ಸ್ತನ್ಯಪಾನ: ಮಗುವಿಗೆ ಅಮೃತ ಸಮಾನ
Team Udayavani, Jul 30, 2017, 6:00 AM IST
ಜಗತ್ತಿನಾದ್ಯಂತ ಆಗಸ್ಟ್ ಮೊದಲ ವಾರವನ್ನು ವಿಶ್ವ ಸ್ತನ್ಯಪಾನ ಸಪ್ತಾಹವನ್ನಾಗಿ ಆಚರಿಸಲಾಗುತ್ತದೆ. “ಎಲ್ಲರೂ ಸ್ತನ್ಯಪಾನವನ್ನು ಉತ್ತೇಜಿಸೋಣ’ ಈ ಸಾಲಿನ ಸಪ್ತಾಹದ ಧ್ಯೇಯ ವಾಕ್ಯವಾಗಿದೆ.
ಭಾರತದಲ್ಲಿ ಸ್ತನ್ಯಪಾನದ ಪ್ರಮಾಣ ಕಡಿಮೆ ಇರುವುದನ್ನು ರಾಷ್ಟ್ರಮಟ್ಟದ ಅಂಕಿಅಂಶಗಳು ಸೂಚಿಸುತ್ತವೆ. ಕೇವಲ ಶೇ. 44ರಷ್ಟು ನವಜಾತ ಶಿಶುಗಳು ಮಾತ್ರ ಅಂದರೆ, 26 ಮಿಲಿಯನ್ ನವಜಾತ ಶಿಶುಗಳಲ್ಲಿ 12 ಮಿಲಿಯನ್ ಶಿಶುಗಳು ಮಾತ್ರ ಜನಿಸಿದ 1 ಗಂಟೆಯ ಅವಧಿಯಲ್ಲಿ ಸ್ತನ್ಯಪಾನವನ್ನು ಪಡೆಯುತ್ತವೆ. ಹೆಚ್ಚಿನ ತಾಯಂದಿರು ಕೃತಕ ಹಾಲಿನ ಮೊರೆ ಹೋಗುತ್ತಾರೆ. ಇದು ಸ್ತನ್ಯಪಾನದ ಕುರಿತ ಅರಿವಿನ ಕೊರತೆಯ ಸ್ಪಷ್ಟ ಸೂಚನೆಯಾಗಿದೆ. 5 ವರ್ಷ ಕೆಳಗಿನ ಮಕ್ಕಳ ಆರೋಗ್ಯದ ಮೇಲೆ ಸ್ತನ್ಯಪಾನದ ಪ್ರಭಾವ ಬಹಳಷ್ಟಿದೆ ಎಂಬುದನ್ನು ಇವರು ಅರ್ಥಮಾಡಿಕೊಂಡಿಲ್ಲ ಎಂಬುದು ಇದರಿಂದ ತಿಳಿದುಬರುತ್ತದೆ.
ಸ್ತನ್ಯಪಾನ ಮಾತೆಯ
ಮಮತೆಯ ಅಭಿವ್ಯಕ್ತಿ:
ಮಗುವಿಗೆ ಸ್ತನ್ಯಪಾನ ಅತ್ಯಂತ ಪ್ರಶಸ್ತವಾಗಿದೆ. ಸ್ತನ್ಯಪಾನ ಮಗು ಮತ್ತು ತಾಯಿಯ ಆರೋಗ್ಯಕ್ಕೆ ಪೂರಕವಾಗಿದೆ ಎಂಬುದು ಸಾಧಿತಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಮಗುವಿಗೆ 6 ತಿಂಗಳು ಆಗುವ ವರಗೆ ಕೇವಲ ಸ್ತನ್ಯಪಾನವನ್ನೇ ಮಾಡಿಸಬೇಕು ಮತ್ತು 2 ವರ್ಷದ ವರೆಗೂ ಸ್ತನ್ಯಪಾನವನ್ನು ಮುಂದುವರಿಸಬೇಕು ಎಂದು ಶಿಫಾರಸು ಮಾಡುತ್ತದೆ. ಸ್ತನ್ಯಪಾನವು ಪ್ರಕೃತಿ ಸಹಜವಾಗಿರುವುದಾಗಿದೆ. ಸ್ತನ್ಯಪಾನ ತಾಯಿಯ ಮಮತೆಯ ಅಭಿವ್ಯಕ್ತಿಯಾಗಿದೆ. ತಾಯಿಯ ಮಮತೆಗೆ ಸಮಾನವಾದುದು ಬೇರ್ಯಾವುದೂ ಇಲ್ಲ. ಮಗುವಿಗೆ ಸ್ತನ್ಯಪಾನ ಸಂಪೂರ್ಣ ಯಶಸ್ವಿಯಾಗಬೇಕಾದರೆ ತಾಯಿಯು ಈ ಕುರಿತು ಅಗತ್ಯ ಮಾಹಿತಿಯನ್ನೂ ಕುಟುಂಬದ ಬೆಂಬಲವನ್ನೂ ಹೊಂದಿರುವುದೂ ಮುಖ್ಯವಾಗಿದೆ.
