ಪ್ರವಾಸಿಗರ ಆರೋಗ್ಯ
Team Udayavani, Sep 1, 2019, 5:05 AM IST
ಪ್ರವಾಸದೊಂದಿಗೆ ಸಂಬಂಧ ಹೊಂದಿರುವ ಆರೋಗ್ಯ ಸಮಸ್ಯೆಗಳ ನಿಯಂತ್ರಣ ಮತ್ತು ನಿರ್ವಹಣೆಯನ್ನೇ ಪ್ರವಾಸ ವೈದ್ಯಕೀಯ ಎನ್ನುತ್ತಾರೆ. ಪ್ರವಾಸ, ಪ್ರಯಾಣ ಸಂದರ್ಭ ಎದುರಾಗಬಹುದಾದ ಸೋಂಕು ರೋಗಗಳನ್ನು ತಡೆಯುವುದು, ಪ್ರವಾಸಿಗರ ವೈಯಕ್ತಿಕ ಸುರಕ್ಷೆ ಮತ್ತು ಪರಿಸರ ಸಂಬಂಧಿ ಅಪಾಯಗಳನ್ನು ತಡೆಯುವುದು ಇತ್ಯಾದಿಗಳನ್ನು ಒಳಗೊಂಡಿರುವ ಬಹುವಿಭಾಗೀಯ ವಿಶೇಷ ವೈದ್ಯವಿಜ್ಞಾನ ಇದಾಗಿದೆ.
ವಿಶ್ವ ಪ್ರವಾಸೀ ಸಂಘಟನೆಯ ಪ್ರಕಾರ, ಜಾಗತಿಕವಾಗಿ 2010ರಲ್ಲಿ ಔದ್ಯಮಿಕ, ವಿಹಾರ ಮತ್ತಿತರ ಕಾರಣಗಳಿಂದಾಗಿ ವಿದೇಶೀ ಪ್ರವಾಸಿಗರ ಆಗಮನ ಪ್ರಮಾಣವು 94 ಕೋಟಿಗಳಷ್ಟಿತ್ತು. ಇದರಲ್ಲಿ ಅರ್ಧದಷ್ಟು ಅಂದರೆ ಸುಮಾರು 44.6 ಕೋಟಿ ಅಥವಾ ಶೇ.51ರಷ್ಟು ಮಂದಿ ವಿಹಾರ, ವಿಶ್ರಾಂತಿ ಮತ್ತು ರಜಾ ದಿನಗಳನ್ನು ಕಳೆಯುವುದಕ್ಕಾಗಿ ವಿದೇಶಗಳಿಗೆ ಪ್ರವಾಸ ಹೋದವರಾಗಿದ್ದರು. ಶೇ.15 ಮಂದಿ ಉದ್ಯೋಗ ಅಥವಾ ಔದ್ಯಮಿಕ ಉದ್ದೇಶಕ್ಕಾಗಿ ವಿದೇಶ ಯಾನ ಮಾಡಿದವರಾಗಿದ್ದರೆ ಇನ್ನುಳಿದ ಶೇ.27 ಮಂದಿ ಸ್ನೇಹಿತರು ಮತ್ತು ಕುಟುಂಬಿಕರನ್ನು ಕಾಣುವುದು, ಧಾರ್ಮಿಕ ಕಾರಣ ಮತ್ತು ತೀರ್ಥಯಾತ್ರೆ, ಅನಾರೋಗ್ಯಕ್ಕೆ ಚಿಕಿತ್ಸೆಯಂತಹ ನಿರ್ದಿಷ್ಟ ಉದ್ದೇಶವನ್ನು ಹೊಂದಿದವರಾಗಿದ್ದರು. 