ಕಾಯಿಲೆಗಳ ಪತ್ತೆ ಹಚ್ಚುವಿಕೆ ಮತ್ತು ನಿರ್ವಹಣೆಯಲ್ಲಿ ವೈದ್ಯಕೀಯ ಪ್ರಯೋಗಾಲಯಗಳ ಮಹತ್ವ


Team Udayavani, Mar 20, 2022, 7:15 AM IST

ಕಾಯಿಲೆಗಳ ಪತ್ತೆ ಹಚ್ಚುವಿಕೆ ಮತ್ತು ನಿರ್ವಹಣೆಯಲ್ಲಿ ವೈದ್ಯಕೀಯ ಪ್ರಯೋಗಾಲಯಗಳ ಮಹತ್ವ

ವೈದ್ಯಕೀಯ ಪ್ರಯೋಗಾಲಯವು ಆರೋಗ್ಯ ರಕ್ಷಣ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದೆ. ಇದು ರೋಗನಿರ್ಣಯ, ಚಿಕಿತ್ಸೆ ಮತ್ತು ನಿರ್ವಹಣೆಯನ್ನು ನಿರ್ವಹಿಸಲು ವೈದ್ಯರಿಗೆ ಸಹಾಯ ಮಾಡುವುದರ ಮೂಲಕ ಗುಣಮಟ್ಟದ ಆರೋಗ್ಯ ರಕ್ಷಣ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಗುಣಮಟ್ಟದ ಪ್ರಯೋಗಾಲಯ ನೀಡುವ ಸಂಪೂರ್ಣ ಮಾಹಿತಿಯ ಬಳಕೆಯು ರೋಗ ಪತ್ತೆ ಹಚ್ಚುವಿಕೆ ಮತ್ತು ನಿರ್ವಹಣೆಯ ಮೇಲೆ ತುಂಬಾ ಪ್ರಭಾವ ಬೀರುತ್ತದೆ.

ಪ್ರಯೋಗಾಲಯದ ಕಾರ್ಯ ವೈಖರಿ
ರೋಗ ಚಿಕಿತ್ಸೆ ಮತ್ತು ಅದರ ನಿರ್ವಹಣೆಯಲ್ಲಿ ಪ್ರಯೋಗಾಲಯದ ಮಹತ್ವ ಮತ್ತು ಅಗತ್ಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಜನರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಲು ಸಾಮಾನ್ಯವಾಗಿ ನಿರಾಕರಿಸುತ್ತಾರೆ. ಹೋದರೂ, ಪರೀಕ್ಷೆಗಳನ್ನು ಮಾಡಿಸದೆ ಔಷಧ ಕೊಟ್ಟರೆ ಸಾಕು ಎಂದುಕೊಳ್ಳುತ್ತಾರೆ. ಆದರೆ ಕಾಯಿಲೆ, ಅದರ ಚಿಕಿತ್ಸೆ ಮತ್ತು ನಿರ್ವಹಣೆಯ ನಿರ್ಧಾರ ತೆಗೆದುಕೊಳ್ಳಲು, ರೋಗಿಯ ನಿರ್ದಿಷ್ಟ ಸ್ಥಿತಿಯನ್ನು ಅರಿಯಲು ಹಾಗೂ ಜನ್ಮಜಾತ ಕಾಯಿಲೆಗಳ ತಪಾಸಣೆ ಇತ್ಯಾದಿಗಳಿಗೆ ವೈದ್ಯರು ಸಾಮಾನ್ಯವಾಗಿ ಪ್ರಯೋಗಾಲಯದ ಫಲಿತಾಂಶಗಳನ್ನು ಬಳಸುತ್ತಾರೆ ಮತ್ತು ರೋಗದ ನಿಖರ ಮಾಹಿತಿಗೆ ಅದು ಬಹಳ ಅಗತ್ಯವಾಗಿರುತ್ತದೆ. ಅದಕ್ಕಾಗಿ ರೋಗ ಲಕ್ಷಣಗಳಿಗುಣವಾಗಿ ಕಾಯಿಲೆಯ ಗುರುತಿಸುವಿಕೆಗೆ ಪೂರಕವಾದಂತಹ ಅಗತ್ಯವಿರುವ ಪರೀಕ್ಷೆಗಳನ್ನು ಮಾತ್ರ ಮಾಡಲು ವೈದ್ಯರು ಆದೇಶಿಸುತ್ತಾರೆ.

