ನವಜಾತ ಶಿಶು ಮತ್ತು ನವಮಾತೆ


Team Udayavani, Oct 8, 2017, 6:15 AM IST

less.jpg

ಚೊಚ್ಚಲ ಮಗುವಿಗೆ ಜನ್ಮ ನೀಡಿರುವ ಟಿನು ಎಂಬಾಕೆ ತನ್ನ ತಾಯ್ತನವನ್ನು (ಎರಡು ತಿಂಗಳ ಶಿಶು) ನಿರ್ವಹಿಸಲು ತಾನು ಎಷ್ಟು ಅಸಮಥೆìಯಾಗಿದ್ದೇನೆ ಎಂಬುದನ್ನು ಈಚೆಗೆ ನನ್ನ ಬಳಿ ವರ್ಣಿಸಿದ್ದಳು. ಶಿಶುವನ್ನು ಯಾವಾಗ ಎತ್ತಿಕೊಳ್ಳಬೇಕು ಎಂಬುದು ಆಕೆಗೆ ಗೊತ್ತಿಲ್ಲ, ರಚ್ಚೆ ಹಿಡಿದಿರುವ ಕಂದನನ್ನು ಸಮಾಧಾನಿಸುವುದು ಹೇಗೆ ಎಂಬುದು ತಿಳಿದಿಲ್ಲ. ತನ್ನ ಹಸುಳೆ ಹಸಿವಿನಿಂದ ಅಳುತ್ತಿದೆಯೇ ಅಥವಾ ಅದಕ್ಕೆ ಏನಾದರೂ ಕಿರಿಕಿರಿ ಆಗುತ್ತಿದೆಯೇ ಎಂಬುದನ್ನು ಗುರುತಿಸುವುದು ಕೂಡ ಆಕೆಗೆ ಗೊತ್ತಾಗುತ್ತಿಲ್ಲವಂತೆ. ನೆರೆಹೊರೆಯ ಗೃಹಿಣಿಯರು ಆಗಾಗ “ಹಾಗೆ ಎತ್ತಿಕೋ’, “ಹೀಗೆ ಹಾಲೂಡು’ ಎಂಬೆಲ್ಲ ಉಚಿತ ಸಲಹೆಗಳ ಮೂಲಕ ಸದಾ ಆಕೆಯನ್ನು ಗೊಂದಲಗೊಳಿಸುತ್ತಾರೆ. ಟಿನು ಮಗುವನ್ನು ಒಂದು ಬಗೆಯಲ್ಲಿ ಎತ್ತಿಕೊಂಡರೆ, “ಹಾಗಲ್ಲ, ಹಾಗೆ ಎತ್ತಿಕೊಂಡರೆ ಮಗುವಿಗೆ ಹಾನಿಯಾಗುತ್ತದೆ’ ಎಂದು ಯಾರಾದರೊಬ್ಬರು ಹೆದರಿಸುತ್ತಾರೆ. ಹೆಚ್ಚು ಹೆಚ್ಚು ಇಂತಹ ಸಲಹೆಗಳು ಸಿಕ್ಕಿದಂತೆಲ್ಲ ಟಿನುವಿಗೆ ತಾನು ಅಸಮರ್ಥ ತಾಯಿ ಎಂಬ ಭಾವನೆ ಹೆಚ್ಚುತ್ತದೆ, ಆಕೆ ಇನ್ನಷ್ಟು ಹೆದರುತ್ತಿದ್ದಾಳೆ. ತನ್ನ ಕಂದನನ್ನು ಅರ್ಥ ಮಾಡಿಕೊಳ್ಳುವುದು ತನಗೆ ಸಾಧ್ಯವಾಗುತ್ತಿಲ್ಲವಲ್ಲ ಅಥವಾ ಒಳ್ಳೆಯ ತಾಯಿಯಾಗುವುದು ಹೇಗಪ್ಪ ಎಂಬೆಲ್ಲ ಕಳವಳಗಳು ಆಕೆಯನ್ನು ಮುತ್ತಿಕೊಂಡಿವೆ. 

