ಮುಟ್ಟಿನ ನೈರ್ಮಲ್ಯ ದಿನಾಚರಣೆ


Team Udayavani, May 23, 2021, 4:17 PM IST

menstruate

ಋತುಸ್ರಾವ ಯಾಕೆ  ಮತ್ತು ಹೇಗೆ ಆಗುತ್ತದೆ?

ಪ್ರಪಂಚದಲ್ಲಿ ಮಗುವಿಗೆ ಜೀವ ಕೊಡುವ ಸಾಧ್ಯತೆ ಇರುವುದು ಕೇವಲ ಮಹಿಳೆಯರಿಗೆ ಮಾತ್ರ ಅದು ದೇವರು ಕೊಟ್ಟಿರುವ ವರವಾಗಿದೆ. ಒಬ್ಬ ಮಹಿಳೆಗೆ ಮಗು ಜನಿಸುವುದಕ್ಕೆ ಸಾಧ್ಯವಾಗುವುದು ಆಕೆ ಋತುಮತಿಯಾದ ಅನಂತರವೇ. ಸ್ತ್ರೀ ಜನನಾಂಗವನ್ನು ಬಾಹ್ಯ ಮತ್ತು ಅಂತರ್‌ ಜನನಾಂಗವೆಂದು 2 ವಿಧಗಳಾಗಿ ವಿಂಗಡಿಸಲಾಗಿದೆ.  ಅಂತರ್‌ಜನನಾಂಗದ ನಡುವಿನ ಭಾಗವನ್ನು ಗರ್ಭಕೋಶ ಎಂದು ಹೇಳುತ್ತಾರೆ.

ಅದರ 2 ಕಡೆ ಅಂಡನಾಳ ಮತ್ತು ಅಂಡಾಶಯ ಇರುತ್ತದೆ. ಅಂಡಾಶಯದಲ್ಲಿ ಸಾವಿರಾರು ಅಂಡಾಣುಗಳಿರುತ್ತವೆ. ಪ್ರತೀ ತಿಂಗಳು ಅಥವಾ ಸುಮಾರು 21 – 40 ದಿನಗಳಿಗೊಮ್ಮೆ ಒಂದು ಅಂಡಾಣು/ಮೊಟ್ಟೆ ಅಂಡಾಶಯದಿಂದ ಬಿಡುಗಡೆಯಾಗುತ್ತದೆ. ಬಿಡುಗಡೆಯಾದ ಈ ಮೊಟ್ಟೆ ಅಂಡನಾಳದ ಮೂಲಕ ಸಾಗುತ್ತದೆ.

ಯಾವಾಗ ಅಂಡಾಶಯದಿಂದ  ಅಂಡಾಣು ಬಿಡುಗಡೆಯಾಗುತ್ತದೆಯೋ ಅದನ್ನು ಅಂಡಾಣು ಬಿಡುಗಡೆ ಎಂದು ಕರೆಯುತ್ತಾರೆ. ಈ ಅಂಡಾಣು ಅಂಡನಾಳದಲ್ಲಿ ಸಾಗುತ್ತಿದ್ದಂತೆ, ಗರ್ಭಕೋಶದ ಒಳಪದರದಲ್ಲಿ ಮೆದುವಾದ ಪದರ ತಯಾರಾಗುತ್ತದೆ. ಈ ಪದರ ಹೆಚ್ಚಾಗಿ ಸಣ್ಣ ಸಣ್ಣ ರಕ್ತನಾಳಗಳಿಂದ  ಕೂಡಿರುತ್ತದೆ. ಮಹಿಳೆಯರಲ್ಲಿ ಹೇಗೆ ಅಂಡಾಣು ಇರುತ್ತದೆಯೋ, ಅದೇ ರೀತಿ ಪುರುಷರಲ್ಲಿ ವೀರ್ಯಾಣು ಇರುತ್ತದೆ.

ಮಹಿಳೆ ಮತ್ತು ಪುರುಷನ ನಡುವೆ ದೈಹಿಕ ಸಂಬಂಧ ಇದ್ದಾಗ ಮಹಿಳೆಯ ಅಂಡಾಣು ಮತ್ತು ಪುರುಷನ ವೀರ್ಯಾಣು ಒಟ್ಟಿಗೆ ಸೇರಿ ಗರ್ಭಕೋಶದಲ್ಲಿ ಮಗುವೊಂದು ಬೆಳೆಯಲು ಸಾಧ್ಯವಾಗುತ್ತದೆ. ಗರ್ಭಕೋಶದ  ಒಳಪದರ ಮಗುವಿನ ಬೆಳವಣಿಗೆಗೆ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ಅಂಡಾಣು ವೀರ್ಯಾಣುವಿನ  ಜತೆ ಸಂಯೋಗವಾಗದಿದ್ದರೆ ಗರ್ಭಕೋಶದಲ್ಲಿ ತಯಾರಾದ ಒಳಪದರ ಕಳಚಿ, ಋತುಸ್ರಾವವಾಗಿ ಯೋನಿಯ ಮೂಲಕ ಹೊರಬರುತ್ತದೆ. ಈ ರಕ್ತಸ್ರಾವವೇ ಋತುಸ್ರಾವದ ಅವಧಿ. ಈ ಪೂರ್ಣ ಪ್ರಕ್ರಿಯೆಯನ್ನು “ಋತುಚಕ್ರ’ ಎಂದು ಕರೆಯುತ್ತಾರೆ.

