ಮಹಿಳೆಯರು ಮತ್ತು ಮಾನಸಿಕ ಆರೋಗ್ಯ
Team Udayavani, Apr 14, 2021, 1:00 AM IST
ನಮ್ಮ ಭಾವನೆಗಳು, ಮಾನಸಿಕ ಮತ್ತು ಸಾಮಾಜಿಕ ಸೌಖ್ಯಗಳು ಮಾನಸಿಕ ಆರೋಗ್ಯದಲ್ಲಿ ಒಳಗೊಂಡಿವೆ. ನಾವು ಹೇಗೆ ಆಲೋಚಿಸುತ್ತೇವೆ, ಅನುಭವಿಸುತ್ತೇವೆ ಮತ್ತು ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ ಇದು ಪ್ರಭಾವ ಬೀರುತ್ತದೆ. ನಾವು ಒತ್ತಡವನ್ನು ಹೇಗೆ ನಿಭಾಯಿಸುತ್ತೇವೆ, ಇತರರೊಂದಿಗೆ ಹೇಗೆ ವ್ಯವಹರಿಸುತ್ತೇವೆ, ಆಯ್ಕೆಗಳನ್ನು ಹೇಗೆ ಮಾಡಿಕೊಳ್ಳುತ್ತೇವೆ ಎಂಬುದನ್ನು ನಿರ್ಧರಿಸುವುದಕ್ಕೂ ಮಾನಸಿಕ ಆರೋಗ್ಯವು ಸಹಾಯ ಮಾಡುತ್ತದೆ. ಬಾಲ್ಯದಿಂದ ಆರಂಭಿಸಿ ಹದಿಹರಯ, ಯೌವ್ವನದ ಮೂಲಕ ವೃದ್ಧಾಪ್ಯದ ವರೆಗೂ ಬದುಕಿನ ಎಲ್ಲ ಹಂತಗಳಲ್ಲಿಯೂ ಮಾನಸಿಕ ಆರೋಗ್ಯವು ಬಹಳ ಮುಖ್ಯವಾಗಿದೆ.
ಮಾನಸಿಕ ಆರೋಗ್ಯವು ನಮ್ಮ ದೈನಂದಿನ ಜೀವನ, ಸಂಬಂಧಗಳು ಮತ್ತು ದೈಹಿಕ ಆರೋಗ್ಯದ ಮೇಲೆ ಮಾನಸಿಕ ಆರೋಗ್ಯವು ಪ್ರಭಾವ ಬೀರುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ತೊಂದರೆಗಳು ಪುರುಷರು ಮತ್ತು ಮಹಿಳೆಯರ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತವೆ. ಪುರುಷರು ಮತ್ತು ಮಹಿಳೆಯರು ಕೇವಲ ದೈಹಿಕ ಗುಣಲಕ್ಷಣಗಳಲ್ಲಿ ಮಾತ್ರವಲ್ಲದೆ ಮನೋಶಾಸ್ತ್ರೀಯ ಸಂರಚನೆಯಲ್ಲಿಯೂ ಭಿನ್ನರಾಗಿದ್ದಾರೆ. ತಾವು ಸಂವಹನ ಮಾಡುವ ಕ್ರಮ, ಸಂಬಂಧಗಳನ್ನು ನಿರ್ವಹಿಸುವ ಕ್ರಮ, ಭಾವನೆಗಳ ಅಭಿವ್ಯಕ್ತಿ ಮತ್ತು ಒತ್ತಡಕ್ಕೆ ಪ್ರತಿಕ್ರಿಯಿಸುವ ರೀತಿಗಳಲ್ಲಿ ಪುರುಷರು ಮತ್ತು ಮಹಿಳೆಯರು ಭಿನ್ನರಾಗಿರುತ್ತಾರೆ.