ಇಂದಿನ ಜಗತ್ತಿನಲ್ಲಿ ಲಭ್ಯವಿರುವ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಮತ್ತು ಇಂಟರ್‌ನೆಟ್‌ ಮೂಲಕ ಸುಲಭವಾಗಿ ಲಭ್ಯವಿರುವ ಮಾಹಿತಿಯ ಗಣಿಯ ಹೊರತಾಗಿಯೂ ಚೊಚ್ಚಲ ಮಗುವಿನ ತಾಯಂದಿರು ಅಥವಾ ನವಮಾತೆಯರು ತಮ್ಮ ಶಿಶುಗಳ ಲಾಲನೆ ಪಾಲನೆಯಲ್ಲಿ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂಬುದರಲ್ಲಿ ಅಚ್ಚರಿಯೇನೂ ಇಲ್ಲ. ನವಜಾತ ಶಿಶುಗಳ ಆರೈಕೆ, ಲಾಲನೆ ಪಾಲನೆ ಸುಲಭವೇನೂ ಅಲ್ಲ! ಶಿಶುಗಳು ಸಂಕೀರ್ಣ ಜೀವಿಗಳು, ಅವರು ಜನ್ಮಜಾತ ಮನೋಭಾವಗಳನ್ನು ಹೊಂದಿರುತ್ತಾರೆ ಹಾಗೂ ಅತ್ಯಂತ ಎಳೆಯ ಕಂದಮ್ಮಗಳು ಕೂಡ ತಮ್ಮ ತಾಯಿಯ ಬಳೆ ಸದ್ದು, ಗೆಜ್ಜೆ ಸದ್ದುಗಳಿಗೆ ತಲೆ ಹೊರಳಿಸುವ ಮೂಲಕ; ಅಸಂತುಷ್ಟವಾಗಿದ್ದಾಗ ಮುಖ ಸಿಂಡರಿಸುವ ಮೂಲಕ ಮತ್ತು ಸಂತೋಷಗೊಂಡಾಗ ನಗುವ ಮೂಲಕ ತಮ್ಮ ಪ್ರತಿಕ್ರಿಯೆ ಮತ್ತು ಆಸಕ್ತಿಗಳನ್ನು ವ್ಯಕ್ತಪಡಿಸುತ್ತಾರೆ. 

ಎನ್‌ಐಸಿಯುನಲ್ಲಿ ಮಕ್ಕಳು ಹಾಗೂ ಕುಟುಂಬಗಳ ಜತೆಗೆ ಕೆಲಸ ಮಾಡುವ ಔದ್ಯೋಗಿಕ ಚಿಕಿತ್ಸಕಿಯಾಗಿ, ನವಜಾತ ಶಿಶುಗಳ ಲಾಲನೆ ಪಾಲನೆಯ ಇಂತಹ ಸಮಸ್ಯೆಗಳು ನಿರ್ಣಾಯಕ ಸಂದರ್ಭಗಳಿಗೆ ಮಾತ್ರ ಸೀಮಿತವಲ್ಲ; ದೈನಿಕ ಚಟುವಟಿಕೆಗಳ ಸಂದರ್ಭದಲ್ಲೂ ಉಂಟಾಗುತ್ತವೆ ಎಂಬುದರ ಅರಿವು ನನಗಿದೆ. ತಾಯಿ – ಮಗುವಿನ ಸಂವಹನವು ಒಮ್ಮುಖವಾದುದಲ್ಲ, ಬದಲಾಗಿ ಅದು ತಾಯಿ-ಮಗು ಇಬ್ಬರನ್ನೂ ಹಾಗೂ ಅವರ ಸಂಬಂಧವನ್ನು ಬಹುರೀತಿಗಳಲ್ಲಿ ಪ್ರಭಾವಿಸುತ್ತದೆ. 

