ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌ ಮತ್ತು ಆಡಿಯಾಲಜಿಸ್ಟ್‌ಗಳು


Team Udayavani, Jan 10, 2021, 6:00 AM IST

ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌  ಮತ್ತು ಆಡಿಯಾಲಜಿಸ್ಟ್‌ಗಳು

ಸಾಂದರ್ಭಿಕ ಚಿತ್ರ

ಸಂವಹನ ಎಂಬುದು ನಮ್ಮ ದೈನಿಕ ಜೀವನದಲ್ಲಿ ಹಾಸುಹೊಕ್ಕಾಗಿದೆ. ಶಾಲೆಯಲ್ಲಿ ಕಲಿಯುವುದು, ಕಚೇರಿ, ಸಾರ್ವಜನಿಕ ಸ್ಥಳ ಮತ್ತು ಮನೆಯಲ್ಲಿ ಮಾತುಕತೆ – ಇವೆಲ್ಲ ಕಡೆಯೂ ಸಂವಹನ ನಡೆಯುತ್ತದೆ ಎಂಬುದು ಅದರ ಪ್ರಾಮುಖ್ಯವನ್ನು ಸೂಚಿಸುತ್ತದೆ. ಮಾತಿನ ಮೂಲಕ ಸಂವಹನ ನಡೆಸುವ ಸಾಮರ್ಥ್ಯವು ನಮ್ಮ ಬದುಕಿನಲ್ಲಿ ದೇವರ ಅತೀ ಶ್ರೇಷ್ಠವಾದ ಕೊಡುಗೆಯಾಗಿದೆ.

ಆದರೆ ಕೆಲವರಿಗೆ ಮಾತಿನ ಮೂಲಕ ಸಂವಹನ ನಡೆಸುವುದಕ್ಕೆ ಅಡಚಣೆಗಳಿರುತ್ತವೆ ಹಾಗೂ ಇದನ್ನವರು ಒಪ್ಪಿಕೊಳ್ಳುವುದಕ್ಕೆ ಮತ್ತು ಅದರಿಂದ ಎದುರಾಗುವ ಸವಾಲುಗಳನ್ನು ಎದುರಿಸುವುದಕ್ಕೆ ಹಿಂಜರಿಯುತ್ತಾರೆ. “ನಾನೇ ಏಕೆ? ನನ್ನ ಮಗುವೇ ಏಕೆ?’ ಎಂಬುದು ಇಂಥವರ ಸಾಮಾನ್ಯವಾದ ಕೂಗು. ಇದು ಇಂಥ ಸಮಸ್ಯೆಯುಳ್ಳವರಿಂದ ಪ್ರಾಥಮಿಕವಾಗಿ ವ್ಯಕ್ತವಾಗುವ ಜಾಗತಿಕವಾದ ಪ್ರತಿಕ್ರಿಯೆ. ಸಾಮಾನ್ಯವಾಗಿ ದೈಹಿಕ, ಮಾನಸಿಕ ಅಥವಾ ಸಂವಹನಾತ್ಮಕ ವೈಕಲ್ಯ ಅಥವಾ ಸವಾಲನ್ನು ಹೊಂದಿರುವ ಯಾರೇ ಆದರೂ (ಕೆಲವೊಮ್ಮೆ ಈ ಸಮಸ್ಯೆಗಳು ಪ್ರತ್ಯಕ್ಷವಾಗಿರಬಹುದು, ಕೆಲವು ಸಲ ಅಪ್ರತ್ಯಕ್ಷವಾಗಿರಬಹುದು) ಹತಾಶೆ ಮತ್ತು ಸಿಟ್ಟಿನಿಂದ ವಿಧಿಯನ್ನು ಹಳಿಯುತ್ತಾರೆ ಅಥವಾ ಕುಟುಂಬ ಸದಸ್ಯರನ್ನು ದೂರುತ್ತಾರೆ. “ತಮ್ಮ ಪಾಲಿಗೆ ಇನ್ನಷ್ಟು ಉತ್ತಮ ಜಗತ್ತನ್ನು, ಬದುಕನ್ನು ಸೃಷ್ಟಿಸುವ ಕನಸು ಕನಸಾಗಿಯೇ ಉಳಿಯುತ್ತದೆ, ಅದನ್ನು ನನಸು ಮಾಡುವ ಯಾವ ಪ್ರಯತ್ನವೂ ಸಾಧ್ಯವಿಲ್ಲ, ಹಾಗೆ ಪ್ರಯತ್ನಿಸುವುದು ಮೂರ್ಖತನ’ ಎಂದು  ಭಾವಿಸುತ್ತಾರೆ.

