ವಯೋವೃದ್ಧ ಹೆತ್ತವರಿಂದ ದೂರವಿದ್ದೀರಾ? ಅವರ ಆರೈಕೆಗೆ ಹತ್ತು ಸಲಹೆಗಳು
Team Udayavani, Feb 27, 2022, 8:30 AM IST
ವಯೋವೃದ್ಧ ಹೆತ್ತವರು ಅಥವಾ ಸಂಬಂಧಿಗಳ ಆರೈಕೆ ಮಾಡುವುದು ಒಂದು ಸವಾಲು. ನೀವು ಉದ್ಯೋಗ ಇತ್ಯಾದಿ ಕಾರಣಗಳಿಗಾಗಿ ಮನೆಯಿಂದ ದೂರದಲ್ಲಿದ್ದಾಗ ಈ ಸವಾಲು ಇನ್ನಷ್ಟು ಬೃಹದಾಕಾರ ತಾಳುತ್ತದೆ. ನಿಮ್ಮ ಪ್ರೀತಿಪಾತ್ರರಿಂದ ಒಂದು ತಾಸಿಗಿಂತ ಹೆಚ್ಚು ಸಮಯ ದೂರವಿದ್ದಾಗ ನೀವು ದೂರದಲ್ಲಿರುವ ಆರೈಕೆದಾರ ಎನಿಸಿಕೊಳ್ಳುತ್ತೀರಿ. ಜಾಗತೀಕರಣ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯೊಂದಿಗೆ ಮಕ್ಕಳು ದೂರದ ನಗರಗಳು ಮತ್ತು ವಿದೇಶಗಳಿಗೂ ಉದ್ಯೋಗಾರ್ಥಿಗಳಾಗಿ ಹೋಗಿ ನೆಲೆಸುವುದನ್ನು ಕಾಣುತ್ತಿದ್ದೇವೆ. ಕೋವಿಡ್-19 ಸಾಂಕ್ರಾಮಿಕವು ಕೆಲವಾರು ತಿಂಗಳುಗಳಿಗೊಮ್ಮೆ ಹೊಸ ಅಲೆಯಾಗಿ ಹಾವಳಿ ಉಂಟು ಮಾಡುತ್ತಿರುವುದರಿಂದ ತಮ್ಮ ವಯೋವೃದ್ಧ ಹೆತ್ತವರು, ಸಂಬಂಧಿಕರನ್ನು ಕಾಣುವುದಕ್ಕಾಗಿ ಹುಟ್ಟಿದೂರಿಗೆ ಬರುವ ಮಕ್ಕಳ ಪ್ರವಾಸ ಯೋಜನೆ ಬಾಧಿತವಾಗುತ್ತದೆ. ಅಂಥವರು ತಮ್ಮ ಹೆತ್ತವರು/ ಸಂಬಂಧಿಕರ ದೇಹಾರೋಗ್ಯ ಮತ್ತು ಕ್ಷೇಮ, ಸುರಕ್ಷೆಯ ಬಗ್ಗೆ ಸ್ನೇಹಿತರು ಅಥವಾ ಸಂಬಂಧಿಗಳು ನೀಡುವ ಮಾಹಿತಿಯನ್ನಷ್ಟೇ ಅವಲಂಬಿಸ ಬೇಕಾಗುತ್ತದೆ.
ದೂರದಲ್ಲಿದ್ದುಕೊಂಡು ಪ್ರೀತಿಪಾತ್ರರ ಆರೈಕೆ ಮಾಡುವುದು ಬಹಳ ಒತ್ತಡದಾಯಕವಾದುದು. ಮನೆಯಿಂದ ದೂರದಲ್ಲಿರುವ ಆರೈಕೆದಾರರು ಬಹುತೇಕ ಬಾರಿ ತಪ್ಪಿತಸ್ಥ ಭಾವನೆ ಮತ್ತು ಒತ್ತಡಗಳನ್ನು ಅನುಭವಿಸುತ್ತಾರೆ ಮಾತ್ರವಲ್ಲದೆ ತಮ್ಮ ವಯೋವೃದ್ಧ ಹೆತ್ತವರು/ ಸಂಬಂಧಿಗಳು ಮತ್ತು ಅವರ ಜತೆ ಸ್ಥಳೀಯವಾಗಿರುವ ಆರೈಕೆದಾರರ ಜತೆಗೆ ಸಂಘರ್ಷಕ್ಕೆ ತುತ್ತಾಗುತ್ತಾರೆ. ಇದರಿಂದ ಭಾರೀ ಪ್ರಮಾಣದ ಆರ್ಥಿಕ ಹೊರೆ ಮತ್ತು ಅವರ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಿಕೊಳ್ಳಲಾಗದ ಸ್ಥಿತಿ ಕೂಡ ನಿರ್ಮಾಣವಾಗಬಹುದು.