ಮಹಿಳೆಯರನ್ನು ವಿಶೇಷವಾಗಿ ಭಾದಿಸುವ ಕೆಲವು ಅನಾರೋಗ್ಯಗಳಿವೆ. ಉದಾಹರಣೆಗೆ, ಹಾರ್ಮೋನ್ ಬದಲಾವಣೆಯ ಸಮಯದಲ್ಲಿ ಕೆಲವು ಮಹಿಳೆಯರು ಪ್ರಸವೋತ್ತರ ಖನ್ನತೆ, ಋತುಚಕ್ರಪೂರ್ವ ಡಿನ್ಪೋರಿಕ್ ಡಿಸಾರ್ಡರ್ ಮತ್ತು ಪೆರಿಮೆನೊಪಾಸ್ ಸಂಬಂಧಿ ಖನ್ನತೆ ಯಂತಹ ಮಾನಸಿಕ ತೊಂದರೆಗಳ ಲಕ್ಷಣಗಳನ್ನು ಅನುಭವಿಸಬಹುದು. ಮಹಿಳೆಯರು ಅನುಭವಿಸುವ ಕೆಲವು ಸಾಮಾನ್ಯ ಮಾನಸಿಕ ತೊಂದರೆಗಳನ್ನು ಈ ಕೆಳಗೆ ವಿವರಿಸಲಾಗಿದೆ.
ಖಿನ್ನತೆ :
ಮಹಿಳೆಯರಲ್ಲಿ ಖಿನ್ನತೆಯು ಬಹಳ ಸಾಮಾನ್ಯವಾದ ತೊಂದರೆ. ಸಂತಾನೋತ್ಪತ್ತಿ ಚಕ್ರಕ್ಕೆ ಸಂಬಂಧಿಸಿದ ಹಾರ್ಮೋನ್‌ಗಳು ಮಹಿಳೆಯು ಖಿನ್ನತೆಗೆ ತುತ್ತಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ.
ಆತಂಕ ಮತ್ತು ನಿರ್ದಿಷ್ಟ ಫೋಬಿಯಾಗಳು :
(ಗೀಳು ಮನೋರೋಗ) ಓಬೆÕಸಿವ್ ಕಂಪಲ್ಸಿವ್ ಡಿಸಾರ್ಡರ್ ಮತ್ತು ಸಾಮಾಜಿಕ ಫೋಬಿಯಾಗಳಂತಹ ಮಾನಸಿಕ ಸಮಸ್ಯೆಗಳಿಗೆ ಪುರುಷರು ಮತ್ತು ಮಹಿಳೆಯರಿಬ್ಬರೂ ತುತ್ತಾಗುತ್ತಾರೆ. ಆದರೆ ಸ್ತ್ರೀಯರು ಪ್ಯಾನಿಕ್ ಡಿಸಾರ್ಡರ್, ಜನರಲೈಸ್ಡ್ ಆ್ಯಂಕ್ಸೆ„ಟಿ ಮತ್ತು ನಿರ್ದಿಷ್ಟ ಫೋಬಿಯಾಗಳಿಗೆ ತುತ್ತಾಗುವ ಸಾಧ್ಯತೆಗಳು ಎರಡು ಪಟ್ಟು ಹೆಚ್ಚು. ಅಲ್ಲದೆ, ಪುರುಷರಿಗೆ ಹೋಲಿಸಿದರೆ ಮಹಿಳೆಯರು ತಮ್ಮ ಜೀವಮಾನದಲ್ಲಿ ಆ್ಯಂಕ್ಸೈಟಿ ಡಿಸಾರ್ಡರ್‌ಗೆ ತುತ್ತಾಗುವ ಸಾಧ್ಯತೆ 2ರಿಂದ 3 ಪಟ್ಟು ಹೆಚ್ಚು.
ಪೋಸ್ಟ್ ಟ್ರೊಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್‌ಡಿ) :
ಪಿಟಿಎಸ್‌ಡಿ ಉಂಟಾಗುವ ಸಾಧ್ಯತೆ ಮಹಿಳೆಯರಲ್ಲಿ ಎರಡು ಪಟ್ಟು ಹೆಚ್ಚು. ಒಂದು ಆಘಾತಕಾರಿ ಘಟನೆ ಅಥವಾ ಇಂತಹ ಘಟನೆಗಳ ಸರಣಿಯನ್ನು ಅನುಭವಿಸಿರುವುದು, ವೀಕ್ಷಿಸಿರುವುದು ಅಥವಾ ಕೇಳಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿರುತ್ತವೆ.
