ಅಂತರ-ಗರ್ಭ ನಿರೋಧಕ ಚುಚ್ಚುಮದ್ದು
Team Udayavani, Sep 22, 2019, 4:47 AM IST
ವಿಶ್ವದಲ್ಲಿಯೇ ಮೊದಲ ಬಾರಿಗೆ ಭಾರತದಲ್ಲಿ 1952ರಲ್ಲಿ ಕುಟುಂಬ ಕಲ್ಯಾಣ ಯೋಜನೆ ಆರಂಭಗೊಂಡಿತು. ಆಗ ಜನಸಂಖ್ಯಾ ಸ್ಫೋಟ, ಜನಸಂಖ್ಯಾ ಬಾಂಬ್ ಎಂಬ ನುಡಿಗಟ್ಟುಗಳು ಪ್ರಚಲಿತವಾಗಿದ್ದವು. ತದನಂತರ “ಅಭಿವೃದ್ಧಿಯೇ ಅತ್ಯುತ್ತಮ ಗರ್ಭ ನಿರೋಧಕ’, “ಗರ್ಭ ನಿರೋಧಕಗಳೇ ಅತ್ಯುತ್ತಮ ಅಭಿವೃದ್ಧಿ’ ಮುಂತಾದ ಘೋಷವಾಕ್ಯಗಳು ಹೊರಬಂದವು. ಅನಂತರದ ವರ್ಷಗಳಲ್ಲಿ ಯೋಜನೆಯಡಿಯಲ್ಲಿ ನಾನಾ ತೆರನಾದ ಕುಟುಂಬ ಕಲ್ಯಾಣ ಸಾಧನಗಳನ್ನು ಸಾರ್ವಜನಿಕ ಆರೋಗ್ಯ ಕೇಂದ್ರಗಳ ಮೂಲಕ ಜನರಿಗೆ ಒದಗಿಸಿದ್ದು, ಅವುಗಳಲ್ಲಿ ಮುಖ್ಯವಾಗಿ ತಾತ್ಕಾಲಿಕ ಸಾಧನಗಳು- ಕಾಂಡೋಮ್ಸ್, ಮಹಿಳೆಯರಿಗೆ ನುಂಗುವ ಗುಳಿಗೆಗಳು, ಕಾಪರ್-ಟಿ (IUD’s) ಮತ್ತು ಶಾಶ್ವತ ಕುಟುಂಬ ಕಲ್ಯಾಣ ವಿಧಾನಗಳಾದ ಮಹಿಳೆಯರಿಗೆ ಉದರ ಶಸ್ತ್ರಚಿಕಿತ್ಸೆ ಮತ್ತು ಪುರುಷರಿಗೆ ವ್ಯಾಸಕ್ಟಮಿ ಮುಖ್ಯವಾದವುಗಳು. ಇದರ ಪರಿಣಾಮವಾಗಿ 1966ರಲ್ಲಿ 5.7ರಲ್ಲಿದ್ದ ಫಲವಂತಿಕೆ ದರ (Total Fertility Rate) (ಸರಾಸರಿ ನೂರು ದಂಪತಿಗಳಿಗೆ 570 ಮಕ್ಕಳು) 1990ರಲ್ಲಿ 3.2 ಕ್ಕೆ ಇಳಿದಿದ್ದು ಪ್ರಸ್ತುತ 2.4ರಲ್ಲಿದೆ.