ಆರೈಕೆ ಒದಗಿಸುವ ಹೊರೆಯನ್ನು ಹಗುರ ಮಾಡಿಕೊಳ್ಳುವ ಮೊದಲನೆಯ ಹೆಜ್ಜೆ ಎಂದರೆ, ಎಲ್ಲವನ್ನೂ ನೀವು ಪೂರೈಸಲು, ಮಾಡಲು ಸಾಧ್ಯವಿಲ್ಲ ಎಂಬ ಸತ್ಯಾಂಶವನ್ನು ಒಪ್ಪಿಕೊಳ್ಳುವುದು!
ನಿಮ್ಮ ವಯೋವೃದ್ಧ ಹೆತ್ತವರು/ ಸಂಬಂಧಿಗಳ ಆರೈಕೆ ಮತ್ತು ಸೌಖ್ಯಕ್ಕಾಗಿ ದೂರವಿರುವ ನೀವು ಏನು ಮಾಡಬಹುದು, ನಿಮ್ಮ ಹೆಗಲಮೇಲಿರುವ ಅದರ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಏನು ಮಾರ್ಗೋಪಾಯ ಗಳು ಎಂಬ ಬಗ್ಗೆ ಸಲಹೆಗಳು ಇಲ್ಲಿವೆ.
ನಿಮ್ಮ ವಯೋವೃದ್ಧ ತಾಯ್ತಂದೆಗೆ ಯಾವಾಗ ಸಹಾಯದ ಅಗತ್ಯವಿದೆ
ಎಂಬುದನ್ನು ಗೊತ್ತುಪಡಿಸಿಕೊಳ್ಳಿ
ಮನೆಯಿಂದ ದೂರ ವಾಸ್ತವ್ಯ ಹೂಡಿರುವ ಸಂದರ್ಭದಲ್ಲಿ ಮನೆಯಲ್ಲಿ ಇರುವ ವಯಸ್ಕ ತಾಯ್ತಂದೆಗೆ ಯಾವಾಗ ಸಹಾಯದ ಅಗತ್ಯವಿರುತ್ತದೆ ಎಂಬುದನ್ನು ಒಂದು ದೂರವಾಣಿ ಕರೆ ಅಥವಾ ಕಿರು ಭೇಟಿಯಿಂದಷ್ಟೇ ತಿಳಿದುಕೊಳ್ಳುವುದು ಅಸಾಧ್ಯ. ನಿಮ್ಮ ಹೆತ್ತವರು ಯಾವುದೇ ಸಮಸ್ಯೆಯ ಬಗ್ಗೆ ನಿಮ್ಮ ಬಳಿ ತಿಳಿಸಲು/ ದೂರಲು/ ಸಹಾಯ ಕೇಳಲು ಹಿಂಜರಿಯಬಹುದು, ಮುಜುಗರ ಪಡಬಹುದು ಎಂಬುದನ್ನು ನೆನಪಿಡಿ. ಈ ಹಿಂದೆ ತಾವು ಮಾಡುತ್ತಿದ್ದ ಚಟುವಟಿಕೆಗಳು ಈಗ ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂಬ ಅಂಶದ ಬಗ್ಗೆ ಅವರು ನಾಚಿಕೆ, ಮುಜುಗರ ಪಟ್ಟುಕೊಳ್ಳಬಹುದು.
