ಅನಾರೋಗ್ಯಕ್ಕಿಂತಲೂ ಮಾನಸಿಕ ಕುಸಿತ ಸೃಷ್ಟಿಸುವ ತೊನ್ನು
Team Udayavani, Jul 15, 2018, 6:00 AM IST
ಹಿಂದಿನ ವಾರದಿಂದ- ಮೊದಲಿಗೆ ಚರ್ಮದಲ್ಲಿ ಹಾಲು ಬಿಳುಪಿನ ಸಣ್ಣ ಕಲೆಗಳು ಉಂಟಾಗುತ್ತವೆ. ತೊನ್ನು ಪ್ರವರ್ಧಮಾನಕ್ಕೆ ಬರುವ ಅವಧಿ ಮತ್ತು ಅದರ ತೀವ್ರತೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವೊಮ್ಮೆ ಸಣ್ಣ ಬಿಳಿ ಕಲೆಗಳು ಕಾಣಿಸಿಕೊಂಡು ಅಷ್ಟಕ್ಕೇ ಉಳಿದುಬಿಡುತ್ತವೆ. ಇನ್ನು ಕೆಲವೊಮ್ಮೆ ಹಲವು ಬಿಳಿ ಕಲೆಗಳು ಉಂಟಾಗಿ ತಿಂಗಳುಗಟ್ಟಲೆ ಅಥವಾ ವರ್ಷಗಳ ಕಾಲ ಹಾಗೆಯೇ ಇರುತ್ತವೆ. ಆದರೆ ಸಾಮಾನ್ಯವಾಗಿ ಸಣ್ಣದಾಗಿ ಕಾಣಿಸಿಕೊಂಡ ಕಲೆಗಳು ದೊಡ್ಡದಾಗುವುದು ಮತ್ತು ದೇಹದ ಇತರ ಭಾಗಗಳಲ್ಲಿಯೂ ಉಂಟಾಗುತ್ತವೆ. ಚರ್ಮದ ದೊಡ್ಡ ಪ್ರದೇಶದಲ್ಲಿ ಕ್ರಮೇಣ ಈ ಕಲೆಗಳು ಉಂಟಾಗಬಹುದು. ಕೆಲವೊಮ್ಮೆ ಈ ಕಲೆಗಳು ದೇಹದ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಬಹುದು- ಇದನ್ನು ಪಾರ್ಶ್ವ ತೊನ್ನು ಎಂದು ಕರೆಯುತ್ತಾರೆ.
ಮೊದಲ ಬಿಳಿ ಕಲೆಗಳು ಪತ್ತೆಯಾದಾಗಲೇ ಮುಂದೆ ದೇಹದ ಎಷ್ಟು ಭಾಗ ತೊನ್ನು ಪೀಡಿತವಾಗಬಹುದು ಎಂಬುದನ್ನು ತಿಳಿಯುವುದಕ್ಕೆ ಯಾವುದೇ ಮಾರ್ಗೋಪಾಯ ಇಲ್ಲ. ಒಮ್ಮೆ ಉಂಟಾದ ಬಿಳಿ ಕಲೆಗಳು ಮುಂದೆ ಯಥಾಸ್ಥಿತಿಯಲ್ಲಿ ಉಳಿಯುತ್ತವೆ; ಅಪರೂಪವಾಗಿ ಕೆಲವು ಬಿಳಿ ಕಲೆಗಳು ಚರ್ಮದ ತಮ್ಮ ಮೂಲಬಣ್ಣವನ್ನು ಮರಳಿ ಪಡೆದುಕೊಂಡು ಸಹಜ ಬಣ್ಣಕ್ಕೆ ಮರಳುತ್ತವೆ (ರೀ ಪಿಗೆ¾ಂಟ್).
ಬಿಳಿ ಕಲೆಗಳು ತೊನ್ನು ಹೌದೇ ಅಲ್ಲವೇ ಎಂಬುದಾಗಿ ತಿಳಿಯುವುದು ಹೇಗೆ?
