ತಂಬಾಕು ಮುಕ್ತ ಸಮಾಜ ನಮ್ಮೆಲ್ಲರ ಹೊಣೆ
Team Udayavani, Jul 21, 2019, 5:15 AM IST
ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನ ಕಾಯಿದೆಯು 2003ರಲ್ಲಿ ಭಾರತೀಯ ಸಂಸತ್ತಿನಲ್ಲಿ ಅಂಗೀಕಾರದ ಮೂಲಕ ಅನುಷ್ಠಾನಕ್ಕೆ ಬಂದಿದೆ. ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನ ಕಾಯಿದೆಯು 39ನೇಯ ವಿಶ್ವ ಆರೋಗ್ಯ ಸಭೆಯಿಂದ ಅಂಗೀಕರಿಸಲ್ಪಟ್ಟ ನಿರ್ಣಯವು ಪರಿಣಾಮಕಾರಿಯಾಗಲು ಸಂಸತ್ತು ಈ ಕ್ರಮವನ್ನು ಜಾರಿಗೊಳಿಸಿತು. ಪ್ರತೀದೇಶದಲ್ಲಿ ತಂಬಾಕು ನಿಯಂತ್ರಣ ಮಾಡುವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ. ಈ ಕಾಯಿದೆಯಲ್ಲಿ ಹಲವಾರು ನಿಯಮಗಳಿರುತ್ತವೆ. ಅವುಗಳಲ್ಲಿ ಬಹಳ ಪ್ರಮುಖವಾದದ್ದು ಸೆಕ್ಷನ್-4
ಬೋರ್ಡ್ (ಫಲಕ)ನ ಆವಶ್ಯಕತೆ ಏನು?
ಕೋಟ್ಪಾ ಕಾಯಿದೆಯ ಪ್ರಕಾರ, ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ “ಇಲ್ಲಿ ಧೂಮಪಾನ ಸೇವನೆ ಮಾಡುವುದು ಕಾನೂನಿನ ಪ್ರಕಾರ ಅಪರಾಧ” ಎನ್ನುವ ಫಲಕ ಇರುತ್ತದೆ. ಇದು ಧೂಮಪಾನಿಗಳಿಗೆ ಮತ್ತು ಇತರರಿಗೂ ಜಾಗೃತಿ ಮೂಡಿಸುವುದರ ಜತೆಗೆ, ಶಿಕ್ಷಣವನ್ನು ಕೂಡ ನೀಡುತ್ತದೆ. ಸಾರ್ವಜನಿಕ ಸ್ಥಳಗಳೆಂದರೆ ಸಾರ್ವಜನಿಕರಿಗೆ ಉಪಯೋಗವಾಗುವಂತೆ ವ್ಯಾವಹಾರಿಕವಾಗಿ, ಸಾಂಸ್ಕೃತಿಕವಾಗಿ ಅಥವಾ ಇತರ ಕಾರಣಗಳಿಗಾಗಿ ಉಪಯೋಗವಾಗುವ ಸ್ಥಳಗಳು. ಸಾರ್ವಜನಿಕ ಸ್ಥಳಗಳು ಸಾಮಾನ್ಯವಾಗಿ ಒಳಾಂಗಣ ಅಥವಾ ಹೊರಾಂಗಣ ಪ್ರದೇಶವಾಗಿರಬಹುದು, ಖಾಸಗಿಯಾಗಿರಬಹುದು ಅಥವಾ ಸಾರ್ವಜನಿಕವಾಗಿರಬಹುದು. ಇದು ಸಾಮಾನ್ಯವಾಗಿ ಹಣ ಪಾವತಿಸಿ ಅಥವಾ ಹಣ ಪಾವತಿಸದೇ ಒಬ್ಬರು ಅಥವಾ ಒಬ್ಬರಿಗಿಂತ ಜಾಸ್ತಿ ಜನ ಖಾಸಗಿ ಅಥವಾ ವೈಯಕ್ತಿಕ ಕಾರಣಗಳಿಗಾಗಿ ಒಟ್ಟುಗೂಡುವ ಸ್ಥಳವಾಗಿರುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ
