ನೇತ್ರದಾನ ಅಂಧರ ಬಾಳು ಬೆಳಗಿಸುವ ದೃಢ ಸಂಕಲ್ಪ
Team Udayavani, Aug 13, 2017, 6:30 AM IST
ಒಬ್ಬ ವ್ಯಕ್ತಿಯು ತನ್ನ ಮರಣಾನಂತರ ನೇತ್ರಗಳನ್ನು ದಾನ ಮಾಡುವುದಾಗಿ ಸಂಕಲ್ಪ ಮಾಡುವುದೇ ನೇತ್ರದಾನವಾಗಿದೆ. ಈ ಸಂಕಲ್ಪ ಆತನ ನೇತ್ರಗಳನ್ನು ದಾನವಾಗಿ ಪಡೆದುಕೊಂಡಾಗ ಸಂಪೂರ್ಣಗೊಳ್ಳುತ್ತದೆ. ಒಬ್ಬ ವ್ಯಕ್ತಿಯು ನೇತ್ರದಾನ ಮಾಡುವ ಉದಾತ್ತ ಕಾರ್ಯದಿಂದ ಇಬ್ಬರು ಅಂಧರ ಬಾಳಿನಲ್ಲಿ ಬೆಳಕು ಮೂಡಬಲ್ಲದು. ಈ ಕಾರ್ಯವು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿರುವುದು ಮತ್ತು ದಾನದ ಉದ್ದೇಶದಿಂದ ಮಾಡುವುದಾಗಿದೆ.
ಕಾರ್ನಿಯಾವು (ಪಾರಪಟಲ) ಗಾಜಿನಂಥ ಪಾರದರ್ಶಕ ರಚನೆಯಾಗಿದ್ದು ಕಣ್ಣಿನ ಮುಂಭಾಗದಲ್ಲಿ ಇರುತ್ತದೆ. ಈ ಕಾರ್ನಿಯಾವು ಪಾರದರ್ಶಕವಾಗಿರಬೇಕು. ಯಾಕೆಂದರೆ ಇದರ ಮೂಲಕ ಬೆಳಕು ಕಣ್ಣಿನೊಳಗೆ ಹಾದು ಹೋಗುತ್ತದೆ. ಇದರಿಂದ ವ್ಯಕ್ತಿ ನೋಡುವಂತಾಗುತ್ತದೆ. ಪಾರದರ್ಶಕತೆ ನಷ್ಟವಾದರೆ ವ್ಯಕ್ತಿಗೆ ಕಾರ್ನಿಯಲ್ ಬ್ಲೆ„ಡ್‌ನೆಸ್ ಅರ್ಥಾತ್ ಕಾರ್ನಿಯಾ ಪಾರದರ್ಶಕತೆ ನಷ್ಟ ಹೊಂದಿದ್ದರಿಂದ ಉಂಟಾಗುವ ಅಂಧತ್ವ ಉಂಟಾಗುತ್ತದೆ. ಕಾರ್ನಿಯಾ ಪಾರದರ್ಶಕತೆ ನಷ್ಟಕ್ಕೆ ಪ್ರಮುಖ ಕಾರಣಗಳು ಇವು; ಹಾನಿ, ಸೋಂಕು, ರಾಸಾಯನಿಕಗಳಿಂದ ಉಂಟಾದ ಹಾನಿ, ಪೌಷ್ಟಿಕಾಂಶ ಕೊರತೆ, ವಿಟಮಿನ್ ಎ ಕೊರತೆ.
