ತಂಬಾಕು (Tobacco) ಮತ್ತು ಬಾಯಿ/ವಸಡಿನ ಆರೋಗ್ಯ
Team Udayavani, Apr 8, 2018, 6:00 AM IST
ತಂಬಾಕು ಸೇವನೆಯ ದುಷ್ಪರಿಣಾಮಗಳು, ನಮ್ಮ ದೇಹದ ಬೇರೆ ಬೇರೆ ಭಾಗಗಳಿಗೆ, ಅಂಗಾಂಗಗಳಿಗೆ ಆಗುವುದನ್ನು ಬಹುಶಃ ಎಲ್ಲರೂ ಕೇಳಿದ್ದೀರಿ. ನೋಡಿದ್ದೀರಿ. ಯಾವುದೇ ಸಿನೆಮಾವನ್ನು ನೋಡುತ್ತಿರುವಾಗ, ಚಿತ್ರದ ನಾಯಕನು, ಖಳನಾಯಕನು ಸಿಗರೇಟ್ ಸೇವಿಸುವಾಗ, ಚಿಕ್ಕ ಅಕ್ಷರದಲ್ಲಿ ಪರದೆಯ ಕೆಳಗೆ, ಧೂಮ್ರಾಪಾನ ದೇಹಕ್ಕೆ ಮಾರಕ, ಧೂಮಪಾನ ಮಾಡದಿರಿ ಎಂದು ಬರೆದಿರುವುದನ್ನು ಎಲ್ಲರೂ ಗಮನಿಸಿದ್ದರೂ ಈ ಚಟಕ್ಕೆ ಬಲಿಯಾಗಿ, ಜೀವವನ್ನೇ ಕಳೆದುಕೊಂಡವರು ಲೆಕ್ಕವಿಲ್ಲ! ದೇಹದ ಇತರ ಭಾಗಗಳಿಗೆ ಆಗುವ ದುಷ್ಪರಿಣಾಮಗಳು ನಮ್ಮ ಬಾಯಿಯ ಬೇರೆ ಬೇರೆ ಭಾಗಗಳಿಗೆ ಕೂಡ ಆಗುವುದು ಎಷ್ಟು ಜನರಿಗೆ ಗೊತ್ತಿದೆ?
ಹಲ್ಲಿನ ಬಣ್ಣ- ಹಲ್ಲಿನ ಮೇಲೆ
ತಂಬಾಕು ಕಲೆಗಳು
ಎಲೆ – ಅಡಿಕೆ/ಜತೆಗೆ ಹೊಗೆಸೊಪ್ಪು ಅಥವಾ ಧೂಮ್ರಾಪಾನ (ಸಿಗರೇಟ್ ಅಥವಾ ಬೀಡಿ ಸೇದುವವರಲ್ಲಿ) ಹಲ್ಲಿನ ರಂಗೇ ಬದಲಾಗುತ್ತದೆ. ಕಪ್ಪು, ಕಂದು ಬಣ್ಣದ ಕಲೆಗಳು ಹಲ್ಲನ್ನು ಸುತ್ತುವರಿದಿರುತ್ತವೆ. ದಿವಸವೂ ಎಡೆಬಿಡದೆ ಸಿಗರೇಟ್/ಬೀಡಿ ಸೇದುವವರಲ್ಲಿ ಹಲ್ಲಿನ ಯಾವುದೇ ಭಾಗ ಕಾಣದ ಹಾಗೆ ಧೂಮಪಾನದ ಕಲೆಗಳು ತುಂಬಿರುತ್ತವೆ. ಕ್ರಮೇಣ ಕಲೆಯಿಂದ ಕೂಡಿದ ಈ ಹಲ್ಲು ಒರಟಾಗಿ, ಇದರ ಮೇಲೆ ಹಲ್ಲು ಪಾಚಿ (ಬ್ಯಾಕ್ಟೀರಿಯಾಗಳಿಂದ ಕೂಡಿದ ಫಲಕ) ತುಂಬಿ, ಅದು ಕ್ರಮೇಣ ಕಿಟ್ಟ ವಾಗಿ, ವಸಡು ರೋಗಕ್ಕೆ ಕಾರಣವಾಗುವುದು. ಹಲ್ಲು ಒರಟಾಗುವುದರಿಂದ, ಬ್ರಶ್ ಮಾಡಿದರೂ ಬಾಯಿಯಲ್ಲಿ ತಾಜಾತನವು ಕಾಣುವುದಿಲ್ಲ.
