ಒಂದೇ ಆರೋಗ್ಯದ ಪರಿಕಲ್ಪನೆ
Team Udayavani, Nov 3, 2019, 4:19 AM IST
ಮನುಷ್ಯರಲ್ಲಿ ಕಂಡುಬರುವ ಶೇ.60ರಷ್ಟು ಸಾಂಕ್ರಾಮಿಕ ರೋಗಗಳು ಪ್ರಾಣಿಗಳಿಂದ, ಪ್ರಾಣಿ ಮೂಲಗಳಿಂದ ಹರಡುವಂಥವು. ನಮಗೆ ತಿಳಿದಂತೆ ಮಾನವ-ಪರಿಸರ-ಪ್ರಾಣಿಗಳ ನಡುವೆ ಸದಾ ಪರಸ್ಪರ ಒಬ್ಬರನ್ನೊಬ್ಬರು ಅವಲಂಬಿಸಿಕೊಂಡಿರುವ ಸಂಕೀರ್ಣ ಸಂಬಂಧಗಳಿವೆ. ಪರಿಸರ ಸಮತೋಲನ, ಪ್ರಾಣಿಗಳ ಆರೋಗ್ಯ- ಮಾನವ ಆರೋಗ್ಯ ಒಂದೇ ವರ್ತುಲದಲ್ಲಿರುತ್ತವೆ. ಇವುಗಳನ್ನು ನಿಭಾಯಿಸುವಲ್ಲಿ ಒಂದೇ ಆರೋಗ್ಯ ದೃಷ್ಟಿಕೋನ ಅಗತ್ಯವಾಗಿದೆ.
ಪರಿಸರದೊಂದಿಗಿನ ಈ ಸಂಕೀರ್ಣ ಸಂಬಂಧಗಳಿಗೆ ಧಕ್ಕೆ ಉಂಟಾದಾಗ ಹೊಸಹೊಸ ಕಾಯಿಲೆಗಳು ಪ್ರಾಣಿಗಳಲ್ಲಿ ಮತ್ತು ಪ್ರಾಣಿಜನ್ಯ ಕಾಯಿಲೆಗಳು ಮಾನವನಲ್ಲಿ ಹರಡುತ್ತವೆ. ಪ್ರಪಂಚದಾದ್ಯಂತ ಪ್ರತೀ ವರ್ಷ ಸುಮಾರು ಐದು ಹೊಸ ಸೋಂಕು ಕಾಯಿಲೆಗಳು ಪ್ರಾಣಿ ಮೂಲಗಳಿಂದ ಮನುಷ್ಯರಲ್ಲಿ ಕಂಡುಬರುತ್ತಿವೆ. ಇತ್ತೀಚೆಗೆ ಕಂಡು ಬಂದ ಮಂಗನ ಕಾಯಿಲೆ, ಹಕ್ಕಿ ಜ್ವರ, ನಿಫಾ ಜ್ವರ, ಮಾರ್‌ಬರ್ಗ್ ಜ್ವರಗಳಲ್ಲದೆ ಹಿಂದಿನಿಂದಲೂ ಇದ್ದ ಹುಚ್ಚುನಾಯಿ ಕಡಿತದಿಂದ ಬರುವ ರೇಬಿಸ್ ರೋಗ, ಕುದುರೆಗಳಿಂದ ಬರುವ ಗ್ಲಾಂಡರ್ಸ್ ರೋಗ, ಜಾನುವಾರುಗಳಿಂದ ಬರುವ ಕ್ಷಯ ರೋಗ, ಬ್ರೂಸೆಲೋಸಿಸ್, ಹಂದಿ-ಪಕ್ಷಿಗಳಿಂದ ಬರುವ ಮೆದುಳು ಜ್ವರ, ಇಲಿ ಮತ್ತು ಇತರ ಸಾಕುಪ್ರಾಣಿಗಳಿಂದ ಬರಬಹುದಾದ ಇಲಿ ಜ್ವರ -ಇವುಗಳನ್ನು ಕೇವಲ ಮನುಷ್ಯರ ವೈದ್ಯರಿಂದ ಮಾತ್ರ ತಡೆಗಟ್ಟಲು, ನಿಯಂತ್ರಿಸಲು ಸಾಧ್ಯವಾಗದು. ಇದಕ್ಕಾಗಿ ಪಶುವೈದ್ಯರ, ಪರಿಸರ ತಜ್ಞರ, ವನ್ಯಜೀವಿ ತಜ್ಞರ ಸಾರ್ವಜನಿಕ ಆರೋಗ್ಯ ತಜ್ಞರ, ಸೂಕ್ಷ್ಮಾಣು ಜೀವಿ ತಜ್ಞರ, ಕೀಟಶಾಸ್ತ್ರಜ್ಞರ ಸಂಘಟಿತ ಪ್ರಯತ್ನದ ಅಗತ್ಯವಿದೆ. ಅಂತಹ ಒಂದು ತಜ್ಞರ ಕಾರ್ಯಪಡೆ ಪ್ರತೀ ಜಿಲ್ಲೆಯಲ್ಲಿ ಇರುವುದು ಈಗ ಅಗತ್ಯವಾಗಿದೆ.