ವೈದ್ಯಕೀಯ ಪ್ರಯೋಗಾಲಯದಲ್ಲಿ ರೋಗಿಯ ರಕ್ತ ಅಥವಾ ಕಾಯಿಲೆಗಳಿಗೆ ಸಂಬಂಧಪಟ್ಟ ಇನ್ನಿತರ ಯಾವುದೇ ಮಾದರಿಗಳನ್ನು ಸಂಗ್ರಹಿಸಿ ಕಾಯಿಲೆಯ ಪತ್ತೆ ಹಚ್ಚುವಿಕೆ ಮತ್ತು ಅದರ ನಿರ್ವಹಣೆಗೆ ಅವಶ್ಯವಿರುವಂತಹ ಅನೇಕ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಉದಾಹರಣೆಗೆ, ರೋಗಿಯು ಶ್ವಾಸಕೋಶಕ್ಕೆ ಸಂಬಂಧಪಟ್ಟ ರೋಗ ಲಕ್ಷಣಗಳನ್ನು ಹೊಂದಿದ್ದರೆ ಸಾಮಾನ್ಯವಾಗಿ ಕಫವನ್ನು ಪರೀಕ್ಷಿಸಲಾಗುವುದು, influenza ಕೊರೊನದಂತಹ ಕಾಯಿಲೆಗಳನ್ನು ಪತ್ತೆಮಾಡಲು ಗಂಟಲಿನ ಮಾದರಿಯನ್ನು  ತೆಗೆದು ಪರೀಕ್ಷಿಸಲಾಗುವುದು. ಜ್ವರದ ನಿರ್ದಿಷ್ಟ ಕಾರಣವನ್ನು ತಿಳಿಯಲು ರಕ್ತದ ಮಾದರಿಯನ್ನು ಪರೀಕ್ಷಿಸಲಾಗುವುದು. ಹೀಗೆ ರೋಗಲಕ್ಷಣಗಳಿಗುಣವಾಗಿ ಸೂಕ್ತವಾದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುವುದು. ಕಾಯಿಲೆಯ ಗುರುತಿಸುವಿಕೆ ಮತ್ತು ನಿರ್ವಹಣೆಗೆ ಮಾತ್ರವಲ್ಲದೆ ಕಾಯಿಲೆಯ ನಿಖರ ಹಾನಿಕಾರಕ ವಿಷಯ ಲಕ್ಷಣಗಳನ್ನು ತಿಳಿಯಲು, ರೋಗ ಪಸರಿಸುವ
ಸಂಪೂರ್ಣ ಮಾಹಿತಿಯನ್ನು ತಿಳಿಯಲು, ಸಾಂಕ್ರಾಮಿಕ ರೋಗ ಹರಡುವ ಸೂಕ್ಷ್ಮಾಣುಜೀವಿಗಳನ್ನು ಗುರುತಿಸಲು ಮತ್ತು ಚಿಕಿತ್ಸೆಗೆ ಸೂಕ್ತವಾದ ಔಷಧವನ್ನ ತಿಳಿದುಕೊಳ್ಳಲು ಅವಶ್ಯವಿರುವ ವಿವಿಧ ಪರೀಕ್ಷೆಗಳನ್ನು ಮಾಡಲಾಗುವುದು.

