ತೂರಿಕೊಂಡ ಹಲ್ಲಿನ ನಿರ್ವಹಣೆ
Team Udayavani, Sep 22, 2019, 4:33 AM IST
ಬಾಯಿಯಲ್ಲಿ ವಸಡಿನ ನಡುವೆ ತಾನು ಮೂಡಿಬರಬೇಕಾದ ಸ್ಥಳದಲ್ಲಿ ಮೂಡಲು ಸಾಧ್ಯವಾಗದ ಹಲ್ಲುಗಳನ್ನು ತೂರಿಕೊಂಡ ಅಥವಾ ಬಂಧಿತ ಹಲ್ಲು ಎನ್ನುತ್ತಾರೆ. ಕೆಳ ದವಡೆಯ ಮೂರನೆಯ ಅರೆಯುವ ಹಲ್ಲು (ಲೋವರ್ ಥರ್ಡ್ ಮೋಲಾರ್)ಗಳು ಮತ್ತು ಕೋರೆಹಲ್ಲು (ಕ್ಯಾನೈನ್)ಗಳು ಸಾಮಾನ್ಯವಾಗಿ ತೂರಿಕೊಂಡ ಅಥವಾ ಬಂಧಿತ ಹಲ್ಲುಗಳಾಗಿ ಮೂಡಿಬರುತ್ತವೆ. ಈ ಹಲ್ಲುಗಳನ್ನು ಸರಿಯಾದ ಸಮಯದಲ್ಲಿ ಸೂಕ್ತ ನಿರ್ವಹಣೆಗೆ ಒಳಪಡಿಸದೆ ಇದ್ದರೆ ಅವು ಕೆಲವು ಸಂಕೀರ್ಣ ಸಮಸ್ಯೆಗಳನ್ನು ಉಂಟು ಮಾಡಬಲ್ಲವು.
ತೂರಿಕೊಂಡ ಅಥವಾ ಬಂಧಿತ ಕೆಳ ದವಡೆಯ ಮೂರನೆಯ ಅರೆಯುವ ಹಲ್ಲು (ಲೋವರ್ ಥರ್ಡ್ ಮೋಲಾರ್)ಗಳಿಂದ ಉಂಟಾಗಬಲ್ಲ ಕೆಲವು ಸಮಸ್ಯೆಗಳೆಂದರೆ:
1. ಇಂತಹ ಹಲ್ಲುಗಳಿಂದ ಹುಣ್ಣುಗಳು ಮತ್ತು ಗಡ್ಡೆಗಳು ಉಂಟಾಗಬಹುದು. ಕಾಲಾಂತರದಲ್ಲಿ ಇವು ರೋಗಿಗೆ ಹಲವು ಸಮಸ್ಯೆಗಳನ್ನು ತಂದೊಡ್ಡಬಹುದು. ಹುಣ್ಣುಗಳು ಮತ್ತು ಗಡ್ಡೆಗಳು ಇರುವುದರಿಂದ ದವಡೆಯ ಮೂಳೆ ದುರ್ಬಲವಾಗುತ್ತದೆ. ಕೆಲವು ತೀವ್ರ ತೆರನಾದ ಪ್ರಕರಣಗಳಲ್ಲಿ ದವಡೆಯ ಮೂಳೆ ಭಾಗವನ್ನು ತೆಗೆದುಹಾಕಬೇಕಾಗಿಯೂ ಬರಬಹುದು.
2. ತೂರಿಕೊಂಡ ಅಥವಾ ಬಂಧಿತ ಹಲ್ಲು ಸಮಯ ಕಳೆದಂತೆ ಜತೆಗಿರುವ ಇತರ ಹಲ್ಲುಗಳು ಹುಳುಕಾಗಲು ಕಾರಣವಾಗಬಹುದು. ಇದರಿಂದ ಇತರ ಹಲ್ಲುಗಳಿಗೂ ಹಾನಿಯಾಗುತ್ತದೆ.
3. ತೂರಿಕೊಂಡ ಅಥವಾ ಬಂಧಿತ ಹಲ್ಲು ಸೋಂಕಿಗೊಳಗಾಗಬಹುದು. ಜತೆಗೆ ಜೀವಕ್ಕೆ ಮಾರಕವಾಗಬಲ್ಲ ಸೋಂಕುಗಳ ಪ್ರಸರಣಕ್ಕೂ ಕಾರಣವಾಗಬಹುದು.
4. ತೂರಿಕೊಂಡ ಅಥವಾ ಬಂಧಿತ ಹಲ್ಲುಗಳು ತಾವಾಗಿ ಹುಳುಕಾಗಬಹುದು ಮತ್ತು ಸಮಸ್ಯೆಗಳನ್ನು ಉಂಟು ಮಾಡಬಹುದು.
5. ತೂರಿಕೊಂಡ ಅಥವಾ ಬಂಧಿತ ಹಲ್ಲು ಎಲುಬಿಗೆ ಸೋಂಕು ಉಂಟು ಮಾಡಬಹುದು.
6. ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು.
7. ಬಾಯಿ ತೆರೆದುಕೊಳ್ಳುವುದು ಕಡಿಮೆಯಾಗುವಂತೆ ಮಾಡಬಹುದು.
ಬಂಧಿತ ಅಥವಾ ತೂರಿಕೊಂಡ ಹಲ್ಲು ಯಾವುದೇ ತೊಂದರೆಯನ್ನು ಉಂಟು ಮಾಡದೆ ಇದ್ದರೂ ಎಕ್ಸ್‌ರೇಗಳು, ವೈದ್ಯಕೀಯ ತಪಾಸಣೆಯ ಮೂಲಕ ಅದರ ಬಗ್ಗೆ ನಿಯಮಿತವಾಗಿ ನಿಗಾ ಇರಿಸಿಕೊಳ್ಳುವುದು ಕಡ್ಡಾಯವಾಗಿದೆ.
ಯಾವುದೇ ವ್ಯಕ್ತಿಗೆ ತೂರಿಕೊಂಡ ಅಥವಾ ಬಾಧಿತ ಹಲ್ಲನ್ನು ತೆಗೆದುಹಾಕಬೇಕಿದ್ದರೆ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸಾ ತಜ್ಞರು ಆ ಕೆಲಸ ಮಾಡುತ್ತಾರೆ. ಹಾಗಾಗಿ ನಿಮಗೆ ತೂರಿಕೊಂಡ ಅಥವಾ ಬಂಧಿತ ಹಲ್ಲು ಇದ್ದರೆ ನೀವು ಆದಷ್ಟು ಬೇಗನೆ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸಾ ತಜ್ಞರನ್ನು ಸಂಪರ್ಕಿಸಬೇಕು.
-ಡಾ| ಆನಂದ್ ದೀಪ್ ಶುಕ್ಲಾ ,
ಅಸೊಸಿಯೇಟ್ ಪ್ರೊಫೆಸರ್
ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.