ನೆತ್ತಿಗೆ ಹತ್ತದಿರಲಿ ಸುರಕ್ಷಿತವಾಗಿ, ಸರಿಯಾಗಿ ನುಂಗಿ
Team Udayavani, Jan 26, 2020, 4:30 AM IST
ನಾವು ಬದುಕಲು ಆಹಾರ ಅತ್ಯಂತ ಅಗತ್ಯ. ಆದರೆ ನಾವಿಂದು ಈ ಅಗತ್ಯದ ನೆಲೆಯಿಂದ ಮುಂದುವರಿದು ಆಹಾರವನ್ನು ಅದರ ಮೌಲ್ಯ, ಕ್ಯಾಲೊರಿ, ಪ್ರಮಾಣ, ಅದರಲ್ಲಿರುವ ಅಂಶಗಳು, ರುಚಿ, ತಯಾರಿಸಿದ ವಿಧಾನ… ಇತ್ಯಾದಿ ಅಂಶಗಳನ್ನು ಪರಿಗಣಿಸುವುದನ್ನು ಆರಂಭಿಸಿದ್ದೇವೆ. ಆದರೆ ನಮ್ಮಲ್ಲಿ ಬಹುತೇಕ ಮಂದಿ ನಾವು ಹೇಗೆ ಆಹಾರ ಸೇವಿಸುತ್ತೇವೆ ಎಂಬುದರತ್ತ ಗಮನಹರಿಸಲು ಮರೆಯುತ್ತಿರುವುದು ನಿಜ.
ನಮ್ಮ ಹಿರಿಯರು “ಸರಿಯಾಗಿ ಜಗಿದು ತಿನ್ನಬೇಕು, ಉಣ್ಣುವಾಗ ಮಾತನಾಡಬಾರದು, ಮಾತನಾಡಿದರೆ ಅದು ನೆತ್ತಿಗೆ ಹತ್ತುತ್ತದೆ’ (ಉಸಿರುಗಟ್ಟುವುದು, ಮಂಡಿಗೇರುವುದು ಎಂದರೆ ಇದೇ) ಎಂಬುದಾಗಿ ಬುದ್ಧಿವಾದ ಹೇಳುವುದನ್ನು ನೀವು ಕೇಳಿರಬಹುದು. ವಯಸ್ಸಿನ ತಾರತಮ್ಯವಿಲ್ಲದೆ ಎಲ್ಲರೂ ಅನುಸರಿಸಬೇಕಾದ ಸಲಹೆ ಇದು. ಉಸಿರುಗಟ್ಟುವುದು ಅಥವಾ ನೆತ್ತಿಗೆ ಹತ್ತುವುದು ಎಂದರೆ ತಿನ್ನಬಹುದಾದ ಅಥವಾ ಇತರ ಬಾಹ್ಯ ವಸ್ತು ವ್ಯಕ್ತಿಯ ಉಸಿರಾಟ ಮಾರ್ಗಕ್ಕೆ ಸೇರುವುದು. ಇದರಿಂದ ವ್ಯಕ್ತಿಯ ಉಸಿರಾಟ ಮಾರ್ಗದಲ್ಲಿ ತಡೆಯುಂಟಾಗುತ್ತದೆ ಮತ್ತು ಶ್ವಾಸಕೋಶಕ್ಕೆ ವಾಯುಸಂಚಾರ ಭಾಗಶಃ ಅಥವಾ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ.
