ವಿಳಂಬವಾಗಿ ಮಾತು ಕಲಿಯುವವರು ನೀವು ತಿಳಿದುಕೊಳ್ಳಬೇಕಾದುದು ಏನು?
Team Udayavani, Aug 30, 2020, 6:00 PM IST
ಸಾಂದರ್ಭಿಕ ಚಿತ್ರ
“ಅಮ್ಮಾ’ ಅಥವಾ ಅದಕ್ಕೆ ಸಮಾನವಾದ ಮಾತೃಭಾಷೆಯ ಮೊದಲ ಪದದ ಉಚ್ಚಾರವನ್ನು ಕನಿಷ್ಠ 1.5 ವರ್ಷ ವಯಸ್ಸಿನ ವರೆಗೂ ಉಪಯೋಗಿಸದ ಮಗುವನ್ನು ವಿಳಂಬವಾಗಿ ಮಾತು ಕಲಿಯುವ ಮಗು ಎನ್ನಬಹುದು. ಭಾರತದಲ್ಲಿ ಪ್ರಸ್ತುತ ವಿಳಂಬವಾಗಿ ಮಾತು ಕಲಿಯುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಶಿಶುವೊಂದು ತಡವಾಗಿ ಮಾತು ಆರಂಭಿಸುವುದಕ್ಕೆ ಹತ್ತು ಹಲವು ಕಾರಣಗಳಿರುತ್ತವೆ.
ಇವುಗಳಲ್ಲಿ ಕೆಲವೆಂದರೆ, ಶ್ರವಣ ಸಾಮರ್ಥ್ಯ ಕಡಿಮೆ ಇರುವುದು, ಶ್ರವಣ ಶಕ್ತಿ ದೋಷ, ಬಾಲ್ಯದ ಸಂವಹನ ವೈಕಲ್ಯಗಳು, ನರಶಾಸ್ತ್ರೀಯ ತೊಂದರೆಗಳು, ವರ್ತನಾತ್ಮಕ ಸಮಸ್ಯೆಗಳು, ಮಾತಿಗೆ ಕಡಿಮೆ ಪ್ರಚೋದನೆ ಇತ್ಯಾದಿ. ಭಾರತದಲ್ಲಿ ಹೆಚ್ಚಿನ ಹೆತ್ತವರು ಅಥವಾ ಅಜ್ಜ-ಅಜ್ಜಿಯಂದಿರು, “ನಾನು ಮಾತು ಕಲಿತುದು ತಡವಾಗಿ; ಹಾಗಾಗಿ ನಮ್ಮ ಮಕ್ಕಳು ಕೂಡ ಮಾತು ಕಲಿಯುವಲ್ಲಿ ವಿಳಂಬವಾಗುತ್ತಿದೆ’, ಅಥವಾ “ಕೆಲವು ಮಕ್ಕಳು ತಡವಾಗಿ ಮಾತನಾಡಲು ಕಲಿಯುತ್ತಾರೆ, ಅದರಲ್ಲಿ ತೊಂದರೆಯೇನೂ ಇಲ್ಲ, ಕಾಯೋಣ’ ಎಂಬುದಾಗಿ ಆಲೋಚಿಸುತ್ತಾರೆ. ಬಹು ಸಾಮಾನ್ಯವಾಗಿರುವ ಇನ್ನೊಂದು ತಪ್ಪು ಕಲ್ಪನೆ ಎಂದರೆ, “ಗಂಡುಮಕ್ಕಳು ಮಾತು ಆರಂಭಿಸುವುದು ನಿಧಾನ, ಇನ್ನಷ್ಟು ದಿನ ಕಾಯೋಣ’ ಎಂಬುದು. “ದೈವ ದೇವರಿಗೆ ಮೊರೆ ಹೋಗೋಣ’, “ಯಾವುದಾದರೂ ಆರೋಗ್ಯ ಪಾನೀಯ ಅಥವಾ ಟಾನಿಕ್ ಕೊಟ್ಟು ನೋಡೋಣ’ ಎಂಬಿತ್ಯಾದಿಯಾಗಿ ಆಲೋಚಿಸುವವರೂ ಇದ್ದಾರೆ. ಇವೆಲ್ಲವೂ ತಪ್ಪು ಕಲ್ಪನೆಗಳಾಗಿದ್ದು, ವಿಳಂಬವಾಗಿ ಮಾತು ಕಲಿಯುತ್ತಿರುವ ಮಗುವಿನ ವಿಚಾರವಾಗಿ ನೀವು ಚೆನ್ನಾಗಿ ಆಲೋಚಿಸಿ ಇದಕ್ಕಿಂತ ಭಿನ್ನವಾಗಿ ಕ್ರಿಯಾಶೀಲರಾಗಬೇಕಾಗುತ್ತದೆ.