2010ರ ಈ 94 ಅಂತಾರಾಷ್ಟ್ರೀಯ ಯಾನಿಗಳ ಪೈಕಿ ಅರ್ಧಾಂಶಕ್ಕಿಂತ ಸ್ವಲ್ಪ ಹೆಚ್ಚು ಮಂದಿ ವಾಯುಯಾನವನ್ನು ಅವಲಂಬಿಸಿದ್ದರೆ (ಶೇ.51) ಇನ್ನುಳಿದವರು ಭೂಸಾರಿಗೆ ಮತ್ತಿತರ ಮಾರ್ಗಗಳನ್ನು ಆಯ್ದು ಕೊಂಡಿದ್ದರು (ಶೇ.49). ಈ ಶೇ.49ರಲ್ಲಿ ರಸ್ತೆ ಸಾರಿಗೆಯನ್ನು ಶೇ.41 ಮಂದಿ, ರೈಲು ಅಥವಾ ಸಮುದ್ರ ಯಾನವನ್ನು ಶೇ.4 ಮಂದಿ ನೆಚ್ಚಿಕೊಂಡಿದ್ದರು. ಕಾಲ ಕಳೆದಂತೆ ವಾಯುಯಾನವನ್ನು ನೆಚ್ಚಿಕೊಳ್ಳುತ್ತಿರುವವರ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದೆ. 2020ರ ವೇಳೆಗೆ ವಿಮಾನ ಯಾನದ ಮೂಲಕ ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳುವವರ ಸಂಖ್ಯೆ 160 ಕೋಟಿಗಳಿಗೇರುವ ನಿರೀಕ್ಷೆಯಿದೆ.
ಅಂತಾರಾಷ್ಟ್ರೀಯ ಪ್ರವಾಸವು ಅನೇಕ ಆರೋಗ್ಯ ಅಪಾಯಗಳನ್ನು ಒಡ್ಡಬಲ್ಲುದು. ಇದು ಪ್ರವಾಸಿಗನ ಆರೋಗ್ಯ ಅಗತ್ಯಗಳು ಮತ್ತು ಪ್ರಯಾಣ ವಿಧಗಳೆರಡನ್ನೂ ಅವಲಂಬಿಸಿರುತ್ತದೆ. ಎತ್ತರ, ತೇವಾಂಶ, ಉಷ್ಣತೆಗಳಲ್ಲಿ ಹಠಾತ್ ಏರುಪೇರುಗಳನ್ನು ಪ್ರವಾಸಿಗರು ಎದುರಿಸಬೇಕಾಗುವುದಷ್ಟೇ ಅಲ್ಲದೆ ಹಲವಾರು ವಿಧವಾದ ಸೋಂಕು ರೋಗಗಳಿಗೆ ಒಡ್ಡಿಕೊಳ್ಳಬೇಕಾಗಬಹುದು; ಇದರಿಂದ ಪ್ರವಾಸಿಗರು ಕಾಯಿಲೆ ಬೀಳಬಹುದು. ಇದಲ್ಲದೆ, ಕಳಪೆ ಗುಣಮಟ್ಟದ ವಾಸ್ತವ್ಯ ಸೌಲಭ್ಯ, ನೈರ್ಮಲ್ಯ- ಶುಚಿತ್ವಗಳ ಕೊರತೆ ಇದ್ದಲ್ಲಿ; ಸರಿಯಾದ ಗುಣಮಟ್ಟದ ಆರೋಗ್ಯ ಸೇವಾ ಸೌಲಭ್ಯಗಳು ಮತ್ತು ಕುಡಿಯುವ ಶುದ್ಧ ನೀರು ಸಿಗದೇ ಇರುವೆಡೆಗಳಲ್ಲಿ ಇನ್ನಷ್ಟು ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