ಸಾಂಕ್ರಾಮಿಕ ಕಾಯಿಲೆಗಳ ಗುರುತಿಸುವಿಕೆ ಮತ್ತು ನಿರ್ವಹಣೆ
ಅನೇಕ ರೀತಿಯ ಸಾಂಕ್ರಾಮಿಕ ಕಾಯಿಲೆಗಳಾದ ಕ್ಷಯ (ಟ್ಯುಬರ್‌ಕ್ಯುಲಾಸಿಸ್‌-ಟಿಬಿ), ನ್ಯುಮೋನಿಯಾ, ಎಚ್‌ಐವಿ, ಹೆಪಟೈಟಿಸ್‌, ಟೈಫಾಯಿಡ್‌ ಇತ್ಯಾದಿಗಳನ್ನು ಪ್ರಯೋಗಾಲಯದಲ್ಲಿ ರೋಗಿಯ ಮಾದರಿಗಳನ್ನು ಪರೀಕ್ಷಿಸಿ ಪತ್ತೆ ಹಚ್ಚಬಹುದು ಮತ್ತು ಕಾಯಿಲೆಗೆ ಸಂಬಂಧ ಪಟ್ಟ ಇತರ ಮಾಹಿತಿಗಳನ್ನು ತಿಳಿದುಕೊಳ್ಳಬಹುದು. ವೈದ್ಯಕೀಯ ಪ್ರಯೋಗಾಲಯಗಳು ಸಾಂಕ್ರಾಮಿಕ ರೋಗಗಳನ್ನು ಗುರುತಿಸಲು ಸಹಾಯವಾಗುವುದಲ್ಲದೆ, ಯಾವ ರೋಗಾಣುಗಳು ಕಾಯಿಲೆಗೆ ಕಾರಣವಾಗಿವೆ, ಯಾವ ಸೂಕ್ಷ್ಮಾಣುಜೀವಿಗಳಿಂದ ರೋಗವು ಉಲ್ಬಣಿಸುತ್ತಿದೆ ಮತ್ತು ರೋಗವನ್ನು ಗುಣಪಡಿಸಲು ಯಾವ ರೀತಿಯ ಔಷಧಗಳನ್ನು ಬಳಸಬಹುದು ಎಂದು ಖಚಿತ ಮಾಹಿತಿ ನೀಡುತ್ತವೆ. ಚಿಕಿತ್ಸೆಯ ಅನಂತರ ರೋಗಿಯ ದೇಹಸ್ಥಿತಿಯ ಬಗ್ಗೆ ನಿಖರವಾಗಿ ತಿಳಿಯಲು ಬೇಕಾಗಿರುವ ಅನೇಕ ಮಾಹಿತಿಗಳನ್ನಲ್ಲದೆ, ಕಾಯಿಲೆಯು ಸಂಪೂರ್ಣ ಗುಣವಾಗಿದೆಯೇ ಅಥವಾ ಔಷಧ ಪರಿಣಾಮ ಬೀರುತ್ತಿದೆಯೇ ಅಥವಾ ಔಷಧವನ್ನು ಮುಂದುವರಿಸಬೇಕೇ ಇತ್ಯಾದಿಗಳನ್ನು ನಿರ್ಣಯಿಸಲು ಬೇಕಾಗಿರುವಂಥ ಪ್ರಮುಖ ಮಾಹಿತಿಗಳನ್ನು ಒದಗಿಸುತ್ತದೆ. ಉದಾಹರಣೆಗೆ; ರೋಗಿಯು ತೀವ್ರವಾದ ಜ್ವರದಿಂದ ಬಳಲುತ್ತಿದ್ದು, ಔಷಧ ಪರಿಣಾಮ ಬೀರದಿದ್ದಲ್ಲಿ, ಯಾವ ರೀತಿಯ ಜ್ವರ, ಯಾವುದರಿಂದ ಬರುತ್ತಿದೆ ಅಥವಾ ಯಾವ ರೋಗಾಣುವಿನಿಂದ ಬರುತ್ತಿದೆ ಎಂದು ತಿಳಿಯಲು ರೋಗಿಯ ರಕ್ತದ ಮಾದರಿಯನ್ನು ಪರೀಕ್ಷಿಸಲಾಗುತ್ತದೆ. ಪ್ರಯೋಗಾಲಯಗಳಲ್ಲಿ ಮಾಡುವ ಪರೀಕ್ಷೆಗಳಿಂದ ಜ್ವರವು ಟೈಫಾಯಿಡ್‌, ಡೆಂಗ್ಯೂ, ಮಲೇರಿಯಾ- ಹೀಗೆ ಯಾವುದಿರಬಹುದು ಎಂದು ನಿಖರವಾಗಿ ಗೊತ್ತಾಗುತ್ತದೆ. ಇಂತಹ ಜ್ವರಕ್ಕೆ ಯಾವ ರೀತಿಯ ಚಿಕಿತ್ಸೆಯನ್ನು (ಆಂಟಿಮೈಕ್ರೋಬಿಯಲ್ಸ್‌) ಪ್ರಾರಂಭಿಸಬಹುದು ಎಂದು ತಿಳಿದುಬರುತ್ತದೆ. ಚಿಕಿತ್ಸೆಯ ಪರಿಣಾಮವಾಗಿ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿದ್ದಾನೆಯೇ ಎಂದು ತಿಳಿಯಲು ರೋಗಿಯ ರಕ್ತದ ಮಾದರಿಯನ್ನು ಪುನಃ ಪರೀಕ್ಷಿಸಿ ಹೇಳಬಹುದಾಗಿದೆ.