ಋತುಚಕ್ರದ ಸಮಯದಲ್ಲಿ  ಪ್ರತೀ  ತಿಂಗಳು ಶರೀರದಿಂದ ಎಷ್ಟು ರಕ್ತ ಹೊರಗೆ  ಬಂದರೆ ಜಾಸ್ತಿ? ಯಾವಾಗ  ವೈದ್ಯರ ಹತ್ತಿರ ಹೋಗಬೇಕು?

ಒಂದು ಗಂಟೆಯಲ್ಲಿ ಒಂದಕ್ಕಿಂತ ಹೆಚ್ಚು ಬಟ್ಟೆ/ಪ್ಯಾಡನ್ನು ಬದಲಾಯಿಸಬೇಕಾದರೆ ಹಾಗೂ 8 ದಿನಗಳಿಗಿಂತ ಹೆಚ್ಚು ದಿನಗಳು ಋತುಸ್ರಾವವಾದರೆ, ಅಥವಾ ದೇಹ ನಿಶ್ಶಕ್ತವಾಗಿ ತುಂಬಾ ಸುಸ್ತಾದರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ. ಸಾಮಾನ್ಯವಾಗಿ ಋತುಸ್ರಾವದ ಈ ಅವಧಿಯಲ್ಲಿ ಮಹಿಳೆಗೆ ಸುಮಾರು 2 – 4 ಚಮಚಗಳಷ್ಟು, ಅಂದರೆ 30 – 60 ಮಿಲಿ ಲೀಟರ್‌ನಷ್ಟು ರಕ್ತಸ್ರಾವವಾಗುತ್ತದೆ.

ಋತುಮತಿಯಾದ 2 – 3 ವರ್ಷಗಳಲ್ಲಿ, ಋತುಸ್ರಾವ ನಿಗದಿತ ಅವಧಿಗೆ ಸರಿಯಾಗಿ  ಆಗುವುದಿಲ್ಲ. ಇದು ಸಾಮಾನ್ಯವಾಗಿ ಹೆಚ್ಚಿನವರಲ್ಲಿ ಕಂಡುಬರುವಂತಹ ಲಕ್ಷಣ/ತೊಂದರೆ. ಸಣ್ಣ  ಪ್ರಾಯದ ಹುಡುಗಿಯರು ವರ್ಷದಲ್ಲಿ ಕೇವಲ 3 ಅಥವಾ 4 ಬಾರಿ ಮುಟ್ಟಾಗಬಹುದು. ಕ್ರಮೇಣ ಕೆಲವು ವರ್ಷಗಳ ಅನಂತರ ಹೆಣ್ಣು ಮಕ್ಕಳ ಋತುಚಕ್ರವು ಕ್ರಮಬದ್ಧಗೊಳ್ಳುತ್ತದೆ. ಆದರೂ ಒಂದು ವೇಳೆ ಕಳೆದ  ಋತುಸ್ರಾವದಿಂದ ಮುಂದಿನ 3 ತಿಂಗಳ ವರೆಗೆ ಋತುಸ್ರಾವ ಆಗದೇ ಹೋದರೆ, ವೈದ್ಯರೊಂದಿಗೆ ಸಮಾಲೋಚಿಸುವುದು ಉತ್ತಮ.

ಹೆಚ್ಚಿನ ಹುಡುಗಿಯರಲ್ಲಿ/ಮಹಿಳೆಯರಲ್ಲಿ ಋತುಸ್ರಾವ ಆಗುವ ಕೆಲವು ದಿನಗಳ ಮುಂಚೆ ಬಿಳಿ ಮುಟ್ಟು (ಬಿಳಿಸೆರಗು) ಯೋನಿಯಿಂದ ಹೊರಗೆ ಬರುತ್ತದೆ. ಇದು ಸಾಮಾನ್ಯ. ಆದರೆ ಅದರಲ್ಲಿ ಕೆಟ್ಟವಾಸನೆ ಇದ್ದು, ಅದರ ಬಣ್ಣದಲ್ಲಿ ಬದಲಾವಣೆ ಇದ್ದರೆ ಹಾಗೂ ತುಂಬಾ ಜಾಸ್ತಿ ಹೋಗುತ್ತ ಇದ್ದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಈ ರೀತಿಯ ತೊಂದರೆಗಳನ್ನು ತಡೆಗಟ್ಟಲು ಮಹಿಳೆಯರು ತಮ್ಮ ಯೋನಿ ಮತ್ತು ಸುತ್ತಮುತ್ತಲಿನ ಅಂಗಾಂಗಗಳನ್ನು ಚೆನ್ನಾಗಿ ತೊಳೆದು, ಪ್ರತೀ ದಿನ 2 ಸಲ ಸ್ನಾನ ಮಾಡಿ ನೈರ್ಮಲ್ಯವನ್ನು ಕಾಪಾಡುವುದು ಉತ್ತಮ. ಹತ್ತಿ ಬಟ್ಟೆಯಿಂದ ತಯಾರಿಸಿದ ಒಳ ಉಡುಪುಗಳನ್ನೇ ಉಪಯೋಗಿಸಬೇಕು ಮತ್ತು ಅದನ್ನು ಸೂರ್ಯನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು.

