ಲಕ್ವಾ: ಅಪಾಯಕರ ಅಂಶಗಳು, ಪೂರ್ವ ಸೂಚನೆಗಳು, ಚಿಕಿತ್ಸೆಯ ಸಮಯ
Team Udayavani, Oct 28, 2018, 6:00 AM IST
“”ಅದು ನಡೆದುಹೋಗಿತ್ತು. ನನಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ನನ್ನ ತುಟಿಗಳಿಂದ ಹೊರಡುತ್ತಿದ್ದ ಸದ್ದು ಬ್‌ಬ್‌ಬ್ ಮಾತ್ರ, ಏನೇ ಮಾಡಿದರೂ ಅದನ್ನಷ್ಟೇ ಉಸುರಲು ನನಗೆ ಸಾಧ್ಯವಾಗುತ್ತಿತ್ತು. ನಾನು ನೋಡನೋಡುತ್ತಿದ್ದಂತೆ ದೂರವಾಣಿ ನನ್ನ ಕೈಯ ಹಿಡಿತದಿಂದ ಜಾರಿತು, ನಾನು ಕೂಡ ಕುರ್ಚಿಯಿಂದ ನಿಧಾನವಾಗಿ ಜಾರಿ ಮೇಜಿನ ಹಿಂದೆ ನೆಲದಲ್ಲಿ ಬಿದ್ದೆ. ಆ ಜನವರಿ ತಿಂಗಳ ಮುಸ್ಸಂಜೆ 5.15ರ ವರೆಗೆ ನಾನೊಬ್ಬ ವ್ಯಕ್ತಿಯಾಗಿದ್ದೆ; ಈಗ, 6.45ರ ಹೊತ್ತಿಗೆ ನಾನು ರೋಗಿಯಾಗಿ ಬದಲಾಗಿದ್ದೆ.”
“ಮಿಸ್ಟರ್ ಬ್ಲಾಂಡಿಂಗ್ಸ್ ಬಿಲ್ಡ್ ಹಿಸ್ ಡ್ರೀಮ್ ಹೌಸ್’ನಂತಹ ಕಾದಂಬರಿಗಳನ್ನು ಬರೆದ ಅಮೆರಿಕನ್ ಕಾದಂಬರಿಗಾರ ಎರಿಕ್ ಹಾಜಿಂಗ್ಸ್ ಅವರ ಬರಹವಿದು. 1960ರ ಕಾಲಘಟ್ಟದಲ್ಲಿ ಲಕ್ವಾ ಆಘಾತಕ್ಕೆ ಒಳಗಾಗಿ ಬಳಿಕ ಭಾಗಶಃ ಚೇತರಿಸಿಕೊಂಡ ಅವರು ಬರೆದದ್ದಿದು. ಇದರಲ್ಲಿ ಅವರು ವರ್ಣಿಸಿದ ಲಕ್ವಾದ ಚಿಹ್ನೆಗಳು ಇಂದಿಗೂ ನಿಜವಾಗಿವೆ.
ನಮ್ಮ ಮಿದುಳು ನಮ್ಮ ಬುದ್ಧಿಮತ್ತೆ, ಸಾಮರ್ಥ್ಯ, ಗುಣನಡತೆ, ಹಾಸ್ಯ, ವಿನೋದ, ವ್ಯಕ್ತಿತ್ವ ಮತ್ತು ನಮ್ಮನ್ನು ಮನುಷ್ಯರನ್ನಾಗಿ ಗುರುತಿಸಬಹುದಾದ ಲಕ್ಷಣಗಳಿಗೆಲ್ಲ ಸಂಪೂರ್ಣ ಕಾರಣವಾಗಿವೆ. ಮಿದುಳಿನ ಕಾರ್ಯಚಟುವಟಿಕೆಗಳನ್ನು ಕಳೆದುಕೊಳ್ಳುವುದೆಂದರೆ ಮನುಷ್ಯತ್ವ ನಷ್ಟವಾದಂತೆಯೇ. ಇದರಿಂದ ಮನುಷ್ಯ ಇತರರ ಮೇಲೆ ಅವಲಂಬಿತನಾಗುತ್ತಾನೆ. ಲಕ್ವಾದ ಕ್ಷಿಪ್ರ ಗುರುತಿಸುವಿಕೆ ಮತ್ತು ತಡೆಗಟ್ಟುವಿಕೆಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡರೆ ಈ ಗಂಭೀರ ಆದರೆ ಚಿಕಿತ್ಸೆಗೆ ಒಳಪಡಿಸಬಹುದಾದ ಆರೋಗ್ಯ ಸಮಸ್ಯೆ ಹೊಂದಿರುವ ರೋಗಿಗಳಿಗೆ ಉತ್ತಮ ಫಲಿತಾಂಶ ದೊರಕಿಸಿಕೊಡಲು ಸಾಧ್ಯವಿದೆ.