ಮಗು ವಿಳಂಬ ಮಾತುಗಾರ ಎಂಬುದನ್ನು ಗುರುತಿಸುವುದು ಹೇಗೆ? : ಮಗು ಜನಿಸಿದಂದಿನಿಂದಲೂ ಮಾತು ಆರಂಭಿಸುತ್ತದೆ. “ಮಗು ಹಸಿದಿದೆ, ಆದ್ದರಿಂದ ಬೇರೆ ತೆರನಾಗಿ ಅಳುತ್ತಿದೆ’ ಎಂಬುದಾಗಿ ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಜನಿಸಿದ ತತ್‌ಕ್ಷಣದಿಂದಲೇ ಶಿಶು ಹಸಿವಾದಾಗ, ನಿದ್ದೆ ಬರುತ್ತಿರುವಾಗ, ಕಿರಿಕಿರಿಯಾದಾಗ ಇತ್ಯಾದಿ ಭಿನ್ನ ಭಿನ್ನ ಸಂದರ್ಭಗಳಲ್ಲಿ ಬೇರೆ ಬೇರೆ ತೆರನಾಗಿ ಅಳುತ್ತವೆ. ಮಗುವಿನ ಹೆತ್ತವರಾಗಿ ನೀವು ಮಗುವಿನ ಜತೆಗೆ ಹೆಚ್ಚು ಸಮಯವನ್ನು ಕಳೆದರೆ ಈ ಭಿನ್ನ ಭಿನ್ನ ಅಳುವಿನ ಶೈಲಿಗಳನ್ನು ನೀವು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಮಗು ಬೆಳೆಯುತ್ತ ಬಂದಂತೆ, ಅದು ಸಂತೋಷಗೊಂಡಾಗ “ಆ’ ಎಂದು ಕಿರುಚುವುದು, ಅದು ನಿಮ್ಮ ಜತೆಗೆ ಏನೋ ಹೇಳಬಯಸುತ್ತಿರುವಂತೆ “ಬಾ, ಬೊ, ಮೊ ಮೊ, ಆಬೂ’ ಎಂದೆಲ್ಲ ಸದ್ದುಗಳನ್ನು ಹೊರಡಿಸುವುದನ್ನು ನೀವು ಕೇಳಿರಬಹುದು.