ಹೆಣ್ಣುಮಕ್ಕಳು ಪ್ರಪ್ರಥಮವಾಗಿ  ಋತುಮತಿಯರಾಗುವುದು ಯಾವಾಗ?

ಹೆಚ್ಚಿನ ಹುಡುಗಿಯರು 11 – 14½ ವಯಸ್ಸಿನ ನಡುವೆ, ಅಂದರೆ ಸಾಮಾನ್ಯವಾಗಿ ಸ್ತನಗಳು ಬೆಳೆಯಲು ಪ್ರಾರಂಭಿಸಿದ ಸುಮಾರು 2 ವರ್ಷಗಳ ಅನಂತರ ಮತ್ತು ಬಿಳಿ ಮುಟ್ಟು ಆರಂಭವಾದ ಸುಮಾರು ಒಂದು ವರ್ಷದ ಅನಂತರ ಮೊದಲನೇ ಬಾರಿ ಋತುಮತಿಯರಾಗುತ್ತಾರೆ. ಆದರೂ 9 – 16 ವರ್ಷವನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಈ ವಯಸ್ಸಿನಲ್ಲಿ ಮಾತ್ರ ಮೊದಲು ಯೋನಿಯಿಂದ ರಕ್ತಸ್ರಾವವು ಅವರ ಗಮನಕ್ಕೆ ಬರುತ್ತದೆ. ಕೆಲವು ಸಂದರ್ಭಗಳಲ್ಲಿ ತಾಯಿ ಋತುಮತಿಯಾಗಿರುವ ವಯಸ್ಸಿನಲ್ಲೇ ಮಗಳು ಋತುಮತಿಯಾಗುತ್ತಾಳೆ. ಬೇರೆ ಸಂದರ್ಭಗಳಲ್ಲಿ ಹೆಣ್ಣಿನ ಶರೀರದ ಬೆಳವಣಿಗೆಯ ಪ್ರಕಾರ ಋತುಮತಿಯಾಗುತ್ತಾಳೆ. ಈ ಸಮಯದಲ್ಲಿ ದೇಹದಲ್ಲಾಗುವ ಬದಲಾವಣೆಗಳೇನೆಂದರೆ – ಸ್ತನಗಳ ಬೆಳವಣಿಗೆ, ಸೊಂಟದ ಭಾಗ ವಿಸ್ತಾರವಾಗುವುದು ಮತ್ತು ಕಂಕುಳು ಹಾಗೂ ಜನನಾಂಗದ ಮೇಲ್ಭಾಗದಲ್ಲಿ ಕೂದಲು ಬೆಳೆಯುವುದು.

 ಋತುಸ್ರಾವ ಎಷ್ಟು ದಿನಗಳವರೆಗೆ ಇದ್ದರೆ ಅದು ಸಹಜ ?

ರಕ್ತಸ್ರಾವವಾಗುವ ಅವಧಿ ಸಾಮಾನ್ಯವಾಗಿ 3 – 7 ದಿನಗಳಾಗಿದ್ದು, ಕೆಲವು ಸಲ ವ್ಯತ್ಯಾಸವಿರುತ್ತದೆ. ಪ್ರತಿಯೊಬ್ಬ ಹುಡುಗಿಯು ತಮಗೆ ರಕ್ತಸ್ರಾವವಾಗುವ ದಿನವನ್ನು ಗುರುತು ಮಾಡಿಕೊಳ್ಳಬೇಕು. ಏಕೆಂದರೆ ನೀವು ಋತುಸ್ರಾವವಾಗುವ ಮುಂಚೆಯೇ ತಯಾರಾಗಿ ಬ್ಯಾಗಿನಲ್ಲಿ ಪ್ಯಾಡನ್ನು ಹಾಕಿಕೊಂಡು ಬರಬಹುದು.

ತಮ್ಮ ಋತುಸ್ರಾವದ ದಿನ ಹೇಗೆ ಗೊತ್ತಾಗುವುದು

ಋತುಸ್ರಾವದ ದಿನ ಗೊತ್ತಾಗುವುದು ಋತುಚಕ್ರದ ಮೂಲಕ. ಒಂದು ಋತುಚಕ್ರವೆಂದರೆ ಮುಟ್ಟಾದ ಮೊದಲ ದಿನದಿಂದ ಮುಂದಿನ ಋತುಸ್ರಾವದ ಮೊದಲ ದಿನದವರೆಗೆ. ಮಹಿಳೆಯರಲ್ಲಿ ಋತುಚಕ್ರದ ಅವಧಿ ಸಾಮಾನ್ಯವಾಗಿ 28 ದಿನಗಳಾಗಿದ್ದು, ಅತೀ ಕಡಿಮೆ ಅವಧಿ ಎಂದರೆ 22 ದಿನಗಳು. ಅತಿ ಹೆಚ್ಚು ಅಂದರೆ 45 ದಿನಗಳು. ಹೀಗೆ ಪ್ರತೀ ಮಹಿಳೆಯರಲ್ಲಿ ಋತುಚಕ್ರದ ಅವಧಿಯಲ್ಲಿ ವ್ಯತ್ಯಾಸವಿರುತ್ತದೆ.

