಗಿರುವುದು ಮತ್ತು ಭೇದಿ.
ಇತರ ಕೆಲವು ಕಡಿಮೆ ಸಾಮಾನ್ಯವಾಗಿರುವ ಲಕ್ಷಣಗಳೆಂದರೆ:
ಹೊಟ್ಟೆ ನೋವು, ತೂಕ ನಷ್ಟ, ಉಸಿರುಗಟ್ಟುವಿಕೆ, ಮಲಬದ್ಧತೆ, ಲಘು ಜ್ವರ, ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗುವುದು ಮತ್ತು ಲೈಂಗಿಕ ಬೆಳವಣಿಗೆ ನಿಧಾನವಾ ಗುವುದು, ಗುದನಾಳದಲ್ಲಿ ರಕ್ತಸ್ರಾವ.
ಐಬಿಡಿಯು ಬೆಳವಣಿಗೆ ಹೊಂದುವುದು ಹೇಗೆ? ;
ಐಬಿಡಿಯು ದೀರ್ಘಕಾಲಿಕ, ಮರುಕಳಿಸಬಲ್ಲ ಅನಾರೋಗ್ಯ ಸ್ಥಿತಿಯಾಗಿದೆ. ದೀರ್ಘಕಾಲಿಕ ಎಂದರೆ ಸತತವಾಗಿರುವ ಮತ್ತು ಮುಂದುವರಿಯುತ್ತಿರುವುದು. ಮರುಕಳಿಸುವುದು ಎಂದರೆ ಆಗಾಗ ಲಕ್ಷಣಗಳು ತೀವ್ರಗೊಳ್ಳುವುದು ಮತ್ತು ಕೆಲವೊಮ್ಮೆ ಯಾವುದೇ ಲಕ್ಷಣಗಳು ಇಲ್ಲದಿರುವುದು.
ಅಲ್ಸರೇಟಿವ್ ಕೊಲೈಟಿಸ್‌ನ ಲಕ್ಷಣಗಳು :
ಅತ್ಯಂತ ಸಾಮಾನ್ಯ: ಹೊಟ್ಟೆನೋವು ಮತ್ತು ರಕ್ತ ಸಹಿತ ಭೇದಿ. ರೋಗಿಗಳು ಭೇದಿ, ದಣಿವು, ಹಸಿವೆ ನಷ್ಟ, ತೂಕ ನಷ್ಟ, ಉಸಿರುಗಟ್ಟುವಿಕೆ, ಗುದದ್ವಾರದಲ್ಲಿ ರಕ್ತಸ್ರಾವ ಲಕ್ಷಣಗಳನ್ನೂ ಹೊಂದಿರಬಹುದು.
ಐಬಿಡಿ: ಪತ್ತೆ ಹೇಗೆ? :
ಮೇಲೆ ಹೇಳಿದಂತಹ ಲಕ್ಷಣಗಳುಳ್ಳ ರೋಗಿಯ ಆರಂಭಿಕ ತಪಾಸಣೆಯಲ್ಲಿ ಪೂರ್ಣ ವೈದ್ಯಕೀಯ ಚರಿತ್ರೆಯ ವಿಶ್ಲೇಷಣೆ ಮತ್ತು ದೈಹಿಕ ತಪಾಸಣೆಗಳನ್ನು ಒಳಗೊಂಡಿರುತ್ತದೆ.
ಕೆಲಕಂಡ ಒಂದು ಅಥವಾ ಹಲವಾರು ಪರೀಕ್ಷೆಗಳನ್ನು ನಡೆಸಬಹುದಾಗಿದೆ:
- ರಕ್ತ ಪರೀಕ್ಷೆ, ವಿಶೇಷ ಎಕ್ಸ್‌ರೇಗಳು, ಬಯಾಪ್ಸಿ, ಮಲ ಪರೀಕ್ಷೆ
- ಎಂಡೊಸ್ಕೊಪಿ: ಈ ತಪಾಸಣೆಯಲ್ಲಿ, ತುದಿಯಲ್ಲಿ ಬೆಳಕನ್ನು ಹೊಂದಿರುವ ವಿಶೇಷ ಕೊಳವೆಯನ್ನು ಬಾಯಿಯ ಮುಖಾಂತರ ತೂರಿಸಿ ಹೊಟ್ಟೆ ಮತ್ತು ಕರುಳುಗಳ ಒಳಭಾಗವನ್ನು ವೀಕ್ಷಿಸಲಾಗುತ್ತದೆ.
