ವೈದ್ಯಕೀಯದ ಕಣ್ಣುಗಳಿದ್ದಂತೆ ರೇಡಿಯಾಲಜಿ ವಿಭಾಗ
Team Udayavani, Jun 28, 2022, 11:30 AM IST
ಪ್ರತೀ ರೋಗಿಯ ವಿವಿಧ ಇಮೇಜಿಂಗ್‌ಗಳು, ರೋಗ ಪತ್ತೆ, ಚಿಕಿತ್ಸೆ ಮತ್ತು ಚಿಕಿತ್ಸೆಯ ಬಳಿಕದ ಫಾಲೊಅಪ್‌ನ ಅವಿಭಾಜ್ಯ ಅಂಗವಾಗಿರುವ ವಿಭಾಗವೇ ರೇಡಿಯಾಲಜಿ. ರೋಗಿಯ ಆರೈಕೆಯಲ್ಲಿ ಎಲ್ಲ ವಿಧವಾದ ನೆರವು ನೀಡುವುದಕ್ಕೆ ಅನುಕೂಲಕರವಾದ ಉತ್ಕೃಷ್ಟ ಗುಣಮಟ್ಟದ ಮತ್ತು ನಿಖರ ತಂತ್ರಜ್ಞಾನದ ಉಪಕರಣಗಳು ಮತ್ತು ಮಾನವ ಸಂಪನ್ಮೂಲವನ್ನು ಕೆಎಂಸಿ ಆಸ್ಪತ್ರೆಯ ರೇಡಿಯೋ ಡಯಾಗ್ನಸಿಸ್ ಮತ್ತು ಇಮೇಜಿಂಗ್ ವಿಭಾಗವು ಹೊಂದಿದೆ. ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು 1953ರಲ್ಲಿ ಡಾ| ಟಿ.ಎಂ.ಎ. ಪೈ ಅವರಿಂದ ಸ್ಥಾಪಿಸಲ್ಪಟ್ಟಿತು. ಆ ಬಳಿಕ ಅದು ವೈದ್ಯಕೀಯ ಶಾಸ್ತ್ರದ ಪ್ರತೀ ವಿಭಾಗದಲ್ಲಿಯೂ ಉತ್ಕೃಷ್ಟತೆಯನ್ನು ಮತ್ತು ಅತ್ಯುನ್ನತ ಗುಣಮಟ್ಟವನ್ನು ಸಾಧಿಸಿ, ಕಾಪಾಡಿಕೊಂಡು ಬಂದಿದೆ. 1962ರಲ್ಲಿ ಮಣಿಪಾಲ ಕೆಎಂಸಿಯಲ್ಲಿ ರೇಡಿಯೋ ಡಯಾಗ್ನಸಿಸ್ ಮತ್ತು ಇಮೇಜಿಂಗ್ ವಿಭಾಗವನ್ನು ಸ್ಥಾಪಿಸಲಾಯಿತು.
ಕರ್ನಾಟಕದಲ್ಲಿ ಸಿಟಿ ಸ್ಕ್ಯಾನರ್ ಹೊಂದಿದ್ದ ಮೊತ್ತಮೊದಲನೆಯ ಮತ್ತು ಪ್ಯಾಕ್ಸ್ ವ್ಯವಸ್ಥೆಯನ್ನು ಹೊಂದಿದ್ದ ದಕ್ಷಿಣ ಭಾರತದ ಎರಡನೆಯ ಘಟಕ ಅದಾಗಿತ್ತು. ಆ ಬಳಿಕ ಇಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಆವಶ್ಯಕತೆಗಳನ್ನು ಪೂರೈಸಲು ಹಾಗೂ ರೋಗಿಗಳ ಚಿಕಿತ್ಸೆಯ ಅಗತ್ಯಗಳನ್ನು ಈಡೇರಿಸುವಲ್ಲಿ ಅಲ್ಲಿಂದೀಚೆಗೆ ಈ ವಿಭಾಗವು ಗರಿಷ್ಠ ಮಟ್ಟದಲ್ಲಿ ಪ್ರಯತ್ನಗಳನ್ನು ನಡೆಸುತ್ತ ಬಂದಿದೆ. ಪ್ರಸ್ತುತ ನಾವಿಲ್ಲಿ ಸ್ನಾತಕೋತ್ತರ ಕೋರ್ಸ್ ಆಗಿರುವ ಎಂಡಿ ರೇಡಿಯೋ ಡಯಾಗ್ನಸಿಸ್ ಒದಗಿಸುತ್ತಿದ್ದೇವೆ. ಇದಲ್ಲದೆ, ವೈದ್ಯಕೀಯ ಶಾಸ್ತ್ರದ ವಿವಿಧ ಶಾಖೆಗಳನ್ನು ಒಳಗೊಂಡ ಬಹು ವಿಭಾಗೀಯ ಅಧ್ಯಯನಗಳಲ್ಲಿ ಪಾಲುಗೊಳ್ಳುತ್ತಿದ್ದೇವೆ. ವಿಭಾಗವು ಅನೇಕ ಸಂಶೋಧನ ಚಟುವಟಿಕೆಗಳು, ಶೈಕ್ಷಣಿಕ ಉಪಕ್ರಮಗಳು, ಅಂತರ್ ವಿಭಾಗೀಯ ಬೋಧನೆಗಳು ಮತ್ತು ಪಾಲುದಾರಿಕೆಗಳಲ್ಲಿ ಕೂಡ ಭಾಗಿಯಾಗುತ್ತಿದೆ. ಮೆಡಿಕಲ್ ಇಮೇಜ್ ಪ್ರೊಸೆಸಿಂಗ್‌ನಲ್ಲಿ ಫಿಲಿಪ್ಸ್ ನಂತಹ ಕಂಪೆನಿಗಳ ಜತೆಗೆ ಶೈಕ್ಷಣಿಕ- ಸಂಶೋಧನ ಒಪ್ಪಂದವನ್ನು ಕೂಡ ನಾವು ಹೊಂದಿದ್ದೇವೆ.
ವಿಭಾಗವು ಅತ್ಯುಚ್ಚ ದರ್ಜೆ, ಅತ್ಯುತ್ಕೃಷ್ಟ ತಂತ್ರಜ್ಞಾನದ ಉಪಕರಣಗಳನ್ನು ಹೊಂದಿದ್ದು, ಜತೆಗೆ ನುರಿತ ರೇಡಿಯಾಲಜಿ ತಜ್ಞರನ್ನು ಮತ್ತು ಪರಿಣಿತ ರೇಡಿಯೋಗ್ರಾಫರ್ ಅನ್ನು ಹೊಂದಿದೆ. ಎರಡು ಸಿಟಿ ಸ್ಕ್ಯಾನ್ ಮಶಿನ್‌ಗಳು, 2 ಎಂಆರ್‌ಐ ಸ್ಕ್ಯಾನರ್‌ಗಳು, 15 ಅಲ್ಟ್ರಾಸೌಂಡ್ ಸ್ಕ್ಯಾನರ್‌ಗಳು, ಉತ್ಕೃಷ್ಟ ದರ್ಜೆಯ ತಂತ್ರಜ್ಞಾನ ಹೊಂದಿರುವ ಫುರೊಸ್ಕೊಪಿ ಸೂಟ್ ಮತ್ತು ಕ್ಯಾಥ್ ಲ್ಯಾಬ್‌ಗಳನ್ನು ನಾವು ಹೊಂದಿದ್ದೇವೆ. ನಮ್ಮ ರೇಡಿಯಾಲಜಿಸ್ಟ್ ಗಳು ರೋಗಿ ಆರೈಕೆಗೆ ನೆರವಾಗುವ ನಿಟ್ಟಿನಲ್ಲಿ ನಿರಂತರ ಮತ್ತು ಕೂಲಂಕಷವಾಗಿ ವಿವಿಧ ರೇಡಿಯಾಲಜಿಕಲ್ ಇಮೇಜ್‌ಗಳನ್ನು ದಾಖ ಲಿಸಿ, ವಿಶ್ಲೇಷಿಸಿ ಅನ್ವಯಗೊಳಿಸುತ್ತಿದ್ದಾರೆ. ಈ ಪ್ರಕ್ರಿಯೆಯು ಅಗತ್ಯವಾದ ಇನ್ನಷ್ಟು ಇಂಟರ್‌ವೆನ್ಶನಲ್ ಡಯಾಗ್ನಸ್ಟಿಕ್ ಮತ್ತು ಚಿಕಿತ್ಸಾತ್ಮಕ ಚಟುವಟಿಕೆಗಳಿಗೆ ವಿಸ್ತರಿಸಿದ್ದು, ಇಂಟರ್‌ವೆನ್ಶನಲ್ ರೇಡಿಯಾಲಜಿ ಎಂಬ ಹೊಸ ಶಾಖೆಯಾಗಿ ಬೆಳೆದಿದೆ. ನಮ್ಮ ವಿಭಾಗವು ಡಯಾಗ್ನಸ್ಟಿಕ್ ಮತ್ತು ಇಂಟರ್‌ವೆನ್ಶನಲ್ ರೇಡಿಯಾಲಜಿಯಲ್ಲಿ ಮುಂಚೂಣಿಯಲ್ಲಿದ್ದು, ಹಲವು ದಾಖಲೆ, ಪ್ರಶಸ್ತಿಗಳನ್ನು ತನ್ನ ಮುಡಿಗೇರಿ ಸಿಕೊಂಡಿದೆ. ನಾವು ಇನ್ನಷ್ಟು ಬೆಳವಣಿಗೆ, ಪ್ರಗತಿ ಹೊಂದುತ್ತಿದ್ದಂತೆ ಈ ಸಬ್‌ಸ್ಪೆಶಾಲಿಟಿಗಳನ್ನು ಫೆಲೋಶಿಪ್ ಕೋರ್ಸ್‌ಗಳನ್ನಾಗಿ ಮಾರ್ಪಡಿಸುವ ಗುರಿಯನ್ನು ಹೊಂದಿದ್ದೇವೆ.
ಕಳೆದ ಹಲವು ವರ್ಷಗಳಿಂದೀಚೆಗೆ ಸಂಧಿ-ಸ್ನಾಯು ಇಮೆಜಿಂಗ್ ಅನ್ನು ಒಂದು ಸಬ್‌ಸ್ಪೆಶಾಲಿಟಿಯನ್ನಾಗಿ ರೂಪಿಸಿದ್ದೇವೆ. ಇದರ ಜತೆಗೆ, ಈ ಹಿಂದೆ ಶಸ್ತ್ರಕ್ರಿಯೆಯ ಮೂಲಕ ಅಥವಾ ಎಂಆರ್‌ಐಯಂತಹ ಉನ್ನತ ಮಟ್ಟದ ಮೂಲಕ ಮಾತ್ರ ಪತ್ತೆ ಮಾಡಲು ಸಾಧ್ಯವಾಗುತ್ತಿದ್ದ ಕೆಲವು ಸಂಧಿ-ಸ್ನಾಯು ಅನಾರೋಗ್ಯಗಳನ್ನು ಪತ್ತೆ ಮಾಡಲು ಮಿತವ್ಯಯದ ಮತ್ತು ಕ್ಷಿಪ್ರವಾದ ವಿಧಾನಗಳನ್ನು ಆವಿಷ್ಕರಿಸುವ ಬಗ್ಗೆ ಗಮನ ಹರಿಸಲು ನಮ್ಮ ವಿಭಾಗದೊಳಗೆ ತಂಡವನ್ನು ರಚಿಸಿಕೊಂಡಿದ್ದೇವೆ. ನಮ್ಮ ವಿಭಾಗದ ಶ್ರೇಷ್ಠ ಗುಣಮಟ್ಟದ ತಜ್ಞತೆಯಿಂದಾಗಿ ಸ್ನಾಯು ಮತ್ತು ಟೆಂಡನ್ ರೋಗಶಾಸ್ತ್ರಕ್ಕೆ ಸಂಬಂಧಿಸಿದ ತೊಂದರೆಗಳನ್ನು ಅಲ್ಟ್ರಾಸೌಂಡ್‌ನಿಂದಲೇ ಗುರುತಿಸುವುದು ಸಾಧ್ಯವಾಗುತ್ತಿದೆ. ಟೆಂಡನ್‌ಗಳಿಗೆ ಸಂಬಂಧಪಟ್ಟ ವಿವಿಧ ಸಮಸ್ಯೆಗಳನ್ನು ಮತ್ತು ಸಂಧಿ ನೋವುಗಳಿಗೆ ಚಿಕಿತ್ಸೆ ನೀಡುವ ಇಂಟ್ರಾ-ಆರ್ಟಿಕ್ಯುಲಾರ್ ಇಂಜೆಕ್ಷನ್ ನೀಡುವಿಕೆ ನಾವು ಸಾಧಿಸಿರುವ ನವೀನ ಚಿಕಿತ್ಸಾ ವಿಧಾನವಾಗಿದೆ.