ಕೊಲೋಸ್ಟ್ರಮ್‌ನಲ್ಲಿ ಅಗಾಧ
ರೋಗನಿರೋಧಕ ಶಕ್ತಿ :
ಮಗು ತಾಯಿಯ ಗರ್ಭದಲ್ಲಿರುವಾಗ ಎಲ್ಲ ಸೋಂಕು ಸೋಕದ ರೀತಿಯಲ್ಲಿ ಸುರಕ್ಷಿತಾಗಿ ಇರುತ್ತದೆ. ಮಗು ಜನಿಸಿದ ಮೇಲೆ ಮಗುವಿನ ಸುರಕ್ಷತೆಯನ್ನು ಕಾಪಾಡುವುದೇ ಅಮೃತಸಮಾನವಾದ ತಾಯಿಯ ಹಾಲು. ಮಗುವಿನ ಜನನದ ಬಳಿಕದ 5 ದಿನಗಳ ವರೆಗಿನ ತಾಯಿಯ ಹಾಲನ್ನು ಕೊಲೋಸ್ಟ್ರಮ್ ಎಂದು ಕರೆಯಲಾಗುತ್ತದೆ. ಈ ಹಾಲನ್ನು ಕಡ್ಡಾಯವಾಗಿ ಮಗುವಿಗೆ ಉಣಿಸಲೇಬೇಕು. ಯಾಕೆಂದರೆ, ಈ ಹಾಲಿನಲ್ಲಿ ರೋಗನಿರೋಧಕ ಶಕ್ತಿ ಅಗಾಧವಾಗಿದ್ದು, ಮಗುವನ್ನು ಸೋಂಕು ಹಾಗೂ ಕಾಯಿಲೆಗಳಿಂದ ಕಾಪಾಡುತ್ತದೆ.
ಹಾಲು ಜಿನುಗುವುದು ಹೀಗೆ
ಮಗುವು ಮೊಲೆಯ ತೊಟ್ಟಿಗೆ ಬಾಯಿಟ್ಟು ಹೀರುವಾಗ ತೊಟ್ಟಿನಲ್ಲಿರುವ ಸಣ್ಣ ನರಗಳು ಉತ್ತೇಜಿತಗೊಳ್ಳುತ್ತವೆ. ಇದರಿಂದ ಹಾರ್ಮೋನುಗಳು ರಕ್ತಕ್ಕೆ ಬಿಡುಗಡೆಗೊಳ್ಳಲು ಕಾರಣವಾಗುತ್ತದೆ. ಈ ವೇಳೆ ಪ್ರೊಲ್ಯಾಕ್ಟಿನ್ ಹಾರ್ಮೋನು ಹಾಲು ಉಂಟು ಮಾಡುವ ಅಂಗಾಂಶವಾಗಿ ಕಾರ್ಯನಿರ್ವಹಿಸುತ್ತದೆ. ಇನ್ನೊಂದು ಹಾರ್ಮೋನು- ಆಕ್ಸಿಟಾಸಿನ್ ಮೊಲೆಯ ತೊಟ್ಟಿನಿಂದ ಹಾಲು ಜಿನುಗಲು ಕಾರಣವಾಗುತ್ತದೆ. ಶ್ವಾಸಕೋಶದ ಶಂಕುವಿನಾಕೃತಿಯಲ್ಲಿರುವ ಗಾಳಿಗೂಡಿನ ಸುತ್ತ ಇರುವ ಆ್ಯಕ್ನಿ ಕೋಶಗಳು ಸಂಕುಚಿತಗೊಳ್ಳುವ ಮೂಲಕ ಮೊಲೆ ತೊಟ್ಟಿನಿಂದ ಹಾಲು ಹೊರ ಜಿನುಗಲು ಸಹಾಯ ಮಾಡುತ್ತವೆ. ಕೆಲವೊಮ್ಮೆ ಮಗುವಿನ ಅಳು ಅಥವಾ ಮೊಲೆಯ ಸ್ಪಶಾìನುಭವವು ಹಾಲು ಜಿನುಗಲು ಸಹಕಾರಿಯಾಗಬಲ್ಲವು.