ನವಮಾತೆಯರ ಪಾಲಿಗೆ, ಅವರ ಶಿಶುಗಳ ಆರೈಕೆಯು ಅವರ ದೈನಿಕ ಬೇಕುಬೇಡಗಳನ್ನು ನೋಡಿಕೊಳ್ಳುವುದು, ಮಗು ಸುರಕ್ಷಿತವಾಗಿರುವಂತೆ ಹಾಗೂ ಪೌಷ್ಟಿಕವಾಗಿರುವಂತೆ ನೋಡಿಕೊಳ್ಳುವುದನ್ನು ಒಳಗೊಂಡಿವೆ. ಮಕ್ಕಳ ದಿನಚರಿಯು ತಾಯಂದಿರ ದಿನಚರಿಯ ಭಾಗವಾಗಿಬಿಡುತ್ತದೆ ಮತ್ತು ತಾಯಿ ಪ್ರತಿದಿನ ನಡೆಸುವ ಚಟುವಟಿಕೆಗಳ ಒಂದು ಪ್ರಾಮುಖ್ಯ ಅಂಗವಾಗಿ ರೂಪುಗೊಳ್ಳುತ್ತದೆ. ಈ ಚಟುವಟಿಕೆಗಳು ಮಹಿಳೆಯೊಬ್ಬಳಿಗೆ ತಾಯಿಯಾಗಿ ಪರಿವರ್ತನೆ ಹೊಂದುವ ಮಾನಸಿಕ ಪರಿವರ್ತನೆಗೆ ಸಹಾಯ ಮಾಡುತ್ತವೆ. ಈ ಆವಶ್ಯಕತೆಗಳನ್ನು ಪೂರೈಸಲು ತನಗೆ ಸಾಧ್ಯವಾಗುತ್ತಿಲ್ಲ ಎಂಬ ಭಾವನೆಯು ನವಮಾತೆಯಲ್ಲಿ ಅಸಹಾಯಕತೆ, ಅಸಮರ್ಥತೆ ಹಾಗೂ ಅಸಂತೃಪ್ತಿಯನ್ನು ಹುಟ್ಟುಹಾಕಿ ನವಮಾತೆಯರಲ್ಲಿ ತಾಯ್ತನವೆಂಬುದರ ಋಣಾತ್ಮಕ ಅನುಭವಕ್ಕೆ ಕಾರಣವಾಗುತ್ತದೆ. 

ಹಾಗಾದರೆ ತಾಯಂದಿರು ಏನು ಮಾಡಬಹುದು?
ತಮ್ಮ ನವಜಾತ ಶಿಶುಗಳ ಬಗ್ಗೆ ಕಲಿತುಕೊಳ್ಳಲು ಹಾಗೂ ಅವರನ್ನು ಅರ್ಥ ಮಾಡಿಕೊಳ್ಳಲು ನವಮಾತೆಯರು ಇರಿಸಬಹುದಾದ ಅನೇಕ ದೊಡ್ಡ ಮತ್ತು ಸಣ್ಣ ಹೆಜ್ಜೆಗಳಿವೆ.