ಸೋಂಕುರಹಿತ ಕಾಯಿಲೆಗಳ
ಗುರುತಿಸುವಿಕೆ ಮತ್ತು
ನಿರ್ವಹಣೆ
ಸೋಂಕುರಹಿತ ಕಾಯಿಲೆಗಳಾದ ಮಧುಮೇಹ, ಸಂಧಿವಾತ, ಹೃದಯದ ಸಮಸ್ಯೆ, ಮೂತ್ರಪಿಂಡ ಸಮಸ್ಯೆ, ಯಕೃತ್ತಿನ ಸಮಸ್ಯೆ, ಥೈರಾಯಿಡ್‌ ಸಮಸ್ಯೆ ಇತ್ಯಾದಿ ಅನೇಕ ಕಾಯಿಲೆಗಳು ಪ್ರಯೋಗಾಲಯದಲ್ಲಿ ಮಾಡುವ ವಿವಿಧ ರೀತಿಯ ಪರೀಕ್ಷೆಗಳಿಂದ ತಿಳಿದುಬರುವುದಲ್ಲದೆ,ಕಾಯಿಲೆಯು ಯಾವ ಹಂತದಲ್ಲಿದೆ ಎನ್ನುವುದನ್ನೂ ತಿಳಿಯಬಹುದಾಗಿದೆ. ಉದಾಹರಣೆಗೆ; ಥೈರಾಯಿಡ್‌ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳಲು ವೈದ್ಯರು ಹಲವು ವಿಧಾನಗಳನ್ನು ಬಳಸುತ್ತಾರೆ. ಇದರೊಂದಿಗೆ ಥೈರಾಯಿಡ್‌ ಸ್ಟಿಮ್ಯುಲೇಟಿಂಗ್‌ ಹಾರ್ಮೋನ್‌, ಟಿ3, ಟಿ4ಇತ್ಯಾದಿ ಪರೀಕ್ಷೆಗಳನ್ನು ಮಾಡಲು ಆದೇಶಿಸುತ್ತಾರೆ. ಇವುಗಳ ಮಟ್ಟದಲ್ಲಿ ಕಂಡುಬರುವ ಏರುಪೇರಿನಿಂದ ರೋಗಿಗೆ ಥೈರಾಯಿಡ್‌ ಸಮಸ್ಯೆ ಇರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಸೂಕ್ತವಾದಂತಹ ಚಿಕಿತ್ಸೆಯ ಅನಂತರ ಕಾಯಿಲೆಯು ಉಲ್ಬಣಿಸಿದೆಯೇ, ಹತೋಟಿಯಲ್ಲಿದೆಯೇ ಅಥವಾ ಗುಣವಾಗಿದೆಯೇ ಎಂದು ರೋಗದ ಬಗ್ಗೆ ನಿಖರವಾಗಿ ತಿಳಿಯಲು ಪ್ರಯೋಗಾಲಯಗಳು ಸಹಾಯ ಮಾಡುತ್ತವೆ.

ಜನ್ಮಜಾತ ಕಾಯಿಲೆಗಳ ಪತ್ತೆ ಹಚ್ಚುವಿಕೆ ಮತ್ತು ಗುರುತಿಸುವಿಕೆ
ರೋಗಿಯ ದೈಹಿಕ ಪರೀಕ್ಷೆಯಿಂದ ಒದಗುವ ಮಾಹಿತಿ ಮತ್ತು ಕುಟುಂಬದಲ್ಲಿ ಕಂಡು ಬರುವಂತಹ ಆನುವಂಶೀಯ ಕಾಯಿಲೆಯ ಸಂಪೂರ್ಣ ಮಾಹಿತಿ, ಇವೆರಡರ ಜತೆಗೆ ಪ್ರಯೋಗಾಲಯದಲ್ಲಿ ಮಾಡಿಸಬಹುದಾದ ಪೂರಕ ಪರೀಕ್ಷೆಗಳು ಜನ್ಮಜಾತ ಕಾಯಿಲೆಗಳನ್ನು ಗುರುತಿಸಲು ಬಹಳ ಮುಖ್ಯವಾಗಿರುತ್ತದೆ. ಜನ್ಮಜಾತ ಕಾಯಿಲೆಗಳು ಅನುವಂಶೀಯವಾಗಿದ್ದು ಕಾಯಿಲೆಗೆ ಕಾರಣವಾದ ವಂಶವಾಹಿ ವರ್ಣತಂತುಗಳು ಲಿಂಗಾಣುಗಳಲ್ಲಿ ಗರ್ಭಧಾರಣೆಗೆ ಮೊದಲೇ ಆನುವಂಶೀಯವಾಗಿ ಬಂದಿರುತ್ತದೆ. ಇದಕ್ಕೆ ಬೇಕಾದ ಪರೀಕ್ಷೆಗಳನ್ನು ಗರ್ಭಧಾರಣೆಗೆ ಯೋಜಿಸುವ ಮೊದಲು ಅಥವಾ ಗರ್ಭಧಾರಣೆಯ ಅನಂತರ ಅಥವಾ ಹುಟ್ಟಿದ ಅನಂತರ ನವಜಾತ ಶಿಶುವಿನ ರಕ್ತದ ಮಾದರಿಯಲ್ಲಿ ಮಾಡಿಕೊಳ್ಳಬಹುದಾಗಿದೆ.