ಮಗುವು ತಾಯಿಯ ಮೊಲೆ ತೊಟ್ಟನ್ನು ಚೀಪುವುದರಿಂದ ಮೊಲೆಯ ತೊಟ್ಟಿನಲ್ಲಿ ಕೊನೆಯಾಗುವ ನರವು ಉತ್ತೇಜಿತಗೊಂಡು ಮಿದುಳಿಗೆ ಸಂದೇಶ ರವಾನೆ ಮಾಡುತ್ತದೆ. ಇದರಿಂದ ಮಿದುಳು ಪ್ರೊಲ್ಯಾಕ್ಟಿನ್ ಎಂಬ ಹಾರ್ಮೋನನ್ನು ರಕ್ತಕ್ಕೆ ಬಿಡುಗಡೆ ಮಾಡುತ್ತದೆ. ಈ ಹಾರ್ಮೋನು ಮೊಲೆಗಳ ರಕ್ತಕ್ಕೆ ಸೇರ್ಪಡೆಯಾಗುತ್ತಿದ್ದಂತೆ ಹಾಲು ಸ್ರವಿಕೆ ಆರಂಭವಾಗುತ್ತದೆ.
ಮಗುವು ತಾಯಿಯ ಮೊಲೆ ತೊಟ್ಟನ್ನು ಚೀಪುತ್ತಿರುವಂತೆ ಹಾಲು ಸ್ರವಿಕೆ ಬಗ್ಗೆ ತಾಯಿಗೆ ಅನುಭವವಾಗುತ್ತದೆ. ಇದು ಮೊಲೆ ತುಂಬಿದ ಅನುಭವವಾಗಿರಬಹುದು ಅಥವಾ ಇನ್ನೊಂದು ಮೊಲೆಯಿಂದ ಹಾಲು ತೊಟ್ಟಿಕ್ಕುವ ಅನುಭವವಾಗಿರಬಹುದು. ಹಾಲು ಸ್ರವಿಸುವಾಗ ಮಗು ತೊಟ್ಟನ್ನು ಚೀಪುವ ರೀತಿಯೂ ಬದಲಾಗುವುದನ್ನು ಗಮನಿಸಬಹುದು. ಹಾಲೂಡಿಸುವ ಆರಂಭದ ದಿನಗಳಲ್ಲಿ ತಾಯಿಗೆ ಗರ್ಭಾಶಯ ಸಂಕುಚಿತಗೊಳ್ಳುತ್ತಿರುವ ಅನುಭವವೂ ಉಂಟಾಗಬಹುದು. ಇದು ಗರ್ಭಾಶಯವು ಕ್ಷಿಪ್ರಗತಿಯಲ್ಲಿ ಗರ್ಭ ಧರಿಸುವುದಕ್ಕಿಂತ ಮೊದಲಿದ್ದ ಸ್ಥಿತಿಯಂತಾಗಲು ಸಹಕಾರಿಯಾಗುತ್ತದೆ.
ಹಾಲು ಜಿನುಗುವಂತಾಗಲು
ಸರಳ ಮಾರ್ಗ
ಹಾಲು ಜಿನುಗುವಂತಾಗಲು ತಾಯಿಯು ತನ್ನ ಕೂಸಿನ ಬಗ್ಗೆ ಆಲೋಚಿಸುತ್ತಾ ರಿಲ್ಯಾಕ್ಸ್ ಆಗಬೇಕು. ನಿಧಾನವಾಗಿ ಅಂಗೈಯಿಂದ ಅಥವಾ ಬೆರಳ ತುದಿಯಿಂದ ಮೊಲೆಯ ತೊಟ್ಟಿನಿಂದ ಮೇಲೆ ಲಘುವಾಗಿ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಸುಲಭವಾಗಿ ಹಾಲು ಜಿನುಗುವಂತಾಗುತ್ತದೆ.
ಕೃತಕ ಹಾಲೂಡಿಸುವಿಕೆಯಿಂದ
ಏನಾಗಬಹುದು?