ನಿಮ್ಮ  ಶಿಶುವನ್ನು ತಿಳಿಯಿರಿ ಹಾಗೂ ಅದರ ನಡವಳಿಕೆಯನ್ನು ಗೌರವಿಸಿ ನಿಮ್ಮ ಮಗುವಿನ ನಡವಳಿಕೆ ಹಾಗೂ ಸೂಚನೆಗಳನ್ನು ಸೂಕ್ಷ್ಮವಾಗಿ ಗಮನಿಸುವುದು ನಿಮ್ಮ ಮಗುವನ್ನು ಅರ್ಥ ಮಾಡಿಕೊಳ್ಳುವ ಅತ್ಯಂತ ಉತ್ತಮ ಮಾರ್ಗ. ಶಿಶುಗಳು ನೋವು ಅನುಭವಿಸುತ್ತಿರುವಾಗ ಅವುಗಳು ತಮಗಾಗುತ್ತಿರುವ ಕಿರಿಕಿರಿ, ಅಸೌಖ್ಯವನ್ನು ದೇಹದ ಬಣ್ಣ- ಮುಖ್ಯವಾಗಿ ಕೆಂಬಣ್ಣಕ್ಕೆ ಪರಿವರ್ತನೆ, ರಚ್ಚೆ ಹಿಡಿದು ಅಳುವುದು, ಅಸಹಜ ಉಸಿರಾಟ ಮತ್ತು ಮುಖ ಸಿಂಡರಿಸುವ ಮೂಲಕ ಪ್ರದರ್ಶಿಸುತ್ತವೆ. ಅವು ಸೌಖ್ಯ – ಸಂತೋಷದಿಂದಿರುವಾಗ ತಮ್ಮ ಸುತ್ತಲ ಪರಿಸರಕ್ಕೆ ಪ್ರತಿಕ್ರಿಯಿಸುವುದು, ಆಟವಾಡುವುದು, ಚಟುವಟಿಕೆಯಿಂದಿರುವುದು ಹಾಗೂ ಸಹಜ ಉಸಿರಾಟ ಪ್ರಕ್ರಿಯೆ ಇತ್ಯಾದಿ ಸ್ಥಿರತೆಯ ಲಕ್ಷಣಗಳನ್ನು ಪ್ರದರ್ಶಿಸುತ್ತವೆ. ಒತ್ತಡ ಮತ್ತು ಸ್ಥಿರತೆಯ ಈ ಸೂಚನೆಗಳನ್ನು ಗಮನಿಸುವ ಮೂಲಕ ತಾಯಂದಿರು ತಮ್ಮ ಶಿಶುವಿಗೆ ಯಾವುದರಿಂದಾಗಿ ಕಿರಿಕಿರಿ ಉಂಟಾಗುತ್ತಿದೆ ಅಥವಾ ಯಾವುದು ಅದನ್ನು ಸಂತುಷ್ಟಗೊಳಿಸುತ್ತಿದೆ ಎಂಬುದನ್ನು ಕಂಡುಕೊಳ್ಳಬಹುದು. ಆ ಮೂಲಕ ತಮ್ಮ ಮಗುವಿಗೆ ನೆರವಾಗಲು ಅವರು ಮುಂದಾಗಬಹುದು. 

ಸೂಚನೆ ಆಧರಿಸಿದ ಹಾಲೂಡುವಿಕೆ
ತಾಯಂದಿರು ಸಾಮಾನ್ಯವಾಗಿ ತಮ್ಮ ಶಿಶುವಿನ ಪೌಷ್ಟಿಕತೆಯ ಬಗ್ಗೆ ಕಳವಳಪಡುತ್ತಾರೆ; ಹೀಗಾಗಿ ವೇಳಾಪಟ್ಟಿ ಆಧರಿಸಿ ಹಾಲೂಡುವ ಪದ್ಧತಿಯನ್ನು ಅನುಸರಿಸುತ್ತಾರೆ. ಇದನ್ನು “ವೇಳಾಪಟ್ಟಿ ಆಧರಿತ ಹಾಲೂಡುವಿಕೆ’ ಎಂದು ಕರೆಯುತ್ತಾರೆ, ಇದರಲ್ಲಿ ಸಾಮಾನ್ಯವಾಗಿ ಎರಡು ಅಥವಾ ಮೂರು ತಾಸುಗಳ ಅಂತರದಲ್ಲಿ ಹಾಲೂಡಲಾಗುತ್ತದೆ. ಆದರೆ ಎಷ್ಟೋ ಬಾರಿ ತಾಯಿ ಹಾಲೂಡಲು ಪ್ರಯತ್ನಿಸುವಾಗ, ಅದು ನಿದ್ದೆಯ ಮಂಪರಿನಲ್ಲಿರಬಹುದು ಅಥವಾ ಅದಕ್ಕೆ ಹಸಿವಾಗದೆ ಇರಬಹುದು; ಆಗ ಅದು ಹಾಲೂಡುವುದಕ್ಕೆ ಸಹಕರಿಸುವುದಿಲ್ಲ. 