ಸಾರ್ವಜನಿಕ ಸ್ಥಳಗಳು ಹೊಟೇಲ್, ಶಾಪ್, ಔದ್ಯೋಗಿಕ ಸ್ಥಳಗಳು, ಸಾರ್ವಜನಿಕ ಸಮುಚ್ಚಯಗಳು, ಸಾರ್ವಜನಿಕ ನಿಲುಗಡೆ ಸ್ಥಳ, ರಸ್ತೆ, ಉದ್ಯಾನವನ, ಪಾರ್ಕ್, ಚಿತ್ರಮಂದಿರಗಳು, ಈಜುಕೊಳ, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆ, ವಸತಿ ಸಮುಚ್ಚಯಗಳು, ಕಚೇರಿ ಕಟ್ಟಡಗಳು ಹಾಗೂ ಬಸ್ ನಿಲ್ದಾಣ, ರೈಲು ನಿಲ್ದಾಣಗಳು, ಗ್ರಂಥಾಲಯ, ಕ್ರೀಡಾಂಗಣ, ಕಾಫಿ ತಾಣಗಳು, ವಿಮಾನ ನಿಲ್ದಾಣ, ಎಲ್ಲ ತರಹದ ಕೆಲಸಗಳನ್ನು ನಿರ್ವಹಿಸುವ ಸ್ಥಳಗಳು, ಕ್ಯಾಂಟೀನ್ ಮತ್ತು ಇನ್ನಿತರ ಜನಸಾಮಾನ್ಯರು ಭೇಟಿ ನೀಡುವ ಸ್ಥಳಗಳನ್ನೊಳಗೊಂಡಿರುತ್ತದೆ. ಸೆಕ್ಷನ್-4 ಈ ಕಾಯಿದೆಯು 2008, ಆಕ್ಟೋಬರ್ 2ರಂದು ಜಾರಿಗೆ ಬಂದಿದ್ದು, ಈ ಕಾಯಿದೆಯನ್ನು “”ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆ ನಿಷೇಧ ಕಾಯಿದೆ-2008” ಎಂದು ಕರೆಯಲಾಗುತ್ತದೆ.
ಧೂಮಪಾನ ಕೊಠಡಿ/ಸ್ಥಳವನ್ನು ಹೊಟೇಲ್, ರೆಸ್ಟೋರೆಂಟ್ ಹಾಗೂ ವಿಮಾನ ನಿಲ್ದಾಣಗಳ ಮುಖ್ಯದ್ವಾರದ ಬಳಿ ಅಥವಾ ನಿರ್ಗಮನ ಸ್ಥಳಗಳಲ್ಲಿ ಮಾಡುವಂತಿಲ್ಲ. ಪ್ರತ್ಯೇಕವಾಗಿ ಧೂಮಪಾನ ಮಾಡುವ ಕೊಠಡಿಯಲ್ಲಿ ಮಾತ್ರ ಧೂಮಪಾನ ಮಾಡಬೇಕು. ಮುಖ್ಯವಾಗಿ ಆ ಸ್ಥಳದಲ್ಲಿ “”ಧೂಮಪಾನ ಸ್ಥಳ”ವೆಂದು ಆಂಗ್ಲ ಭಾಷೆ ಮತ್ತು ಒಂದು ಭಾರತೀಯ ಭಾಷೆಯಲ್ಲಿ ಬರೆದಿರಬೇಕು. ಆ ಸ್ಥಳದಲ್ಲಿ ಧೂಮಪಾನ ಹೊರತುಪಡಿಸಿ, ಬೇರೆ ಯಾವುದೇ ಸೇವೆಗಳನ್ನು ಒದಗಿಸುವಂತಿಲ್ಲ.
30 ಕೊಠಡಿಗಳನ್ನು ಹೊಂದಿರುವ ಹೊಟೇಲ್‌ನಲ್ಲಿ ಅಥವಾ 30 ವ್ಯಕ್ತಿಗಳು ಅಥವಾ ಅದಕ್ಕಿಂತ ಹೆಚ್ಚಿನ ಆಸನ ಸಾಮರ್ಥ್ಯ ಹೊಂದಿರುವ ರೆಸ್ಟೋರೆಂಟ್‌ನಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರತ್ಯೇಕ ಧೂಮಪಾನ ಪ್ರದೇಶ ಅಥವಾ ಸ್ಥಳಕ್ಕಾಗಿ ಅವಕಾಶ ಕಲ್ಪಿಸಬಹುದು.