ಭಾರತೀಯ ರಿಜಿಸ್ಟ್ರಾರ್‌ ಜನರಲ್‌ ಕಚೇರಿಯ 2012ರ ಅಂಕಿಅಂಶಗಳ ಪ್ರಕಾರ ಭಾರತದ ಜನಸಂಖ್ಯೆ 1.2 ಶತಕೋಟಿ. ಈ ಪೈಕಿ 2.64ರಿಂದ 4.56 ಕೋಟಿ ಮಂದಿ ಗಮನಾರ್ಹ ವೈಕಲ್ಯಗಳನ್ನು ಹೊಂದಿದ್ದಾರೆ (ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಬ್ಯಾಂಕ್‌ ಅಂಕಿಅಂಶಗಳು, 2011). ಈ ವೈಕಲ್ಯಗಳಲ್ಲಿ ಮಾತು ಮತ್ತು ಶ್ರವಣ ವೈಕಲ್ಯಗಳೂ ಸೇರಿವೆ. ವೈಕಲ್ಯವು ಜನ್ಮಜಾತವಾಗಿರಬಹುದು ಅಥವಾ ಜನನದ ಬಳಿಕ ಉಂಟಾಗಿರಬಹುದು. ನಮ್ಮ ಪ್ರೀತಿಪಾತ್ರರ ಜತೆಗೆ ಮಾತನಾಡುವುದಕ್ಕೆ ಅಥವಾ ಅವರು ಮಾತನಾಡಿದ್ದನ್ನು ಕೇಳುವುದಕ್ಕೆ ನಮಗೆ ಸಾಧ್ಯವಿಲ್ಲದ ಸ್ಥಿತಿಯನ್ನು ಒಂದು ಕ್ಷಣ ಕಲ್ಪಿಸಿಕೊಳ್ಳಿ. ಅಂತಹ ಸ್ಥಿತಿಯನ್ನು ಸಹಿಸಿಕೊಳ್ಳಲು, ನಿಭಾಯಿಸಲು ನಮಗೆ ಸಾಧ್ಯವಿದೆಯೇ?

