ಏಡ್ಸ್ ಬಾಯಿಯಲ್ಲಿ ಕಂಡುಬರುವ ಸೋಂಕು ಲಕ್ಷಣಗಳು ಮತ್ತು ನಿರ್ವಹಣೆ
Team Udayavani, Feb 9, 2020, 4:57 AM IST
ನಾವು ಸಮಾಜಜೀವಿಗಳು.ಹಾಗಾಗಿ ಸಮಾಜದಲ್ಲಿರುವ ಎಲ್ಲ ವರ್ಗದ ಜನರ, ಅದರಲ್ಲೂ ಏಡ್ಸ್‌ನಂತಹ ಗುಣವಾಗದ ಕಾಯಿಲೆಗಳಿಂದ ಬಾಧಿತರಾದವರ ಅಗತ್ಯಗಳನ್ನು ಅರಿತುಕೊಳ್ಳುವುದು, ಅವರಿಗೆ ಸಹಾನುಭೂತಿಯ ಉತ್ತಮ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳುವುದು ನಮ್ಮ ಹೊಣೆಗಾರಿಕೆಯಾಗಿರುತ್ತದೆ. ಕಳೆದ ವರ್ಷದ ಅಂತಾರಾಷ್ಟ್ರೀಯ ಏಡ್ಸ್ ದಿನಾಚರಣೆಯ ಧ್ಯೇಯವಾಕ್ಯವು “ಎಚ್‌ಐವಿ/ ಏಡ್ಸ್ ಸೋಂಕಿನ ಅಂತ್ಯ: ಸಮುದಾಯದಿಂದ ಸಮುದಾಯ’ ಎಂಬುದಾಗಿತ್ತು. ಈ ಹಿನ್ನೆಲೆಯಲ್ಲಿ ಈ ಲೇಖನವು ಎಚ್‌ಐವಿ/ ಏಡ್ಸ್ ರೋಗಿಗಳ ಜತೆಗೆ ಸಮಾಜವು ಸಾಮರಸ್ಯ ಮತ್ತು ಪರಸ್ಪರ ಅರ್ಥ ಮಾಡಿಕೊಂಡು ಹೊಂದಾಣಿಕೆಯಿಂದ ಬದುಕುವುದಕ್ಕೆ ಆರೋಗ್ಯ ಸೇವಾ ವೃತ್ತಿಪರರು ಮತ್ತು ಜನಸಾಮಾನ್ಯರು ಹೊಂದಿರಬೇಕಾದ ಕೆಲವು ಅಂಶಗಳ ಬಗ್ಗೆ ಬೆಳಕು ಚೆಲ್ಲುವ ಉದ್ದೇಶವನ್ನು ಹೊಂದಿದೆ.
ಅಕ್ವಾರ್ಡ್ ಇಮ್ಯುನೋಡಿಫಿಶಿಯೆನ್ಸಿ ಸಿಂಡ್ರೋಮ್ (ಏಡ್ಸ್)ನಲ್ಲಿ ಹ್ಯೂಮನ್ ಇಮ್ಯುನೋ ಡಿಫಿಶಿಯೆನ್ಸಿ ವೈರಸ್‌ನಿಂದಾಗಿ ರೋಗಿಯ ಒಟ್ಟೂ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ದೇಹವು ಸೋಂಕುಗಳ ವಿರುದ್ಧ ಹೋರಾಡುವುದಕ್ಕೆ ಅಗತ್ಯವಾದ ನಿರ್ದಿಷ್ಟ ಟಿ ಜೀವಕೋಶಗಳಾದ ಸಿಡಿ4 ಜೀವಕೋಶಗಳ ಮೇಲೆ ಎಚ್‌ಐವಿ ದಾಳಿ ಮಾಡುತ್ತದೆ. ಎಚ್‌ಐವಿಯ ಕೊನೆಯ ಹಂತ ಏಡ್ಸ್ ಆಗಿದ್ದು, ಈ ಸ್ಥಿತಿಯಲ್ಲಿ ರೋಗಿಯು ಅನೇಕ ವಿಧವಾದ ಸೋಂಕುಗಳಿಗೆ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಸುಲಭವಾಗಿ ತುತ್ತಾಗುವ ಅಪಾಯವನ್ನು ಹೊಂದಿರುತ್ತಾರೆ. ದೇಹದ ರೋಗನಿರೋಧಕ ರಕ್ಷಣಾ ವ್ಯವಸ್ಥೆಯು ದುರ್ಬಲವಾಗಿರುವುದರಿಂದ ದೇಹ ಶಾಸ್ತ್ರೀಯ ಮತ್ತು ಮೌಖೀಕ ಸೋಂಕುಗಳ ವಿರುದ್ಧ ಹೋರಾಡುವುದು ದೇಹಕ್ಕೆ ಕಷ್ಟವಾಗುತ್ತದೆ. ಆದ್ದರಿಂದ, ಈ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವುದಕ್ಕೆ ಒಟ್ಟಾರೆ ಚಿಕಿತ್ಸಾ ಯೋಜನೆಯಲ್ಲಿ ಬಾಯಿಯ ಆರೋಗ್ಯ ಮತ್ತು ಆರೈಕೆಯನ್ನು ಸೇರಿಸಿಕೊಳ್ಳುವುದು ಅನಿವಾರ್ಯವಾಗಿದೆ.