ಋತುಸ್ರಾವದ  ನಸಮಯದಲ್ಲಿ ಬರುವ  ರಕ್ತವು ಕೆಟ್ಟ ರಕ್ತ ಎನ್ನುತ್ತಾರೆಇದು ನಿಜವೇ?

ಇದು ಕೆಟ್ಟ ರಕ್ತ ಅಲ್ಲ. ಋತುಸ್ರಾವದಲ್ಲಿ ಯಾವುದೇ ರೀತಿಯ ಹಾನಿಕಾರಕ ವಿಷವಸ್ತುಗಳು ಹೊರಬರುವುದಿಲ್ಲ. ಗರ್ಭ ಧರಿಸದೇ ಇರುವುದರಿಂದ ಅನವಶ್ಯಕವಾದ ರಕ್ತವನ್ನು ಗರ್ಭದ ಒಳಪದರಗಳಿಂದ ಮಾತ್ರ ಹೊರ ಹಾಕುತ್ತದೆ. ಹೀಗಾಗಿ ಅದು ಕೆಟ್ಟ ರಕ್ತ ಖಂಡಿತ ಅಲ್ಲ.

ಋತುಸ್ರಾವದ ಸಮಯದಲ್ಲಿ ಇರುವ  ಹೊಟ್ಟೆ ನೋವು, ಬೆನ್ನು ನೋವಿಗೆ ಕಾರಣ ಏನು?

ಈ ಸಮಯದಲ್ಲಿ ಶರೀರದಲ್ಲಿರುವ ರಾಸಾಯನಿಕ ಹಾರ್ಮೋನ್‌ಗಳು ಸಾಮಾನ್ಯಕ್ಕಿಂತ ಹೆಚ್ಚು ಸ್ರವಿಸುವುದರಿಂದ ಈ ತೊಂದರೆಗಳು ಆಗುತ್ತವೆ. ಋತುಸ್ರಾವದ 5 – 7 ದಿನಗಳ ಮೊದಲು ಅಥವಾ ಸ್ರಾವದ ಅವಧಿಯಲ್ಲಿ ಕೆಲವು ಹುಡುಗಿಯರಿಗೆ ಹೊಟ್ಟೆ ನೋವು, ಹೊಟ್ಟೆ ಹಿಡಿದುಕೊಳ್ಳುವುದು, ವಿಪರೀತ ರಕ್ತಸ್ರಾವ, ಬೆನ್ನು ನೋವು, ಕಾಲು ನೋವು, ಕಿರಿ ಕಿರಿ, ಮುಂಗೋಪ ಹಾಗೂ ಸುಸ್ತು- ಇಂತಹ ತೊಂದರೆಗಳು ಇರುವುದು ಸಾಮಾನ್ಯ. ಈ ತರಹ ಲಕ್ಷಣಗಳಿದ್ದಾಗ ಈ ಕೆಳಕಂಡ ಕೆಲವು ವಿಧಾನಗಳನ್ನು ಅನುಸರಿಸಿದರೆ ಸ್ವಲ್ಪಮಟ್ಟಿಗೆ ಆರಾಮ ಸಿಗುತ್ತದೆ ಹಾಗೂ ನೋವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

– ನೋವಿರುವ ಜಾಗದಲ್ಲಿ ಬಿಸಿ ನೀರಿನ ಶಾಖವನ್ನು ನೀಡುವುದು.

-ಹೊಟ್ಟೆಯ ಭಾಗವನ್ನು ಮೃದುವಾಗಿ ಮಸಾಜ್‌ ಮಾಡುವುದು.

-ಮನೆಮದ್ದುಗಳಾದ ಶುಂಠಿ, ಜೀರಿಗೆಯ ಕಷಾಯವನ್ನು ಸೇವಿಸಬಹುದು.

-ಋತುಸ್ರಾವದ ಅವಧಿಯಲ್ಲಿ ಜಾಸ್ತಿ ಕಬ್ಬಿಣಾಂಶ ಇರುವ ಆಹಾರ ಸೇವಿಸಬೇಕು.

-ರಕ್ತಹೀನತೆ ಇರುವವರಿಗೆ ಮುಖ್ಯವಾಗಿ ನುಗ್ಗೆ ಎಲೆ, ಸೊಪ್ಪು, ತರಕಾರಿ, ರಾಗಿ, ಹಣ್ಣು ಹಂಪಲು ಕೊಡಬೇಕು.

-ಸಕ್ಕರೆ ಮತ್ತು ಉಪ್ಪಿನ ಪ್ರಮಾಣವನ್ನು ಮಿತಿಯಲ್ಲಿ ಸೇವಿಸುವುದು ಉತ್ತಮ.

 ಋತುಸ್ರಾವದ ರಕ್ತ  ಯಾಕೆ ವಾಸನೆ ಬರುತ್ತದೆ?