ಧೂಮಪಾನ ಮತ್ತು ವಸಡು ರೋಗ – ವಸಡು ರೋಗಗಳಿಗೆ ಮುಖ್ಯ ಕಾರಣ ದಂತ ಪಾಚಿ ಮತ್ತು ನಮ್ಮ ದೇಹದ ಜೀವರಕ್ಷಕ ರಕ್ತ ಕಣಗಳು ಆರೋಗ್ಯವಾಗಿಲ್ಲದೇ ಇರುವುದು. ಸಿಗರೇಟ್/ಬೀಡಿ ಸೇವಿಸುವವರಲ್ಲಿ/ಹೊಗೆಸೊಪ್ಪು ಹಾಕುವವರಲ್ಲಿ ಅದರಲ್ಲಿರುವ ಜೀವ ರಕ್ಷಕ ರಕ್ತ ಕಣಗಳು ವ್ಯತಿರಿಕ್ತವಾಗಿ ಕೆಲಸ ಮಾಡುತ್ತವೆ. ಇದರಲ್ಲಿ ರಕ್ತನಾಳಗಳು ಸರಿಯಾಗಿ ಕೆಲಸ ಮಾಡದೇ ದೇಹದ/ವಸಡಿನ ಭಾಗಕ್ಕೆ ರಕ್ತ ಸಂಚಾರವು ಕಡಿಮೆಯಾಗುತ್ತದೆ. ಈ ರಾಸಾಯನಿಕ ವಸ್ತುಗಳಿಂದ ನಮ್ಮ ಬಾಯಿಯಲ್ಲಿ ಆಮ್ಲಜನಕ ರಹಿತ ಜೀವಿಸಲು ಸಾಧ್ಯವಾಗುವ ಬ್ಯಾಕ್ಟೀರಿಯಾಗಳ ಬೆಳವಣಿಗೆ ಜಾಸ್ತಿಯಾಗುತ್ತದೆ ಮತ್ತು ಇದರಿಂದಾಗಿ, ಇವು ಸ್ರವಿಸುವ ರಾಸಾಯನಿಕ ವಸ್ತುಗಳಿಂದ ವಸಡು/ವಸಡನ್ನು ಹಿಡಿದಿಟ್ಟುಕೊಳ್ಳುವ ಎಲುಬು, ಕ್ರಮೇಣ ಕರಗಿ, ವಸಡು ರೋಗವು ಉಲ್ಬಣಗೊಳ್ಳುವುದು, ಹೀಗೆ ಶ್ವಾಸಕೋಶದ ಕ್ಯಾನ್ಸರ್ ಗೊತ್ತಾಗದ ಹಾಗೇ ಪಸರಿಸುತ್ತದೋ ಅದೇ ತರಹ ವಸಡು/ವಸಡಿನ ಒಳಭಾಗಗಳು ಮೆಲ್ಲಮೆಲ್ಲನೆ ಕರಗಿ ಹೋಗುವುದು ತಿಳಿಯುವುದೇ ಇಲ್ಲ. ಒಂದು ಕೆಟ್ಟ ದಿನ, ಹಲ್ಲು ಅಲುಗಾಡಿ, ಹಲ್ಲು ತೆಗೆಸಬೇಕಾದಾಗ, ದಂತ ವೈದ್ಯರು “ಇದು ನಿಮ್ಮ ಧೂಮಪಾನ ಪರಿಣಾಮ ‘ಎಂದಾಗ ಮಾತ್ರ ಜನರಿಗೆ ಈ ಸಿಗರೇಟ್ ಸೇವನೆಯ/ತಂಬಾಕು ಸೇವನೆಯ ಪರಿಣಾಮ ಗೊತ್ತಾಗುವುದು. ಈ ಧೂಮಪಾನವು ವಸಡಿನ ಆರೋಗ್ಯಕ್ಕೆ “ಸೈಲೆಂಟ್ ಕಿಲ್ಲರ್ ‘ಎನ್ನುತ್ತಾರೆ. ಇದಲ್ಲದೇ, ಧೂಮಪಾನಿಗಳಲ್ಲಿ, ವಸಡು ಕ್ರಮೇಣ ಕೆಳ ಜಾರಿ ಹಲ್ಲು ಉದ್ದವಾಗಿ ಕಾಣುವುದು ಕೂಡ. ಇದು ಕೂಡ, ಹೊಗೆಸೊಪ್ಪು, ಎಲೆ ಹಾಕಿ ಒಂದೇ ಕಡೆ ಇಟ್ಟುಕೊಳ್ಳುವವರಲ್ಲಿ ಅದೇ ಜಾಗದಲ್ಲಿ ವಸಡು ಜಾರಿ, ಹಲ್ಲು ಉದ್ದ ಕಾಣುವುದು ಕೂಡ. ಧೂಮಪಾನ ಮಾಡುವವರಲ್ಲಿ ಹಲ್ಲಿನ ಸುತ್ತ ಇರುವ ಎಲುಬು ಬೇಗ ಕರಗಿ, ದಂತ ಸುತ್ತ ಪರೆ ರೋಗ ವಿರಾಮವಾಗುವುದು. ಹಲ್ಲಿನ ಮೇಲೆ ಸ್ವಲ್ಪ ಪಾಚಿಯಿದ್ದರೂ ಕೂಡ, ವಸಡು ರೋಗ, ದಂತ ಸುತ್ತುಪರೆ ರೋಗ ಜಾಸ್ತಿಯಾಗುವುದು.
