ಶುಶ್ರೂಷೆಯಲ್ಲಿ ಮಮತೆಯ ಸ್ಪರ್ಶ ನೀಡುವ ದಾದಿಯರೇ ನಿಮಗೊಂದು ಸಲಾಂ
Team Udayavani, May 14, 2017, 12:34 PM IST
ಪ್ರತಿವರ್ಷ ಮೇ 12ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಆಧುನಿಕ ನರ್ಸಿಂಗ್‌ನ ಸ್ಥಾಪಕಿ ಎಂದೇ ಖ್ಯಾತಿವೆತ್ತಿರುವ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನ. ಈ ದಿನಾಚರಣೆಯನ್ನು ಆರಂಭಿಸಿದ್ದಕ್ಕಾಗಿ ವಿಶ್ವದ 16 ಮಿಲಿಯ ದಾದಿಯರನ್ನು ಪ್ರತಿನಿಧಿಸುವ 130 ರಾಷ್ಟ್ರೀಯ ನರ್ಸಿಂಗ್ ಸಂಘಟನೆ (ಎನ್‌ಎನ್‌ಎ)ಗಳ ಒಕ್ಕೂಟವಾಗಿರುವ ದಿ ಇಂಟರ್‌ನ್ಯಾಶನಲ್ ಕೌನ್ಸಿಲ್ ಆಫ್ ನರ್ಸಸ್ (ಐಸಿಎನ್) ಶ್ಲಾಘನಾರ್ಹವಾಗಿದೆ. 1899ರಲ್ಲಿ ಸ್ಥಾಪನೆಗೊಂಡಿರುವ ಐಸಿಎನ್ ಆರೋಗ್ಯ ಸೇವಾ ವೃತ್ತಿನಿರತರ ಪ್ರಪ್ರಥಮ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಅಮೆರಿಕದ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಸಚಿವಾಲಯದ ಅಧಿಕಾರಿ ಡೊರೊಥಿ ಸೂತರ್‌ಲ್ಯಾಂಡ್ ಎಂಬವರು 1953ರಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ನಡೆಸುವ ಪ್ರಸ್ತಾವವನ್ನು ಮಂಡಿಸಿದರು; ಅಮೆರಿಕದ ಆಗಿನ ಅಧ್ಯಕ್ಷ ಡ್ವೆ„ಟ್ ಡಿ. ಐಸೆನ್‌ಹೋವರ್ ಪ್ರಪ್ರಥಮವಾಗಿ ಇದನ್ನು ಘೋಷಿಸಿದರು. 1965ರಲ್ಲಿ ಅಂತಾರಾಷ್ಟ್ರೀಯ ದಾದಿಯರ ಮಂಡಳಿ (ಐಸಿಎನ್) ಇದನ್ನು ಮೊತ್ತಮೊದಲ ಬಾರಿಗೆ ಆಚರಿಸಿತು. ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವಾಗಿರುವ ಮೇ 12ನ್ನು ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸುವ ಘೋಷಣೆಯನ್ನು 1974ರ ಜನವರಿಯಲ್ಲಿ ಹೊರಡಿಸಲಾಯಿತು.
ಪ್ರತೀ ವರ್ಷ ಈ ಸುಸಂದರ್ಭವನ್ನು ಲಂಡನಿನ ವೆಸ್ಟ್ ಮಿನ್‌ಸ್ಟರ್ ಆ್ಯಬಿಯಲ್ಲಿ ಮೋಂಬತ್ತಿ ಪ್ರಾರ್ಥನೆಯ ಮೂಲಕ ಆಚರಿಸಲಾಗುತ್ತದೆ. ದಾದಿಯರು ಒಬ್ಬರಿಂದ ಇನ್ನೊಬ್ಬರಿಗೆ ಜ್ಞಾನವನ್ನು ಹಂಚುವುದರ ಸಂಕೇತವಾಗಿ ಉರಿಯುವ ಮೋಂಬತ್ತಿಯನ್ನು ಒಬ್ಬರಿಂದ ಇನ್ನೊಬ್ಬರಿಗೆ ಹಸ್ತಾಂತರಿಸುತ್ತಾ ಕೊನೆಗೆ ಅದನ್ನೊಂದು ಎತ್ತರದ ಪೀಠದ ಮೇಲೆ ಇರಿಸಲಾಗುತ್ತದೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಸಮಾಧಿಯಿರುವ ಸಂತ ಮಾರ್ಗರೆಟ್ ಚರ್ಚ್ ನಲ್ಲಿ ಆಕೆಯ ಜನ್ಮದಿನದ ಬಳಿಕ ಒದಗುವ ರವಿವಾರದಂದು ಬೃಹತ್ ಸಮಾರಂಭವನ್ನು ಕೂಡ ಆಯೋಜಿಸಲಾಗುತ್ತದೆ.