– ಕೃತಕ ಹಾಲೂಡಿಸುವಿಕೆ ಅಂದರೆ ತಾಯಿಯು ಸ್ತನ್ಯಪಾನ ನೀಡುವ ಬದಲು ಮಗುವಿಗೆ ದನದ ಹಾಲು ಅಥವಾ ಹಾಲಿನ ಹುಡಿಯನ್ನು ಹಾಲಾಗಿಸಿ ನೀಡುವುದರಿಂದ ಕೆಲವು ಪ್ರತಿಕೂಲತೆಗಳು ಉಂಟಾಗಬಹುದಾಗಿದೆ.
– ಕೃತಕ ಹಾಲು ಮಗುವಿನ ದೇಹಕ್ಕೆ ಸರಿಯಾಗಿ ಹೊಂದುವುದಿಲ್ಲ. ಇದರಿಂದ ಮಗುವಿನ ಬೆಳವಣಿಗೆಗೆ ಅಗತ್ಯವಿರುವಷ್ಟು ಪ್ರಮಾಣದ ಪೋಷಕಾಂಶಗಳು ಲಭಿಸುವುದಿಲ್ಲ.
– ಕೃತಕ ಹಾಲೂಡಿಸುವಿಕೆಯಿಂದ ನೀಡುವ ಹಾಲಿನಲ್ಲಿ ಕೀಟಾಣುಗಳು ಇದ್ದಲ್ಲಿ ಮಗುವಿಗೆ ಸೋಂಕು ತಗುಲುವ ಸಾಧ್ಯತೆಗಳು ಇವೆ. ಜತೆಗೆ ಸ್ತನ್ಯಪಾನದಿಂದ ಮಗುವಿಗೆ ಲಭಿಸುವಷ್ಟು ರೋಗನಿರೋಧಕ ಶಕ್ತಿ ಈ ಹಾಲಿನಿಂದ ಸಿಗುವುದಿಲ್ಲ. ಇದರಿಂದ ಮಗುವು ಸೋಂಕು ತಗುಲುವ ಅಪಾಯಕ್ಕೆ ಸಿಲುಕಬಹುದಾಗಿದೆ.
– ಮಗುವಿಗೆ ಕೃತಕ ಹಾಲೂಡಿಸುವಿಕೆಯಿಂದ ಇಳಿವಯಸ್ಸಿನಲ್ಲಿ ವ್ಯಕ್ತಿಯು ದೀರ್ಘಕಾಲ ಕಾಡಬಹುದಾದ ಡಯಾಬಿಟಿಸ್, ಹೃದ್ರೋಗ, ಅಲರ್ಜಿಯಂಥ ಕಾಯಿಲೆಗಳಿಂದ ಬಳಲುವಂತಾಗುವ ಸಾಧ್ಯತೆಗಳಿವೆ.
ಗರ್ಭವತಿಯಾಗಿರುವಾಗಲೇ
ಸ್ತನ್ಯಪಾನ ನೀಡಲು ಸಿದ್ಧತೆ
ಪ್ರಸವಪೂರ್ವ ಅವಧಿಯಲ್ಲಿ ಪ್ರಸೂತಿ ತಜ್ಞರನ್ನು ಸಂದರ್ಶಿಸುವಾಗ ಅವರ ಬಳಿ ಪ್ರಸೂತಿ ಬಳಿಕ ಸ್ತನ್ಯಪಾನ ನೀಡುವ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ಸ್ತನ್ಯಪಾನದ ಬಗ್ಗೆ ಮನೆಮಂದಿಯೊಂದಿಗೆ ಮುಕ್ತವಾಗಿ ಮಾತನಾಡುವುದು ಹಾಗೂ ಗರ್ಭವತಿಯಾಗಿರುವಾಗ ಹಾಗೂ ಎದೆ ಹಾಲೂಡಿಸುವ ಅವಧಿಯಲ್ಲಿ ಉತ್ತಮ ಆಹಾರವನ್ನು ಸೇವಿಸುವುದು ಅತ್ಯಂತ ಅಗತ್ಯ.