ಆತ್ಮಹತ್ಯೆಯ ಪ್ರಯತ್ನಗಳು :
ಆತ್ಮಹತ್ಯೆಗಳಿಂದ ಸಾಯುವ ಪುರುಷರ ಸಂಖ್ಯೆಯು ಮಹಿಳೆಯರಿಗಿಂತ ನಾಲ್ಕು ಪಟ್ಟು ಹೆಚ್ಚು. ಆದರೆ ಆತ್ಮಹತ್ಯೆಗೆ ಪ್ರಯತ್ನಿಸುವ ಮಹಿಳೆಯರ ಸಂಖ್ಯೆಯು ಪುರುಷರಿಗಿಂತ 2-3 ಪಟ್ಟು ಹೆಚ್ಚು. ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿ ಪುರುಷರು ಮುಂದಿರುತ್ತಾರೆ, ಆತ್ಮಹತ್ಯೆಗೆ ಪ್ರಯತ್ನಿಸುವುದರಲ್ಲಿ ಸ್ತ್ರೀಯರು ಮುಂದಿರು ತ್ತಾರೆ ಎಂಬ ಜಾಗತಿಕವಾಗಿ ಸಾಮಾನ್ಯವಾಗಿರುವ ವಿಚಾರವನ್ನು ಆತ್ಮಹತ್ಯೆಗಳು ಮತ್ತು ಉದ್ದೇಶಪೂರ್ವಕ ಸ್ವಯಂ ಹಾನಿ ಮಾಡಿಕೊಳ್ಳುವುದರ ಕುರಿತಾಗಿ ನಡೆಸಲಾಗಿರುವ ಅಧ್ಯಯನಗಳು ಬಹಿರಂಗಪಡಿಸಿವೆ.
ವಿಭಕ್ತ ಕುಟುಂಬಗಳ ಹುಡುಗಿಯರು ಮತ್ತು ಸಣ್ಣ ವಯಸ್ಸಿನಲ್ಲಿ ವಿವಾಹವಾದ ಹುಡುಗಿಯರು ಆತ್ಮಹತ್ಯೆ ಮಾಡಿಕೊಳ್ಳಲು ಮತ್ತು ಸ್ವಯಂ ಹಾನಿ ಮಾಡಿಕೊಳ್ಳಲು ಪ್ರಯತ್ನಿಸುವ ಸಾಧ್ಯತೆಗಳು ಅಧಿಕ. ಆತ್ಮಹತ್ಯೆಗೆ ಮುಂದಾಗುವುದಕ್ಕೆ ಇತರ ಅಂಶಗಳೆಂದರೆ, ಜೀವನದಲ್ಲಿ ವೈಫಲ್ಯಗಳು, ವೈಯಕ್ತಿಕ ಸಂಬಂಧಗಳಲ್ಲಿ ಕಷ್ಟಗಳು, ಸಂಗಾತಿಯಿಂದ ದೌರ್ಜನ್ಯ ಮತ್ತು ವರದಕ್ಷಿಣೆ ಸಂಬಂಧಿ ಹಿಂಸೆಗಳು.
ಸಂತಾನೋತ್ಪತ್ತಿ ಹಂತಗಳಿಗೆ ಸಂಬಂಧಿಸಿದ ಮಾನಸಿಕ ಆರೋಗ್ಯ ಸಮಸ್ಯೆಗಳು :
ಭಾವನೆಗಳು ಮತ್ತು ವರ್ತನಾತ್ಮಕ ಬದಲಾವಣೆಗಳಿಗೂ ಋತುಚಕ್ರಕ್ಕೂ ಸಂಬಂಧ ಇರುವುದು ಕಂಡುಬರುತ್ತದೆ. ಕಿರಿಕಿರಿಗೆ ಒಳಗಾಗುವುದು, ಸಿಟ್ಟಿಗೇಳುವುದು, ಆತಂಕ, ಉದ್ವಿಗ್ನತೆ, ಮೈಗ್ರೇನ್, ನಿದ್ದೆಯ ಸಮಸ್ಯೆಗಳು, ದುಃಖ, ಡಿಸ್ಫೋರಿಯಾ ಮತ್ತು ಏಕಾಗ್ರತೆಯ ಕೊರತೆಯಂತಹ ಲಕ್ಷಣಗಳು ಋತುಸ್ರಾವದ ಅವಧಿ ಮತ್ತು ಅದಕ್ಕೆ ಹಿಂದಿನ ದಿನಗಳಲ್ಲಿ ಕಂಡುಬರುತ್ತವೆ.