ಋತುಸ್ರಾವದ ರಕ್ತದಲ್ಲಿ ಯಾವುದೇ ರೀತಿಯ ಕೆಟ್ಟ ವಾಸನೆ ಇರುವುದಿಲ್ಲ. ಇದು ದೇಹದಲ್ಲಿರುವ ರಕ್ತದ ಅಂಶಗಳನ್ನೇ ಒಳಗೊಂಡಿರುತ್ತದೆ. ಆದರೆ ಒಮ್ಮೆ ಅದು ದೇಹದಿಂದ ಹೊರ ಬಂದು ಬಟ್ಟೆಗೆ/ಪ್ಯಾಡ್‌ಗೆ ತಗಲಿದಾಗ, ಗಾಳಿಯ ಜತೆ ಸೇರಿ ರಾಸಾಯನಿಕ ಕ್ರಿಯೆಯಾಗುತ್ತದೆ. ಈ ಕ್ರಿಯೆಯಿಂದ ಕೆಟ್ಟ ವಾಸನೆ ಬರುವುದು. ಬಟ್ಟೆ ಅಥವಾ ಪ್ಯಾಡನ್ನು 4 – 8 ಗಂಟೆಗಳಲ್ಲಿ ಬದಲಾಯಿಸಲೇಬೇಕು. ಹೆಚ್ಚು ರಕ್ತಸ್ರಾವವಿದ್ದರೆ 4 – 8 ಗಂಟೆಗಳವರೆಗೆ ಕಾಯದೆ ಕೂಡಲೇ ಪ್ಯಾಡನ್ನು ಬದಲಾಯಿಸಬೇಕು. ಹೀಗೆ ಮಾಡಿದಲ್ಲಿ ವಾಸನೆ ಬರುವುದನ್ನು ತಡೆಗಟ್ಟಬಹುದು.

ಋತುಚಕ್ರದ ಸಮಯದಲ್ಲಿ ಬಟ್ಟೆ ಬಳಸಬಹುದಾ ಅಥವಾ ಪ್ಯಾಡ್‌ ಬಳಸಬೇಕಾ?
ಯಾವುದನ್ನು ಬೇಕಾದರೂ ಉಪಯೋಗ ಮಾಡಬಹುದು, ಆದರೆ ಸ್ವತ್ಛತೆಯನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯ. ಇವುಗಳ ಜತೆಗೆ ಮೆನ್‌ಸ್ಟ್ರೆವಲ್‌ ಕಪ್‌, ಟ್ಯಾಂಪೂನ್‌- ಹೀಗೆ ಇನ್ನೂ ಹಲವಾರು ವಿಧಾನಗಳಿವೆ. ಆದರೆ ಅವುಗಳನ್ನು ಅವರವರ ಅನುಕೂಲಕ್ಕೆ ತಕ್ಕಂತೆ ಹಾಗೂ ಆಗುವ ರಕ್ತಸ್ರಾವದ ಪ್ರಮಾಣದ ಮೇರೆಗೆ ಸರಿಯಾದ ಮಾಹಿತಿಯೊಂದಿಗೆ ಉಪಯೋಗಿಸಬೇಕು. ಶಾಲೆ – ಕಾಲೇಜು ಹೋಗುವ ಹೆಣ್ಣು ಮಕ್ಕಳಿಗೆ ಬಟ್ಟೆ ಉಪಯೋಗಿಸಲು ಕಷ್ಟ ಆಗುತ್ತದೆ ಮತ್ತು ಒಂದೇ ಬಟ್ಟೆಯನ್ನು ಬದಲಾಯಿಸದೆ ಬೆಳಗಿನಿಂದ ಸಂಜೆಯವರೆಗೂ ಶಾಲೆ/ಕಾಲೇಜಿನಲ್ಲಿ ಇರಲು ಕಷ್ಟ ಹಾಗೂ ಸ್ವತ್ಛವಿರುವುದಿಲ್ಲ. ಈ ಕಾರಣದಿಂದಲೇ ಶಾಲಾ-ಕಾಲೇಜುಗಳಿಗೆ ಹೋಗುವ ಹೆಣ್ಣು ಮಕ್ಕಳು ಸ್ಯಾನಿಟರಿ ಪ್ಯಾಡ್‌ ಉಪಯೋಗಿಸಿದರೆ ಸುಲಭವಾಗುತ್ತದೆ.

