ನಿಶ್ಶಬ್ದ ಲಕ್ವಾ ಎಂದರೇನು? ಕಾರಣಗಳು ಮತ್ತು ತಡೆ
Team Udayavani, Nov 6, 2022, 11:10 AM IST
ಲಕ್ವಾ ಮತ್ತು ಮಯೊಕಾರ್ಡಿಯಲ್ ಇನ್‌ಫಾರ್ಕ್ಷನ್ ಎರಡೂ ಜಾಗತಿಕವಾಗಿ ಇರುವ ಪ್ರಮುಖ ಅನಾರೋಗ್ಯಗಳು. ಮಿದುಳಿಗೆ ರಕ್ತ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದರಿಂದ ನರಶಾಸ್ತ್ರೀಯ ಅನಾರೋಗ್ಯವಾದ ಲಕ್ವಾ ಉಂಟಾದರೆ ಹೃದಯಕ್ಕೆ ರಕ್ತ ಸರಬರಾಜಿನಲ್ಲಿ ಉಂಟಾಗುವ ವ್ಯತ್ಯಯದಿಂದ ಮಯೊಕಾರ್ಡಿಯಲ್ ಇನ್‌ಫಾರ್ಕ್ಷನ್ ತಲೆದೋರುತ್ತದೆ. ದೇಹದ ಒಂದು ಪಾರ್ಶ್ವದಲ್ಲಿ ದೌರ್ಬಲ್ಯ, ಮುಖ ಜೋತುಬೀಳುವುದು ಮತ್ತು ಮಾತನಾಡಲು ಕಷ್ಟವಾಗುವುದು ಮುಂತಾದ ಲಕ್ಷಣಗಳಿಂದ ಲಕ್ವಾವನ್ನು ಸುಲಭವಾಗಿ ಗುರುತಿಸಬಹುದು. ಇಲ್ಲಿ ಲಕ್ಷಣಗಳು ಎದ್ದುಕಾಣುತ್ತವೆ.
“ನಿಶ್ಶಬ್ದ ಹೃದಯ ವೈಫಲ್ಯ’ ಎಂಬ ಪದವನ್ನು ನೀವು ಕೇಳಿರಬಹುದು. ಹೀಗೆಯೇ ನಿಶ್ಶಬ್ದ ಲಕ್ವಾ ಎಂಬುದೂ ಇದೆಯೇ? ಲಕ್ವಾ ಮಿದುಳಿನ ಪ್ರಾಮುಖ ಭಾಗಗಳಿಗೆ ಆಘಾತ ಉಂಟು ಮಾಡಿದಾಗ ತತ್‌ಕ್ಷಣದ ಲಕ್ಷಣಗಳನ್ನು ಉಂಟುಮಾಡುತ್ತದೆ. ಇತರ ಲಕ್ವಾಗಳಂತೆಯೇ ಮಿದುಳಿಗೆ ರಕ್ತ ಸರಬರಾಜು ಹಠಾತ್ತಾಗಿ ವ್ಯತ್ಯಯಗೊಂಡಾಗ ನಿಶ್ಶಬ್ದ ಲಕ್ವಾ ಉಂಟಾಗುತ್ತದೆ. ಇದರಲ್ಲಿ ವ್ಯತ್ಯಾಸವೆಂದರೆ ಮಿದುಳಿನ ಅದೃಶ್ಯ ಭಾಗಗಳನ್ನು ಇದು ಬಾಧಿಸುತ್ತದೆ. ನಿಶ್ಶಬ್ದ ಲಕ್ವಾವನ್ನು ಎಂಆರ್ ಐಯಂತಹ ಚಿತ್ರಣ ತಂತ್ರಜ್ಞಾನಗಳಿಂದಷ್ಟೇ ಗುರುತಿಸಬಹುದು. ಇವುಗಳು ಎಂಆರ್‌ಐಗಳಲ್ಲಿ ಸಣ್ಣ ಬಿಂದುಗಳಾಗಿ ಅಥವಾ ನಾವು ಅವುಗಳನ್ನು ಕರೆಯುವಂತೆ ಇಶೆಮಿಕ್ ಪ್ರದೇಶಗಳಾಗಿ ಗೋಚರಿಸುತ್ತವೆ.
ನಿಶ್ಶಬ್ದ ಲಕ್ವಾಗಳು ಅಪಾಯಕಾರಿಯೇ?