ಜನಿಸುವ ಮಗು ಆರೋಗ್ಯವಂತ ವಾಗಿರುತ್ತದೆ ಎಂದು ಹೇಳಲು ನಿಖರ ಮಾಹಿತಿಯ ಅಗತ್ಯವಿರುತ್ತದೆ. ಅದಕ್ಕಾಗಿ ರಕ್ತ, ಆಮ್ನಿಯೋಟಿಕ್‌ ದ್ರವ (ಗರ್ಭಕೋಶದಲ್ಲಿ ಮಗುವಿನ ಸುತ್ತ ಇರುವ ನೀರು) ಅಥವಾ ಸೂಕ್ತವಾದ ಬೇರೆ ಅಂಗಾಂಶಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಈ ವರ್ಣತಂತು ಅಥವಾ ಡಿ.ಎನ್‌. ಎ. ಆಧಾರಿತ ಅನುವಂಶೀಯ ಪರೀಕ್ಷೆಗಳನ್ನು ಮಾಡಲು ವಿವಿಧ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಪ್ರಯೋಗಾಲಯದ ನುರಿತ ತಂತ್ರಜ್ಞರು ಈ ಪರೀಕ್ಷೆಗಳನ್ನು ಮಾಡುತ್ತಾರೆ. ಇದರಲ್ಲಿ ವರ್ಣತಂತುಗಳು ಅಥವಾ ಡಿಎನ್‌ಎ ಮತ್ತು ಅಸಹಜವಾಗಿರುವ ಕೆಲವು ಕಿಣ್ವಗಳಿಗೆ ರೋಗದ ಮಾದರಿ ಯನ್ನು ಪರೀಕ್ಷಿಸುವುದು. ನಿರ್ದಿಷ್ಟ ಪರೀಕ್ಷೆಯ ಮೂಲಕ ಆನುವಂಶಿಕ ಅಸ್ವಸ್ಥತೆಗಳನ್ನು ನಿರ್ಣಯಿಸಲಾಗುತ್ತದೆ,

ಉದಾಹರಣೆಗೆ; ಡೌನ್‌ ಸಿಂಡ್ರೋಮ್‌ ಎನ್ನುವುದು ಒಂದು ರೀತಿಯ ಜನ್ಮಜಾತ ಕಾಯಿಲೆ. ಇದು ವ್ಯಕ್ತಿಯು ಹೊಂದಿರುವ ಹೆಚ್ಚುವರಿ ವರ್ಣತಂತುವಿನಿಂದ ಬರುವ ಕಾಯಿಲೆಯಾಗಿದೆ. ಅಂದರೆ, ಆರೋಗ್ಯವಾಗಿರುವ ಒಂದು ಮಗು 23 ಜತೆ ವರ್ಣತಂತುಗಳೊಂದಿಗೆ ಜನಿಸುತ್ತದೆ. ಆದರೆ, ಡೌನ್‌ ಸಿಂಡ್ರೋಮ್‌ ಎನ್ನುವ ಕಾಯಿಲೆಯನ್ನು ಹೊಂದಿರುವ ಶಿಶುಗಳು 21ನೇ ಸಂಖ್ಯೆಯ ವರ್ಣತಂತುವಿನ ಹೆಚ್ಚುವರಿ ನಕಲನ್ನು ಹೊಂದಿರುತ್ತಾರೆ. ಈ ಹೆಚ್ಚುವರಿ ನಕಲು ಮಗುವಿನ ಕುಂಠಿತವಾದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕಾರಣವಾಗಿದೆ. ಗರ್ಭಧಾರಣೆಯ ಅನಂತರ ಅಲ್ಟ್ರಾ ಸೌಂಡ್‌ ಸ್ಕ್ಯಾನ್‌ ಮತ್ತು ತಾಯಿಯ ರಕ್ತದ ಮಾದರಿಯ ಪರೀಕ್ಷೆಗಳಿಂದ ಗರ್ಭದಲ್ಲಿರುವ ಮಗುವಿನ ಕಾಯಿಲೆಯ ಬಗ್ಗೆ ಸುಳಿವು ಸಿಗಬಹುದು. ಆದರೆ ತಾಯಿಯ ಗರ್ಭದ ಮಾದರಿಯ ಪರೀಕ್ಷೆ ಮಾಡುವುದರಿಂದ 21ನೇ ಸಂಖ್ಯೆಯ ವರ್ಣಂತಂತುವಿನ ಹೆಚ್ಚುವರಿ ನಕಲು ಕಾಣುವುದಲ್ಲದೆ, ಮಗುವಿನ   ಆರೋಗ್ಯವನ್ನು ನಿಖರವಾಗಿ ತಿಳಿಯಲು ಸಹಾಯವಾಗುತ್ತದೆ. ಇದೇ ರೀತಿ, ಇನ್ನೂ ಅನೇಕ ಕಾರಣಗಳಿಂದ ಉಂಟಾಗುವ ವಿವಿಧ ರೀತಿಯ ಆನುವಂಶೀಯ ಕಾಯಿಲೆಗಳನ್ನು ವೈದ್ಯಕೀಯ ಪ್ರಯೋಗಾಲಯದಲ್ಲಿ ಮಾಡುವ ನಿರ್ದಿಷ್ಟವಾದ ಪರೀಕ್ಷೆಗಳಿಂದ ಪತ್ತೆ ಹಚ್ಚಬಹುದಾಗಿದೆ.