ಮಾತು ಮತ್ತು ಶ್ರವಣ ಶಕ್ತಿಯಲ್ಲಿ ಅಸಹಜತೆ, ತೊಂದರೆಗಳಿಂದ ಬಳಲುತ್ತಿರುವವರನ್ನು ಈ ಹಿಂದೆಯೂ ಈಗಲೂ ವಿಭಿನ್ನರೆಂದು ಪರಿಗಣಿಸಲಾಗುತ್ತಿದೆ. ನಮ್ಮ ಸಮಾಜ ಅಂಥವರನ್ನು ತಿರಸ್ಕರಿಸುತ್ತದೆ. ಇಂತಹ ತೊಂದರೆಗಳನ್ನು ಹೊಂದಿರುವವರನ್ನು ಸಮಾಜವು ಹೇಗೆ ಪರಿಗಣಿಸುತ್ತದೆ ಎಂಬುದಾಗಿ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಮನಸ್ಸು ಮರುಗುತ್ತದೆ. ಸಂವಹನ ವೈಕಲ್ಯಗಳ ಬಗ್ಗೆ ಅರಿವಿನ ಕೊರತೆಯಿಂದಾಗಿ, ಮಾತು ಮತ್ತು/ ಅಥವಾ ಶ್ರವಣ ವೈಕಲ್ಯಗಳನ್ನು ಹೊಂದಿರುವವರ ಕುರಿತಾಗಿ ಜನಸಾಮಾನ್ಯರ ಆದಿಮ ವರ್ತನೆಗಳು ಎಂದರೆ ತಿರಸ್ಕಾರ, ಗೇಲಿ ಮತ್ತು ಕನಿಕರ. ಭಾರತೀಯ ಸಮಾಜದಲ್ಲಿ ತೀರಾ ಇತ್ತೀಚೆಗಿನವರೆಗೂ ಇಂತಹ ತೊಂದರೆ ಹೊಂದಿರುವವರನ್ನು ಕೆಟ್ಟದಾಗಿ ಕಾಣಲಾಗುತ್ತಿತ್ತು. ಯಾವುದೇ ತರಹದ ವೈಕಲ್ಯ ಹೊಂದಿರುವವರನ್ನು ಸಮಾಜದ ಮುಖ್ಯವಾಹಿನಿಯಿಂದ ಹೊರಗಿಡಲಾಗುತ್ತಿತ್ತು ಮತ್ತು ಅವರು ಯಾವುದಕ್ಕೂ ಲಾಯಕ್ಕಲ್ಲ ಎಂಬುದಾಗಿ ಪರಿಗಣಿಸಲಾಗುತ್ತಿತ್ತು. 1980ರ ವರೆಗೆ ಅವರನ್ನು ಜನಗಣತಿಯಿಂದಲೂ ಹೊರಗಿರಿಸಲಾಗುತ್ತಿತ್ತು! ಅವರನ್ನು ಈ ಹಿಂದೆ ಮತ್ತು ಈಗಲೂ ಒಂದು ಹೊರೆ ಎಂಬುದಾಗಿ ಪರಿಗಣಿಸಲಾಗುತ್ತಿದೆ. ಪೂರ್ವ ಜನ್ಮದಲ್ಲಿ ಮಾಡಿದ ಯಾವುದೋ ಒಂದು ಪಾಪಕರ್ಮದ ಫ‌ಲವಾಗಿ ಈಗ ಇಂತಹ ತೊಂದರೆ ಉಂಟಾಗಿದೆ ಎಂದು ಅವರನ್ನು ಹೀಗೆಳೆಯುಲಾಗುತ್ತಿತ್ತು. ಸಂವಹನ ವೈಕಲ್ಯಗಳ ಬಗ್ಗೆ ಹಿಂದಿಗಿಂತ ಇಂದು ಅರಿವು, ತಿಳಿವಳಿಕೆ ಹೆಚ್ಚಿದೆಯಾದರೂ ದುರದೃಷ್ಟವಶಾತ್‌ ಇದು ಈಗಲೂ ಮುಂದುವರಿದಿದೆ.

ಇಂತಹ ತೊಂದರೆಗಳನ್ನು ಹೊಂದಿರುವವರು ಎದುರಿಸುವ ಅಡೆತಡೆಗಳಲ್ಲಿ ವೈಕಲ್ಯಗಳಿಂದ ಉಂಟಾಗಿರುವ ಕಾರ್ಯಾಚರಣೆಗೆ ಸಂಬಂಧಪಟ್ಟ ಅಡಚಣೆಗಳಿಗಿಂತಲೂ ವರ್ತನಾತ್ಮಕವಾದ ಅದೃಶ್ಯ ಅಡಚಣೆಗಳೇ ಪ್ರಮುಖವಾಗಿವೆ. ಈ ವರ್ತನಾತ್ಮಕ ಅಡೆತಡೆಗಳನ್ನು ನಿರ್ಮೂಲಗೊಳಿಸಬಹುದೇ? ಅದು ನಮ್ಮ ಕೈಯಲ್ಲಿದೆಯೇ? ಇಂತಹ ವೈಕಲ್ಯಗಳನ್ನು ಹೊಂದಿರುವವರ ಬದುಕಿನಲ್ಲಿ ಬದಲಾವಣೆ ತರುವುದು ನಮ್ಮಿಂದ ಸಾಧ್ಯವಿದೆಯೇ, ಅವರು ಉತ್ತಮ ಜೀವನ ನಡೆಸುವಂತೆ ಮಾಡಲು ಸಾಧ್ಯವಿದೆಯೇ?