ದಂತ ಮತ್ತು ಬಾಯಿಯ ಸಮಸ್ಯೆಗಳು
ವ್ಯಕ್ತಿ ಎಚ್‌ಐವಿ ಸೋಂಕುಪೀಡಿತನಾದಾಗ ಅದರ ಪರಿಣಾಮವು ಮೊದಲಾಗಿ ಕಂಡುಬರುವ ದೇಹದ ಅಂಗಗಳಲ್ಲಿ ಬಾಯಿಯೂ ಒಂದು. ಇದು ತೀವ್ರ ಹಲ್ಲುನೋವು, ವಸಡುಗಳಲ್ಲಿ ನೋವು, ಹಲ್ಲುಗಳು ಅಲುಗಾಡುವುದು ಮತ್ತು ಹಲ್ಲು ಬಿದ್ದುಹೋಗುವುದು ಇತ್ಯಾದಿಗಳಿಗೆ ಕಾರಣವಾಗಬಹುದು. ಇದರಿಂದಾಗಿ ರೋಗಿಗೆ ಜಗಿಯಲು ಮತ್ತು ನುಂಗಲು ಕಷ್ಟವಾಗುತ್ತದೆ, ಇದು ಎಚ್‌ಐವಿ ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳದಿರಲು ಮತ್ತು ತೀವ್ರ ಅಪೌಷ್ಟಿಕತೆಯನ್ನು ಉಂಟು ಮಾಡುತ್ತದೆ. ಎಚ್‌ಐವಿ ಸೋಂಕಿಗೆ ತುತ್ತಾಗಿರುವ ರೋಗಿಗಳಲ್ಲಿ ಪದೇಪದೇ ಬಾಯಿ ಹುಣ್ಣಾಗುವುದು, ಬಾಯಿ ಒಣಗುವುದು, ಬಾಯಿಯಲ್ಲಿ ಗಾಯಗಳಾಗುವುದು, ಹರ್ಪಿಸ್ ಸಿಂಪ್ಲೆಕ್ಸ್ (ಸರ್ಪಸುತ್ತು) ವೈರಸ್ ಹಾವಳಿ ಮತ್ತು ನಾಲಗೆಯ ಪಾರ್ಶ್ವಗಳಲ್ಲಿ ಬಿಳಿ ಅಗ್ರ ಉಂಟಾಗುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆಯಲ್ಲದೆ, ಸೋಂಕು ಉಲ್ಬಣಿಸಿದಾಗ ಕಪೊಸಿಸ್ ಸರ್ಕೋಮಾದಂತಹ ಕಾನ್ಯರ್‌ಕಾರಕ ಸಮಸ್ಯೆಗಳೂ ತಲೆದೋರಬಹುದು.
ಆಫೊ¤ಸ್ ಬಾಯಿ ಹುಣ್ಣುಗಳು
ಇವು ಎಚ್‌ಐವಿ ಸಂಬಂಧಿಯಾಗಿ ರೋಗಪ್ರತಿರೋಧಕ ಶಕ್ತಿ ಕುಂದಿದ್ದರಿಂದ ಅತಿ ಸಾಮಾನ್ಯವಾಗಿ ಉಂಟಾಗುವ ಮೌಖೀಕ ಸಮಸ್ಯೆಗಳು. ಈ ಹುಣ್ಣುಗಳು ದೊಡ್ಡದಾಗಿಯೂ ಒಂದು ಅಥವಾ ಹಲವಾಗಿಯೂ ದೀರ್ಘಕಾಲಿಕವಾಗಿಯೂ ಆಳವಾಗಿಯೂ ಉಂಟಾಗುತ್ತವೆ. ನೋವುಳ್ಳ ಗಾಯಗಳಾಗಿ ಆರೋಗ್ಯವಂತರಿಗಿಂತ ಹೆಚ್ಚು ದೀರ್ಘಕಾಲ ಇರುತ್ತವೆ, ಚಿಕಿತ್ಸೆಗೆ ಪ್ರತಿಸ್ಪಂದಿಸುವುದು ಕಡಿಮೆ.
