ವಯೋ ಸಂಬಂಧಿ ಶ್ರವಣ ಸಮಸ್ಯೆಗಳು ಒಂದು ಪ್ರಮುಖ ಸಮಸ್ಯೆ ಹೌದೇ ಅಲ್ಲವೇ?
Team Udayavani, Jan 26, 2020, 4:30 AM IST
ವಯೋಸಂಬಂಧಿ ಶ್ರವಣಶಕ್ತಿ ನಷ್ಟ ಎಂದರೆ ವ್ಯಕ್ತಿಗಳಲ್ಲಿ ವಯಸ್ಸಾಗುತ್ತಿದಂತೆ ಕೇಳಿಸುವ ಸಾಮರ್ಥ್ಯ ಕ್ರಮೇಣವಾಗಿ ನಶಿಸುತ್ತ ಹೋಗುವುದು. ವಯಸ್ಸಾದವರಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯವಾದ ಆರೋಗ್ಯ ಸಮಸ್ಯೆ ಇದು. ವಯೋಸಂಬಂಧಿ ಶ್ರವಣ ಶಕ್ತಿ ನಷ್ಟವು ಸಾಮಾನ್ಯವಾಗಿ ಎರಡೂ ಕಿವಿಗಳಲ್ಲಿ ಸಮಾನವಾಗಿ ಉಂಟಾಗುತ್ತದೆ. ಇದು ತುಂಬ ನಿಧಾನವಾಗಿ ನಡೆಯುವ ಕಾರಣ ವಯೋಸಂಬಂಧಿ ಶ್ರವಣ ಶಕ್ತಿ ನಷ್ಟವು ಹೆಚ್ಚಾಗಿ ಗಮನಕ್ಕೆ ಬಾರದೆ ಇರುತ್ತದೆ.
ವಯೋಸಂಬಂಧಿ ಶ್ರವಣ ಶಕ್ತಿ ನಷ್ಟ ಉಂಟಾಗಲು ಅನೇಕ ಕಾರಣಗಳು ಇರುತ್ತವೆ. ಬಹು ಸಾಮಾನ್ಯವಾಗಿ, ವ್ಯಕ್ತಿಗೆ ವಯಸ್ಸಾಗುತ್ತಿದ್ದಂತೆ ಒಳಗಿವಿಯಲ್ಲಿ ಉಂಟಾಗುವ ಬದಲಾವಣೆಗಳಿಂದಾಗಿ ಇದು ಕಾಣಿಸಿಕೊಳ್ಳುತ್ತದೆ. ಆದರೆ ಮಧ್ಯಕಿವಿಯಲ್ಲಿ ಆಗುವ ಪರಿವರ್ತನೆಗಳಿಂದಲೂ, ಕಿವಿಯಿಂದ ಮಿದುಳಿಗೆ ಸಂಪರ್ಕ ಕಲ್ಪಿಸುವ ನರವ್ಯೂಹದಲ್ಲಿ ಆಗುವ ಸಂಕೀರ್ಣ ಬದಲಾವಣೆಗಳಿಂದಲೂ ಇದು ಕಾಣಿಸಿಕೊಳ್ಳಬಹುದು. ಕೆಲವು ಅನಾರೋಗ್ಯ ಸ್ಥಿತಿಗಳು, ಔಷಧಗಳು ಕೂಡ ಶ್ರವಣ ಶಕ್ತಿ ನಷ್ಟಕ್ಕೆ ಕಾರಣವಾಗಬಹುದು.
ವಯಸ್ಸಾಗುತ್ತಿದಂತೆ ವ್ಯಕ್ತಿಗಳು ಶ್ರವಣ ಶಕ್ತಿಯನ್ನು ಕಳೆದುಕೊಳ್ಳುವುದೇಕೆ?