ಒಂದೇ ಆರೋಗ್ಯದ ಚಿಂತನೆ
ಈ ಒಂದೇ ಆರೋಗ್ಯದ ಚಿಂತನೆ ನೂರಾರು ವರ್ಷಗಳಷ್ಟು ಹಳೆಯದಾದರೂ ಈ ಸಂಘಟಿತ ಪ್ರಯತ್ನಗಳ ಗಂಭೀರ ಚಿಂತನೆ ಆರಂಭವಾಗಿದ್ದು 2000 ಇಸವಿಯ ಅನಂತರದ ವರ್ಷಗಳಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರದ ಬಳಿಕ. ಈ ತಜ್ಞರ ಸಂಘಟಿತ ಪ್ರಯತ್ನದಿಂದ ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ ಉನ್ನತಗೊಳಿಸುವುದು ಮತ್ತು ಪರಿಸರ ಹಾನಿ ಕಡಿಮೆಗೊಳಿಸುವುದು ಮುಖ್ಯ ಉದ್ದೇಶವಾಗಿದೆ. ಇದೇ ಉದ್ದೇಶದಲ್ಲಿ ಗಂಭೀರವಾದ ಅಂತಾರಾಷ್ಟ್ರೀಯ ಚಿಂತನೆಗಳು, ಸಭೆಗಳು 2006ರಲ್ಲಿ ಚೀನದಲ್ಲಿ, 2007ರಲ್ಲಿ ಭಾರತದಲ್ಲಿ, 2008ರಲ್ಲಿ ಈಜಿಪ್ಟ್ನಲ್ಲಿ, 2009ರಲ್ಲಿ ಕೆನಡಾದಲ್ಲಿ ಮತೆು¤ ವಿಶ್ವದಾದ್ಯಂತ ನಡೆದವು. ಈ ಎಲ್ಲ ಸಭೆಗಳಲ್ಲಿ ವೈದ್ಯರ, ಪಶುವೈದ್ಯರ, ಸಾರ್ವಜನಿಕ ಆರೋಗ್ಯದ ತಜ್ಞರ, ಪರಿಸರ ತಜ್ಞರ, ಕೀಟಶಾಸ್ತ್ರಜ್ಞರ ಸಂಘಟಿತ ಸ್ಥಳೀಯ, ಪ್ರಾಂತೀಯ ಮತ್ತು ದೇಶೀಯ ಸಕ್ರಿಯ ಕಾರ್ಯಪಡೆ ಇರಬೇಕಾದ ಬಗ್ಗೆ ಒತ್ತು ನೀಡಲಾಗಿದೆ. ಇದನ್ನು ಸರಕಾರಗಳಿಗೆ ಮನದಟ್ಟು ಮಾಡಲು ಪ್ರತೀ ವರ್ಷ ನವೆಂಬರ್ 3ರಂದು ಅಂತಾರಾಷ್ಟ್ರೀಯ ಒಂದೇ ಆರೋಗ್ಯ ಪರಿಕಲ್ಪನೆ ದಿನವೆಂದು ಆಚರಿಸಲಾಗುತ್ತಿದೆ.
