ಮೂತ್ರಾಂಗ ವ್ಯೂಹ ಸೋಂಕು
ಇದು ಜೀವಮಾನದಲ್ಲಿ ಒಮ್ಮೆಯಾದರೂ ಬಾಧಿಸಬಲ್ಲ ಕಾಯಿಲೆ!
Team Udayavani, May 26, 2019, 6:00 AM IST
ನಿಮಗೆ ಆಗಾಗ ಮೂತ್ರ ಸೋಂಕು ಉಂಟಾಗುತ್ತಿರುತ್ತದೆಯೇ? ಈ ಕಾರಣಕ್ಕಾಗಿ ಪದೇ ಪದೆ ವೈದ್ಯರಲ್ಲಿಗೆ ಎಡತಾಕುವುದು, ಆ್ಯಂಟಿ ಬಯಾಟಿಕ್‌ಗಳನ್ನು ತೆಗೆದುಕೊಳ್ಳುವುದರಿಂದ ರೋಸಿ ಹೋಗಿರುವಿರಾ? ಮೂತ್ರ ವಿಸರ್ಜಿಸುವಾಗ ನೋವು ಅಥವಾ ಉರಿ ಉಂಟಾಗುತ್ತದೆಯೇ? ಆಗಾಗ ಶೌಚಾಲಯಕ್ಕೆ ಹೋಗುವುದಕ್ಕೆ ಅವಸರವಾಗುತ್ತಿರುತ್ತದೆಯೇ? ಅಥವಾ ನೀವೊಬ್ಬರು ಸ್ತ್ರೀಯಾಗಿದ್ದರೂ ಈ ಲೇಖನ ನಿಮಗೆ ಉಪಯುಕ್ತವಾದ ಹಲವು ಮಾಹಿತಿಗಳನ್ನು ನೀಡುತ್ತದೆ.
ಪುರುಷರಿಗೆ ಹೋಲಿಸಿದರೆ ಮೂತ್ರಾಂಗ ವ್ಯೂಹ ಸೋಂಕಿ (ಯುಟಿಐ – ಯೂರಿನರಿ ಟ್ರ್ಯಾಕ್ಟ್ ಇನ್‌ಫೆಕ್ಷನ್)ಗೆ ತುತ್ತಾಗುವ ಅಪಾಯ ಸ್ತ್ರೀಯರಿಗೆ 30 ಪಟ್ಟು ಹೆಚ್ಚಿರುತ್ತದೆ. ಪ್ರತೀ ಸ್ತ್ರೀಗೂ ತನ್ನ ಜೀವಮಾನದಲ್ಲಿ ಒಂದಲ್ಲ ಒಂದು ಬಾರಿ ಮೂತ್ರಾಂಗವ್ಯೂಹ ಸೋಂಕಿಗೆ ತುತ್ತಾಗುವ ಅಪಾಯ ಶೇ.50ರಷ್ಟು ಇದ್ದೇ ಇರುತ್ತದೆ. ಇದರರ್ಥ, ಪ್ರತೀ ಇಬ್ಬರು ಮಹಿಳೆಯರಲ್ಲಿ ಒಬ್ಬರು ತನ್ನ ಜೀವಮಾನದಲ್ಲಿ ಮೂತ್ರಾಂಗ ಸೋಂಕಿಗೆ ತುತ್ತಾಗುತ್ತಾರೆ.
ಇದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮೊದಲಾಗಿ ನಾವು ಮೂತ್ರಾಂಗ ವ್ಯೂಹ ಸೋಂಕು ಅಂದರೆ ಏನು ಎನ್ನುವುದನ್ನು ತಿಳಿದುಕೊಳ್ಳುವುದು ಸೂಕ್ತ. ಮೂತ್ರಾಂಗವ್ಯೂಹದ ಯಾವುದಾದರೂ ಒಂದು ಭಾಗದಲ್ಲಿ, ಅಂದರೆ ಮೂತ್ರಪಿಂಡಗಳು, ಮೂತ್ರಪಿಂಡವನ್ನು ಮೂತ್ರಕೋಶಕ್ಕೆ ಸಂಪರ್ಕಿಸುವ ಯುರೇಟರ್‌ಗಳು, ಮೂತ್ರಕೋಶ ಮತ್ತು ಮೂತ್ರಕೋಶದಿಂದ ಮೂತ್ರವನ್ನು ಹೊರಕ್ಕೊಯ್ಯುವ ಯುರೆತ್ರಾ – ಇಲ್ಲೆಲ್ಲಾದರೂ ಉಂಟಾಗುವ ಸೋಂಕುಗಳ ಗುತ್ಛವನ್ನು ಮೂತ್ರಾಂಗ ವ್ಯೂಹ ಸೋಂಕು ಎನ್ನುತ್ತಾರೆ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಯೂರಿನರಿ ಟ್ರ್ಯಾಕ್ಟ್ ಇನ್‌ಫೆಕ್ಷನ್ ಅಥವಾ ಸಂಕ್ಷಿಪ್ತವಾಗಿ ಯುಟಿಐ ಎಂದು ಕರೆಯುತ್ತಾರೆ. ಮೂತ್ರವನ್ನು ಉತ್ಪಾದಿಸಿ ಅದನ್ನು ದೇಹದಿಂದ ಹೊರಕ್ಕೆ ಹಾಕುವ ಕಾರ್ಯವನ್ನು ನಿರ್ವಹಿಸುವ ಈ ಎಲ್ಲ ಅಂಗಗಳ ಪೈಕಿ ಮೂತ್ರಕೋಶವು ಅತಿ ಸಾಮಾನ್ಯವಾಗಿ ಸೋಂಕಿಗೆ ತುತ್ತಾಗುವ ಭಾಗ. ಅಪರೂಪವಾಗಿ ಈ ಸೋಂಕು ಮತ್ತಷ್ಟು ಮುಂದಕ್ಕೆ ಸಾಗಿ ಮೂತ್ರಪಿಂಡಗಳನ್ನು ಬಾಧಿಸಬಹುದಾಗಿದೆ; ಆಗ ಹೆಚ್ಚು ಗಂಭೀರವಾದ ಪೈಲೊನೆಫ್ರೈಟಿಸ್ ಎಂಬ ಅನಾರೋಗ್ಯವನ್ನುಂಟು ಮಾಡುತ್ತದೆ. ಪೈಲೊನೆಫ್ರೈಟಿಸ್ ಉಂಟಾದರೆ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ ಮತ್ತು ತುರ್ತಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಮೂತ್ರಕೋಶದ ಸೋಂಕಿಗೆ ಸಕಾಲದಲ್ಲಿ ಚಿಕಿತ್ಸೆ ಒದಗದೆ ಅದು ಮೇಲ್ಮುಖವಾಗಿ ಸಾಗಿದಾಗ ಈ ಅನಾರೋಗ್ಯ ಸ್ಥಿತಿಯು ಕಾಣಿಸಿಕೊಳ್ಳುತ್ತದೆ.
ಹಾಗಾದರೆ, ನಿಮ್ಮ ಮೂತ್ರಾಂಗ ವ್ಯೂಹದಲ್ಲಿ ಸೋಂಕು ಉಂಟಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ಯುಟಿಐ ಉಂಟಾದಾಗ ಅದರ ಸಾಮಾನ್ಯ ಚಿಹ್ನೆಗಳೆಂದರೆ ಆಗಾಗ ಮೂತ್ರಶಂಕೆ ಉಂಟಾಗುವುದು ಮತ್ತು ಮೂತ್ರ ವಿಸರ್ಜಿಸುವಾಗ ನೋವು ಅಥವಾ ಉರಿ ಕಾಣಿಸಿಕೊಳ್ಳುವುದು. ಅಪರೂಪವಾಗಿ ಜ್ವರ ಮತ್ತು ಹೊಟ್ಟೆಯ ಭಾಗದಲ್ಲಿ ತೀವ್ರ ನೋವು ಕೂಡ ಇರಬಹುದು. ಮೂತ್ರದಲ್ಲಿ ರಕ್ತ, ಕೊಳಕು ವಾಸನೆಯ ಮೂತ್ರ ಅಥವಾ ಬರೇ ಅನಾರೋಗ್ಯದ ಅನುಭವವೂ ಯುಟಿಐಯ ಲಕ್ಷಣವಾಗಿರಬಹುದು.
ಸಾಮಾನ್ಯ ಶೀತವನ್ನು ಬಿಟ್ಟರೆ ದೇಹದಲ್ಲಿ ಉಂಟಾಗಬಹುದಾದ ಅತಿ ಸಾಮಾನ್ಯ ಸೋಂಕು ಮೂತ್ರಾಂಗ ವ್ಯೂಹದ್ದು. ಮೂತ್ರನಾಳ (ಯುರೆತ್ರಾ)ದ ಮೂಲಕ ದೇಹವನ್ನು ಪ್ರವೇಶಿಸುವ ಬ್ಯಾಕ್ಟೀರಿಯಾಗಳು ಈ ಸೋಂಕನ್ನು ಉಂಟು ಮಾಡುತ್ತವೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಈ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚು; ಮೂತ್ರನಾಳಗಳ ಉದ್ದ ಕಿರಿದಾಗಿರುವುದು, ಮೂತ್ರನಾಳಗಳ ಹೊರಭಾಗವು ಯೋನಿ ಮತ್ತು ಗುದದ್ವಾರದ ಕೊನೆಗೆ ಸನಿಹದಲ್ಲಿರುವುದೇ ಇದಕ್ಕೆ ಕಾರಣ.
ಮೂತ್ರನಾಳದಿಂದ ಬ್ಯಾಕ್ಟೀರಿಯಾಗಳು ಮೂತ್ರಕೋಶಗಳನ್ನು ತಲುಪುತ್ತವೆ ಮತ್ತು ಸಕಾಲದಲ್ಲಿ ಚಿಕಿತ್ಸೆ ಒದಗಿಸದಿದ್ದರೆ ಅವು ಯುರೇಟರ್‌ಗಳು ಮತ್ತು ಮೂತ್ರಪಿಂಡಗಳಿಗೂ ಲಗ್ಗೆ ಹಾಕುತ್ತವೆ.
ಯುಟಿಐ ಯಾವುದೇ ಸ್ತ್ರೀಯಲ್ಲಿ ಕಾಣಿಸಿ ಕೊಳ್ಳಬಹುದಾಗಿದ್ದರೂ ಮಧುಮೇಹಿಗಳು, ಗರ್ಭಿಣಿಯರು, ನೈರ್ಮಲ್ಯದ ಕಡೆಗೆ ಗಮನ ಕೊಡದಿರುವವರು. ಆಗಾಗ ಸಾರ್ವಜನಿಕ ಶೌಚಾಲಯ ಬಳಸುವವರು ಮತ್ತು ಲೈಂಗಿಕವಾಗಿ ಹೆಚ್ಚು ಸಕ್ರಿಯರಾಗಿರುವವರಲ್ಲಿ ಉಂಟಾಗುವ ಸಾಧ್ಯತೆ ಹೆಚ್ಚು.
ಕೆಲವೊಮ್ಮೆ ನಿಮ್ಮಲ್ಲಿ ಕಾಣಿಸಿಕೊಂಡಿರುವ ಚಿಹ್ನೆಗಳಿಂದಷ್ಟೇ ಯುಟಿಐ ಉಂಟಾಗಿದೆ ಎಂದು ಖಚಿತವಾಗಿ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಆಗ ನಿಮ್ಮಿಂದ ಮೂತ್ರದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಬೇಕಾಗುತ್ತದೆ. ಅದರ ಫಲಿತಾಂಶವು ಮೂತ್ರಾಂಗ ವ್ಯೂಹ ಸೋಂಕನ್ನು ಖಚಿತಪಡಿಸಿದ ಬಳಿಕ ನಿಮ್ಮ ಸೋಂಕನ್ನು ಪರಿಣಾಮಕಾರಿಯಾಗಿ ನಿವಾರಿಸಬಲ್ಲ ಆ್ಯಂಟಿಬಯಾಟಿಕ್ ಔಷಧ
ವನ್ನು ಆರಿಸಿಕೊಳ್ಳಬೇಕಾಗುತ್ತದೆ. ನಿಮ್ಮಲ್ಲಿ ಕಾಣಿಸಿಕೊಂಡಿರುವ ಸೋಂಕನ್ನು ಮೂಲೋ ತ್ಪಾಟನೆ ಮಾಡಲು ವೈದ್ಯರು ಆ್ಯಂಟಿ ಬಯಾಟಿಕ್ ಔಷಧದ ಕೋರ್ಸನ್ನು ಶಿಫಾರಸು ಮಾಡಿದ್ದರೆ ಸೋಂಕಿನ ಲಕ್ಷಣಗಳು ನಿವಾರಣೆ ಆದ ಬಳಿಕವೂ ಕೋರ್ಸನ್ನು ತಪ್ಪದೆ ಸಂಪೂರ್ಣಗೊಳಿಸುವುದು ಪಾಲಿಸುವುದು ಅತ್ಯಗತ್ಯ. ಇಲ್ಲವಾದರೆ ಸೋಂಕು ಮರುಕಳಿಸುವ ಅಪಾಯ ಇದ್ದೇ ಇದೆ.
