ಮಾದಕ ವಸ್ತುಗಳ ಬಳಕೆ


Team Udayavani, Jun 26, 2022, 2:25 PM IST

11

ಜಗತ್ತು ಎದುರಿಸುತ್ತಿರುವ ನಾನಾ ಕಾಯಿಲೆ, ತೊಂದರೆಗಳನ್ನು ಬಗೆಹರಿಸಲು ವಿವಿಧ ರೀತಿಯ ಸಂಶೋಧನೆಗಳು ನಡೆದು ಅವುಗಳಿಗೆ ಸೂಕ್ತ ಪರಿಹಾರಗಳು ದೊರಕುತ್ತಿವೆ. ಆದರೂ ಹೊಸ ಹೊಸ ಕಾಯಿಲೆಗಳು ಉಲ್ಬಣಗೊಳ್ಳುತ್ತಿವೆ ಅಥವಾ ಹಳೇ ಕಾಯಿಲೆಗಳಿಂದ ಹೊಸ ತೊಡಕುಗಳುಂಟಾಗುತ್ತಿವೆ. ಇವುಗಳಲ್ಲದೆ ಕೆಲವು ಹಳೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳಿದ್ದರೂ ಅವುಗಳನ್ನು ಜಾರಿಗೆ ತರಲು/ಅಳವಡಿಸಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ. ಯಾಕೆಂದರೆ ಈ ಸಮಸ್ಯೆಗಳಿಗೆ ವ್ಯಕ್ತಿಯ ನಡವಳಿಕೆಗಳು ಮುಖ್ಯ ಕಾರಣಗಳಾಗಿವೆ.

ಕಾಯಿಲೆಗೆ ಕೇವಲ ಜೈವಿಕ ಕಾರಣಗಳು ಮಾತ್ರ ಇದ್ದರೆ ಅವುಗಳನ್ನು ಗುರುತಿಸಿ ಬಗೆಹರಿಸಬಹುದು. ಆದರೆ ನಡವಳಿಕೆಯು ವ್ಯಕ್ತಿಯ ಆತ್ಮಸಮ್ಮಾನದೊಟ್ಟಿಗೆ ಬೆಸೆದುಕೊಂಡಿದ್ದು, ಅದನ್ನು ತಿದ್ದುವುದು ಜಟಿಲವಾದ ಕ್ಲಿಷ್ಟವೆಂದು ಹೇಳಬಹುದು.

ಈ ರೀತಿ ನಡವಳಿಕೆಯಿಂದ ಉಂಟಾಗುವ ತೊಂದರೆಗಳು ಮುಖ್ಯವಾಗಿ ಕಂಡುಬರುವುದು ಮಾದಕ ವಸ್ತುಗಳ ವ್ಯಸನದಲ್ಲಿ. ಅನಾದಿ ಕಾಲದಿಂದಲೂ ಮಾದಕ ವಸ್ತುಗಳನ್ನು ಜನರು ಬಳಸುತ್ತಿರುವದನ್ನು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖೀಸಲಾಗಿದೆ. ಆದರೆ ಅವು ಕೇವಲ ಮೋಜು ಅಥವಾ ಸಾಮಾಜಿಕ ಸಮಾರಂಭಗಳಲ್ಲಿ ಬಳಕೆಯಾಗುತ್ತಿದ್ದವು ಮತ್ತು ಅವುಗಳು ಮದ್ಯ, ಹೊಗೆಸೊಪ್ಪು, ಗಾಂಜಾ, ಇತ್ಯಾದಿಗಳಿಗೆ ಸೀಮಿತವಾಗಿದ್ದವು.

ಸಮಯ ಕಳೆದಂತೆ ಹೊಸ-ಹೊಸ ರಾಸಾಯನಿಕ ಮಾದಕ ವಸ್ತುಗಳನ್ನು ತಯಾರಿಸಲಾಯಿತಲ್ಲದೇ, ಅವುಗಳನ್ನು ಉಪಯೋಗಿಸಲು ಹೊಸ ಹೊಸ ವಿಧಾನಗಳನ್ನೂ ಕೂಡ ಜನ ಅನ್ವೇಷಿಸತೊಡಗಿದರು. ಇದು ಒಂದು ಬೃಹತ್‌ ಮಾರುಕಟ್ಟೆಯಾಗಿ (ಮುಖ್ಯವಾಗಿ ಭೂಗತ ಮಾರುಕಟ್ಟೆ) ಬೆಳೆದು ನಿಂತು ಜನರ ದೈಹಿಕ, ಮಾನಸಿಕ ಆರೋಗ್ಯ ಹದಗೆಟ್ಟಿಸಿತ್ತಲ್ಲದೆ, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ತೊಡಕುಂಟು ಮಾಡತೊಡಗಿತು.