ಭಾರತದಲ್ಲಿ ಸುಮಾರು 6.8 ಮಿಲಿಯನ್ ಜನರಿಗೆ ಕಾರ್ನಿಯಲ್ ಅಂಧತ್ವ ಇದೆ. ಈ ಸಂಖ್ಯೆ 2020ರ ವೇಳೆಗೆ 10.6ಕ್ಕೆ ಏರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ನ್ಯಾಷನಲ್ ಪ್ರೋಗ್ರ್ಯಾಮ್ ಫಾರ್ ಕಂಟ್ರೋಲ್ ಆಫ್ ಬ್ಲೆ„ಡ್‌ನೆಸ್ ಎಸ್ಟಿಮೇಟ್ಸ್ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 25ರಿಂದ 30 ಸಾವಿರ ಕಾರ್ನಿಯಲ್ ಅಂಧತ್ವ ಪ್ರಕರಣಗಳು ವರದಿಯಾಗುತ್ತಿವೆ. ಈ ರೀತಿಯ ಅಂಧತ್ವವನ್ನು ಕೇವಲ ಕಾರ್ನಿಯಾವನ್ನು ಬದಲಾಯಿಸುವುದರಿಂದ ಮಾತ್ರವೇ ನಿವಾರಿಸಬಹುದಾಗಿರುತ್ತದೆ. ಹಾನಿಯಾದ ಕಾರ್ನಿಯಾವನ್ನು ಬದಲಾಯಿಸಿ ದಾನಿಯಿಂದ ಸ್ವೀಕೃತವಾದ ಸುಸ್ಥಿತಿಯ ಕಾರ್ನಿಯಾವನ್ನು ಹೊಂದಿಸಿದಲ್ಲಿ ಮಾತ್ರ ಅಂಧತ್ವದಿಂದ ಮುಕ್ತಿ ಹೊಂದಬಹುದಾಗಿದೆ. ಕಾರ್ನಿಯಾ ಬದಲಾವಣೆ ಮತ್ತು ಸರಿಯಾದ ಕಾರ್ನಿಯಾವನ್ನು ಹೊಂದಿಸುವುದು ಕಡಿಮೆ ಅಪಾಯ ಸಾಧ್ಯತೆಗಳು ಇರುವ ಅಂಗಾಗ ದಾನವಾಗಿದೆ. ಯಾಕೆಂದರೆ ಕಾರ್ನಿಯಾ ರೀಪ್ಲೇಸ್‌ಮೆಂಟ್ ವೇಳೆ ಕಾರ್ನಿಯಾ ಸ್ವೀಕರಿಸುವವನ ದೇಹವು ನಿರಾಕರಿಸುವ ಅಪಾಯದ ಮಟ್ಟ ಕಡಿಮೆಯಾಗಿರುತ್ತದೆ.
ನೇತ್ರದಾನ ಪ್ರಮಾಣವು ಅದರ ಬೇಡಿಕೆಯ ಅಗತ್ಯಕ್ಕಿಂತ ಬಹಳ ಕಡಿಮೆ ಇದೆ. ಆದ್ದರಿಂದ ನಾವೆಲ್ಲರೂ ನೇತ್ರದಾನ ಮಾಡುವ ದೃಢ ಸಂಕಲ್ಪ ಮಾಡೋಣ. ನೇತ್ರದಾನದ ಮಹತ್ವವನ್ನು ಉಲ್ಲೇಖೀಸುವಂತಹ ಎರಡು ಸನ್ನಿವೇಶಗಳನ್ನು ಇಲ್ಲಿ ಹಂಚಿಕೊಳ್ಳಲು ಇಚ್ಛಿಸುತ್ತೇನೆ.
ಹರೀಶನೆಂಬ ಹುಡುಗ ಎಂಟನೆಯ ತರಗತಿಯಲ್ಲಿದ್ದ. ಅವನ ಎರಡು ಕಣ್ಣುಗಳಲ್ಲಿ ಕೆರೆಟೋಕೋನಸ್ ಎಂಬ ಕಾಯಿಲೆಯ ಲಕ್ಷಣಗಳಿದ್ದವು. ಅವನಿಗೆ ಕನ್ನಡಕ ಪ್ರಯೋಗ ಮಾಡಿದರೂ ಸಫಲವಾಗದೆ ದಾನ ಮಾಡಿದ ಕಣ್ಣುಗಳಿಂದ ಕಣ್ಣಿನ ಕಸಿ ಮಾಡಿದಾಗ ಎರಡೂ ಕಣ್ಣುಗಳಲ್ಲೂ ಉತ್ತಮ ದೃಷ್ಟಿ ಬಂದು ಅವನೀಗ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ.
ತಿಮ್ಮಪ್ಪ ಗದ್ದೆ ಕೆಲಸ ಮಾಡಿ ಜೀವನ ಮಾಡುವ ಒಬ್ಬ ರೈತ. ಒಂದು ಕಣ್ಣು ಪೆಟ್ಟಾಗಿ ಕಳೆದುಕೊಂಡಿದ್ದ. ಅವನ ಇನ್ನೊಂದು ಕಣ್ಣಿಗೆ ಭತ್ತ ತಾಗಿ ಹುಣ್ಣಾಗಿತ್ತು. ಹುಣ್ಣು ವಾಸಿಯಾಗದಿದ್ದಾಗ, ಯಾರೋ ಪುಣ್ಯಾತ್ಮರು ದಾನ ಮಾಡಿದ ಕಣ್ಣುಗಳನ್ನು ಅಳವಡಿಸಿದಾಗ ಅವರು ಅವರ ದಿನನಿತ್ಯದ ಕೆಲಸಗಳನ್ನು ಮಾಡುವಂತಾಯಿತು.