ಒಂದು ಅಥವಾ ಹೆಚ್ಚಿನ ಮಹಡಿ ಅಥವಾ ವಿಭಾಗಗಳಿದ್ದಲ್ಲಿ ಪ್ರತೀ ಮಹಡಿ/ವಿಭಾಗದಲ್ಲಿ ಪ್ರತ್ಯೇಕ ಧೂಮಪಾನ ಸ್ಥಳವಿರಬೇಕು, ಹಾಗೆಯೇ ಎಲ್ಲ ಕೊಠಡಿಗಳಲ್ಲಿ ಧೂಮಪಾನ ಸ್ಥಳವೆಂದು ಆಂಗ್ಲ ಭಾಷೆ ಮತ್ತು ಒಂದು ಭಾರತೀಯ ಭಾಷೆಯಲ್ಲಿ ಬರೆದಿರಬೇಕು. ಆ ಕೊಠಡಿಯಲ್ಲಿ ಧೂಮಪಾನ ಮಾಡುವುದರಿಂದ ಹೊಗೆ ಧೂಮಪಾನ ನಿಷೇಧಿತ ಸ್ಥಳಗಳಾದ ಹೊಟೇಲಿನ ಹೊರಾಂಗಣ ಪ್ರದೇಶಗಳಿಗೆ ಪಸರಿಸಬಾರದು.
ಈ ಕೊಠಡಿಯು ಪ್ರತ್ಯೇಕವಾಗಿದ್ದು, ಸುತ್ತ ನಾಲ್ಕು ದಿಕ್ಕಿನ ಗೋಡೆಗಳು ಎತ್ತರವಾಗಿದ್ದು, ಬಾಗಿಲು ಮುಚ್ಚಿದ ಸ್ಥಿತಿಯಲ್ಲಿದ್ದು, ಸ್ವಯಂಚಾಲಿತವಾಗಿ ಮುಚ್ಚುವಂತಿರಬೇಕು. ಹಾಗೆಯೇ ಹೊಗೆಯನ್ನು ಹೊರಸೂಸುವ ವ್ಯವಸ್ಥೆಯಿರಬೇಕು. ಈ ಕಾಯಿದೆಯ ಕುರಿತಾದ ನಿಯಮಗಳನ್ನು ವಿವರಣಾತ್ಮಕವಾಗಿ ಬರೆಯುವಂತಿಲ್ಲ, ಆದರೆ ಕಾಯಿದೆಗನುಗುಣವಾಗಿ ಎಲ್ಲ ನಿಯಮಗಳನ್ನು ಪಾಲಿಸಿರಬೇಕು.
ಸಾರ್ವಜನಿಕ ಸ್ಥಳಗಳಲ್ಲಿ
“ಧೂಮಪಾನ ನಿಷೇಧ”
ಎನ್ನುವ ಫಲಕ ಹೇಗಿರಬೇಕು?
ಫಲಕವು ಬಿಳಿಯ ಹಿನ್ನಲೆಯ ಕನಿಷ್ಠ 60 ಸೆಂ.ಮೀ. 30 ಸೆಂ.ಮೀ. ಅಳತೆಯದ್ದಾಗಿದ್ದು, 15 ಸೆಂ.ಮೀ.ಗಿಂತ ಕಡಿಮೆಯಿರುವ ವೃತ್ತವನ್ನು ಹೊರಗಿನ ವ್ಯಾಸವು 3 ಸೆಂ.ಮೀ.ಗಿಂತ ಕಡಿಮೆ ಇರುವ ಸುತ್ತಳತೆಯು ಚಿತ್ರದ ಮಧ್ಯದಲ್ಲಿರಬೇಕು. ಸಿಗರೇಟು ಅಥವಾ ಬೀಡಿಯ ಕಪ್ಪು ಹೊಗೆಯ ಮೇಲೆ ಕೆಂಪು ವರ್ತುಲವು ಹಾದು ಹೋಗಬೇಕು, ಕೆಂಪು ವರ್ತುಲದ ಅಗಲವು ಸಿಗರೇಟ್ ಮೇಲೆ ಹಾದುಹೋಗುವಾಗ ಅದು ಕೆಂಪು ಸುತ್ತಳತೆಗೆ ಸಮನಾಗಿರಬೇಕು. ಫಲಕವು “”ಧೂಮಪಾನ ಮುಕ್ತ ಪ್ರದೇಶ-ಇಲ್ಲಿ ಧೂಮಪಾನ ಮಾಡುವುದು ಅಪರಾಧ” ಎಂದು ಆಂಗ್ಲ ಭಾಷೆ ಅಥವಾ ಭಾರತೀಯ ಭಾಷೆಯಲ್ಲಿ ಬರೆದಿರಬೇಕು.