ವಯಸ್ಸಾದವರಲ್ಲಿ ಕಿವಿ ಕೇಳಿಸದಿರುವ ಸಮಸ್ಯೆ ಬೆಳೆದು ಬರುವುದಕ್ಕೆ ಅನೇಕ ಕಾರಣಗಳು ಕೊಡುಗೆ ನೀಡಬಹುದು. ಇನ್ನಿತರ ಕಾರಣಗಳಿಂದ ಉಂಟಾದ ಕಿವಿ ಕೇಳಿಸದಿರುವ ಸಮಸ್ಯೆಗೂ ವಯಸ್ಸಿನ ಕಾರಣದಿಂದ ತಲೆದೋರಿದ ಕಿವಿ ಕೇಳಿಸದಿರುವ ಸಮಸ್ಯೆಗೂ ವ್ಯತ್ಯಾಸವನ್ನು ಹುಡುಕುವುದು ಬಹಳ ಕಷ್ಟ. ವಯಸ್ಸಾದವರಲ್ಲಿ ಸಹಜವಾಗಿರುವ ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಂತಹ ಸಮಸ್ಯೆಗಳೂ ಕಿವಿ ಕೇಳಿಸದೆ ಇರುವುದಕ್ಕೆ ಕೊಡುಗೆ ನೀಡಬಹುದಾಗಿದೆ.
ಅಧಿಕ ರಕ್ತದೊತ್ತಡ ಅಥವಾ ಮಧುಮೇಹ: ರಕ್ತದಲ್ಲಿ ಅಧಿಕ ಸಕ್ಕರೆಯಂಶದಿಂದಾಗಿ ಕಿವಿಯ ಒಳಪದರದಲ್ಲಿರುವ ರಕ್ತನಾಳಗಳು ಕಿರಿದಾಗಬಹುದು; ಇದರಿಂದಾಗಿ ಕೊಕ್ಲಿಯಾದಿಂದ ಶ್ರವಣ ನರಗಳಿಗೆ ಸದ್ದಿನ ಸಹಜ ರವಾನೆಗೆ ತಡೆಯುಂಟಾಗಿ ಶ್ರವಣ ಶಕ್ತಿ ನಷ್ಟವಾಗಬಹುದು.
ಮೂತ್ರಪಿಂಡ ಕಾಯಿಲೆಗಳು: ಮೂತ್ರಪಿಂಡ ವೈಫಲ್ಯದಿಂದಾಗಿ ದೇಹದಲ್ಲಿ ಉಳಿದುಕೊಳ್ಳುವ ವಿಷಾಂಶಗಳಿಂದ ಕಿವಿಯ ಒಳಭಾಗದಲ್ಲಿರುವ ನರಗಳ ಸಹಿತ ನರಗಳಿಗೆ ಹಾನಿಯುಂಟಾಗುತ್ತದೆ. ಇದಕ್ಕೂ ಅಧಿಕ ರಕ್ತದೊತ್ತಡ ಮತ್ತು ಮಧುಮೇಹಗಳು ಸಾಮಾನ್ಯ ಅಪಾಯಾಂಶಗಳಾಗಿವೆ.
ಔಷಧಗಳು: ನಮ್ಮ ಕಿವಿಯಲ್ಲಿರುವ ಶಬ್ದ ಸಂವೇದೀ ಅಂಗಾಂಶಗಳಿಗೆ ದುಷ್ಪರಿಣಾಮ ಉಂಟುಮಾಡಬಹುದಾದ ಔಷಧಗಳು (ಉದಾಹರಣೆಗೆ, ಕೆಲವು ಬಗೆಯ ಕಿಮೊಥೆರಪಿ) ಕೂಡ ಶ್ರವಣ ಶಕ್ತಿ ನಷ್ಟವನ್ನು ಉಂಟು ಮಾಡಬಹುದು.ಕಿವಿ ಕೇಳಿಸದಿರುವ ಸಮಸ್ಯೆಯನ್ನು ಎದುರಿಸುತ್ತಿರುವ ಹಿರಿಯರಲ್ಲಿ ಆ ಸಮಸ್ಯೆಯು ವಯೋಸಹಜವಾದ ಶ್ರವಣ ಶಕ್ತಿ ನಷ್ಟ ಮತ್ತು ಅತಿಯಾದ ಸದ್ದು ಕೇಳಿಸಿಕೊಳ್ಳುವುದರಂತಹ ಇತರ ಕಾರಣಗಳ ಒಟ್ಟು ಮೊತ್ತವಾಗಿ ತಲೆದೋರಿರಬಹುದು.