ಜಗತ್ತಿನ ಎಲ್ಲ ಜನಾಂಗಗಳು, ಸಂಸ್ಕೃತಿಗಳು, ಸ್ತ್ರೀ-ಪುರುಷ ಲಿಂಗಗಳು ಮತ್ತು ಎಲ್ಲ ವಯೋಮಾನದವರಲ್ಲಿ ಆಹಾರ ನೆತ್ತಿಗೆ ಹತ್ತುವುದು ಹೆಚ್ಚುತ್ತಿದೆ ಎಂದು ಅಧ್ಯಯನ ವರದಿಗಳು ಹೇಳುತ್ತವೆ. ವೃದ್ಧರಲ್ಲಿ ಇದು ಇನ್ನೂ ಹೆಚ್ಚಾಗಿದೆ. ಅಮೆರಿಕದಲ್ಲಿ ಅನುದ್ದೇಶಿತ ಮರಣಗಳಿಗೆ ಕಾರಣಗಳಲ್ಲಿ ಆಹಾರ ನೆತ್ತಿಗೆ ಹತ್ತುವುದು ನಾಲ್ಕನೆಯ ಸ್ಥಾನದಲ್ಲಿದೆ. ಆದರೂ ನಮ್ಮದೇ ಅನುಭವದ ಆಧಾರದಲ್ಲಿ ಹೇಳುವುದಾದರೆ ಆಹಾರ ನೆತ್ತಿಗೆ ಹತ್ತುವ ಅಪಾಯವನ್ನು ನಾವು ಬಹಳ ನಿರ್ಲಕ್ಷಿಸಿದ್ದೇವೆ. ಈ ಸಂಬಂಧಿ ಅಂಕಿಅಂಶಗಳು ಎಚ್ಚರಿಕೆಯ ಕರೆಗಂಟೆ ಬಾರಿಸುತ್ತಿದ್ದರೂ ನಾವು ಅಪಾಯದ ಗಂಭೀರತೆಯನ್ನು ಇನ್ನೂ ಮನಗಂಡಿಲ್ಲ.
ಆಹಾರದ ಜಗಿತದಲ್ಲಿ ಯಾವುದೇ ಸಮಸ್ಯೆಯನ್ನು ಹೊಂದಿಲ್ಲದ ಜನರಲ್ಲಿಯೂ ಜಗಿತದ ಅಸಮರ್ಪಕ ಅಭ್ಯಾಸವು ಆಹಾರ ನೆತ್ತಿಗೇರುವ ಅಪಾಯವನ್ನು ಹೆಚ್ಚಿಸಬಲ್ಲುದಾಗಿದೆ. ಆದ್ದರಿಂದ ಯಾವುದೇ ವಯಸ್ಸಿನವರಾಗಿರಲಿ, ಆಹಾರ ಸೇವಿಸುವ ಸಮಯದಲ್ಲಿ ಮುಂಜಾಗ್ರತೆ ಅಗತ್ಯ ಎಂಬುದಾಗಿ ಅಮೆರಿಕನ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಅಸೋಸಿಯೇಶನ್ ಎಚ್ಚರಿಕೆಯ ಸಲಹೆ ನೀಡುತ್ತದೆ.
ಈ ಅಂಶಗಳನ್ನು ನೆನಪಿನಲ್ಲಿಡಿ
ಆಹಾರ ತಯಾರಿ: ಖಾದ್ಯವಸ್ತುಗಳನ್ನು ಸೇವಿಸುವವರ ವಯಸ್ಸಿಗೆ ಸರಿಯಾಗಿ ತುಂಡುಗಳನ್ನು ಮಾಡಿಕೊಡಬೇಕು. ವಿಶೇಷವಾಗಿ ಮಕ್ಕಳಿಗೆ ದುಂಡನೆಯ ತುಂಡುಗಳನ್ನು ಕೊಡಬಾರದು, ಅವು ಅವರಲ್ಲಿ ಆಲಿಕೆಯ ರೂಪದಲ್ಲಿರುವ ವಾಯುಮಾರ್ಗದಲ್ಲಿ ಸೇರಿಕೊಳ್ಳುವ ಅಪಾಯವಿದೆ.