ನಮ್ಮ ಮಿದುಳು ಸಿನಾಪ್ಸ್‌ಗಳಿಂದ ಪರಸ್ಪರ ಸಂಪರ್ಕಿಸಲ್ಪಟ್ಟ 100 ಬಿಲಿಯನ್ ನ್ಯೂರಾನ್ ಗಳಿಂದ ಮಾಡಲ್ಪಟ್ಟಿದೆ. ಈ ಎಲ್ಲ ನ್ಯೂರಾನ್ ಗಳು ಕೂಡ ಪ್ರಾಮುಖ್ಯವಾಗಿದ್ದು, ಇವುಗಳಲ್ಲಿ ಬಹುತೇಕ ನ್ಯೂರಾನ್‌ಗಳಿಗೆ ನಿರ್ದಿಷ್ಟ ಕಾರ್ಯಚಟುವಟಿಕೆಗಳಿವೆ. ಮಿದುಳಿನ ವಿವಿಧ ಚಟುವಟಿಕೆಗಳನ್ನು ನೆರವೇರಿಸಲು ಸಂಯೋಜಿತವಾಗಿ ಕೆಲಸ ಮಾಡುತ್ತವೆ. ಆದರೆ ರಕ್ತ ಹೆಪ್ಪುಗಟ್ಟಿದ ನಿಶ್ಶಬ್ದ ಬಿಂದುಗಳು ಶೇಖರಗೊಳ್ಳುತ್ತ ಹೋದ ಹಾಗೆ ಈ ಸುಂದರ ಸಂಯೋಜನೆ ಬಾಧಿತವಾಗುತ್ತದೆ. ಅದು ತತ್ ಕ್ಷಣದ ಲಕ್ಷಣಗಳನ್ನು ಉಂಟುಮಾಡುವುದಿಲ್ಲ; ಆದರೆ ಅವು ಶೇಖರಗೊಳ್ಳುತ್ತ ಹೋದ ಹಾಗೆ “ಬಿನ್‌ಸ್ವಾಂಗರ್ ಸ್ಥಿತಿ’ ಅಥವಾ “ಮಲ್ಟಿ-ಇನ್‌ಫಾರ್ಕ್ಟ್ ಸ್ಥಿತಿ’ ಉಂಟುಮಾಡುತ್ತವೆ. ಇದು ವಾಸ್ಕಾಲಾರ್ ಡಿಮೆನ್ಶಿಯಾ ಎಂದು ಕರೆಯಲ್ಪಡುವ ಒಂದು ಬಗೆಯ ಡಿಮೆನ್ಶಿಯಾಕ್ಕೆ ಕಾರಣವಾಗುತ್ತದೆ. ವಾಸ್ಕಾಲಾರ್ ಡಿಮೆನ್ಶಿಯಾ ಹೊಂದಿರುವವರು ಗ್ರಹಣ ಸಂಬಂಧಿ ಅರಿವಿನ ಕೊರತೆಯಿಂದ ಬಳಲುತ್ತಾರೆ. ನೆನಪು ಮಾಡಿಕೊಳ್ಳುವುದು ಅಥವಾ ಏಕಾಗ್ರತೆಯಲ್ಲಿ ಕಷ್ಟ ಉಂಟಾಗುವುದರಿಂದ ಇದು ಆರಂಭಗೊಳ್ಳಬಹುದು. ವ್ಯಕ್ತಿಗೆ ನಡಿಗೆಯಲ್ಲಿ ಕಷ್ಟಕ್ಕೆ ತುತ್ತಾಗಬಹುದು – ಸಣ್ಣ ಸಣ್ಣ ಹೆಜ್ಜೆಗಳನ್ನಿಟ್ಟು ನಡೆಯಬಹುದು. ನಿರ್ಧಾರಗಳಲ್ಲಿ ಪ್ರಮಾದಗಳು ಉಂಟಾಗಬಹುದು; ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವಾಗಬಹುದು. ಮಲವಿಸರ್ಜನೆ ಮತ್ತು ಮೂತ್ರವಿಸರ್ಜನೆಯ ನಿಯಂತ್ರಣ ತಪ್ಪಿಹೋಗಬಹುದು.
ನಿಶ್ಶಬ್ದ ಲಕ್ವಾದ ವಿಶೇಷತೆ ಏನು?