ಕೊಲೊನೊಸ್ಕೊಪಿ: ಈ ತಪಾಸಣೆಯಲ್ಲಿ, ಬೆಳಕನ್ನು ಹೊಂದಿರುವ ಕಿರಿದಾದ ಕೊಳವೆಯನ್ನು ಗುದದ್ವಾರದ ಮೂಲಕ ತೂರಿಸಿ ದೊಡ್ಡ ಕರುಳಿನ ಒಳಭಾಗವನ್ನು ವೀಕ್ಷಿಸಲಾಗುತ್ತದೆ.
ಐಬಿಡಿಗೆ ಲಭ್ಯವಿರುವ ಚಿಕಿತ್ಸಾ ಆಯ್ಕೆಗಳು ಯಾವುವು? :
ಐಬಿಡಿಗೆ ಚಿಕಿತ್ಸೆಗಳಿಂದ ನಿರೀಕ್ಷಿತ ಫಲಿತಾಂಶಗಳು:
- ಹೊಟ್ಟೆನೋವು, ಭೇದಿ ಮತ್ತು ಗುದನಾಳದಲ್ಲಿ ರಕ್ತಸ್ರಾವವನ್ನು ಕಡಿಮೆ ಮಾಡಬೇಕು.
- ಉರಿಯೂತವನ್ನು ನಿಯಂತ್ರಿಸಬೇಕು.
- ಪೌಷ್ಟಿಕಾಂಶ ಅಸಮತೋಲನವನ್ನು ಸರಿಪಡಿಸಬೇಕು.
- ಪೌಷ್ಟಿಕಾಂಶ ಪೂರಕಗಳು, ಔಷಧಗಳು, ಆಸ್ಪತ್ರೆ ದಾಖಲಾತಿ, ಶಸ್ತ್ರಚಿಕಿತ್ಸೆ ಅಥವಾ ಇವೆರಡರ ಸಂಯೋಜನೆಗಳು ಚಿಕಿತ್ಸೆಯ ಭಾಗವಾಗಿರಬಹುದಾಗಿದೆ.
ದೇಹದ ಇತರ ಭಾಗಗಳ ಮೇಲೂ ಐಬಿಡಿಯು ಪರಿಣಾಮ ಬೀರುವುದೇ? :
ಐಬಿಡಿಯಿಂದ ಉರಿಯೂತ ಉಂಟಾಗುವ ಪ್ರಧಾನ ಭಾಗವು ಪಚನಾಂಗ ವ್ಯೂಹವಾಗಿದ್ದರೂ ದೇಹದ ಇತರ ಭಾಗಗಳಲ್ಲಿಯೂ ರೋಗ ಲಕ್ಷಣಗಳು ಉಂಟಾಗುವುದಕ್ಕೆ ಇದು ಕಾರಣವಾಗಬಹುದು. ಇಂತಹ ರೋಗ ಲಕ್ಷಣಗಳಲ್ಲಿ ಸಂಧಿವಾತ (ಆಥೆùìಟಿಸ್), ಎಲುಬು ಸವೆತ, ಪಿತ್ತಕೋಶ ಮತ್ತು/ ಅಥವಾ ದೃಷ್ಟಿನಾಶ ಸೇರಿರಬಹುದು. ದೀರ್ಘಕಾಲಿಕವಾಗಿ ಐಬಿಡಿಯಿಂದ ಉಂಟಾಗುವ ರಕ್ತ ನಷ್ಟವು ರಕ್ತಹೀನತೆಯನ್ನು ಉಂಟು ಮಾಡಬಹುದು.