ಮನುಷ್ಯ ದೇಹದಲ್ಲಿ ತಲುಪಲು ಅತೀ ಕಠಿನವಾದ ಸ್ಥಳಗಳಿಗೆ ಅಲ್ಟ್ರಾಸೌಂಡ್ ಗೈಡೆಡ್ ಇಂಜೆಕ್ಷನ್ ಒದಗಿಸುವ ವಿಧಾನವೂ ನಮ್ಮ ವಿಭಾಗದಲ್ಲಿ ಚಾಲ್ತಿಯಲ್ಲಿದೆ.
ಕೋವಿಡ್-19 ಕಾಲಘಟ್ಟದಲ್ಲಿ ರೇಡಿಯಾಲಜಿ ವಿಭಾಗದ ಸಿಬಂದಿ ಮತ್ತು ವಿದ್ಯಾರ್ಥಿಗಳು ಅಮೂಲ್ಯ ಸಹಾಯ ಮತ್ತು ನೆರವು ಒದಗಿಸಿದರು. ಕಳೆದ ಎರಡು ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಬಿಕ್ಕಟ್ಟು ನಿಭಾವಣೆಯಲ್ಲಿ ನಮ್ಮ ವಿಭಾಗವು ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದೆ. ರೋಗಿ ಹೊರೆ ಹೆಚ್ಚಳವನ್ನು ಕಡಿಮೆ ಮಾಡುವುದಕ್ಕಾಗಿ ನಾವು ಕೋವಿಡ್ ಐಸಿಯು ಪಾಳಿಗಳನ್ನು ಕೂಡ ನಿರ್ವಹಿಸಿದ್ದೇವೆ. ಕೋವಿಡ್-19 ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಭಾಗಿಯಾದ ಕೆಲವೇ ಪ್ರಾಥಮಿಕ ಸ್ಪೆಶಾಲಿಟಿಗಳಲ್ಲಿ ನಮ್ಮದು ಕೂಡ ಒಂದಾಗಿತ್ತು. ಎಲ್ಲ ಆರೋಗ್ಯ ಸೇವಾ ವೃತ್ತಿಪರರು ಕೋವಿಡ್ ರೋಗಿಗಳ ಆರೈಕೆಯಲ್ಲಿ ತೊಡಗಿರುವಂತೆಯೇ ರೇಡಿಯೋಗ್ರಾಫರ್‌ಗಳು ಮತ್ತು ತಂತ್ರಜ್ಞರು ಕೂಡ ಪಿಪಿಇ ಕಿಟ್ ಧರಿಸಿ, ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತ ಕೋವಿಡ್ ರೋಗಿಗಳ ಆರೈಕೆಯಲ್ಲಿ ತೊಡಗಿಕೊಂಡರು.
ಮಣಿಪಾಲ ಕೆಎಂಸಿಯ ಶಾಖೆಯಾಗಿರುವ ಉಡುಪಿ ಟಿಎಂಎ ಪೈ ಆಸ್ಪತ್ರೆಯು ಉಡುಪಿ ಜಿಲ್ಲೆಯ ಎಲ್ಲ ಕೋವಿಡ್-19 ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ಒದಗಿಸುವ ಕರ್ನಾಟಕ ಸರಕಾರದ ವಿನಂತಿಗೆ ಒಪ್ಪಿಕೊಂಡಿತ್ತು. ನಮ್ಮ ವೈದ್ಯರು ಮತ್ತು ರೇಡಿಯೋಗ್ರಾಫರ್‌ಗಳು ಟಿಎಂಎ ಪೈ ಆಸ್ಪತ್ರೆಯಲ್ಲಿ ನಿಯಮಿತವಾಗಿ ಕರ್ತವ್ಯ ನಿರ್ವಹಣೆಗೆ ನಿಯೋಜನೆಗೊಂಡು ರೋಗಿ- ಆರೋಗ್ಯ ಸೇವಾ ಸಿಬಂದಿಯ ಅನುಪಾತ ಕುಸಿಯದಂತೆ ಸಹಕರಿಸಿದರು.