ಸಾರ್ವಜನಿಕ ಸ್ಥಳಗಳಲ್ಲಿ
ಅಳವಡಿಸಬೇಕಾದ ಫಲಕ
ಫಲಕವನ್ನು ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ಹಾಕಿರಬೇಕು. ಒಂದಕ್ಕಿಂತ ಹೆಚ್ಚು ಮುಖ್ಯದ್ವಾರಗಳಿದ್ದಲ್ಲಿ ಹೊರಗಡೆ ಹಾಗೂ ಒಳಗಡೆ ಪ್ರಮುಖ ಸ್ಥಳದಲ್ಲಿ ಹಾಕಿರಬೇಕು. ಒಂದು ವೇಳೆ ಒಂದಕ್ಕಿಂತ ಹೆಚ್ಚಿನ ಮಹಡಿಗಳಿದ್ದಲ್ಲಿ ಪ್ರತೀ ಮಹಡಿಯ ಮೆಟ್ಟಿಲು ಹಾಗೂ ಪ್ರತೀ ಮಹಡಿಯ ಲಿಫ್ಟ್ನ ದ್ವಾರದಲ್ಲಿ ಫಲಕವಿರಬೇಕು. ಬೆಂಕಿ ಪೊಟ್ಟಣ, ಲೈಟರ್, ಬೂದಿಯನ್ನು ಉದುರಿಸುವ ತಟ್ಟೆ ಅಥವಾ ಧೂಮಪಾನ ಪ್ರಚೋದನಕಾರಿ ಯಾವುದೇ ವಸ್ತುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಒದಗಿಸುವಂತಿಲ್ಲ. ಸಂಬಂಧಪಟ್ಟ ಉನ್ನತ ಅಧಿಕಾರಿಯವರ ಹೆಸರನ್ನು ಮತ್ತು ಅವರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಫಲಕದ ಮೇಲೆ ಬರೆಯತಕ್ಕದ್ದು.
ಸೆಕ್ಷನ್-4ರ ಪ್ರಕಾರ ನಿಯಮಗಳು
ಉಲ್ಲಂಘನೆಯಾದಲ್ಲಿ
ವಿಧಿಸುವ ದಂಡದ ವಿವರ
ತತ್‌ಕ್ಷಣದ ದಂಡ
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆ ಮಾಡಿದಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರದ ಅಧೀನದಲ್ಲಿ ಬರುವ ಅಧಿಕಾರಿ ವರ್ಗದವರು ತಮ್ಮ ಕಾನೂನುದತ್ತ ಅಧಿಕಾರ ಬಳಸಿ ತತ್‌ಕ್ಷಣದಲ್ಲಿ 200 ರೂ. ಚಲನ್‌ನ್ನು ನೀಡಿ ದಂಡವನ್ನು ವಿಧಿಸಬಹುದು.
ಕೋರ್ಟ್‌ಗೆ ಹಾಜರಾಗುವ
ಮುನ್ನ ದಂಡ ವಿಧಿಸುವುದು
ತತ್‌ಕ್ಷಣದ ದಂಡ ಪಾವತಿ ಚಲನ್ ನೀಡಿದ ಸಂದರ್ಭದಲ್ಲಿ ರಾಜ್ಯ ಸರಕಾರವು ನಿರ್ಧರಿಸಿದಂತೆ ತಪ್ಪಿತಸ್ಥನು ದಂಡವನ್ನು ನಿಗದಿತ ದಿನದಂದು ಕೋರ್ಟ್ ಅಥವಾ ಖಜಾನೆಯಲ್ಲಿ ಪಾವತಿಸಬಹುದು.
ಒಂದು ವೇಳೆ ತಪ್ಪಿತಸ್ಥರು ದಂಡವನ್ನು ಪಾವತಿಸಲು ನಿರಾಕರಿಸಿ, ಕೋರ್ಟ್ ನೀಡುವ ಸಮನ್ಸ್‌ಗೆ ಸರಿಯಾದ ಉತ್ತರವನ್ನು ನೀಡದಿದ್ದ ಪಕ್ಷದಲ್ಲಿ ಸಂಬಂಧಪಟ್ಟ ಅಧಿಕಾರಿ ವರ್ಗದವರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದು. ಅನಂತರ ಕೋಟಾ³ ಕಾಯಿದೆ-2003ರ ಸೆಕ್ಷನ್ 21 ಅಥವಾ 24ರ ಪ್ರಕಾರ ಸಂಬಂಧಿಸಿದ ಅಧಿಕಾರಿ ವರ್ಗದವರು ನಿಗದಿತ ಪೊಲೀಸ್ ಠಾಣೆಗೆ ಹಸ್ತಾಂತರಿಸಿ, ಕೇಸನ್ನು ಹಾಕಬಹುದು. ಯಾವುದೇ ವ್ಯಕ್ತಿಯನ್ನು ಬಂಧಿಸಿದ ತತ್‌ಕ್ಷಣವೇ ಸಂಬಂಧಿಸಿದ ನ್ಯಾಯಾಧೀಶರೇ ಕಾನೂನಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಬೇಕು.