ಮಾನವ ಜನಸಂಖ್ಯೆ ಹೆಚ್ಚಾದಂತೆ, ಮಾನವ ಮತ್ತು ಪ್ರಾಣಿಗಳ ಪರಸ್ಪರ ಸಾಮೀಪ್ಯ ಹೆಚ್ಚಾಗುತ್ತದೆ. ಜನರು ವಾಸಕ್ಕಾಗಿ, ವ್ಯವಸಾಯಕ್ಕಾಗಿ, ಹೈನುಗಾರಿಕೆಗಾಗಿ ಕಾಡಿನ ಪ್ರದೇಶಗಳನ್ನು ಒತ್ತುವರಿ ಮಾಡಿಕೊಳ್ಳುವುದರಿಂದ, ಅತಿಕ್ರಮಣ ಮಾಡುವುದರಿಂದ ಕಾಡಿನಲ್ಲಿಯೇ ಇರುವ ರೋಗಾಣುಗಳ, ಕೀಟಾಣುಗಳ ಸಂಪರ್ಕಕ್ಕೆ ನೇರವಾಗಿ ಅಥವಾ ಇತರ ಪ್ರಾಣಿಗಳ ಮೂಲಕ ಬರುವುದರಿಂದ ಸಮುದಾಯದಲ್ಲಿ ಹೊಸ ರೋಗಗಳು ಕಾಣಿಸಿಕೊಳ್ಳುತ್ತವೆ. ಕರ್ನಾಟಕದ ಪಶ್ಚಿಮ ಘಟ್ಟದ ನಾಲ್ಕು ಜಿಲ್ಲೆಗಳಲ್ಲಿ ಕಳೆದ ಎರಡು ದಶಕಗಳಲ್ಲಿ 20 ಸಾವಿರ ಹೆಕ್ಟೇರ್‌ಗಿಂತ ಹೆಚ್ಚು ಅರಣ್ಯ ಪ್ರದೇಶಗಳು ನಾಶವಾಗಿವೆ ಮತ್ತು ಇದು ಜೀವ ವೈವಿಧ್ಯಕ್ಕೆ ಪೆಟ್ಟು ನೀಡಿದೆ. ಕಾಡಿನಂಚಿನಲ್ಲಿ ವಾಸಿಸುವ ಜನರ ಜಾನುವಾರುಗಳು ಹುಲ್ಲು ಮೇಯಲು ಕಾಡಿಗೆ ಹೋಗಿ ಕಾಡಿನ ಗಿಡ-ಮರಗಳ ಸಂಪರ್ಕದಿಂದ ಮಂಗನ ಕಾಯಿಲೆ ವೈರಸ್ ಸೋಂಕು ತಗುಲಿರುವ ಉಣ್ಣಿಗಳನ್ನು ಮನೆ ಬಾಗಿಲಿಗೆ ತಂದು ಮನೆ ಮಂದಿಗೆ ಮಂಗನ ಕಾಯಿಲೆ ಹರಡಿದ್ದು ಇತ್ತೀಚೆಗೆ ಕಲಿತ ಪಾಠವಾಗಿದೆ. 2018ರ ಮೇ ತಿಂಗಳಿನಲ್ಲಿ ಕೇರಳದ ಕಲ್ಲಿಕೋಟೆ ಮತ್ತು ಮಲ್ಲಪುರಂ ಜಿಲ್ಲೆಗಳಲ್ಲಿ ಕಂಡುಬಂದ ನಿಫಾ ವೈರಸ್ ಸೋಂಕು ಏಕಾಏಕಿ ಹರಡಲು ಆರಂಭಿಸಿದಾಗ ಬೇರೆ ಬೇರೆ ಇಲಾಖೆಯ ಸಂಬಂಧಪಟ್ಟ ತಜ್ಞರ ಇಂತಹ ಸಂಘಟಿತ ಪ್ರಯತ್ನ ರೋಗ ಹರಡುವುದನ್ನು ಶೀಘ್ರ ನಿಯಂತ್ರಣ ತರುವಲ್ಲಿ ಯಶಸ್ವಿಯಾಗಿತ್ತು.