ಇದನ್ನರಿತು ಹಲವು ದೇಶಗಳು ಇವುಗಳನ್ನು ಕಾನೂನು ಬಾಹಿರವೆಂದು ಪರಿಗಣಿಸಿದವು ಮತ್ತು ಇವುಗಳನ್ನು ಉತ್ಪಾದಿಸುವುದನ್ನು, ಶೇಖರಿಸುವುದನ್ನು ಅಥವಾ ಉಪಯೋಗಿಸುವುದನ್ನು ಶಿಕ್ಷಾರ್ಹ ಅಪರಾಧವೆಂದು ಕಾನೂನು ಜಾರಿಗೊಳಿಸಿದವು. ಇಷ್ಟೆಲ್ಲ ಕಠಿನ ನಿಯಮಗಳಿದ್ದರೂ ಮಾದಕ ವಸ್ತುಗಳ ಉಪಯೋಗ ಒಂದು ಪೆಡಂಭೂತವಾಗಿ ಬೆಳೆದು ಎಲ್ಲ ಸಮಾಜಗಳನ್ನು ಒಳಗಡೆಯಿಂದಲೇ ಕೊರೆಯುತ್ತಿದೆ. ಇವುಗಳಿಗೆ ಸೂಕ್ತ ಪರಿಹಾರಗಳಿದ್ದರೂ ಜನ ಅವುಗಳ ಉಪಯೋಗ ಪಡೆಯುವುದಿಲ್ಲ. ಯಾಕೆಂದರೆ, ಮಾದಕ ವಸ್ತುಗಳ ವ್ಯಸನಿಗಳ ಪ್ರಕಾರ ಇದು ಸಮಸ್ಯೆಯೇ ಅಲ್ಲ! ಇದನ್ನರಿತು ವಿಶ್ವದಾದ್ಯಂತ ಈ ಸಮಸ್ಯೆಯ ಉಗಮವನ್ನೇ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಲು ಮಾದಕ ವಸ್ತುಗಳ ವ್ಯಸನ ವಿರೋಧ ದಿನ ಆಚರಿಸಲಾಗುತ್ತದೆ.

ಅನೇಕ ರಾಷ್ಟ್ರಗಳು ಈ ದಿನವನ್ನು ಜೂ. 26ರಂದು ಆಚರಿಸುತ್ತವೆ. ಭಾರತದಲ್ಲಿ ಈ ದಿನವನ್ನು ಮಹಾತ್ಮಾ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್‌ 2 ರಂದು ಆಚರಿಸಲಾಗುತ್ತದೆ. ಪ್ರತೀ ವರ್ಷ ಒಂದು ಧ್ಯೇಯ ವಾಕ್ಯವನ್ನು ಮಂಡಿಸಿ, ಆ ಧ್ಯೇಯ ವಾಕ್ಯದ ಮಾರ್ಗದಲ್ಲಿ ಎಲ್ಲ ರಾಷ್ಟ್ರಗಳು ಹಲವಾರು ಚಟುವಟಿಕೆಗಳನ್ನು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಮಕ್ಕಳು ಮತ್ತು ತರುಣರು (ಹದಿಹರೆಯದವರು) ಆರೋಗ್ಯವಂತರಾಗಿ ಮತ್ತು ಸುರಕ್ಷಿತರಾಗಿ ಬೆಳೆಯಲು ಸಹಾಯ ಮಾಡಲು ಬೇಕಾಗಿರುವ ಮೊದಲ ಹೆಜ್ಜೆಯೆಂದರೆ ಅವರನ್ನು ಆಲಿಸಿ/ ಅವರು ಹೇಳುವುದನ್ನು ಕೇಳಿ.