ಯಾವುದೇ ವ್ಯಕ್ತಿಯು ಸೆಕ್ಷನ್ 4ರ ಅಧೀನದಲ್ಲಿ ಯಾವುದೇ ಸ್ಥಳಗಳಲ್ಲಿ ರಾಜ್ಯ ಸರಕಾರದ ಅಧಿಕಾರಿ ವರ್ಗದವರು ತಪ್ಪಿತಸ್ಥರನ್ನು ಗುರುತಿಸಿದ ಪಕ್ಷದಲ್ಲಿ ಕಾನೂನಿನ ಪ್ರಕಾರ ತಪ್ಪಿತಸ್ಥರನ್ನು ಶಿಕ್ಷಿಸಬಹುದು.
ತಪ್ಪಿತಸ್ಥರನ್ನು ಯಾವುದೇ ವ್ಯಕ್ತಿಯು ಸೆಕ್ಷನ್ 4ರ ಪ್ರಕಾರ, ಕೇಂದ್ರ ಅಥವಾ ರಾಜ್ಯದ ಅಧಿಕಾರಿ ವರ್ಗದವರು ಹಾಕುವ ದಂಡ ಶುಲ್ಕವು ರೂ. 200 ಮೀರಬಾರದು.
ಅಪರಾಧಿಯ ಎಲ್ಲಾ ಅಪರಾಧಗಳನ್ನು ಒಟ್ಟುಗೂಡಿಸಿ, ಬಂಧನದಲ್ಲಿದ್ದಾಗ ತಪ್ಪಿತಸ್ಥನ ವಿರುದ್ಧ ಮುಂದಿನ ಯಾವುದೇ ಕ್ರಮ ಕೈಗೊಳ್ಳದೇ ಬಿಡುಗಡೆಗೊಳಿಸಬಹುದು.
ಕೋಟ್ಪಾ ಸೆಕ್ಷನ್ 4
ಯಶಸ್ವಿಯಾಗಲು
ಜನಸಾಮಾನ್ಯರಾದ
ನಾವೇನು ಮಾಡಬಹುದು?
ಯಾವುದೇ ಕಾನೂನು ಅಥವಾ ಕಾಯಿದೆಗಳು ಜಾರಿಯಾದರೂ ಜನಸಾಮಾನ್ಯರಾದ ನಾವು ಅದನ್ನು ಯಾವ ರೀತಿ ಅಳವಡಿಸಿಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ. ಕೋಟ್ಪಾ ಸೆಕ್ಷನ್-4ರ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಆ ನಿಟ್ಟಿನಲ್ಲಿ ನಾವು ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದೇ ನಮ್ಮ ಸಮಕ್ಷಮದಲ್ಲಿ ಯಾರೇ ಆ ತಪ್ಪನ್ನು ಮಾಡಿದರೂ, ಅವರಿಗೆ ಅದನ್ನು ಮನವರಿಕೆ ಮಾಡಬೇಕು. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರಿಂದ ವೈಯಕ್ತಿಕವಾಗಿ ನಮ್ಮ ಆರೋಗ್ಯ ಹದಗೆಡುವುದಲ್ಲದೆ ಇತರ ಜನಸಾಮಾನ್ಯರಿಗೂ ಅದರಿಂದ ಸಮಸ್ಯೆಯುಂಟಾಗುತ್ತದೆ. ಒಂದು ವೇಳೆ ಅವರಿಗೆ ಅವಶ್ಯಕತೆಯಿದ್ದರೆ ಜಿಲ್ಲಾ ಆಸ್ಪತ್ರೆಯಲ್ಲಿ ಅಥವಾ ಕೆಎಂಸಿ ಮಣಿಪಾಲ ಆಸ್ಪತ್ರೆಯ ಆಪ್ತ ಸಮಾಲೋಚಕರ ಮುಖಾಂತರ ತಂಬಾಕು ಅಥವಾ ಧೂಮಪಾನವನ್ನು ತ್ಯಜಿಸಲು ಸಲಹೆ ಪಡೆಯಬಹುದು. ಒಂದು ವೇಳೆ ಸಲಹೆ ಪಡೆಯುವವರು ಆಪ್ತ ಸಮಾಲೋಚಕರ ಜೊತೆ ನೇರವಾಗಿ ಚರ್ಚಿಸಲು ಇಚ್ಛಿಸದಿದ್ದಲ್ಲಿ ಕ್ವಿಟ್‌ಲೆçನ್ ನಂಬರ್‌ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಇಲ್ಲವಾದಲ್ಲಿ ಫಲಕದ ಮೇಲೆ ಬರೆದ ಅಧಿಕಾರಿಯ ಗಮನಕ್ಕೆ ತರಬಹುದು.