ಐಬಿಡಿ ಮತ್ತು ಪಥ್ಯಾಹಾರ :
ಆಹಾರ ಕ್ರಮವು ಐಬಿಡಿಗೆ ಕಾರಣವಲ್ಲ ಮತ್ತು ಪರಿಹಾರವೂ ಅಲ್ಲ. ಆಹಾರ ಮತ್ತು ಐಬಿಡಿಯ ನಡುವೆ ಖಚಿತ ಕಾರಣಕರ್ತ ಸಂಬಂಧವಿಲ್ಲ. ಆದರೆ ಕೆಲವು ಆಹಾರಗಳು ಮತ್ತು ಪಾನೀಯಗಳು ಐಬಿಡಿಯ ಲಕ್ಷಣಗಳನ್ನು ಅದರಲ್ಲಿಯೂ ಐಬಿಡಿಯು ತೀಕ್ಷ್ಣವಾಗಿರುವ ಸಂದರ್ಭಗಳಲ್ಲಿ, ತೀವ್ರಗೊಳಿಸಬಹುದು. ಐಬಿಡಿ ಹೊಂದಿರುವ ಎಲ್ಲರಿಗೂ ಅನ್ವಯವಾಗಬಲ್ಲಂತಹ ಏಕಮಾದರಿಯ ಪಥ್ಯಾಹಾರ ಅಥವಾ ಆಹಾರ ಯೋಜನೆ ಇಲ್ಲ. ಆಹಾರಕ್ಕೆ ಸಂಬಂಧಿಸಿದ ಶಿಫಾರಸುಗಳು ವ್ಯಕ್ತಿ ನಿರ್ದಿಷ್ಟವಾಗಿರುತ್ತವೆ.
ಏನು ಮಾಡಬೇಕು :
- ನಿಮ್ಮ ದೇಹವು ನೀಡುವ ಸಂಕೇತಗಳನ್ನು ಗಮನಿಸಿ. ಇದನ್ನು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಯಾವುದೇ ಒಂದು ಆಹಾರ, ಪಾನೀಯ ಇತ್ಯಾದಿಯನ್ನು ದೇಹ ಸಹಿಸಿಕೊಳ್ಳುವುದಿಲ್ಲ ಎಂಬುದು ತಿಳಿದಾಗ ಮುಂದಿನ ಬಾರಿ ಅದನ್ನು ವರ್ಜಿಸಿ.
- ತೂಕ ಕಾಪಾಡಿಕೊಳ್ಳಲು ಅಗತ್ಯವಾದಷ್ಟು ಆಹಾರ ಸೇವಿಸಿ.
- ರೋಗ ಲಕ್ಷಣಗ ತೀವ್ರಗೊಳಿಸದ ಆರೋಗ್ಯಪೂರ್ಣ ಆಹಾರ ಕ್ರಮ ಪಾಲಿಸಿ.
- ಸಣ್ಣ ಪ್ರಮಾಣದ ಆಹಾರ ಸೇವಿಸಿ: ಎರಡು ಅಥವಾ ಮೂರು ಬಾರಿ ದೊಡ್ಡ ಪ್ರಮಾಣದಲ್ಲಿ ಊಟ – ಉಪಾಹಾರ ಸೇವಿಸುವುದಕ್ಕಿಂತ ಐದಾರು ಬಾರಿ ಸಣ್ಣ ಸಣ್ಣ ಪ್ರಮಾಣದಲ್ಲಿ ಆಹಾರ ಸೇವನೆ ಉತ್ತಮ ಫಲಿತಾಂಶವನ್ನು ಒದಗಿಸುತ್ತದೆ.
- ಸಾಕಷ್ಟು ದ್ರವಾಹಾರ: ಪ್ರತೀ ದಿನವೂ ಸಾಕಷ್ಟು ಬಾರಿ ನೀರು, ದ್ರವಾಹಾರ ಸೇವಿಸಿ.
- ವ್ಯಾಯಾಮ: ಲಘುವಾದ ವ್ಯಾಯಾಮಗಳು ಕೂಡ ಒತ್ತಡ, ಖನ್ನತೆಗಳನ್ನು ಕಡಿಮೆ ಮಾಡಿ ಜಠರದ ಕಾರ್ಯಚಟುವಟಿಕೆಗಳನ್ನು ಉತ್ತಮ ಪಡಿಸಲು ನೆರವಾಗುತ್ತವೆ.
- ನಿಯಮಿತವಾಗಿ ಯೋಗ ಮತ್ತು ಧ್ಯಾನ: ಇವುಗಳು ಒತ್ತಡವನ್ನು ಕಡಿಮೆ ಮಾಡುವುದಕ್ಕೆ ಪರಿಣಾಮಕಾರಿ ಮಾರ್ಗಗಳಾಗಿವೆ. ಯೋಗ, ಧ್ಯಾನಗಳನ್ನು ತರಗತಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಕಲಿಯಬಹುದು ಅಥವಾ ಮನೆಯಲ್ಲಿಯೇ ಪುಸ್ತಕಗಳನ್ನು ಅಭ್ಯಾಸ ಮಾಡಿ, ವೀಡಿಯೋಗಳನ್ನು ವೀಕ್ಷಿಸುವ ಮೂಲಕ ಕಲಿಯಬಹುದು.