ವಿಶ್ವದಾದ್ಯಂತ ವೈಜ್ಞಾನಿಕವಾಗಿ ನಡೆಸಿದ ವಿವಿಧ ಅಧ್ಯಯನಗಳಲ್ಲಿ ಕಂಡುಬಂದಿರುವ ಮುಖ್ಯ ಅಂಶವೆಂದರೆ ಹೆಚ್ಚಾಗಿ ಮಾದಕ ವಸ್ತುಗಳ ಮೊದಲ ಉಪಯೋಗ ಪ್ರಾರಂಭವಾಗುವುದು ಹದಿಹರೆಯದ ಅಥವಾ ತಾರುಣ್ಯದ ಹಂತದಲ್ಲಿ. ಇದು ಈ ವಯಸ್ಸಿನಲ್ಲಿ ಆರಂಭವಾಗಲು ಹಲವಾರು ಕಾರಣಗಳಿವೆ. ಆದರೆ ಈ ಹಂತದಲ್ಲಿ ಅವರಿಗೆ ಮುಖ್ಯವಾಗಿ ಕುಟುಂಬದ ಪ್ರೀತಿ, ಸಹಕಾರ, ನಂಬಿಕೆ/ ವಿಶ್ವಾಸ ನಿರಂತರವಾಗಿ ದೊರಕುತ್ತಿದ್ದರೆ, ಅವರು ಬೇಡವಾದ ಅನ್ಯ ಮಾರ್ಗಗಳನ್ನು ಹಿಡಿಯುವುದನ್ನು ತಪ್ಪಿಸಬಹುದು.

ಅವರಿಗೆ ತಮ್ಮ ತೊಂದರೆಗಳ ಬಗ್ಗೆ ಮಾತಾಡಲು ಪೋಷಕರು ಅಗತ್ಯವಿದ್ದಾಗ ಲಭ್ಯವಿದ್ದರೆ/ ಅಥವಾ ದಿನಾ ಅವರನ್ನು ಆಲಿಸುತ್ತಾ/ ಮಾತಾಡುತ್ತಾ ಇದ್ದರೆ, ಅವರು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸುವ ದಾರಿ ಹುಡುಕುತ್ತಾರೆಯೇ ವಿನಾ ಮಾದಕವಸ್ತುಗಳ ಉಪಯೋಗದ ದಾರಿಯನ್ನಲ್ಲ. ಇಂದಿನ ಬಿಡುವಿಲ್ಲದ ಜೀವನಶೈಲಿಯಲ್ಲಿ ಪೋಷಕರಿಗೆ ಮಕ್ಕಳ ಹತ್ತಿರ ಮಾತಾಡಲು, ಸಮಯ ಕಳೆಯಲು ಅಥವಾ ಮಕ್ಕಳಿಗೆ ಪೋಷಕರ ಹತ್ತಿರ ಮಾತಾಡಲು ಸಮಯದ ಕೊರತೆಯಿದೆ ಹಾಗೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಷ್ಟು ಕಾಲಾವಕಾಶ ದೊರಕುತ್ತಿಲ್ಲ.

ಇವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಹದಿಹರೆಯ ಹಾಗೂ ತರುಣಾವಸ್ಥೆಯವರು ಮಾದಕ ವಸ್ತುಗಳಿಗೆ ಮೊರೆ ಹೋಗಲು ಕಾರಣವಾಗಿದೆ. ಹಾಗಾಗಿ ವಸ್ತುಗಳ ತೊಂದರೆಯ ಚಿಕಿತ್ಸೆಗಿಂತ ಮುಖ್ಯವಾಗಿ ಮಾದಕ ವಸ್ತುಗಳ ಉಪಯೋಗದ ಸನ್ನಿವೇಶಗಳೇ ಉದ್ಭವವಾಗದಿರುವ ಹಾಗೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಈ ಲೇಖನದಲ್ಲಿ ಮಾದಕವಸ್ತುಗಳ ವ್ಯಸನದ ಬಗ್ಗೆ ಒಂದು ಪಕ್ಷಿ ನೋಟವನ್ನು ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾದಕ ವಸ್ತುಗಳ 2017ರ ವರದಿಯ ಪ್ರಕಾರ 2015ರಲ್ಲಿ ವಿಶ್ವದ ಶೇ. 5ರಷ್ಟು (25 ಕೋಟಿ) ವಯಸ್ಕರು ಕನಿಷ್ಟ ಒಮ್ಮೆಯಾದರೂ ಮಾದಕ ವಸ್ತುಗಳನ್ನು ಬಳಸಿದ್ದರು. ಇನ್ನೂ ಗಂಭೀರ ವಿಷಯವೆಂದರೆ, ಈ ಮಾದಕ ವಸ್ತುಗಳ ಉಪಯೋಗಿಗಳಲ್ಲಿ ಸುಮಾರು 3 ಕೋಟಿ ಜನ, ಅಂದರೆ ಶೇ. 0.6 ವಯಸ್ಕರು ಮಾದಕ ವಸ್ತುಗಳ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಅವರ ಆರೋಗ್ಯದ ಮೇಲಲ್ಲದೆ, ಅವರ ಜೀವನದ ವಿವಿಧ ಆಯಾಮಗಳಲ್ಲಿಯೂ ಕೂಡ ಗಂಭೀರ ತೊಂದರೆಗಳುಂಟಾಗುತ್ತಿವೆ. ಅಂದರೆ, ಅವರೆಲ್ಲ ಮಾದಕ ವಸ್ತುಗಳ ಅವಲಂಬನೆಯ ಹಂತಕ್ಕೆ ತಲುಪಿದ್ದು, ಅವರಿಗೆ ಚಿಕಿತ್ಸೆ ಅತ್ಯಗತ್ಯವಾಗಿದೆ. ಇಷ್ಟಾದರೂ ಆರು ರೋಗಿಗಳಲ್ಲಿ ಕೇವಲ ಒಬ್ಬ ಮಾತ್ರ ಚಿಕಿತ್ಸೆ ಪಡೆಯುತ್ತಾನೆ. ಅಂದರೆ ಶೇ. 80ರಷ್ಟು ಮಾದಕ ವಸ್ತುಗಳ ರೋಗಿಗಳು ತೊಂದರೆಗಳನ್ನು ಅನುಭವಿಸುತ್ತ ಬದುಕುತ್ತಿದ್ದಾರೆ.