ವಯೋಸಂಬಂಧಿ ಶ್ರವಣ ಶಕ್ತಿ ನಷ್ಟವನ್ನು ತಡೆಯಬಹುದೇ?
ವಯೋಸಂಬಂಧಿ ಶ್ರವಣ ಶಕ್ತಿ ನಷ್ಟವನ್ನು ತಡೆಯುವುದು ಹೇಗೆ ಎಂಬುದು ಸದ್ಯದ ಮಟ್ಟಿಗೆ ವಿಜ್ಞಾನಿಗಳಿಗೆ ತಿಳಿದಿಲ್ಲ. ಆದರೆ, ತೀರಾ ಗಟ್ಟಿಯಾದ ಧ್ವನಿಗಳು ಮತ್ತು ದೀರ್ಘವಾದ ಸದ್ದುಗಳಿಂದ ನಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳುವ ಮೂಲಕ ಸದ್ದುಗಳಿಂದ ಉಂಟಾಗುವ ಶ್ರವಣ ಶಕ್ತಿ ನಷ್ಟದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು. ಕಿವಿಗಡಚಿಕ್ಕುವ ಸಂಗೀತ, ಸಿಡಿಮದ್ದಿನ ಸದ್ದು, ಲಾನ್ ಮೂವರ್, ಲೀಫ್ ಬ್ಲೋವರ್ ಇತ್ಯಾದಿ ತೀರಾ ಗಟ್ಟಿಯಾದ ಸದ್ದಿನ ಅಪಾಯಕಾರಿ ಮೂಲಗಳ ಬಗ್ಗೆ ನಾವು ಎಚ್ಚರ ಹೊಂದಿರುವುದು ಅಗತ್ಯ. ಭಾರೀ ಸದ್ದನ್ನು ಕೇಳಿಸಿಕೊಳ್ಳುವುದರಿಂದ ದೂರ ಇರುವುದು, ದೊಡ್ಡ ಧ್ವನಿಗಳನ್ನು ಕೇಳಿಸಿಕೊಳ್ಳುವ ಸಮಯವನ್ನು ಕಡಿಮೆ ಮಾಡುವುದು, ಕಿವಿಗಳನ್ನು ಇಯರ್‌ಪ್ಲಗ್ ಅಥವಾ ಕಿವಿ ಮುಚ್ಚುವ ಬಟ್ಟೆಯಿಂದ ರಕ್ಷಿಸಿಕೊಳ್ಳುವ ಮೂಲಕ ನಾವು ನಮ್ಮ ಕಿವಿಗಳನ್ನು ಕಾಪಾಡಿಕೊಳ್ಳಬಹುದು.
ನನಗೆ ಶ್ರವಣ ಸಮಸ್ಯೆ ಇದ್ದರೆ ಹೇಳಿಕೊಳ್ಳುವುದು ಹೇಗೆ?
ಈ ಕೆಳಗಿನ ಕೆಲವು ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ. ಈ ಪ್ರಶ್ನೆಗಳಲ್ಲಿ ಮೂರು ಅಥವಾ ಹೆಚ್ಚು ಪ್ರಶ್ನೆಗಳಿಗೆ ನಿಮ್ಮ ಉತ್ತರ “ಹೌದು’ ಆಗಿದ್ದರೆ, ನಿಮಗೆ ಶ್ರವಣ ಸಮಸ್ಯೆ ಇರಬಹುದಾಗಿದ್ದು, ನೀವು ಶ್ರವಣ ಶಕ್ತಿ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಸೂಕ್ತ.