ದೇಶದಲ್ಲಿ ಪ್ರಸ್ತುತ ಸರಕಾರಿ ದಾಖಲೆಗಳ ಪ್ರಕಾರ ಪ್ರತಿ ವರ್ಷ ಸುಮಾರು 2.9 ಕೋಟಿ ಗರ್ಭಿಣಿ ಮಹಿಳೆಯರು 2.6 ಕೋಟಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ಆದರೆ ಇತ್ತೀಚಿನ Lancet Global Health ಸಂಶೋಧನೆ ಪತ್ರಿಕೆಯು ಭಾರತದಲ್ಲಿ 2015 ರಲ್ಲಿ 4.8 ಕೋಟಿ ಮಹಿಳೆಯರು ಗರ್ಭ ಧರಿಸಿದ್ದು, ಅದರಲ್ಲಿ ಸರಿಸುಮಾರು ಅರ್ಧದಷ್ಟು ಮಹಿಳೆಯರಿಗೆ (ಶೇ.48%) ಆ ಗರ್ಭಧಾರಣೆ ಬೇಡವಾದ, ಅನಪೇಕ್ಷಿತ (Unwanted, Unintended) ಆಗಿತ್ತೆಂದು ವರದಿ ಮಾಡಿದೆ. ಅಂತಹ ಗರ್ಭಧಾರಣೆಗಳು ಮಹಿಳೆಯರಿಗೆ ಸಕಾಲದಲ್ಲಿ ಗರ್ಭ ನಿರೋಧಕಗಳು ಸಿಗದೇ ಇರುವುದರಿಂದ, ಅವುಗಳ ಬಗ್ಗೆ ಅರಿವಿಲ್ಲದೆ ಇರುವುದರಿಂದ ಅಥವಾ ಗರ್ಭ ನಿರೋಧಕ ಸಾಧನಗಳ ವೈಫಲ್ಯದಿಂದ ಆಗಿರುವಂತದ್ದು. ಅದೇ ವರ್ಷ 4.8 ಕೋಟಿ ಗರ್ಭಿಣಿಯರಲ್ಲಿ 1.5 ಕೋಟಿ ಗರ್ಭಪಾತಕ್ಕೆ ಒಳಗಾಗಿರುತ್ತಾರೆ ಮತ್ತು 2.5 ಕೋಟಿ ಮಹಿಳೆಯರು ಮಕ್ಕಳಿಗೆ ಜನ್ಮ ನೀಡಿರುತ್ತಾರೆ. ಇಂದಿಗೂ ನಮ್ಮ ದೇಶದಲ್ಲಿ ಅಸುರಕ್ಷಿತ ಗರ್ಭಪಾತಕ್ಕೊಳಗಾಗುವಾಗ, ಗರ್ಭಿಣಿ ಮತ್ತು ಹೆರಿಗೆಯ ಪ್ರಕ್ರಿಯೆಗಳಿಂದಾಗುವ ತೊಂದರೆಗಳಿಂದ ಪ್ರತಿ ವರ್ಷ ಸುಮಾರು 44 ಸಾವಿರ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಬೇಡವಾದ ಗರ್ಭಧಾರಣೆಗಳನ್ನು ತಡೆಯುವಲ್ಲಿ ಕುಟುಂಬ ಕಲ್ಯಾಣ ಯೋಜನೆಯ ಪಾತ್ರ ಇನ್ನೂ ಮಹತ್ವಪೂರ್ಣವಾದದ್ದಾಗಿದೆ.
ಭಾರತದಲ್ಲಿ ಇನ್ನೂ ಕುಟುಂಬ ಕಲ್ಯಾಣ ಸಾಧನಗಳನ್ನು ಬಳಸುವ ದಂಪತಿಗಳ ಪ್ರಮಾಣ ಕೇವಲ ಶೇ.54ರಷ್ಟಿದೆ. ಆದರೆ ಜನಸಂಖ್ಯೆಯ ಬೆಳವಣಿಗೆ ಮರುಪೂರಣ ಮಟ್ಟ ತಲುಪಲು ಕುಟುಂಬ ಕಲ್ಯಾಣ ಸಾಧನಗಳನ್ನು ಬಳಸುವ ದಂಪತಿಗಳ ಪ್ರಮಾಣ ಶೇ.60ರಷ್ಟು ಇರಬೇಕಾಗುತ್ತದೆ. ಆದ್ದರಿಂದ ಕಲ್ಯಾಣ ಯೋಜನೆಯು ಇನ್ನಷ್ಟುಜನಸ್ನೇಹಿ, ಉತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯವಾಗಿದೆ.