1988ರ ಬಳಿಕ ಪ್ರತೀ ವರ್ಷ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಗಾಗಿ ಅಂತಾರಾಷ್ಟ್ರೀಯ ದಾದಿಯರ ಮಂಡಳಿ ಒಂದು ಧ್ಯೇಯವನ್ನು ಆಯ್ದುಕೊಳ್ಳುತ್ತದೆ ಹಾಗೂ ಶೈಕ್ಷಣಿಕ ಮತ್ತು ಸಾರ್ವಜನಿಕ ಮಾಹಿತಿ ಕರಪತ್ರ, ಪುಸ್ತಿಕೆಗಳನ್ನು ತಯಾರಿಸುತ್ತದೆ. ಸಹಸ್ರಮಾನದ ಸಾಧನೆಯ ಗುರಿ (ಎಂಡಿಜಿಗಳು)ಗಳಿಗೆ ಸಂಬಂಧಿಸಿ ದಾದಿಯರು ಮತ್ತು ಪರಿಸರದ ಆಧಾರದಲ್ಲಿ ಈ ಧ್ಯೇಯವನ್ನು ಆರಿಸಿಕೊಳ್ಳಲಾಗುತ್ತದೆ.
ಸಮಾಜದಲ್ಲಿ ದಾದಿಯರು ವಹಿಸುವ ಪ್ರಾಮುಖ್ಯ ಪಾತ್ರದ ಬಗ್ಗೆ ಅರಿವನ್ನು ಹೆಚ್ಚಿಸುವುದು ಹಾಗೂ ಅತ್ಯುತ್ತಮ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ದಾದಿಯರ ಬದ್ಧತೆ ಮತ್ತು ಕೊಡುಗೆಯನ್ನು ವೃದ್ಧಿಸುವುದು ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ಗುರಿ. ಕಳೆದ ಕೆಲವು ವರ್ಷಗಳ ದಾದಿಯರ ದಿನಾಚರಣೆಯ ಧ್ಯೇಯಗಳನ್ನು ಉದಾಹರಿಸುವುದಾದರೆ: ಸುರಕ್ಷಿತ ತಾಯ್ತನ, ಶಾಲಾ ಆರೋಗ್ಯ, ಆರೋಗ್ಯವಂತ ವೃದ್ಧಾಪ್ಯ, ಆರೋಗ್ಯಯುತ ರಾಷ್ಟ್ರಕ್ಕಾಗಿ ಆರೋಗ್ಯಯುತ ಕುಟುಂಬಗಳು ಇತ್ಯಾದಿ.
ಸಹಸ್ರಮಾನದ ಅಭಿವೃದ್ಧಿ ಗುರಿ (ಎಂಡಿಜಿಗಳು) ಗಳ ಯಶಸ್ಸಿನ ಆಧಾರದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿ(ಎಡಿಜಿಗಳು)ಗಳನ್ನು ರೂಪಿಸಲಾಗಿದೆ. ಆದರೆ ಅವು ಇನ್ನೂ ಮುಂದುವರಿದು ಜನರು, ಭೂಮಿ, ಸುಭಿಕ್ಷೆ, ಶಾಂತಿ ಮತ್ತು ಸಹಯೋಗದಂತಹ ವಿಚಾರಗಳನ್ನೂ ಉದ್ದೇಶಿಸಿವೆ.