ಮೇಲಿನ ಎರಡು ಸನ್ನಿವೇಶಗಳಲ್ಲಿ ದಾನಿಗಳು ನೇತ್ರದಾನ ಮಾಡದೇ ಇರುತ್ತಿದ್ದಲ್ಲಿ ಇಂತಹ ಹಲವು ಕಣ್ಣಿನ ಪಾರಪಟಲದ ಅಂಧತ್ವ ಹೊಂದಿರುವ ವ್ಯಕ್ತಿಗಳು ಈ ಸುಂದರ ಜಗತ್ತನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ.
ನೇತ್ರದಾನ ಪ್ರಕ್ರಿಯೆಯಲ್ಲಿ ಮುಖ ವಿರೂಪವಾಗುವುದಿಲ್ಲ.
ಇಡೀ ಕಣ್ಣನ್ನು ತೆಗೆದುಕೊಳ್ಳಬಹುದು ಅಥವಾ ಕೆಲವೊಮ್ಮೆ ಕಾರ್ನಿಯಾವನ್ನು ಮಾತ್ರ ತೆಗೆಯಬಹುದು.
– ನೇತ್ರದಾನದ ಬಳಿಕ ದಾನಿಯ ಕಣ್ಣುಗಳು ಮುಚ್ಚಿದ ಸ್ಥಿತಿಯಲ್ಲಿಯೇ ಇರುತ್ತವೆ.
– ನೇತ್ರದಾನ ಪ್ರಕ್ರಿಯೆಯಲ್ಲಿ ಅಥವಾ ಬಳಿಕ ರಕ್ತ ಬರುವುದಿಲ್ಲ.
– ನೇತ್ರದಾನ ಮಾಡಲು ಯಾವುದೇ ಖರ್ಚು ಇಲ್ಲ.
– ಕಾರ್ನಿಯಾವನ್ನು ಕೊಳ್ಳಲು ಅಥವಾ ಮಾರಲು ಸಾಧ್ಯವಿಲ್ಲ
ಎಸ್‌ಎಂಎಸ್ ಮೂಲಕ ಸಮೀಪದ ನೇತ್ರನಿಧಿಯ ಮಾಹಿತಿ ಪಡೆಯಿರಿ
ವರ್ಷಂಪ್ರತಿ ಆಗಸ್ಟ್ 25ರಿಂದ ಸೆಪ್ಟಂಬರ್ 8ರ ವರೆಗೆ ನೇತ್ರದಾನ ಪಕ್ಷಾಚರಣೆ ಮಾಡ ಲಾಗುತ್ತದೆ. ನೀವು ನಿಮ್ಮ ಹತ್ತಿರದ ನೇತ್ರನಿಧಿಯ ವಿವರಗಳನ್ನು ತಿಳಿದುಕೊಳ್ಳಬೇಕಾದ್ದಲ್ಲಿ 9902080011ಗೆ ಪಿನ್‌ಕೋಡ್ ನ್ನು ಎಸ್‌ಎಂಎಸ್ ಮಾಡಬಹುದು. ಇದರಿಂದ ನಿಮ್ಮ ಮೊಬೈಲ್‌ಗೆ ಮಾಹಿತಿ ಬರುತ್ತದೆ. ನೇತ್ರನಿಧಿಯಲ್ಲಿ ನೀವು ನೇತ್ರದಾನ ಮಾಡುವ ಬಗ್ಗೆ ಶಪಥಪೂರ್ವಕವಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ತಿಮ್ಮಪ್ಪನವರಿಗೆ ನೇತ್ರದಾನ ಮಾಡಿದ ಅನಂತರ ಅವರ ಗೆಳೆಯರಾದ ಅಧ್ಯಾಪಕರೊಬ್ಬರು ನಮ್ಮೊಂದಿಗೆ ನೇತ್ರದಾನದ ವಿಷಯವಾಗಿ ತಮ್ಮಲ್ಲಿರುವ ಸಂದೇಹಗಳನ್ನು ಹೀಗೆ ಪರಿಹರಿಸಿಕೊಂಡರು
– ಅಧ್ಯಾಪಕರು: ನೇತ್ರದಾನ ಎಂದರೇನು?