ನೀವು ಮಗುವಿನ ಜತೆಗೆ ಮಾತುಕತೆ ಹೆಚ್ಚಿಸಿದಂತೆ ಸದ್ದುಗಳನ್ನು ಹೊರಡಿಸುತ್ತ ಆಟವಾಡುವುದು ಇನ್ನಷ್ಟು ಹೆಚ್ಚುತ್ತದೆ. ಮಗುವಿನ ಹೆತ್ತವರಾಗಿ, ನೀವು ಮನಸ್ಸಿನಲ್ಲಿ ಇರಿಸಿಕೊಳ್ಳಬೇಕಾದ್ದು ಏನೆಂದರೆ, ಸಹಜವಾಗಿ ಬೆಳವಣಿಗೆ ಕಾಣುತ್ತಿರುವ ಮಗು ಮೊದಲ ಪದವನ್ನು ಒಂದು ವರ್ಷ ವಯಸ್ಸಿನ ಒಳಗೆ ಉಚ್ಚರಿಸುತ್ತದೆ. ಈಗ ಉದ್ಭವಿಸುವ ಪ್ರಧಾನ ಪ್ರಶ್ನೆ ಎಂದರೆ, ಭಾಷೆಯ ಕಲಿಕೆಯಲ್ಲಿ ವಿಳಂಬವನ್ನು ಗುರುತಿಸುವುದು ಹೇಗೆ ಎಂಬುದು. “ಅಮ್ಮ’, “ಮಮ್ಮಾ’ ಎಂಬಿತ್ಯಾದಿ ಅಥವಾ ಬೇರಾವುದೇ ಅರ್ಥಬದ್ಧ ಮೊದಲ ಪದವನ್ನು ಮಗು ಒಂದು ವರ್ಷ ವಯಸ್ಸಿನ ಒಳಗೆ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾದರೂ ಉಚ್ಚರಿಸದೆ ಇದ್ದಲ್ಲಿ ಮಾತು ಕಲಿಕೆಯಲ್ಲಿ ವಿಳಂಬವಾಗಿದೆ ಎಂದು ಅರ್ಥ.
ನನ್ನ ಮಗು ವಿಳಂಬ ಮಾತುಗಾರ ಎಂಬುದು ಗಮನಕ್ಕೆ ಬಂದಿದೆ: ಇನ್ನೇನು ಮಾಡಬೇಕು? : ನಿಮ್ಮ ಮಗು ವಿಳಂಬ ಮಾತುಗಾರ ಎಂಬುದು ಅರಿವಾದ ಬಳಿಕ ನೀವು ನಿಮ್ಮಷ್ಟಕ್ಕೆ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. “ಮಗುವಿಗೆ ಒಂದು ವರ್ಷವಾಗುವವರೆಗೆ ನಾನು ಅದರ ಜತೆಗೆ ಪರಿಣಾಮಕಾರಿಯಾಗಿ ಸಾಕಷ್ಟು ಸಂವಹನ ನಡೆಸಿದ್ದೇನೆಯೇ?’ ಎಂಬ ಪ್ರಶ್ನೆ ಮೊದಲನೆಯದು. ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಜತೆಗೆ ಏನು ಮಾತನಾಡುವುದು, ಅದಕ್ಕೇನು ಅರ್ಥವಾಗುತ್ತದೆ ಎಂಬ ಸಂಶಯವನ್ನು ಅನೇಕ ಮಂದಿ ಹೆತ್ತವರು ಹೊಂದಿರುತ್ತಾರೆ. ಮಗುವಿನ ಜತೆಗೆ ನಾವು ಸಾಕಷ್ಟು ಮಾತನಾಡಬೇಕು ಮತ್ತು ಅದು ಖಂಡಿತವಾಗಿ ನಾವು ಮಾತನಾಡಿದ್ದನ್ನು ಸಂತೋಷದಿಂದ ಅನುಭವಿಸುತ್ತದೆ. ನೀವು ಮಾಡಿರುವ ಅಡುಗೆ, ನಾಳೆ ಮಗುವನ್ನು ಎಲ್ಲಿಗೆ ಕರೆದೊಯ್ಯುವಿರಿ, ಯಾರ್ಯಾರು ಮನೆಗೆ ಬರಲಿದ್ದಾರೆ ಎಂಬಿತ್ಯಾದಿ ಮಾತುಗಳು, ಜೋಗುಳದ ಹಾಡುಗಳು, ಮುದ್ದು ಮಾಡುವ ನುಡಿಗಳನ್ನು ಮಗುವನ್ನು ಉದ್ದೇಶಿಸಿ ಆಡಬಹುದು. ಅರ್ಥ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಮಗು ನೀವು ಮಾತನಾಡುತ್ತಿರುವುದನ್ನು ನಿಮ್ಮ ಮುಖ ನೋಡುತ್ತಾ, ನಿಮ್ಮ ದೃಷ್ಟಿಯಲ್ಲಿ ದೃಷ್ಟಿ ನೆಟ್ಟು ಅನುಭವಿಸಿ ಆನಂದ ಪಡುತ್ತದೆ.