ಅಭಿವೃದ್ಧಿಶೀಲ ದೇಶಗಳಲ್ಲಿ ಲಕ್ವಾ ಬಾಧೆ ಸಾಂಕ್ರಾಮಿಕ ಕಾಯಿಲೆಯ ಸ್ವರೂಪದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಾಗತಿಕವಾಗಿ ವರ್ಷವೊಂದಕ್ಕೆ 1.5 ಕೋಟಿ ಮಂದಿ ಲಕ್ವಾ ಆಘಾತಕ್ಕೆ ಒಳಗಾಗುತ್ತಾರೆ. ಲಕ್ವಾ ಆಘಾತಕ್ಕೆ ಒಳಗಾಗುವವರಲ್ಲಿ ಮೂರನೇ ಎರಡರಷ್ಟು ಮಂದಿ ನಮ್ಮಂತಹ ಕಡಿಮೆ ಮತ್ತು ಮಧ್ಯಮ ತಲಾದಾಯ ಹೊಂದಿರುವ ದೇಶಗಳಲ್ಲಿಯೇ ಇದ್ದಾರೆ. ಜಾಗತಿಕವಾಗಿ ಪ್ರತೀ 33 ಸೆಕೆಂಡುಗಳಿಗೆ ಓರ್ವನಂತೆ ಮಿದುಳು ಆಘಾತ/ ಲಕ್ವಾಕ್ಕೆ ಒಳಗಾಗುತ್ತಾರೆ ಮತ್ತು ಪ್ರತೀ ಮೂರು ನಿಮಿಷಕ್ಕೊಬ್ಬರಂತೆ ಲಕ್ವಾದಿಂದ ಸಾವನ್ನಪ್ಪುತ್ತಾರೆ. ಭಾರತದಲ್ಲಿ ಪ್ರತೀ ವರ್ಷ ಪ್ರತೀ ಒಂದು ಲಕ್ಷ ಜನಸಂಖ್ಯೆಗೆ 262ರಿಂದ 424 ಮಂದಿ ಲಕ್ವಾ ಪೀಡಿತರಾಗುತ್ತಾರೆ.
ಜಗತ್ತಿನ ಬಹುತೇಕ ದೇಶಗಳಲ್ಲಿ ಲಕ್ವಾ ಆಘಾತವು ತೃತೀಯ ಅತಿ ದೊಡ್ಡ ಮೃತ್ಯು ಕಾರಣವಾಗಿದೆ. ಇದಕ್ಕಿಂತ ಮೇಲಿನೆರಡು ಸ್ಥಾನಗಳಲ್ಲಿ ಇರುವುದು ಹೃದ್ರೋಗಗಳು ಮತ್ತು ಕ್ಯಾನ್ಸರ್ ಮಾತ್ರ. ಆದರೆ ಲಕ್ವಾದ ಬಹಳ ಮುಖ್ಯವಾದ ಮತ್ತು ಗಂಭೀರ ಪರಿಣಾಮವೆಂದರೆ ದೀರ್ಘಕಾಲಿಕ ವೈಕಲ್ಯ. ಲಕ್ವಾವು ಪೀಡಿತರ ಸ್ವಾವಲಂಬನೆಯನ್ನು ಕಸಿದುಕೊಳ್ಳುವ ಮೂಲಕ ಅವರಿಗೂ ಅವರ ಕುಟುಂಬಗಳಿಗೂ ಆಘಾತವನ್ನು ಉಂಟು ಮಾಡುತ್ತದೆ. ಲಕ್ವಾ ಆಘಾತಕ್ಕೆ ಒಳಗಾಗಿ ಬದುಕುಳಿಯುವವರಿಗೆ ತಮ್ಮ ಉದ್ಯೋಗಕ್ಕೆ ಮರಳುವುದು ಅಥವಾ ಪತಿ/ಪತ್ನಿ, ಹೆತ್ತವರು, ಗೆಳೆಯ/ಗೆಳತಿ ಮತ್ತು ನಾಗರಿಕರಾಗಿ ತಮ್ಮ ಪಾತ್ರವನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಅಸಾಧ್ಯವಾಗುತ್ತದೆ. ಲಕ್ವಾ ಆಘಾತದ ಆರ್ಥಿಕ, ಸಾಮಾಜಿಕ ಮತ್ತು ಮಾನಸಿಕ ಪರಿಣಾಮಗಳು ಬಹಳ ದುಬಾರಿಯಾಗಿರುತ್ತವೆ.
