ವಕ್ರದಂತಪಂಕ್ತಿ ಅಡ್ಡಾದಿಡ್ಡಿ ಹಲ್ಲುಗಳೂ ಸರಿಗೂಡಬಲ್ಲವು
Team Udayavani, Jan 3, 2021, 12:41 PM IST
ವಕ್ರದಂತಪಂಕ್ತಿ ಅಂದರೆ ಹಲ್ಲುಗಳು ಸುಸ್ವರೂಪದಲ್ಲಿ ಸಾಲಾಗಿ ಸಂಯೋಜಿತವಾಗಿರದೆ ಇರುವುದು ಅಥವಾ ಮೇಲು ಮತ್ತು ಕೆಳಗಿನ ಸಾಲಿನ ಹಲ್ಲುಗಳ ಕಚ್ಚಿಕೊಳ್ಳುವಿಕೆಯ ಸುಸಂಬಂಧ ಇಲ್ಲದೆ ಇರುವುದು. ಬ್ರೇಸ್‌ಗಳು ಮತ್ತು ಆಥೊìಡಾಂಟಿಕ್ಸ್ ನಿಮ್ಮ ಹಲ್ಲುಗಳ ನೇರವನ್ನೂ ಕಚ್ಚಿಕೊಳ್ಳುವಿಕೆಯ ಸಂಯೋಜನಾರಾಹಿತ್ಯವನ್ನೂ ಸರಿಪಡಿಸಬಲ್ಲವು.
ಹಲ್ಲುಗಳನ್ನು ನೇರಗೊಳಿಸುವುದು ಮತ್ತು ಕಚ್ಚುವಿಕೆಯನ್ನು ಮರು ಸಂಯೋಜಿಸುವುದು. ಒಟ್ಟಾರೆಯಾಗಿ ಬಾಯಿಯ ಆರೋಗ್ಯದ ಮೇಲೆ ದೀರ್ಘಕಾಲಿಕ ಪ್ರಯೋಜನಗಳನ್ನು ಉಂಟು ಮಾಡುತ್ತದೆ.
- ಹಲ್ಲುಗಳು ನೇರವಾಗಿದ್ದರೆ ಹಲ್ಲುಜ್ಜಲು ಮತ್ತು ಶುಚಿಗೊಳಿಸಲು ಸುಲಭ. ಇದರಿಂದ ಹಲ್ಲು ಹುಳುಕಾಗುವುದು, ವಸಡಿನ ಕಾಯಿಲೆಗಳು ಮತ್ತು ವಸಡಿನ ಉರಿಯೂತ ಕಡಿಮೆಯಾಗಲು ಸಹಾಯವಾಗುತ್ತದೆ.
- ಹಲ್ಲುಗಳ ಕಚ್ಚಿಕೊಳ್ಳುವಿಕೆ ಸರಿಯಾಗಿದ್ದರೆ ಹಲ್ಲುಗಳು ಮತ್ತು ಬಾಯಿ ಆಹಾರವನ್ನು ಸಮರ್ಪಕವಾದ ರೀತಿಯಲ್ಲಿ ಜಗಿಯಲು ಅನುಕೂಲವಾಗುತ್ತದೆ. ಹಲ್ಲುಗಳು ಒಂದು ಸಾಲಿನಿಂದ ಇನ್ನೊಂದು ಹೊರಕ್ಕೆ ಅಥವಾ ಒಳಕ್ಕೆ ಕಚ್ಚಿಕೊಳ್ಳುವುದು, ಅಡ್ಡಕ್ಕೆ ಕಚ್ಚಿಕೊಳ್ಳುವುದು ಅಥವಾ ಸರಿಯಲ್ಲದೆ ಇನ್ನೊಂದು ಯಾವುದೇ ರೀತಿಯಲ್ಲಿ ಅಸಂಯೋಜಿತವಾಗಿ ಕಚ್ಚಿಕೊಳ್ಳುವುದನ್ನು ಸರಿಪಡಿಸಿದರೆ ಆಹಾರವನ್ನು ಜಗಿದು ಜೀರ್ಣಿಸಿಕೊಳ್ಳಲು ಸುಲಭ.
- ಹಲ್ಲುಗಳು ಅವಧಿಪೂರ್ವ ಸವೆಯುವು ದನ್ನು ತಡೆಯುತ್ತವೆ. ನಿಮ್ಮ ಹಲ್ಲುಗಳು ಸಮರ್ಪಕವಾಗಿ ಸಂಯೋಜನೆಯಾಗದೆ ಇದ್ದರೆ, ಅದರಿಂದ ಪಕ್ಕದ ಹಲ್ಲುಗಳ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ. ಇದರಿಂದಾಗಿ ಅವು ಬೇಗನೆ ಸವೆಯುತ್ತದೆ.