ಗರ್ಭಧಾರಣೆಯ ಮುಂದುವರಿದ ಅವಧಿ ಮತ್ತು ಪ್ರಸವೋತ್ತರ ಅವಧಿಯಲ್ಲಿ ಮಾನಸಿಕ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಪ್ರಸವೋತ್ತರ ದಿನಗಳಲ್ಲಿ ವಿನಾಕಾರಣ ದುಃಖ, ಗೊಂದಲಗಳಂತಹ ಮಾನಸಿಕ ತೊಂದರೆಗಳು ತೀರಾ ಸಾಮಾನ್ಯವಾಗಿದ್ದು, ಚೊಚ್ಚಲ ತಾಯಂದಿರ ಪೈಕಿ ಶೇ. 50ರಿಂದ ಶೇ. 80 ಮಂದಿಯಲ್ಲಿ ಕಂಡುಬರುತ್ತದೆ. ಅಲ್ಲದೆ ಬಹುತೇಕ ಪ್ರಕರಣಗಳಲ್ಲಿ ಪ್ರಸವವಾಗಿ 6 ವಾರಗಳ ಬಳಿಕ ಪ್ರಸವೋತ್ತರ ಖನ್ನತೆಯು ಪ್ರಧಾನವಾಗಿರುತ್ತದೆ.
ಮಹಿಳೆಯರಲ್ಲಿ ಮಾದಕದ್ರವ್ಯ ಬಳಕೆ :
ಮಹಿಳೆಯರು ತಮ್ಮ ಮದ್ಯಪಾನ ಅಭ್ಯಾಸ ಆರಂಭವಾದ ಹೊಣೆಯನ್ನು ಆಘಾತಕಾರಿ ಘಟನೆ ಅಥವಾ ಒತ್ತಡದ ಮೇಲೆ ಹೊರಿಸುತ್ತಾರೆ ಹಾಗೂ ಮದ್ಯ ಮತ್ತು ಮಾದಕದ್ರವ್ಯ ವ್ಯಸನವುಳ್ಳ ಮಹಿಳೆಯರು ಲೈಂಗಿಕ ಮತ್ತು ದೈಹಿಕ ದೌರ್ಜನ್ಯಕ್ಕೆ ಒಳಗಾಗುವ ಸಾಧ್ಯತೆಗಳು ಇತರ ಮಹಿಳೆಯರಿಗಿಂತ ಅಧಿಕ. ಮದ್ಯಪಾನ ಅಭ್ಯಾಸವುಳ್ಳ ಮಹಿಳೆಯರಲ್ಲಿ ಗಮನಾರ್ಹವಾಗಿ ಹೆಚ್ಚು ತೀವ್ರತೆಯ ಖನ್ನತೆ ಮತ್ತು ಇತರ ಆತಂಕ ಸಮಸ್ಯೆಗಳು ಇರುತ್ತವೆ.