ಧೂಮಪಾನ ಮತ್ತು ವಸಡು ಕೊಳೆ ರೋಗ: ವಸಡು ಕೊಳೆ ರೋಗವು, ಸಾಧಾರಣವಾಗಿ ಎಚ್.ಐ.ವಿ. ಅಥವಾ ಏಡ್ಸ್ ರೋಗಿಗಳಲ್ಲಿ ಹೆಚ್ಚಾಗಿ ಕಾಣುವುದು. ಇದಲ್ಲದೇ, ಧೂಮಪಾನಿಗಳಲ್ಲಿ ಇದು ಕಾಣಸಿಗುವುದು. ಸಿಗರೇಟ್/ಬೀಡಿ ಸೇದುವುದರಿಂದ ವಸಡಿನ ರಕ್ತ ಸಂಚಾರಕ್ಕೆ ತೊಂದರೆಯಾಗಿ ವಸಡಿನ ಕೆಲವು ಭಾಗವು ಕೊಳೆಯುವುದು. ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಸರಿಯಾದ ಸಮಯದಲ್ಲಿ ಮಾಡದಿದ್ದಲ್ಲಿ ಇದು ವಸಡಿನ ಬೇರೆ ಭಾಗಗಳಿಗೂ ಹರಡಲೂಬಹುದು. ಇದು ಸಾಮಾನ್ಯವಾಗಿ ಕಂಡು ಬರುವ ರೋಗವಲ್ಲವಾದರೂ ಧೂಮಪಾನ ಮಾಡುವವರು ಇಂತಹ ವಸಡಿನ ಚಿಹ್ನೆ ಕಂಡುಬಂದಲ್ಲಿ ಕೂಡಲೇ ದಂತ ವೈದ್ಯರನ್ನು ಕಾಣಬೇಕು.
ತಂಬಾಕು ಸೇವನೆ/ಧೂಮಪಾನ ಮಾಡುವವರು ಈ ಲೇಖನ ಓದಿದ ಅನಂತರ, ವಸಡಿನ ಮೇಲೆ ಆಗುವ ಅದರ ದುಷ್ಪರಿಣಾಮಗಳನ್ನು ತಿಳಿದು, ಆ ಕೆಟ್ಟ ಚಟವನ್ನು ಬಿಟ್ಟರೆ ವಸಡಿನ ಆರೋಗ್ಯಕ್ಕೂ ಮತ್ತು ದೇಹದ ಆರೋಗ್ಯಕ್ಕೂ ಒಳ್ಳೆಯದು.
ತಡೆಗಟ್ಟುವುದು ಹೇಗೆ?
ಮತ್ತು ಚಿಕಿತ್ಸೆಯೇನು?
1. ಎಲೆ ಅಡಿಕೆ/ ಹೊಗೆಸೊಪ್ಪು/ಧೂಮಪಾನವನ್ನು ನಿಲ್ಲಿಸಿ – ಈ ಚಟದಿಂದ ದೂರವಿರಿ.
2. ನಿಮ್ಮ ದಂತ ವೈದ್ಯರಲ್ಲಿ ಹೋಗಿ – ಹಲ್ಲು ಸ್ವತ್ಛಗೊಳಿಸಿಕೊಳ್ಳಿ ಮತ್ತು ಇದಾದ ಅನಂತರ ಮತ್ತೆ ಈ ಅಭ್ಯಾಸದಿಂದ ದೂರವಿರಿ.