ಈ ರೀತಿ ಚಿಕಿತ್ಸೆ ಪಡೆಯದೇ ಇರುವುದಕ್ಕೆ ಹಲವಾರು ಕಾರಣಗಳಿರಬಹುದು. ಒಂದು ಮುಖ್ಯ ಕೊರತೆಯೆಂದರೆ, ಮಾದಕ ವಸ್ತುಗಳ ಅವಲಂಬನೆ ಮತ್ತು ಅವುಗಳಿಂದುಂಟಾಗುವ ವಿವಿಧ ತೊಂದರೆಗಳನ್ನು ಸರಿಪಡಿಸಲು ವೈಜ್ಞಾನಿಕವಾಗಿ ನಿರೂಪಿಸಲ್ಪಟ್ಟ ಚಿಕಿತ್ಸಾ ಸೌಲಭ್ಯಗಳ ಕೊರತೆ. ಈ ಸೌಲಭ್ಯಗಳು ಕೆಲವು ಪಟ್ಟಣಗಳಲ್ಲಿ ಅಥವಾ ಕೆಲವು ಆಸ್ಪತ್ರೆಗಳಲ್ಲಷ್ಟೇ ಲಭ್ಯವಾಗಿರಬಹುದು. ಆದರೆ ಮಾದಕ ವಸ್ತುಗಳಿಂದ ಬಳಲುತ್ತಿರುವವರು ಪ್ರಪಂಚದ ಎಲ್ಲ ಮೂಲೆಗಳಲ್ಲಿದ್ದಾರೆ.

ಆದರೆ ಕೆಲವರು ಚಟಕ್ಕೊಳಗಾಗುತ್ತಾರೆ, ಹಲವರು ಮಾದಕ ವಸ್ತುಗಳ ಚಟಕ್ಕೊಳಗಾಗದೆ ಹಾಗೆಯೇ ಉಳಿದುಬಿಡುತ್ತಾರೆ. ಹೀಗಾಗಲು ಕಾರಣಗಳೇನು?