- ಹಲ್ಲುಗಳು ಸರಿಯಾಗಿ ಸಂಯೋಜನೆಗೊಂಡು ಇದ್ದರೆ ನಿಮಗೆ ಸರಿಯಾಗಿ ಮಾತನಾಡುವುದು ಕೂಡ ಸಾಧ್ಯವಾಗುತ್ತದೆ. ಮೇಲಿನ ಮತ್ತು ಕೆಳಗಿನ ಹಲ್ಲು ಸಾಲುಗಳು ಸರಿಯಾದ ಹೊಂದಾಣಿಕೆಯನ್ನು ಹೊಂದಿಲ್ಲದೆ ಇರುವಾಗ ಮಾತನಾಡುವುದಕ್ಕೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸಬಹುದು.
ಬ್ರೇಸ್‌ನಿಂದ ಸರಿಪಡಿಸಲು ಸಾಧ್ಯವಿರುವ ಸಾಮಾನ್ಯ ವಕ್ರದಂತಪಂಕ್ತಿ ಸಮಸ್ಯೆಗಳು : ಇಡಿಕಿರಿದ ಹಲ್ಲುಗಳು :
ನಿಮ್ಮ ಬಾಯಿಯಲ್ಲಿ ಹಲ್ಲುಗಳಿಗೆ ನಿಗದಿತವಾದ ನಿರ್ದಿಷ್ಟ ಜಾಗದಲ್ಲಿ ಅನೇಕ ಹಲ್ಲುಗಳು ಮೂಡಿದಾಗ ಈ ಸಮಸ್ಯೆ ಉಂಟಾಗುತ್ತದೆ.
ಮುಂಚಾಚಿದ ಕಚ್ಚಿಕೊಳ್ಳುವಿಕೆ :
ಹಲ್ಲುಗಳನ್ನು ಕಚ್ಚಿಕೊಂಡಾಗ ಮೇಲ್ಗಡೆಯ ಹಲ್ಲುಸಾಲು ಕೆಳಗಡೆಯ ಹಲ್ಲುಸಾಲಿನಿಂದ ತೀರಾ ಮುಂದಕ್ಕೆ ಬಂದು ಮರೆಮಾಚುವಂತಿರುತ್ತದೆ.
ಹಲ್ಲುಗಳ ನಡುವೆ ಬಿಟ್ಟಸ್ಥಳ : ನಿಮ್ಮ ಬಾಯಿಯಲ್ಲಿ ಹಲ್ಲುಗಳಿಗಾಗಿ ಇರುವ ಖಾಲಿ ಜಾಗವನ್ನು ನಿಮ್ಮ ಹಲ್ಲುಗಳು ತುಂಬಿಕೊಳ್ಳುವುದಿಲ್ಲ ಎಂಬ ಬಹಳ ಸರಳ ಕಾರಣದಿಂದ ಅಥವಾ ಹಲ್ಲು ಇಲ್ಲದೆ ಇರುವುದರಿಂದ ನಿಮ್ಮ ಹಲ್ಲುಗಳ ನಡುವೆ ಅನೈಚ್ಛಿಕ ಖಾಲಿ ಸ್ಥಳವು ಕಂಡುಬರುತ್ತದೆ.
ದಂತಪಂಕ್ತಿಗಳ ನಡುವೆ ಬಿಟ್ಟ ಸ್ಥಳ : ನೀವು ಕಚ್ಚಿಕೊಂಡಾಗ ಮೇಲಿನ ಮತ್ತು ಕೆಳಗಿನ ಹಲ್ಲುಸಾಲುಗಳಲ್ಲಿ ಕಡೆಹಲ್ಲುಗಳು ಒಂದನ್ನೊಂದು ಕೂಡಿಕೊಂಡರೂ ಎದು ರುಗಡೆ ಅಥವಾ ಪಾರ್ಶ್ವದಲ್ಲಿ ಹಲ್ಲುಸಾಲುಗಳ ನಡುವೆ ಖಾಲಿ ಸ್ಥಳ ಇರುತ್ತದೆ.
ಅಸಂಯೋಜಿತ ಕಚ್ಚುವಿಕೆ :
ಮೇಲ್ಗಡೆಯ ಹಲ್ಲುಸಾಲು ಕೆಳಗಿನ ಹಲ್ಲುಸಾಲುಗಳ ಜತೆಗೆ ಕಚ್ಚಿಕೊಳ್ಳುವಿಕೆಯ ಸಂಯೋಜನೆ ಹೊಂದಿಲ್ಲದೆ ಇರುವುದು.
ಡಾ| ರಿತೇಶ್ ಸಿಂಗ್ಲಾ,
ರೀಡರ್, ಆರ್ಥೋಡಾಂಟಿಕ್ಸ್ ವಿಭಾಗ, ಮಣಿಪಾಲ
ದಂತವೈದ್ಯಕೀಯ ಕಾಲೇಜು ವಿಭಾಗ, ಮಣಿಪಾಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.