ಮಹಿಳೆಯರಲ್ಲಿ ಹಿಂಸೆ ಮತ್ತು ದೌರ್ಜನ್ಯ :
ವಿಶ್ವಸಂಸ್ಥೆಯ ಕಣ್ತೆರೆಸುವ ವರದಿಯೊಂದರ ಪ್ರಕಾರ, ಭಾರತದಲ್ಲಿ ವಿವಾಹಿತ ಮಹಿಳೆಯರಲ್ಲಿ ಮೂರನೇ ಎರಡರಷ್ಟು ಮಂದಿ ಆಂತರಿಕ ಹಿಂಸೆ, ದೌರ್ಜನ್ಯಕ್ಕೆ ಬಲಿಯಾಗಿರುತ್ತಾರೆ. ಅಲ್ಲದೆ, 15ರಿಂದ 49 ವರ್ಷ ವಯೋಮಾನದ ವಿವಾಹಿತ ಮಹಿಳೆಯರಲ್ಲಿ ಶೇ. 70ರಷ್ಟು ಮಂದಿ ಥಳಿತ, ಅತ್ಯಾಚಾರ ಅಥವಾ ಒತ್ತಾಯದ ಲೈಂಗಿಕ ಸಂಪರ್ಕಕ್ಕೆ ತುತ್ತಾಗಿರುತ್ತಾರೆ. ಭಾರತೀಯ ಮಹಿಳೆಯರ ವಿರುದ್ಧ ನಡೆಯುವ ಸಾಮಾನ್ಯ ದೌರ್ಜನ್ಯಗಳಲ್ಲಿ ಸ್ತ್ರೀಭ್ರೂಣ ಹತ್ಯೆ, ಮನೆಯೊಳಗೆ ನಡೆಯುವ ಹಿಂಸೆ, ದೌರ್ಜನ್ಯ, ವರದಕ್ಷಿಣೆ ಹಿಂಸೆ, ಕೊಲೆ ಅಥವಾ ದೌರ್ಜನ್ಯ, ಮಾನಸಿಕ ಮತ್ತು ದೈಹಿಕ ಹಿಂಸೆ, ಲೈಂಗಿಕ ಶೋಷಣೆ, ಕಳ್ಳಸಾಗಣೆ ಮತ್ತು ಸಾರ್ವಜನಿಕ ಅವಮಾನ ಸೇರಿವೆ.
ಲಿಂಗ ಆಧಾರಿತವಾದ ಹಿಂಸೆಯ ಪರಿಣಾಮಗಳು ಘೋರವಾಗಿದ್ದು, ಜೀವಪರ್ಯಂತ ಭಾವನಾತ್ಮಕ ಸಮಸ್ಯೆ, ಆಘಾತದ ಬಳಿಕ ಒತ್ತಡ ಸಮಸ್ಯೆ ಮತ್ತು ಸಂತಾನೋತ್ಪತ್ತಿಯ ಅನಂತರ ಆರೋಗ್ಯ ಸಹಿತ ಮಾನಸಿಕ ಆರೋಗ್ಯ ತೊಂದರೆಗಳು ಉಂಟಾಗುತ್ತವೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಅನುಭವಿಸುವ ಸಾಮಾನ್ಯ ಮಾನಸಿಕ ಆರೋಗ್ಯ ಸಮಸ್ಯೆಗಳೆಂದರೆ, ಖನ್ನತೆ, ಉದ್ವಿಗ್ನತೆ, ನಿದ್ರಾಹೀನತೆ ಮತ್ತು ಮದ್ಯಪಾನ ಸಮಸ್ಯೆ ಹಾಗೂ ಇನ್ನಿತರ ದೈಹಿಕ ಮತ್ತು ಮಾನಸಿಕ ಆರೋಗ್ಯ ದೂರುಗಳು.