ಬೇರೆ ದೈಹಿಕ ಕಾಯಿಲೆಗಳ ತರಹ ವ್ಯಕ್ತಿಯೋರ್ವನಲ್ಲಿ ಚಟ ಬೆಳೆಯುವುದಕ್ಕೆ ವಿವಿಧ ಅಂಶಗಳು ಪೂರಕವಾಗಿರುತ್ತವೆ: ಜೀನ್‌ ಅಥವಾ ವರ್ಣತಂತುಗಳು, ಆನುವಂಶೀಯತೆ, ಕೌಟುಂಬಿಕ ಅಥವಾ ಸಾಮಾಜಿಕ ಕಾರಣಗಳು. ಮಾದಕ ವಸ್ತುಗಳ ಚಟಕ್ಕೊಳಗಾಗುವ ಸಂಭಾವ್ಯತೆ ಹೆಚ್ಚಾಗಿಸುವ ಪೂರಕ ಅಂಶಗಳೆಂದರೆ: ಕುಟುಂಬದವರಲ್ಲಿ ಮಾದಕ ವಸ್ತುಗಳ ಚಟ, ಬಾಲ್ಯದಲ್ಲಿ ಋಣಾತ್ಮಕ ಅನುಭವಗಳು, ಮಾನಸಿಕ ಕಾಯಿಲೆಗಳು: ಖನ್ನತೆ, ಆತಂಕ, ಮಾದಕ ವಸ್ತುಗಳ ಉಪಯೋಗವನ್ನು ಬೇಗ/ಹದಿಹರೆಯ ವಯಸ್ಸಿನಲ್ಲಿಯೇ ಆರಂಭಿಸುವುದು, ಮಾದಕ ವಸ್ತುಗಳನ್ನು ನಿರಂತರವಾಗಿ ಉಪಯೋಗಿಸುವ ಸ್ನೇಹಿತರ/ ಸಹೋದ್ಯೋಗಿಗಳ ಗುಂಪು, ಸುಲಭವಾಗಿ ಮಾದಕ ವಸ್ತುಗಳು ಲಭ್ಯವಾಗುವುದು, ಇತ್ಯಾದಿ.

ಸಾಮಾನ್ಯವಾಗಿಉಪಯೋಗಿಸುವ ಮಾದಕ ವಸ್ತುಗಳು: ಮದ್ಯ, ತಂಬಾಕು, ಗಾಂಜಾ, ಕೋಕೇನ್‌, ಓಪಿಯಮ್‌, ಆಂಫಿಟಮೈನ್‌, ಹಿರಾಯಿನ್‌, ಎಲ್‌.ಎಸ್‌.ಡಿ., ಪಿ.ಸಿ.ಪಿ., ನಿದ್ದೆ ಮಾತ್ರೆಗಳು, ಅನಿಲಗಳು (ವೈಟನರ್‌, ಪೆಟ್ರೋಲಿಯಮ್‌ ಉತ್ಪನ್ನಗಳು) ಇತ್ಯಾದಿ.

ಅಡಿಕ್ಷನ್‌ ಎಂದರೇನು?

ಅಡಿಕ್ಷನ್‌ ಎನ್ನುವುದು ಲ್ಯಾಟಿನ್‌ ಭಾಷೆಯಿಂದ ಬಂದ ಪದ. ಇದರ ಅರ್ಥ ಗುಲಾಮನಾಗಿರುವುದು ಅಥವಾ ಅಧೀನನಾಗಿರುವುದು. ಮಾದಕ ವಸ್ತುಗಳ ಚಟಕ್ಕೊಳಗಾದವರು ಇದರಿಂದ ಹೊರಬರಲು ಪ್ರಯತ್ನಿಸುವಾಗ ಆಗುವ ಕಷ್ಟಗಳನ್ನು ಅವರು ನೆನೆದುಕೊಂಡರೆ ಇದಕ್ಕೆ ಗುಲಾಮನಾಗಿರುವುದೆಂದು ಯಾಕೆ ಹೇಳಲಾಗಿದೆ ಎಂದು ಅರ್ಥವಾಗುತ್ತದೆ. ಅಡಿಕ್ಷನ್‌ ಪದವನ್ನು ಕನ್ನಡದಲ್ಲಿ ಅನುವಾದಿಸುವುದಾದರೆ, ಇದನ್ನು ಈ ಪದಗಳಲ್ಲಿ ವಿವಿಧ ಸನ್ನಿವೇಶಗಳಲ್ಲಿ ಉಪಯೋಗಿಸಲಾಗುತ್ತದೆ: ಚಟ/ದುಶ್ಚಟ, ವ್ಯಸನ/ದುವ್ಯìಸನ, ಹವ್ಯಾಸ/ದುರಭ್ಯಾಸ ಇತ್ಯಾದಿ. ಮಾದಕ ವಸ್ತುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ದೀರ್ಘ‌ ಕಾಲದ ಮತ್ತು ಪ್ರಭಾವಿ ಪರಿಣಾಮ ಬೀರುತ್ತದೆ. ಈ ಪರಿಣಾಮಗಳೆಂದರೆ: ಮಾದಕ ವಸ್ತುಗಳ ಸೇವನೆಯ ತವಕ/ಹಪಹಪಿಸುವಿಕೆ, ಮಾದಕ ವಸ್ತುಗಳ ಸೇವನೆ/ಉಪಯೋಗದ ಮೇಲೆ ನಿಯಂತ್ರಣ ತಪ್ಪಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು, ಮಾದಕ ವಸ್ತುಗಳ ದುಷ್ಪರಿಣಾಮಗಳಾಗುತ್ತಿದ್ದರೂ ಅದರ ಸೇವನೆ/ಉಪಯೋಗ ಮುಂದುವರಿಸುವುದು.