ಹರ್ಪಿಸ್ ಸಿಂಪ್ಲೆಕ್ಸ್ ವೈರಸ್
ಆರಂಭಿಕ ಸೋಂಕು ಬಾಲ್ಯದಲ್ಲಿ ಉಂಟಾಗಿರುತ್ತದೆ ಮತ್ತು ವೈರಸ್ ಸುಪ್ತಾವಸ್ಥೆಯಲ್ಲಿ ಇರುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕುಂದಿದಾಗ ವೈರಸ್ ಸಕ್ರಿಯವಾಗಿ ವಿವಿಧ ಸ್ವರೂಪಗಳಲ್ಲಿ ಪ್ರಕಟಗೊಳ್ಳುತ್ತದೆ. ಬಾಯಿಯಲ್ಲಿ ಮೃದ್ವಂಗಗಳ ಹುಣ್ಣುಗಳ ಜತೆಗೆ ಜ್ವರ, ಹುಷಾರಿಲ್ಲದ ಅನುಭವ, ಕುತ್ತಿಗೆಯ ಸುತ್ತಲಿನ ದುಗ್ಧರಸ ಗ್ರಂಥಿಗಳು ಊತದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನೀರ್ಗುಳ್ಳೆಗಳು ಕಾಣಿಸಿಕೊಂಡು, ಬಳಿಕ ಒಡೆದು ನೋವುಳ್ಳ ಗಾಯಗಳಾಗುತ್ತವೆ, ಇವು ಹಲವು ವಾರಗಳ ತನಕ ಇರುತ್ತವೆ. ನಾಲಗೆಯ ಮೇಲ್ಭಾಗ, ಬಾಯಿಯ ಒಳಗಿನ ಮೇಲ್ಭಾಗ ಮತ್ತು ವಸಡುಗಳಲ್ಲಿ ಇವು ಕಾಣಿಸಿಕೊಳ್ಳುತ್ತವೆ.
ಓರಲ್ ಹೇರಿ ಲ್ಯುಕೋಪ್ಲಾಕಿಯಾ
ಇವು ಸಾಮಾನ್ಯವಾಗಿ ನಾಲಗೆಯ ಹಿಂದಿನ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ, ಆದರೆ ಬಳಿಕ ಮೇಲಕ್ಕೂ ಕೆಳಕ್ಕೂ ವ್ಯಾಪಿಸುತ್ತವೆ. ನಾಲಗೆಯ ಎರಡೂ ಪಾರ್ಶ್ವಗಳಲ್ಲಿ ಇವು ಉಂಟಾಗಿ ಸಮಾಂತರವಾದ ಬಿಳಿ ಗೆರೆಗಳು, ತರಚು ಗಾಯಗಳು, ಮಟ್ಟಸ ಪದರ ಅಥವಾ ಕೆರಾಟಿನ್‌ನ ಕೂದಲಿನಂತಹ ಉಬ್ಬಿದ ಪದರಗಳೊಂದಿಗೆ ಕಾಣಿಸಿಕೊಳ್ಳಬಹುದು.
ಕಾಪೊಸೀಸ್ ಸರ್ಕೋಮಾ
ಎಚ್‌ಐವಿ ಸೋಂಕಿಗೆ ಸಂಬಂಧಿಸಿ ಬಾಯಿಯಲ್ಲಿ ಉಂಟಾಗುವ ಬೆಳವಣಿಗೆ ಕಾಪೊಸೀಸ್ ಸರ್ಕೋಮಾ. ಹಲ್ಲುಗಳ ಬುಡಭಾಗದ ವಸಡುಗಳಲ್ಲಿ (ಜಿಂಜಿವಾ) ಕೆಂಪು- ನೇರಳೆ ಬಣ್ಣದ ಉಬ್ಬು, ಹುಣ್ಣು ಅಥವಾ ಗಡ್ಡೆ ಯಾ ಮಾಂಸದ ಮುದ್ದೆಯಾಗಿ ಇವು ತೋರಿಬರಬಹುದು.