ಮೇಜರ್ ಅಥವಾ ಸಹಜ ಲಕ್ವಾಗಳು ಉಂಟಾಗುವ ಕಾರಣಗಳಿಂದಲೇ ನಿಶ್ಶಬ್ದ ಲಕ್ವಾ ಕೂಡ ಉಂಟಾಗುತ್ತದೆ. ಪ್ರಾಮುಖ್ಯ ಕಾರಣಗಳು ಹೀಗಿವೆ:
ಅನಿಯಂತ್ರಿತ ರಕ್ತದೊತ್ತಡ
ಅನಿಯಂತ್ರಿತ ಮಧುಮೇಹ
ಅಧಿಕ ಕೊಲೆಸ್ಟರಾಲ್
ರಕ್ತ ಹೆಪ್ಪುಗಟ್ಟಿದ ಹಲವು ಪ್ರದೇಶಗಳು ಅನಿಯಂತ್ರಿತ ರಕ್ತದೊತ್ತಡ ಅಥವಾ ಅನಿಯಂತ್ರಿತ ರಕ್ತದೊತ್ತಡವು ಲಿಪೊಹೈಲಿನೋಸಿಸ್ ಎಂಬ ಸ್ಥಿತಿಗೆ ಕಾರಣವಾಗುತ್ತದೆ;
ಇಲ್ಲಿ ಸೂಕ್ಷ್ಮ ರಕ್ತನಾಳಗಳು ಸಂಕುಚನಗೊಳ್ಳುತ್ತವೆ. ಹೃದಯದ ಸ್ಥಿತಿಗಳಿಂದಾಗಿ ರಕ್ತ ಹಲವು ರಕ್ತ ಹೆಪ್ಪುಗಟ್ಟಿ ಅಂಶಗಳು ಮಿದುಳಿಗೂ ಹಬ್ಬಬಹುದು. ಈ ರಕ್ತ ಹೆಪ್ಪುಗಟ್ಟಿದ ಅಂಶಗಳು ಉಂಟುಮಾಡುವ ಹಾನಿಗಳು ಶಾಶ್ವತವಾಗಿರುತ್ತವೆ. ಮೇಲೆ ವಿವರಿಸಲಾದ ಹಾನಿಗಳು ಬಹು ರಕ್ತ ಹೆಪ್ಪುಗಟ್ಟಿದ ಅಂಶಗಳ ಶೇಖರಣೆಯಿಂದಾಗಿರುತ್ತವೆ. ಇದು ಶೇರು ಮಾರುಕಟ್ಟೆಯಲ್ಲಿ ನೀವು ಸಿಸ್ಟಮ್ಯಾಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲ್ರಾನ್ (ಎಸ್‌ಐಪಿ)ಗಳಲ್ಲಿ ಹಣ ಹೂಡಿದ ಹಾಗೆ – ಹಲವು ವರ್ಷಗಳ ಕಾಲ ಸಣ್ಣ ಮೊತ್ತಗಳನ್ನು ಹೂಡಿಕೆ ಮಾಡಿ ಕೊನೆಯಲ್ಲಿ ದೊಡ್ಡ ಮೊತ್ತವನ್ನು ಪಡೆಯುತ್ತೀರಿ. ಮಲ್ಟಿ- ಇನ್‌ಫಾರ್ಕ್ಟ್ ಸ್ಥಿತಿಯಲ್ಲಿ ರಕ್ತ ಹೆಪ್ಪುಗಟ್ಟಿದ ಅಂಶಗಳು ಶೇಖರಗೊಂಡ ಸಿಪ್ ಪ್ರತಿಫಲವನ್ನು ವ್ಯಕ್ತಿ ಪಡೆಯುತ್ತಾನೆ.
ನಿಶ್ಶಬ್ದ ಲಕ್ವಾಗಳನ್ನು ಹೇಗೆ ತಡೆಯಬಹುದು?
ಸಮತೋಲಿತ ಆಹಾರ ಪದ್ಧತಿ ಮತ್ತು ನಿಯಮಿತ ವ್ಯಾಯಾಮದಿಂದ ನಿಶ್ಶಬ್ದ ಲಕ್ವಾವನ್ನು ತಡೆಯಬಹುದು. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಮತ್ತು ರಕ್ತದೊತ್ತಡವನ್ನು ಸರಿಯಾಗಿ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಧೂಮಪಾನವನ್ನು ತ್ಯಜಿಸುವುದು, ಮದ್ಯಪಾನವನ್ನು ಕಡಿಮೆ ಮಾಡುವುದು ಮತ್ತು ಸೇವಿಸುವ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಕೂಡ ಲಕ್ವಾವನ್ನು ತಡೆಯಲು ಸಹಾಯವಾಗುತ್ತದೆ.
-ಡಾ| ರೋಹಿತ್ ಪೈ, ಕನ್ಸಲ್ಟಂಟ್ ನ್ಯುರಾಲಜಿಸ್ಟ್, ಕೆಎಂಸಿ ಆಸ್ಪತ್ರೆ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ನ್ಯುರಾಲಜಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.