ನವಮಾತೆಯರು ಇದರ ಬಗ್ಗೆ ವಿಶೇಷವಾಗಿ ತಲೆಕೆಡಿಸಿಕೊಳ್ಳುತ್ತಾರೆ ಹಾಗೂ ನಿಗದಿತ ಸಮಯಕ್ಕೆ ತಮ್ಮ ಶಿಶುವಿಗೆ ಹಾಲೂಡಿಸದೆ ಇರುವುದರಿಂದ ತಾವು ಬಹುದೊಡ್ಡ ತಪ್ಪು ಮಾಡುತ್ತಿದ್ದೇವೆ ಎಂದು ಭಾವಿಸುತ್ತಾರೆ. 
ನವಮಾತೆಯರು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕಾದ್ದೇನೆಂದರೆ, ನವಜಾತ ಶಿಶುಗಳು ಮತ್ತು ಹಸುಳೆಗಳು ಸೂಚನೆಗಳನ್ನು ಕೊಡುತ್ತವೆ; ಉದಾಹರಣೆಗೆ, ಹಸಿವಾದಾಗ ಅದನ್ನು ಹೆಬ್ಬೆಟ್ಟು, ಬೆರಳುಗಳು ಅಥವಾ ಕಾಲೆºರಳುಗಳನ್ನು ಚೀಪುವ ಮೂಲಕ ಅಥವಾ ನಾಲಗೆ, ತುಟಿಗಳ ಚಲನೆಯ ಮೂಲಕ ಸೂಚಿಸುತ್ತವೆ. ಈ ಸೂಚನೆಗಳನ್ನು ಅರ್ಥ ಮಾಡಿಕೊಂಡು, ಅವರಿಗೆ ಹಸಿವಾದಾಗ ಆಹಾರ ನೀಡುವತ್ತ ತಾಯಂದಿರು ಗಮನ ಹರಿಸಬೇಕು.

ಭರವಸೆಯ ಸ್ಪರ್ಶ
ಭರವಸೆಯ ಸ್ಪರ್ಶವು ಒಂದು ಪ್ರಾಮುಖ್ಯ ಅಂಶವಾಗಿದ್ದು, ಮಕ್ಕಳ ಬೆಳವಣಿಗೆಯಲ್ಲಿ ಪೂರಕವಾಗಿ ಒದಗುತ್ತದೆ. ಭರವಸೆಯ ಸ್ಪರ್ಶವು ಮಗುವನ್ನು ಎತ್ತಿಕೊಳ್ಳುವ ಸಂದರ್ಭದಲ್ಲಿ ಮಾತ್ರವೇ ಅಲ್ಲ; ನ್ಯಾಪಿ ಬದಲಾಯಿಸುವಾಗ, ಎಣ್ಣೆ ಹಚ್ಚಿ ತಿಕ್ಕುವಾಗ, ಸ್ನಾನ ಮಾಡಿಸುವಾಗ, ಮುದ್ದಾಡುವಾಗ, ಹಾಲೂಡಿಸುವಾಗ ಹಾಗೂ ತಟ್ಟಿ ಮಲಗಿಸುವಾಗ ಕೂಡ ನಿಮ್ಮ ಸ್ಪರ್ಶ ಭರವಸೆಯ ಸ್ಪರ್ಶವಾಗಿರಬೇಕು. ಒಟ್ಟಾರೆಯಾಗಿ ಹೇಳಬೇಕೆಂದರೆ, ಮಗುವನ್ನು ನೀವು ಯಾವಾಗ ಸ್ಪರ್ಶಿಸಿದರೂ ಆ ಸ್ಪರ್ಶ ದೃಢ, ನಿಧಾನ ಮತ್ತು ಮೃದುವಾದುದಾಗಿರಬೇಕು. ಇದು ಮಗುವಿಗೆ ಸೌಖ್ಯಭಾವದಿಂದಿರಲು ನೆರವಾಗುತ್ತದೆ. 
 