ಮಾದಕ ವಸ್ತುಗಳ ದುರುಪಯೋಗ ಮತ್ತು ಚಟ ಬೆಳೆಯುವುದು ಹೇಗೆ? ಮೋಜಿಗಾಗಿ ಮಾದಕ ವಸ್ತುವನ್ನು ಆರಂಭಿಸಿದ ವ್ಯಕ್ತಿ ಅದನ್ನು ಪದೇಪದೆ ಉಪಯೋಗಿಸುತ್ತಾನೆ. ಯಾಕೆಂದರೆ, ಅದು ಆತನಿಗೆ ಸಂತೋಷವನ್ನು ಉಂಟುಮಾಡುತ್ತದೆಯಲ್ಲದೆ, ಅಹಿತಕರ ಅನುಭವಗಳನ್ನು ಉಂಟುಮಾಡುತ್ತದೆ. ಆದರೆ ಇವುಗಳು ತಾತ್ಕಾಲಿಕ ಅನುಭವಗಳು ಮಾತ್ರ. ಸಮಯ ಕಳೆದಂತೆ ಈ ಉಪಯೋಗ, ದುರುಪಯೋಗ ಮತ್ತು ಚಟಕ್ಕೆ ತಿರುಗಿಬಿಡುತ್ತದೆ. ಆದರೆ ವ್ಯಕ್ತಿಗೆ ಈ ಪರಿವರ್ತನೆಯ ಅರಿವಿರುವುದಿಲ್ಲ. ಅದಕ್ಕಾಗಿ ಈ ಪರಿವರ್ತನೆಯಾಗುವ ಕೆಲವು ಸೂಚನೆಗಳನ್ನು ಮೊದಲೇ ಅರಿತುಕೊಂಡರೆ ವ್ಯಕ್ತಿ ಚಟಕ್ಕೊಳಗಾಗುವುದನ್ನು ತಡೆಗಟ್ಟಬಹುದು.

ಗುರುತಿಸಬಹುದಾದ ಈ ಕೆಲವು ಸೂಚಕಗಳೆಂದರೆ

*ಮೋಜಿಗಾಗಿ ಯಾವಾಗಲೋ ಒಮ್ಮೆ ಬಳಸುವ ಮಾದಕ ವಸ್ತುವನ್ನು ಸಮಯ ಕಳೆದಂತೆ ಹೆಚ್ಚು ಸಲ ಬಳಸಬೇಕೆಂಬ ತವಕವುಂಟಾಗುವುದು. ಅನಂತರ ಮಾದಕ ವಸ್ತುವನ್ನು ವಾರಕ್ಕೆರಡು ಸಲ, ಮೂರು ಸಲ ಬಳಸುತ್ತಾ ಬಂದು, ಅದು ದಿನ ಬೇಕೇ ಬೇಕು ಅನ್ನುವಂತಹ ಪರಿಸ್ಥಿತಿಯುಂಟಾಗಿ, ಜೀವನದಲ್ಲಿ ಇತರ ಎಲ್ಲ ವಿಷಯಗಳಿಗಿಂತ ಮಾದಕ ವಸ್ತುವಿನ ಉಪಯೋಗವೇ ಪ್ರಾಮುಖ್ಯ ಪಡೆಯಲಾರಂಭಿಸುತ್ತದೆ.

*ವ್ಯಕ್ತಿಯ ಯಾವುದೋ ಒಂದು ತೊಂದರೆಯನ್ನು ಮಾದಕ ವಸ್ತು ತಾತ್ಕಾಲಿಕವಾಗಿ ಬಗೆ ಹರಿಸಲಾರಂಭಿಸಿದಾಗ ವ್ಯಕ್ತಿಯು ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕದೇ ಅದರ ತಾತ್ಕಾಲಿಕ ಪರಿಹಾರವಾದ ಮಾದಕ ವಸ್ತುವಿನ ಮೇಲೆಯೇ ಯಾವಾಗಲೂ ಅವಲಂಬಿತನಾಗಿರಲಾರಂಭಿಸುತ್ತಾನೆ.