ಪ್ರವಾಸ ಹೋಗುವುದಕ್ಕೆ ಮುನ್ನ ವೈದ್ಯಕೀಯ ಸಲಹೆ – ಸಮಾಲೋಚನೆ
ಪ್ರವಾಸ ಕೈಗೊಳ್ಳುವುದಕ್ಕೆ ಮುನ್ನ ಪ್ರವಾಸಿಗರು ಟ್ರಾವೆಲ್ ಮೆಡಿಸಿನ್ ಕ್ಲಿನಿಕ್ ಅಥವಾ ವೈದ್ಯರನ್ನು ಸಂಪರ್ಕಿಸಬೇಕು. ಪ್ರಯಾಣಕ್ಕೆ 4ರಿಂದ 8 ವಾರಗಳಿಗೆ ಮುನ್ನವೇ ಈ ಸಮಾಲೋಚನೆ ನಡೆಸಬೇಕು. ಅತ್ಯಂತ ಮುಖ್ಯವಾದ ಆರೋಗ್ಯ ಅಪಾಯಗಳ ಬಗ್ಗೆ ಮಾಹಿತಿ, ಯಾವುದೇ ಲಸಿಕೆ ಮತ್ತು/ ಅಥವಾ ಮಲೇರಿಯಾ ನಿರೋಧಕ ಔಷಧಗಳು ಅಗತ್ಯವಾದರೆ ಅದನ್ನು ಗುರುತಿಸಿ ನಿರ್ಧರಿಸುವುದು ಹಾಗೂ ಪ್ರವಾಸಿಗೆ ಅಗತ್ಯ ಬೀಳಬಹುದಾದ ಇನ್ನಿತರ ವೈದ್ಯಕೀಯ ವಸ್ತುಗಳನ್ನು ಗುರುತಿಸುವುದು ಈ ಸಮಾಲೋಚನೆಯಲ್ಲಿ ಒಳಗೊಂಡಿರುತ್ತದೆ. ಪ್ರವಾಸಿಗನ ವೈಯಕ್ತಿಕ ಅಗತ್ಯಗಳನ್ನು ಆಧರಿಸಿ ಪ್ರಾಥಮಿಕವಾದ ಒಂದು ವೈದ್ಯಕೀಯ ಕಿಟ್ ಅನ್ನು ಶಿಫಾರಸು ಮಾಡಬಹುದು ಅಥವಾ ನೀಡಬಹುದು. ನಿರ್ದಿಷ್ಟವಾಗಿ ದೀರ್ಘಕಾಲಿಕ ಅಥವಾ ಪದೇ ಪದೇ ಉಂಟಾಗುವ ಅನಾರೋಗ್ಯವುಳ್ಳ ಪ್ರವಾಸಿಗರಿಗೆ ಇದು ಅಗತ್ಯವಾಗಿದೆ. ಪ್ರವಾಸ ಹೊರಡುವುದಕ್ಕೆ ಮುನ್ನ ಪ್ರವಾಸಿಗನ ಆರೋಗ್ಯ ಸ್ಥಿತಿಯನ್ನು ತಿಳಿದುಕೊಳ್ಳುವುದು, ಪ್ರವಾಸ ಹೋಗುವ ಸ್ಥಳಗಳು, ಅವಧಿ ಮತ್ತು ಉದ್ದೇಶ, ಸಾರಿಗೆ, ವಾಸ್ತವ್ಯದ ಗುಣಮಟ್ಟ ಮತ್ತು ಆಹಾರ ನೈರ್ಮಲ್ಯ ಹಾಗೂ ಪ್ರಯಾಣ ಸಂದರ್ಭ ಅಪಾಯಗಳ ಸ್ವಭಾವವನ್ನು ತಿಳಿಯುವುದು ಈ ಅಪಾಯ ವಿಶ್ಲೇಷಣೆಯ ಪ್ರಧಾನ ಅಂಶಗಳಾಗಿರುತ್ತವೆ.