ನೀವು ಮಾತನಾಡುತ್ತಿರುವಾಗ ನಿಮ್ಮ ಮುಖದಲ್ಲಿ ಆಗುವ ಭಾವನಾತ್ಮಕ ಬದಲಾವಣೆಗಳು, ಸ್ವರದ ಏರಿಳಿತ ಇತ್ಯಾದಿಗಳನ್ನು ಮಗು ಗುರುತಿಸುತ್ತದೆ. ಇದು ಮಗುವಿನ ಭಾಷಿಕ ಬೆಳವಣಿಗೆಯ ದೃಷ್ಟಿಯಿಂದ ಮಾತ್ರ ಮಹತ್ವ ಹೊಂದಿರುವುದಲ್ಲ; ನಿಮ್ಮ ಮತ್ತು ಮಗುವಿನ ನಡುವೆ ಬಲವಾದ ಬಾಂಧವ್ಯದ ಬೆಸುಗೆಯೊಂದನ್ನು ಬಿಗಿಯುತ್ತದೆ. ಆದ್ದರಿಂದ ಮಗುವಿಗೆ ಅರ್ಥವಾಗುತ್ತದೆಯೇ ಎಂಬ ಗೊಂದಲವನ್ನು ಮನಸ್ಸಿನಿಂದ ತೆಗೆದುಹಾಕಿ ಮಗುವಿನ ಪರಿಸರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಗುವಿನ ಜತೆಗೆ ಪ್ರೀತಿಯಿಂದ ಮಾತನಾಡಿ. ಈ ಪರಿಣಾಮಕಾರಿ ಸಂವಹನವು ಹುಟ್ಟಿದಂದಿನಿಂದ ಒಂದು ವರ್ಷ ವಯಸ್ಸಿನ ವರೆಗೆ ನಡೆಯುವುದು ಬಹಳ ಮುಖ್ಯವಾಗಿದೆ ಮತ್ತು ಇದು ಮಗು ಮೊದಲ ಪದವನ್ನು ಉಚ್ಚರಿಸುವುದಕ್ಕೆ ಗಣನೀಯ ಕೊಡುಗೆಯನ್ನು ನೀಡುತ್ತದೆ. ನೀವು ಮಗುವಿನ ಜತೆಗೆ ಈ ರೀತಿಯಾಗಿ ಮಾತನಾಡುತ್ತ ಸಮಯ ಕಳೆದಿಲ್ಲ ಎಂದರೆ ಅದರ ಭಾಷಿಕ ಬೆಳವಣಿಗೆಗೆ ನೀವು ಸರಿಯಾದ, ಪರಿಣಾಮಕಾರಿಯಾದ ಪ್ರಚೋದನೆಯನ್ನು ನೀಡಿಲ್ಲ ಎಂದರ್ಥ.
ಎರಡನೆಯ ಪ್ರಾಮುಖ್ಯವಾದ ಪ್ರಶ್ನೆ ಎಂದರೆ, “ನೀವು ಮಾತನಾಡುವುದಕ್ಕೆ, ನೀವು ಉಂಟು ಮಾಡುವ ಸದ್ದುಗಳಿಗೆ ಮಗು ಪ್ರತಿಕ್ರಿಯಿಸುತ್ತಿದೆಯೇ?’ ಎಂಬುದನ್ನು ನೀವು ಸರಿಯಾಗಿ ಗಮನಿಸಬೇಕು. ಪರಿಸರದಲ್ಲಿ ಉಂಟಾಗುವ ದೊಡ್ಡ ಅಥವಾ ಸಣ್ಣ ಮಟ್ಟದ ಸದ್ದುಗಳಿಗೆ ಪ್ರತಿಕ್ರಿಯೆಯಾಗಿ ಮಗುವಿನ ಕಣ್ಣುಗುಡ್ಡೆಗಳ ಚಲನೆ ಮತ್ತು ದೈಹಿಕ ಚಲನೆಗಳನ್ನು ನೀವು ಸೂಕ್ಷ್ಮವಾಗಿ ಗಮನಿಸಬೇಕು. ತನಗೆ ಕೇಳಿಸುವ ಸದ್ದುಗಳಿಗೆ ಪ್ರತಿಕ್ರಿಯೆಯಾಗಿ ಮಗು ಬೆಚ್ಚಿ ಬೀಳಬಹುದು, ಅದರ ಮುಖಭಾವದಲ್ಲಿ ಬದಲಾವಣೆಗಳಾಗಬಹುದು ಅಥವಾ ಪ್ರತಿಯಾಗಿ ತಾನೂ ಏನಾದರೊಂದು ಸದ್ದು ಹೊರಡಿಸಬಹುದು. ತನ್ನ ಪರಿಸರದಲ್ಲಿ ಉಂಟಾದ ಸದ್ದುಗಳಿಗೆ ಮಗು ಪ್ರತಿಕ್ರಿಯೆ ತೋರಿಸುತ್ತಿಲ್ಲ ಅಥವಾ ಪ್ರತಿಕ್ರಿಯೆ ಕಡಿಮೆ ಇದೆ ಎಂದಾದರೆ ಅದು ಮಗುವಿಗೆ ಶ್ರವಣ ದೋಷ ಇದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಭಾಷಿಕ ಬೆಳವಣಿಗೆ ವಿಳಂಬವಾಗಿರುವ ಮಗುವಿನಲ್ಲಿ
ಹೆತ್ತವರು ಈ ಅಂಶವನ್ನೂ ಪರಿಗಣಿಸಿ ಸೂಕ್ಷ್ಮವಾಗಿ ಗಮನಿಸಬೇಕು. ಮಗು ಮಾತು ಕಲಿಯುವುದು ವಿಳಂಬವಾಗಿದ್ದರೆ ಮತ್ತು ತನ್ನ ಪರಿಸರದ ಸದ್ದುಗಳಿಗೆ ಪ್ರತಿಕ್ರಿಯೆಯ ಕೊರತೆಯನ್ನು ಹೊಂದಿದ್ದರೆ ಮುಂದಿನ ಹೆಜ್ಜೆಯನ್ನು ತೆಗೆದುಕೊಳ್ಳಲು ವಿಳಂಬಿಸಬಾರದು. ಹೆತ್ತವರ ಕಡೆಯಿಂದ ಈ ಬಗ್ಗೆ ನಿರ್ಲಕ್ಷ್ಯವು ಮಗುವಿನ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದಾಗಿದೆ. ಉತ್ತಮ ಫಲಿತಾಂಶವನ್ನು ಪಡೆಯುವುದಕ್ಕೆ ಮಗುವಿನ ಸಂವಹನ ಸಮಸ್ಯೆಯನ್ನು ಶೀಘ್ರವಾಗಿ ಗುರುತಿಸುವುದು ಬಹಳ ಮುಖ್ಯವಾಗಿದೆ.