*ವ್ಯಕ್ತಿಯು ಜೀವನದ ಯಾವುದೋ ಒಂದು ಕೊರತೆಯನ್ನು ಮಾದಕ ವಸ್ತುವಿಗೆ ಮೊರೆ ಹೋಗಿ, ಜೀವನದಲ್ಲಿ ಸಂತೋಷ/ಸಮಾಧಾನವನ್ನು ಉಂಟುಮಾಡುವ ವಸ್ತು ಕೇವಲ ಮಾದಕ ವಸ್ತುವಾಗತೊಡಗುತ್ತದೆ.

*ಸಮಯ ಕಳೆದಂತೆ, ವ್ಯಕ್ತಿಯ ಕೆಲಸ, ಜವಾಬ್ದಾರಿಗಳು ಪ್ರಾಮುಖ್ಯ ಕಳೆದುಕೊಂಡು ಅವುಗಳಲ್ಲಿ ತೊಂದರೆಗಳು ಕಂಡುಬರಲಾರಂಭಿಸುತ್ತವೆ. ಈ ಹಂತದಲ್ಲೇ ವ್ಯಕ್ತಿಯು ತಾನು ಚಟಕ್ಕೊಳಗಾಗುತ್ತಿದ್ದೇನೆಂದು ಅರಿತುಕೊಂಡು ಅಥವಾ ಮನೆಯವರು/ ಸ್ನೇಹಿತರು ಅರಿತುಕೊಂಡು ವ್ಯಕ್ತಿಯನ್ನು ಮಾನಸಿಕ ರೋಗ ತಜ್ಞರನ್ನು ಸಂಪರ್ಕಿಸಿದಾಗ ಇದಕ್ಕೆ ಸೂಕ್ತ ಚಿಕಿತ್ಸೆ ನೀಡಿ, ತೊಂದರೆ ಮುಂದುವರೆಯದಂತೆ ಮಾರ್ಗದರ್ಶನ ನೀಡಲಾಗುತ್ತದೆ.

ಮಾದಕ ವಸ್ತುಗಳ ಉಪಯೋಗ, ದುರುಪಯೋಗ ಮತ್ತು ಚಟ

ಕೆಲವು ಜನ ಮಾದಕ ವಸ್ತುಗಳನ್ನು ಮೋಜಿಗಾಗಿ ಕೆಲವೊಮ್ಮೆ ಉಪಯೋಗಿಸುತ್ತಾರೆ ಮತ್ತು ಅವರು ಯಾವುದೇ ದೈಹಿಕ ಅಥವಾ ಮಾನಸಿಕ ತೊಂದರೆಗಳಿಗೊಳಗಾಗುವುದಿಲ್ಲ. ಆದರೆ ಹೆಚ್ಚಿನ ಜನರ ಜೀವನದಲ್ಲಿ ಇದು ಕೆಲಸ, ಕುಟುಂಬ, ಹಣಕಾಸು, ಸಮಾಜದಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ. ಆದರೆ ಜನರು ಈ ಮಾದಕ ವಸ್ತುಗಳ ಉಪಯೋಗ ಆರಂಭಿಸುವುದೇಕೆ ಎನ್ನುವ ಪ್ರಶ್ನೆ ಹುಟ್ಟುವುದು ಸಹಜ.

ಹೆಚ್ಚಿನ ಜನ ಇದನ್ನು ಮೊದಲನೇ ಸಲ ಮೋಜಿಗಾಗಿಯೋ, ಸ್ನೇಹಿತರ ಒತ್ತಾಯದಿಂದಲೋ, ನಿದ್ದೆಗಾಗಿಯೋ, ಆತಂಕ/ಗಾಬರಿ ಕಡಿಮೆ ಮಾಡಿಕೊಳ್ಳಲೋ, ಟೆನ್ಶನ್‌ ಕಡಿಮೆ ಮಾಡಿಕೊಳ್ಳಲೋ ಪ್ರಾರಂಭಿಸುತ್ತಾರೆ. ಆದರೆ ಉಪಯೋಗವು ದುರುಪಯೋಗವಾಗಿ, ಅನಂತರ ಚಟವಾಗಿ ಪರಿವರ್ತನೆಗೊಳ್ಳುತ್ತದೆ. ಹಾಗೂ ಈ ರೀತಿ ಎಲ್ಲ ಜನರಲ್ಲಿ ಆಗುವುದಿಲ್ಲ.