ಸ್ತನ್ಯಪಾನ ಆರಂಭಿಸುವುದು
ಸಹಜ ಪ್ರಸೂತಿಯಾದರೆ ಪ್ರಸೂತಿಯ ಅರ್ಧ ಗಂಟೆಯ ಒಳಗೆ, ಸಿಸೇರಿಯನ್ ಆಗಿದ್ದಲ್ಲಿ ಎರಡೂವರೆ ಗಂಟೆಯ ಒಳಗೆ ಮಗುವಿಗೆ ಎದೆಹಾಲೂಡಿಸಬಹುದಾಗಿದೆ. ಯಾಕೆಂದರೆ ನವಜಾತ ಶಿಶುವು ಜನಿಸಿದ 1 ಗಂಟೆಯ ವರೆಗೆ ಹೆಚ್ಚು ಕ್ರಿಯಾತ್ಮಕವಾಗಿರುತ್ತದೆ. ಈ ಬಳಿಕ ಅದು ನಿದ್ದೆಗೆ ಜಾರುತ್ತದೆ. ಈ 1 ಗಂಟೆಯ ಅವಧಿಯಲ್ಲಿ ಮಗು ಮೊಲೆ ತೊಟ್ಟನ್ನು ಚೀಪುವುದು ಹೆಚ್ಚು ಪ್ರಭಾವ ಬೀರುವುದೇ ಅಲ್ಲದೆ, ಮಗುವಿನ ಸ್ಪರ್ಶವು ಹಾಲು ಜಿನುಗಲು ಸಹಕಾರಿಯಾಗುತ್ತದೆ.
ಶಿಶುವಿಗೆ ಸಕ್ಕರೆ, ನೀರು ಅಥವಾ ಇನ್ಯಾವುದೇ ಆಹಾರವನ್ನು ನೀಡಬಾರದು. ಯಾಕೆಂದರೆ ಇದರಿಂದ ಮಗುವಿಗೆ ಮೊಲೆ ತೊಟ್ಟನ್ನು ಚೀಪುವುದಕ್ಕೆ ಸಂಬಂಧಿಸಿದಂತೆ ಗೊಂದಲ ಏರ್ಪಡುವ ಸಾಧ್ಯತೆ ಇದೆ. ಜತೆಗೆ ಇದು ಪರಿಣಾಮಕಾರಿ ಸ್ತನ್ಯಪಾನಕ್ಕೆ ತಡೆ ಉಂಟು ಮಾಡುತ್ತದೆ.
ಹಸಿವಿನ ಅಭಿವ್ಯಕ್ತಿ
– ಮಗು ತಾಯಿಯ ಮೊಲೆ ತೊಟ್ಟನ್ನು ಹುಡುಕಾಡುವುದು
– ಮುಷ್ಟಿಯನ್ನು ಚೀಪುವುದು
– ಅಳುವುದು
ಹಾಲೂಡಿಸುವಾಗ
ಅನುಸರಿಸಬಹುದಾದ ಕ್ರಮಗಳು
– ಆರಾಮವಾಗುವ ಕುರ್ಚಿಯಲ್ಲಿ ಕುಳಿತುಕೊಳ್ಳಿ. ಮಗುವಿಗೆ ಹಾಲೂಡಿಸಲು ಅನುಕೂಲವಾಗುವಂತೆ ಒರಗಲು ಸಾಧ್ಯವಾಗುವ ಕುರ್ಚಿಯ ಆಯ್ಕೆ ಅತ್ಯಗತ್ಯ.
– ಮಗುವನ್ನು ಹಿಡಿಯಲು ಅನುಕೂಲವಗುವಂತೆ ದಿಂಬನ್ನು ಬಳಸಿಕೊಳ್ಳಬಹುದು.
– ಮಗುವನ್ನು ಎತ್ತಿ ಹಾಲೂಡಿಸಿ. ಮಗು ಇರುವಲ್ಲಿ ಬಗ್ಗಿ ಹಾಲೂಡಿಸುವುದು ತಪ್ಪು. ಇದು ತಾಯಿಯ ಭುಜ ಹಾಗೂ ಕತ್ತನ್ನು ನೋಯಿಸುವುದು ಮಾತ್ರವಲ್ಲದೆ, ಮಗುವಿನ ಮೇಲೂ ಪರಿಣಾಮ ಬೀರಬಹುದು.
– ಮಗು ಮೊಲೆ ತೊಟ್ಟನ್ನು ಚೀಪಲು ಅನುಕೂಲವಾಗುವಂತೆ ತಾಯಿ ಮೊಲೆಯನ್ನು ಹಿಡಿದುಕೊಳ್ಳುವುದು ಅಗತ್ಯ. ಮೊಲೆಯನ್ನು ಬದಿಯಿಂದಲೋ (ಸಿ ಆಕಾರದಲ್ಲಿ ) ಅಥವಾ ಕೆಳಗಿನಿಂದಲೋ (ಯು ಆಕಾರದಲ್ಲಿ) ಹಿಡಿದುಕೊಳ್ಳಬಹುದು. ಬೆರಳುಗಳು ಮೊಲೆ ತೊಟ್ಟಿನಿಂದ ದೂರ ಇರಲಿ. ಹತ್ತಿರವಿದ್ದಲ್ಲಿ ಮಗುವಿಗೆ ಮೊಲೆ ತೊಟ್ಟನ್ನು ಚೀಪುವುದಕ್ಕೆ ತಡೆಯಾಗಬಹುದು.