ಕ್ವಿಟ್‌ಲೈನ್ ನಂಬರ್
ತಂಬಾಕು ಅಥವಾ ಧೂಮಪಾನ ಮಾಡುವವರು ಅದನ್ನು ತ್ಯಜಿಸಲು ಇಚ್ಛಿಸಿದಲ್ಲಿ 10 ಸಂಖ್ಯೆಯ ಕ್ವಿಟ್‌ಲೈನ್ ನಂಬರ್ 1800 11 2356ಗೆ ಕರೆ ಮಾಡಿ ಇಚ್ಛಿಸಿದ ಭಾಷೆಯಲ್ಲಿ ಮಾತನಾಡಿ ತಂಬಾಕನ್ನು ತ್ಯಜಿಸುವುದರ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಅವರು ನಿಮಗೆ ಹಂತ ಹಂತವಾಗಿ ತಂಬಾಕು ಅಥವಾ ಧೂಮಪಾನ ಸೇವನೆಯನ್ನು ತ್ಯಜಿಸಲು ಸೂಕ್ತವಾದ ಮಾಹಿತಿಯನ್ನು ನೀಡುತ್ತಾರೆ.
ನಮ್ಮ ವೈಯಕ್ತಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನ ಕಾಯ್ದೆ- 2003ರ ಸೆಕ್ಷನ್-4 ಇನ್ನಷ್ಟು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ನಾವೆಲ್ಲರೂ ಕೈಜೋಡಿಸೋಣ.
ಕಾಳಜಿ ಮಾಡುವವರಿಗಾಗಿ ಸಿಗರೇಟು ತ್ಯಜಿಸಿ
ಸಿಗರೇಟು ನಿಮ್ಮನ್ನು ಅನಾರೋಗ್ಯದ ಕೂಪಕ್ಕೆ ತಳ್ಳಿ, ಸಾವಿಗೆ ಹತ್ತಿರವಾಗಿಸುವುದು ಮಾತ್ರವಲ್ಲ, ಪ್ರೀತಿ ಪಾತ್ರರಿಂದಲೂ ದೂರವಾಗಿಸುತ್ತದೆ. ಇದು ನಿಮ್ಮನ್ನು ಅತಿಯಾಗಿ ಪ್ರೀತಿಸುವ ತಂದೆ, ತಾಯಿ, ಹೆಂಡತಿ, ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕೆಲಸಮಯ ಸುಮ್ಮನೆ ಕುಳಿತು ಯೋಚಿಸಿ. ನಿಮಗೂ ಅವರ ಬಗ್ಗೆ ಕಾಳಜಿ ಇದ್ದರೆ ಸಿಗರೇಟನ್ನು ದೂರಮಾಡಿ. ವಾತಾವರಣವನ್ನು ಸೇರಿಕೊಳ್ಳುವ ನಿಮ್ಮ ಬಾಯಿಯಿಂದ ಹೊರ ಹೊಮ್ಮುವ ಸಿಗರೇಟಿನ ಹೊಗೆ ಪಕ್ಕದಲ್ಲಿರುವವರನ್ನೂ ತೊಂದರೆಗೆ ಸಿಲುಕಿಸುತ್ತದೆ.
ನಿಷ್ಕ್ರಿಯ ಧೂಮಪಾನಿಗಳೂ (ಪ್ಯಾಸಿವ್ ಸ್ಮೋಕಿಂಗ್) ಸಾಮಾನ್ಯವಾಗಿ ತಮ್ಮದಲ್ಲದ ತಪ್ಪಿಗೆ ಸಮಸ್ಯೆಯನ್ನು ಎಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆಯನ್ನು ಸಾಮಾನ್ಯವಾಗಿ ಜನರು ಹೆಚ್ಚಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅನುಭವಿಸಿರುತ್ತಾರೆ.