3. ಧೂಮಪಾನ ಮಾಡುವವರಿಗಾಗಿಯೇ – ಹಲ್ಲಿನ ಮೇಲಿನ ಕಲೆ ಹೋಗಲು ಕೆಲವು ಟೂತ್‌ಪೇಸ್ಟ್‌ಗಳು ಲಭ್ಯ. ಇದರಿಂದಾಗಿ ಹಲ್ಲಿನ ಕಲೆಗಳಿಂದ ಸ್ವಲ್ಪ ದೂರವಿರಬಹುದು ಮತ್ತು ಹಲ್ಲು ಬಿಳಿಯಾಗಿರಲು ಸಾಧ್ಯವೂ ಕೂಡ.
ಬಾಯಿಯ ವಾಸನೆ: ಧೂಮಪಾನ ಮಾಡುವವರನ್ನು ಅವರು ಮಾತನಾಡುವಾಗ, ಅವರ ಸಮೀಪವಿರುವಾಗ ಸುಲಭವಾಗಿ ಕಂಡು ಹಿಡಿಯಬಹುದು. ಹದಿಹರೆಯದ ಯುವಕ/ಯುವತಿಯರು ಮನೆಯಲ್ಲಿ ಸಿಗರೇಟ್ ಸೇವಿಸಲು ಸಾಧ್ಯವಾಗದೇ ಹೊರಗೆ ಸೇವಿಸಿ ಮನೆಗೆ ಬರುವಾಗ, ಬಾಯಿಗೆ ಮಿಂಟ್ ಅಥವಾ ಅದೇ ತರಹದ ವಸ್ತುವನ್ನು ಹಾಕಿ “”ಧೂಮಪಾನದ ವಾಸನೆ” ಮನೆಯವರಿಗೆ ಗೊತ್ತಾಗದಿರಲಿ ಎಂದು ಎಣಿಸುತ್ತಾರೆ. ಧೂಮಪಾನದಲ್ಲಿರುವ ಕಣ್ಣಿಗೆ ಕಾಣದಿರುವ ಚಿಕ್ಕ ಚಿಕ್ಕ ಕಣಗಳು ನಮ್ಮ ಗಂಟಲು ಮತ್ತು ಬಾಯಿಯ ಒಳಚರ್ಮದ ಮೇಲೆ ಕೂತು, ಈ ಬಾಯಿಯ ವಾಸನೆಗೆ ಕಾರಣ. ಇದಲ್ಲದೆ ಈ ವಿಷಯುಕ್ತ ಕಣಗಳು ನಮ್ಮ ಶ್ವಾಸಕೋಶದಲ್ಲಿ ಗಂಟೆಗಟ್ಟಲೇ ಸುತ್ತಾಡುತ್ತಿದ್ದು ಮತ್ತೂ ನಮ್ಮ ರಕ್ತದೊಳಗೆ ವಿಲೀನವಾಗಿ ಕ್ರಮೇಣ ಗಂಟೆಗಟ್ಟಲೆ ದೇಹದಿಂದ ಹೊರಹೊಮ್ಮುತ್ತಿರುತ್ತವೆೆ. ಇದರಿಂದಾಗಿ ಬಾಯಿಯ ವಾಸನೆಯೂ ಕೂಡ ಜಾಸ್ತಿಯಾಗುತ್ತದೆ. ಇದಲ್ಲದೆ, ಸಿಗರೇಟ್ ಸೇವನೆಯಿಂದ ಬಾಯಿಯ ಜೊಲ್ಲುರಸ ಸ್ರವಿಸುವಿಕೆಯು ಕಡಿಮೆಯಾಗಿ, ತಿಂದ ಆಹಾರವು, ಅಲ್ಲೇ ಶೇಖರಣೆಯಾಗಿ ಇದರಿಂದಲೂ ಬಾಯಿಯ ವಾಸನೆ ಬರುವುದು ಕೂಡ.
ಇದಕ್ಕೆ ಪರಿಹಾರವಿದೆಯೇ?