ಕೆಲವೊಮ್ಮೆ ಹಠಾತ್ ಆಸ್ಪತ್ರೆ ದಾಖಲಾತಿ ಅಥವಾ ಹಠಾತ್ ಅನಾರೋಗ್ಯಕ್ಕೀಡಾಗಿರುವುದು ನಿಮ್ಮ ಹೆತ್ತವರು/ ಕುಟುಂಬ ಸದಸ್ಯರ ಬದಲಾಗುತ್ತಿರುವ ಅಗತ್ಯಗಳ ಬಗ್ಗೆ ನಿಮಗೆ ಸೂಚನೆ ಒದಗಿಸಬಹುದು. ಇನ್ನು ಕೆಲವೊಮ್ಮೆ ಅವರ ಬದಲಾಗುತ್ತಿರುವ ವರ್ತನೆ, ನಡವಳಿಕೆಯ ಬಗ್ಗೆ ನೀವು ಸೂಕ್ಷ್ಮವಾಗಿ ಗಮನ ಹರಿಸಬೇಕಾಗಿ ಬರಬಹುದು. ಈ ಮೂಲಕ ನೀವು ಮನೆಯಲ್ಲಿ ಸಂಭವಿಸಬಹುದಾದ ಅಪಾಯ ಮತ್ತು ಅವಘಡಗಳನ್ನು ತಪ್ಪಿಸಬಹುದು. ಸ್ವಯಂ ನಿರ್ಲಕ್ಷ್ಯದ ಮುನ್ಸೂಚನೆಗಳ (ವೈಯಕ್ತಿಕ ನೈರ್ಮಲ್ಯದ ಬಗ್ಗೆ ಅಸಡ್ಡೆ, ತೂಕ ನಷ್ಟ, ಗ್ಯಾಸ್ ಸ್ಟವ್ ಬಂದ್ ಮಾಡಲು ಮರೆತುಹೋಗುವುದು, ಮನೆಯ ದೈನಿಕ ಚಟುವಟಿಕೆಗಳನ್ನು ಮಾಡಲು ಕಷ್ಟವಾಗುವುದು) ಬಗ್ಗೆ ಗಮನವಿರಲಿ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಿಕೆ ಮತ್ತು ಹವ್ಯಾಸಗಳನ್ನು ಕೈಬಿಡುವುದು ಖನ್ನತೆಯ ಮುನ್ಸೂಚನೆಯಾಗಿರಬಹುದು ಮತ್ತು ವೃತ್ತಿಪರ ಮಾನಸಿಕ ತಜ್ಞರ ಬಳಿ ಸಮಾಲೋಚನೆ ಮಾಡಿಸಿಕೊಳ್ಳುವುದು ಸೂಕ್ತವೆನಿಸಬಹುದು. ಸಿಟ್ಟಾಗುವಿಕೆ, ಗೊಂದಲ, ಔಷಧಗಳನ್ನು ತೆಗೆದುಕೊಳ್ಳಲು ಮರೆಯುವುದು, ಮನೆಯನ್ನು ನಿರ್ವಹಿಸಲು ಕಷ್ಟವಾಗುವುದು ಡಿಮೆನ್ಶಿಯಾದ ಆರಂಭಿಕ ಲಕ್ಷಣಗಳಾಗಿರಬಹುದು.
ಸಹಾಯ ಮಾಡಲು ನೀವೇನು ಮಾಡಬಹುದು:
-ನಿಮ್ಮ ಕಳವಳಗಳ ಬಗ್ಗೆ ನಿಮ್ಮ ಹೆತ್ತವರು/ ಸಂಬಂಧಿಕರ ಜತೆಗೆ ಮಾತನಾಡಿ.
-ಹೆತ್ತವರ ಸಮ್ಮತಿಯೊಂದಿಗೆ ಹತ್ತಿರದಲ್ಲಿರುವ ನೆರೆಹೊರೆಯವರು ಅಥವಾ ಸ್ಥಳೀಯ ಆರೈಕೆದಾರರು ನಿಮ್ಮ ಹೆತ್ತವರ ದೈನಿಕ ಚಟುವಟಿಕೆಗಳಲ್ಲಿ ಆಗಿರುವ ಬದಲಾವಣೆಗಳನ್ನು ತಿಳಿಸಲು ವಿನಂತಿಸಿ.