ಕ್ಯಾನ್ಸರ್‌ ಕಾಯಿಲೆಗಳ ಪತ್ತೆ ಹಚ್ಚುವಿಕೆ ಮತ್ತು ನಿರ್ವಹಣೆ :

ಕ್ಯಾನ್ಸರ್‌ ಒಂದು ಕಾಯಿಲೆಯಾಗಿದ್ದು, ಇದರಲ್ಲಿ ದೇಹದ ಕೆಲವು ಜೀವಕೋಶ ಗಳು ಅನಿಯಂತ್ರಿತವಾಗಿ ಬೆಳೆದು ದೇಹದ ಇತರ ಭಾಗಗಳಿಗೆ ಹರಡುತ್ತವೆ. ಟ್ರಿಲಿಯನ್‌ಗಟ್ಟಲೆ ಜೀವಕೋಶಗಳಿರುವ ಮಾನವನ ದೇಹದಲ್ಲಿ ಕ್ಯಾನ್ಸರ್‌ ಎಲ್ಲಿಯಾದರೂ ಪ್ರಾರಂಭವಾಗಬಹುದು. ಕ್ರೋಮೋಸೋಮ್‌ಗಳು (ವರ್ಣತಂತು) ಎಂದು ಕರೆಯಲ್ಪಡುವ ಬಿಗಿಯಾಗಿ ಪ್ಯಾಕ್‌ ಮಾಡಲಾದ ಡಿಎನ್‌ಎಯ ಉದ್ದನೆಯ ಎಳೆಗಳಲ್ಲಿ ಜೀನ್‌ಗಳನ್ನು ಜೋಡಿಸಲಾಗಿರುತ್ತದೆ. ಆನುವಂಶಿಕತೆಯ ಮೂಲ ಘಟಕ ಗಳಾದ ಈ ಜೀನ್‌ಗಳಲ್ಲಿನ ಕೆಲವು ಬದಲಾವಣೆಗಳಿಂದ ಕ್ಯಾನ್ಸರ್‌ ಉಂಟಾಗುತ್ತದೆ.