ಮಿದುಳಿಗೆ ಸರಬರಾಜು ವಿಫಲವಾದಾಗ ಲಕ್ವಾ ಅಥವಾ ಮಿದುಳು ಆಘಾತವು ಸಂಭವಿಸುತ್ತದೆ. ರಕ್ತ ಅಥವಾ ಆಮ್ಲಜನಕದ ಸರಬರಾಜು ತೀವ್ರವಾಗಿ ಕುಸಿದಾಗ ನ್ಯೂರಾನ್‌ಗಳು ಅಥವಾ ನರ ಜೀವಕೋಶಗಳು ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತವೆ. ಲಕ್ವಾದಲ್ಲಿ ಸ್ಥೂಲವಾಗಿ ಎರಡು ವಿಭಾಗಗಳಿವೆ: (1) ರಕ್ತದ ಹರಿವು ಕಡಿಮೆಯಾದ ಕಾರಣ ಉಂಟಾದದ್ದು ಮತ್ತು (2) ಮಿದುಳಿನೊಳಗೆ ರಕ್ತಸ್ರಾವ ನಡೆದು ಉಂಟಾದದ್ದು. ಮಿದುಳು ಅಥವಾ ಕುತ್ತಿಗೆಯಲ್ಲಿ ಇರುವ ರಕ್ತನಾಳದಲ್ಲಿ ತಡೆ ಉಂಟಾಗಿ ಸಂಭವಿಸುವ ಇಶೆಮಿಕ್ ಲಕ್ವಾ ಅತ್ಯಂತ ಹೆಚ್ಚು ಸಂಭವಿಸುವಂಥದು ಮತ್ತು ಶೇ.80ರಷ್ಟು ಲಕ್ವಾ ಆಘಾತಗಳಿಗೆ ಇದೇ ಕಾರಣವಾಗಿರುತ್ತದೆ. ಈ ರಕ್ತನಾಳದಲ್ಲಿ ತಡೆಗಳು ಮೂರು ಕಾರಣಗಳಿಂದ ಉಂಟಾಗುತ್ತವೆ (ಎ) ಮಿದುಳು ಅಥವಾ ಕುತ್ತಿಗೆ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ- ಇದನ್ನು ಥ್ರೊಂಬೋಸಿಸ್ ಎನ್ನುತ್ತಾರೆ, (ಬಿ) ಮಿದುಳಿನಂತಹ ದೇಹದ ಇನ್ನೊಂದು ಅವಯವದಿಂದ ಹೆಪ್ಪುಗಟ್ಟಿದ ರಕ್ತ ಮಿದುಳಿಗೆ ರವಾನೆಯಾಗುವುದರಿಂದ ಇದನ್ನು ಎಂಬಾಲಿಸಮ್ ಎನ್ನುತ್ತಾರೆ, (ಸಿ) ಮಿದುಳಿನಲ್ಲಿರುವ ಅಥವಾ ಮಿದುಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳ ಕಿರಿದಾಗುವುದರಿಂದ – ಇದನ್ನು ಸ್ಟೆನೋಸಿಸ್ ಎನ್ನುತ್ತಾರೆ. ಮಿದುಳು ಅಥವಾ ಮಿದುಳಿನ ಸುತ್ತಮುತ್ತಲಿನ ಅವಕಾಶಕ್ಕೆ ರಕ್ತಸ್ರಾವ ಉಂಟಾಗುವುದರಿಂದ ದ್ವಿತೀಯ ವಿಧವಾದ ಲಕ್ವಾ ಸಂಭವಿಸುತ್ತದೆ. ಇದನ್ನು ಹೆಮರೇಜಿಕ್ ಲಕ್ವಾ ಅಥವಾ ಮಿದುಳು ಹೆಮರೇಜ್ ಎನ್ನುತ್ತಾರೆ.