ಉದಾಹರಣೆಗೆ, ಒಬ್ಬ ವ್ಯಕ್ತಿ ಬಸ್ ನಿಲ್ದಾಣ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ ಅಥವಾ ಸಿಗರೇಟನ್ನು ಸೇದಬೇಕಾದರೆ ಆ ವ್ಯಕ್ತಿಯೂ ಹೊರಸೂಸುವ ಹೊಗೆಯು ಇತರ ವ್ಯಕ್ತಿಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಪ್ಯಾಸಿವ್ ಸ್ಮೋಕಿಂಗ್ ಹೊಗೆ ಅಪಾಯಕಾರಿ, ವಿಶೇಷವಾಗಿ ಮಕ್ಕಳಿಗೆ. ಪ್ರೀತಿಪಾತ್ರರನ್ನು ರಕ್ಷಿಸುವ ಉತ್ತಮ ಮಾರ್ಗವೆಂದರೆ ಧೂಮಪಾನವನ್ನು ತೊರೆಯುವುದು. ಕನಿಷ್ಠ ನೀವು ಹೊಗೆ ಮುಕ್ತ ಮನೆ ಮತ್ತು ಹೊಗೆ ಮುಕ್ತ ಕಾರನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ನೀವು ಸಿಗರೇಟ್ ಸೇದಬೇಕಾದರೆ ಬಹುತೇಕ ಹೊಗೆ ಶ್ವಾಸಕೋಶಕ್ಕೆ ಹೋಗುವುದರ ಜತೆಗೆ ಅದು ನಿಮ್ಮ ಸುತ್ತಮುತ್ತಲಿನ ಗಾಳಿಯೊಂದಿಗೆ ಹೋಗಿ ಬೇರೆಯವರ ಆರೋಗ್ಯಕ್ಕೂ ಸಮಸ್ಯೆಯನ್ನುಂಟು ಮಾಡುತ್ತದೆ.
ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ತಂಬಾಕು ಮುಕ್ತ ಪ್ರದೇಶವಾಗಿಸಿ ನಮ್ಮ ಕುಟುಂಬ, ಸ್ನೇಹಿತರ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಅನಿವಾರ್ಯತೆ ಎದುರಾಗಿದೆ. ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕಾದರೆ ಪ್ರಥಮವಾಗಿ ಮಾಡಬೇಕಾಗಿದ್ದು ನಮ್ಮ ನಮ್ಮ ಮನೆಯಲ್ಲಿ ಹಾಗೂ ತಮ್ಮ ವಾಹನದಲ್ಲಿ ಪ್ರಯಾಣವನ್ನು ಮಾಡುವಾಗ ತಂಬಾಕು ಸೇವನೆಯನ್ನು ನಿಷೇಧಿಸಬೇಕು.
ನಿಷ್ಕ್ರಿಯ ಧೂಮಪಾನದ
(ಪ್ಯಾಸಿವ್ ಸ್ಮೋಕಿಂಗ್) ಪರಿಣಾಮಗಳು
ತಂಬಾಕು ಸೇವನೆ ಮಾಡದವರು ನಿರಂತರವಾಗಿ ತಂಬಾಕು ಸೇವನೆ ಮಾಡುವವರ ಸಮೀಪವಿದ್ದರೆ, ಶ್ವಾಸಕೋಶದ ಸಮಸ್ಯೆಗೆ ಕಾರಣವಾಗಬಹುದು. ನಿಷ್ಕ್ರಿಯ ಧೂಮಪಾನವು ಧೂಮಪಾನ ಮಾಡದವರಿಗೂ ಅಕಾಲಿಕ ಮರಣವನ್ನು ತಂದೊಡ್ಡಬಹುದು. ನಿಷ್ಕ್ರಿಯ ಧೂಮಪಾನವು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುತ್ತದೆ.
ಸಾರ್ವಜನಿಕರ ಗಮನಕ್ಕೆ
ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಧೂಮಪಾನ ಮಾಡುವುದು ಕಂಡುಬಂದಲ್ಲಿ ಅಥವಾ ಕೋಟಾ³ದ ಯಾವುದೇ ಕಾಯಿದೆಯನ್ನು ಉಲ್ಲಂಘಿಸಿದರೆ, ಸಾರ್ವಜನಿಕರು ಸುಲಭವಾಗಿ ಈ ಕೆಳಗಿನಂತೆ ದೂರನ್ನು ದಾಖಲಿಸಬಹುದು.