ದೇಹದಲ್ಲಿ ಮೂಡುವ ಎಲ್ಲ ಬಿಳಿಯ ಕಲೆಗಳೂ ತೊನ್ನು ಅಲ್ಲ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ತೊನ್ನನ್ನೇ ಹೋಲುವ ಅನೇಕ ಅನಾರೋಗ್ಯ ಸ್ಥಿತಿಗಳಿವೆ. ಆದ್ದರಿಂದ ಬಾಧಿತ ರೋಗಿಗಳು ಮಹತ್ವದ ಕ್ರಮಗಳಿಗೆ ಮುಂದಾಗುವ ಮುನ್ನ ಚರ್ಮ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಬಹುತೇಕ ಪ್ರಕರಣಗಳಲ್ಲಿ ತೊನ್ನಿನ ರೋಗ ನಿರ್ಧಾರವು ವೈದ್ಯಕೀಯ ತಪಾಸಣೆಯನ್ನು ಆಧರಿಸಿರುತ್ತದೆ, ಸಾಮಾನ್ಯವಾಗಿ ಯಾವುದೇ ಪರೀಕ್ಷೆಗಳಿಗೆ ಒಳಗಾಗಬೇಕಾಗುವುದಿಲ್ಲ. ಬಹುತೇಕ ಬಿಳಿ ಕಲೆಗಳನ್ನು ಚಿಕಿತ್ಸೆಗೊಳಪಡಿಸಬಹುದು ಮತ್ತು ಗುಣಪಡಿಸಬಹುದು.
ಏನಾದರೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೇ?
ಚರ್ಮಕ್ಕೆ ಗಾಯವಾದ ಸ್ಥಳದಲ್ಲಿ ಬಿಳಿ ಕಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಚರ್ಮಕ್ಕೆ ಗಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಮುಖ ಮತ್ತು ಸೂರ್ಯನ ಕಿರಣಗಳಿಗೆ ತೆರೆದುಕೊಳ್ಳುವ ದೇಹ ಭಾಗದಲ್ಲಿ ಕಲೆ ಉಂಟಾಗಿದ್ದು, ಬಿಸಿಲು ಬಿದ್ದಾಗ ಅವು ಕೆಂಪಗಾಗಿ ಉರಿ ಕಾಣಿಸಿಕೊಳ್ಳುತ್ತಿದ್ದರೆ ಉತ್ತಮ ಸೂರ್ಯ ರಕ್ಷಣಾಂಶ (ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ – ಎಸ್‌ಪಿಎಫ್) ಇರುವ ಸನ್‌ಸ್ಕ್ರೀನ್ ಉಪಯೋಗಿಸುವುದು ಉತ್ತಮ. ಆಹಾರಾಭ್ಯಾಸದ ಪಾತ್ರ ಚರ್ಚಾಸ್ಪದವಾಗಿದ್ದು, ಸಾಮಾನ್ಯವಾಗಿ ಆಹಾರಾಭ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯ ಇಲ್ಲ.
ತೊನ್ನಿಗೆ ಚಿಕಿತ್ಸೆ ಇದೆಯೇ?
ತೊನ್ನು ಪ್ರಧಾನವಾಗಿ ಒಂದು ಸೌಂದರ್ಯಾತ್ಮಕ ಸಮಸ್ಯೆಯಾಗಿರುವುದರಿಂದ ಬಾಧಿತ ವ್ಯಕ್ತಿ ತೊನ್ನಿನಿಂದ ಉಂಟಾಗುವ ಸೌಂದರ್ಯ ನಷ್ಟದ ಬಗ್ಗೆ ಸಮಸ್ಯೆ ಹೊಂದಿಲ್ಲದೇ ಇದ್ದರೆ ಚಿಕಿತ್ಸೆ ಪಡೆಯಬೇಕಾದ ಅಗತ್ಯ ಇಲ್ಲ. ಪ್ರಸ್ತುತ ತೊನ್ನು ಚಿಕಿತ್ಸೆಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದ್ದು, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಆಯ್ಕೆಗಳು ಇವೆ; ರೋಗ ಸ್ಥಿತಿಯನ್ನು ಗುಣಪಡಿಸುವಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಬಹುದಾಗಿದೆ. ಅನೇಕ ತೊನ್ನು ಪೀಡಿತ ವ್ಯಕ್ತಿಗಳಲ್ಲಿ ಬಿಳಿ ಕಲೆಗಳು ಹೆಚ್ಚುವುದನ್ನು ತಡೆಯಬಹುದಾಗಿದೆ ಹಾಗೂ ಚರ್ಮ ಸಹಜ ಬಣ್ಣವನ್ನು ಪಡೆಯುವಂತೆ ಮಾಡಬಹುದಾಗಿದೆ. “ಎಲ್ಲದಕ್ಕೂ ಒಂದೇ ಮದ್ದು’ ಎಂಬಂತಹ ಚಿಕಿತ್ಸೆ ತೊನ್ನು ರೋಗಕ್ಕಿಲ್ಲ. ಯಾವ ವಿಧವಾದ ತೊನ್ನು ಎಂಬುದನ್ನು ಆಧರಿಸಿ ಒದಗಿಸಲಾದ ಚಿಕಿತ್ಸೆಗೆ ಪ್ರತಿಸ್ಪಂದನೆಯೂ ಭಿನ್ನವಾಗಿರುತ್ತದೆ.