ಬಾಯಿಯಲ್ಲಿ ಅಗ್ರ (ಓರಲ್ ಥÅಶ್)
ಎಚ್‌ಐವಿ ಸೋಂಕಿನ ಅತಿ ಸಾಮಾನ್ಯವಾದ ಆರಂಭಿಕ ಲಕ್ಷಣವಾಗಿ ಬಾಯಿಯಲ್ಲಿ ಅಥವಾ ಫ್ಯಾರಿಂಜಿಯಲ್ ಕ್ಯಾಂಡಿಡಿಯಾಸಿಸ್ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತದೆ. ನಾಲಗೆ ಮತ್ತು ಬಾಯಿಯ ಒಳಗೆ ಮೇಲ್ಭಾಗದಲ್ಲಿ ಕೆಂಪಾದ, ಸಮತಟ್ಟಾದ ಅಗ್ರ ಪದರವಾಗಿ ಇದು ಕಾಣಿಸಿಕೊಳ್ಳುತ್ತದೆ.
ಆ್ಯಂಗ್ಯುಲಾರ್ ಶಿಯಾಲೈಟಿಸ್
ಬಾಯಿಯ ಮೂಲೆಗಳಲ್ಲಿ, ಸಂದುಗಳಲ್ಲಿ ತರಚು ಗಾಯ, ಬಿರುಕುಗಳಾಗಿ ಮತ್ತು ಕೆಂಪಾಗಿ ಅಥವಾ ಎರಿಥೆಮಾ ಆಗಿ ಇದು ಕಾಣಿಸಿಕೊಳ್ಳುತ್ತದೆ.
ಲೀನಿಯರ್ ಜಿಂಜಿವಲ್ ಎರಿಥೆಮಾ
ಬಾಯಿಯೊಳಗೆ, ಹಲ್ಲುಗಳ ಒಳಭಾಗದ ವಸಡುಗಳಲ್ಲಿ ಸುಲಭವಾಗಿ ರಕ್ತಸ್ರಾವ ಉಂಟಾಗುವ, ಸಮಾಂತರವಾದ ಕಡು ಕೆಂಪು ಬಣ್ಣದ ಸಾಲುಗಳಾಗಿ ಇದು ಕಾಣಿಸಿಕೊಳ್ಳುತ್ತದೆ.
ನೆಕ್ರೊಟೈಸಿಂಗ್ ಅಲ್ಸರೇಟಿವ್ ಜಿಂಜಿವೈಟಿಸ್ (ಎನ್‌ಯುಜಿ)
ಒಸಡುಗಳ ಹೊರ ಅಂಚುಗಳಲ್ಲಿ ಹುಣ್ಣುಗಳುಂಟಾಗಿ, ಹಳದಿ- ಬೂದು ಬಣ್ಣದ ಪದರದಂತಹ ರಚನೆ ಕಾಣಿಸಿಕೊಂಡು, ಸುಲಭವಾಗಿ ರಕ್ತಸ್ರಾವವಾಗುತ್ತದೆ. ಕ್ಷಯವಾಗುವ, ವಸಡುಗಳು ನಿಧಾನವಾಗಿ ಕ್ಷಯಿಸುವ ಸಮಸ್ಯೆಯಿದು. ಇದು ನೋವು ಹೊಂದಿದ್ದು, ಕ್ಷಿಪ್ರವಾಗಿ ವಿಸ್ತರಿಸುವ ಗುಣ ಹೊಂದಿರುತ್ತದೆ.ಎನ್‌ಯುಜಿಯಲ್ಲಿ ಪೆರಿಡಾಂಟಲ್ ಬಂಧ ಮತ್ತು ಎಲುಬು ಕೂಡ ಒಳಗೊಂಡಿರಬಹುದು. ಮೃದು ಅಂಗಾಂಶಗಳು ಕೂಡ ಒಳಗೊಂಡಿದ್ದರೆ ಆಗ ಈ ಸಮಸ್ಯೆಯನ್ನು ನೆಕ್ರೊಟೈಸಿಂಗ್ ಅಲ್ಸರೇಟಿವ್ ಸ್ಟೊಮಾಟಿಸ್ ಎಂದು ಕರೆಯಲಾಗುತ್ತದೆ. ಬಾಯಿಯ ಮೃದು ಅಂಗಾಂಶಗಳು ಮತ್ತು ಒಳಗಿನ ಎಲುಬುಗಳ ಕ್ಷಿಪ್ರವಾದ ನೋವುಳ್ಳ ನೆಕ್ರೊಸಿಸ್ ಆಗಿ ಇದು ಪ್ರಕಟವಾಗುತ್ತದೆ.