- ನಿಮಗೆ ಆಸಕ್ತಿದಾಯಕವಾಗಿರುವ, ಒತ್ತಡ ಇಳಿಸಿ ವಿಶ್ರಾಂತಿ ಒದಗಿಸುವ ಸಂಗೀತ ಕೇಳುವುದು, ಓದುವುದು, ಆಟ ಇತ್ಯಾದಿ ಯಾವುದೇ ಚಟುವಟಿಕೆಗಳಲ್ಲಿ ದಿನಕ್ಕೆ ಕನಿಷ್ಠ 20 ನಿಮಿಷ ಪಾಲ್ಗೊಳ್ಳುವುದು ಕೂಡ ಒಳ್ಳೆಯದು.
ಯಾವುದನ್ನು ಮಾಡಬಾರದು? :
- ಹೆಚ್ಚು ನಾರಿನಂಶ ಇರುವ ಆಹಾರ ತ್ಯಜಿಸಿ: ಇವು ಭೇದಿ, ನೋವು ಮತ್ತು ವಾಯು ಉಂಟು ಮಾಡಬಹುದು.
- ಸಮಸ್ಯಾತ್ಮಕ ಆಹಾರಗಳನ್ನು ವರ್ಜಿಸಿ: ಮಸಾಲೆಯುಕ್ತ ಆಹಾರಗಳು, ಪಾಪ್‌ಕಾರ್ನ್, ಮದ್ಯ, ಕೆಫೀನ್, ಚಾಕಲೇಟ್ ಮತ್ತು ಸೋಡಾಗಳಂತಹ ಆಹಾರವಸ್ತುಗಳನ್ನು ವರ್ಜಿಸಿ. ಇವು ಲಕ್ಷಣಗಳನ್ನು ಉಲ್ಬಣಗೊಳಿಸಬಲ್ಲವು. ಐಬಿಡಿಯು ಒಂದು ದೀರ್ಘಕಾಲಿಕ ಅನಾರೋಗ್ಯವಾಗಿದ್ದರೂ ರೋಗಿಗಳು ಸಾಕಷ್ಟು ಕಾಲದ ವರೆಗೆ ಲಕ್ಷಣಗಳಿಲ್ಲದೆ ಇರಬಹುದು. ದೀರ್ಘಾವಧಿಯ ವರೆಗೆ ಔಷಧ ಸೇವಿಸಬೇಕಾಗಿರುವವರು ಕೂಡ ಉದ್ಯೋಗ ನಿರ್ವಹಿಸಬಹುದು, ಕುಟುಂಬ ಜೀವನ ಮುನ್ನಡೆಸಬಹುದು, ಮನೆ ಮತ್ತು ಸಮಾಜದಲ್ಲಿ ಸಹಜ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಐಬಿಡಿಯ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವುದು ಮತ್ತು ದೇಹ ಪ್ರಕಟಿಸುವ ಎಚ್ಚರಿಕೆಯ ಸಂಕೇತಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಮುಂಜಾಗ್ರತೆ ವಹಿಸುವುದು ನಿಯಂತ್ರಣಕ್ಕೆ ಮುಖ್ಯ. ಐಬಿಡಿಯು ದೀರ್ಘಕಾಲಿಕ. ಹೀಗಾಗಿ ಶಿಫಾರಸು ಮಾಡಲಾದ ಔಷಧಗಳನ್ನು ಸರಿಯಾಗಿ ಸೇವಿಸುವುದು ಗುಣ ಹೊಂದುವುದಕ್ಕೆ ಮತ್ತು ಮರುಕಳಿಕೆಯನ್ನು ದೂರ ಮಾಡಲು ಬಹಳ ಮುಖ್ಯ.
ಡಾ| ಶಿರನ್ ಶೆಟ್ಟಿ
ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರು,
ಗ್ಯಾಸ್ಟ್ರೊಎಂಟರಾಲಜಿ ಮತ್ತು ಹೆಪಟಾಲಜಿ
ವಿಭಾಗ, ಕೆಎಂಸಿ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.