ಸಮಾಜದಲ್ಲಿ ನಿಮ್ನ ಸ್ಥಾನಮಾನ, ಬಡತನ, ಹಿಂಸೆ ಮತ್ತು ಕಳಪೆ ದೈಹಿಕ ಆರೋಗ್ಯಗಳಂತಹ ಲಿಂಗ ಆಧಾರಿತ ಒತ್ತಡದ ಅಂಶಗಳಿಂದಾಗಿ ಮಹಿಳೆಯರು ಅನೇಕ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಗರ್ಭಧಾರಣೆ, ತಾಯ್ತನ ಮತ್ತು ಋತುಚಕ್ರಬಂಧಗಳಂತಹ ಬದುಕಿನ ಸ್ಥಿತ್ಯಂತರಗಳು ಸ್ತ್ರೀಯರ ಮೇಲೆ ಮಾನಸಿಕ ಮತ್ತು ಭಾವನಾತ್ಮಕ ಒತ್ತಡವನ್ನು ನಿರ್ಮಿಸುತ್ತವೆ. ಬಂಜೆತನ ಮತ್ತು ಗರ್ಭಪಾತ, ಶಿಶುಮರಣದಂತಹ ಬದುಕಿನ ಋಣಾತ್ಮಕ ಅನುಭವಗಳು, ತಾರತಮ್ಯ, ನಿರುದ್ಯೋಗ ಮತ್ತು ಏಕಾಂಗಿತನ -ಇವುಗಳು ಕೂಡ ಮಹಿಳೆಯರ ಮಾನಸಿಕ ಆರೋಗ್ಯ ಮತ್ತು ಕ್ಷೇಮದ ಮೇಲೆ ಪರಿಣಾಮ ಬೀರುತ್ತವೆ. ಅಸಮಾನ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು ಕೂಡ ಮಹಿಳೆ ಖನ್ನತೆಗೆ ಒಳಗಾಗುವುದಕ್ಕೆ ಕೊಡುಗೆ ನೀಡುತ್ತವೆ.
ಭಾರತದಲ್ಲಿ ಮಾನಸಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಉಂಟುಮಾಡುವುದಕ್ಕೆ ಲಿಂಗವು ಒಂದು ನಿರ್ಣಾಯಕ ಅಂಶವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅವಿಭಕ್ತ ಕುಟುಂಬ ವ್ಯವಸ್ಥೆ, ಪಿತೃಪ್ರಧಾನ ವ್ಯವಸ್ಥೆ, ವಿವಾಹವು ವಿಶೇಷವಾಗಿ ಮಹಿಳೆಯರಿಗೆ ಕಡ್ಡಾಯವಾಗಿರುವುದು, ಕುಟುಂಬಗಳಲ್ಲಿ ಸೊಸೆಯಂದಿರಿಗೆ ಕೆಳ ಸ್ಥಾನಮಾನ ಇರುವುದು, ಮಹಿಳೆಯರಿಗೆ ಶಿಷ್ಟಾಚಾರ, ನೀತಿ ನಿಯಮಗಳು ಬಿಗಿಯಾಗಿರುವುದು, ಮಕ್ಕಳನ್ನು ಹೆರುವುದು – ಲಾಲನೆ ಪಾಲನೆಯೇ ಮಹಿಳೆಯರ ಪ್ರಧಾನ ಪಾತ್ರವಾಗಿರುವುದು ಭಾರತದಲ್ಲಿ ಮಹಿಳೆಯರಲ್ಲಿ ಮಾನಸಿಕ ಅನಾರೋಗ್ಯ ಕಾಣಿಸಿಕೊಳ್ಳಲು, ಹೆಚ್ಚಲು, ಚಿಕಿತ್ಸೆಯ ಮೇಲೆ ಮತ್ತು ಚಿಕಿತ್ಸೆಯ ಪರಿಣಾಮಗಳ ಮೇಲೆ ಪ್ರಭಾವ ಬೀರುತ್ತವೆ.
ಇತರರಿಗೆ ನೆರವು, ಆರೈಕೆ :
ಪ್ರಾಥಮಿಕ ಆರೈಕೆದಾರರಲ್ಲಿ ಮೂರನೇ ಎರಡರಷ್ಟು ಮಂದಿ ಮಹಿಳೆಯರೇ ಆಗಿದ್ದು, ಹೆತ್ತವರು, ಸಂಗಾತಿಗಳು ಮತ್ತು ಮಕ್ಕಳ ಆರೈಕೆ, ಲಾಲನೆ ಪಾಲನೆ ನೋಡಿ ಕೊಳ್ಳುತ್ತಾರೆ. ತೀವ್ರ ಆರೈಕೆಯು ಭಾವನಾತ್ಮಕ ಆರೋಗ್ಯ, ದೈಹಿಕ ಆರೋಗ್ಯ, ಸಾಮಾಜಿಕ ಚಟುವಟಿಕೆಗಳು, ಆರ್ಥಿಕ ಭದ್ರತೆ ಮತ್ತು ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತವೆ.