ಸಿಗರೇಟ್ ಸೇವಿಸುವುದನ್ನು ಬಿಡುವುದೇ ಇದಕ್ಕೆ ಪರಿಹಾರ. ಕೆಲವು ಬಾಯಿ ಮುಕ್ಕಳಿಸುವ ಔಷಧಗಳಿಂದ ಈ ಬಾಯಿಯ ವಾಸನೆಯು ಸ್ವಲ್ಪ ಗಂಟೆಯ ಮಟ್ಟಿಗೆ ಕಡಿಮೆಯಾದರೂ ಯಾವಾಗಲೂ ಬಾಯಿ ಮುಕ್ಕಳಿಸುವ ಔಷಧ ಉಪಯೋಗಿಸುವುದು ಸೂಕ್ತವಲ್ಲ. ಧೂಮಪಾನ ನಿಲ್ಲಿಸಲು ಹೆಂಗಸರಿಗೆ, ನಿಮಗೆ, ಧೂಮಪಾನ ವಿನಾ ಬಾಯಿಯ ವಾಸನೆ ಇರದೇ ಇರುವ ಮುಕ್ತಿ ಬೇಕೆ? – ನಿಮ್ಮ ಗಂಡಸರಿಗೆ ಧೂಮಪಾನದಿಂದ ದೂರವಿರುವ ಹಾಗೇ ಮಾಡಿ ಇದು ಒಳ್ಳೆಯ ಉಪಾಯ.
ಇದಕ್ಕೆ ಪರಿಹಾರವೇನು/ ಚಿಕಿತ್ಸೆಯೇನು?
ಮುಖ್ಯವಾಗಿ, ಸಿಗರೇಟ್/ಬೀಡಿ ಸೇವನೆ ನಿಲ್ಲಿಸುವುದು. ಬೀಡಿ , ಸಿಗರೇಟ್ ಸೇದುವವರು ಆವಾಗವಾಗ ದಂತ ವೈದ್ಯರನ್ನು ಭೇಟಿಯಾಗಬೇಕು. ಹಲ್ಲು ಸ್ವತ್ಛಗೊಳಿಸಿಕೊಳ್ಳಬೇಕು, ಬೇಕಾದಾಗ ಹಲ್ಲು ವಸಡು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು, ಈ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಿಗರೇಟ್/ಬೀಡಿ ಸೇವನೆ ಸಂಪೂರ್ಣ ನಿಲ್ಲಿಸಬೇಕು. ಈ ಸಿಗರೇಟ್ /ಬೀಡಿ ಸೇದುವವರಲ್ಲಿ ಶಸ್ತ್ರ ಚಿಕಿತ್ಸೆಯ ಅನಂತರ ಸಂಪೂರ್ಣ ಗಾಯವು ಬೇಗ ಗುಣವಾಗದೆ, ಸಮಯ ಜಾಸ್ತಿ ತಗಲಬಹುದು. ಹೀಗಾಗಿ ಕೆಲವೊಮ್ಮೆ ವಸಡು ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವವರಲ್ಲಿ ಮತ್ತೆ ಪುನಃ ದಂತ ಸುತ್ತುಪರೆರೋಗ ಲಕ್ಷಣಗಳು ಕಾಣಸಿಗಬಹುದು. ಆದುದರಿಂದ ಸಿಗರೇಟ್/ಬೀಡಿ ಸೇವನೆ ನಿಲ್ಲಿಸುವುದು ಎಲ್ಲ ರೀತಿಯಲ್ಲೂ ಉತ್ತಮ.
ಧೂಮಪಾನ ನಿಲ್ಲಿಸಬೇಕು
ವಸಡಿನ ಕೊಳೆರೋಗದ ಚಿಹ್ನೆ ಕಂಡು ಬಂದಲ್ಲಿ ದಂತ ವೈದ್ಯರನ್ನು ಭೇಟಿಯಾಗಿ ಅವರು ಈ ಕೊಳೆತು ಹೋದ ಬಿಳಿಯ ಪದರವನ್ನು ಔಷಧದ ಮೂಲಕ ತೆಗೆದು, ಆ ಜಾಗಕ್ಕೆ ಸರಿಯಾದ ರಕ್ತಸಂಚಾರ ಆಗುವ ಹಾಗೇ ನೋಡಿಕೊಳ್ಳುವರು, ಬೇಕಾದರೆ ಆ್ಯಂಟಿ ಬಯೋಟಿಕ್ ಮತ್ತು ಬಾಯಿ ಮುಕ್ಕಳಿ ಸುವ ಔಷಧವನ್ನು ಕೊಡುತ್ತಾರೆ. ಧೂಮಪಾನವನ್ನು ನಿಲ್ಲಿಸುವುದು ಅತೀ ಮುಖ್ಯ.
– ಡಾ| ಜಿ. ಸುಬ್ರಾಯ ಭಟ್ ,
ಅಸೋಸಿಯೆಟ್ ಡೀನ್ ಮತ್ತು ಪ್ರೊಫೆಸರ್,
ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.