ಕೆಲವರು ಕೇವಲ ದುರುಪಯೋಗದ ಮಟ್ಟಿಗೆ ನಿಲ್ಲುತ್ತಾರೆ, ಕೆಲವರು ಚಟ (ಅಡಿಕ್ಷನ್‌) ಕ್ಕೆ ಒಳಗಾಗುತ್ತಾರೆ. ಆದರೆ ಈ ದುರುಪಯೋಗದಿಂದ ಚಟವನ್ನು ವಿಭಜಿಸಿ ಹೇಳುವುದು ಕಷ್ಟಕರ ವಿಷಯ. ಸಾಧಾರಣವಾಗಿ ಇದು ವ್ಯಕ್ತಿಯ ಜೀವನದ ವಿವಿಧ ಭಾಗಗಳಲ್ಲಿ ತೊಂದರೆಯನ್ನು ಉಂಟುಮಾಡುತ್ತಿದ್ದರೆ, ಇದಕ್ಕೆ ಚಿಕಿತ್ಸೆ ಬೇಕಾಗಿದೆಯೆಂದು ಅರ್ಥೈಸಿಕೊಳ್ಳಬೇಕು.

ಇದಲ್ಲದೇ ಇದು ವ್ಯಕ್ತಿಯು ಉಪಯೋಗಿಸುವ ಮಾದಕ ವಸ್ತುವಿನ ಪ್ರಮಾಣದ ಮೇಲೆ ನಿರ್ಧಾರವಾಗಿರದೇ ಅದರಿಂದಾಗುವ ಪರಿಣಾಮಗಳ ಮೇಲೆ ನಿರ್ಧಾರವಾಗಿರುತ್ತದೆ. ಅಂದರೆ, ವ್ಯಕ್ತಿಯೋರ್ವ ಅಲ್ಪ ಪ್ರಮಾಣದಲ್ಲಿ ಮಾತ್ರ ಮಾದಕ ವಸ್ತು ಸೇವಿಸುತ್ತಿದ್ದರೂ ಇದರಿಂದಾಗಿ ಆತನ ಜೀವನದಲ್ಲಿ ತೊಂದರೆಯುಂಟಾಗುತ್ತಿದ್ದರೆ, ಆತನಿಗೆ ಮಾದಕ ವಸ್ತುವಿನ ಚಟದ ತೊಂದರೆ ಇದೆಯೆಂದು ಪರಿಗಣಿಸಬೇಕಾಗುತ್ತದೆ.

-ಡಾ| ರವೀಂದ್ರ ಮುನೋಳಿ
ಸಹ ಪ್ರಾಧ್ಯಾಪಕರು,
ಮನೋರೋಗಚಿಕಿತ್ಸಾ ವಿಭಾಗ,
ಕೆಎಂಸಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

7-belagavi

Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

2

Vitla: ಜಾತ್ರೆ ಸಂತೆ ಶುಲ್ಕ ಹರಾಜು ಮೊತ್ತ ಇಳಿಸಲು ಆಗ್ರಹ

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ  ಸೇವೆ

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ ಸೇವೆ

1

Puttur: ಜಲಸಿರಿ ನಂಬಿದರೆ ಬೇಸಗೆಯಲ್ಲಿ ಟ್ಯಾಂಕರೇ ಗತಿ; ಸದಸ್ಯರ ಆತಂಕ

ಅಪ್ಪಣ್ಣ ಹೆಗ್ಡೆ-90ರ ಸಂಭ್ರಮ-ಅಪ್ಪಣ್ಣ ಹೆಗ್ಡೆ ಆತ್ಮವಿಶ್ವಾಸದ ಪ್ರತೀಕ : ಡಾ| ಹೆಗ್ಗಡೆ

ಅಪ್ಪಣ್ಣ ಹೆಗ್ಡೆ-90ರ ಸಂಭ್ರಮ-ಅಪ್ಪಣ್ಣ ಹೆಗ್ಡೆ ಆತ್ಮವಿಶ್ವಾಸದ ಪ್ರತೀಕ : ಡಾ| ಹೆಗ್ಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.