ನಿಜ, ಇದೆ. ಈ ವಿಚಾರದಲ್ಲಿ ಮೊದಲನೆಯ ಹೆಜ್ಜೆ ಎಂದರೆ, ತಿಳಿವಳಿಕೆಯನ್ನು ವಿಸ್ತರಿಸುವುದು. ಮಾತನಾಡಲು ತೊಂದರೆ ಹೊಂದಿರುವ ಮಕ್ಕಳು ಮತ್ತು ಹದಿಹರಯದವರ ಅಗತ್ಯಗಳನ್ನು ಆದಷ್ಟು ಶೀಘ್ರವಾಗಿ ಗುರುತಿಸಬೇಕಾಗಿದೆ. ಆಗ ಸಂವಹನ ಕೌಶಲಗಳನ್ನು ಕಲಿತುಕೊಳ್ಳುವುದಕ್ಕಿರುವ ಸವಾಲುಗಳನ್ನು ಎದುರಿಸುವಲ್ಲಿ ಅವರಿಗೆ ನೆರವಾಗಲು ಸಾಧ್ಯವಾಗುತ್ತದೆ. ಕಲಾಪ್ರಕಾರಗಳು, ಸಿನೆಮಾ, ಸಾಹಿತ್ಯ ಮತ್ತು ಇತರ ಸಮೂಹಮಾಧ್ಯಮಗಳಲ್ಲಿ ವೈಕಲ್ಯವನ್ನು ನಾಟಕೀಯವಾಗಿ, ರೂಢಿಗತವಾಗಿ ಚಿತ್ರಿಸಲಾಗುತ್ತಿದ್ದು, ಇದರಿಂದ ಜನರೂ ಅದೇ ಬಗೆಯ ಭಾವನೆಯನ್ನು ಬೆಳೆಸಿಕೊಂಡಿದ್ದಾರೆ. ಭಾರತೀಯ ಸಿನೆಮಾ ರಂಗದಲ್ಲಿ ಹಿಂದೆ ವೈಕಲ್ಯಗಳನ್ನು ಹೊಂದಿರುವವರ ಬಗ್ಗೆ ಋಣಾತ್ಮಕ ನಿಲುವು, ಅಭಿಪ್ರಾಯ ಹೊಂದಿರುವ ಸಿನೆಮಾಗಳೇ ಹೆಚ್ಚು ಸಂಖ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದವು. ಆದರೆ ಇತ್ತೀಚೆಗೆ ಜ್ಞಾನ ಮತ್ತು ಅರಿವನ್ನು ವೃದ್ಧಿಸುವಂತಹ ಕೆಲವು ಸಿನೆಮಾಗಳು ಬಂದಿವೆ ಎನ್ನುವುದು ಸ್ವಲ್ಪವಾದರೂ ಸಮಾಧಾನಕರ ವಿಚಾರ. ಹಿಂದೆ, ವೈಕಲ್ಯವು ಪೂರ್ವಜನ್ಮದಲ್ಲಿ ಮಾಡಿದ ಪಾಪಕರ್ಮಗಳ ಫ‌ಲ ಎಂಬ ಚಿತ್ರಣವಿರುವ ಸಿನೆಮಾಗಳು ಹೆಚ್ಚು ಸಂಖ್ಯೆಯಲ್ಲಿದ್ದವು. ಉದಾಹರಣೆಗೆ, ಜೀವನ ನ್ಯಾಯ (1936), ಆದ್ಮಿ (1968) ಮತ್ತು ಧನ್‌ವಾನ್‌ (1981). ಮಾನಸಿಕ ತೊಂದರೆಯುಳ್ಳವರ ಪಾತ್ರಗಳನ್ನು ತಮಾಶೆಗಾಗಿ ಉಪಯೋಗಿಸಲಾಗುತ್ತಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಭಾರತೀಯ ಸಿನೆಮಾಗಳಲ್ಲಿ ವೈಕಲ್ಯಗಳನ್ನು ಹೊಂದಿರುವ ಜನರ ಚಿತ್ರಣ ಬದಲಾಗಿದೆ. “ಬ್ಲ್ಯಾಕ್‌’ (2005)ಕಿವುಡು, ಕುರುಡು ಮತ್ತು ಮೂಗಳಾಗಿದ್ದರೂ ಸಾಕಷ್ಟು ಶ್ರಮಪಟ್ಟು ಶೈಕ್ಷಣಿಕವಾಗಿ ಸಾಧನೆ ಮಾಡುವ ಸಾಧಕಿ ಬಾಲಕಿಯೊಬ್ಬಳ ಕಥೆಯನ್ನು ಚಿತ್ರಿಸುವ ಮೂಲಕ ಈ ಸಿನೆಮಾ ಬದಲಾವಣೆಯ ಗಾಳಿಯನ್ನು ಬೀಸಿತ್ತು. ಡಿಸ್‌ಲೆಕ್ಸಿಯಾ ಹೊಂದಿರುವ ಜನರ ಜೀವನವನ್ನು ಅಮೀರ್‌ ಖಾನ್‌ ಅವರ “ತಾರೇ ಜಮೀನ್‌ ಪರ್‌’ (2007) ಚಿತ್ರಿಸುತ್ತದೆ. ಪ್ರೊಜೇರಿಯಾ, ಅಸ್ಪರ್ಗರ್‌ನಂತಹ ಅನಾರೋಗ್ಯ ಸ್ಥಿತಿಗಳನ್ನೂ ಸಿನೆಮಾಗಳಲ್ಲಿ ಚಿತ್ರಿಸುವ ಪ್ರಯತ್ನ ನಡೆಸಲಾಗಿದೆ. ಸಾಕಷ್ಟು ಹೆಸರು ಮಾಡಿರುವ ಈ ಸಿನೆಮಾಗಳಿಗಿಂತ ಮುನ್ನವೂ ಕೆಲವು ಸಿನೆಮಾಗಳು ಇಂತಹ ಪ್ರಯತ್ನಗಳನ್ನು ನಡೆಸಿದ್ದವು. “ಕೋಶಿಶ್‌’ (1972) ಮತ್ತು “ಸ್ಪರ್ಶ್‌’ (1980) ಸಿನೆಮಾಗಳು ಕಿವುಡು ಮತ್ತು ಅಂಧತ್ವಗಳನ್ನು ಚಿತ್ರಿಸಿವೆ. ಈ ಎಲ್ಲ ಸಿನೆಮಾಗಳು ಕೂಡ ಸಂವಹನ ಸಮಸ್ಯೆಗಳ ಬಗ್ಗೆ ಅರಿವನ್ನು ವಿಸ್ತರಿಸಿವೆ.