ದೀರ್ಘಕಾಲಿಕ ಪೆರಿಯೊಡಾಂಟೈಟಿಸ್
ಎಚ್‌ಐವಿ ಸೋಂಕುಪೀಡಿತರಾಗಿ ರೋಗ ಪ್ರತಿರೋಧಕ ಶಕ್ತಿ ಕುಂದಿರುವ ರೋಗಿಗಳು ದೀರ್ಘಕಾಲಿಕ ಪೆರಿಯೊಡಾಂಟೈಟಿಸ್‌ಗೆ ತುತ್ತಾಗುವುದು ಕಂಡುಬರುತ್ತದೆ. ದೀರ್ಘಕಾಲಿಕ ಪೆರಿಯೊಡಾಂಟೈಟಿಸ್ ಒಂದು ಉರಿಯೂತ ಸ್ಥಿತಿಯಾಗಿದ್ದು, ಹಲವು ಹಲ್ಲುಗಳ ನಷ್ಟಕ್ಕೆ ಕಾರಣವಾಗುವ ಎಲುಬಿನ ತೀವ್ರವಾದ ಕ್ಷಯಿಸುವಿಕೆ, ಹಲ್ಲುಗಳು ಅಲುಗಾಡಿ ಕ್ರಮೇಣ ಬಿದ್ದುಹೋಗುತ್ತದೆ.
ನಿರ್ವಹಣೆ
ವೈದ್ಯರು ಮತ್ತು ದಂತವೈದ್ಯರ ಮಾರ್ಗದರ್ಶನದಡಿ ಬಾಯಿಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದೆ. ಇಲ್ಲಿಯೂ ರೋಗಿಯ ರೋಗ ನಿರೋಧಕ ಶಕ್ತಿಯ ಸ್ಥಿತಿಗತಿಗಳನ್ನು ಸಿಡಿ4+ ಟಿ ಲಿಂಫೊಸೈಟ್ ಮಟ್ಟ, ದೇಹದಲ್ಲಿ ಪ್ರಸ್ತುತ ಇರುವ ವೈರಲ್ ಲೋಡ್, ಹಿಂದೆ ನಡೆಸಿದ ತಪಾಸಣೆಗಳು ಮತ್ತು ಎಷ್ಟು ಬಾರಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂಬುದರ ಆಧಾರದಲ್ಲಿ ವಿಶ್ಲೇಷಿಸಲಾಗುತ್ತದೆ.
ರೋಗಿಯನ್ನು ತಪಾಸಣೆಗೆ ಒಳಪಡಿಸಿದ ಬಳಿಕ ರೋಗ ಲಕ್ಷಣಗಳಿಂದ ಉಪಶಮನ ಪಡೆಯಲು ಕೆಲವು ಔಷಧಗಳನ್ನು ಶಿಫಾರಸು ಮಾಡಬಹುದು. ಇವು ರೋಗಿ ಈಗಾಗಲೇ ಸತತವಾಗಿ ತೆಗೆದುಕೊಳ್ಳುತ್ತಿರುವ ಔಷಧಗಳ ಜತೆಗೆ ತೆಗೆದುಕೊಳ್ಳುವುದಕ್ಕೆ ಸುರಕ್ಷಿತವಾಗಿರುತ್ತವೆ. ಔಷಧಗಳನ್ನು ರೋಗಿಯ ವೈಯಕ್ತಿಕ ವೈದ್ಯಕೀಯ ರೋಗ ಲಕ್ಷಣಗಳ ಆಧಾರದಲ್ಲಿ ನೀಡಲಾಗುತ್ತದೆ. ಎಚ್‌ಐವಿ ಹೊಂದಿರುವ ರೋಗಿಯಲ್ಲಿ ಪ್ರಸ್ತುತವಿರುವ ವಿವಿಧ ಸೋಂಕು ಲಕ್ಷಣಗಳನ್ನು ಆಧರಿಸಿ ಎಆರ್‌ಟಿ ಔಷಧಗಳ ಜತೆಗೆ ಆ್ಯಂಟಿ ವೈರಲ್, ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಫಂಗಲ್ ಔಷಧಗಳನ್ನು
ಶಿಫಾರಸು ಮಾಡಲಾಗುತ್ತದೆ. ಬಾಯಿಯ ಉರಿಯ ಅನುಭವವನ್ನು ದೂರ ಮಾಡಲು ಮದ್ಯಸಾರೇತರ ಮೌತ್ ರಿನ್ಸ್‌ಗಳನ್ನು ಉಪಯೋಗಿಸುವಂತೆ ಶಿಫಾರಸು ಮಾಡಲಾಗುತ್ತದೆ.