ಕೆಲವು ಪ್ರಕರಣಗಳಲ್ಲಿ ನಿಮಗೆ ಯುಟಿಐ ಇದೆ ಎಂಬ ಶಂಕೆಯಿದ್ದು, ಪ್ರಯೋಗಾಲಯ ಪರೀಕ್ಷೆಗಳು ಅದನ್ನು ಖಚಿತಪಡಿಸದೆ ಇದ್ದಲ್ಲಿ ನೀವು ಯುರೋಗೈನೆಕಾಲಜಿಸ್ಟ್ ಅವರನ್ನು ಸಂಪರ್ಕಿಸಬೇಕಾಗಬಹುದು. ಇದೊಂದು ಅಪರೂಪದ ಸೋಂಕು ಆಗಿರಬಹುದಾಗಿದ್ದು, ರೂಢಿಗತ ಪರೀಕ್ಷೆಗಳಲ್ಲಿ ಪತ್ತೆಯಾಗುವುದಿಲ್ಲ ಅಥವಾ ನೀವು “ಇಂಟರ್‌ಸ್ಟೀಶಿಯಲ್ ಕ್ರಿಸ್ಟೈಟಿಸ್’ ಎಂಬ ಇನ್ನೊಂದು ಬಗೆಯ ಸೋಂಕಿಗೆ ತುತ್ತಾಗಿರಬಹುದು. ಇಂಟರ್‌ಸ್ಟೀಶಿಯಲ್ ಕ್ರಿಸ್ಟೈಟಿಸ್ ಸೋಂಕು ಯುಟಿಐಯದೇ ಚಿಹ್ನೆಗಳನ್ನು ಪ್ರದರ್ಶಿಸುತ್ತದೆ. ಅತ್ಯಂತ ಅಪರೂಪಕ್ಕೆ ಈ ಚಿಹ್ನೆಗಳಿಗೆ ಕಾರಣ ಕಲ್ಲು ಅಥವಾ ಗಡ್ಡೆಯಾಗಿರಬಹುದು. ಯುರೋಗೈನೆಕಾಲಜಿಸ್ಟ್ ನಿಮ್ಮ ಚಿಹ್ನೆಗಳು ಮತ್ತು ಪರೀಕ್ಷೆಗಳನ್ನು ಆಧರಿಸಿ ಅನಾರೋಗ್ಯಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ಸಮರ್ಥರಿರುತ್ತಾರೆ.
ಸೌಮ್ಯಾ 29 ವರ್ಷ ವಯಸ್ಸಿನ ಮಹಿಳೆ, ಇಬ್ಬರು ಮಕ್ಕಳ ತಾಯಿ. ಆಕೆಗೆ ಕಳೆದ ವರ್ಷ ನಾಲ್ಕು ಬಾರಿ ಯುಟಿಐ ಉಂಟಾಗಿತ್ತು. ಇನ್ನಷ್ಟು ಬಾರಿ ಸೋಂಕು ಉಂಟಾಗುವುದನ್ನು ತಡೆಯಲು ಏನಾದರೂ ಮಾಡಬಹುದೇ ಎಂಬುದಾಗಿ ಆಕೆ ಕಾತರದಿಂದ ಇದ್ದರು. ಸೌಮ್ಯಾ ಮತ್ತು ಅವರಂತಹ ಇನ್ನಷ್ಟೋ ಮಹಿಳೆಯರ ಕಾತರಕ್ಕೆ ಉತ್ತರ, ಒಂದು ಹಂತದ ವರೆಗೆ “ಹೌದು’. ಪದೇ ಪದೇ ಯುಟಿಐ ಉಂಟಾಗುವುದನ್ನು ಪ್ರತಿದಿನ ಸಾಕಷ್ಟು ನೀರು ಕುಡಿಯುವುದು, ಸಾರ್ವಜನಿಕ ಶೌಚಾಲಯಗಳ ಬಳಕೆಯನ್ನು ಕಡಿಮೆ ಮಾಡುವುದು, ತುಂಬಾ ಸಮಯದವರೆಗೆ ಮೂತ್ರ ತಡೆಹಿಡಿದುಕೊಳ್ಳದಿರುವುದು ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಮೂಲಕ ತಡೆಯಬಹುದು. ನಿಮಗೆ ಉಂಟಾಗಿರುವ ಚಿಹ್ನೆಗಳನ್ನು ಗುರುತಿಸಿ ಸೂಕ್ತ ಕಾಲದಲ್ಲಿ ವೈದ್ಯಕೀಯ ನೆರವು ಪಡೆದುಕೊಳ್ಳುವುದು ಕೂಡ ಅಷ್ಟೇ ಪ್ರಾಮುಖ್ಯವಾದದ್ದು. ಶೀಘ್ರ ರೋಗ ಪರೀಕ್ಷೆ ಮತ್ತು ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಯುಟಿಐ ಮತ್ತು ಅದರ ಸಂಕೀರ್ಣ ಸಮಸ್ಯೆಗಳಿಂದ ಪಾರಾಗಬಹುದು.
– ಡಾ| ದೀಕ್ಷಾ ಪಾಂಡೆ
ಡಾ| ರಿಚಾ ಚೊಕ್ಸಿ
ಡಾ| ಶ್ರೀಪಾದ ಹೆಬ್ಟಾರ್
ಓಬಿಜಿ, ಕೆ.ಎಂ.ಸಿ., ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.