ಹಾಗಾದರೆ ಈಗ ಉದ್ಭವಿಸುವ ಪ್ರಶ್ನೆ, ಸಂವಹನ ಸಮಸ್ಯೆ ಇದ್ದರೆ ಯಾರೊಂದಿಗೆ ಸಮಾಲೋಚಿಸಬೇಕು?

ಸಂವಹನ ಸಮಸ್ಯೆಗಳು, ವೈಕಲ್ಯಗಳನ್ನು ಹೊಂದಿರುವ ಜನರಿಗೆ ಸಹಾಯ ಮಾಡಲು, ಅವರ ಬದುಕಿನ ಗುಣಮಟ್ಟವನ್ನು ಉತ್ತಮಪಡಿಸಲು, ವೈಕಲ್ಯ – ತೊಂದರೆಗಳನ್ನು ಗುರುತಿಸಲು ಮತ್ತು ತೊಂದರೆಗಳನ್ನು ಉಪಶಮನಗೊಳಿಸಲೆಂದೇ ಇರುವ ಆರೋಗ್ಯ ಸೇವಾ ಪರಿಣತರು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌ಗಳು ಮತ್ತು ಆಡಿಯಾಲಜಿಸ್ಟ್‌ಗಳು. ಇವರ ಜತೆಗೆ ವೈದ್ಯಕೀಯವಾದ ಬಹುವಿಭಾಗೀಯವಾದ ತಂಡವೂ ಇರುತ್ತದೆ. ಇವರು ಖಾಸಗಿ/ ಸರಕಾರಿ ಆಸ್ಪತ್ರೆಗಳಲ್ಲಿ, ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಸಂಸ್ಥೆಗಳಲ್ಲಿ, ಖಾಸಗಿ ಕ್ಲಿನಿಕ್‌ಗಳಲ್ಲಿ, ಕೆಲವು ಶಾಲೆಗಳಲ್ಲಿ, ಆರೋಗ್ಯ ಸೇವಾ ಕೇಂದ್ರಗಳಲ್ಲಿ, ನ್ಯೂರೊಹ್ಯಾಬಿಲಿಟೇಶನ್‌ ಕೇಂದ್ರಗಳಲ್ಲಿ, ಎನ್‌ಜಿಒಗಳಲ್ಲಿ ಇವರು ಲಭ್ಯರಿರುತ್ತಾರೆ. ಇನ್ನು ಕೆಲವು ಖಾಸಗಿಯಾಗಿ ಸೇವೆಯನ್ನೊದಗಿಸುತ್ತಾರೆ. ಇವರು ಮಾತು ಮತ್ತು ಭಾಷೆಯ ಕೌಶಲಗಳನ್ನು ಉತ್ತಮಪಡಿಸುವುದಕ್ಕಾಗಿ ಸ್ಪೀಚ್‌ ಥೆರಪಿ ಒದಗಿಸುತ್ತಾರೆ. ಈ ದಿನಗಳಲ್ಲಿ ನೀವು ಮನೆಯಲ್ಲಿ ಕುಳಿತಿದ್ದೇ ಪಡೆಯಬಹುದಾದ ಟೆಲೆ ರಿಹಾಸ್ಯಬಿಲಿಟೇಶನ್‌ ಸೇವೆಗಳು ಕೂಡ ಲಭ್ಯವಿವೆ.

ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌ ಗಳು ಮತ್ತು ಆಡಿಯಾಲಜಿಸ್ಟ್‌ ಗಳ ಬಗ್ಗೆ ಮತ್ತು ಅವರ ಸೇವೆ, ಕೆಲಸಕಾರ್ಯಗಳ ಬಗ್ಗೆ ತಿಳಿಯಲು ನೀವು ಭಾರತೀಯ ಸ್ಪೀಚ್‌-ಲ್ಯಾಂಗ್ವೇಜ್‌ ಆ್ಯಂಡ್‌ ಹಿಯರಿಂಗ್‌ ಅಸೋಸಿಯೇಶನ್‌ (ಇಶಾ)ದ ವೆಬ್‌ಸೈಟ್‌ www.ishaindia.com ಗೆ ಭೇಟಿ ನೀಡಬಹುದು.

ನಾವು – ನೀವು ಮತ್ತು ಪ್ರತಿಯೊಬ್ಬರೂ ಸಂವಹನ ವೈಕಲ್ಯ, ತೊಂದರೆ, ಅಸಾಮರ್ಥ್ಯ ಹೊಂದಿರುವ ಜನರ ಬಾಳಿನಲ್ಲಿ ಬದಲಾವಣೆಯನ್ನು ತರಬಹುದು. ಅವರನ್ನು ಅರ್ಥ ಮಾಡಿಕೊಂಡು, ಅವರನ್ನು ತಿಳಿದುಕೊಂಡು ಅವರು ಕೂಡ ನಮ್ಮವರೇ ಎಂದು ಪರಿಗಣಿಸುವುದರಿಂದ ಇದು ಸಾಧ್ಯವಾಗುತ್ತದೆ. ಹೀಗಾಗಿ ಸೂಕ್ಷ್ಮಗ್ರಾಹಿಗಳಾಗಿ, ನಿಮ್ಮ ಕುಟುಂಬ, ವಾಸಸ್ಥಳ, ಸುತ್ತಮುತ್ತ ಸಂವಹನ ತೊಂದರೆಗಳನ್ನು ಹೊಂದಿರುವ ಮಕ್ಕಳು ಮತ್ತು ವಯಸ್ಕರಿದ್ದರೆ ಆದಷ್ಟು ಬೇಗನೆ ಗುರುತಿಸಿ. ಅಲ್ಲದೆ, ಅವರು ಆದಷ್ಟು ಬೇಗನೆ ಸ್ಪೀಚ್‌ ಲ್ಯಾಂಗ್ವೇಜ್‌ ಥೆರಪಿಸ್ಟ್‌ ಮತ್ತು / ಅಥವಾ ಆಡಿಯಾಲಜಿಸ್ಟ್‌ ಜತೆಗೆ ಸಮಾಲೋಚನೆ ನಡೆಸುವಂತೆ ನೆರವಾಗಿ. ನಾವೆಲ್ಲರೂ ಜತೆಗೂಡಿ ಅವರ ಬದುಕಿನಲ್ಲಿ ಹೊಸ ಬೆಳಕು ಮೂಡುವಂತೆ ಮಾಡೋಣ.

 

ಡಾ| ಕೃಷ್ಣ ವೈ.

ಪ್ರೊಫೆಸರ್, ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ, ಎಂಸಿಎಚ್ಪಿ, ಮಾಹೆ, ಮಣಿಪಾಲ

ಡಾ| ಅಮೂಲ್ಯಾ ಪಿ. ರಾವ್

ರಿಸರ್ಚ್ ಅಸೋಸಿಯೇಟ್, ಇಂಡಿಯನ್ ಸ್ಪೀಚ್ ಲ್ಯಾಂಗ್ವೇಜ್ ಆ್ಯಂಡ್ ಹಿಯರಿಂಗ್ ಅಸೋಸಿಯೇಶನ್ (ಇಶಾ)

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.