ಶಿಶುಗಳು ಕೆಲವೊಮ್ಮೆ ಸ್ಪರ್ಶಕ್ಕೆ ಋಣಾತ್ಮಕವಾಗಿ ಸ್ಪಂದಿಸುತ್ತವೆ. ವಿಶೇಷ ವಾಗಿ ಸ್ಪರ್ಶವು ಒರಟಾಗಿದ್ದಾಗ, ಅನಿರೀಕ್ಷಿತವಾಗಿದ್ದಾಗ ಅಥವಾ ಶೀತಲವಾಗಿದ್ದಾಗ ಹೀಗಾಗುತ್ತದೆ. ಶಿಶುಗಳ ಲಾಲನೆ ಪಾಲನೆ ಮಾಡುವಾಗ, ಅವುಗಳ ಸ್ಪರ್ಶದ ಇಷ್ಟಾನಿಷ್ಟಗಳ ಬಗ್ಗೆ ಹೆತ್ತವರು ಎಚ್ಚರ ವಹಿಸಬೇಕು. ಅಲ್ಲದೆ, ತಮಗೆ ಸಿಗುತ್ತಿರುವ ಸ್ಪರ್ಶದಿಂದ ತಮಗೆ ಕಿರಿಕಿರಿ ಉಂಟಾಗುತ್ತಿದ್ದರೆ ಹಸುಳೆಗಳು ಕೊಸರಾಡುವುದು ಅಥವಾ ಅಸಂತುಷ್ಟಿಯ ಸೂಚನೆಗಳನ್ನು ನೀಡುತ್ತವೆ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಿ. 

ಕಂದಮ್ಮಗಳ ಜತೆಗೆ ವರ್ತನೆ
ತಾಯಿ – ಮಗುವಿನ ಪರಸ್ಪರ ವರ್ತನೆಗಳು ಶಿಶುಗಳ ಸಂವೇದನೆಯ ಶಕ್ತಿ ಮತ್ತು ಸಾಮಾಜಿಕ ಬೆಳವಣಿಗೆ ಮಾತ್ರವಲ್ಲದೆ ತಾಯಿ-ಮಗುವಿನ ಪಾರಸ್ಪರಿಕ ಸಂಬಂಧ ಮತ್ತು ಬಂಧಗಳಿಗೂ ಪೂರಕವಾಗಿರುತ್ತವೆ. ಈ ಪಾರಸ್ಪರಿಕ ಬಂಧವನ್ನು ತನ್ನ ಮಗುವಿನ ಜತೆಗೆ ಸ್ಥಾಪಿಸಿಕೊಂಡಾಗ ತಾಯಿ ತಾನು ಸಮಥೆì ಎಂಬ ಭಾವನೆಯನ್ನು ಹೊಂದುತ್ತಾಳೆ, ಅದು ಆಕೆಯ ಪಾಲಿಗೆ ಬಹು ನಿರ್ಣಾಯಕವಾದದ್ದು. ಮಗುವಿಗೆ ಉಣ್ಣಿಸುವಾಗ ಮತ್ತು ಅದರ ಜತೆಗೆ ಆಟವಾಡುವಾಗ  ಮಗುವಿನ ಜತೆಗೆ ಮಾತನಾಡುವುದು ಪರಸ್ಪರ ಸಂವೇದನೆ ಮತ್ತು ವರ್ತನೆ ಹಾಗೂ ಸಂವಹನ ಪ್ರಕ್ರಿಯೆಗೆ ನೆರವಾಗುತ್ತದೆ. ಹಾಗಾಗಿ ಉಣ್ಣಿಸುವುದು ಮತ್ತು ಮುದ್ದಾಡುವ ಸಮಯವು ತಾಯಿ – ಶಿಶುವಿನ ಬಂಧವನ್ನು ಆರಂಭಿಸಲು ಅತ್ಯಂತ ಮುಖ್ಯ ಸಮಯ; ಈ ತಾಯಿ – ಮಗು ಬಂಧವು ಮಗುವಿನ ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಪೂರಕವಾಗುತ್ತದಲ್ಲದೆ ನವಮಾತೆಯರನ್ನೂ ಸಮರ್ಥರನ್ನಾಗಿಸುತ್ತದೆ. 