-ಕೆಲವು ಸಮಸ್ಯೆಗಳಿಗೆ ಶ್ರವಣಸಾಧನ ಅಳವಡಿಸುವುದು, ಮನೆಯ ರಸ್ತೆ ಸರಿಪಡಿಸುವಂತಹ ಸರಳವಾದ ಪರಿಹಾರಗಳಿರುತ್ತವೆ.
-ಹೆತ್ತವರಿಗೆ ಆರೈಕೆ ಒದಗಿಸುತ್ತಿರುವ ವೈದ್ಯಕೀಯ ತಂಡವನ್ನು ಸಂಪರ್ಕಿಸಲು ಪ್ರಯತ್ನಿಸಿ. ನಿಮ್ಮ ಹೆತ್ತವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಭೇಟಿ ಮಾಡಿ ಅವರ ಇತ್ತೀಚೆಗಿನ ಆರೋಗ್ಯ ಸಮಸ್ಯೆಗಳು, ಔಷಧ ಪಟ್ಟಿಗಳ ಮಾಹಿತಿ ಪಡೆಯಬಹುದು. ಜತೆಗೆ ಹೆತ್ತವರ ಆರೋಗ್ಯ ಮತ್ತು ವರ್ತನಾತ್ಮಕ ಬದಲಾವಣೆಗಳ ಬಗ್ಗೆ ನಿಮಗಿರುವ ಕಳವಳಗಳನ್ನು ಹಂಚಿಕೊಳ್ಳಬಹುದು.
ಮನೆಯ ಸುರಕ್ಷೆ ಮತ್ತು ಸಂಪರ್ಕ ವ್ಯವಸ್ಥೆ
ವಯೋವೃದ್ಧ ಹೆತ್ತವರು ದಶಕಗಳಿಂದ ವಾಸಿಸುತ್ತಿದ್ದ ಮನೆ ಹಠಾತ್ತಾಗಿ ತೊಂದರೆದಾಯಕವಾಗಿ ಕಾಣಬಹುದು. ವಯಸ್ಸಾಗುತ್ತಿರುವ ಹೆತ್ತವರು/ ಸಂಬಂಧಿಕರಿಗೆ ಯಾವುದೋ ಒಂದು ವಸ್ತು ಎಲ್ಲಿದೆ ಎಂದು ಕಂಡುಕೊಳ್ಳುವುದು ಅಥವಾ ಬಿಗಿಯಾಗಿರುವ ಬಾಗಿಲು ತೆರೆಯುವಂತಹ ಸರಳ ಸಂಗತಿಗಳು ಕಷ್ಟಕರವಾಗಿ ಪರಿಣಮಿಸಬಹುದು. ನಿಮ್ಮ ಪ್ರೀತಿಪಾತ್ರರ ಬದಲಾಗಿರುವ ಅಗತ್ಯಕ್ಕೆ ಅನುಗುಣವಾಗಿ ಮನೆ ಮತ್ತು ಸುತ್ತಮುತ್ತಲಿನ ಪರಿಸರ ಇದೆಯೇ, ಸುರಕ್ಷಿತವಾಗಿದೆಯೇ ಎಂಬುದನ್ನು ಗಮನಿಸಿ. ಮುಂಬಾಗಿಲಿನ ಮುಂದೆ ರ್‍ಯಾಂಪ್ ಅಳವಡಿಸುವುದು ಅಥವಾ ಕೈಹಿಡಿ ಅಳವಡಿಸುವಂತಹ ಕೆಲವು ಮಾರ್ಪಾಟುಗಳನ್ನು ಮಾಡುವುದರಿಂದ ಅವರಿಗೆ ಸಹಾಯವಾಗುತ್ತದೆ. ಜಾರುವ ಕಾಲುಚಾಪೆ, ತೊಡಕನ್ನು ನಿವಾರಿಸುವ ಮೂಲಕ ಅವರು ಬಿದ್ದುಬಿಡುವ ಅಪಾಯವನ್ನು ತಪ್ಪಿಸಬಹುದು. ಅವರ ಜತೆಗೂಡಿ ಅವರಿಗೆ ತತ್‌ಕ್ಷಣ ಬೇಕಾಗುವಂತಹ ವಸ್ತುಗಳನ್ನು ಕೈಗೆಟಕುವಂತೆ ಜೋಡಿಸಿಕೊಡಿ. ಇದರಿಂದ ಬಹಳ ಸುಲಭವಾಗುತ್ತದೆ.