– ನೇತ್ರ ತಜ್ಞರು: ಒಬ್ಬ ವ್ಯಕ್ತಿಯು ತನ್ನ ಮರಣಾನಂತರ ನೇತ್ರಗಳನ್ನು ದಾನ ಮಾಡುವುದಾಗಿ ಶಪಥ ಮಾಡುವುದೇ ನೇತ್ರದಾನವಾಗಿದೆ. ವ್ಯಕ್ತಿಯು ತನ್ನ ನೇತ್ರಗಳನ್ನು ದಾನ ಮಾಡುವುದರಿಂದ ಇಬ್ಬರು ವ್ಯಕ್ತಿಗಳ ಬದುಕಿನಲ್ಲಿ ಬೆಳಕು ಮೂಡುತ್ತದೆ.
– ಅಧ್ಯಾಪಕರು: ಕಾರ್ನಿಯಲ್ (ಪಾರಪಟಲ) ಅಂಧತ್ವ ಎಂದರೇನು?
– ಕಾರ್ನಿಯಾವು (ಪಾರಪಟಲ) ಗಾಜಿನಂಥ ಪಾರದರ್ಶಕ ರಚನೆಯಾಗಿದ್ದು ಕಣ್ಣಿನ ಮುಂಭಾಗದಲ್ಲಿ ಇರುತ್ತದೆ. ಇದು ಪಾರದರ್ಶಕವಾಗಿದ್ದರೆ ಮಾತ್ರ ವ್ಯಕ್ತಿಗೆ ದೃಷ್ಟಿ ಇರುತ್ತದೆ. ಇದು ಹಾನಿಯಾದಾಗ ಉಂಟಾಗುವ ಅಂಧತ್ವವೇ ಕಾರ್ನಿಯಲ್ ಅಂಧತ್ವ.
– ಯಾಕೆ ನೇತ್ರದಾನ ಮಾಡಬೇಕು?
– ಭಾರತದಲ್ಲಿ ಸುಮಾರು 6.8 ಮಿಲಿಯನ್ ಜನರಿಗೆ ಕಾರ್ನಿಯಲ್ ಅಂಧತ್ವ ಇದೆ. ಈ ಸಂಖ್ಯೆ 2020ರ ವೇಳೆಗೆ 10.6 ಮಿಲಿಯನ್‌ಗೆ ಏರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಆದ್ದರಿಂದ ನಾವೆಲ್ಲರೂ ನೇತ್ರದಾನ ಮಾಡುವ ಮೂಲಕ ಕಾರ್ನಿಯಾ ಅಂಧತ್ವ ನಿವಾರಿಸಲು ದೃಢ ಸಂಕಲ್ಪ ಕೈಗೊಳ್ಳಬೇಕಿದೆ.
– ಕಾರ್ನಿಯಲ್ ಅಂಧತ್ವ ನಿವಾರಣೆ ಹೇಗೆ?
– ಕಾರ್ನಿಯಲ್ ಅಂಧತ್ವವನ್ನು ಕೇವಲ ಹಾನಿಯಾದ ಕಾರ್ನಿಯಾವನ್ನು ಬದಲಾಯಿಸಿ ಸುಸ್ಥಿತಿಯಲ್ಲಿರುವ ಕಾರ್ನಿಯಾವನ್ನು ಹೊಂದಿಸುವ ಮೂಲಕವಷ್ಟೇ ನಿವಾರಿಸಬಹುದಾಗಿದೆ. ಈ ಕಾರ್ನಿಯಾವನ್ನು ಮೃತ ವ್ಯಕ್ತಿಯ ಕಣ್ಣಿನಿಂದ ಪಡೆಯಬಹುದಾಗಿರುತ್ತದೆ.
-ನೇತ್ರದಾನ ಮಾಡುವ ಶಪಥ ಹೇಗೆ ಮಾಡುವುದು?