– ಮಗುವು ಮೊಲೆ ತೊಟ್ಟನ್ನು ಚೀಪುವುದು ಅತ್ಯಂತ ಅಗತ್ಯ. ಮೊಲೆ ತೊಟ್ಟನ್ನು ಎಳೆದಂತಾಗಬಾರದು. ಈ ರೀತಿ ಆದಲ್ಲಿ ಅಥವಾ ಮಗುವನ್ನು ಸರಿಯಾಗಿ ಹಿಡಿದುಕೊಳ್ಳದೇ ಹೋದಲ್ಲಿ ತಾಯಿಗೆ ನೋವಾಗುವುದು.
ಮಗು ಉತ್ತಮವಾಗಿ
ಹಾಲುಣ್ಣುವುದರ ಸೂಚಕಗಳು
– ಮಗು ಕೆಳದುಟಿ ಸರಿಸಿದಾಗ ನಾಲಿಗೆ ಕಾಣುವುದು
– ಅವುಡಿನ ಆವರ್ತೀಯ ಚಲನೆ (ಗಲ್ಲದ ಶೀರ್ಘ ಚಲನೆಗಿಂತ ಮುಖ್ಯವಾದುದು)
– ಕೆನ್ನೆಗಳು ವೃತ್ತಾಕಾರದಲ್ಲಿರುವುದು
– ಬಾಯಿ ಚಪ್ಪರಿಸುವ ಸದ್ದು ಬಾರದೆ ಮಗು ಹಾಲು ಹೀರುತ್ತಿರುವ ಅನುಭವ
– ಗಲ್ಲ ಮೊಲೆಗೆ ತಾಗಿಕೊಂಡಿರುವುದು
ಸ್ತನ್ಯಪಾನದಿಂದಾಗುವ ಅನುಕೂಲತೆಗಳು
ಮಗುವಿಗಾಗುವ ಅನುಕೂಲತೆಗಳು
– ಸ್ತನ್ಯಪಾನದಿಂದ ಮಗುವಿಗೆ ಅಗತ್ಯವಿರುವಷ್ಟು ಕ್ಯಾಲರಿಗಳು ದೊರೆಯುತ್ತವೆ. ಜತೆಗೆ ಸೂಕ್ತವಾದ ಪ್ರೊಟೀನ್‌ಗಳು, ಕೊಬ್ಬು, ಲ್ಯಾಕ್ಟೋಸ್, ವಿಟಮಿನ್‌ಗಳು, ಕಬ್ಬಿಣಾಂಶ, ಲವಣಗಳು, ನೀರು ಮತ್ತು ಕಿಣ್ವಗಳು ಲಭಿಸುತ್ತವೆ. ಇವು ಮಗುವಿನ ದೇಹಕ್ಕೆ ಅತ್ಯಂತ ಅಗತ್ಯವಾಗಿವೆ.
– ಸ್ತನ್ಯಪಾನವು ಶುದ್ಧವಾಗಿದ್ದು ಬ್ಯಾಕ್ಟೀರಿಯಾ ರಹಿತವಾಗಿರುತ್ತದೆ. ಇದರಿಂದ ಮಗುವಿನಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ.
– ಸ್ತನ್ಯಪಾನದಿಂದ ತಾಯಿ ಮತ್ತು ಮಗುವಿನ ನಡುವಿನ ಭಾವನಾತ್ಮಕತೆ ಭದ್ರವಾಗಿ ಬೆಸೆಯುತ್ತದೆ. ಇದರಿಂದ ಇಬ್ಬರ ನಡುವೆಯೂ ಪ್ರೀತ್ಯಾದರ ಬೆಳೆಯಲು ಸಾಧ್ಯವಾಗುತ್ತದೆ.
– ಸ್ತನ್ಯಪಾನವು ಶ್ವಾಸಕೋಶದ ಸೋಂಕು ಸಹಿತ ಇತರ ಸೋಂಕುಗಳಿಂದ ಮಗುವನ್ನು ಸುರಕ್ಷಿತವಾಗಿಡುತ್ತದೆ.