ಪ್ರಥಮ ಚಿಕಿತ್ಸಾ ಕಿಟ್
ಯಾವುದೇ ಕಡೆಗೆ ಪ್ರವಾಸ ಹೋಗುವುದಾದರೂ ಒಂದು ಪ್ರಥಮ ಚಿಕಿತ್ಸಾ ಕಿಟ್ ಜತೆಗಿರಲೇ ಬೇಕು. ಅದರಲ್ಲೂ ಆರೋಗ್ಯ ಅಪಾಯಗಳು ಹೆಚ್ಚು ಇರಬಹುದಾದ ತೃತೀಯ ಜಗತ್ತಿನ ಅಭಿವೃದ್ಧಿ ಹೊಂದದಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಪ್ರವಾಸ ಕೈಗೊಳ್ಳುವಾಗ ಇದು ಬಹಳ ಅಗತ್ಯ. ಪ್ರವಾಸ ಹೋಗುವಲ್ಲಿ ಸ್ಥಳೀಯವಾಗಿ ಆರೋಗ್ಯ ಸೇವಾ ಸೌಲಭ್ಯಗಳ ಲಭ್ಯತೆಯ ಬಗ್ಗೆ ಖಾತರಿ ಇಲ್ಲದಿದ್ದಲ್ಲಿಯೂ ಪ್ರಥಮ ಚಿಕಿತ್ಸಾ ಕಿಟ್ ಜತೆಗಿರುವುದು ಅವಶ್ಯ. ಸಾಮಾನ್ಯ ಅನಾರೋಗ್ಯಗಳಿಗೆ ಚಿಕಿತ್ಸೆ ನೀಡುವ ಪ್ರಾಥಮಿಕ ಔಷಧಗಳು, ಪ್ರಥಮ ಚಿಕಿತ್ಸಾ ಸಲಕರಣೆಗಳು ಮತ್ತು ಕೆಲವು ಪ್ರಕರಣಗಳಲ್ಲಿ ಅಗತ್ಯ ಬೀಳಬಹುದಾದ ಸಿರಿಂಜ್ ಮತ್ತು ನೀಡಲ್‌ಗಳಂತಹ ನಿರ್ದಿಷ್ಟ ಚಿಕಿತ್ಸಾ ಸಲಕರಣೆಗಳನ್ನು ಈ ಪ್ರಥಮ ಚಿಕಿತ್ಸಾ ಕಿಟ್ ಹೊಂದಿರಬೇಕು. ಉದಾ: ಡಯಾಬಿಟೆಸ್‌ಗೆ ಇನ್ಸುಲಿನ್‌ನ ಉಪಯೋಗ ಆದರೆ ಸಿರಿಂಜ್, ನೀಡಲ್‌ಗಳಂತಹ ಸಲಕರಣೆಗಳನ್ನು ಒಬ್ಬ ವ್ಯಕ್ತಿ ಮಾತ್ರ ಬಳಸಬೇಕು ಎನ್ನುವುದನ್ನು ಗಮನದಲ್ಲಿ ಇರಿಸಿಕೊಂಡಿರಬೇಕು. ಕೆಲವು ವರ್ಗಗಳ ಶಿಫಾರಸು ಮಾಡಲಾದ ಔಷಧಗಳನ್ನು ಅಥವಾ ವಿಶೇಷ ವೈದ್ಯಕೀಯ ವಸ್ತುಗಳನ್ನು ಒಯ್ಯಬೇಕು. ಆದರೆ ಇದರ ಜತೆಗೆ ಪ್ರವಾಸಿಗೆ ನಿರ್ದಿಷ್ಟ ಅನಾರೋಗ್ಯಕ್ಕಾಗಿ ಯಾವ ಔಷಧ ಅಥವಾ ವಸ್ತು ಅಗತ್ಯವಿದೆ ಎಂಬುದನ್ನು ಖಾತರಿ ಪಡಿಸುವುದಕ್ಕಾಗಿ ನೋಂದಾಯಿತ ವೈದ್ಯರು ಲೆಟರ್‌ಹೆಡ್‌ನಲ್ಲಿ ತಯಾರಿಸಿ ಸಹಿ ಮಾಡಿರುವ ಶಿಫಾರಸು ಪತ್ರವೂ ಜತೆಗಿರುವುದು ಅಗತ್ಯ.