ಕೇಳಿಸಿಕೊಳ್ಳುವುದಕ್ಕೆ ನಿಮಗಿರುವ ಸಮಸ್ಯೆಯಿಂದಾಗಿ ನೀವು ಹೊಸಬರನ್ನು ಭೇಟಿಯಾಗುವ ಸಂದರ್ಭದಲ್ಲಿ ಮುಜುಗರಕ್ಕೆ ಒಳಗಾಗುತ್ತೀರಾ? ಹೌದು ಇಲ್ಲ
ಕೇಳಿಸಿಕೊಳ್ಳುವುದಕ್ಕೆ ಇರುವ ಸಮಸ್ಯೆಯಿಂದಾಗಿ ಕುಟುಂಬ ಸದಸ್ಯರ ಜತೆಗೆ ಮಾತನಾಡುವಾಗ ನಿಮಗೆ ಹತಾಶೆಯ ಅನುಭವ ಆಗುತ್ತದೆಯೇ ಹೌದು ಇಲ್ಲ
ಸಹೋದ್ಯೋಗಿಗಳು, ಗ್ರಾಹಕರ ಮಾತುಗಳನ್ನು ಕೇಳಿಸಿಕೊಳ್ಳುವುದು ಅಥವಾ ಅರ್ಥ ಮಾಡಿಕೊಳ್ಳುವುದಕ್ಕೆ ನಿಮಗೆ ಕಷ್ಟವಾಗುತ್ತದೆಯೇ? ಹೌದು ಇಲ್ಲ
ಕೇಳುವ ಸಮಸ್ಯೆಯಿಂದಾಗಿ ನಿಮಗೆ ಕಟ್ಟಿ ಹಾಕಿದ ಅಥವಾ ನಿಯಂತ್ರಿಸಿದ ಅನುಭವ ಆಗುತ್ತದೆಯೇ? ಹೌದು ಇಲ್ಲ
ಗೆಳೆಯರು, ಬಂಧುಗಳು ಅಥವಾ ನೆರೆಹೊರೆಯವರನ್ನು ಭೇಟಿಯಾಗುವ ಸಂದರ್ಭದಲ್ಲಿ ಕೇಳುವುದು ಕಷ್ಟವಾಗುತ್ತಿರುವುದು ಅನುಭವಕ್ಕೆ ಬಂದಿದೆಯೇ? ಹೌದು ಇಲ್ಲ
ಸಿನೆಮಾ ನೋಡುವಾಗ ಅಥವಾ ಥಿಯೇಟರ್‌ಗಳಲ್ಲಿ ಕೇಳುವುದು ಸಮಸ್ಯೆಯಾಗುತ್ತಿದೆಯೇ? ಹೌದು ಇಲ್ಲ
ಕೇಳಿಸದಿರುವ ಸಮಸ್ಯೆಯಿಂದಾಗಿ ಕುಟುಂಬ ಸದಸ್ಯರ ಜತೆಗೆ ವಾಗ್ವಾದ ಉಂಟಾಗುತ್ತಿದೆಯೇ? ಹೌದು ಇಲ್ಲ
ಇತರರಿಗೆ ಕೇಳುವುದಕ್ಕೆ ಸಮರ್ಪಕವಾಗಿರುವ ಮಟ್ಟದಲ್ಲಿರುವ ಟಿವಿ ಅಥವಾ ರೇಡಿಯೋ ಧ್ವನಿ ನಿಮಗೆ ಕೇಳುವುದಕ್ಕೆ ಸಮಸ್ಯೆಯಾಗುತ್ತಿದೆಯೇ?
ಕೇಳುವುದಕ್ಕೆ ನಿಮಗಿರುವ ಸಮಸ್ಯೆಯು ನಿಮ್ಮ ಸಾಮಾಜಿಕ ಅಥವಾ ವೈಯಕ್ತಿಕ ಬದುಕನ್ನು ಕಟ್ಟಿ ಹಾಕುತ್ತಿದೆ ಎಂದು ನಿಮಗನಿಸುತ್ತಿದೆಯೇ?
ಹೋಟೇಲ್‌ನಲ್ಲಿ ಜತೆಯಾಗಿರುವಾಗ ಕುಟುಂಬ ಅಥವಾ ಗೆಳೆಯ ಗೆಳತಿಯರ ಮಾತುಕತೆಗಳನ್ನು ಆಲಿಸಲು ನಿಮಗೆ ಸಮಸ್ಯೆ ಎನಿಸುತ್ತದೆಯೇ?