– ಸ್ತನ್ಯಪಾನ ಮಾಡಿದ ಮಕ್ಕಳ ಬುದ್ಧಿಶಕ್ತಿ ತೀಕ್ಷ್ಣವಾಗಿರುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ.
ತಾಯಿಗಾಗುವ ಅನುಕೂಲತೆಗಳು
– ಸ್ತನ್ಯಪಾನ ಮಾಡಿಸುವುದರಿಂದ ತಾಯಿಯು ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತದೆ.
– ಸ್ತನ್ಯಪಾನ ಮಾಡಿಸುವುದರಿಂದ ಮುಟ್ಟಿನ ಆವರ್ತ ನಿಧಾನಗತಿಯನ್ನು ಪಡೆದುಕೊಳ್ಳುತ್ತದೆ. ಸ್ತನ್ಯಪಾನ ಮಾಡಿಸುವುದರಿಂದ ಮೊಲೆಗಳು ಹಿಗ್ಗುವ ಮತ್ತು ಒವೇರಿಯನ್ (ಅಂಡಾಶಯದ) ಕ್ಯಾನ್ಸರ್‌ನ ಅಪಾಯ ಸಾಧ್ಯತೆಗಳನ್ನು ಕಡಿಮೆ ಮಾಡಬಹುದಾಗಿದೆ.
– ಮಗುವಿಗೆ ಕೃತಕ ಹಾಲನ್ನು ನೀಡುವ ಬದಲು ಸ್ತನ್ಯಪಾನ ಮಾಡಿಸುವುದರಿಂದ ಹಣ ಹಾಗೂ ಸಮಯದ ಉಳಿತಾಯವಾಗುತ್ತದೆ. ಕೃತಕ ಹಾಲಿನ ಹುಡಿ ತುಟ್ಟಿಯಾಗಿದೆ. ಸ್ತನ್ಯಪಾನ ಮಗುವಿಗೆ ಬೇಕೆನಿಸಿದಾಗ ಲಭ್ಯವಿರುವುದು ಮಾತ್ರವಲ್ಲದೆ ಸೂಕ್ತ ಉಷ್ಣಾಂಶವನ್ನೂ ಹೊಂದಿರುತ್ತದೆ.
ಸಮಾಜಕ್ಕಾಗುವ ಒಳಿತು
– ಸ್ತನ್ಯಪಾನದಿಂದ ಮಗುವಿನ ಆರೋಗ್ಯವು ಸುಸ್ಥಿರವಾಗಿರುತ್ತದೆ. ಇದರಿಂದ ಮಗುವಿಗೆ ಕಾಯಿಲೆ ಆಗುವುದು, ಶಿಶು ಮರಣ ಕಡಿಮೆ ಆಗುತ್ತದೆ. ಇದರಿಂದ ಸಮಾಜದ ಮೇಲುಂಟಾಗುವ ಒತ್ತಡವೂ ಕಡಿಮೆಯಾಗುತ್ತದೆ. ಮಾತ್ರವಲ್ಲದೆ, ಕುಟುಂಬದ ಆರ್ಥಿಕ ಒತ್ತಡವೂ ಕಡಿಮೆಯಾಗುತ್ತದೆ.
– ಸ್ತನ್ಯಪಾನದಿಂದ ಮಗುವಿನ ಆರೋಗ್ಯ ವೃದ್ಧಿಸುತ್ತದೆ. ಇದರಿಂದ ಮಗು ಬೆಳೆಯುವಾಗ ಆರೋಗ್ಯಯುತವಾಗಿ ಕಾಯಿಲೆಗಳಿಲ್ಲದೆ ಬೆಳೆಯುತ್ತದೆೆ. ಹೀಗಾಗಿ ತಾಯಂದಿರು ಕೆಲಸಕ್ಕೆ ಹೋಗುವುದಿದ್ದರೆ ಬೆಳೆಯುತ್ತಿರುವ ಮಕ್ಕಳ ಅನಾರೋಗ್ಯ ಕಾರಣಕ್ಕೆ ಆಗಾಗ ರಜೆ ಮಾಡುವುದು ತಪ್ಪುತ್ತದೆ. ಇದರಿಂದ ಆಕೆಗೂ, ಉದ್ಯೋಗದಾರರಿಗೂ ಅನುಕೂಲವಾಗುತ್ತದೆ.