ಪ್ರವಾಸ ಹೋಗುವ ಸ್ಥಳಗಳಲ್ಲಿ ಶೌಚ ವಸ್ತುಗಳು ಮತ್ತು ಸಲಕರಣೆಗಳು ಲಭ್ಯವಿಲ್ಲದಿದ್ದರೆ ಇಡಿಯ ಪ್ರವಾಸದ ಅವಧಿಗಾಗಿ ಸಾಬೂನು, ನ್ಯಾಪ್‌ಕಿನ್, ಸ್ಯಾನಿಟರಿ ಪ್ಯಾಡ್‌ಗಳಂತಹ ಶೌಚ ವಸ್ತು ಮತ್ತು ಸಲಕರಣೆಗಳನ್ನು ಜತೆಗೆ ಒಯ್ಯುವುದು ಸೂಕ್ತ. ದಂತ ಆರೈಕೆಯ ಸಲಕರಣೆಗಳು, ಕಾಂಟ್ಯಾಕ್ಟ್ ಲೆನ್ಸ್ ಸಹಿತ ಕಣ್ಣಿನ ಆರೈಕೆಯ ವಸ್ತುಗಳು , ಚರ್ಮದ ಆರೈಕೆಯ ವಸ್ತುಗಳು ಮತ್ತು ವೈಯಕ್ತಿಕ ಸ್ವತ್ಛತೆಯ ವಸ್ತುಗಳು ಇದರಲ್ಲಿ ಒಳಗೊಂಡಿರುತ್ತವೆ.
ಪ್ರಥಮ ಚಿಕಿತ್ಸಾ ವಸ್ತುಗಳು: ಅಂಟು ಪಟ್ಟಿ, ಸೋಂಕು ನಿರೋಧಕ ಗಾಯ ಶುಚಿಗೊಳಿಸುವ ಔಷಧ, ಬ್ಯಾಂಡೇಜ್, ಕತ್ತರಿ, ಸೇಫ್ಟಿ ಪಿನ್‌ಗಳು, ಕ್ರಿಮಿಕೀಟ ವಿಕರ್ಷಕಗಳು, ಒಆರ್‌ಎಸ್, ಕ್ಲಿನಿಕಲ್ ಥರ್ಮೊಮೀಟರ್, ಸನ್‌ಸ್ಕ್ರೀನ್ ಮತ್ತು ಇತರ ಪ್ರಥಮ ಚಿಕಿತ್ಸಾ ವಸ್ತುಗಳು ಕಿಟ್‌ನಲ್ಲಿ ಇರಬೇಕು.
ಲಸಿಕೆಗಳು
ಪ್ರವಾಸ ಹೋಗುವುದಕ್ಕೆ 4-6 ವಾರಗಳಿಕೆ ಮುನ್ನ ಲಸಿಕೆ ಪಡೆದುಕೊಂಡಲ್ಲಿ ಪ್ರವಾಸ ಕಾಲದಲ್ಲಿ ಕೆಲವು ಸೋಂಕುಗಳು ಉಂಟಾಗುವುದನ್ನು ತಡೆಯಬಹುದು. ಲಸಿಕೆ ಪಡೆದುಕೊಂಡ ಬಳಿಕ ರೋಗ ಪ್ರತಿರೋಧಕ ಶಕ್ತಿ ರೂಪುಗೊಳ್ಳಲು ನಾಲ್ಕರಿಂದ ಐದು ದಿನಗಳು ಬೇಕು, ಹೀಗಾಗಿ ಅಷ್ಟು ಅವಧಿಗೆ ಮುನ್ನವೇ ಲಸಿಕೆ ಹಾಕಿಸಿಕೊಂಡರೆ ಸೋಂಕು ರೋಗಗಳನ್ನು ತಡೆಯಬಹುದಾಗಿದೆ. ರೋಗ ಪ್ರತಿರೋಧಕ ಲಸಿಕೆಗಳು ಪ್ರವಾಸ ಹೋಗುವ ಸ್ಥಳ, ಪ್ರವಾಸಿಗನ ಆರೋಗ್ಯ ಸ್ಥಿತಿ ಮತ್ತು ಆರೋಗ್ಯ ಸಂಬಂಧಿ ನಿಯಮಗಳನ್ನು ಆಧರಿಸಿರುತ್ತವೆ.