ಮಿಶನ್ ಪರಿವಾರ ವಿಕಾಸ್
ದೇಶದ ಹಲವಾರು ರಾಜ್ಯಗಳಲ್ಲಿ ಇನ್ನೂ ಯೋಜನೆಯ ಪ್ರಮುಖ ಉದ್ದೇಶವಾದ ಜನಸಂಖ್ಯಾ ಪ್ರಮಾಣವನ್ನು ಮರು ಪೂರಣಮಟ್ಟ 2.1 (Replacement Rate) ತರಲು ಸಾಧ್ಯವಾಗಿಲ್ಲ- ಅದು ಒಂದು ದೇಶ- ಪ್ರದೇಶದ ಜನಸಂಖ್ಯೆಯ ಮಟ್ಟ ಕಾಪಾಡಿಕೊಳ್ಳಲು ಎಷ್ಟು ಮಂದಿ ಸಾಯುತ್ತಾರೋ ಅಷ್ಟೇ ಮಂದಿ ಹುಟ್ಟುವುದನ್ನು ಕಾಯ್ದುಕೊಳ್ಳುವುದು. ತಲೆಮಾರುಗಳಲ್ಲಿ ಜನಸಂಖ್ಯೆ ಒಂದೇ ತೆರನಾಗಿ ಮುಂದುವರಿಯಲು ಮರು ಪೂರಣ ಮಟ್ಟದಲ್ಲಿರಬೇಕಾಗುತ್ತದೆ. ಅಂದರೆ ಸರಿಸುಮಾರಾಗಿ ನೂರು ಮಂದಿ ದಂಪತಿಗಳಿಗೆ ಶಿಶು ಮರಣದ ಪ್ರಮಾಣ ಮನಗಂಡು 210 ಮಕ್ಕಳನ್ನು ಹೊಂದುವುದಾಗಿದೆ. ಆದ್ದರಿಂದ 2016ರಲ್ಲಿ “ಮಿಶನ್ ಪರಿವಾರ ವಿಕಾಸ್’ ಎಂಬ ಕಾರ್ಯಕ್ರಮವನ್ನು ಕೇಂದ್ರ ಸರಕಾರವು ಅನುಷ್ಠಾನಕ್ಕೆ ತಂದಿದ್ದು, 2025ರ ಒಳಗೆ ದೇಶದಲ್ಲಿ ಫಲವತ್ತತೆಯ ದರವನ್ನು ಮರುಪೂರಣ ದರ 2.1ಗೆ ಸಮನಾಗಿಸುವ ಉದ್ದೇಶ ಹೊಂದಿದೆ. ಅದರ ಭಾಗವಾಗಿ ಇನ್ನೂ ಹೆಚ್ಚಿನ ಬಗೆಯ ಸಾಧನಗಳು (Basket of Choices) ಛಾಯಾ ಗರ್ಭ ನಿರೋಧಕ ಗುಳಿಗೆಗಳು ಮತ್ತು ಅಂತರ ಗರ್ಭ ನಿರೋಧಕ ಚುಚ್ಚುಮದ್ದುಗಳನ್ನು ಹೊಸದಾಗಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ, ಕುಟುಂಬ ಕಲ್ಯಾಣ ಕೇಂದ್ರಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಒದಗಿಸಲಾಗಿದೆ.
ಅಂತರ (Inj Medroxyprogesterone) ಏನಿದು?
ಇದು ಮುಖ್ಯವಾಗಿ ಒಂದು ಮಗುವಿರುವ ತಾಯಂದಿರು ಎರಡು ಮಕ್ಕಳ ನಡುವೆ ಅಂತರ ಪಾಲಿಸಲು ಬಳಸಬಹುದಾದ ಗರ್ಭ ನಿರೋಧಕ ಪರಿಣಾಮಕಾರಿ ಚುಚ್ಚುಮದ್ದು. ಇದನ್ನು ಖಾಸಗಿ ವೈದ್ಯರುಗಳು ಈಗಾಗಲೇ ಬೇರೆ ಬೇರೆ ವಾಣಿಜ್ಯಿಕ ಹೆಸರುಗಳಿಂದ ದೇಶಾದ್ಯಂತ ಬಳಸುತ್ತಿದ್ದಾರೆ. ನವ ವಿವಾಹಿತರು ಕೂಡ ಇದನ್ನು ಗರ್ಭ ನಿರೋಧಕವಾಗಿ ಬಳಸಬಹುದಾಗಿದೆ. ಈ ಒಂದು ಚುಚ್ಚುಮದ್ದು ಮೂರು ತಿಂಗಳು (12ರಿಂದ 13 ವಾರಗಳವರೆಗೆ) ಮಹಿಳೆಗೆ ರಕ್ಷಣೆ ನೀಡುತ್ತದೆ. ಕೊನೆಯ ಚುಚ್ಚುಮದ್ದು ಪಡೆದ 13 ವಾರಗಳ ಅನಂತರ ಕೂಡಲೇ ಅಥವಾ ಕೆಲವು ಸಂದರ್ಭಗಳಲ್ಲಿ 6 ರಿಂದ 8 ತಿಂಗಳಲ್ಲಿ ಮಹಿಳೆಯ ಫಲವಂತಿಕೆ ಹಿಂತಿರುಗಿ ಬರುತ್ತದೆ (Return of Fertility) .