ಎಂಟು ಎಂಡಿಜಿಗಳಾದ ಬಡತನ ನಿರ್ಮೂಲನ, ಹಸಿವಿನ ನಿರ್ಮೂಲನ, ಜಾಗತಿಕ ಶಿಕ್ಷಣದ ಸಾಧನೆ, ಲಿಂಗ ಸಮಾನತೆಯ ಪ್ರವರ್ಧನೆ, ಮಕ್ಕಳು ಮತ್ತು ತಾಯಂದಿರ ಮರಣ ಕಡಿಮೆಗೊಳಿಸುವುದು, ಎಚ್‌ಐವಿ, ಮಲೇರಿಯಾ ಮತ್ತು ಇತರ ಕಾಯಿಲೆಗಳ ವಿರುದ್ಧ ಹೋರಾಟ, ಪಾರಿಸರಿಕ ಸುಸ್ಥಿರತೆಯನ್ನು ಖಾತರಿಗೊಳಿಸುವುದು, ಜಾಗತಿಕ ಸಹಯೋಗಗಳ ಅಭಿವೃದ್ಧಿ – ಇವು ಬಡತನದ ಮೂಲ ಕಾರಣಗಳನ್ನು ಗುರುತಿಸಿ ಉತ್ತರಿಸಲು ಹಾಗೂ ಲಿಂಗತ್ವ ಅಸಮಾನತೆಯನ್ನು ಮತ್ತು ಅಭಿವೃದ್ಧಿಯ ಸರ್ವ ಸಂಪೂರ್ಣ ಗುಣವನ್ನು ಗುರುತಿಸಲು ವಿಫಲವಾಗಿವೆ. ಈ ಗುರಿಗಳು ಮಾನವ ಹಕ್ಕುಗಳನ್ನು ಉಲ್ಲೇಖೀಸುವುದಿಲ್ಲ ಮತ್ತು ಆರ್ಥಿಕ ಅಭಿವೃದ್ಧಿಯನ್ನು ನಿರ್ದಿಷ್ಟವಾಗಿ ಗಮನಿಸುವುದಿಲ್ಲ. ತಾತ್ವಿಕವಾಗಿ ಎಂಡಿಜಿಗಳು ಎಲ್ಲ ದೇಶಗಳಿಗೂ ಅನ್ವಯಿಸುವವಾದರೂ, ವಾಸ್ತವವಾಗಿ ಅವು ಬಡದೇಶಗಳು ಸಿರಿವಂತ ದೇಶಗಳ ಆರ್ಥಿಕ ಸಹಾಯದಿಂದ ಸಾಧಿಸಬೇಕಾದ ಗುರಿಗಳಾಗಿ ಪರಿಗಣಿತವಾಗಿವೆ.
ಇದಕ್ಕೆ ವ್ಯತಿರಿಕ್ತವಾಗಿ 17 ಎಸ್‌ಡಿಜಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಪ್ರತೀ ದೇಶವೂ ಕೆಲಸ ಮಾಡಬೇಕಾಗಿದೆ; ಆ ಗುರಿಗಳೆಂದರೆ –
ಶೂನ್ಯ ಬಡತನ; ಶೂನ್ಯ ಹಸಿವು ಮತ್ತು ಉತ್ತಮಗೊಂಡ ಪೌಷ್ಟಿಕಾಂಶಗಳು; ಉತ್ತಮ ಆರೋಗ್ಯ ಮತ್ತು ಸೌಖ್ಯ; ಗುಣಮಟ್ಟದ ಶಿಕ್ಷಣ; ಲಿಂಗ ಸಮಾನತೆ; ಶುದ್ಧ ನೀರು ಮತ್ತು ನೈರ್ಮಲ್ಯ; ಕೈಗೆಟಕುವ ಮತ್ತು ಶುದ್ಧ ಶಕ್ತಿ; ಯೋಗ್ಯ ಉದ್ಯೋಗ ಮತ್ತು ಆರ್ಥಿಕ ಪ್ರಗತಿ; ಔದ್ಯಮಿಕ ಅನ್ವೇಷಣೆ ಮತ್ತು ಮೂಲಸೌಕರ್ಯಗಳು; ಅಸಮಾನತೆಗಳಲ್ಲಿ ಇಳಿಕೆ; ಸುಸ್ಥಿರ ನಗರಗಳು ಮತ್ತು ಸಮುದಾಯಗಳು; ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆ; ಹವಾಮಾನ ಕಾರ್ಯಚಟುವಟಿಕೆ; ನೀರಿನೊಳಗಿನ ಜೀವಜಗತ್ತು; ನೆಲದ ಮೇಲಿನ ಜೀವಜಗತ್ತು; ಶಾಂತಿ, ನ್ಯಾಯ ಹಾಗೂ ಬಲಯುತ ಸಂಸ್ಥೆಗಳು ಮತ್ತು ಗುರಿ ಸಾಧನೆಗಾಗಿ ಸಹಭಾಗಿತ್ವ.