ಗಮನಕೊಟ್ಟು ಆಹಾರ ಸೇವಿಸಿ: ಮಕ್ಕಳಿಗೆ ಉಣ್ಣಿಸಲು ಅಥವಾ ತಿನ್ನಿಸಲು ಮೊಬೈಲ್ ಯಾ ಟಿವಿ ಬೇಕೇ ಬೇಕು ಎಂದು ಹೇಳುವ ಅನೇಕ ಹೆತ್ತವರನ್ನು ಕಂಡಿದ್ದೇನೆ. ಹೆತ್ತವರು ಇಂತಹ ಅಭ್ಯಾಸಗಳನ್ನು ಪ್ರೋತ್ಸಾಹಿಸಬಾರದು. ಆಹಾರದ ಮೇಲೆ ಗಮನ ಕೇಂದ್ರೀಕರಿಸಿ, ಆಹಾರ ಜಗಿಯುವ ಸರಿಯಾದ ಪದ್ಧತಿ ರೂಢಿಸಿಕೊಳ್ಳಲು ಮಕ್ಕಳಿಗೆ ತಿಳಿಹೇಳಿ. ವಿಭಿನ್ನ ಮಾದರಿಯ ಆಹಾರಗಳನ್ನು ಜಗಿಯುವ ಉತ್ತಮ ಪದ್ಧತಿಯನ್ನು ಅಭ್ಯಾಸ ಮಾಡಿಕೊಳ್ಳಲು ಹೆತ್ತವರು ಮಾದರಿಯಾಗಬೇಕು. ಹೆಚ್ಚುವರಿ ಆಹಾರವನ್ನು ಬಾಯಿಯಿಂದ ಹೊರಹಾಕುವ ಅಭ್ಯಾಸವನ್ನು ಮೃದುವಾಗಿ ನಿರುತ್ತೇಜಿಸಿ. ನೆನಪಿಡಿ, ಮಕ್ಕಳು ನೀವು ಹೇಳುವುದಕ್ಕಿಂತ ಹೆಚ್ಚಾಗಿ ನೀವು ಮಾಡುವುದನ್ನು ನೋಡಿ ಅನುಸರಿಸುತ್ತಾರೆ.
ಭಂಗಿ: ಸುರಕ್ಷಿತ ಆಹಾರ ಸೇವನೆಗಾಗಿ ಕುಳಿತು ತಿನ್ನುವ – ಉಣ್ಣುವ ಭಂಗಿಯನ್ನು ರೂಢಿಸಿಕೊಳ್ಳಿ. ಆಹಾರ ಸೇವಿಸುವ ಸಮಯದಲ್ಲಿ ಮಕ್ಕಳು ಓಡಾಡುವುದು ಬೇಡ. ವ್ಯಕ್ತಿಯು ಹಾಸಿಗೆಯಲ್ಲಿದ್ದರೆ ಅವರು ಎದ್ದು ಕುಳಿತು ಆಹಾರ ಸೇವಿಸಲಿ. ಯಾವುದೇ ಕಾರಣಕ್ಕೂ ಮಲಗಿರುವ ಭಂಗಿಯಲ್ಲಿ ಆಹಾರ ಸೇವಿಸಬಾರದು.
ದ್ರವಾಹಾರ ಸೇವನೆ: ಬಹುತೇಕ ಮಂದಿ ಗುಟುಕರಿಸಿ ಕುಡಿಯುವುದರ ಬದಲಾಗಿ ಒಂದೇಟಿಗೆ ಗಳಗಳನೆ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಹೀಗೆ ಗಳಗಳನೆ ಕುಡಿಯುವ ಹೊತ್ತಿನಲ್ಲಿ ಹಲವು ಸೆಕೆಂಡುಗಳ ಕಾಲ ಉಸಿರಾಟ ಸ್ಥಗಿತಗೊಳ್ಳಬೇಕಾಗುತ್ತದೆ, ಇದು ಗಮನಾರ್ಹ ಉದ್ವಿಗ್ನತೆಗೆ ಕಾರಣವಾಗುತ್ತದೆಯಲ್ಲದೆ ವಿಶೇಷವಾಗಿ ಮಕ್ಕಳು ಮತ್ತು ಹಿರಿಯರಲ್ಲಿ ಸಂಕೀರ್ಣ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದ್ದರಿಂದ ಸುರಕ್ಷೆ ಮತ್ತು ಆಸ್ವಾದಿಸಿ ಕುಡಿಯುವುದಕ್ಕಾಗಿ ಗುಟುಕರಿಸಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಮಾತಾಡಬಾರದು, ನಗಬಾರದು: ಆಹಾರ ಸೇವನೆ ಮತ್ತು ನಗುವುದು ಅಥವಾ ಮಾತನಾಡುವುದು ಏಕಕಾಲದಲ್ಲಿ ನಡೆಯಲೇಬಾರದು. ಸಾಮಾಜಿಕ ಸಂದರ್ಭಗಳಲ್ಲಿ ಒಂದು ತುತ್ತು ತೆಗೆದುಕೊಳ್ಳುವುದಕ್ಕೆ ಮೊದಲು ಮಾತನಾಡಿ ಅಥವಾ ಜಗಿದು ನುಂಗಿದ ಬಳಿಕ ಮಾತನಾಡಿ. ಊಟ ಉಪಾಹಾರ ಮುಗಿದ ಬಳಿಕ ವಿಸ್ತಾರವಾಗಿ ಮಾತನಾಡುವುದು ಹಿತಕರ.