ನಾವು ತೆಗೆದುಕೊಳ್ಳಬಹುದಾದ ಎರಡು ಪ್ರಧಾನ ಹೆಜ್ಜೆಗಳಿಂದ ಲಕ್ವಾ ಆಘಾತದಿಂದ ಉಂಟಾಗಬಹುದಾದ ಮರಣ ಅಥವಾ ಅಂಗವೈಕಲ್ಯದ ಅಪಾಯವನ್ನು ತಗ್ಗಿಸಬಹುದು. ಅವೆಂದರೆ; ಲಕ್ವಾದ ಅಪಾಯಾಂಶಗಳನ್ನು ನಿಯಂತ್ರಿಸುವುದು ಮತ್ತು ಲಕ್ವಾದ ಅಪಾಯ ಮುನ್ಸೂಚನೆಗಳನ್ನು ತಿಳಿದುಕೊಳ್ಳುವುದು.
ಲಕ್ವಾದ ಅಪಾಯ ಮುನ್ಸೂಚನೆಗಳೇನು?
ಮಿದುಳು ಸಾಕಷ್ಟು ಆಮ್ಲಜನಕವನ್ನು ಪಡೆಯುತ್ತಿಲ್ಲ ಎಂಬುದರ ಸುಳಿವುಗಳೇ ಈ ಅಪಾಯ ಮುನ್ಸೂಚನೆಗಳಾಗಿವೆ. ಲಕ್ವಾ ಅಥವಾ ಮಿದುಳು ಆಘಾತದ ಈ ಮುನ್ಸೂಚನೆಗಳಲ್ಲಿ ಒಂದು ಅಥವಾ ಹೆಚ್ಚಿನದನ್ನು ಗಮನಿಸಿದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು ಅಥವಾ ಸನಿಹದ ಆಸ್ಪತ್ರೆಗೆ ಧಾವಿಸಬೇಕು.
. ವಿಶೇಷತಃ ದೇಹದ ಒಂದು ಪಾರ್ಶ್ವದಲ್ಲಿ ಮುಖ, ಕೈ ಅಥವಾ ಕಾಲುಗಳು ಜೋಮು ಹಿಡಿದಂತಾಗುವುದು.
. ಹಠಾತ್ ಗೊಂದಲ ಅಥವಾ ಮಾತನಾಡಲು ಯಾ ಮಾತನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು.
. ಒಂದು ಅಥವಾ ಎರಡೂ ಕಣ್ಣುಗಳಲ್ಲಿ ನೋಡುವುದಕ್ಕೆ ಸಮಸ್ಯೆಯಾಗುವುದು.
. ಹಠಾತ್ತಾಗಿ ನಡೆಯಲು ಕಷ್ಟವಾಗುವುದು, ತಲೆ ತಿರುಗುವುದು ಯಾ ಸಮತೋಲನ ಮತ್ತು ಸಂಯೋಜನೆ ನಷ್ಟವಾಗುವುದು.
. ಯಾವುದೇ ಸ್ಪಷ್ಟ ಕಾರಣವಿಲ್ಲದೆ ಹಠಾತ್ತಾಗಿ ತೀವ್ರ ತಲೆನೋವು ಕಾಣಿಸಿಕೊಳ್ಳುವುದು.
. ಮುಖ ಹಠಾತ್ತಾಗಿ ಒಂದು ಪಾರ್ಶ್ವಕ್ಕೆ ವಾಲುವುದು.
ಭಾರತೀಯ ಲಕ್ವಾ ಸಂಘಟನೆಯು ಲಕ್ವಾದ ಚಿಹ್ನೆಗಳನ್ನು ಗುರುತಿಸಲು ಸರಳ ತಂತ್ರವೊಂದನ್ನು ಶಿಫಾರಸು ಮಾಡುತ್ತದೆ. ನಿಮ್ಮ ಸುತ್ತಮುತ್ತ ಇರುವ ಯಾರಾದರೂ ಲಕ್ವಾ ಆಘಾತಕ್ಕೆ ಒಳಗಾಗ ಬಹುದು ಎಂಬ ಭಾವನೆ ನಿಮಗಿದ್ದರೆ ನೀವು “ಫಾಸ್ಟ್ – FAST’ ಆಗಿ ಕಾರ್ಯಾಚರಿಸಬೇಕು.