ಪರಿಸರ
ಗೋಚರ ಪರಿಸರವು ವ್ಯಕ್ತಿಯ ಬದುಕಿನಲ್ಲಿ ಅತ್ಯಂತ ಪ್ರಾಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ದೃಶ್ಯ-ಶ್ರವಣ ಆಕರ್ಷಣೆಗಳಿಂದ ಕೂಡಿದ್ದು, ಇಂದ್ರಿಯ ಹಾಗೂ ಚಲನ ಅನುಭವಗಳನ್ನು ಒದಗಿಸುವ; ಮುಖ್ಯವಾಗಿ ಗೋಲಕ ಮತ್ತಿತರ ಆಟಿಕೆಗಳಿಂದ ಕೂಡಿದ ಸಮೃದ್ಧ ಪರಿಸರವು ಮಗುವಿನ ಆಟವಾಡುವ ಸ್ವಭಾವಕ್ಕೆ ಪೂರಕವಾಗಿರುವುದಲ್ಲದೆ ಇತರ ಬೆಳವಣಿಗೆಯ ಅಂಶಗಳಿಗೂ ನೆರವಾಗುತ್ತದೆ. ತುಂಬಾ ಶೀತಲ ಅಥವಾ ತುಂಬಾ ತಾಪದಿಂದ ಕೂಡಿರುವ ವಾತಾವರಣವು ಮಗುವಿಗೆ ಕಿರಿಕಿರಿ ಉಂಟುಮಾಡುತ್ತದೆ, ಏಕೆಂದರೆ ಅಂತಹ ವಾತಾವರಣಕ್ಕೆ ಒಗ್ಗಿಕೊಳ್ಳುವುದು ಶಿಶುವಿಗೆ ಕಠಿನವಾಗುತ್ತದೆ. 

ಹೀಗಾಗಿ ಮನೆಮಂದಿ ಮಗುವಿಗೆ ಹಿತವಾದ ಬೆಚ್ಚನೆಯ ವಾತಾವರಣವನ್ನು ಒದಗಿಸಲು ಕಾಳಜಿ ವಹಿಸಬೇಕು. ಸೆಖೆಯ ವಾತಾವರಣದಲ್ಲಿ ಹಸುಳೆಗಳು ತೀವ್ರವಾಗಿ ಬೆವರಬಹುದು ಮತ್ತು ಚಳಿಯಲ್ಲಿ ಅವುಗಳ ದೇಹ ನೀಲಿಬಣ್ಣಕ್ಕೆ ತಿರುಗಬಹುದು ಯಾ ಮೈ ನವಿರೇಳಬಹುದು. ಬಾಹ್ಯ ಪರಿಸರಕ್ಕೆ ಅನುಗುಣವಾಗಿ ಮಗುವಿನ ಪರಿಸರದ ಉಷ್ಣತೆಯ ನಿಯಂತ್ರಣ ಸಾಧ್ಯವಿಲ್ಲ ಎಂದಾದರೆ ಮಗುವನ್ನು ಬಟ್ಟೆಯಿಂದ ಸುತ್ತಿ ಬೆಚ್ಚಗಿರಿಸಲು ತಾಯಿಗೆ ತಿಳಿದಿರಬೇಕು ಮತ್ತು ಪ್ರಯಾಣದಂತಹ ಸಂದರ್ಭಗಳಲ್ಲಿ ಶಿಶುವಿನ ದೇಹೋಷ್ಣವನ್ನು ಕಾಪಾಡಿಕೊಳ್ಳಲು ಇದು ಬಹಳ ಮುಖ್ಯವಾಗಿ ತಾಯಂದಿರಿಗೆ ಗೊತ್ತಿರಬೇಕು. ಒಟ್ಟಾರೆಯಾಗಿ, ಎಳೆಯ ಹಸುಳೆಗಳ ಲಾಲನೆ ಪಾಲನೆಯು ಸುಲಭವಾದುದಲ್ಲ; ಆದರೆ ಅದು ನವಮಾತೆಯರಿಗೆ ತೀರಾ ಒತ್ತಡದಾಯಕವೂ ಆಗಿರಬಾರದು. 