ಬಟ್ಟೆಯನ್ನು ಹೇಗೆ ಸ್ವತ್ಛವಾಗಿಟ್ಟುಕೊಳ್ಳುವುದು?
ಒಂದು ದೊಡ್ಡ ಹತ್ತಿ ಬಟ್ಟೆಯನ್ನು ಹಲವಾರು ಬಾರಿ ಮಡಚಿ ಒಳಉಡುಪಿನ ಒಳಗೆ ಇರಿಸಬೇಕು ಅಥವಾ ಸೊಂಟಕ್ಕೆ ಪಟ್ಟಿಯನ್ನು ಕಟ್ಟಿ ಜನನಾಂಗದ ಮೇಲೆ ಮಡಚಿದ ಬಟ್ಟೆಯನ್ನು ಧರಿಸಬೇಕು. ಅಧಿಕ ರಕ್ತಸ್ರಾವವಾಗುತ್ತಿದ್ದರೆ ದಿನದಲ್ಲಿ 3 – 4 ಬಾರಿ ಬಟ್ಟೆಯನ್ನು ಬದಲಾಯಿಸಬೇಕು. ರಕ್ತಸ್ರಾವ ಕಡಿಮೆಯಾಗಿದ್ದರೂ ಕೂಡ 4 – 8 ಗಂಟೆಯೊಳಗೆ ಬಟ್ಟೆಯನ್ನು ಬದಲಾಯಿಸಲೇಬೇಕು. ಇಲ್ಲದಿದ್ದರೆ ಸೋಂಕು ರೋಗ ಬರುತ್ತದೆ. ಈ ಬಟ್ಟೆಯನ್ನು ಪ್ರತ್ಯೇಕವಾಗಿ ಬಿಸಿನೀರು ಮತ್ತು ಸೋಪು ಬಳಸಿ ಒಗೆದು ಸ್ವತ್ಛಗೊಳಿಸಿ ಬಿಸಿಲಿನಲ್ಲಿಯೇ ಒಣಗಿಸಬೇಕು. ಸಾಮಾನ್ಯವಾಗಿ ಮಹಿಳೆಯರ ಅಭ್ಯಾಸ ಏನೆಂದರೆ, ಈ ಬಟ್ಟೆಯನ್ನು ತೊಳೆದು ಪುನರ್ಬಳಕೆ ಮಾಡುತ್ತಾರೆ. ಆದರೆ ಬಟ್ಟೆಯನ್ನು ಕಡಿಮೆ ನೀರಿನಲ್ಲಿ ತೊಳೆಯುವುದು, ಸೋಪು ಹಾಕದೆ ಹಾಗೆಯೇ ಒಗೆಯುವುದು ಹಾಗೂ ಬಿಸಿಲಿನಲ್ಲಿ ಒಣಗಿಸದೆ ಹೋದರೆ ಚರ್ಮಕ್ಕೆ ಸೋಂಕು ತಗುಲಿ ಚರ್ಮದ ಸೋಂಕು ಉಂಟಾಗಲು ಅವಕಾಶವಾಗುತ್ತದೆ. ನೀವು ಉಪಯೋಗಿಸಿದ ಬಟ್ಟೆಯನ್ನು ಬೇರೆ ಯಾರೂ ಉಪಯೋಗಿಸಬಾರದು. 2 – 3 ತಿಂಗಳಿಗೆ ಒಂದು ಬಾರಿ ಈ ಬಟ್ಟೆಯನ್ನು ಎಸೆದು ಬೇರೆ ಬಟ್ಟೆಯನ್ನು ಉಪಯೋಗಿಸುವುದಕ್ಕೆ ಆರಂಭಿಸಬೇಕು.

ಸ್ಯಾನಿಟರಿ ಪ್ಯಾಡನ್ನು ಹೇಗೆ ಉಪಯೋಗಿಸುವುದು?
ಇವುಗಳು 3 ಪದರಗಳನ್ನು ಹೊಂದಿರುತ್ತವೆ. ಕೆಳ ಭಾಗದ ಪದರ ಒಳ ಉಡುಪಿಗೆ ಅಂಟಿಕೊಂಡಿರುತ್ತದೆ. ಅದು ಪ್ಲಾಸ್ಟಿಕ್‌. ಮಧ್ಯದ ಪದರ ರಕ್ತಸ್ರಾವವನ್ನು ಹೀರಿಕೊಂಡು ಸೋರುವಿಕೆಯನ್ನು ತಡೆಗಟ್ಟುತ್ತದೆ. ಸ್ಯಾನಿಟರಿ ಪ್ಯಾಡಿನ ಮೇಲಿನ ಪದರ ಚರ್ಮಕ್ಕೆ ಹೊಂದಿಕೊಂಡಂತೆ ಇರುತ್ತದೆ. ಇದು ಚರ್ಮ ಒಣಗಿದಂತಿರಲು ಸಹಾಯಕವಾಗುತ್ತದೆ.
ಪ್ಯಾಡಿನ ಹಿಂದಿನ ಭಾಗದ ಕಾಗದ, ಅಂದರೆ ಪೇಪರ್‌ ಅನ್ನು ತೆಗೆದು ಅದನ್ನು ಒಳ ಉಡುಪಿಗೆ ಅಂಟಿಸಬೇಕು. ಒಂದು ಪ್ಯಾಡನ್ನು 4 – 8 ಗಂಟೆಯ ವರೆಗೆ ಮಾತ್ರ ಉಪಯೋಗಿಸಬೇಕು. ಇದರ ಅನಂತರ ಬದಲಾಯಿಸಲೇಬೇಕು.