ಬಾಯಿಯ ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ರೋಗಿಗಳಿಗೆ ಶಿಕ್ಷಣ ಒದಗಿಸುವುದು, ಕ್ಷಿಪ್ರ ದಂತ ಸೋಂಕುಗಳನ್ನು ನಿಭಾಯಿಸುವುದು ಕೂಡ ದಂತ ಆರೈಕೆಯಲ್ಲಿ ಒಳಗೊಂಡಿರುತ್ತದೆ. ಕೆಲವೊಮ್ಮೆ ವೈದ್ಯಕೀಯ ಸಮಾಲೋಚನೆಯ ಬಳಿಕ ಶಸ್ತ್ರಕ್ರಿಯೇತರ ಸಂರಕ್ಷಕ ಚಿಕಿತ್ಸೆಗಳು, ಶಸ್ತ್ರಕ್ರಿಯೆಯ ಆಯ್ಕೆಯನ್ನು ನಡೆಸುವುದೂ ಅನಿವಾರ್ಯವಾಗುತ್ತದೆ. ನಿರ್ವಹಣಾ ಚಿಕಿತ್ಸೆಯಲ್ಲಿ ರೋಗಿಯು ಬಾಯಿಯ ತೀವ್ರ ನೈರ್ಮಲ್ಯವನ್ನು ಕಾಯ್ದುಕೊಳ್ಳುವಂತೆ ನಿಗಾ ವಹಿಸಲಾಗುತ್ತದೆಯಲ್ಲದೆ ಪ್ರತೀ 2-3 ತಿಂಗಳಿಗೊಮ್ಮೆ ತಪಾಸಣೆಗಾಗಿ ಕರೆಸಲಾಗುತ್ತದೆ. ಒಟ್ಟಾರೆ ಆರೋಗ್ಯ ಸ್ಥಿತಿಗತಿಯ ಮೇಲೆ ನಿಗಾ ಇರಿಸುವುದಕ್ಕಾಗಿ ವಿಸ್ತೃತ ರಕ್ತ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಪೌಷ್ಟಿಕಾಂಶ ನಿರ್ವಹಣೆ
ಆರೋಗ್ಯವಂತ ಜೀವನ ಶೈಲಿಯನ್ನು ಕಾಯ್ದುಕೊಳ್ಳುವುದಕ್ಕೆ ಎಲ್ಲ ಪೌಷ್ಟಿಕಾಂಶಗಳೂ ಇರುವ ಸಮತೋಲಿತ ಆಹಾರ ಸೇವನೆಯು ಅತ್ಯಂತ ಮೂಲಭೂತವಾದ ಆವಶ್ಯಕತೆಯಾಗಿರುತ್ತದೆ. ಎಚ್‌ಐವಿ ಸೋಂಕು ಪೀಡಿತ ವ್ಯಕ್ತಿಯು ತರಕಾರಿಗಳು, ಹಣ್ಣುಗಳು ಮತ್ತು ಇಡೀ ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಪ್ರೊಟೀನ್ ಸಹಿತವಾದ ಆಹಾರವನ್ನು ಸೇವಿಸುವುದು ಅಗತ್ಯ. ಸಿಹಿ, ಸಾಫ್ಟ್ ಡ್ರಿಂಕ್‌ಗಳು, ಹೆಚ್ಚುವರಿ ಸಕ್ಕರೆ ಬೆರೆತ ಆಹಾರಗಳನ್ನು ಮಿತವಾಗಿ ಸೇವಿಸಬೇಕಾಗುತ್ತದೆ. ಭಾರತದಲ್ಲಿ ಜನರು ತಮ್ಮ ಆಹಾರಕ್ಕೆ ಪೂರಕವಾಗಿ ಗಿಡಮೂಲಿಕೆ ಔಷಧಗಳನ್ನು ತೆಗೆದುಕೊಳ್ಳುತ್ತಾರೆ. ಚಿಕಿತ್ಸೆ ಒದಗಿಸುತ್ತಿರುವ ವೈದ್ಯರು/ ದಂತ ವೈದ್ಯರಿಗೆ ಈ ಬಗ್ಗೆ ಮಾಹಿತಿ ಒದಗಿಸುವುದು ಅಗತ್ಯ. ಏಕೆಂದರೆ, ಕೆಲವು ಗಿಡಮೂಲಿಕೆ ಔಷಧಗಳು ಆ್ಯಂಟಿ ಎಚ್‌ಐವಿ ಔಷಧಗಳ ಜತೆಗೆ ಪ್ರತಿಸ್ಪಂದಿಸಿ ಈ ಔಷಧಗಳ ಪರಿಣಾಮವನ್ನು ಕುಗ್ಗಿಸುವುದು ಕಂಡುಬಂದಿದೆ. ಆದ್ದರಿಂತ ಈ ಗಿಡಮೂಲಿಕೆ ಔಷಧಗಳನ್ನು ಎಚ್ಚರಿಕೆಯಿಂದ, ಶಿಫಾರಸು ಮಾಡಲಾದ ಪ್ರಮಾಣದಲ್ಲಿಯೇ ಉಪಯೋಗಿಸುವುದು ವಿಹಿತ.
ನಿರಾಶಾದಾಯಕ ಸ್ಥಿತಿಯಲ್ಲ
ಎಚ್‌ಐವಿ ಮತ್ತು ಏಡ್ಸ್ ಸೋಂಕನ್ನು ಚೆನ್ನಾಗಿ ನಿಭಾಯಿಸಬಹುದಾಗಿದ್ದು, ಅದೊಂದು ಸಂಪೂರ್ಣ ನಿರಾಶಾದಾಯಕ ಸ್ಥಿತಿಯಲ್ಲ. ಈ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ಪಡೆಯಲು ಅನೇಕ ಸಾಧ್ಯತೆಗಳಿವೆ. ಸಾರ್ವಜನಿಕರ ಉಪಯೋಗಕ್ಕಾಗಿ ಅನೇಕ ಚಿಕಿತ್ಸಾ ಸೌಲಭ್ಯಗಳು ಇವೆ, ಜತೆಗೆ ಎನ್‌ಜಿಒಗಳು, ಸರಕಾರಿ ಸಂಸ್ಥೆಗಳೂ ಇವೆ. ಅಗತ್ಯವುಳ್ಳವರು ಇವುಗಳನ್ನು ಸಂಪರ್ಕಿಸಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ನೆರವು ಪಡೆಯಬೇಕು.
ದಂತ ವೈದ್ಯರನ್ನು ನಿಯಮಿತವಾಗಿ ಸಂದರ್ಶಿಸುವುದು, ಅವರು ನೀಡಿರುವ ಬಾಯಿ ನೈರ್ಮಲ್ಯದ ಸಲಹೆಗಳನ್ನು ಚಾಚೂ ತಪ್ಪದೆ ಅನುಸರಿಸುವುದು, ಎಚ್‌ಐವಿ ಔಷಧಗಳನ್ನು ಶಿಫಾರಸು ಮಾಡಲಾದ ವೇಳಾಪಟ್ಟಿಯಂತೆ ಅನುಸರಿಸುವುದು ಮತ್ತು ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದರೆ ಕ್ಲಪ್ತ ಕಾಲದಲ್ಲಿ ವರದಿ ಮಾಡುವುದು ಎಚ್‌ಐವಿ ಸೋಂಕುಪೀಡಿತರು ಒತ್ತಡಮುಕ್ತ ಸಹಜ ಜೀವನ ನಡೆಸಲು ಪೂರಕವಾಗಿರುತ್ತವೆ.
ಡಾ| ಪ್ರತಿಭಾ ಗೋಪಾಲಕೃಷ್ಣ
ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರು
ಡಾ| ಮಾಧುರ್ಯಾ ಕೆದ್ಲಾಯ
ಅಸಿಸ್ಟೆಂಟ್ ಪ್ರೊಫೆಸರ್,
ಪೆರಿಯೊಡಾಂಟಾಲಜಿ ವಿಭಾಗ
ಮಣಿಪಾಲ ದಂತ ವೈದ್ಯಕೀಯ ಕಾಲೇಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.