(ನ್ಯೂಮನ್ ಸಿ.ಡಬ್ಲ್ಯು., ವೇನ್‌ಸ್ಟಿನ್ ಬಿ.ಇ., ಜೇಕಬ್‌ಸನ್ ಜಿ.ಪಿ. ಮತ್ತು ಹಗ್ ಜಿ.ಎ. (1990). ದಿ ಹಿಯರಿಂಗ್ ಹ್ಯಾಂಡಿಕ್ಯಾಪ್ ಇನ್ವೆಂಟರಿ ಫಾರ್ ಅಡಲ್ಟ್ (ಎಚ್‌ಎಚ್‌ಐಎ)ಯಿಂದ ಪಡೆದುದು)
ಆಲಿಸುವ ಸಮಸ್ಯೆ ಉಂಟಾದರೆ ನೀವೇನು ಮಾಡುವಿರಿ?
ಶ್ರವಣ ಸಮಸ್ಯೆ ಬಹಳ ಗಂಭೀರವಾದುದು. ನಿಮಗೆ ಕೇಳಿಸುವ ಸಮಸ್ಯೆ ಇದೆ ಎಂಬುದಾಗಿ ನಿಮಗೆ ಅನ್ನಿಸಿದರೆ ನೀವು ಆಡಿಯಾಲಜಿಸ್ಟ್ ಅವರ ಸಲಹೆಯನ್ನು ಪಡೆಯಬೇಕು. ಶ್ರವಣ ಶಕ್ತಿ ನಷ್ಟದ ವಿಧ, ಅದರ ಪ್ರಮಾಣ ಇತ್ಯಾದಿಗಳನ್ನು ಸಮರ್ಪಕವಾಗಿ ವಿಶ್ಲೇಷಿಸಿ ಅದಕ್ಕೆ ಸೂಕ್ತವಾದ ಪರಿಹಾರೋಪಾಯವನ್ನು ಒದಗಿಸಲು ಅಗತ್ಯವಾದ ಪರಿಣತಿಯನ್ನು ಆಡಿಯಾಲಜಿಸ್ಟ್ ಹೊಂದಿರುತ್ತಾರೆ.
ನೆರವಾಗುವ ಸಾಧನಗಳು ಮತ್ತು ಚಿಕಿತ್ಸೆಗಳಾವುವು?
ನಿಮಗೆ ಒದಗಿಸುವ ಚಿಕಿತ್ಸೆಯು ನಿಮ್ಮ ಕಿವಿ ಕೇಳಿಸದೆ ಇರುವ ಸಮಸ್ಯೆಯ ತೀವ್ರತೆಯನ್ನು ಆಧರಿಸಿರುತ್ತದೆ. ಆದ್ದರಿಂದ ಕೆಲವು ಚಿಕಿತ್ಸೆಗಳು ಇತರರಿಗಿಂತ ನಿಮಗೆ ಹೆಚ್ಚು ಪರಿಣಾಮಕಾರಿಯಾಗಬಲ್ಲವು. ಶ್ರವಣ ತೊಂದರೆ ಇದ್ದಲ್ಲಿ ಸಹಾಯ ಮಾಡುವ ಅನೇಕ ಸಾಧನ – ಸಲಕರಣೆಗಳು ಇವೆ. ಈ ಸಾಧನ -ಸಲಕರಣೆಗಳನ್ನು ಅಳವಡಿಸಿದ ಬಳಿಕ ಅವುಗಳ ಬಗ್ಗೆ ತರಬೇತಿ ಒದಗಿಸುವುದು ಕೂಡ ಸಂಪೂರ್ಣ ಪುನರ್ವಸತಿ ಪರಿಹಾರೋಪಾಯದ ಭಾಗವಾಗಿರುತ್ತದೆ.
ಕೆಎಂಸಿ ಮಣಿಪಾಲ ಮತ್ತು ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಗಳಲ್ಲಿ ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗವಿದ್ದು, ಇಲ್ಲಿ ನಿಮ್ಮ ಕೇಳುವಿಕೆಯ ಸಾಮರ್ಥ್ಯ ಮತ್ತು ಸಮಸ್ಯೆಯಿದ್ದರೆ ಸಂಪೂರ್ಣ ಪುನರ್ವಸತಿ ಒದಗಿಸುವ ಸೌಲಭ್ಯಗಳು ಇಲ್ಲಿವೆ.
-ಡಾ| ಅರ್ಚನಾ ಜಿ.,
ಅಸೋಸಿಯೇಟ್ ಪ್ರೊಫೆಸರ್,
ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ,
ಎಂಸಿಎಚ್‌ಪಿ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.