ಸಂಘಟಿತ ಪ್ರಯತ್ನ ಅಗತ್ಯ
ಬಹುಕಾಲದಿಂದ ಮನುಷ್ಯನನ್ನು ಕಾಡುತ್ತಿರುವ ರೇಬಿಸ್‌ನಿಂದ ಪ್ರತೀ ವರ್ಷ ದೇಶದಲ್ಲಿ ಸುಮಾರು 20 ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ. ಒಮ್ಮೆ ಹುಚ್ಚು ನಾಯಿ ಕಡಿತದಿಂದ ಸೋಂಕು ತಗುಲಿದರೆ ಅದಕ್ಕೆ ಚಿಕಿತ್ಸೆ ಇಲ್ಲ ಮತ್ತು ಸಾವು ಖಚಿತ. ಸೋಂಕಿರುವ ನಾಯಿ ಕಚ್ಚಿದಾಗ ಮನುಷ್ಯನಿಗೆ ರೋಗ ಬರದಂತೆ ತಡೆಯುವ ಲಸಿಕೆಗಳು ಇದ್ದರೂ ಎಲ್ಲರೂ ಪಡೆದುಕೊಳ್ಳುತ್ತಿಲ್ಲ ಅಥವಾ ಎಲ್ಲರಿಗೂ ಸಿಗುತ್ತಿಲ್ಲ. ಎಲ್ಲ ಶ್ವಾನಗಳಿಗೆ ಕಡ್ಡಾಯ ಲಸಿಕೆ ಹಾಕುವುದರಿಂದ ರೋಗ ಮನುಷ್ಯನಿಗೆ ಹರಡುವುದನ್ನು ಸಂಘಟಿತ ಪ್ರಯತ್ನದ ಮೂಲಕ ತಡೆಯಬಹುದೆಂದು ನೆರೆಯ ಗೋವಾ ರಾಜ್ಯದಲ್ಲಿ ಇತ್ತೀಚೆಗೆ ಸಾಬೀತುಪಡಿಸಲಾಗಿದೆ. ದೇಶದಲ್ಲಿ ಯಾವುದೇ ಸಮಯದಲ್ಲಿ ಸುಮಾರು 3.5 ಕೋಟಿ ಶ್ವಾನಗಳಿತ್ತವೆ ಎಂದು ಅಂದಾಜು ಮಾಡಲಾಗಿದೆ. ಅವುಗಳಿಗೆ ಉತ್ತಮ ಗುಣಮಟ್ಟದ ಲಸಿಕೆಯನ್ನು ಸರಿಯಾದ ಸಮಯದಲ್ಲಿ ನೀಡುವುದು ಮತ್ತು ಅವುಗಳಲ್ಲಿ ಬೀದಿ ನಾಯಿಗಳನ್ನು ಗುರುತಿಸಿ ಅವುಗಳನ್ನು ಸಂತಾನಹರಣ ಚಿಕಿತ್ಸೆಗೆ ಒಳಪಡಿಸುವಲ್ಲಿ ಇಂತಹ ಸಂಘಟಿತ ಪ್ರಯತ್ನದ ಅಗತ್ಯವಿದೆ. ಹಾಗೆಯೇ ಶಂಕಿತ ಹುಚ್ಚು ನಾಯಿ ಕಚ್ಚಿದ ಎಲ್ಲ ವ್ಯಕ್ತಿಗಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ವಿಧಾನದಲ್ಲಿ ಗುಣಮಟ್ಟದ ಲಸಿಕೆ ನೀಡುವುದು ಅಗತ್ಯವಾಗಿದೆ. ಉದಾಹರಣೆಗಾಗಿ, ಸಂಘಟಿತ ಪ್ರಯತ್ನದ ಪರಿಕಲ್ಪನೆಯ ಅಡಿಯಲ್ಲಿ ಆಸ್ಪತ್ರೆಯಲ್ಲಿ ಇರುವ ವೈದ್ಯರು ಶಂಕಿತ ಹುಚ್ಚು ನಾಯಿ ಕಚ್ಚಿದ ವ್ಯಕ್ತಿಯ ಗಾಯಕ್ಕೆ ಚಿಕಿತ್ಸೆ ಮತ್ತು ವ್ಯಕ್ತಿಗೆ ರೇಬಿಸ್ ಬರದಂತೆ ಲಸಿಕೆ ನೀಡುತ್ತಾರೆ. ಪಶುವೈದ್ಯರು ಸಮುದಾಯದಲ್ಲಿ ಇರುವ ಎಲ್ಲ ಶ್ವಾನಗಳಿಗೆ, ಬೆಕ್ಕುಗಳಿಗೆ ಲಸಿಕೆ ನೀಡುವುದಲ್ಲದೆ ಅಗತ್ಯ ಬಿದ್ದಲ್ಲಿ ಅವುಗಳ ಸಂತಾನಹರಣ ಚಿಕಿತ್ಸೆ ನಡೆಸಿ ಸಂತತಿಯನ್ನು ನಿಯಂತ್ರಣಗೊಳಿಸುತ್ತಾರೆ.