F ಫೇಸ್ ಅಥವಾ ಮುಖ: ವ್ಯಕ್ತಿಯನ್ನು ನಗಲು ಹೇಳಿ. ಮುಖ ಒಂದು ಕಡೆಗೆ ಜೋಲುತ್ತದೆಯೇ?
A ಆರ್ಮ್ಸ್ ಅಥವಾ ಕೈಗಳು: ವ್ಯಕ್ತಿಯನ್ನು ಎರಡೂ ಕೈಗಳನ್ನು ಎತ್ತಲು ಹೇಳಿ. ಒಂದು ಕೈ ಕೆಳಮುಖವಾಗಿ ಜೋಲುತ್ತಿದೆಯೇ?
S ಸ್ಪೀಚ್ ಅಥವಾ ಮಾತು: ಸರಳ ವಾಕ್ಯವೊಂದನ್ನು ಪುನರಾವರ್ತಿಸಲು ಹೇಳಿ. ಮಾತು ತೊದಲುತ್ತದೆಯೇ ಅಥವಾ ವಿಚಿತ್ರವಾಗಿ ಕೇಳಿಸುತ್ತದೆಯೇ?
T ಟೈಮ್ ಅಥವಾ ಸಮಯ: ಈ ಚಿಹ್ನೆಗಳಲ್ಲಿ ಯಾವುದಾದರೂ ಒಂದನ್ನು ನೀವು ಗಮನಿಸಿದರೆ, ಅದು ತುರ್ತಿನ ಸಮಯ ಎಂದರ್ಥ, ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂಬುದರ ಸೂಚನೆ.
ಕೆಲವೊಮ್ಮೆ ಈ ಎಚ್ಚರಿಕೆಯ ಸಂಕೇತಗಳು ಕೆಲವು ಕ್ಷಣ ಮಾತ್ರ ಕಂಡುಬಂದು ಬಳಿಕ ಮಾಯವಾಗಬಹುದು. ಈ ಕಿರು ಘಟನೆಗಳನ್ನು ಟ್ರಾನ್ಸಿಯೆಂಟ್ ಇಶೆಮಿಕ್ ಆಘಾತ ಅಥವಾ ಟಿಐಎ ಅಥವಾ “ಮಿನಿ ಲಕ್ವಾ’ ಅಥವಾ “ಎಚ್ಚರಿಕೆಯ ಲಕ್ವಾ’ ಎಂದು ಕರೆಯಲಾಗುತ್ತದೆ. ಕ್ಷಣಮಾತ್ರದವಾಗಿದ್ದರೂ ಅವು ವೈದ್ಯಕೀಯ ಸಹಾಯದ ವಿನಾ ಪರಿಹಾರವಾಗದ ಆಂತರಿಕ ಗಂಭೀರ ಅನಾರೋಗ್ಯದ ಎಚ್ಚರಿಕೆಯ ಸೂಚನೆಗಳಾಗಿರುತ್ತವೆ. ದುರದೃಷ್ಟವಶಾತ್, ಈ ಅಪಾಯದ ಮುನ್ಸೂಚನೆಗಳು ಕಿರು ಅವಧಿಯವಾಗಿರುವುದರಿಂದ ಜನರು ಇವುಗಳನ್ನು ನಿರ್ಲಕ್ಷಿಸುತ್ತಾರೆ. ಕಿರು ಆಘಾತಗಳ ಬಗ್ಗೆ ಗಮನಹರಿಸದೆ ಇರುವುದು ಖಂಡಿತವಾಗಿಯೂ ಗಂಭೀರ, ಬೃಹತ್ ಲಕ್ವಾ ಆಘಾತವನ್ನು ಆಹ್ವಾನಿಸಿಕೊಂಡಂತೆ.
ಮುಂದಿನ ವಾರಕ್ಕೆ
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ:
ಮುಖ್ಯಸ್ಥರು,
ನ್ಯುರಾಲಜಿ ವಿಭಾಗ, ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.