ನ್ಯೂಯಾರ್ಕ್‌ನಲ್ಲಿ 2015ರ ಸೆಪ್ಟಂಬರ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಎಸ್‌ಡಿಜಿಗಳನ್ನು ಅಳವಡಿಸಿಕೊಳ್ಳಲಾಯಿತು ಹಾಗೂ 2016ರ ಜನವರಿಯಿಂದ ಅವು ಜಾರಿಗೆ ಬಂದಿವೆ. ಎಸ್‌ಡಿಜಿಗಳ ಸಾಧನೆಗೆ ಅಂತಿಮ ಗಡುವು 2030 ಆಗಿದೆ.
ದಾದಿಯರಿಗೆ ಎಸ್‌ಡಿಜಿಗಳು ಹೇಗೆ ಅನ್ವಯಿಸುತ್ತವೆ? “ಇಡೀ ಜೀವಿತಾವಧಿಯಲ್ಲಿ, ಎಲ್ಲ ವರ್ಗ ಮತ್ತು ಸನ್ನಿವೇಶಗಳಲ್ಲಿ ದಾದಿಯರು ಜನರ ಆರೋಗ್ಯ ಅಗತ್ಯಗಳಿಗೆ ಸ್ಪಂದಿಸುತ್ತಾರೆ. ಜಾಗತಿಕ ಆರೋಗ್ಯ ಸೇವೆ ಮತ್ತು ಎಸ್‌ಡಿಜಿಗಳಂತಹ ಜಾಗತಿಕ ಗುರಿಗಳನ್ನು ಸಾಧಿಸುವಲ್ಲಿ ಅವರ ಪಾತ್ರವು ನಿರ್ಣಾಯಕವಾಗಿದೆ” ಎನ್ನುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕಿ ಡಾ| ಮಾರ್ಗರೆಟ್ ಚಾನ್.
ಯೋಜನಾ ಆಯೋಗದ ಪ್ರಕಾರ (2011-2012), ಭಾರತದಲ್ಲಿ ಒಟ್ಟಾರೆ 269.3 ಮಿಲಿಯ ಜನರು ಬಡತನ ರೇಖೆಗಿಂತ ಕೆಳಗೆ ಜೀವಿಸುತ್ತಿದ್ದು, ಇವರಲ್ಲಿ 216.5 ಮಿಲಿಯ ಮಂದಿ ಹಳ್ಳಿಗಳಲ್ಲೂ 52.8 ಮಿಲಿಯ ಮಂದಿ ನಗರಗಳಲ್ಲೂ ಇದ್ದಾರೆ. ಮೂರು ವರ್ಷಗಳೊಳಗಿನ ಮಕ್ಕಳಲ್ಲಿ ಶೇ.40.4 ಮಂದಿ ತಮ್ಮ ವಯಸ್ಸಿಗೆ ಹೊಂದಿರಬೇಕಾದ ತೂಕಕ್ಕಿಂತ ಕಡಿಮೆ ತೂಕ ಹೊಂದಿದ್ದಾರೆ (ಎನ್‌ಎಫ್ಎಚ್‌ಎಸ್ – 3(2005-06) ವಾಲ್ಯೂಮ್ 1). ಜನನ ಕಾಲದಲ್ಲಿ ಜೀವಿತಾವಧಿ ನಿರೀಕ್ಷೆ 68 ಆಗಿದೆ (2014), ಶಿಶು ಮರಣ ಪ್ರಮಾಣ 1000 ಸಜೀವ ಜನನಗಳಲ್ಲಿ 38 ಆಗಿದೆ (2015) ಹಾಗೂ ತಾಯಂದಿರು ಮೃತಪಡುವ ಪ್ರಮಾಣ 1,00,000 ಸಜೀವ ಪ್ರಸವಗಳಿಗೆ 167ರಷ್ಟು ಇದೆ (2013).
ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಪ್ರತೀ 1000 ಜನಸಂಖ್ಯೆಗೆ ದಾದಿಯರ ಸಂಖ್ಯೆ 2:3 ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡುತ್ತದೆ. ಭಾರತದಲ್ಲಿ ಈ ಅನುಪಾತವು ಪ್ರತೀ 1,000 ಜನಸಂಖ್ಯೆಗೆ 1:7 ಇದೆ (2012) (ಗ್ಲೋಬಲ್ ಹೆಲ್ತ್ ಆಬ್ಸರ್ವೇಟರಿ).ಹಾಲಿ ಇರುವ ಎಲ್ಲ ಅಡಚಣೆ, ಕುಂದುಕೊರತೆಗಳ ಹೊರತಾಗಿಯೂ ಆಸ್ಪತ್ರೆಗಳು ಮತ್ತು ಸಮುದಾಯಗಳಲ್ಲಿ ದಾದಿಯರು ಅತ್ಯುತ್ತಮ ಆರೋಗ್ಯ ಸೇವೆಯನ್ನು ಒದಗಿಸಿ ಅತ್ಯಂತ ಸಂತೃಪ್ತಿದಾಯಕ ವೈದ್ಯಕೀಯ ಫಲಿತಾಂಶಗಳನ್ನು ಉಂಟು ಮಾಡಲು ಸದಾ ಸುಸಂಪನ್ನರಾಗಿ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಸಹಾನುಭೂತಿಯ ರೋಗಿ ಆರೈಕೆ, ನಿಯಂತ್ರಣ, ಪ್ರವರ್ಧನೆಯ ವಿಚಾರಗಳಲ್ಲಿ ಸಮುದಾಯ ಶಿಕ್ಷಣದ ಜತೆಗೆ ಪುನರ್ವಸತಿ ಸೇವೆಗಳು ಮಾತ್ರವಲ್ಲದೆ ಸಹಭಾಗಿತ್ವ, ಅನನುಭವಿಗಳ ಮೇಲ್ವಿಚಾರಣೆ, ನೀತಿ ರೂಪಣೆಯಲ್ಲಿ ಪಾಲ್ಗೊಳ್ಳುವಿಕೆ ಇತ್ಯಾದಿಗಳಲ್ಲಿ ದಾದಿಯರು ನಾಯಕತ್ವ ಪಾತ್ರವನ್ನು ನಿಭಾಯಿಸುತ್ತಾರೆ. ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯು ದಾದಿಯರಿಗೆ ತಮ್ಮ ಪೂರ್ವಸೂರಿಗಳ ಸ್ಮರಣೆ ಮಾಡಲು, ತಮ್ಮ ವೃತ್ತಿಯ ಬಗ್ಗೆ ಅವಲೋಕನ ನಡೆಸಲು, ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಹಾಗೂ ರಾಷ್ಟ್ರದ ಆರೋಗ್ಯ ಸಂಬಂಧಿ ಗುರಿಗಳ ಸಾಧನೆಯಲ್ಲಿ ಇತರ ಆರೋಗ್ಯ ಸೇವಾ ವೃತ್ತಿಪರರ ಜತೆಗೆ ಕೈಜೋಡಿಸಲು ಒಂದು ಸುಸಂದರ್ಭವನ್ನು ಒದಗಿಸುತ್ತದೆ.
ರೋಗಿಗಳು ಮತ್ತು ವಿಶಾಲಾರ್ಥದಲ್ಲಿ ಪರಿಸರ ಹಾಗೂ ಸಮುದಾಯಗಳ ಆರೈಕೆಯಲ್ಲಿ ದಾದಿಯರ ಗಮನಾರ್ಹ ಪಾತ್ರವನ್ನು ಸ್ಮರಿಸಲು ಸಾಪ್ತಾಹಿಕ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ. ಶೈಕ್ಷಣಿಕ ಕಾರ್ಯಾಗಾರಗಳು, ವೈವಿಧ್ಯಮಯ ಸಾಮುದಾಯಿಕ ಚಟುವಟಿಕೆಗಳು, ಸಂವಾದಗಳು, ಸ್ಪರ್ಧೆಗಳು, ಚರ್ಚೆ ಇತ್ಯಾದಿಗಳು ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ಭಾಗವಾಗಿವೆ. ಈ ದಿನ ದಾದಿಯರನ್ನು ಸಮಾಜದಲ್ಲಿ ಅವರ ಉಲ್ಲೇಖಾರ್ಹ ಪಾತ್ರಕ್ಕಾಗಿ ಗುರುತಿಸಿ ಗೌರವಿಸಲಾಗುತ್ತದೆ.