ಸಂಬಂಧಗಳಲ್ಲಿ ಬಿಕ್ಕಟ್ಟು :
ಸಂಬಂಧವೊಂದು ಮುರಿದಾಗ ಅದು ಜೀವನದ ಪ್ರತಿಯೊಂದು ರಂಗದಲ್ಲಿಯೂ ನಷ್ಟವನ್ನು ಉಂಟು ಮಾಡುತ್ತದೆ: ಆರ್ಥಿಕ ಭದ್ರತೆ, ಸಾಮಾಜಿಕ ಸಂಪರ್ಕಗಳು, ಮನೆ, ಮಕ್ಕಳೊಂದಿಗೆ ಸಂಬಂಧ – ಹೀಗೆ ಎಲ್ಲದರ ಮೇಲೂ ಪರಿಣಾಮಗಳು ಉಂಟಾಗುತ್ತವೆ. ಇದರ ಪರಿಣಾಮವಾಗಿ ಪ್ರತ್ಯೇಕಗೊಂಡ, ವಿಚ್ಛೇದನಗೊಂಡ ಅಥವಾ ವಿಧವೆಯರಾದ ಮಹಿಳೆಯರು ಖನ್ನತೆ, ಹತಾಶೆಯಂತಹ ಮಾನಸಿಕ ತೊಂದರೆಗಳನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಹಿಂದೆ ಮತ್ತು ದೌರ್ಜನ್ಯ :
ಉತ್ತಮ ಮಾನಸಿಕ ಆರೋಗ್ಯ ಮತ್ತು ಕ್ಷೇಮವನ್ನು ಕಾಪಾಡಿಕೊಳ್ಳುವುದಕ್ಕಾಗಿ ಮಹಿಳೆಯರ ತಮ್ಮ ಸಂಬಂಧಗಳ ನಡುವೆ ಸುರಕ್ಷಿತ ಮತ್ತು ಗೌರವಿಸಲ್ಪಡುವ ಭಾವನೆಯನ್ನು ಅನುಭವಿಸಬೇಕಾಗುತ್ತದೆ. ಹಿಂಸೆ, ದೌರ್ಜನ್ಯ ಮತ್ತು ಭಾವನಾತ್ಮಕ, ದೈಹಿಕ ಮತ್ತು ಲೈಂಗಿಕ ದೌರ್ಜನ್ಯಗಳನ್ನು ಅನುಭವಿಸುವ ಮಹಿಳೆಯರ ಆರೊಗ್ಯ, ಕಲ್ಯಾಣಗಳ ಮೇಲೆ ತೀವ್ರತರಹದ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆ. ಇದು ಖನ್ನತೆ, ಆತಂಕ, ಮಾದಕ ವಸ್ತು ಮತ್ತು ಮದ್ಯ ವ್ಯಸನಗಳು, ಆತ್ಮಹತ್ಯೆಯ ಆಲೋಚನೆಗಳು ಅಥವಾ ಪ್ರಯತ್ನಗಳು ಹಾಗೂ ಘಟನೋತ್ತರ ಒತ್ತಡ ಇವುಗಳಲ್ಲಿ ಸೇರಿರುತ್ತವೆ.
(ಮುಂದಿನ ವಾರಕ್ಕೆ )
ಸವಿತಾ
ಅಸಿಸ್ಟೆಂಟ್ ಪ್ರೊಫೆಸರ್, ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್, ಮಾಹೆ, ಮಣಿಪಾಲ
ಡಾ| ಶ್ಯಾಮಲಾ ಜಿ.
ಪ್ರೊ| ಮತ್ತು ವಿಭಾಗ ಮುಖ್ಯಸ್ಥರು,
ಒಬಿಜಿ ವಿಭಾಗ, ಕೆ.ಎಂ.ಸಿ. ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.