ಲಸಿಕೆಗಳಿಂದ ತಡೆಯಬಹುದಾದ ಸೋಂಕುರೋಗಗಳು ಎಂದರೆ, ಪೋಲಿಯೋ, ಡಿಫ್ತಿàರಿಯಾ, ಪರ್ಟುಸಿಸ್, ಧುನುರ್ವಾಯು, ಮೀಸಲ್ಸ್, ಮಂಗನಬಾವು, ರುಬೆಲ್ಲಾ, ಹಳದಿ ಜ್ವರ, ವೆರಿಸೆಲ್ಲಾ, ಹೆಪಟೈಟಿಸ್ ಎ ಮತ್ತು ಬಿ, ನ್ಯುಮೋಕೊಕಲ್ ಸೋಂಕು, ಇನ್‌ಫುಯೆಂಜಾ, ಮೆನಿಂಜೊಕೊಕಲ್ ಮೆನಿಂಜೈಟಿಸ್.
ಆಹಾರ ಮತ್ತು ನೀರಿನ ನೈರ್ಮಲ್ಯಕ್ಕಾಗಿ ಕ್ರಮಗಳು
– ಹಲವು ತಾಸುಗಳ ಕಾಲ ಕೊಠಡಿಯ ಉಷ್ಣತೆಯಲ್ಲಿ ಇರಿಸಿದ ಅಥವಾ ತೆರೆದು ಇರಿಸಿದ ಆಹಾರವನ್ನು ಸೇವಿಸಬಾರದು. ಉದಾಹರಣೆಗೆ, ತೆರೆದು ಇರಿಸಿದ ಬಫೆ ಆಹಾರ, ರಸ್ತೆ ಬದಿ ಗಾಡಿಗಳಲ್ಲಿ ತಯಾರಿಸಿದ ಇರಿಸಿದ ಆಹಾರ ಇತ್ಯಾದಿ.
– ಸಿಪ್ಪೆ ತೆಗೆದು ತಿನ್ನಬಹುದಾದ ಹಣ್ಣು ಮತ್ತು ತರಕಾರಿಗಳನ್ನು ಹೊರತು ಪಡಿಸಿ ಇತರ ಯಾವುದೇ ಬೇಯಿಸದ ಆಹಾರವನ್ನು ಸೇವಿಸಬಾರದು. ಸಿಪ್ಪೆಗೆ ಕಿತ್ತುಹೋದ ಅಥವಾ ಭಾಗಶಃ ಕೊಳೆತ ಆಹಾರವನ್ನು ಸೇವಿಸಬಾರದು.
– ಸುರಕ್ಷಿತವಾಗದ ನೀರಿನಿಂದ ತಯಾರಿಸಿದ ಐಸ್ ಉಪಯೋಗಿಸಬಾರದು.
– ಹಸಿ ಅಥವಾ ಸರಿಯಾಗಿ ಬೇಯಿಸದ ಮೊಟ್ಟೆಗಳನ್ನು ಸೇವಿಸಬಾರದು.
– ಹಾಲನ್ನು ಸರಿಯಾಗಿ ಕುದಿಸಿಯೇ ಕುಡಿಯಬೇಕು.
– ಆಹಾರ ತಯಾರಿಸುವುದಕ್ಕೆ ಮುನ್ನ ಅಥವಾ ಸೇವಿಸುವುದಕ್ಕೆ ಮುನ್ನ ಕೈಗಳನ್ನು ಸಾಬೂನು ಬಳಸಿ ಸರಿಯಾಗಿ ತೊಳೆದುಕೊಳ್ಳಬೇಕು.
– ನೀರು ಕುಡಿಯುವುದಕ್ಕೆ ಸುರಕ್ಷಿತವಾಗಿದೆಯೇ ಎಂಬ ಬಗ್ಗೆ ಸಂದೇಹವಿದ್ದರೆ ಕುದಿಸಿಯೇ ಕುಡಿಯಬೇಕು. ಕುದಿಸುವುದು ಸಾಧ್ಯವಿಲ್ಲದಿದ್ದರೆ ಪ್ರಮಾಣೀಕೃತ, ಚೆನ್ನಾಗಿ ನಿರ್ವಹಿಸಿರುವ ಫಿಲ್ಟರ್ ನೀರನ್ನು ಉಪಯೋಗಿಸಬೇಕು.