ಪ್ರಯೋಗಾಲಯ ತಜ್ಞರು ಸಮುದಾಯದಲ್ಲಿ ಈ ಪ್ರಾಣಿಗಳ ವಿವಿಧ ಮಾದರಿಗಳಲ್ಲಿ ರೋಗಾಣು ಇದೆಯೇ ಎಂಬುದನ್ನು ಪತ್ತೆ ಹಚ್ಚುತ್ತಾರೆ. ಸಾರ್ವಜನಿಕ ಆರೋಗ್ಯ ತಜ್ಞರು ಯಾವುದೆಲ್ಲ ಮೂಲಗಳಿಂದ ಈ ಖಾಯಿಲೆಗಳು ಸಮುದಾಯದಲ್ಲಿ ಹರಡಬಹುದೆಂದು ಮತ್ತು ಯಾವೆಲ್ಲ ವಿಧಾನಗಳಿಂದ ಈ ಕಾಯಿಲೆಗಳನ್ನು ನಿಯಂತ್ರಿಸಬಹುದೆಂದು ಅಧ್ಯಯನ ನಡೆಸುತ್ತಾರೆ ಮತ್ತು ಮಾಹಿತಿ ನೀಡುತ್ತಾರೆ. ವನ್ಯಜೀವಿ ತಜ್ಞರು ಎಲ್ಲಿ ಯಾವೆಲ್ಲ ಪ್ರಾಣಿಗಳಿಗೆ ಲಸಿಕೆ ನೀಡುವ ಅಗತ್ಯವಿದೆಯೋ ಆ ಬಗ್ಗೆ ಸಲಹೆ ಸಹಕಾರ ನೀಡುತ್ತಾರೆ. ಪರಿಸರ ತಜ್ಞರು ಪರಿಸರದಲ್ಲಿರುವ ಯಾವೆಲ್ಲ ಅಂಶಗಳು ಕಾಯಿಲೆ ಹರಡುವಲ್ಲಿ ನಿರ್ಣಾಯಕಗಳೆಂಬ ಬಗ್ಗೆ ನಿಖರ ಸಲಹೆ ನೀಡುವರು. ಸಮೂಹ ಮಾಧ್ಯಮಗಳು ಜನರಿಗೆ ಈ ಕಾಯಿಲೆ ಬರಬಹುದಾದ ಸಾಧ್ಯತೆಗಳು ಮತ್ತು ಅದನ್ನು ತಡೆಗಟ್ಟುವ ವಿಧಾನದ ಬಗ್ಗೆ ಮಾಹಿತಿ ನೀಡುತ್ತವೆ. ಹೀಗೆ ಈ ಎಲ್ಲ ತಜ್ಞರ ಸಂಘಟಿತ ಪ್ರಯತ್ನದಿಂದ ಸಮುದಾಯದಲ್ಲಿ ರೋಗಗಳನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಬಹುದಾಗಿದೆ.
ಡಾ| ಅಶ್ವಿನಿ ಕುಮಾರ್ ಗೋಪಾಡಿ
ಅಡಿಶನಲ್ ಪ್ರೊಫೆಸರ್
ಕಮ್ಯೂನಿಟಿ ಮೆಡಿಸಿನ್ ವಿಭಾಗ
ಕೆಎಂಸಿ ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.