ಹಾಲೂಡಿಸಲು ಅನುಕೂಲಕರವಾಗಿರುವ ಭಂಗಿಗಳು
– ಕ್ರಾಸ್ ಕ್ರೇಡ್‌ಲ್ ಹಿಡಿತ ಇದು ಮಗುವನ್ನು ಚಿತ್ರದಲ್ಲಿ ತೋರಿಸಿದಂತೆ ಒಂದು ಕೈಯಲ್ಲಿ ಹಿಡಿದುಕೊಂಡು ಮೊಲೆಹಾಲೂಡಿಸುವ ಭಂಗಿಯಾಗಿದೆ. ಕೈಯ ಮಡಿಕೆಯಿಂದ ಮಗು ಜಾರದಂತೆ ಹಿಡಿಯುವುದು ಮುಖ್ಯ. ಇದು ನವಜಾತ ಶಿಶುವಿಗೆ ಹಾಲೂಡಿಸಲು ಮತ್ತು ಹಾಲೂಡಿಸುವ ಆರಂಭದ ದಿನಗಳಲ್ಲಿ ಹೆಚ್ಚು ಅನುಕೂಲಕರ.
– ಕ್ರೇಡ್‌ಲ್ ಹಿಡಿತ ಚಿತ್ರದಲ್ಲಿ ಕಾಣುವಂತೆ ಮಗುವನ್ನು ಹಿಡಿಯುವುದನ್ನು ಕ್ರೇಡ್‌ಲ್ ಹೋಲ್ಡ್ ಅಥವಾ ಹಿಡಿತ ಎನ್ನಲಾಗುತ್ತದೆ. ಮಗುವಿಗೆ ಕೆಲವು ವಾರಗಳು ಆದ ಬಳಿಕ ಈ ಹಿಡಿತವು ಅನುಕೂಲಕರ ವಾಗಿರುತ್ತದೆ.
– ಫೂಟ್‌ಬಾಲ್ ಹಿಡಿತ ಅವಳಿ ಮಕ್ಕಳಿದ್ದರೆ ಈ ಭಂಗಿಯನ್ನು ಬಳಸಲಾಗುತ್ತದೆ. ಇದು ಮಕ್ಕಳನ್ನು ಬಾಹುಗಳಿಂದ ಆನಿಸಿ ಹಿಡಿದುಕೊಳ್ಳುವ ಭಂಗಿಯಾಗಿದೆ.
ಹಾಲೂಡಿಸುವ ಭಂಗಿಗಳ ಕುರಿತ ಸಮಾಲೋಚನೆ: ಹಲವು ವರ್ಷಗಳಿಂದ ಕೆಎಂಸಿ ಸೇವೆ ಮಗುವಿಗೆ ಎದೆಹಾಲೂಡಿಸುವ ಮಹಣ್ತೀ ಹಾಗೂ ವಿವಿಧ ಭಂಗಿಗಳ ಬಗ್ಗೆ ಪ್ರಸವ ಪೂರ್ವ ಅವಧಿಯಲ್ಲೇ ವೈದ್ಯಕೀಯ ತಪಾಸಣೆಗೆ ಬರುವಾಗ ಗರ್ಭವತಿಗೆ ಮಾಹಿತಿ ನೀಡಲಾಗುತ್ತದೆ. ಜತೆಗೆ ಮಗುವನ್ನು ನೋಡಿಕೊಳ್ಳುವ ವಿಧಾನವನ್ನೂ ತಿಳಿಸಲಾಗುತ್ತದೆ. ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಈ ಸೇವೆಯನ್ನು ನೀಡಲಾಗುತ್ತಿದೆ. ಇದರಿಂದ ಮಗುವಿಗೆ ಸ್ತನ್ಯಪಾನ ಮಾಡಿಸುವ ಬಗ್ಗೆ ತಾಯಿಗೆ ಯಾವುದೇ ಗೊಂದಲಗಳು ಉಂಟಾಗುವುದಿಲ್ಲ. ಜತೆಗೆ ಮನೆಮಂದಿಗೂ ಮಗುವಿಗೆ ಸ್ತನ್ಯಪಾನ ಮಾಡಿಸುವುದರ ಮಹಣ್ತೀದ ಬಗ್ಗೆ ಸಂಪೂರ್ಣ ಅರಿವು ಇರುತ್ತದೆ.
– ಡಾ| ಮರಿಯಾ ಪಾçಸ್,
ಅಸಿಸ್ಟೆಂಟ್ ಪ್ರೊಫೆಸರ್,
ಒಬಿಜಿ ನರ್ಸಿಂಗ್ ವಿಭಾಗ,
ಕಾಲೇಜ್ ಆಫ್ ನರ್ಸಿಂಗ್, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.