ಉಪಯೋಗಿಸಿದ ಸ್ಯಾನಿಟರಿ ಪ್ಯಾಡ್‌ ವಿಲೇವಾರಿ ಹೇಗೆ?
ಉಪಯೋಗ ಮಾಡಿರುವ ಸ್ಯಾನಿಟರಿ ಪ್ಯಾಡನ್ನು ಒಂದು ಕಾಗದದಲ್ಲಿ ಸುತ್ತಿ ಕಸದ ಬುಟ್ಟಿಯಲ್ಲಿ ಹಾಕಬೇಕು ಮತ್ತು ಪ್ರತೀ ದಿನ ಕಸದ ಬುಟ್ಟಿಯನ್ನು ಖಾಲಿ ಮಾಡಬೇಕು. ಯಾವುದೇ ಕಾರಣಕ್ಕೂ ಅದನ್ನು ನೀರಿನಲ್ಲಾಗಲಿ, ಚರಂಡಿಯಲ್ಲಾಗಲಿ ಅಥವಾ ಶೌಚಾಲಯದಲ್ಲಾಗಲಿ ಎಸೆಯಬಾರದು. ಪ್ಯಾಡ್‌ನ‌ಲ್ಲಿರುವ ಪ್ಲಾಸ್ಟಿಕ್‌ ನೀರಿನಲ್ಲಿ ಮುಳುಗುವುದಿಲ್ಲ ಮತ್ತು ಅದರಲ್ಲಿರುವ ಹತ್ತಿ ದಪ್ಪವಾಗಿ ಶೌಚಾಲಯದ ನಾಳವನ್ನು ಕಟ್ಟಿಕೊಳ್ಳುತ್ತದೆ. ಶಾಲೆಯ ಶಿಕ್ಷಕರು ಇಲ್ಲಿ ಗಮನಿಸಬೇಕಾದ ಅಂಶ ಇದೇ. ಪ್ಯಾಡನ್ನು ಎಸೆಯಲು ಶಾಲೆ/ಕಾಲೇಜಿನ ಶಿಕ್ಷಕ ವೃಂದ ಶೌಚಾಲಯದಲ್ಲಿ ಕಸದ ಬುಟ್ಟಿ ಮತ್ತು ಹಳೆಯ ಕಾಗದ ಇರುವಂತೆ ಗಮನ ವಹಿಸಬೇಕು.

 

ಋತುಸ್ರಾವದ ಸಮಯದಲ್ಲಿ ಸ್ವತ್ಛತೆ

 ಋತುಸ್ರಾವದ ಸಮಯದಲ್ಲಿ ಯೋನಿ ಮತ್ತು ಜನನಾಂಗಗಳನ್ನು ಯಾವಾಗಲೂ ಸ್ವತ್ಛವಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೆ, ಸೋಂಕು ತಗುಲಿ ಕೆರೆತ, ಉರಿ, ವಾಸನೆ ಬರುತ್ತದೆ.

ಮೂತ್ರ ವಿಸರ್ಜನೆ, ಮಲ ವಿಸರ್ಜನೆ ಅಥವಾ ಬಟ್ಟೆ/ಪ್ಯಾಡ್‌ಗಳನ್ನು ಬದಲಾಯಿಸುವ ಸಲುವಾಗಿ ಶೌಚಾಲಯಕ್ಕೆ ಹೋದಾಗ ನೀವು ನಿಮ್ಮ ಕೈಗಳನ್ನು ಸ್ವತ್ಛವಾಗಿ ತೊಳೆದುಕೊಳ್ಳಿ.

ಮಲವಿಸರ್ಜನೆಯ ಅನಂತರ ಸ್ವತ್ಛಗೊಳಿಸುವಾಗ ಮುಂಭಾಗದಿಂದ ಹಿಂದಕ್ಕೆ ತೊಳೆದುಕೊಳ್ಳಬೇಕು. ಇದರಿಂದ ಸೋಂಕು ಉಂಟಾಗದಂತೆ ಸುರಕ್ಷಿತವಾಗಿ ಇರಬಹುದು.

ದಿನಕ್ಕೆ 4 ಅಥವಾ 5 ಬಾರಿ ಬಟ್ಟೆ/ಪ್ಯಾಡನ್ನು ಬದಲಾಯಿಸುತ್ತಿರಬೇಕು. ಇಲ್ಲದಿದ್ದರೆ ಕೆಟ್ಟ ವಾಸನೆ ಬರುತ್ತದೆ.

ಬಳಸಿದ ಪ್ಯಾಡನ್ನು ಕಸದ ಬುಟ್ಟಿಗೆ ಹಾಕುವಾಗ ಒಂದು ಪೇಪರಿನಲ್ಲಿ ಸುತ್ತಿಯೇ ಹಾಕಬೇಕು.

ಬಟ್ಟೆಯನ್ನು, ಒಳ ಉಡುಪನ್ನು ಆಗಾಗ ಬದಲಾಯಿಸಿ ಸೋಪು ಅಥವಾ ಸೋಪಿನ ಪುಡಿಯಿಂದ ಬಿಸಿನೀರಿನಲ್ಲಿ ಚೆನ್ನಾಗಿ ಒಗೆಯಿರಿ.

ಸೋಂಕನ್ನು ತಡೆಯಲು ಬಟ್ಟೆಯನ್ನು ಬಿಸಿಲಿನಲ್ಲಿ, ತೆರೆದ ಜಾಗದಲ್ಲಿ ಒಣಗಿಸಿ. ಅದು ಬೇರೆಯವರಿಗೆ ಕಾಣಿಸಬಾರದು ಎಂದು ಯಾವುದೋ ಬಟ್ಟೆಯ ಕೆಳಗಡೆ, ಮನೆಯ ಒಳಗಡೆ ಒಣ ಹಾಕಬೇಡಿ.

ರಕ್ತದ ಕಲೆಯಾದ ಪ್ಯಾಡ್‌ ಅಥವಾ ಬಟ್ಟೆ ತೊಡೆಯ ಚರ್ಮಕ್ಕೆ ಉಜ್ಜಿದಾಗ ಹುಣ್ಣಾಗುತ್ತದೆ ಹಾಗೂ ನಡೆಯಲು ಕಷ್ಟವಾಗುತ್ತದೆ. ಹೀಗಾದಾಗ ಚರ್ಮಕ್ಕೆ ಆ ಜಾಗದ ಮೇಲೆ ಕೊಬ್ಬರಿ ಎಣ್ಣೆ ಅಥವಾ ವೈದ್ಯರು ಸೂಚಿಸಿದ ಕ್ರೀಂ ಹಚ್ಚಿಕೊಳ್ಳಿ.