ಪ್ರಸ್ತುತ ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ಇಲ್ಲಿ ಸಂಕ್ಷಿಪ್ತ ವಿವರಗಳಿವೆ
ಫೊಟೊಥೆರಪಿ
ತೊನ್ನಿಗೆ ಫೊಟೊಥೆರಪಿಯು ಒಂದು ಮುಖ್ಯ ಚಿಕಿತ್ಸಾ ವಿಧಾನವಾಗಿದೆ. ಫೊಟೊಥೆರಪಿಯನ್ನು ಒದಗಿಸುವ ಅನೇಕ ರೂಪಗಳಿವೆ – ಇವುಗಳಲ್ಲಿ ಮೂರು ಮುಖ್ಯ ವಿಧಗಳೆಂದರೆ ನ್ಯಾರೊಬ್ಯಾಂಡ್ ಅಲ್ಟ್ರಾವಯಲೆಟ್ ಥೆರಪಿ (ಎನ್‌ಬಿಯುವಿಬಿ),ಟಾರ್ಗೆಟೆಡ್ ಫೊಟೊಥೆರಪಿ ಮತ್ತು ಪಿಯುವಿಎ ಥೆರಪಿ. ಇವುಗಳನ್ನು ಸಾಮಾನ್ಯವಾಗಿ ವಿಶೇಷ ಛೇಂಬರ್‌ನಲ್ಲಿ ತಜ್ಞರ ಮೇಲ್ವಿಚಾರಣೆಯಲ್ಲಿ ಒದಗಿಸಲಾಗುತ್ತದೆ ಮತ್ತು ಬಹುತೇಕವಾಗಿ ಇವು ಸುರಕ್ಷಿತವಾಗಿವೆ. ಪಿಯುವಿಎ ಥೆರಪಿಯು ಚರ್ಮವನ್ನು ಬೆಳಕಿಗೆ ಸೂಕ್ಷ್ಮ ಸಂವೇದಿಯನ್ನಾಗಿಸುವ ವಿಶೇಷ ಔಷಧಿ (ಸೊರಾಲಿನ್) ಬಳಕೆಯನ್ನು ಒಳಗೊಂಡಿದೆ. ಈ ಔಷಧವು ಕ್ರೀಮ್ ಅಥವಾ ಮಾತ್ರೆಯ ರೂಪದಲ್ಲಿ ಇರಬಹುದು. ಆ ಬಳಿಕ ಆಸ್ಪತ್ರೆಯಲ್ಲಿ ಚರ್ಮವನ್ನು ಯುವಿಎ ಬೆಳಕಿನ ಮೂಲಕ ಚಿಕಿತ್ಸೆಗೊಳಪಡಿಸಲಾಗುತ್ತದೆ. ಈ ಚಿಕಿತ್ಸೆಯನ್ನು ಕೆಲವು ತಿಂಗಳುಗಳಿಂದ ಹಿಡಿದು ವರ್ಷದವರೆಗೆ ವಾರಕ್ಕೆ ಎರಡು-ಮೂರು ಬಾರಿ ಪುನರಾವರ್ತಿಸಬೇಕಾಗುತ್ತದೆ. ಎನ್‌ಬಿ-ಯುವಿಬಿಯಲ್ಲಿ ಯಾವುದೇ ಬಾಹ್ಯ ಔಷಧವನ್ನು ತೆಗೆದುಕೊಳ್ಳಬೇಕಾದ ಆವಶ್ಯಕತೆ ಇಲ್ಲ. ದೇಹದ ಶೇ.20ಕ್ಕಿಂತಲೂ ಅಧಿಕ ಭಾಗದಲ್ಲಿ ವ್ಯಾಪಿಸಿರುವ ತೊನ್ನಿಗೆ ಚಿಕಿತ್ಸೆ ನೀಡಲು ನ್ಯಾರೊಬ್ಯಾಂಡ್ ಯುವಿಬಿ ಫೊಟೊಥೆರಪಿ (ಎನ್‌ಬಿಯುವಿಬಿ) ಒಂದು ಅತ್ಯುತ್ತಮ ಚಿಕಿತ್ಸಾ ವಿಧಾನ ಎಂದು ಪರಿಗಣಿತವಾಗಿದೆ. ಇಲ್ಲಿ 311-312 ಎನ್‌ಎಂನ ಯುವಿಬಿ ಕಿರಣ ತರಂಗಾಂತರ ಭಾಗವನ್ನು ಬಳಸಲಾಗುತ್ತದೆ.