ಮಗುವಿನ ಭಾಷಿಕ ಕಲಿಕೆ ವಿಳಂಬವಾಗಿದೆ ಎಂದಾದರೆ ಯಾರನ್ನು ಸಂಪರ್ಕಿಸಬೇಕು? : ನಿಮ್ಮ ಮಗು ವಿಳಂಬ ಮಾತುಗಾರ ಎಂಬುದು ನಿಮ್ಮ ಗಮನಕ್ಕೆ ಬಂದ ಕೂಡಲೇ ಹತ್ತಿರದಲ್ಲಿ ಲಭ್ಯವಿರುವ ಆಸ್ಪತ್ರೆಯಲ್ಲಿ ಇರುವ ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್ (ಎಸ್‌ಎಲ್‌ಪಿ) ಮತ್ತು ಆಡಿಯಾಲಜಿಸ್ಟ್ ಅವರನ್ನು ಸಂಪರ್ಕಿಸಿ. ಆಡಿಯಾಲಜಿಸ್ಟ್ ಶ್ರವಣ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಿ ಮಗುವಿಗೆ ಶ್ರವಣ ಸಾಮರ್ಥ್ಯ ದೋಷ ಇದೆಯೇ ಇಲ್ಲವೇ ಎಂಬುದನ್ನು ಪತ್ತೆಹಚ್ಚುತ್ತಾರೆ. ನಿಮ್ಮ ಮಗು ಭಾಷಿಕ ಕಲಿಕೆಯ ಮೈಲುಗಲ್ಲುಗಳನ್ನು ಸಾಧಿಸಿದೆಯೇ, ಭಾಷಿಕ ಕಲಿಕೆ ವಿಳಂಬವಾಗಿರುವುದಕ್ಕೆ ಕಾರಣಗಳೇನು ಎಂಬುದನ್ನು ಪತ್ತೆ ಮಾಡುತ್ತಾರೆ, ಮಾತ್ರವಲ್ಲದೆ, ಮಗುವಿಗಿರುವ ಭಾಷಿಕ ಸಮಸ್ಯೆಗಳೇನು ಎಂಬುದನ್ನು ಕಂಡುಹುಡುಕಿ ಅದನ್ನು ಸರಿಪಡಿಸಲು ಏನು ಮಾಡಬಹುದು ಎಂಬುದನ್ನು ಗುರುತಿಸುತ್ತಾರೆ. ಮಗುವಿಗಿರುವ ಭಾಷಿಕ ಸಮಸ್ಯೆಯು ಪತ್ತೆಯಾದ ಬಳಿಕ ಎಸ್‌ಎಲ್‌ಪಿ, ಆಡಿಯಾಲಜಿಸ್ಟ್ ಮತ್ತು ಮಗುವಿನ ಹೆತ್ತವರು ಜತೆಯಾಗಿ ಮಗುವಿನ ಭಾಷಿಕ ಕಲಿಕೆಯನ್ನು ಸರಿಪಡಿಸುವತ್ತ ಕೆಲಸ ಮಾಡಬೇಕಾಗುತ್ತದೆ.
ಸಮಸ್ಯೆಯು ಪತ್ತೆಯಾದ ಕೂಡಲೇ ಭಾಷಿಕ ಚಿಕಿತ್ಸೆಯನ್ನು ಆರಂಭಿಸಬೇಕಾಗುತ್ತದೆ. ಭಾಷಿಕ ಚಿಕಿತ್ಸೆಯು ಔಷಧ ಚಿಕಿತ್ಸೆಯಂತಲ್ಲ; ಅದು ನಿರಂತರ ಪ್ರಕ್ರಿಯೆಯಾಗಿದೆ. ಉತ್ತಮ ಫಲಿತಾಂಶವನ್ನು ಪಡೆಯಬೇಕಾದರೆ ಸ್ಪೀಚ್ ಥೆರಪಿಯು ನಿರಂತರವಾಗಿರಬೇಕು, ನಿಯಮಿತವಾಗಿರಬೇಕು ಮತ್ತು ಎಸ್‌ಎಲ್‌ಪಿಯು ಮಾಡಿರುವ ಶಿಫಾರಸುಗಳನ್ನು ಮನೆಯಲ್ಲಿ ಯಥಾವತ್ ಪಾಲಿಸಬೇಕು. ಮಗುವಿನ ಭಾಷಿಕ ಕಲಿಕೆಯು ವಿಳಂಬವಾಗಿದ್ದರೆ ಅಂಜಬೇಡಿ; ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್ ಉತ್ತಮ ಆಪ್ತಸಮಾಲೋಚನೆ ಮತ್ತು ಚಿಕಿತ್ಸೆಯನ್ನು ಒದಗಿಸುವ ಮೂಲಕ ನಿಮ್ಮ ಮಗುವಿನ ಸಂವಹನ ಸಮಸ್ಯೆಗಳನ್ನು ಪರಿಹರಿಸಬಲ್ಲರು.
ಮಾಯಾ ವರ್ಮಾ
ಕ್ಲಿನಿಕಲ್ ಸೂಪರ್‌ವೈಸರ್,
ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ,
ಎಂಸಿಎಚ್‌ಪಿ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.