ಗೂಗಲ್ ಪ್ಲೇ ಸ್ಟೋರ್‌ನಲ್ಲಿ Stoptobacco ಆ್ಯಪ್‌ನ್ನು ಇನ್ಸಾ$rಲ್ ಮಾಡಿ ಅನಂತರ ರಿಜಿಸ್ಟ್ರಾರ್ ಕಂಪ್ಲೆಂಟ್ ಕ್ಲಿಕ್ ಮಾಡಿ, ನೀವು ತೆಗೆದ ಅಂಗಡಿಯ ಫೋಟೊವನ್ನು ಅಪ್ ಲೋಡ್ ಮಾಡಿ, ನಿಮ್ಮ ಹೆಸರನ್ನು ಟೈಪ್ ಮಾಡಿ, ನಂತರ ಜಿಲ್ಲೆಯನ್ನು ಆಯ್ಕೆ ಮಾಡಿ, ಅನಂತರ ಕೋಟಾ³ದ ಯಾವ ಕಾಯಿದೆಯನ್ನು ಉಲ್ಲಂಘಿಸಿದ್ದಾರೆಂದು ಆಯ್ಕೆ ಮಾಡಿ, ತದನಂತರ ಅಂಗಡಿಯ ವಿಳಾಸ, ನಗರ ಮತ್ತು ದೂರುದಾರರ ದೂರವಾಣಿ ಅಥವಾ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ ಸಬ್‌ಮಿಟ್ ಮಾಡಿ.ಈಗ ನೀವು ದಾಖಲಿಸಿದ ದೂರು ದಾಖಲಾಗಿರುತ್ತದೆ, ನಂತರ ಸಂಬಂಧಪಟ್ಟ ಅಧಿಕಾರಿ ವರ್ಗದವರು ಕ್ರಮಕೈಗೊಳ್ಳುತ್ತಾರೆ.
ಆ್ಯಪ್ ಡೌನ್‌ಲೋಡ್‌ಗಾಗಿ ಈ ಕೆಳಗಿನ ಲಿಂಕ್‌ನ್ನು ಕ್ಲಿಕ್ ಮಾಡಿ: https://play.google.com/store/apps/details?id=com.tobacco.tobacco
ಇತರರ ಮೇಲೆ ಧೂಮಪಾನದ ಪರಿಣಾಮವನ್ನು ಕಡಿಮೆ
ಮಾಡಲು ತ್ವರಿತ ಸಲಹೆಗಳು
-ನಿಮ್ಮ ಕುಟುಂಬದ ಆರೋಗ್ಯದ ಹಿತಕ್ಕಾಗಿ ಮನೆಯಲ್ಲಿ ತಂಬಾಕು ಸೇವನೆಯನ್ನು ನಿಷೇಧಿಸಿ, ಇತರರಿಗೆ ಮಾದರಿಯಾಗಬೇಕು.
– ಇಂದಿನಿಂದಲೇ ತಂಬಾಕು ಸೇವನೆಯನ್ನು ತ್ಯಜಿಸುತ್ತೇನೆ ಎಂದು ನಿರ್ಧರಿಸಿ ತಂಬಾಕನ್ನು ತ್ಯಜಿಸಿ, ನಿಮ್ಮ ಸುತ್ತಮುತ್ತಲಿನ ಜನರ ಆರೋಗ್ಯವನ್ನು ಉತ್ತಮಗೊಳಿಸಲು ಸಹಕರಿಸಿ.
– ಕಚೇರಿ ಅಥವಾ ಕೆಲಸ ಮಾಡುವ ಸ್ಥಳಗಳಲ್ಲಿ ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸುವುದು. ಇದು ಸಹೋದ್ಯೋಗಿಗಳಿಗೂ ಸಹಕಾರಿಯಾಗುತ್ತದೆ.
– ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆಯನ್ನು ಮಾಡದೇ ತಂಬಾಕು ಮುಕ್ತ ಪ್ರದೇಶವಾಗಿಸಬೇಕು.
-ಡಾ| ರೋಹಿತ್ ಭಾಗವತ್
ಮಹೇಶ್ ಆಚಾರ್ಯ ಕೊಕ್ಕರ್ಣೆ
ಡಾ| ಮುರಳೀಧರ ಕುಲಕರ್ಣಿ ,
ಸಮುದಾಯ ವೈದ್ಯಕೀಯ ವಿಭಾಗ, ಕೆಎಂಸಿ ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.