ಜಾಗತಿಕವಾಗಿ, ಪ್ರಧಾನ ವಾಹಿನಿಯ ಆರೋಗ್ಯ ಸೇವೆಗಳನ್ನು ಪಡೆಯಲು ಸಂಕಷ್ಟವನ್ನು ಅನುಭವಿಸುವ ಜನರಿಗೆ ಆರೋಗ್ಯ ಸೇವೆಗಳನ್ನು ಎಟುಕಿಸಿಕೊಳ್ಳುವುದಕ್ಕೆ ದಾದಿಯರು ಆದ್ಯತೆಯ ಮತ್ತು ಮೊದಲ ಸಂಪರ್ಕ ಕೊಂಡಿಯಾಗಿ ಮೂಡಿಬರುತ್ತಿದ್ದಾರೆ. ಈ ನಿಜಾಂಶವನ್ನು ಗಮನದಲ್ಲಿ ಇರಿಸಿಕೊಂಡು, ದೇಶದಲ್ಲಿ ನರ್ಸಿಂಗ್ ಶಿಕ್ಷಣವನ್ನು ನಿಯಂತ್ರಿಸಿ ಗುಣಮಟ್ಟ ರೂಪಿಸುವ ಶಾಸನಬದ್ಧ ಸಂಸ್ಥೆಯಾಗಿರುವ ಭಾರತೀಯ ನರ್ಸಿಂಗ್ ಮಂಡಳಿಯು ಎರಡು ವರ್ಷಗಳ “ದಾದಿ ಅಭ್ಯಾಸಿ’ ಶಿಕ್ಷಣ ಕ್ರಮವನ್ನು ಆರಂಭಿಸಲು ಯೋಜಿಸಿದೆ. ಈ ಹೊಸ ಶಿಕ್ಷಣ ಕ್ರಮವು ಬಿಎಸ್‌ಸಿ ನರ್ಸಿಂಗ್ ಪದವೀಧರರ ಸಾಮರ್ಥ್ಯವೃದ್ಧಿಗೆ ಹೆಚ್ಚು ಒತ್ತು ಕೊಡುವ ಉದ್ದೇಶವನ್ನು ಹೊಂದಿದೆ.
ನರ್ಸಿಂಗ್ ಕಾಲೇಜುಗಳ ಪೈಕಿ ದೇಶ ಮಟ್ಟದಲ್ಲಿ ತೃತೀಯ ಸ್ಥಾನ ಹೊಂದಿರುವ ಮಣಿಪಾಲ ನರ್ಸಿಂಗ್ ಕಾಲೇಜು ಈ ಶಿಕ್ಷಣ ಕ್ರಮವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಯೋಜಿಸಿದೆ.
– ಡಾ| ಕಸ್ತೂರಿ ಆರ್. ಅಡಿಗ,
ಪ್ರಿನ್ಸಿಪಾಲ್, ಎಂಎಸ್‌ಒಎನ್
ಮಣಿಪಾಲ ಸ್ಕೂಲ್ ಆಫ್ ನರ್ಸಿಂಗ್, ಮಣಿಪಾಲ
– ಡಾ| ಅನೀಸ್ ಜಾರ್ಜ್,
ಡೀನ್, ಎಸಿಒಎನ್
ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್; ಪ್ರವಾಸಿಗರಿಗೆ ಹೊಸ ಆಕರ್ಷಣೆ
Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು
Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?
IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!
Mangaluru: ರಾಜ್ಯದ 2ನೇ ಐಟಿ ಕೇಂದ್ರವಾಗಿ ಅಭಿವೃದ್ಧಿಗೆ ಅವಕಾಶ ಇದ್ದರೂ ಆದ್ಯತೆ ನೀಡದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.