ನಿಧಾನ, ನಿಧಾನ: ಗಬಗಬನೆ ಗಡಿಬಿಡಿಯಲ್ಲಿ ಉಣ್ಣುವುದು ಬೇಡ. ಆಹಾರ ಸೇವನೆಗೆ ಸಮಯ ಸಾಕಷ್ಟು ಸಿಗುವ ಹಾಗೆ ಹೊಂದಿಸಿಕೊಳ್ಳಿ. ಇದರಿಂದ ಸರಿಯಾದ ತುತ್ತುಗಳನ್ನು ಸಮರ್ಪಕವಾಗಿ ಜಗಿದು ಉಣ್ಣುವುದು ಸಾಧ್ಯವಾಗುತ್ತದೆ.
ಆಹಾರ ಮತ್ತು ನಿದ್ದೆಯ ನಡುವೆ ಅಂತರ: ಆಹಾರ ಸೇವಿಸಿದ ಕೂಡಲೇ ಮಲಗಬಾರದು ಎಂಬುದನ್ನು ನೆನಪಿಡಿ, ಹಾಗೆ ಮಾಡಿದರೆ ಉಳಿದ ಆಹಾರ ಶ್ವಾಸನಾಳಕ್ಕೆ ಸೇರುವ ಸಾಧ್ಯತೆಯಿದೆ. ಊಟ-ಉಪಾಹಾರದ ಬಳಿಕ 30 ನಿಮಿಷಗಳಾದರೂ ಕುಳಿತಿರಬೇಕು.
ಹಲ್ಲು ಹುಳುಕು, ಹಾಳಾಗಿರುವವರು: ಇವರಲ್ಲಿ ಬಾಯಿಯ ಸಂವೇದನೆ ಕಡಿಮೆಯಿರುತ್ತದೆ. ಇದರಿಂದ ಮಾಂಸಾಹಾರದಲ್ಲಿರುವ ಸಣ್ಣ ಮೂಳೆಗಳು ಇವರ ಅರಿವಿಗೆ ಬಾರದಿರುವ ಸಾಧ್ಯತೆ ಇದೆ. ಇಂಥವರು ವಿಶೇಷವಾಗಿ ಮಾಂಸಾಹಾರ ಸೇವನೆಯ ಸಂದರ್ಭದಲ್ಲಿ ಹೆಚ್ಚುವರಿ ಎಚ್ಚರಿಕೆ ವಹಿಸಬೇಕಾಗುತ್ತದೆ.
ಈ ಸರಳ ಹೆಜ್ಜೆಗಳನ್ನು ಅನುಸರಿಸುವ ಮೂಲಕ ಆಹಾರ ನೆತ್ತಿಗೆ ಹತ್ತುವ ಅಪಾಯವನ್ನು ದೂರ ಮಾಡಿ. ಸುರಕ್ಷಿತವಾಗಿ, ಚೆನ್ನಾಗಿ ಆಹಾರ ಸೇವಿಸಿ.
ಡಾ| ದೀಪಾ ಎನ್. ದೇವಾಡಿಗ
ಅಸೋಸಿಯೇಟ್ ಪ್ರೊಫೆಸರ್
ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ,
ಎಂಸಿಎಚ್‌ಪಿ, ಉಡುಪಿ ಟಿಎಂಎ ಪೈ ಆಸ್ಪತ್ರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.