ಸಾಮಾನ್ಯವಾಗಿ, ಮಾನವ ಜೀವಕೋಶಗಳು ಬೆಳೆಯುತ್ತವೆ ಮತ್ತು ಕೋಶ ವಿಭಜನೆ ಎಂಬ ಪ್ರಕ್ರಿಯೆಯ ಮೂಲಕ ದೇಹಕ್ಕೆ ಅಗತ್ಯವಿರುವಂತೆ ಹೊಸ ಕೋಶಗಳನ್ನು ರೂಪಿಸುತ್ತವೆ. ಜೀವಕೋಶಗಳು ವಯಸ್ಸಾದಾಗ ಅಥವಾ ಹಾನಿಗೊಳಗಾದಾಗ, ಅವು ಸಾಯುತ್ತವೆ, ಮತ್ತು ಹೊಸ ಕೋಶಗಳು ಅವುಗಳ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಕೆಲವೊಮ್ಮೆ ಈ ಕ್ರಮಬದ್ಧ ಪ್ರಕ್ರಿಯೆಯು ಬದಲಾವಣೆಗೊಂಡು ಅಸಹಜವಾದ ಮತ್ತು ಹಾನಿಗೊಳಗಾದ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆದು ಗೆಡ್ಡೆಗಳು ಉಂಟಾಗುತ್ತವೆ. ಇವು ಅಂಗಾಂಶಗಳ ಉಂಡೆಗಳಾಗಿದ್ದು ಕ್ಯಾನ್ಸರ್‌ ಆಗಿ ಪರಿವರ್ತನೆ ಆಗಬಹುದು ಅಥವಾ ಹಾನಿಕರವಲ್ಲದ ಸಾಮಾನ್ಯ ಗಡ್ಡೆಗಳಾಗಿ ಉಳಿಯಬಹುದು. ಕ್ಯಾನ್ಸರ್‌ ಗಡ್ಡೆಗಳು ಹತ್ತಿರದ ಅಂಗಾಂಶಗಳಲ್ಲಿ ಹರಡುವುದಲ್ಲದೆ, ದೇಹದ ಇತರ ಸ್ಥಳಗಳಿಗೆ ಪ್ರಯಾಣಿಸಿ ಹೊಸ ಗಡ್ಡೆಗಳನ್ನು ರೂಪಿಸುತ್ತವೆ. ಈ ಪ್ರಕ್ರಿಯೆಯನ್ನು ಮೆಟಾಸ್ಟಾಸಿಸ್‌ ಎಂದು ಕರೆಯಲಾಗುತ್ತದೆ. ಕ್ಯಾನ್ಸರ್‌ ಗಡ್ಡೆಗಳನ್ನು ಮಾರಕ ಗಡ್ಡೆಗಳು ಎಂದೂ ಕರೆಯಬಹುದು. ಆದರೆ ರಕ್ತದ ಕ್ಯಾನ್ಸರ್‌ (ಲ್ಯುಕೇಮಿಯಾ) ಸಾಮಾನ್ಯವಾಗಿ ಗಡ್ಡೆಯಾಗಿರುವುದಿಲ್ಲ, ಬದಲಾಗಿ ರಕ್ತದಲ್ಲಿ ನಿರ್ದಿಷ್ಟವಾದ ಬಿಳಿ ರಕ್ತಕಣಗಳು ಜಾಸ್ತಿಯಾಗುತ್ತವೆ. ರಕ್ತ ಪರೀಕ್ಷೆ ಹಾಗೂ ಮೂಳೆ ಮಜ್ಜೆಯ ಪರೀಕ್ಷೆ ಮಾಡುವುದರಿಂದ ರಕ್ತದ ಕ್ಯಾನ್ಸರ್‌ ಪತ್ತೆ ಮಾಡಬಹುದು. ಬೇರೆ ಗಡ್ಡೆ ರೂಪದ ಕ್ಯಾನ್ಸರ್‌ ಪತ್ತೆ ಮಾಡಲು ಹಲವಾರು ವಿಧಾನಗಳು ಲಭ್ಯವಿವೆ. ಮುಖ್ಯವಾಗಿ ರಕ್ತ ಪರೀಕ್ಷೆಯನ್ನು ಮಾಡಿ ಗಡ್ಡೆಗಳಿಂದ ಉತ್ಪತ್ತಿಯಾಗುವ ಕೆಲವು ಗುರುತುಗಳನ್ನು (ಬಯೊಮಾರ್ಕ), ಕಿಣ್ವಗಳನ್ನು ಅಥವಾ  ರಾಸಾಯನಿಕ ಪದಾರ್ಥಗಳನ್ನು ಪತ್ತೆ ಮಾಡುವುದು, ಗಡ್ಡೆಯ ನೀರನ್ನು ಅಥವಾ ಗಡ್ಡೆಯ

ಸಣ್ಣ ಮಾದರಿಯನ್ನು ಸೂಕ್ಷ್ಮವಾದ ಸೂಜಿಯಿಂದ ತೆಗೆದು ಅದರಲ್ಲಿ ಹಾನಿಕಾರಕ, ಅಸಹಜ ಜೀವಕೋಶ ಗಳನ್ನು ಪತ್ತೆ ಹಚ್ಚುವುದು  ಅಥವಾ ಶಸ್ತ್ರಚಿಕಿತ್ಸೆ ಮೂಲಕ ಗೆಡ್ಡೆಗಳನ್ನು ತೆಗೆದು ಅದರಲ್ಲಿ ಪ್ರತಿಜನಕ (ಆ್ಯಂಟಿ ಜನ್‌) ಅಥವಾ ಕಿಣ್ವಗಳನ್ನು ಪತ್ತೆ ಮಾಡುವುದು,  ಹಾನಿಕಾರಕ ಅಸಹಜ ಜೀವಕೋಶಗಳನ್ನು ಗುರುತಿಸುವುದು ಹಾಗೂಆನುವಂಶೀಕತೆಯ ಮೂಲ ಘಟಕಗಳಾದ ಜೀನ್‌ಗಳಲ್ಲಿ ಕಂಡುಬರುವಂತಹ ಬದಲಾವಣೆಗಳನ್ನು ಗುರುತಿಸುವುದು.