ಇದು ಚರ್ಮವನ್ನು ಸುಡುವ ಸಮಯಕ್ಕಿಂತಲೂ ಅಲ್ಪಾವಧಿಯಲ್ಲಿ ಪಿಗೆ¾ಂಟ್ ಜೀವಕೋಶಗಳನ್ನು ಮೆಲನೋಸೈಟ್ ಉತ್ಪಾದಿಸುವಂತೆ ಪ್ರಚೋದಿಸುತ್ತದೆ. ಇದನ್ನು ವೈದ್ಯರ ಕಚೇರಿಯಲ್ಲಿ ಸಂಪೂರ್ಣ ದೇಹ ಕ್ಯಾಬಿನೆಟ್‌ನಲ್ಲಿ ಅಥವಾ ಕೈಯಲ್ಲಿ ಹಿಡಿಯುವ ಉಪಕರಣದ ಮೂಲಕ ನಡೆಸಬಹುದಾಗಿದೆ. ತೊನ್ನು ಸಣ್ಣ ಚರ್ಮ ಭಾಗಗಳನ್ನು ಬಾಧಿಸಿದ್ದಾಗ ಕೈಯಲ್ಲಿ ಹಿಡಿಯುವ ಉಪಕರಣ ಬಳಕೆ ಸಾಕಷ್ಟು ಅನುಕೂಲಕರವಾಗುತ್ತದೆ. ತೊನ್ನಿನ ಸಣ್ಣ ಕಲೆಗಳನ್ನು ಟಾರ್ಗೆಟೆಡ್ ಫೊಟೊಥೆರಪಿಯ ಮೂಲಕ ಚಿಕಿತ್ಸೆಗೆ ಒಳಪಡಿಸಬಹುದು. ಇದರ ಮೂಲಕ ತೊನ್ನು ಬಾಧಿಸಿದ ಸಣ್ಣ ಪ್ರದೇಶಗಳನ್ನು ಮಾತ್ರ ಚಿಕಿತ್ಸೆಗೊಳಪಡಿಸಬಹುದು ಹಾಗೂ ಟಾರ್ಗೆಟೆಡ್ ಫೊಟೊಥೆರಪಿಯಲ್ಲಿ ಚರ್ಮದ ಪುನರ್ ಬಣ್ಣ ಗಳಿಕೆ ಕ್ಷಿಪ್ರವಾಗಿರುತ್ತದೆ. ನಿಯಮಿತವಾಗಿ ಆಸ್ಪತ್ರೆಗೆ ಭೇಟಿ ನೀಡಲು ಅನನುಕೂಲವುಳ್ಳ ರೋಗಿಗಳಿಗೆ ಅತಿನೇರಳೆ ಕಿರಣಗಳ ಮೂಲವಾಗಿ ಸೂರ್ಯನ ಬೆಳಕನ್ನೇ ಉಪಯೋಗಿಸಬಹುದಾಗಿದೆ.
– ಮುಂದಿನ ವಾರಕ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.