ಎಲ್ಲ ಹೆಣ್ಣು ಮಕ್ಕಳು ಕನಿಷ್ಠ 2 – 3 ಒಳಉಡುಪುಗಳನ್ನು ಉಪಯೋಗಿಸಬೇಕು ಮತ್ತು ಒಣಗಿಸಿದ ಒಳಉಡುಪನ್ನೇ ಬಳಸಬೇಕು.

ಶುದ್ಧ ನೀರಿನಿಂದ ಮಾತ್ರ ಯೋನಿ ಭಾಗವನ್ನು ಸ್ವತ್ಛಗೊಳಿಸಿ. ಪದೇ ಪದೇ ಸಾಬೂನು ಉಪಯೋಗಿಸುವುದು ಒಳ್ಳೆಯದಲ್ಲ.

ಸಿಂಥೆಟಿಕ್‌ ಬಟ್ಟೆಗಳ ಉಪಯೋಗವನ್ನು ಕಡಿಮೆಗೊಳಿಸಿ, ಹತ್ತಿ ಬಟ್ಟೆಗಳಿಗೆ ಆದ್ಯತೆ ನೀಡಿ. ಇದು ಉತ್ತಮ ಗಾಳಿಯಾಡುವಿಕೆ ಮತ್ತು ತೇವ ಹೀರುವಿಕೆಗೆ ಸಹಕಾರಿ.

ಬಿಗಿಯಾದ ಒಳ ಉಡುಪನ್ನು ಧರಿಸುವುದು ಅಷ್ಟು ಉತ್ತಮವಲ್ಲ.

ಚರ್ಮವನ್ನು ಸ್ವತ್ಛವಾಗಿಡುವುದು ಮತ್ತು ಆದಷ್ಟು ಶುಷ್ಕವಾಗಿಡುವುದು ಒಳ್ಳೆಯದು.

ಇತರ ವ್ಯಕ್ತಿಗಳ ಟವಲ್‌/ಬಟ್ಟೆಗಳನ್ನು ಉಪಯೋಗಿಸುವುದು ಕೂಡ ಒಳ್ಳೆಯದಲ್ಲ.

ಕೊನೆಯದಾಗಿ, ದೈಹಿಕ ಸತ್ಛತೆ ಕಾಪಾಡುವುದು ಬಹಳ ಮುಖ್ಯವಾದ ವಿಷಯ. ನಿಮ್ಮ ದೇಹದ ಆರೈಕೆಯನ್ನು ಮಾಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಚೆನ್ನಾಗಿ ಊಟ ಮಾಡಿ, ಕ್ರಮಬದ್ಧವಾಗಿ ವ್ಯಾಯಾಮ ಮಾಡಿ. ಋತುಸ್ರಾವದ ಅವಧಿಯಲ್ಲಿ ಆಟ ಆಡುವುದು, ಓಡುವುದು, ಜಿಗಿಯುವುದು, ಸೈಕಲ್‌ನಲ್ಲಿ ಪ್ರಯಾಣಿಸುವುದು ನಿರ್ಬಂಧಿಸಬೇಡಿ. ನೀವು ಏನೇ ಚಟುವಟಿಕೆಗಳಲ್ಲಿ ಭಾಗವಹಿಸಿದರೂ ಅದು ನಿಮ್ಮ ಆರೋಗ್ಯ ಮತ್ತು ಸ್ವತ್ಛತೆಗೆ ತೊಂದರೆ ಆಗದಿರುವ ಹಾಗೆ ಗಮನ ಇಟ್ಟುಕೊಳ್ಳಿ. ಋತುಸ್ರಾವವು ಕೆಟ್ಟದ್ದಂತೂ ಅಲ್ಲ.  ಅದೇ ರೀತಿ ಅಪವಿತ್ರ, ಅಶುದ್ಧವೂ ಅಲ್ಲ. ಇದು ಸಂತಾನೋತ್ಪತ್ತಿಗಾಗಿ ಮಹಿಳೆಯರಿಗಿರುವ ನೈಸರ್ಗಿಕ ಕ್ರಿಯೆ ಎಂಬುದನ್ನು ನಾವು ತಿಳಿಯೋಣ.

 

ಹೆನಿಟಾ  ಜೋಸ್ನಾ  ಮಿನೇಜಸ್ಪಿಎಚ್‌.ಡಿ ಸಂಶೋಧನ ವಿದ್ಯಾರ್ಥಿನಿ

ಡಾ| ಸೋನಿಯಾ ಆರ್‌. ಬಿ. ಡಿಸೋಜಾ ಪ್ರೊಫೆಸರ್ಮತ್ತು ಮುಖ್ಯಸ್ಥೆ,

ಒಬಿಜಿ ನರ್ಸಿಂಗ್ವಿಭಾಗ ,ಮಣಿಪಾಲ ನರ್ಸಿಂಗ್ಕಾಲೇಜು, ಮಾಹೆ, ಮಣಿಪಾಲ.

ಟಾಪ್ ನ್ಯೂಸ್

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.