– ಸಂಪರ್ಕದಲ್ಲಿರಿ, ಭಾಗಿಯಾಗಿ
ನೀವು ದೂರದ ನಗರದಲ್ಲಿ ಅಥವಾ ಬೇರೆಯದೇ ದೇಶದಲ್ಲಿ ಉದ್ಯೋಗಾರ್ಥ ಇದ್ದಾಗ ನಿಮ್ಮ ತಾಯಿ ಅಥವಾ ತಂದೆಯನ್ನು ಆಗಾಗ ಭೇಟಿ ಮಾಡುವುದು ಸಾಧ್ಯವಾಗುವುದಿಲ್ಲ. ಆದರೂ ಅವರ ಆರೈಕೆಯಲ್ಲಿ ನೀವು ಸಕ್ರಿಯವಾಗಿ ಭಾಗಿಯಾಗಬಹುದು.
ಮಾಹಿತಿ ನಿಭಾಯಿಸಿ: ಸ್ಥಳೀಯ ಆರೈಕೆದಾರರ ಮೂಲಕ ನಿಮ್ಮ ಹೆತ್ತವರ ದೈನಿಕ ಅಗತ್ಯಗಳು ಮತ್ತು ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ. ಅವರಿಗೆ ಇರುವ ಔಷಧಗಳ ಬಗ್ಗೆ ತಿಳಿದುಕೊಳ್ಳಿ, ಅವರ ಆರೋಗ್ಯ ಅಗತ್ಯಗಳನ್ನು ತಿಳಿಯಿರಿ, ವಿಮಾ ಅಗತ್ಯಗಳ ಬಗ್ಗೆ ಗಮನಹರಿಸಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ಸಹಾಯ ಮಾಡಿ.
– ಸ್ಥಳೀಯ/ ಪ್ರಾಥಮಿಕ ಆರೈಕೆದಾರರಿಗೆ ಬೆಂಬಲ ನೀಡಿ: ನಿಯಮಿತವಾಗಿ ದೂರವಾಣಿ ಕರೆಗಳನ್ನು ಮಾಡುವ ಮೂಲಕ ಮತ್ತು ಅವರ ಬೇಡಿಕೆ ಹಾಗೂ ಅಗತ್ಯಗಳ ಬಗ್ಗೆ ತಟಸ್ಥ ನಿಲುವಿನ ಮೂಲಕ ನಿಮ್ಮ ಸ್ಥಳೀಯ ಆರೈಕೆದಾರರು ಮತ್ತು ಹೆತ್ತವರಿಗೆ ಬೆಂಬಲವಾಗಿ. ಮನೆಗೆ ನಿಮ್ಮ ಭೇಟಿಯನ್ನು ಸ್ಥಳೀಯ ಆರೈಕೆದಾರರಿಗೆ ವಿಶ್ರಾಂತಿ ನೀಡುವುದಕ್ಕಾಗಿ ಉಪಯೋಗಿಸಿ (ಅದು ನಿಮ್ಮ ಸಹೋದರ/ ಸಹೋದರಿ ಅಥವಾ ತಾಯ್ತಂದೆಯರಲ್ಲಿ ಒಬ್ಬರೂ ಆಗಿರಬಹುದು).
-ಮುಂದಿನ ವಾರಕ್ಕೆ
ಡಾ| ಶೀತಲ್‌ರಾಜ್
ಕನ್ಸಲ್ಟಂಟ್ ಮೆಡಿಸಿನ್,
ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.