ಕೋವಿಡ್-19 ಸಾಂಕ್ರಾಮಿಕದ ದ್ವಿತೀಯ ಅಲೆಯ ಸಂದರ್ಭದಲ್ಲಿ ತಲೆದೋರಿದ್ದ ಮ್ಯುಕೋರ್ಮೈಕೋಸಿಸ್ (ಕಪ್ಪು ಫಂಗಸ್) ಸಮಸ್ಯೆಯನ್ನು ನಿಭಾಯಿಸಿ ಚಿಕಿತ್ಸೆ ಒದಗಿಸುವಲ್ಲಿ ಕೂಡ ರೇಡಿಯೋಲಜಿ ವಿಭಾಗದ ನೆರವು ಅತ್ಯುಪಯುಕ್ತ ಎನಿಸಿದ್ದು ನಮ್ಮ ವಿಭಾಗದ ಕಿರೀಟಕ್ಕೆ ಮಕುಟಪ್ರಾಯವಾಗಿದೆ.
ನಮ್ಮ ವಿದ್ಯಾರ್ಥಿಗಳು ಮತ್ತು ತಜ್ಞರ ಶೈಕ್ಷಣಿಕ ಮತ್ತು ಸಹಶೈಕ್ಷಣಿಕ ಕೌಶಲಗಳನ್ನು ಪೋಷಿಸುವ ಮೂಲಕ ಅವರ ಸಮಗ್ರ ಬೆಳವಣಿಗೆಗೆ ಕಾರಣವಾಗುವುದರಲ್ಲಿ ನಮ್ಮ ವಿಭಾಗವು ನಂಬಿಕೆ ಇರಿಸಿಕೊಂಡಿದೆ. ಇದಕ್ಕೆ ಅನುಗುಣವಾಗಿ ನಮ್ಮ ವಿಭಾಗವು ವಿದ್ಯಾರ್ಥಿಗಳು ಮತ್ತು ವೈದ್ಯರ ಶೈಕ್ಷಣಿಕ ಮತ್ತು ಇತರ ಆಸಕ್ತಿಗಳಿಗೆ ಸಂಬಂಧಿಸಿದ ವಿವಿಧ ಬಗೆಯ ಬೋಧನ ತರಗತಿಗಳನ್ನು ಆಯೋಜಿಸುತ್ತ ಬಂದಿದೆ. ಸೆಮಿನಾರ್‌ಗಳು, ಕ್ವಿಜ್ ಕಾರ್ಯಕ್ರಮಗಳು, ಉಪನ್ಯಾಸಗಳು ಮತ್ತು ಸಿಎಂಇಗಳು ಇದರಲ್ಲಿ ಸೇರಿವೆ. ಇವುಗಳನ್ನು ಆಫ್ಲೈನ್ ಮತ್ತು ಆನ್‌ಲೈನ್- ಎರಡೂ ವಿಧಾನಗಳಲ್ಲಿ; ಆಗಾಗ ಅಂತರ್‌ವಿಭಾಗೀಯ ಮಟ್ಟದಲ್ಲಿ ನಡೆಸಲಾಗುತ್ತಿದೆ. ಇವೆಲ್ಲವುಗಳಿಂದಾಗಿ ಅತ್ಯುತ್ತಮ ರೇಡಿಯಾಲಜಿ ವೈದ್ಯರಗಳನ್ನು ಹೊಂದಿರುವುದು ನಮಗೆ ಸಾಧ್ಯವಾಗಿದೆ.
ರೋಗಿಗಳ ಆಸ್ಪತ್ರೆ ವಾಸ ಅವಧಿಯನ್ನು ಕಡಿಮೆ ಮಾಡಿ ಗುಣ ಹೊಂದುವ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸುವಲ್ಲಿ ನಾವು ಸತತ ಶ್ರಮ ವಹಿಸುತ್ತಿದ್ದೇವೆ.
-ಡಾ| ಚೇತನ್‌ಕುಮಾರ್ ಎಂ.
ಅಸಿಸ್ಟೆಂಟ್ ಪ್ರೊಫೆಸರ್, ರೇಡಿಯೋಡಯಾಗ್ನಸಿಸ್ ವಿಭಾಗ,
ಕೆಎಂಸಿ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.