– ವ್ಯಕ್ತಿಯು ತಾನು ಮೃತಪಟ್ಟ ಬಳಿಕ ನೇತ್ರದಾನ ಮಾಡುವ ಬಗ್ಗೆ ಶಪಥ ಮಾಡಿ ಅರ್ಜಿ ನೀಡಬೇಕು. ಈ ಶಪಥವನ್ನು ಪೂರ್ಣಗೊಳಿಸಲು ಮೃತ ವ್ಯಕ್ತಿಯ ಕುಟುಂಬದ ಹಾಗೂ ಸಂಬಂಧಿಕರ ಸಹಕಾರವೂ, ಒಪ್ಪಿಗೆಯೂ ಬೇಕಾಗುತ್ತದೆ. ಯಾಕೆಂದರೆ ವ್ಯಕ್ತಿ ಮೃತಪಟ್ಟ ಬಳಿಕ ಆತನ ಶಪಥವನ್ನು ಈಡೇರಿಸುವಲ್ಲಿ ಮುಖ್ಯ ಪಾತ್ರ ವಹಿಸುವವರು ಅವರೇ ಆಗಿರುತ್ತಾರೆ.
-ಯಾರು ನೇತ್ರದಾನ ಮಾಡುವ ಶಪಥ ಮಾಡಬಹುದು?
– ಯಾರು ಬೇಕಾದರೂ ನೇತ್ರದಾನದ ಶಪಥ ಮಾಡಬಹುದಾಗಿರುತ್ತದೆ. ಇದಕ್ಕೆ ಯಾವುದೇ ವಯೋಮಿತಿ ಇರುವುದಿಲ್ಲ. ವ್ಯಕ್ತಿ ಕನ್ನಡಕ ಧರಿಸುತ್ತಿದ್ದರೂ ಆತ ನೇತ್ರದಾನ ಮಾಡಬಹುದು. ವ್ಯಕ್ತಿಗೆ ಮಧುಮೇಹ, ಅತಿಯಾದ ರಕ್ತದೊತ್ತಡ ಇದ್ದರೂ ಆತ ನೇತ್ರದಾನ ಮಾಡಬಹುದಾಗಿದೆ. ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದವರೂ ನೇತ್ರದಾನವನ್ನು ಮಾಡಬಹುದಾಗಿದೆ.
– ನೇತ್ರದಾನ ಪಡೆದುಕೊಳ್ಳುವುದು ಯಾವಾಗ?
– ವ್ಯಕ್ತಿ ಮೃತಪಟ್ಟ ಬಳಿಕವಷ್ಟೇ ನೇತ್ರದಾನ ಪಡೆದುಕೊಳ್ಳಬಹುದಾಗಿರುತ್ತದೆ. ಈ ಪ್ರಕ್ರಿಯೆ ವ್ಯಕ್ತಿ ಮೃತಪಟ್ಟ ಸಮಯದಿಂದ 4ರಿಂದ 6 ಗಂಟೆಯೊಳಗೆ ನಡೆಯಬೇಕಾಗಿರುತ್ತದೆ.
– ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕಾಗಿರುತ್ತದೆ?
– ನಿಮ್ಮ ಹತ್ತಿರದ ಸಂಬಂಧಿಕರು ತೀರಿಕೊಂಡ ಕೂಡಲೇ…
– ಮೃತ ವ್ಯಕ್ತಿಯ ಕಣ್ಣುಗಳನ್ನು ಮುಚ್ಚಬೇಕು.
– ಫ್ಯಾನ್ ಹಾಕಬಾರದು.
– ಮೃತ ವ್ಯಕ್ತಿಯ ಮುಚ್ಚಿದ ಕಣ್ಣುಗಳ ಮೇಲೆ ಒದ್ದೆ ಬಟ್ಟೆ ಅಥವಾ ಮಂಜುಗಡ್ಡೆಯನ್ನು ಇರಿಸಬೇಕು.
ಈ ಬಳಿಕ ಹತ್ತಿರದ ನೇತ್ರನಿಧಿಯನ್ನು ಸಂಪರ್ಕಿಸಿ ವಿಳಾಸ, ದೂರವಾಣಿ ಸಂಖ್ಯೆ ಸಹಿತ ಸರಿಯಾದ ಮಾಹಿತಿ ನೀಡಬೇಕು. ನೇತ್ರನಿಧಿಯ ವೈದ್ಯರು ಮತ್ತು ಸಿಬಂದಿ ಸ್ಥಳಕ್ಕಾಗಮಿಸಿ ನೇತ್ರಗಳನ್ನು ದಾನವಾಗಿ ಪಡೆಯುತ್ತಾರೆ.
– ಡಾ| ಸುಧಾ ಜಿ. ಮೆನನ್,
ಅಸಿಸ್ಟೆಂಟ್ ಪ್ರೊಫೆಸರ್,
ಆಫ¤ಲ್ಮಾಲಜಿ ವಿಭಾಗ, ಕೆಎಂಸಿ ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.