ಸರಳವಾದ ಬದಲಾವಣೆಗಳನ್ನು ಮಾಡಿಕೊಳ್ಳುವುದು ಮತ್ತು ಮಗುವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಅದರತ್ತ ಕಿವಿಗೊಡುವುದು ನವತಾಯಂದಿರಿಗೆ ತಾಯ್ತನದ ಬಗೆಗೆ ಕಲಿಯಲು ಅತ್ಯಂತ ಉತ್ತಮ ಮಾರ್ಗವಾಗಿದೆ. ಬಹಳ ಮುಖ್ಯವಾಗಿ, ನವಮಾತೆಗೆ ತನ್ನ ಶಿಶುವಿನ ಜತೆಗೆ ಹೊಂದಿಕೊಳ್ಳುವುದು ಕಷ್ಟ ಎನಿಸಿದಲ್ಲಿ ಆಕೆ ಈ ವಿಚಾರದಲ್ಲಿ ಸಹಾಯ ಮಾಡಬಹುದಾದ ವೃತ್ತಿಪರರ ಸಲಹೆ, ಸಹಾಯ ಪಡೆಯುವುದು ಸೂಕ್ತವಾಗಿದೆ. ಇಂತಹ ಸಹಾಯ – ಸಲಹೆಗಳಲ್ಲಿ ಮಕ್ಕಳ ವೈದ್ಯರು, ವೈದ್ಯರು ಮತ್ತು ಔದ್ಯೋಗಿಕ ಚಿಕಿತ್ಸಕರು ಸೇರಿದ್ದಾರೆ. ನೆನಪಿಡಿ – ಮಗುವಿಗೆ ಜನ್ಮ ಕೊಟ್ಟಾಗ ತಾಯಿಯೂ ಜನಿಸುತ್ತಾಳೆ, ಹೀಗಾಗಿ ಇದೊಂದು ಕಲಿಕೆಯ ಅನುಭವ ಮತ್ತು ಕಲಿಯುತ್ತಾ ಕಲಿಯುತ್ತಾ ನೀವು ಅದನ್ನು ಕರಗತ ಮಾಡಿಕೊಳ್ಳುತ್ತೀರಿ.

“”ನವಜಾತ ಶಿಶುಗಳು ಮತ್ತು ಹಸುಳೆಗಳಿಗೆ ಮಾತನಾಡಲು ಸಾಧ್ಯವಿಲ್ಲವಾದರೂ ಅವು ತಮ್ಮ ಬೇಕು ಬೇಡಗಳನ್ನು ಸೂಚನೆಗಳ ಮೂಲಕ ವ್ಯಕ್ತಪಡಿಸುತ್ತವೆ. ಕ್ಷಣಕ್ಷಣಕ್ಕೂ ಈ ಹಿಂದಿಗಿಂತ ಚೆನ್ನಾಗಿ ಮಗುವನ್ನು ಗಮನಿಸಿ, ಲಾಲಿಸಿ, ಪಾಲಿಸಿ.”

– ಡಾ| ರೂಪಾಂಬಿಕಾ ಸಾಹೂ   
ಅಕ್ಯೂಪೇಶನಲ್‌ ತೆರಫಿ ವಿಭಾಗ
SOAHS ಮಣಿಪಾಲ.

ಟಾಪ್ ನ್ಯೂಸ್

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.