ರೋಗ ಗುರುತಿಸುವಿಕೆ ಮತ್ತು ರೋಗ ನಿರ್ವಹಣೆಗೆ ಮಾತ್ರವಲ್ಲದೆ, ರಕ್ತ ಮತ್ತು ಮೂತ್ರ ಪರೀಕ್ಷೆಗಳ ಮೂಲಕ ಮಾದಕ ವ್ಯಸನಿಗಳನ್ನು ಪತ್ತೆ ಹಚ್ಚುವಲ್ಲಿ, ಚುಚ್ಚುಮದ್ದು ಹಾಗೂ ಔಷಧಗಳ ತಯಾರಿಕೆ ಮತ್ತು ಅವುಗಳ ಪ್ರಯೋಗದ ಯಶಸ್ಸನ್ನು  ಖಚಿತಪಡಿಸಿಕೊಳ್ಳಲು, ಅಂಗ ಕಸಿ ಮಾಡುವಾಗ ದಾನ ಮಾಡಿದ ವ್ಯಕ್ತಿಯ ಅಂಗವು ಅದನ್ನು ಪಡೆಯುವ ವ್ಯಕ್ತಿಯೊಳಗೆ ಸಮರ್ಥವಾಗಿ ಹೊಂದಿಕೊಳ್ಳುವುದೋ ಇಲ್ಲವೋ ಎಂಬುದನ್ನು ಅಂಗ ದಾನ ಮಾಡುವ ಮೊದಲೇ ತಿಳಿದುಕೊಳ್ಳಲು ಸಹಾಯವಾಗುವುದಲ್ಲದೆ, ಪಿತೃತ್ವ ಪರೀಕ್ಷೆ  (paternity test)  ಮತ್ತು ಮನುಷ್ಯನ ಹಠಾತ್‌ ಸಾವಿಗೆ ಕಾರಣವೇನಿರಬಹುದು ಎಂದು ತಿಳಿಯುವಲ್ಲಿ (ವಿಧಿವಿಜ್ಞಾನ ವಿಭಾಗದಲ್ಲಿ) ಪ್ರಯೋಗಾಲಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ರೋಗವನ್ನು ಗುರುತಿಸುವುದೇ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ಅಡಿಪಾಯವಾಗಿದೆ. ರೋಗ ಗುರುತಿಸುವಿಕೆಯಲ್ಲಿ ಪ್ರಯೋಗಾಲಯದ ಮುಖ್ಯ ಗುರಿ ಕಾಯಿಲೆಯ ನಿಖರವಾದ ಕಾರಣವನ್ನು ಪತ್ತೆಹಚ್ಚುವುದು. ಸೂಕ್ತವಾದ ಪರೀಕ್ಷೆಗಳನ್ನು ಮಾಡಲು ಎಲ್ಲ ಪ್ರಯೋಗಾಲಯಗಳಲ್ಲಿಯೂ ವಿಶೇಷವಾಗಿ ತರಬೇತಿ ಪಡೆದ ಹಾಗೂ ಪರವಾನಿಗೆ ಪಡೆದ ನುರಿತ ತಂತ್ರಜ್ಞರನ್ನು ನೇಮಿಸಿರುತ್ತಾರೆ. ಪ್ರಯೋಗಾಲಯದ ಫಲಿತಾಂಶಗಳು ನಿಖರವಾಗಿರಬೇಕು, ಪ್ರಯೋಗಾಲಯದ ಕಾರ್ಯಾಚರಣೆಗಳ ಎಲ್ಲ ಅಂಶಗಳು ವಿಶ್ವಾಸಾರ್ಹ ವಾಗಿರಬೇಕು ಮತ್ತು ಫಲಿತಾಂಶಗಳ ವರದಿಯು ವೈದ್ಯಕೀಯ ಅಥವಾ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಉಪಯುಕ್ತವಾಗಲು ಯಾವುದೇ ವಿಳಂಬವಿಲ್ಲದೆ ಸಕಾಲಿಕವಾಗಿ ಬಿಡುಗಡೆಯಾಗಬೇಕು. ಅದಕ್ಕಾಗಿಯೇ ಪ್ರಯೋಗಾಲಯದ ತಂತ್ರಜ್ಞರು ಪ್ರಯೋಗಾಲಯದ ಸುಧಾರಿತ ಆಧುನಿಕ ತಂತ್ರಜ್ಞಾನ ಮತ್ತು ಪರೀಕ್ಷಾ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಸಂಬಂಧಪಟ್ಟ ನಿರಂತರ ವೈದ್ಯ ಕೀಯ ಶಿಕ್ಷಣದಂತಹ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಹೆಚ್ಚಿನ ಅನುಭವವನ್ನು ಪಡೆದುಪಡೆದು ಕೊಳ್ಳುತ್ತಾರೆ. ಇವೆಲ್ಲವೂ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸಿ ಆರೋಗ್ಯವಂತ ಸಮಾಜವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಡಾ| ಕುಸುಮಾಕ್ಷಿ ನಾಯಕ್‌
ಅಸೋಸಿಯೇಟ್‌ ಪ್ರೊಫೆಸರ್‌,
ವಿವೇಕ್‌ ರಾಘವನ್‌ ಎಂ.
ಅಸಿಸ್ಟೆಂಟ್‌ ಪ್ರೊಫೆಸರ್‌, ಪ್ರಯೋಗಾಲಯ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1

Kadri: ಬೃಹತ್‌ ಗಾತ್ರದ ಚಿಟ್ಟೆ, ಜೀರುಂಡೆ !

Shimoga: ಮೊಬೈಲ್‌ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ

Shimoga: ಮೊಬೈಲ್‌ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.