– ಬಾಟಲ್ಡ್ ಅಥವಾ ಪ್ಯಾಕೇಜ್x ಪಾನೀಯಗಳು ಸಾಮಾನ್ಯವಾಗಿ ಸುರಕ್ಷಿತವಾಗಿರುತ್ತವೆ. ಆದರೆ ಸೀಲ್ ತೆರೆದಿರಬಾರದು.
– 60 ಡಿಗ್ರಿ ಉಷ್ಣತೆಯಲ್ಲಿ ಉಣಬಡಿಸಿದ, ಸರಿಯಾಗಿ ಬೆಂದಿರುವ ಆಹಾರಗಳು ಮತ್ತು ಪಾನೀಯಗಳು ಸಾಮಾನ್ಯವಾಗಿ ಸುರಕ್ಷಿತವಾಗಿರುತ್ತವೆ.
ಪ್ರವಾಸಿಗರಿಗೆ ವಿಮೆ
ಸಮಗ್ರವಾದ ಪ್ರವಾಸೀ ವಿಮೆ ಮಾಡಿಸಿಕೊಂಡು ಪ್ರವಾಸ ಕೈಗೊಳ್ಳುವುದು ಅತ್ಯುತ್ತಮ. ಹೊರ ದೇಶಗಳಲ್ಲಿ ಸಾಮಾನ್ಯವಾಗಿ ಖಾಸಗಿ ಆರೋಗ್ಯ ಸೇವಾ ಸೌಲಭ್ಯಗಳಲ್ಲಿ ಲಭ್ಯವಿರುವ ವೈದ್ಯಕೀಯ ಆರೈಕೆ ದುಬಾರಿಯಾಗಿರುತ್ತದೆ ಎಂಬುದನ್ನು ಪ್ರವಾಸಿಗರು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಉತ್ತಮ ಆರೋಗ್ಯ ಸೇವೆಗಳು ತತ್‌ಕ್ಷಣಕ್ಕೆ ಲಭ್ಯವಿಲ್ಲದಲ್ಲಿ ಅಪಘಾತ ಅಥವಾ ಇನ್ನಿತರ ಆರೋಗ್ಯ ತುರ್ತು ಸಂದರ್ಭಗಳು ಉದ್ಭವಿಸಿದಾಗ ಬೇರೊಂದು ಪ್ರದೇಶಕ್ಕೆ ಸ್ಥಳಾಂತ ರಿಸಬೇಕಾಗುತ್ತದೆ. ಕೆಲವು ದೇಶಗಳಿಗೆ ಪ್ರವಾಸ ಹೋಗಬೇಕಾದರೆ ಇನ್ಶೂರೆನ್ಸ್ ಸರ್ಟಿಫಿಕೇಟ್ ಕಡ್ಡಾಯವಾಗಿರುತ್ತದೆ. ಹೀಗಾಗಿ ಇನ್ಶೂರೆನ್ಸ್ ಸರ್ಟಿಫಿಕೇಟ್‌ನ ಪ್ರತಿ ಮತ್ತು ಸಂಪರ್ಕ ವಿವರಗಳನ್ನು ಇತರ ಪ್ರವಾಸೀ ದಾಖಲೆಗಳ ಜತೆಗೆ ಸುಲಭವಾಗಿ ಲಭ್ಯವಾಗುವಂತೆ ಕೈಚೀಲದಲ್ಲಿಯೇ ಇರಿಸಿಕೊಳ್ಳುವುದು ಸೂಕ್ತ.
-ಡಾ| ಚೈತ್ರಾ ಆರ್. ರಾವ್,
ಅಸೊಸಿಯೇಟ್ ಪ್ರೊಫೆಸರ್,
ಕಮ್ಯುನಿಟಿ ಮೆಡಿಸಿನ್ ವಿಭಾಗ ಮತ್ತು ಕೊಆರ್ಡಿನೇಟರ್, ಸೆಂಟರ್ ಫಾರ್ ಟ್ರಾವೆಲ್ ಮೆಡಿಸಿನ್, ಕೆಎಂಸಿ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.