ಮೊದಲ ಚುಚ್ಚುಮದ್ದನ್ನು ಋತುಸ್ರಾದ ಐದು ದಿನದೊಳಗೆ ತೆಗೆದುಕೊಳ್ಳುವುದು ಅಥವಾ ಹೆರಿಗೆ ಆದ ಮಹಿಳೆಯು ಬಾಣಂತನದ ಐದು ದಿನದೊಳಗೆ (ಸರಿಸಮವಾಗಿ ಹೆರಿಗೆ ಆದ 47 ದಿನಗಳು) ಪಡೆದುಕೊಳ್ಳುವುದು. ಸಾಮಾನ್ಯವಾಗಿ ಮಗುವಿಗೆ ಒಂದೂವರೆ ತಿಂಗಳಲ್ಲಿ ಮೊದಲ ಚುಚ್ಚುಮದ್ದು ಕೊಡಿಸುವಾಗ ತಾಯಿ ಕೂಡ ಈ ಗರ್ಭ ನಿರೋಧಕ ಚುಚ್ಚುಮದ್ದನ್ನು ಅದೇ ಆರೋಗ್ಯ ಕೇಂದ್ರದಲ್ಲಿ ಪಡೆದುಕೊಳ್ಳಬಹುದಾಗಿದೆ. ಅನಂತರ ಪ್ರತಿ ಮೂರು ತಿಂಗಳಿಗೊಮ್ಮೆ (12ರಿಂದ 13 ವಾರ) ಗರ್ಭಧಾರಣೆ ಬೇಡದ ಸಮಯದವರೆಗೆ ತೆಗೆದುಕೊಳ್ಳುವಂಥದ್ದು. ಎರಡು ಚುಚ್ಚುಮದ್ದುಗಳ ನಡುವಿನ ಅಂತರ 13 ವಾರಗಳಿಗಿಂತ ಹೆಚ್ಚಾದರೆ ಮೂತ್ರದಲ್ಲಿ ಗರ್ಭ ಪರೀಕ್ಷೆ ಮಾಡಿ ಗರ್ಭ ನಿಲ್ಲದೇ ಇರುವುದನ್ನು ಖಚಿತಪಡಿಸಿ ಅನಂತರ ಮುಂದಿನ ಚುಚ್ಚುಮದ್ದು ಪಡೆದುಕೊಳ್ಳಬೇಕಾಗುತ್ತದೆ.
ಅಡ್ಡ ಪರಿಣಾಮಗಳೇನು?
ಈ ಚುಚ್ಚುಮದ್ದಿನ ಅಡ್ಡ ಪರಿಣಾಮಗಳು- ಈ ಚುಚ್ಚು ಮದ್ದನ್ನು ಪಡೆದುಕೊಂಡ ಅನಂತರ ಸಾಮಾನ್ಯವಾಗಿ ಋತುಸ್ರಾವದಲ್ಲಿ ಬದಲಾವಣೆ, ರಕ್ತಸ್ರಾವ, ಸಮಯಬದ್ಧವಲ್ಲದ ರಕ್ತಸ್ರಾವ, ದೇಹದ ತೂಕ ಹೆಚ್ಚಾಗುವುದು, ಮೂಳೆಗಳ ಸಾಂದ್ರತೆ ಕಡಿಮೆಯಾಗುವುದು ತಲೆನೋವಿನಂತಹ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಬಹುದು.
ಹಾರ್ಮೋನ್‌ಗಳಿಗೆ ಸಂಬಂಧಿಸಿದ ಕ್ಯಾನ್ಸರ್‌ಗಳಿಂದ ಬಳಲುತ್ತಿರುವವರಿಗೆ, ಡಯಾಬಿಟೀಸ್, ಹೃದಯ ರೋಗಗಳಿಂದ ಬಳಲುತ್ತಿರುವವರಿಗೆ, ಮೂಳೆಗಳ ಸಾಂದ್ರತೆ ಕೊರತೆ ಇರುವವರಿಗೆ ಈ ಚುಚ್ಚು ಮದ್ದು ಸುರಕ್ಷಿತವಲ್ಲ. ಆದ್ದರಿಂದ ಚುಚ್ಚುಮದ್ದು ಬಳಸಲು ಬಯಸುವ ಪ್ರತಿ ಮಹಿಳೆಯು ವೈದ್ಯರಿಂದ ತಪಾಸಣೆಗೊಳಪಟ್ಟ ಅನಂತರ ಬಳಸುವುದು ಅಗತ್ಯವಾಗಿದೆ.
-ಡಾ| ಅಶ್ವಿನಿ ಕುಮಾರ್ ಗೋಪಾಡಿ
ಅಡಿಶನಲ್ ಪ್ರೊಫೆಸರ್,
ಕಮ್ಯೂನಿಟಿ ಮೆಡಿಸಿನ್ ವಿಭಾಗ,
ಕೆಎಂಸಿ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ಹೊಸ ಸೇರ್ಪಡೆ
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.